ನಿಷ್ಠೂರತೆಯನ್ನೆ ನಿಷ್ಟೆಯಾಗಿಸಿಕೊಂಡಿದ್ದ ಅಂಬಿಗರ ಚೌಡಯ್ಯ / ಶ್ರೀ ಶಿವಣ್ಣ ಇಜೇರಿ, ಶಹಾಪುರ.

ಅಂಬಿಗರ ಚೌಡಯ್ಯ ಬಸವಣ್ಣನವರ ವಿಚಾರವನ್ನು ಆಚರಣೆಯಲ್ಲಿ ನಿಷ್ಠೂರತೆಯನ್ನು ಮೈಗೂಡಿಸಿಕೊಂಡು ಯಾರದೇ ಮುತವರ್ಜಿ ವಹಿಸದೆ ಶರಣರ ವಚನ ಸಾಹಿತ್ಯವನ್ನು ಆಕಾಶದೆತ್ತರಕ್ಕೆ ಮುಟ್ಟಿಸಿದ ಅಪರೂಪದ ಶರಣ, ನಿರ್ಭೀತ, ನಿಷ್ಠುರ, ನಿರ್ದಾಕ್ಷಿಣ್ಯ, ಕಟೂಕ್ತಿ ಇವರ ಮನೋಭಾವ. ಶ್ರೇಷ್ಠ ಅನುಭಾವಿ. ಅನ್ಯಾಯ, ಜಾತೀಯತೆ, ಅಧಾರ್ಮಿಕ ಆಚರಣೆಗಳನ್ನು ಕಟುವಾಗಿ ಟೀಕಿಸಿರುವರು. ಅಂಬಿಗರ ಚೌಡಯ್ಯನವರು ದೇವರ ಸ್ವರೂಪವೇನು ಎನ್ನುವದನ್ನು ಅವರ ವಚನದಲ್ಲಿ ಹೀಗೆ ಹೇಳುತ್ತಾರೆ.

ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,
ಬ್ರಹ್ಮಕಪಾಲವಿಲ್ಲ, ಭಸ್ಮಭೂಷನಲ್ಲ,
ವೃಷಭವಾಹನನಲ್ಲ, ಋಷಿಗಳೊಡನಿದ್ದಾತನಲ್ಲ,
ಎಸಗುವ ಸಂಸಾರದ ಕುರುಹಿಲ್ಲದಾತಂಗೆ
ಹೆಸರಾವುದಿಲ್ಲವೆ೦ದನ೦ಬಿಗರ ಚೌಡಯ್ಯ (ಸ. ವ. ಸಂ-1 / ವ. ಸಂ-46)

ಈ ವಚನದಲ್ಲಿ ಪೌರಾಣಿಕ ಶಿವನ ಚಿತ್ರಣವನ್ನು ಕೊಡುವುದರ ಜೊತೆಗೆ ಆತನನ್ನು ನಿರಾಕರಿಸುವ ಸ್ಪಷ್ಟವಾದ ಮಾತಿನ ವಿಚಾರವಾಗಿ ಶಿವನ ಒಡ್ಡೋಲಗದ ಸಮಗ್ರ ಚಿತ್ರಣವನ್ನೆ ಕೊಡುತ್ತಾನೆ. ಆತನಿಗೆ ಸಂಸಾರದ ಜಂಜಾಟವಿಲ್ಲ. ಆತನ ರೂಪ ನಾಮಗಳ ನಿಖರತೆ ಇಲ್ಲದಿರುವುದರಿಂದ ಆತನ ವಚನ ಮುದ್ರಿಕೆಗೆ “ತನ್ನ ಬಿಟ್ಟು ದೇವರಿಲ್ಲ, ಮಣ್ಣಬಿಟ್ಟು ಮಡಿಕೆ ಇಲ್ಲ” ಎನ್ನುವ ಕಾರಣಕ್ಕಾಗಿಯೆ ಏನೊ ತಮ್ಮ ಹೆಸರನ್ನೇ ವಚನಕ್ಕೆ ಅಂಕಿತವಾಗಿ ಬಳಸಿರುವರು. ಇದು ಆತನ ಒಂದು ವೈಶಿಷ್ಟ್ಯವೆ ಸರಿ. ಪೂಜೆಮಾಡುವ ವ್ಯಕ್ತಿಯಲ್ಲಿರಬೇಕಾದ ಮೂಲ ಗುಣಗಳನ್ನು ಈ ಒಂದು ವಚನದಲ್ಲಿ ಹೇಳುತ್ತಾನೆ.

ಅರ್ಚನೆಯ ಮಾಡುವಲ್ಲಿ ಆವೇಶ ಅರಿತಿರಬೇಕು.
ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿಯಾಗಿರಬೇಕು.
ಕೊಡುವ ಕೊಂಬಲ್ಲಿ ಸರ್ವಭೂತಹಿತನಾಗಿರಬೇಕು.
ಇಂತೀ ಸಡಗರಿಸಿಕೊಂಡಿಪ್ಪಾತನ
ಅಡಿಗೆರಗುವೆನೆಂದನಂಬಿಗ ಚೌಡಯ್ಯ. (ಸ. ವ. ಸಂ-1 / ವ. ಸಂ-43)

ಅರ್ಚನೆಯಲ್ಲಿ ಆವೇಶವಿಬಾರದು ಪೂಜೆ ಮಾಡುವಾಗ ಪುಣ್ಯಮೂರ್ತಿಯ ಭಾವವಿರಬೇಕು. ಹಾಗೆ ಕೊಡುವಾಗ, ಕೊಳ್ಳುವಾಗ ಸರ್ವಜೀವಗಳ ಹಿತ ಕಾಯ್ದುಕೊಳ್ಳಬೇಕು. ಇವುಗಳನ್ನು ಅಳವಡಿಸಿಕೊಂಡಾತನ ಅಡಿಗೆರಗುತ್ತೇನೆ ಎನ್ನುವ ಆತನ ಹಿರಿಮೆಯನ್ನ ಎಲ್ಲರೂ ಮೆಚ್ಚಿಕೊಳ್ಳಲೇಬೇಕಾದ ಗುಣ, ಆ ಗುಣ ನಮ್ಮಲ್ಲಿಯೂ ಬರಬೇಕಾದ ಅನಿವಾರ್ಯತೆ ಇದೆ. ಆತನ ಇನ್ನೊಂದು ವಚನದಲ್ಲಿ ಗುರು ಹೇಗಿರಬೇಕು, ಎಂತಹ ಗುರುಗಳಿದ್ದರೆ ನಮ್ಮ ಬದುಕು ಹಸನಾಗುತ್ತದೆ ಎಂಬುದಕ್ಕೆ ಈ ಕೆಳಗಿನ ವಚನವನ್ನು ನಾವು ಗಮನಿಸಲೆಬೇಕು.

ಅರಿಯದ ಗುರು ಅರಿಯದ ಶಿಷ್ಯಂಗೆ
ಅನುಗ್ರಹವ ಮಾಡಿದಡೇನಪ್ಪುದೆಲವೋ.
ಅಂಧಕನ ಕೈಯನಂಧಕ ಹಿಡಿದಡೆ
ಮುಂದನಾರು ಕಾಬರು ಹೇಳೆಲೆ ಮರುಳೇ
ತೊರೆಯಲದ್ದವನನೀಸಲರಿಯದವ
ತೆಗೆವ ತೆರನಂತೆಂದನಂಬಿಗೆ ಚೌಡಯ್ಯ (ಸ. ವ. ಸಂ-1 / ವ. ಸಂ-38)


ಒಳ್ಳೆಯ ಗುರುವಿನ ಆಯ್ಕೆ ನಾವು ಮಾಡಿಕೊಳ್ಳದಿದ್ದರೆ ಕುರುಡನ ಕೈ ಹಿಡಿದಂತಾಗುತ್ತದೆ. ನೀರಲ್ಲಿ ಬಿದ್ದವನನ್ನು ಇಸು ಬರದವನು ತಗೆಯಲು ಹೊದಂತಾಗುತ್ತದೆ ಎಂಬ ಎಚ್ಚರಿಕೆಯನ್ನು ಕೊಡುತ್ತಾನೆ. “ಗುರು ದೂಂಡನಾ ಚುನ್ ಕೆ, ಪಾನಿ ಪೀನಾ ಛಾನ್ ಕೇ” ಎಂಬ ಮಹಾತ್ಮಾ ಕಭೀರ ದಾಸರ ಅಮೃತವಾಣಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಅಂಬಿಗರ ಚೌಡಯ್ಯನವರು ನಿಷ್ಠೆಯಿಂದ ಕಾಯಕ ಮಾಡುತ್ತ ತ್ರಿಕಾಲ ಲಿಂಗಾರ್ಚನೆ ಮಾಡುತ್ತ ತ್ರಿವಿಧ ದಾಸೋಹಿಯಾಗಿ ಅನುಭವ ಮಂಟಪದಲ್ಲಿ ಶರಣರ ಸಂಗದಲ್ಲಿ ಭಾಗವಹಿಸುತ್ತಾ ಅನುಭವ ಮಂಟಪದ ಮಾಣಿಕ್ಯಗಳಲ್ಲೊಂದಾಗಿ ಕಂಗೊಳಿಸಿದವರು. ಹಾಗೇ ಅಂಬಿಗರ ಚೌಡಯ್ಯನ ನಿಷ್ಠೂರತೆಯ ಸಾಮಾಜೀಕ ಕಾಳಜಿಯನ್ನು ನಾವು ಅರಿತುಕೊಳ್ಳಬೇಕಾಗಿದೆ. ಆಗ ನಮ್ಮ ಬದುಕು ಸುಂದರವಾದ ಬದುಕಾಗಲಿಕ್ಕೆ ಸಾಧ್ಯವಾಗಬಹುದು.

ಶರಣು ಶರಣಾರ್ಥಿಗಳು
ಶ್ರೀ. ಶಿವಣ್ಣ ಇಜೇರಿ,
ಶಹಾಪುರ.
ಮೋಬೈಲ್.‌ ನಂ. 81977 42111

Loading

Leave a Reply