ಅಂಬಿಗರ ಚೌಡಯ್ಯನವರ ವಚನ | ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು | ಪ್ರೊ. ಜಿ. ಎ. ತಿಗಡಿ, ಧಾರವಾಡ.

ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು,
ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು,
ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ,
ಪೂಜಿಸಿದ ಪುಣ್ಯ ಹೂವಿಗೋ? ನೀರಿಗೋ?
ನಾಡೆಲ್ಲಕ್ಕೊ? ಪೂಜಿಸಿದಾತಗೋ?
ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-949 / ವಚನ ಸಂಖ್ಯೆ-53)

ಯಾರೋ ಬಿತ್ತಿ ಬೆಳಸಿದ ಹೂವಿನ ಗಿಡದಲ್ಲಿನ ಹೂಗಳನ್ನು ಕೊಯ್ದು ತಂದು, ಊರಿನ ಜನರೆಲ್ಲರೂ ಸೇರಿ ಕಟ್ಟಿಸಿದ ಕೆರೆಯ ನೀರನ್ನು ತಂದು ನಾನು ಪೂಜಿಸುತ್ತಿದ್ದೇನೆ ನೋಡಿರೆಂದು ನಾಡಿನ ಜನತೆಗೆ ಹೇಳುತ್ತಾ ಪೂಜಿಸಿದರೆ, ಆ ಪೂಜೆಯಿಂದ ಲಭಿಸುವ ಪುಣ್ಯದ ಫಲ ಯಾರಿಗೆ? ಹೂವಿಗೋ? ಕೆರೆಯ ನೀರಿಗೋ? ಇಡೀ ನಾಡಿಗೋ? ಅಥವಾ ಪೂಜಿಸಿದಾತನಿಗೋ? ಎಂದು ಚಿಂತಿಸಿ ಗೊಂದಲಕ್ಕೊಳಗಾಗಿ ನಿರುತ್ತರರಾದ ಅಂಬಿಗರ ಚೌಡಯ್ಯನವರು ಇದನ್ನು ನಾನರಿಯಲಾರೆನು, ನೀನೇ ಇದಕ್ಕೆ ಸಮಾಧಾನ ಹೇಳಬೇಕೆಂದು ತನ್ನ ಆರಾಧ್ಯ ದೈವನಲ್ಲಿ ಬೇಡಿಕೊಳ್ಳುತ್ತಾರೆ.

ಸ್ಥಾವರದೈವ ಮತ್ತು ಪೂಜೆಗಳನ್ನು ನಿರಾಕರಿಸಿದ ಶರಣರು ಭಕ್ತ ಮತ್ತು ಭಗವಂತನ ನಡುವಿನ ದಲ್ಲಾಳಿಗಳನ್ನು ನಿರಾಕರಿಸಿ, ಅವರಿಂದ ಶೋಷಣೆಗೊಳಗಾದವರನ್ನು ರಕ್ಷಿಸಿದರು. ಸ್ಥಾವರ ದೇವರುಗಳ ಬಾಹ್ಯಾಡಂಬರ ಪೂಜೆಯನ್ನು ನಿರಾಕರಿಸಿದ ಚೌಡಯ್ಯ ಅದರ ವ್ಯರ್ಥತೆಯನ್ನು ಈ ವಚನದಲ್ಲಿ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಯಾವುದನ್ನು, ಯಾರನ್ನು ಪೂಜಿಸಬೇಕೆಂದು ಅರಿಯದ ಲೋಕದ ಜನರು ಒಬ್ಬರು ಇನ್ನೊಬ್ಬರನ್ನು ಅನುಕರಣೆ ಮಾಡಿ ನಾನಾ ವಿಧವಾಗಿ ಪೂಜಿಸುವ ಕ್ರಿಯೆಯಲ್ಲಿ ತೊಡಗಿದ್ದಾರೆ. ಹೀಗೆ ಇವರು ಗಿಡ, ಮರ, ಕಲ್ಲು, ಲೋಹ, ಒರಳು, ಒನಕೆ ಇತ್ಯಾದಿ ವಸ್ತುಗಳನ್ನು ದೇವತೆಗಳನ್ನಾಗಿಸಿಕೊಂಡು ಪೂಜಿಸುತ್ತಾ ಬಂದಿದ್ದಾರೆ. ತಾವೇ ನಿರ್ಮಿಸಿಕೊಂಡ ಈ ವಸ್ತುಗಳು ದೇವರಾಗಲು ಸಾಧ್ಯವೇ? ಯಾರೋ ಬಿತ್ತಿ ಬೆಳೆದ ಹೂಗಳನ್ನು ಕಿತ್ತು ತಂದು, ಯಾರೋ ನಿರ್ಮಿಸಿದ ಕೆರೆಯ ನೀರನ್ನು ತಂದು ಪೂಜಿಸುವುದು ಸರಿಯೇ? ಈ ರೀತಿಯಾಗಿ ಪೂಜಿಸುವುದರಿಂದ ಬರುವ ಪುಣ್ಯವಾದರೂ ಎಂತಹುದು? ಒಂದು ವೇಳೆ ಅಂತಹ ಪುಣ್ಯ ಲಭಿಸಿದಲ್ಲಿ ಅದು ಯಾರಿಗೆ ಸಲ್ಲಬೇಕು? ಹೂವಿಗೋ? ಕೆರೆಯ ನೀರಿಗೋ? ಪೂಜಾಕ್ರಮ ತಿಳಿಸಿದ ಶಾಸ್ತ್ರ ಗ್ರಂಥಗಳಿಗೋ? ಜನರಿಗೋ? ಅಥವಾ ಪೂಜಿಸಿದವರಿಗೋ? ಒಂದಿಷ್ಟಾದರೂ ಆಲೋಚಿಸಬೇಕಲ್ಲವೇ? ಬಹುಶ: ಇಂತಹ ಗೊಂದಲ ಚೌಡಯ್ಯನವರಿಗೂ ಕಾಡಿರಬೇಕು. ಹೀಗಾಗಿ “ಇದ ನಾನರಿಯೆ ಭಗವಂತ” ಇದನ್ನು ನೀನೆ ತಿಳಿಹೇಳಿ ಮಾರ್ಗದರ್ಶನ ಮಾಡಬೇಕೆಂದು ಬೇಡಿಕೊಳ್ಳುತ್ತಾರೆ.

ಮಾನವ ನಿರ್ಮಿತ ಈ ದೈವಗಳನ್ನು ಹೇಗೆ ಪೂಜಿಸಬೇಕೆಂದು ಶಾಸ್ತ್ರ, ಪುರಾಣ ಪುಣ್ಯ ಕಥೆಗಳಲ್ಲಿ ಹೇಳುತ್ತಾ ಬಂದಿದ್ದಾರೆ. ಅಲ್ಲಿ ಹೇಳಿದಂತೆ ಪೂಜಿಸುವುದು ಸರಿಯೇ? ಸಾಂಪ್ರದಾಯಿಕವಾಗಿ ಆಚರಿಸುತ್ತಾ ಬಂದಿರುವ ಈ ತರಹದ ಪೂಜೆಗಳನ್ನು ಅನುಕರಿಸಿ ಆಚರಿಸುವುದು ಎಷ್ಟರ ಮಟ್ಟಿಗೆ ಸರಿ? ನಾವು ಪೂಜಿಸುತ್ತಿರುವ ತರಹೇವಾರಿ ದೇವರುಗಳನ್ನು ಕುರಿತು ಬಸವಣ್ಣನವರು ಹೀಗೆ ವ್ಯಂಗ್ಯವಾಡಿದ್ದಾರೆ.

ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೋ!
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೋ!
ದೈವ, ದೈವವೆಂದು ಕಾಲಿಡಲಿಂಬಿಲ್ಲಾ,
ದೈವನೊಬ್ಬನೆ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-52 / ವಚನ ಸಂಖ್ಯೆ-562)

ಅಲ್ಲಮರೂ ಕೂಡ ಅಣ್ಣನವರ ಮಾತಿಗೆ ದನಿಗೂಡಿಸುತ್ತಾ,

ವೇದ ದೈವವೆಂದು ನುಡಿವರು, ಶಾಸ್ತ್ರ ದೈವವೆಂದು ನುಡಿವರು,
ಪುರಾಣ ದೈವವೆಂದು ನುಡಿವರು, ಕಲ್ಲು ದೈವವೆಂದು ನುಡಿವರು,
ಕಾಷ್ಠ ದೈವವೆಂದು ನುಡಿವರು, ಪಂಚಲೋಹ ದೈವವೆಂದು ನುಡಿವರು,
ಇವರೆಲ್ಲ ಸಕಲದಲಾದ ಸಂದೇಹವನೆ ಪೂಜಿಸಿ ಸತ್ತು ಹೋದರಲ್ಲಾ!
ಸಮಸ್ತ ಪ್ರಾಣಿಗಳೂತಾಯನರಿಯದ ತರ್ಕಿಗಳು, ತಂದೆಯನರಿಯದ ಸಂದೇಹಿಗಳು. ತನು ಪೃಥ್ವಿಯಿಂದಲಾಯಿತ್ತು ಮನ ವಾಯುವಿನಿಂದಲಾಯಿತ್ತು. ಕಲ್ಲು ಕಾಷ್ಠ ಸಕಲನಿಷ್ಕಲದಿಂದಲಾಯಿತ್ತು.
ವಾಯುವಾಧಾರದ ಪವನಸಂಯೋಗದ ಅನಾಹತ ಚಕ್ರದಿಂದ ಮೇಲಣ
ಆಜ್ಞಾಚಕ್ರದಲ್ಲಿ ನಿಂದು; ಅನಂತಕೋಟಿಬ್ರಹ್ಮಾಂಡಗಳ ಮೆಟ್ಟಿ,
ಕಾಯದ ಕಣ್ಣ ಮುಚ್ಚಿ, ಜ್ಞಾನದ ಕಣ್ಣ ತೆರೆದು ನೋಡಲ್ಕೆ,
ಅಲ್ಲಿ ಒಂದು ನಿರಾಕಾರ ಉಂಟು.
ಆ ನಿರಾಕಾರದಲ್ಲಿ ನಿಂದು ನಿರ್ಣಯಿಸಿ ನೋಡಲ್ಕೆ,
ಅಲ್ಲಿ ಒಂದು ನಿಶ್ಶೂನ್ಯವುಂಟು.
ಆ ನಿಶ್ಶೂನ್ಯದಲ್ಲಿ ನಿಂದು ನಿಶ್ಚಯಿಸಿ ನೋಡಲ್ಕೆ,
ಕತ್ತಲೆಯಲ್ಲ ಬೆಳಗಲ್ಲ ಬಚ್ಚಬರಿಯ ಬಯಲು ಗುಹೇಶ್ವರಾ!
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-280 / ವಚನ ಸಂಖ್ಯೆ-1510)

ಎನ್ನುತ್ತಾ ಸಂಶಯ ಸಂದೇಹಗಳಿಗೆ ಒಳಗಾಗಿ, ಸಂದೇಹವನ್ನೇ ಪೂಜಿಸುತ್ತಾ ಜೀವ ತೆತ್ತರಲ್ಲ ಈ ಮೂರ್ಖ ಮನುಜರು ಎಂದು ಜರಿಯುತ್ತಾರೆ. ಪೂಜಿಸಿಕೊಳ್ಳುವ ವಸ್ತು (ದೇವರು) ಹಾಗೂ ಪೂಜಿಸುವ ಭಕ್ತರ ನಡುವೆ ಪೂಜಾರಿ, ಪುರೋಹಿತ ವರ್ಗವೊಂದು ಆಗಲೇ ಸೃಷ್ಟಿಯಾಗಿತ್ತು. ತಮ್ಮ ಸ್ವಾರ್ಥಕ್ಕನುಗುಣವಾಗಿ ಈ ಜನರು ಪೂಜೆಗೆ ಸಂಬಂಧಿಸಿದ ವಿಧಿ ವಿಧಾನಗಳನ್ನು, ತಮ್ಮ ಅನುಕೂಲಕ್ಕೆ ತಕ್ಕಂತೆ ಹಿಗ್ಗಿಸಿ, ಮಾರ್ಪಡಿಸಿ ಪಡಿಪದಾರ್ಥಗಳನ್ನು, ಧನವನ್ನು ಮನಬಂದಂತೆ ಸುಲಿಗೆ ಮಾಡುತ್ತಿದ್ದರು. ಇದಕ್ಕಾಗಿ ವಿವಿಧ ಅಭಿಷೇಕಗಳು, ಗಂಧ, ಕುಂಕುಮ, ಬಿಲ್ವಾರ್ಚನೆಗಳು, ಕಲ್ಯಾಣೋತ್ಸವ ಹಾಗೂ ವಿವಿಧ ಪಲ್ಲಕ್ಕಿ-ರಥೋತ್ಸವಗಳನ್ನು ಪ್ರಚುರಪಡಿಸಿದರು. ಇವೆಲ್ಲವನ್ನು ಕಣ್ಣಾರೆ ಕಂಡ ಶರಣರು ಈ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಲು “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂದು ಸಾರುತ್ತ, ಸ್ಥಾವರವನ್ನು ನಿರಾಕರಿಸಿ ಹಿನ್ನೆಲೆಗೆ ತಳ್ಳಿ ಜಂಗಮವನ್ನು ಮುನ್ನೆಲೆಗೆ ತಂದರು. ಆ ಮೂಲಕ ಅರಿವು-ಆಚಾರ-ಅನುಭಾವಗಳ ಪ್ರತೀಕಗಳಾದ “ಗುರು-ಲಿಂಗ-ಜಂಗಮ” ತತ್ವವನ್ನು ಸ್ಥಿರೀಕರಿಸಿದರು.

ಪ್ರೊ. ಜಿ. ಎ. ತಿಗಡಿ.
ಧಾರವಾಡ.
ಮೋಬೈಲ್‌ ಸಂ. +91 99026 71015

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply