ಅಣ್ಣನು ನಮ್ಮ ಬೊಮ್ಮಯ್ಯ | ಡಾ. ಶಿವಗಂಗಾ ರಂಜಣಗಿ, ಹುನಗುಂದ.(ಶರಣ ಕಿನ್ನರಿ ಬ್ರಹ್ಮಯ್ಯನವರ ಸ್ಮರಣೋತ್ಸವದ ತನ್ನಿಮಿತ್ಯ ಈ ಲೇಖನ)

12 ನೇ ಶತಮಾನ ಒಂದು ಅದ್ಭುತ ಕಾಲ ಘಟ್ಟ. ಶರಣರ ನಡೆ – ನುಡಿ – ವಚನ ಪ್ರತಿಯೊಂದು ಆದರ್ಶ. ದೊರೆತಿರುವ ಆಧಾರಗಳು ಕೆಲವಾದರೆ ಕಾಲ ಗರ್ಭದಲ್ಲಿ ಅಡಗಿರುವ ಸತ್ಯಾಂಶಗಳೆಷ್ಟೋ ಇವೆ. ಯಾವುದೇ ಶರಣರು ತಮ್ಮ ಜೀವನವನ್ನು ಕುರಿತು ಹೇಳಿಕೊಂಡಿಲ್ಲ ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು, ವ್ಯಕ್ತಿಗಿಂತ ಸಮಾಜದ ಹಿತ ದೊಡ್ಡದು. ಶರಣರು ಸರ್ವರ ಏಳಿಗಾಗಿ ಸರ್ವೋದಯದ ತತ್ವವನ್ನು ಅಳವಡಿಸಿಕೊಂಡವರು. ಬಸವಾದಿ ಶರಣರು “ಇರುವ ಕೆಲಸವ ಮಾಡು ಕಿರಿದೆನದೆ, ದೊರೆತುದುದು. ಪ್ರಸಾದವೆಂದುಣ್ಣು” ಎಂಬ ನುಡಿಯಂತೆ ಕೈಲಾಸಕ್ಕಿಂತ ಕಾಯಕವನ್ನು ದೊಡ್ಡದನ್ನಾಗಿ ಮಾಡಿಕೊಂಡಿದ್ದರು. ಅವರ ಕಾಯಕದಿಂದಲೇ ಶರಣರನ್ನು ಗುರುತಿಸುತ್ತೇವೆ. ಅನೇಕ ಶರಣರ ಪೂರ್ವಿಕ ಜೀವನದ ಕುರಿತು ಸಂಪೂರ್ಣ ಮಾಹಿತಿ ದೊರೆಯದಿದ್ದರೂ ಅಂಕಿತವನ್ನಾಧರಿಸಿ, ವಚನಗಳನ್ನಾಧರಿಸಿ ಹಾಗೂ ಜನಪದರ ಐತಿಹ್ಯಗಳನ್ನು ಆಧರಿಸಿ ಶರಣರ ಜೀವನದ ಬಗೆಗೆ ತಿಳಿದುಕೊಳ್ಳಲಾಗಿದೆ. ಅಂತಹ ಶರಣರಲ್ಲಿ ಕಿನ್ನರಿ ಬೊಮ್ಮಯ್ಯನವರೂ ಒಬ್ಬ ಶ್ರೇಷ್ಠ ಶರಣರು.

ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ,
ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ.
ಕೂಡಲಸಂಗಮದೇವಯ್ಯಾ,
ನಿಮ್ಮ ಪ್ರಮಥರ ಮುಂದೆ ಕಿನ್ನರ ಬೊಮ್ಮಣ್ಣ ಸಾಕ್ಷಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-85/ವಚನ ಸಂಖ್ಯೆ-323)

ಎಂದು ಬಸವಣ್ಣನವರು ತಮ್ಮ ಈ ವಚನದಲ್ಲಿ ಶರಣ ಕಿನ್ನರಿ ಬೊಮ್ಮಣ್ಣನವರನ್ನು ಸಾಕ್ಷಿಯಾಗಿ ಪ್ರಮಾಣ ಮಾಡುತ್ತಾರೆಂದರೆ ಅವರ ಆದರ್ಶ ವ್ಯಕ್ತಿತ್ವದ ಪ್ರಭಾವ ಬಸಣ್ಣನವರ ಮೇಲೆ ಎಷ್ಟಿತ್ತು ಎಂಬುದರ ಅರಿವು ಉಂಟಾಗುತ್ತದೆ. ಶರಣ ಕಿನ್ನರಿ ಬೊಮ್ಮಯ್ಯನವರು ಬಸವಣ್ಣನವರಿಗೆ ಆಪ್ತ ಸ್ನೇಹಿತರಾಗಿದ್ದರು. ಇವರ ಜ್ಞಾನ-ಭಕ್ತಿ ಅಪಾರವಾದುದು. ಮರುಳಶಂಕರದೇವರ ಪ್ರಸಾದದ ನಿಜದ ನಿಲುವನ್ನು ಬಸವಣ್ಣನವರಿಗೆ ಅರ್ಥ ಮಾಡಿಸಿದರು. ಅಕ್ಕಮಹಾದೇವಿಯವರ ವೈರಾಗ್ಯವನ್ನು ಅರ್ಥೈಸಿಕೊಂಡು ಅಲ್ಲಮರಿಗೆ ಮನವರಿಕೆ ಮಾಡಿಕೊಟ್ಟರು. ಇಂತಹ ಶರಣ ಕಿನ್ನರಿ ಬೊಮ್ಮಯ್ಯನವರು ಜನಿಸಿದ್ದು ಆಂಧ್ರಪ್ರದೇಶದ ಪೋಡೂರು ಎನ್ನುವ ಗ್ರಾಮದವರು. ಪೋಡೂರು ಗ್ರಾಮವನ್ನು ಪೂದೂರು, ಊಡೂರು ಎಂದೂ ಕರೆಯಲಾಗುತ್ತಿತ್ತು. ಅಪ್ರತಿಮ ಶಿವಭಕ್ತರಾಗಿದ್ದ ಕಿನ್ನರಿ ಬ್ರಹ್ಮಯ್ಯನವರು ವೃತಿಯಿಂದ ಅಕ್ಕಸಾಲಿಗರು. ವಂಶಪಾರಂಪರ್ಯವಾಗಿದ್ದ ಅಕ್ಕಸಾಲಿಗ ವೃತ್ತಿಯೊಂದಿಗೆ ಕಿನ್ನರಿ ನುಡಿಸುವ ಹವ್ಯಾಸ ಇಟ್ಟುಕೊಂಡಿದ್ದರೆಂದು ತಿಳಿದು ಬರುತ್ತದೆ. ಹಾಗಾಗಿಯೇ ಅವರನ್ನು ಕಿನ್ನರಿ ಬ್ರಹ್ಮಯ್ಯನವರೆಂದು ಶರಣ ಸಮೂಹದಲ್ಲಿ ಗುರುತಿಸಲಾಗುತ್ತಿತ್ತು ಎಂದು ತಿಳಿದು ಬರುತ್ತದೆ. ಅಕ್ಕ ಸಾಲಿಗ ವೃತ್ತಿಯ ಮನೆತನದಿಂದ ಬಂದಂತಹ ಇವರು ಹುಟ್ಟುತ್ತಲೇ ಶಿವಭಕ್ತರಾಗಿದ್ದು, ಉತ್ತಮ ಸಂಸ್ಕಾರವನ್ನು ಪಡೆದಿದ್ದರು. ಗುರುಗಳಿಂದ ಜ್ಞಾನ, ಗಾಯನ, ವಾದ್ಯ ನುಡಿಸುವಿಕೆ ಹೀಗೆ ಸಕಲ ವಿದ್ಯಾ ಪಾರಂಗತರಾದರು. ಕಾಯಕವನ್ನು ಮಾಡುತ್ತಾ ಬಂದ ಹಣದಿಂದ ದಾನ-ಧರ್ಮ-ದಾಸೋಹದಲ್ಲಿ ತೊಡಗಿಸಿಕೊಂಡಿದ್ದರು ಇದನ್ನೇ ಜನಪದರು ಹೀಗೆ ಹೇಳಿದ್ದಾರೆ

ಊಡೂರು ಹಳ್ಯಾಗ ಹೂಡಿದನು ದಾಸೋಹ
ಮಾಡಿ ಜಂಗಮಕೆ ದಾಸೋಹ ಸಿರಿವಂತ
ನೀಡಿ ಶಿವಭಕ್ತಿ ಶಿವಮತಕೆ

ಸಿರಿವಂತರಾಗಿದ ಬೊಮ್ಮಯ್ಯನವರು ಗುಣವಂತರೂ ಆಗಿದ್ದರು. ಸಕಲ ಜೀವರಾಶಿಗಳಿಗೆ ಲೇಸ ಬಯಸುವ ವ್ಯಕ್ತಿತ್ವ ಇವರದಾಗಿತ್ತು. ಯಾರಾದರೂ ಜಂಗಮರು ಭಿಕ್ಷೆ ಕೇಳಿದಾಗ ಆಭರಣದಲ್ಲಿನ ಬಂಗಾರವನ್ನೇ ಒಂದಿಷ್ಟು ತೆಗೆದು ಕೊಡುತ್ತಿದ್ದ ನಿಜ ಶರಣರಾಗಿದ್ದರು. ಹೀಗಿರುವಾಗ ತಮ್ಮ ಗುರುಗಳಿಗೆ ಆಭರಣ ಮಾಡಿಕೊಡುವ ಪ್ರಸಂಗ ಬಂದಾಗ ಅತ್ಯಂತ ಸಂತೋಷದಿಂದ ತಯಾರಿಸಿ ಕೊಡುತ್ತಾರೆ. ಗುರುಗಳಿಗೂ ಆಭರಣಗಳು ತುಂಬಾ ಇಷ್ಟ ಆಗುತ್ತವೆ. ಆದರೆ ಗುರುಗಳ ಮನೆಯ ಆಳು “ಅಕ್ಕ ಸಾಲಿಗ ಅಕ್ಕನ ಬಂಗಾರವನ್ನೇ ಬಿಡುವುದಿಲ್ಲ” ವೆಂಬ ಗಾದೆಯೇ ಇದೆ. ನೀವು ಪರೀಕ್ಷೆ ಮಾಡಿ ಆಭರಣವನ್ನು ತೆಗೆದುಕೊಳ್ಳಿ ಎಂದಾಗ ಗುರುಗಳು ಶಿಷ್ಯನ ಮೇಲೆ ತಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳುತ್ತಾರೆ. ಆಗ ಬೊಮ್ಮಯ್ಯನವರು ತಾವೇ ಪರೀಕ್ಷೆಗೆ ಮುಂದಾಗುತ್ತಾರೆ. ಪರೀಕ್ಷೆಯಲ್ಲಿ ಸಾಸುವೆ ಕಾಳಿನಷ್ಟು ಬಂಗಾರ ಕಡಿಮೆ ಇರುತ್ತದೆ. ತಮ್ಮಿಂದ ಇಂಥ ದೊಡ್ಡ ತಪ್ಪು ಆಯ್ತಲ್ಲ ಎಂದು ಚಿಂತೆಗೀಡಾದ ಬೊಮ್ಮಯ್ಯನವರು ಅಕ್ಕ ಸಾಲಿಗ ವೃತ್ತಿಯನ್ನೇ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಾರೆ. ಇನ್ನು ಮುಂದೆ ಕೇವಲ ಕಿನ್ನರಿ ಬಾರಿಸುತ್ತಾ ಹಾಡನ್ನು ಹಾಡಿ ಬಂದ ಹಣದಿಂದ ದಾಸೋಹ ಮಾಡಬೇಕೆಂದು ನಿರ್ಧರಿಸುತ್ತಾರೆ.

ಹೀಗಿರುವಾಗಲೇ ಕಲ್ಯಾಣದಲ್ಲಿ ಬಸವಣ್ಣನವರ ಕಾಯಕ-ದಾಸೋಹದ ಪ್ರಸಿದ್ಧಿಯ ಕುರಿತು ವಿಚಾರ ತಿಳಿದ ಬೊಮ್ಮಣ್ಣನವರು ಕಲ್ಯಾಣಕ್ಕೆ ಬರುತ್ತಾರೆ. ಕಲ್ಯಾಣದಲ್ಲಿನ ತ್ರಿಪುರಾಂತಕೇಶ್ವರ ಗುಡಿಯೊಳಗೆ ನೆಲೆ ನಿಲ್ಲುತ್ತಾರೆ. “ಮಹಾಲಿಂಗ ತ್ರಿಪುರಾಂತಕ” ಅವರ ವಚನಾಂಕಿತ. ಇದೇ ಗುಡಿಯಲ್ಲಿದ್ದು ಕಿನ್ನರಿ ನುಡಿಸುತ್ತಾ ತತ್ವ ಪದಗಳನ್ನು, ಆಧ್ಯಾತ್ಮಿಕ ಚಿಂತನೆಗಳನ್ನು ಜನರಿಗೆ ತಿಳಿಸುವ ಕಾಯಕದಲ್ಲಿ ತೊಡಗುತ್ತಾರೆ. ಮುಂದೆ ಅನುಭವ ಮಂಟಪಕ್ಕೆ ಹೋಗಿ ತತ್ವಜ್ಞಾನವನ್ನು ಎಲ್ಲರಿಗೂ ಉಣಬಡಿಸುತ್ತಾರೆ. ಶರಣರೊಂದಿಗೆ ಆದ್ಯಾತ್ಮಿಕ ಚರ್ಚೆ, ತತ್ವಜ್ಞಾನದ ಚಿಂತನೆ ಮಾಡುತ್ತಾ ಜನರಿಗೆ ಕಿನ್ನರಿಯ ಮೂಲಕವೇ ಪ್ರಚಾರ ಮಾಡಿದ್ದರಿಂದಲೇ “ಕಿನ್ನರಿ ಬೊಮ್ಮಯ್ಯ” ನೆಂದು ಪ್ರಸಿದ್ಧರಾದರು. ಕಿನ್ನರಿ ಒಂದು ಜನಪದ ಸಂಗೀತ ಸಾಧನವಾಗಿದ್ದು ಆಧ್ಯಾತ್ಮಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಸಾಧನವಾಗಿತ್ತು ಬೊಮ್ಮಯ್ಯನವರು ಇದೇ ಕಿನ್ನರಿಯ ಮೂಲಕ ಜನರಿಗೆ ವಚನ ಸಾಹಿತ್ಯ, ತತ್ವಗಳನ್ನು ತಲುಪಿಸಿ ಶ್ರೇಷ್ಠ ಶರಣರೆನಿಸಿದರು. ಸದ್ಯ ಇವರ 18 ವಚನಗಳು ದೊರೆತಿವೆ. ಹೀಗೆ ಕಿನ್ನರಿಯ ಮೂಲಕ ಜ್ಞಾನ ಹಂಚುವ ಕಾಯಕಕ್ಕೆ ಬಸವಣ್ಣನವರೇ ಕೈ ಮುಗಿಯುತ್ತಿದ್ದರೆನ್ನುವುದನ್ನು ಜನಪದರು ಹೀಗೆ ಹೇಳಿದ್ದಾರೆ:

ಬೊಮ್ಮನಿಗೆ ಬಸವಯ್ಯ ಒಮ್ಮನದಿ ನಮಿಸಿದನು
ಸಮ್ಮತಿಯ ಇತ್ತು | ಶಿವಗಣವು |
ಶಿವತತ್ವ ಬೊಮ್ಮ ತಿಳಿಸಿದನು ಶರಣರಿಗೆ.

ಕಿನ್ನರಿಯ ಮೂಲಕವೇ ಶರಣರಿಗೆ, ಜನರಿಗೆ ಚಿಂತನೆಗಳನ್ನು ಉಣಬಡಿಸಿ ಶರಣರಲ್ಲಿ ಮಹಾಶರಣರಾಗಿ ಬೆಳೆದರು. ಅವರ ಒಂದು ವಚನ ಆಧ್ಯಾತ್ಮಿಕ ಹಿನ್ನೆಲೆಯನ್ನು ತಿಳಿಸುತ್ತದೆ:

ನಿನ್ನ ಹರೆಯದ ರೂಹಿನ ಚೆಲುವಿನ,
ನುಡಿಯ ಜಾಣಿನ,
ಸಿರಿಯ ಸಂತೋಷದ,
ಕರಿ ತುರಗ ರಥ ಪದಾತಿಯ ನೆರವಿಯ,
ಸತಿ ಸುತರ ಬಂಧುಗಳ ಸಮೂಹದ,
ನಿನ್ನ ಕುಲದಭಿಮಾನದ
ಗರ್ವವ ಬಿಡು, ಮರುಳಾಗದಿರು.
ಅಕಟಕಟಾ ರೋಮಜನಿಂದ ಹಿರಿಯನೆ?
ಮದನನಿಂ ಚೆಲುವನೆ?
ಸುರಪತಿಯಿಂದ ಸಂಪನ್ನನೆ?
ವಾಮದೇವ ವಶಿಷ್ಟರಿಂದ ಕುಲಜನೆ?
ಅಂತಕನ ದೂತರು ಬಂದು
ಕೈವಿಡಿದೆಳದೊಯ್ಯುವಾಗ
ನುಡಿ ತಡವಿಲ್ಲ ಕೇಳೋ ನರನೆ!
ಎನ್ನ ಮಾಹಾಲಿಂಗ ತ್ರಿಪುರಾಂತಕದೇವರ
ಪೂಜಿಸಿಯಾದರೆ
ಕೇಡಿಲ್ಲದ ಪದ ದೊರಕೊಂಬುದು ಮರುಳೆ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-29/ವಚನ ಸಂಖ್ಯೆ-60)

ಮೇಲಿನ ವಚನದಲ್ಲಿ “ನಿನ್ನ ಹರೆಯದ ರೂಹಿನ ಚೆಲುವಿನ ನುಡಿಯ ಜಾಣಿನ” ಎಂಬ ಸಾಲಿನಲ್ಲಿ ಹರೆಯ, ಚೆಲುವು, ಸಿರಿಸಂಪತ್ತು, ಸೈನ್ಯ, ಕುಲ ಇವುಗಳ ಬಗ್ಗೆ ಗರ್ವ ಪಡಬಾರದು ಇರುವಷ್ಟು ದಿನ ಆಧ್ಯಾತ್ಮಿಕ ಚಿಂತನೆ ಮಾಡಬೇಕೆಂದು ಹೇಳಿದ್ದಾರೆ. ಅನುಭವ ಮಂಟಪದ ಚರ್ಚೆಯ ಸಂದರ್ಭದಲ್ಲಿ ಬಸವಣ್ಣನವರು ಈರುಳ್ಳಿ ತಾಮಸ ಗುಣವನ್ನು ಹೆಚ್ಚಿಸುವುದರಿಂದ ಅದನ್ನು ಬಳಸದಿರುವುದು ಉತ್ತಮ ಎಂದಾಗ ಕುಪಿತರಾದ ಬೊಮ್ಮಯ್ಯನವರು ಗುಡಿಯನ್ನು ಸೇರಿದರು. ಏಕೆಂದರೆ ಜನ ಸಾಮಾನ್ಯರೆಲ್ಲ ಈರುಳ್ಳಿಯನ್ನು ನಿತ್ಯ ಸೇವೆನೆ ಮಾಡುತ್ತಿದ್ದರು ಅವರು ತಾಮಸ ಗುಣದಿಂದ ಪೀಡಿತರಾಗಿಲ್ಲ ಎನ್ನುವುದು ಬೊಮ್ಮಯ್ಯನವರ ಅಭಿಪ್ರಾಯವಾಗಿತ್ತು. ಬಸವಣ್ಣನವರಿಗೆ ಪೂರ್ವಾಶ್ರಯದಿಂದ ಹೇಳಿದ ಮಾತು ತಪ್ಪೆಂದು ಅರಿವಾಗಿ ಬೊಮ್ಮಯ್ಯನವರಿಗೆ ಕ್ಷಮೆ ಕೇಳಿದರಲ್ಲದೇ ಒಂದು ಬಂಡಿ ಈರುಳ್ಳಿಯನ್ನು ಕೊಟ್ಟು ಮೆರವಣಿಗೆ ಮಾಡಿದರು. ಹೀಗಾಗಿ ತಮ್ಮ ಚಿಂತನಾಪರ ವಿಚಾರ ಧಾರೆಗಳಿಂದಲೇ ಬಸವಣ್ಣನವರಿಗೆ ಹಿರಿಯಣ್ಣನಂತಿದ್ದರು. ಅದನ್ನೇ ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ-

ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿಯಿರಿ, ಕೂಡಲಸಂಗಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-91/ವಚನ ಸಂಖ್ಯೆ-349)

ಒಂದು ದಿನ ತ್ರಿಪುರಾಂತಕೇಶ್ವರ ಗುಡಿಯೊಳಗೆ ಕೂತಿರುವಾಗ ಕುರಿಯೊಂದು ಓಡಿ ಬಂದು ರಕ್ಷಣೆಯನ್ನು ಬಯಸುತ್ತದೆ. ಆಗ ಬೊಮ್ಮಯ್ಯನವರಿಗೆ ಇದು ಆ ಊರಿನ ವೇಶ್ಯೆಯೊಬ್ಬಳು ತಾನು ಆರಾಧಿಸುವ ದೇವಿಗೆ ಬಲಿ ಕೊಡಲು ವಟುವಿಗೆ ಕೊಟ್ಟು ಕಳಿಸುತ್ತಿರುವಾಗ ತಪ್ಪಿಸಿಕೊಂಡು ಬಂದ ಕುರಿ ಎಂದು ತಿಳಿದು ಬರುತ್ತದೆ. ಬಲಿ ಕೊಡಬಾರದೆಂದು, ದಯೆ ತೋರಿಸಲು ಆ ವಟುವಿಗೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಾರೆ. ಎರಡು ಪಟ್ಟು ಹಣ ಕೊಡುತ್ತೇನೆ ಎಂದಾಗ ಆ ವಟು “ನಿನ್ನ ಹತ್ತಿರ ಕಿನ್ನರಿ ಬಿಟ್ಟರೆ ಏನಿದೆ?” ಎಂದು ಅಪಹಾಸ್ಯ ಮಾಡುತ್ತಾನೆ. ಆಗ ಬೊಮ್ಮಯ್ಯನವರು ಕಿನ್ನರಿ ಬಾರಿಸಿ ಹಾಡಿದಾಗ ಜನರೆಲ್ಲ ಬಂದು ಸೇರಿದರಲ್ಲದೇ ಚಿನ್ನವನ್ನೇ ಸುರಿಯುತ್ತಾರೆ. ಒಂದು ಸಾವಿರ ವರಾಹವನ್ನು ಎಣಿಸಿ ಕೊಟ್ಟಾಗ ವೇಶ್ಯೆಯ ಹತ್ತಿರ ಈ ಸಂಗತಿಯನ್ನು ವಟು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಆದರೆ ವೇಶ್ಯೆ ಇದರಿಂದ ಕುಪಿತಗೊಂಡು ದೇವಿಗೆ ಅರ್ಪಿಸುವ ಕುರಿಯನ್ನು ಬಿಟ್ಟು ಬೇರೆ ಬಲಿ ಕೊಡಬಾರದು, ಅದೇ ಕುರಿಯನ್ನು ವಾಪಾಸು ತರಲು ಹೇಳಿದಾಗ ವಟು ಬೊಮ್ಮಯ್ಯನವರಿಗೆ ವಾಪಾಸು ಕುರಿಯನ್ನು ಕೊಡಲು ಕೇಳುತ್ತಾನೆ. ಒಮ್ಮೆ ಖರೀದಿಸಿದ ಕುರಿಯನ್ನು ಕೊಡಲು ಒಪ್ಪಿದಿದ್ದಾಗ ಇಬ್ಬರ ಜಗಳ ತಾರಕಕ್ಕೇರಿ ಸಿಟ್ಟಿಗೆದ್ದ ಬೊಮ್ಮಯ್ಯ ವೀರಭದ್ರರಾಗುತ್ತಾರೆ. ವಿಪ್ರನ ತಲೆಯನ್ನೇ ಕತ್ತರಿಸುತ್ತಾರೆ. ಈ ವಿಷಯ ಬಿಜ್ಜಳ, ಬಸವಣ್ಣ ಎಲ್ಲರಿಗೂ ತಲುಪುತ್ತದೆ. ಕೊನೆಗೆ ಈ ಗುಡಿಯಲ್ಲಿ ನಮ್ಮಿಬ್ಬರ ಹೊರತಾಗಿ ತ್ರಿಪುರಾಂತಕೇಶ್ವರ ಮಾತ್ರನಿದ್ದು ದೇವರೇ ಸಾಕ್ಷಿ ಎಂದು ಹೇಳಿದಾಗ ದೇವರೇ ಸಾಕ್ಷಿ ಹೇಳಿದ ಎಂಬ ಪ್ರತೀತಿಯೂ ಇದೆ. ಶರಣರು ಸಾಮಾನ್ಯರಲ್ಲ ಎಂಬುದು ಈ ಘಟನೆಯಿಂದ ಎಲ್ಲರಿಗೂ ಮನವರಿಕೆಯಾಗುತ್ತದೆ.

ವೈರಾಗ್ಯ ನಿಧಿ ಅಕ್ಕಮಹಾದೇವಿಯವರು ಕಲ್ಯಾಣಕ್ಕೆ ಬಂದಾಗ ಅವರ ವೈರಾಗ್ಯವನ್ನು ಪರೀಕ್ಷಿಸುವ ನೆಪದಲ್ಲಿ ಅನುಚಿತ ವರ್ತನೆ ಮಾಡುತ್ತಾರೆ ಅನ್ನುವ ವಿಷಯ ಶೂನ್ಯ ಸಂಪಾದನೆಗಳಲ್ಲಿ ಮತ್ತು ಬಸವ ಪುರಾಣಗಳಲ್ಲಿ ಬರುತ್ತದೆ. ಆದರೆ ಕಿನ್ನರಿ ಬ್ರಹ್ಮಯ್ಯನವರ ಸದ್ಗುಣ ಸಂಪನ್ನ ವ್ಯಕ್ತಿತ್ವವನ್ನು ತೂಗಿ ನೋಡಿದಾಗ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ. ಹೀಗೆ ಅಕ್ಕಮಹಾದೇವಿಯವರನನು ಪರೀಕ್ಷೆಯನ್ನು ಮಾಡುವ ಸಂದರ್ಭದಲ್ಲಿ ಬಂದಂಥ ಒಂದು ವಚನ:

ಕಾಯದಲ್ಲಿ ಕಳವಳವಿರಲು,
ಪ್ರಾಣದಲ್ಲಿ ಮಾಯೆಯಿರಲು,
ಏತರ ಗಮನ ಏತರ ನಿರ್ವಾಣ.
ಮಹಾಲಿಂಗ ತ್ರಿಪುರಾಂತಕ
ನಿನ್ನ ಸಂಹಾರಿ ಎಂಬನಲ್ಲದೆ
ಸಜ್ಜನೆಯೆಂದು ಕೈವಿಡಿವನಲ್ಲ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-27/ವಚನ ಸಂಖ್ಯೆ-55)

ಎಂದು ಹೇಳಿ ಅವರ ದೇಹವನ್ನು ಮುಟ್ಟಲು ರೋಮಾಂಚನವಾಗಿ ತಮಗಾದ ಅನುಭವವನ್ನು ಈ ವಚನದಲ್ಲಿ ನಿರೂಪಣೆ ಮಾಡುತ್ತಾ ಮುಂದೆ “ತ್ರಿಪುರಾಂತಕದೇವಾ ಮಹಾದೇವಿಯಕ್ಕನ ನಿಲುವನ್ನರಿಯದೇ ಅಳುಪಿ ಕೆಟ್ಟೆನು” ಎಂದು ಪಶ್ಚಾತ್ತಾಪ ಪಡುತ್ತಾರೆ.

ಮಸ್ತಕವ ಮುಟ್ಟಿ ನೋಡಿದಡೆ,
ಮನೋಹರದಳಿವು ಕಾಣಬಂದಿತ್ತು!
ಮುಖಮಂಡಲವ ಮುಟ್ಟಿ ನೋಡಿದಡೆ,
ಮೂರ್ತಿಯ ಅಳಿವು ಕಾಣಬಂದಿತ್ತು!
ಕೊರಳ ಮುಟ್ಟಿ ನೋಡಿದಡೆ,
ಗರಳಧರನ ಇರವು ಕಾಣಬಂದಿತ್ತು!
ತೋಳುಗಳ ಮುಟ್ಟಿ ನೋಡಿದಡೆ,
ಶಿವನ ಘನವು ಕಾಣಬಂದಿತ್ತು!
ಉರಸ್ಥಲ ಮುಟ್ಟಿ ನೋಡಿದಡೆ,
ಪರಸ್ಥಲದಂಗಲೇಪ ಕಾಣಬಂದಿತ್ತು.
ಬಸಿರ ಮುಟ್ಟಿ ನೋಡಿದಡೆ,
ಬ್ರಹ್ಮಾಂಡವ ಕಾಣಬಂದಿತ್ತು!
ಗುಹ್ಯವ ಮುಟ್ಟಿ ನೋಡಿದಡೆ,
ಕಾಮದಹನ ಕಾಣಬಂದಿತ್ತು.
ಮಾಹಾಲಿಂಗ ತ್ರಿಪುರಾಂತಕದೇವಾ,
ಮಹಾದೇವಿಯಕ್ಕನ ನಿಲುವನರಿಯದೆ
ಅಳುಪಿ ಕೆಟ್ಟೆನು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-32/ವಚನ ಸಂಖ್ಯೆ-63)

ಆದರೆ ಈ ವಚನದ ವಿಸ್ತಾರವನ್ನು ನೋಡಿದರೆ ಕಿನ್ನರಿ ಬ್ರಹ್ಮಯ್ಯನವರು ಅಕ್ಕಮಹಾದೇವಿಯವರ ವೈರಾಗ್ಯವನ್ನು ಪರೀಕ್ಷಿಸಲು ಹಾಗೆ ಹೇಳಿದ್ದಾರೆ ಎನ್ನಬಹುದು. “ಮಸ್ತಕವ ಮುಟ್ಟಿ ನೋಡಿದಡೆ, ಮನೋಹರದಳಿವು ಕಾಣ ಬಂದಿತ್ತು” ಎಂದು ಹೇಳುತ್ತಾ ಕೊನೆಗೆ ಅಳುಪಿ ಕೆಟ್ಟೆನು ಎಂದು ಹೇಳಿ ಪರಸ್ತ್ರೀಯಲ್ಲಿ ಶಿವನ ರೂಪ ಕಂಡಂತಹ ಅಪರೂಪದ ಶರಣರಾಗಿದ್ದಾರೆ. ಇದನ್ನು ಅರಿತ ಅಕ್ಕ ಮಹಾದೇವಿ “ಲೋಕದ ಮಾತು ನಮಗೇಕಣ್ಣಾ” ಎನ್ನುವ ಸಹೋದರತ್ವ ಭಾವನೆಯ ಮೂಲಕ ಕಿನ್ನರಿ ಬ್ರಹ್ಮಯ್ಯನವರ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಈ ಕೆಳಗಿನ ವಚನದಲ್ಲಿ:

ನಮಗೆ ನಮ್ಮ ಲಿಂಗದ ಚಿಂತೆ,
ನಮಗೆ ನಮ್ಮ ಭಕ್ತರ ಚಿಂತೆ,
ನಮಗೆ ನಮ್ಮ ಆದ್ಯರ ಚಿಂತೆ,
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ
ಲೋಕದ ಮಾತು ನಮಗೇಕಣ್ಣಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-85/ವಚನ ಸಂಖ್ಯೆ-244)

ಕೊನೆಗೆ ಅವರಿಗೆ ಕೈ ಮುಗಿದು – “ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ” ಎನ್ನುತ್ತಾ ನಾನು “ಹುಲಿನೆಕ್ಕಿ ಬದುಕಿದೆನು ಶರಣಾರ್ಥಿ ಶರಣಾರ್ಥಿ ತಾಯೆʼ ಎಂದಿದ್ದಾರೆ.

ಶರಣು ಶರಣಾರ್ಥಿ ಎಲೆ ನಮ್ಮವ್ವ,
ಶರಣು ಶರಣಾರ್ಥಿ ಶರಣಾರ್ಥಿ
ಕರುಣ ಸಾಗರ ನಿಧಿಯೆ,
ದಯಾಮೂರ್ತಿ ತಾಯೆ, ಶರಣಾರ್ಥಿ!
ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,
ನೀವು ಬಿಡಿಸಿದರಾಗಿ ನಿಮ್ಮ ದಯದಿಂದ
ನಾನು ಹುಲಿನೆಕ್ಕಿ ಬದುಕಿದೆನು
ಶರಣಾರ್ಥಿ ಶರಣಾರ್ಥಿ ತಾಯೆ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-63/ವಚನ ಸಂಖ್ಯೆ-65)

ಮುಂದೆ ವಚನ ಚಳುವಳಿಯಲ್ಲಿ ವಚನಗಳ ರಕ್ಷಣೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸಿ ಉಳವಿಯ ಸಮೀಪದಲ್ಲಿ ನದಿಯ ಪಥವನ್ನು ಬದಲಾಯಿಸುತ್ತಾರೆ. ಇದರಿಂದ ಶತ್ರು ಸೇನೆ ಅಪಾರ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ನಂತರ ಉಳವಿಯಲ್ಲಿಯೇ ಶರಣ ಕಿನ್ನರಿ ಬೊಮ್ಮಯ್ಯನವರು ಕೊನೆಯುಸಿರೆಳೆಯುತ್ತಾರೆ. ಇವರ ಸಮಾಧಿ ಈಗಲೂ ಉಳವಿಯಲ್ಲಿದೆ. ಅವರು ತಿರುಗಿಸಿದ ಹೊಳೆ “ಕಿನ್ನರಿ ಬೊಮ್ಮಯ್ಯನ ಹೊಳೆʼ ಎಂದೇ ಹೆಸರಾಗಿದೆ. ಇವರು ಲಿಂಗೈಕ್ಯರಾದ ಸುದ್ದಿಯನ್ನು ಕೇಳಿದ ಬಸವಣ್ಣನವರು ತಮ್ಮ ದುಃಖವನ್ನು ವಚನದಲ್ಲಿ ಹೀಗೆ ತೋಡಿಕೊಂಡಿದ್ದಾರೆ:

ಅಯ್ಯಾ, ಎನ್ನ ಕೈಯ ದರ್ಪಣ [ಸಂದಿತ್ತು],
ಆಸ್ಥಾನದ ಜ್ಯೋತಿ ನಂದಿತ್ತು,
ಸರಸ್ವತಿಯ ಭಂಡಾರ ಸೂರೆಹೋಯಿತ್ತು,
ನಮ್ಮಯ್ಯ ಕಿನ್ನರಿಬೊಮ್ಮಣ್ಣ ಹೋದನು.
ತಾರಾಮಂಡಲದಲ್ಲಿ ಕೇಳಿಸುವ ತಂದೆ ಹೋದನು,
ನಾನೆಲ್ಲಿ ಅರಸುವೆನು?
ಕೂಡಲಸಂಗಮದೇವಯ್ಯ
ತನ್ನಾಳು ಕಿನ್ನರಿಬೊಮ್ಮಣ್ಣನನೊಯ್ದಡೆ ನಾನೆಲ್ಲಿ ಅರಸುವೆನು?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-285/ವಚನ ಸಂಖ್ಯೆ-985)

ಎಂದು ನಾನೆಲ್ಲಿ ಅರಸುವೆನು ಎನ್ನುತ್ತಾರೆ. ಇಂತಹ ಕಿನ್ನರಿ ಬೊಮ್ಮಯ್ಯನವರನ್ನು ನಾವು ಸದಾ ಸ್ಮರಿಸುತ್ತಾ ಅವರ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಇವರ ಜಯಂತಿಗೊಂದು ಅರ್ಥ ಬರಲು ಸಾಧ್ಯ ಎನ್ನುವುದನ್ನು ಜನಪದರು ಹೀಗೆ ಹೇಳಿದ್ದಾರೆ.

ಶರಣು ಶರಣೆಂಬುವೆವು ಹರಣ ಹಾರುವ ತನಕ
ಕರುಣಿಸಿರಿ | ಶರಣ ಬೊಮ್ಮಯ್ಯನಿಗೆ |
ಹರಸಿ ಉಳಿಸೆನ್ನು ನಮ್ಮನ್ನು.

ಡಾ. ಶಿವಗಂಗಾ ರಂಜಣಗಿ,
ಸಹ ಶಿಕ್ಷಕಿಯರು,
ಸರ್ಕಾರಿ ಪ್ರೌಢಶಾಲೆ,
ಕಡಿವಾಲ ಇನಾಂ, ವಾಣಿಪೇಟೆ,
ಹುನಗುಂದ – 587 118
ಮೋಬೈಲ್‌ ಸಂಖ್ಯೆ: 98867 86061

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply