
ಅಂಜಿದಡೆ ಮಾಣದು, ಅಳುಕಿದಡೆ ಮಾಣದು,
ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.
ಕಕ್ಕುಲತೆಗೆ ಬಂದಡೆ ಆಗದು ನೋಡಾ.
ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-63 / ವಚನ ಸಂಖ್ಯೆ-688)
ಬಸವಣ್ಣನವರು ಜೀವನದಲ್ಲಿ ಯಾವದಕ್ಕೂ ಅಂಜದೆ ಅಳುಕದೆ ಬಂದದ್ದನ್ನ ಎದುರಿಸಿ ಸಾಧನೆಯಲ್ಲಿ ಮುಂದುವರೆಯಬೇಕು ಎಂಬುದನ್ನ ಇಲ್ಲಿ ಹೇಳುತ್ತಿದ್ದಾರೆ. ಲಲಾಟ ಲಿಖಿತ ಅಂದರೆ ಹಣೆಯ ಬರಹವನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ಅಂಜಿದರೂ ಬುಡುವದಿಲ್ಲ, ಅಳುಕಿದರೂ ಬಿಡುವದಿಲ್ಲ, ವಜ್ರ ಪಂಜರದೊಳಗಿದ್ದರೂ ಬಿಡುವದಿಲ್ಲ. ಬರಬೇಕಾಗಿದ್ದು ಬಂದೆ ಬರುತ್ತದೆ. ಇದು ವಿಧಿವಾದವನ್ನ ಎತ್ತಿ ಹಿಡಿಯುವಂತೆ ಕಂಡರೂ ಆ ಹಣೆಬರಹಕ್ಕೆ ಎಲ್ಲವನ್ನೂ ಒಪ್ಪಿಸುವ ನಿರಾಶ ಭಾವ ಇಲ್ಲಿ ಇಲ್ಲ. ಮುಂದೆ ಎನು ಬರುತ್ತದೆಂಬುದು ನಮ್ಮ ಕೈಯಲ್ಲಿ ಇಲ್ಲ. ಅದು ನಮಗೆ ತಿಳಿಯುವದೂ ಇಲ್ಲ. ಆದರೆ ಬಂದದ್ದನ್ನ ಎದುರಿಸಿ ನಿಷ್ಠೆಯಿಂದ ಬಾಳಬೇಕೆಂಬ ಜೀವನ ಶೃದ್ಧೆಯನ್ನು ವಚನದ ಮುಂದಿನ ಭಾಗದಲ್ಲಿ ಎತ್ತಿ ಹಿಡಿದಿರುವದು ಕಾಣುತ್ತದೆ.
ಮುಂದೆ ಬರುವುದನ್ನ ನೆನೆದು ಕಕ್ಕುಲತೆಗೊಳ್ಳಬಾರದು ಅಂದರೆ ಆತಂಕ ಪಡಬಾರದು. ಮನೊದರ‍್ಬಲ್ಯದಿಂದ ತಲ್ಲಣಗೊಳ್ಳಬಾರದು. ಏಕೈಕ ನಿಷ್ಠೆಯಿಂದ ಮುನ್ನಡೆದರೆ ಕೆಳ ಮುಖವಾಗಿದ್ದ ಪ್ರವೃತ್ತಿ ಮೇಲ್ಮುಖವಾಗಿ ಹರಿಯುತ್ತದೆ. ಏರುವ ಮತ್ತು ಜಾರುವ ಸಾಧನೆಗಳು ಇಲ್ಲಿಯೇ ಇವೆ. ಅವುಗಳನ್ನ ಬಳಸಿಕೊಳ್ಳುವದು ಮನಸ್ಸಿನ ಶಕ್ತಿ.
ಪ್ರಕೃತಿಯನ್ನ ಮೀರುವ ಸಾಮರ್ಥ್ಯ ಪ್ರಕೃತಿಗೆ ಇದೆ. ಮೀರಿ ನಡೆಯುವ ಶಕ್ತಿ ಮನಸ್ಸಿಗೆ ಇದೆ. ಅದನ್ನು ಕಂಡುಕೊಳ್ಳಬೇಕು. ಧೃತಿಗೆಟ್ಟು ಮನ ಧಾತುಗೆಡಬಾರದು ಎಂದು ಹೇಳುತ್ತಾರೆ. ಅಂದರೆ ಮನಸ್ಸು ಧೈರ್ಯವನ್ನು ಕಳೆದುಕೊಂಡು ಭಕ್ತಿ ನಿಷ್ಠೆಯಿಂದ ಚ್ಯುತವಾದರೆ ಅದರ ಮೇಲ್ಮುಖ ಗಮನ ಕುಂಠಿತವಾಗುತ್ತದೆ. ಅದು ಲಲಾಟ ಲಿಖಿತದಲ್ಲಿ ಸಿಕ್ಕಿಬೀಳುತ್ತದೆ. ಏಕೈಕ ನಿಷ್ಠೆ ಇಲ್ಲದಿದ್ದರೆ ವಿಧಿ ಲಿಖಿತದಿಂದ ಪಾರಾಗುವದು ಸಾದ್ಯವಿಲ್ಲ. ಸಾಧನೆ ಮಾಡುವಾಗ ಅನೇಕ ಕಷ್ಟ ನಷ್ಟಗಳು ಬರುತ್ತವೆ. ಅಂದರೆ ಮನಸ್ಸನ್ನು ಧೃತಿಗೆಡದೆ ನಿಷ್ಠೆಯನ್ನ ಬೆಳೆಸಿಕೊಂಡರೆ ಇವುಗಳನ್ನ ಮೀರಿ ನಿಲ್ಲಬಹುದು. ಹೀಗೆ ಪ್ರಾಕೃತಿಕ ಮಿತಿಯನ್ನು ಮೀರಿ ನಿಲ್ಲುವದು ಸಾದ್ಯವೆಂಬ ಆತ್ಮವಿಶ್ವಾಸದ ಭವ್ಯ ಅನುಭವವನ್ನು ಈ ವಚನದಲ್ಲಿ ಬಸವಣ್ಣನವರು ಸೂಚಿಸುತ್ತಾರೆ.
ಲಿಂ. ಶ್ರೀ. ಈಶ್ವರಗೌಡ ಪಾಟೀಲ
ನರಗುಂದ