
ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಇನ್ನೂ ಚರ್ಚಿಸಲಾರದ, ಅಧ್ಯಯನಕ್ಕೆ ಒಳಪಡಿಸಲಾರದ ವಚನಕಾರರ ಸಂಖ್ಯೆ ಅಪಾರವಾಗಿದೆ. ನಮ್ಮ ಓದು ಕೆಲವೇ ಕೆಲವು ಪರಿಚಿತ ಪ್ರಸಿದ್ಧ ವಚನಕಾರರ ಓದಿನ ಮಟ್ಟಿಗೆ ಸೀಮಿತಗೊಂಡಿರುವದು ವಚನ ಸಾಹಿತ್ಯ ಅಧ್ಯಯನಿಗಳಾದ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ವಿದ್ವಾಂಸರು ಬಹಳಷ್ಟು ಚರ್ಚಿಸಿರಲಾರದ ವಚನಕಾರರಲ್ಲಿ ಅಗ್ಘವಣಿ ಹಂಪಯ್ಯನೂ ಒಬ್ಬನಾಗಿದ್ದಾನೆ.
ವಚನಕಾರರಲ್ಲಿ ಹಂಪ ಎನ್ನುವ ಹೆಸರು ಇಬ್ಬರು ಮೂವರಿಗೆ ಇರುವದು ಕಂಡು ಬರುತ್ತದೆ. ತಕ್ಷಣಕ್ಕೆ ನೆನಪಾಗುವ ಇನ್ನೊಂದು ಹೆಸರು ಹೇಮಗಲ್ಲ ಹಂಪನದು. ಹಾಗೆಯೆ ಅಗ್ಘವಣಿ ಹಂಪಯ್ಯ ಎಂಬ ಹೆಸರು ಈ ವಚನಕಾರನದು. ಈತನ ನಾಲ್ಕು ವಚನಗಳನ್ನು ವಚನ ಸಂಪುಟಗಳಲ್ಲಿ ಸಂಪಾದಿಸಿ ಕೊಟ್ಟ ಹಿರಿಯ ಸಂಶೋಧಕರಾದ ಡಾ. ಎಂ. ಎಂ ಕಲಬುರ್ಗಿಯವರು ಇವನನ್ನು ಕುರಿತು ಬರೆದಿರುವ ಪರಿಚಯಾತ್ಮಕ ಮಾತುಗಳು ಹೀಗಿವೆ.
“ಮುಕುಂದಪುರದ ನಿವಾಸಿಯಾದ ಅಗ್ಘವಣಿ ಹಂಪಯ್ಯನು ಅಗ್ಘವಣಿಯನ್ನು ಹೊತ್ತು ತಂದು ಭಕ್ತರಿಗೆ ಪೂರೈಸುವ ಕಾಯಕದವನಾಗಿದ್ದನು. ಈ ಕಾಯಕದಿಂದ ಬಂದ ಹಣವನ್ನು ದಾಸೋಕ್ಕೆ ವ್ಯಯಿಸುವದು ಇವನ ನಿತ್ಯ ವೃತವಾಗಿದ್ದಿತು. ಆ ಕಾಲದಲ್ಲಿ ಅಗ್ಘವಣಿ ದೊರೆಯದಿರಲು ಮನೆಯಲ್ಲಿಯ ಪಾತ್ರೆಗಳನ್ನು ಮಾರಿ ಚಿಲುಮೆ ತೋಡಿಸಿದ, ಸೆಲೆ ಕಾಣಿಸಲಿಲ್ಲ. ಕಾಯಕ ನಿಂತು ಸಹಜವಾಗಿಯೇ ಅದಾಯ ಕಡಿಮೆಯಾಗಿ ದಾಸೋಹ ನಿಲ್ಲುವ ಸ್ಥಿತಿ ಪ್ರಾಪ್ತವಾಯಿತು. ಆಗ ಎತ್ತರದ ಬೆಟ್ಟದಿಂದ ಅಗ್ಘವಣಿ ತಂದು ದಾಸೋಹ ಮುಂದುವರೆಸಿದ. ಇವನ ಕಾಯಕ ಭಕ್ತಿಗೆ ಮೆಚ್ಚಿದ ಶಿವನು ಗಣ ಪದವಿಯನ್ನಿತ್ತನು. ಈತನು “ಹಂಪೆಯ ವಿರೂಪ” ಎಂಬ ವಚನಾಂಕಿತದಿಂದ ಬರೆದ ನಾಲ್ಕು ವಚನಗಳು ಲಭ್ಯವಾಗಿವೆ.
ಡಾ. ಎಂ. ಎಂ. ಕಲಬುರ್ಗಿಯವರು ವಚನಕಾರ ಮುಕುಂದಪುರದವನು ಎನ್ನುತ್ತಾರೆ. ಈತನ ಹೆಸರು ಹಂಪಯ್ಯ ಎಂದಿದ್ದು, ಈತ “ಹಂಪೆಯ ವಿರೂಪ” ಎಂಬ ಅಂಕಿತವನ್ನಿರಿಸಕೊಂಡು ನಾಲ್ಕು ವಚನಗಳನ್ನು ಬರೆದಿದ್ದು ಇವೆರಡು ಸೂಚನೆಗಳ ಆಧಾರದ ಮೇಲೆ ಆತ ಹಂಪೆಗೆ ಸಮೀಪದ ಪರಿಸರದವನಾಗಿರಬೇಕು ಎನಿಸುತ್ತದೆ. ಮತ್ತು ಹಂಪೆಯ ವಿರೂಪಾಕ್ಷನನ್ನು ತನ್ನ ಆರಾಧ್ಯ ದೈವವಾಗಿ ಹೊಂದಿದವನಾಗಿರುವದಂತೂ ಸ್ಪಷ್ಟ.
ಅಗ್ಘವಣಿ ಎಂದರೆ ನೀರು. ಆದರೆ ಇಲ್ಲಿ ಅದನ್ನು ಕುಡಿಯಲು ಯೋಗ್ಯವಾದ ಸ್ವಚ್ಛ ನೀರು ಎಂದು ಅರ್ಥ ಮಾಡಿಕೊಳ್ಳಬಹುದು. ಈ ಶರಣ ಮನೆ ಮನೆಗೆ ಕುಡಿಯುವ ನೀರನ್ನು ಹೊತ್ತು ಪೂರೈಸುವ ಕಾಯಕವನ್ನು ಮಾಡುತ್ತಿದ್ದನು. ಆ ಕಾಲಕ್ಕೆ ಕುಡಿಯಲು ಶುದ್ಧವಾದ ನೀರನ್ನು ಮನೆ ಮನೆಗೆ ಹೊತ್ತು ತಂದು ಹಾಕುವ ಕಾಯಕದವರೂ ಇದ್ದರು. ಈ ಶರಣನ ವಿಶೇಷವೆಂದರೆ ತನ್ನ ಕಾಯಕದ ಸಾರ್ಥಕ್ಯಕ್ಕಾಗಿಯೆ ಶಿವನಿಂದ ಗಣ ಪದವಿಯನ್ನು ಪಡೆದ ಶರಣ ಎಂಬುದು ವಿದ್ವಾಂಸರ ಮಾತಿನಿಂದ ಅರಿವಿಗೆ ಬರುತ್ತದೆ. ತುಂಬ ಕಷ್ಟಪಟ್ಟು ನೀರನ್ನು ಎತ್ತರದ ಬೆಟ್ಟದಿಂದ ತಂದು ಪೂರೈಸುವ ಕಾಯಕ ನಿಷ್ಠೆ ಶಿವನಿಗೆ ಇಷ್ಟವಾಗುತ್ತದೆ.
ಈತನ ದೊರೆತಿರುವ ನಾಲ್ಕು ವಚನಗಳು ಸಂಕಿರ್ಣವಾಗಿವೆ. ಭಕ್ತಿಯ ಶ್ರೇಷ್ಠತೆಯನ್ನು ಸಾರುತ್ತವೆ. ಭಕ್ತನಾದವನು ತುಂಬ ನಿಷ್ಠೆಯಿಂದ ಭಕ್ತಿ ಅಚರಿಸಬೆಕು ಎಂಬುದನ್ನು ಸಾರುತ್ತವೆ. ಎರಡು ವಚನಗಳಲ್ಲಿ ಶಿವನಾಮ ಸ್ಮರಣೆಯ ಮಹತ್ವವನ್ನು, ಪಂಚಾಕ್ಷರಿ ಮಂತ್ರದ ಮಹತ್ವವನ್ನು ಸಾರುತ್ತಾನೆ. ಶಿವಧ್ಯಾನ ಮಹಾಮಂತ್ರ ಎನ್ನುವ ಶರಣ ಅದನ್ನು ಸವಿಯುವದೇ ಅತ್ಯಾನಂದ ಎನ್ನುತ್ತಾನೆ. ಇವನ ಮೊದಲ ವಚನ ಶಿವಧ್ಯಾನದ ಮಹಿಮೆಯನ್ನು ಸಾರುತ್ತದೆ.
ಭಕ್ತ್ಯಾನಂದವನದಲ್ಲಿ ಜ್ಞಾನಾಂಕುರವ ಮೆಲಿದು,
ಆನಂದವೆಂಬ ಜಲವನೀಂಟಿ,
ಸಮತೆಯೆಂಬ ನೆಳಲಲ್ಲಿರ್ಪುದ ನೆನೆಯಾ ಮನವೆ!
ಮಹಾಮಂತ್ರ, ಶಿವಧ್ಯಾನವನೆ ಸವಿದು, ಮೆಲುಕುತ್ತಿರ್ಪುದು.
ಧರ್ಮಾರ್ಥಕಾಮಮೋಕ್ಷವೆಂಬ ಮೊಲೆ ತೊರೆಯಲು
ಹಂಪೆಯ ವಿರುಪನ ಕರೆವ ಕಾಮಧೇನು
ಪಮಚಾಕ್ಷರಿಯಂಬದು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-973 / ವಚನ ಸಂಖ್ಯೆ-287)
ಪಂಚಾಕ್ಷರಿ ಮಹಾಮಂತ್ರವೆಂದರೆ ಅದು ಹಂಪೆಯ ವಿರೂಪನ ಕರೆವ ಮಹಾಧೇನು ಎನ್ನುವದು ವಚನಕಾರನ ದೃಡನಂಬಿಕೆ. ಶಿವನ ನಾಮ ಸ್ಮರಣೆಯಲ್ಲಿ ಏನೆಲ್ಲ ಇದೆ ಎನ್ನುವದನ್ನು ವಚನಕಾರ ಕಂಡುಕೊಂಡಿದ್ದಾನೆ. ಆ ನಾಮ ಸ್ಮರಣೆಯಿಂದ ಜ್ಞಾನಾಂಕುರವಾಗುತ್ತದೆ. ಆನಂದವೆಂಬ ಜಲವನೀಂಟಿ ಭಕ್ತನಾದವನು ಸಮತೆ ಎಂಬ ನೆಳಲಿನಲ್ಲಿ ಸಮಾಧಾನಿಯಾಗಿ ಇರುತ್ತಾನೆ. ಮತ್ತೆ ಮತ್ತೆ ಆ ಮಹಾಮಂತ್ರವನೆ ಮೆಲುಕು ಹಾಕುತ್ತ ಇರುವದೆ ಭಕ್ತನಿಗೆ ಗಮ್ಯ. ಮಹಾಮಂತ್ರವನ್ನು ಹಾಲು ಕರೆಯುವ ಕಾಮಧೇನುವಿಗೆ ಹೋಲಿಸುವ ವಚನಕಾರ ಹಾಲು ಕರೆಯಲು ಕುಳಿತಾಗ ಆಕಳ ಮೊಲೆಯಂದ ಹಾಲು ಬರುವ ಮೊದಲು ಆಕಳು ಹಾಲು ಕೊಡುವ ಸ್ಥಿತಿಗೆ ಸಜ್ಜಾಗುವ ಪ್ರಕ್ರಿಯೆಯನ್ನು ತೊರೆ ಬಿಡುವದು ಎಂಬ ಪದದಿಂದ ಬಣ್ಣಿಸುತ್ತಾರೆ. ಆದರೆ ಇದು ಸಾಧಾರಣ ಕಾಮಧೇನುವಲ್ಲ. ಹಂಪೆಯ ವಿರೂಪನ ಕರೆವ ಕಾಮಧೇನು. ಧರ್ಮ ಅರ್ಥ ಕಾಮ ಮೋಕ್ಷಗಳನು ದಾಟಿ ಸಾಕ್ಷಾತ್ ಶಿವನನ್ನೇ ಭಕ್ತನಿಗೆ ತಂದು ಕೊಡುವ ಮಹಾಮಂತ್ರ ಎಂದು ಶಿವನಾಮ ಸ್ಮರಣೆಯ ಮಹತ್ವವನ್ನು ಸಾರುತ್ತಾನೆ.
ಮುಂದಿನ ವಚನವೂ ಕೂಡ “ನಮ:ಶಿವಾಯ” ಎಂಬ ಪಂಚಾಕ್ಷರಿ ಮಂತ್ರದ ಮಹತ್ವವನ್ನೇ ಸಾರುತ್ತದೆ, ಅದು ನಿಜವಾದ ಭಕ್ತನಾದವನಿಗೆ ಬೇಡಿದುದೆಲ್ಲವನ್ನೂ ಕೊಡುವ ಮಹಾಶಕ್ತಿ ಎಂದು ಸಾರುತ್ತಾನೆ.
ವಿಪುಳ ವೇದವೇದಾಂತಸಾರ, ಸಕಲಲೊಕಜನಹಿತಾಧಾರ,
ಸಪ್ತಕೋಟಿ ಮಹಮಂತ್ರಗಳ ತವರುಮನೆ, ಭಕ್ತ ಜನಜೀವಾನಂದ,
ಅಖಿಳಾಗಮ ಸಂತಾನದ ಹರಣ, ಮುಕ್ತಿಗೆ ಕಾರಣ ಸೋಪಾನ,
ಪ್ರಣವಾಂಕುರ ಪಲ್ಲವ ಫಲರೂಪ,
ತ್ರಿಣಯನೊಲಿಸುವ ಕರ್ಣಾಭರಣ,
ಹರನ ನಾಮದ ಸಾಕಾರದ ನಿಲವು,
ಪರಮಪಂಚಬ್ರಹ್ಮಾನಂದ, ಪರತತ್ವದ ನಿತ್ಯದ ನೆಲೆ,
ಹಂಪೆಯ ವಿರುಪನ ತೋರುವ ಗುರು ಪಂಚಾಕ್ಷರಿ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-973 / ವಚನ ಸಂಖ್ಯೆ-288)
ಪಂಚಾಕ್ಷರಿ ಮಂತ್ರ ಸಪ್ತಕೋಟಿ ಮಂತ್ರಗಳ ತವರು ಮನೆ. ಎಲ್ಲ ಮಂತ್ರಗಳೂ ಅದರಲ್ಲಿಯೇ ಲೀನವಾಗುತ್ತವೆ. ಅದು ಮುಕ್ತಿಗೆ ಕಾರಣವಾದುದು. ಅದಿಲ್ಲದೇ ಹಂಪೆಯ ವಿರುಪನ ನೋಡಲಾಗದು. ಅದ್ದರಿಂದಲೇ ಶರಣ ಆ ಮಂತ್ರವನ್ನು “ಹಂಪೆಯ ವಿರೂಪನ ತೋರುವ ಪರಮ ಗುರು ಪಂಚಾಕ್ಷರಿ“ ಎಂದು ಬಣ್ಣಿಸಿದ್ದಾನೆ.
ಬೆಡಗಿನ ವಚನಗಳ ಮಾದರಿಯಲ್ಲಿರುವ ಅವನ ಒಂದು ವಚನ ಕಠಿಣವಾಗಿದೆ. ಅಷ್ಟು ಸರಳವಾಗಿ ಅರ್ಥವನ್ನು ಬಿಟ್ಟು ಕೊಡದೆ ಇರುವ ಒಂದು ವಚನವನ್ನು ಈ ಶರಣ ಬರೆದಿರುತ್ತಾನೆ. ಇಲ್ಲಿ ಅವನು ವರ್ಣೀಸುವ ಶಿವ ಗುರು ಸಂಬಂಧ ತಾವು ಸೂಚಿಸುವ ಪದಗಳಿಗಿಂತ ಭಿನ್ನವಾದ ಅರ್ಥವನ್ನು ಒಳಗೊಂಡಂತಿವೆ. ಇಲ್ಲಿನ ದೇವರಾಯ ಮಹಾರಾಯ ಹೊಸತಾಗಿ ಅರಸನಾಗಿದ್ದಾನೆ. ಸ್ತ್ರೀ ಲಂಪಟನಾಗಿ ತನ್ನ ಸಭೆ ನಡೆಸದೇ ರಾಜ್ಯದಲ್ಲಿ ಅರಾಜಕತೆ ಇದೆ. ಬಹುಶ: ಬೇರೆ ಬೇರೆ ಆಸಕ್ತಿ ವಿಷಯಗಳಲ್ಲಿ ಮುಳಗಿ ಅಸ್ತವ್ಯಸ್ತವಾಗಿರುವ ಮನಸ್ಸು ಇಲ್ಲಿ ಓಲಗಕ್ಕೆ ಬಾರದ ದೈವದ ಸಂಕೇತವಾದಂತಿದೆ. ಇಂತಹ ಸಂದರ್ಭದಲ್ಲಿ ಅವನನ್ನು ಕೂಡಿಸಿಕೊಂಡು ಎಲ್ಲರನ್ನೂ ಕಾಪಾಡುವದು ನಿಜ ಭಕ್ತಿಯೊಂದೇ ಎನ್ನುವದನ್ನು ಸಾರುವದು ಅವನ ವಚನಾರ್ಥವಾದಂತಿದೆ.
ಹಂಸಪತಿ ಗರುಡಪತಿ ವೃಷಭಪತಿ ಮೊದಲಾದ ಸರ್ವಜೀವಾಧಿಪತಿ
ದೇವರಾಯ ಮಹಾರಾಯನ ಅರಸುತನ ಹೊಸತು;
ಓಲಗಕ್ಕೆ ಬಾರ, ಸಿಂಹಾಸನದಲ್ಲಿ ಕುಳ್ಳಿರ,
ಸ್ತ್ರೀಲಂಪಟನಾಗಿ ಅಂತ:ಪುರವ ಬಿಟ್ಟು ಹೊರವಂಡ,
ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ,
ಗುರುವೆಂಬ ತಳವಾರನ ಆಜ್ಞೆ ಕಟ್ಟಿತ್ತು,
ತೆರದ ಬಾಗಿಲ ಮುಚ್ಚುವರಿಲ್ಲ, ಮುಚ್ಚಿದ ಬಾಗಿಲ ತೆರೆವರಿಲ್ಲ.
ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು,
ಭಕ್ತನೆಂಬುವರಿನ್ನು ಬದುಕಲೇ ಬಾರದು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-973 / ವಚನ ಸಂಖ್ಯೆ-289)
ಶರಣರು ಬರೆದಿರುವ ಇಂತಹ ಬೆಡಗಿನ ವಚನಗಳನ್ನು ಅರ್ಥಮಾಡಿಕೊಂಡು ವಿವರಣೆ ನೀಡುವದು ತುಂಬ ಕಷ್ಟವಾದ ಕೆಲಸ. ವಿದ್ವಾಂಸರು ಈ ದಿಶೆಯಲ್ಲಿ ಬೆಳಕಲು ಬೀರಬೇಕಾಗಿದೆ.
ಭಕ್ತನ ಗುಣಗಳನ್ನು ಕುರಿತು ಈತನ ಅಲೋಚನೆ ಅರ್ಥಪೂರ್ಣವಾಗಿದೆ. ಭಕ್ತಿಯಂಬುದು ಒಂದು ಅದರ್ಶ. ನಿಜವಾದ ಭಕ್ತನ ಗುಣಗಳು ಇವು. ಅವನೊಬ್ಬ ಕಳಂಕವೇ ಇಲ್ಲದ ಆದರ್ಶ ವ್ಯಕ್ತಿ. ಅವನಂತೆ ಆಗುವದು ಸರಳವಲ್ಲ, ಹುಸಿ ತಟವಟ, ಮೋಸಗಳು ಅವನತ್ತ ಸುಳಿಯವು. ಅವನ ಇರುವಿಕೆಯನ್ನು ಶರಣ ಅಗ್ಘವಣಿ ಹಂಪಯ್ಯ ಬಣ್ಣಿಸುವ ರೀತಿಯಿದು.ಭಕ್ತನಲ್ಲಿ ಹುಡುಕಿದರೂ ಯಾವ ದುರ್ಗುಣಗಳೂ ಸಿಗಲಾರವು.
ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ,
ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ.
ದಯೆಯಂಬುದು ತನ್ನ ಕೈಯಲ್ಲಿ,
ಸ್ಮರಣೆಯಂಬುದು ತನ್ನ ತೊತ್ತಾಗಿಪ್ಪುದು.
ಕೋಪವೆಂಥದೆಂದರಿಯ, ತಾಪತ್ರಯಗಳು ಮುಟ್ಟಲಮ್ಮವು,
ವ್ಯಾಪ್ತಿಗಳಡಗಿದವು. ಲಿಂಗವನೊಳಕೊಂಡ ಪರಿಣಾಮಿ.
ಆತನ ಪಥ ಲೋಕಕ್ಕೆ ಹೊಸತು.
ಲೊಕದ ಪಥವಾತನಿಗೆ ಹೊಸತು.
ತನಗೊಮ್ಮೆಯು ಲಿಂಗಧ್ಯಾನ, ಲಿಂಗಕ್ಕೊಮ್ಮೆಯು ತನ್ನ ಧ್ಯಾನ.
ಘನಘನಮಹಿಮೆಯು ಹೊಗಳಲೆನ್ನಳವಲ್ಲ.
ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ,
ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-974 / ವಚನ ಸಂಖ್ಯೆ-29)
ಭಕ್ತನ ಗುಣಗಳನ್ನು ಹೊಗಳಲು ನನಗೆ ಸಾಧ್ಯವಾಗದು ಎನ್ನುವ ಶರಣ ಅವನು “ಘನ ಘನಮಹಿಮ ಅವನ ಹೊಗಳ ಲೆನ್ನಳವಲ್ಲ” ಎನ್ನುತ್ತ “ಶಿವನೇ ನೀನೇ ಕೇಳು, ನಿನ್ನ ನಂಬಿದ ಸತ್ಯ ಶರಣ ಪರಿಣಾಮಿ” ಎಂದು ಮನದುಂಬಿ ಭಕ್ತನನ್ನು ಹೊಗಳುತ್ತಾನೆ. ಅವನು ಕೊಪವೆಂಬುದು ಎಂಥದು ಎಂದು ಅರಿಯದವನು, ಅವನನ್ನು ತಾಪತ್ರಯಗಳು ಮುಟ್ಟಲಾರವು. ಅವನು ಲಿಂಗವನು ಒಳಕೊಂಡ ಪರಿಣಾಮಿ. ಅವನಿಗೆ ಜಗತ್ತಿನ ವ್ಯವಹಾರಗಳು ಹೊಸತಾಗಿ ಕಾಣಿಸುತ್ತವೆ. ಲೋಕವೂ ಅವನನ್ನು ತನ್ನನ್ನು ಬಿಟ್ಟೇ ಇರುವವನು ಎಂದು ಪರಿಗಣಿಸುತ್ತದೆ. ಹೀಗೆ ಭಕ್ತ ಆದವನು ತನ್ನ ಲಿಂಗಧ್ಯಾನ, ಆತ್ಮಧ್ಯಾನದಲ್ಲಿ ಮುಳುಗಿರುತ್ತಾನೆ. ಲಿಂಗಧ್ಯಾನವನ್ನು ಬಿಟ್ಟು ಅವನಿಗೆ ಇನ್ನೊಂದು ಗುರಿ ಇರಲಾರದು,
ಹೀಗೆ ಅಗ್ಘವಣಿ ಹಂಪಯ್ಯನ ನಾಲ್ಕೇ ವಚನಗಳು ದೊರಕಿದ್ದರೂ ಅವುಗಳಲ್ಲಿ ಶಿವನಾಮ ಮಹಿಮೆ ಭಕ್ತನ ಭಕ್ತಿ ಎಂಥದಿರಬೇಕು ಎಂಬ ಚಿಂತನೆ. ಘನವಾದ ಅನುಭಾವ ಶ್ರೀಮಂತಿಕೆ ಎದ್ದು ಕಾಣುತ್ತದೆ. ಬಸವಾದಿ ಶಿವಶರಣರ ಸಂಗಕ್ಕೆ ಬಂದ ಸಾಮಾನ್ಯರೂ ತಮ್ಮ ಇರುವಿಕೆ ಮತ್ತು ಆಲೋಚನಾ ರೀತಿಯಲ್ಲಿ ಘನ-ಮನ ಸಂಪನ್ನರಾದುದು ಅರಿವಿಗೆ ಬರುತ್ತದೆ. ಹಂಪಯ್ಯನ ವಚನಗಳ ಆಧ್ಯಯನ ಅರ್ಥಪೂರ್ಣ ವಿಚಾರಗಳನ್ನು ತುಂಬುವಲ್ಲಿ ಯಶಸ್ವಿಯಾಗಿವೆ.
ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್ ಸಂ. 97319 70857
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in