ಅನುಪಮ ಅಹಿಂಸಾವಾದಿ ಶರಣ ಬಳ್ಳೇಶ ಮಲ್ಲಯ್ಯನವರು

ಆವ ಪ್ರಾಣಿಗೆಯೂ ನೋವ ಮಾಡಬೇಡ.
ಪರನಾರಿಯರ ಸಂಗ ಬೇಡ.
ಪರಧನಕ್ಕಳುಪಬೇಡ, ಪರದೈವಕ್ಕೆರಗಬೇಡ.
ಈ ಚತುರ್ವಿಧ ತವಕವ ಮಾಡುವಾಗ
ಪರರು ಕಂಡಾರು, ಕಾಣರು ಎಂದೆನಬೇಡ.
ಬಳ್ಳೇಶ್ವರಲಿಂಗಕ್ಕಾರು ಮರೆಮಾಡಬಾರದಾಗಿ
ಅಘೋರನರಕದಲ್ಲಿಕ್ಕುವ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1376 / ವಚನ ಸಂಖ್ಯೆ-193)

ವಚನ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು ಅಥವಾ ಗೀಳನ್ನು ಹಚ್ಚಿದ್ದು ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರು. ಇವತ್ತು ಅವರ ಪಾದ ಕಮಲಗಳನ್ನು ಮನಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ ಇಂದಿನ ವಿಷಯದ ಕಡೆಗೆ ಗಮನ ಹರಿಸೋಣ.

12 ನೇ ಶತಮಾನ, ವಚನ ಸಾಹಿತ್ಯ ಮತ್ತು ಬಸವಾದಿ ಶರಣರು ಅಂದ ಕೂಡಲೇ ನನಗೆ ಮತ್ತೆ ಮತ್ತೆ ನೆನಪಾಗೋದು ಗಿರೀಶ ಕಾರ್ನಾಡ್‌ ಅವರ ಒಂದು ಮಾತು. ತುಂಬಾ ಜನಜನಿತವಾದ ಮಾತು. ಬಹಳ ಜನ ಹೇಳತಾರೆ. ನಾನಂತೂ ಅದನ್ನು ಮತ್ತೆ ಮತ್ತೆ ಹೇಳತೇನೆ. ಯಾಕಂದರೆ ಆ ಮಾತಿಗೆ ಸಾರ್ವಕಾಲಿಕ ಪ್ರಸ್ತುತತೆ ಇದೆ ಅನ್ನುವ ಅರ್ಥದಲ್ಲಿ. ಅವರು ತಮ್ಮ ತಲೆದಂಡ ನಾಟಕದ ಲೇಖಕನ ನುಡಿಯಲ್ಲಿ ಹೇಳತಾರೆ.

“ನೋಯುವ ಹಲ್ಲಿಗೆ ನಾಲಗೆ ಮತ್ತೆ ಮತ್ತೆ ಹೊರಳುವಂತೆ ಪ್ರತಿಯೊಬ್ಬ ಕನ್ನಡಿಗ ಮತ್ತೆ ಮತ್ತೆ 12 ನೇ ಶತಮಾನದ ಬೆರಗುಗೊಳಿಸುವ ಪ್ರತಿಭೆಗೆ, ಆ ಉತ್ಸಾಹಕ್ಕೆ, ಮೌಲಿಕ ಪ್ರಶ್ನೆಗಳನ್ನು ಕೇಳುವ ಎದೆಗಾರಿಕೆಗೆ, ಗೆಲುವಿಗೆ, ನೋವಿಗೆ ಮರಳುವದು ಮತ್ತು ಅದನ್ನು ಹೊಸ ಸಂದರ್ಭದಲ್ಲಿ ಅರ್ಥೈಸಲು ಯತ್ನಿಸುವುದು ಅನಿವಾರ್ಯ”.

ಯಾವಾಗ್ಯಾವಾಗ ನಮ್ಮ ಮನಸ್ಸಿಗೆ ನೋವಾಗತದೆಯೋ, ಇಲ್ಲಿ ಹಲ್ಲನ್ನು ಪ್ರಾತಿನಿಧಿಕವಾಗಿ ಹೇಳತಾರೆ ಒಂದು ರೂಪಕದ ಅರ್ಥದಲ್ಲಿ. ಈ ಹಲ್ಲು ನೋವಾಗತಿದ್ದಂಗೆ ನಮಗೆ ಗೊತ್ತಿಲ್ಲದಂಗೆ ಅಪ್ರಜ್ಞಾಪೂರ್ವಕವಾಗಿ ನಮ್ಮ ನಾಲಿಗೆ ಹಲ್ಲಿನ ಹತ್ತಿರ ಹೋಗಿ ಅಪ್ಪ ನಾನಿದ್ದೀನಿ ನಿನ್ನ ಜೊತೆಗೆ ನಾನು ನಿನ್ನ ನೋವನ್ನು ಮಾಯಿಸತೇನೆ ಅಂತ ಹೇಳಿ ಅದರ ಹತ್ತಿರ ಹೋಗಿ ಒಂದಿಷ್ಟು ಸಾಂತ್ವನ ಹೇಳತದಲ್ಲಾ ಹಾಗೆ ವಚನ ಸಾಹಿತ್ಯ, ವಚನ ಕ್ರಾಂತಿ ಅನ್ನೋದು, ಶರಣರ ಮಾತುಗಳೆಲ್ಲವೂ ಯಾವ ಸಂದರ್ಭದಲ್ಲಿ ನಮ್ಮ ಮನಸ್ಸುಗಳಿಗೆ, ನಮ್ಮ ಸಮಾಜಕ್ಕೆ ನೋವಾಗತದೆ ಅಂಥ ಸಂದರ್ಭದಲ್ಲಿ ಆ ವಚನಗಳು ಒಂದು ರೀತಿಯ ಮುಲಾಮಿನ ರೀತಿಯಲ್ಲಿ ಕೆಲಸ ಮಾಡತಾವೆ. ಮಾರ್ಗ ತೋರಿಸತಾವೆ. ಮಾಯಿಸಲಿಕ್ಕೆ ಅಷ್ಟೇ ಅಲ್ಲಾ ಮುಂದಿನ ಮುಂಗಾಣಿಕೆಯನ್ನೂ ಕೊಡಲಿಕ್ಕೆ ಅನ್ನೋ ಅರ್ಥದಲ್ಲಿ ಈ ಮಾತನ್ನು ಗಮನಿಸಬೇಕು.

12 ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಕ್ರಾಂತಿ ಇದೆಯಲ್ಲಾ ಅದಕ್ಕೆ ಸಾರ್ವಕಾಲಿಕ ಮಹತ್ವ ಇದೆ ಅನ್ನೋದನ್ನ ಈ ಹಿನ್ನೆಲೆಯಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು. ಇಷ್ಟು ಅನಿವಾರ್ಯತೆ ಇದೆಯಲ್ಲಾ ಬಸವಣ್ಣನ ವಚನಗಳಲ್ಲಿ ಅಥವಾ ಬಸವಣ್ಣನವರ ಜೊತೆಗಿದ್ದಂಥಾ ಇತರ ವಚನಕಾರರ ಎಲ್ಲ ವಚನಗಳಿಗೂ ಸಾರ್ವಕಾಲಿಕ ಮಹತ್ವ ಇರೋದೇ ಆ ಹಿನ್ನೆಲೆಯಲ್ಲಿ. ನಮಗೆ ನೋವಾದಾಗ ಅಂಥಾ ವಚನಗಳು ನಮಗೆ ಆ ನೋವನ್ನು ಮಾಯಿಸುವಂಥ ಶಕ್ತಿ ಪಡೆದಿದಾವೆ.

ಶರಣರು ಅಂದು ಹರಿಸಿದ ವಿಚಾರಧಾರೆ ಅಂದಿನ ಸಮಾಜಕ್ಕೆ ಮಾತ್ರ ಸೀಮಿತವಾಗದೇ ಎಂದೆಂದಿಗೂ ಎಲ್ಲರಿಗೂ ಮಾರ್ಗದರ್ಶಕವಾಗುವಷ್ಟು ಅಂದರೆ “Universal Acceptance” ಆಗುವಷ್ಟು ವ್ಯಾಪಕವಾದ ಶಕ್ತಿಯನ್ನು ಪಡೆದಿವೆ. ಏಕೆಂದರೆ ಅವರು ಸಮಾಜೋ-ಧಾರ್ಮಿಕ, ವ್ಯಷ್ಟಿ-ಸಮಷ್ಟಿಗಳ ಅಭ್ಯುದಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಮೂಢ ನಂಬಿಕೆ ಮತ್ತು ಅಂಧ ಶ್ರದ್ಧೆಗಳನ್ನು ತಿರಸ್ಕರಿಸಿ ಬದುಕಿನ ಹೋರಾಟಕ್ಕೆ ಚಿರಂತನವಾದ ಉತ್ತರಗಳನ್ನು ಕಂಡುಕೊಂಡಿದ್ದರು. ಸತ್ಯವೆನಿಸಿದ್ದನ್ನು ಯಾವ ದಯೆ-ದಾಕ್ಷಿಣ್ಯವೂ ಇಲ್ಲದೆ ಪ್ರತಿಪಾದಿಸಿದರು. ಅನೇಕ ಸಂದರ್ಭಗಳಲ್ಲಿ ಕಟ್ಟುನಿಟ್ಟಾದ ಮತ್ತು ನಿಷ್ಠೂರವಾದ ಅವರ ನುಡಿಗಳು ಅಂದಿನ ಅಂಧ ಸಂಪ್ರದಾಯದ ಸಮಾಜವಾದಿಗಳನ್ನು ಕೆರಳಿಸಿದವು. ಬಹಳ ಪ್ರಮುಖವಾಗಿ ಇಡೀ ಮಾನವತೆಯನ್ನೇ ಕುರಿತ ಶರಣರ ವಿಚಾರಧಾರೆಗಳು ಹರಿದವು. ಅವರ ತತ್ವಾದರ್ಶಗಳು ಯಾವ ಜಾತಿ, ಮತ, ಪಂಥ, ಸಂಪ್ರದಾಯಗಳ ಚೌಕಟ್ಟಿನಲ್ಲಿ ಬಂಧಿಸದೆ ಮಾನವತೆಯ ಮೌಲ್ಯಗಳನ್ನು ನಿರೀಕ್ಷಿಸುವ ಸಾಧಕರೆಲ್ಲರಿಗೂ ಮಾರ್ಗದರ್ಶಕವಾದವು. ಅವರ ವಚನಗಳನ್ನು ವ್ಯಕ್ತಿಯ ಸಾಧನೆ-ಬೋಧನೆ, ಸಮಾಜ ರಚನೆ ಮತ್ತು ಧಾರ್ಮಿಕ ಆಚರಣೆ ಈ ವಿಷಯಗಳನ್ನು ಆಧಾರವಿಟ್ಟುಕೊಂಡು ನೋಡಬೇಕಾಗಿದೆ.

ಕನ್ನಡ ಸಾಹಿತ್ಯದ ಲೋಕದಲ್ಲಿ ವಚನ ಸಾಹಿತ್ಯದ ಆಂದೋಲನದಿಂದ ಒಂದು ಸುವರ್ಣ ಯುಗದ ಆರಂಭವಾಯಿತು ಎನ್ನಬಹುದು. ವಚನ ಚಳುವಳಿ ಜನಪರ ಸಾಹಿತ್ಯಕ್ಕೆ ಕನ್ನಡದವರು ಜಗತ್ತಿಗೆ ನೀಡಿದ ಕೊಡುಗೆ. ಹನ್ನೊಂದನೇ ಶತಮಾನದ ಅಂತ್ಯ ಭಾಗದಿಂದ ವಚನಾಂದೋಲನಕ್ಕೆ ಪ್ರೇರಣೆ ಮತ್ತು ಪ್ರಭಾವ ಬೀರಲು ಪ್ರಾರಂಭವಾಯಿತು ಎಂದು ಹೇಳಬಹುದು. ಕೊಂಡಗುಳಿ ಕೇಶಿರಾಜ, ಕೆಂಭಾವಿ ಭೋಗಣ್ಣ, ತೆಲುಗು ಬೊಮ್ಮಣ್ಣ, ಏಕಾಂತದ ರಾಮಿತಂದೆ, ಮಾದಾರ ಚೆನ್ನಯ್ಯ, ಜೇಡರ ದಾಸಿಮಯ್ಯ ಮುಂತಾದವರು ತಮ್ಮ ಅನುಭಾವದಿಂದ ರಚಿಸಿದ ವಚನಗಳು ಬಹಳವಾಗಿ ಸಮಾಜವನ್ನು ಆಕರ್ಷಿಸಿದವು. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಕ್ಷೇತ್ರಗಳನ್ನು ಏಕ ಕಾಲಕ್ಕೆ ವ್ಯಾಪಿಸಿದ ವಚನ ಸಾಹಿತ್ಯ ಅತ್ಯಂತ ಅಲ್ಪ ಸಮಯದಲ್ಲಿಯೇ ಉನ್ನತ ಸ್ಥಾನಕ್ಕೆ ಏರಿದ್ದು ಅಸಾಧಾರಣ, ಅಪ್ರತಿಮ ಮತು ಆಶ್ಚರ್ಯಕರವಾದದ್ದು.

ಅನೇಕ ಸಾಹಿತಿಗಳು ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯ ಪ್ರಕಾರಗಳಲ್ಲಿ ರಚನೆ ಮಾಡಿದ ಬಹು ಮೌಲಿಕವಾದ ಗ್ರಂಥಗಳು. ಒಟ್ಟು ನಮಗೆ 1300 ಕ್ಕೂ ಹೆಚ್ಚು ಶರಣರ ಮತ್ತು 250 ಕ್ಕೂ ಹೆಚ್ಚು ಶರಣೆಯರ ಹೆಸರುಗಳು ನಮಗೆ ಸಿಗುತ್ತವೆ. ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಶರಣ-ಶರಣೆಯರ ಬಹು ದೊಡ್ಡ ಸಂಕುಲ ಸೇರಿತ್ತು ಎನ್ನುವುದು ಈ ಅಂಕಿ ಅಂಶಗಳು ಪ್ರಬಲ ಆಧಾರ ನೀಡಿ ಸಾಕ್ಷಿಯಾಗಿ ನಿಲ್ಲುತ್ತದೆ. ಡಾ. ವೀರಣ್ಣ ದಂಡೆ ಮತ್ತು ಅವರ ಶ್ರೀಮತಿ ಡಾ. ಜಯಶ್ರೀ ದಂಡೆಯವರು ಈ ಎಲ್ಲ ಮಾಹಿತಿಗಳನ್ನು ಕ್ರೋಢೀಕರಿಸಿ “ಕಲ್ಯಾಣದ ಶರಣರು” ಎನ್ನುವ ಸಂಶೋಧನೆಯ ಗ್ರಂಥವನ್ನು ಅತ್ಯಂತ ಶ್ರದ್ಧೆ ಮತ್ತು ಶ್ರಮವಹಿಸಿ ಬರೆದಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಕಳೆದ ಸುಮಾರು ಎರಡೂವರೆ ಮೂರು ದಶಕಗಳಿಂದ ಶರಣ ಬಳ್ಳೇಶ ಮಲ್ಲಯ್ಯನವರಲ್ಲದೇ ಅನೇಕ ಶರಣ-ಶರಣೆಯರ ಕುರಿತು ಮಾಹಿತಿ ಸಂಗ್ರಹಿಸಲು ಸಿಕ್ಕ ಮೌಲ್ಯಯುತವಾದ ಆಕರಗಳು ಅಂದರೆ:
ಬಸವಲಿಂಗದೇವರ ಕಥಾಸಾಗರ.
ಗಣಸಹಸ್ರ ನಾಮಾವಳಿ‌ (ಸಂಸ್ಕೃತ): ಮಲ್ಲಿಕಾರ್ಜುನ ಪಂಡಿತಾರಾಧ್ಯ.
ಪಾಲ್ಕುರಿಕೆ ಸೋಮನಾಥನ ತೆಲುಗಿನ ಸೋಮೇಶ್ವರ ಪುರಾಣಮು.
ಹರಿಹರನ ಸೌಂದರ್ಯ ಪುರಾಣ.
ಪರ್ವತೇಶನ ಚತುರಾಚಾರ್ಯ ಚಾರಿತ್ರ್ಯ.
ಶೂನ್ಯಸಂಪಾನೆಗಳು ಹಾಗೂ ಶೂನ್ಯಸಂಪಾದನೆಯ ಪರಾಮರ್ಶೆಗಳು.
ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತೆ.
ಭೀಮಕವಿಯ ಕನ್ನಡದ ಬಸವ ಪುರಾಣ.
ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ.
ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣ.
ಚನ್ನಬಸವಾಂಕ ಕವಿಯ ಬಸವ ಪುರಾಣ.
ಮಹಾಕವಿ ಷಡಕ್ಷರದೇವನ ಬಸವರಾಜ ವಿಜಯಂ.
ಶಾಂತಲಿಂಗದೇಶಿಕನ ಭೈರವೇಶವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ.
ಗುಬ್ಬಿ ಮಲ್ಲಣಾರ್ಯನ ವೀರಶೈವಾಮೃತ ಪುರಾಣ.
ಚಿಕ್ಕರಾಚ ಕವಿಯ ಬಸವ ಪುರಾಣ.
ಸಿದ್ಧನಂಜೇಶನ ಗುರುರಾಜ ಚಾರಿತ್ರ್ಯ.
ಡಾ. ಫ. ಗು. ಹಳಕಟ್ಟಿಯವರ ಅಮರ ಗಣಾಧೀಶರ ಚರಿತ್ರೆಗಳು.

ಮುಂತಾದ ಅನೇಕ ಗ್ರಂಥಗಳು. ಈ ಗ್ರಂಥಗಳಲ್ಲಿ ಶರಣ ಬಳ್ಳೇಶ ಮಲ್ಲಯ್ಯನವರ ಹೆಸರು ಕೂಡ ಪ್ರಸ್ತಾಪವಾಗಿದೆ. ಇನ್ನು ಶರಣೆ ಸತ್ಯಕ್ಕ, ಶರಣ ಉಳಿಯುಮೇಶ್ವರ ಚಿಕ್ಕಣ್ಣ ಮತ್ತು ಶರಣ ಉರಿಲಿಂಗಪೆದ್ದಿಗಳು ತಮ್ಮ ವಚನಗಳಲ್ಲಿ ಶರಣ ಬಳ್ಳೇಶ ಮಲ್ಲಯ್ಯನವರನ್ನು ಉಲ್ಲೇಖ ಮಾಡಿದ್ದಾರೆ.

ಶರಣೆ ಸತ್ಯಕ್ಕನವರು “ವಿಶ್ವಾಸದಿಂದ ನಂಬಿದರಯ್ಯಾ ಬಳ್ಳೇಶ್ವರ ಮಲ್ಲಯ್ಯಗಳು” ಎಂದು ತಮ್ಮ ಒಂದು ವಚನದಲ್ಲಿ ಉಲ್ಲೇಖ ಮಾಡಿದ್ದಾರೆ. ಶರಣ ಉಳಿಯುಮೇಶ್ವರ ಚಿಕ್ಕಣ್ಣನವರು “ಅಂದು ಬಳ್ಳೇಶ್ವರದ ಮಲ್ಲಯ್ಯಗಳು ಬಳ್ಳವ ಲಿಂಗವ ಮಾಡಿದರೆಂದು ಕಳೆದರೆ ಎಮ್ಮ ಪ್ರಮಥರು?” ಅಂತಾ ಪ್ರಶ್ನೆ ಮಾಡತಾರೆ. ಶರಣ ಉರಿಲಿಂಗಪೆದ್ದಿಗಳು “ಬಳ್ಳ ಲಿಂಗವೆ? ಅಲ್ಲ, ಅದು ಸಟೆ, ಸದ್ಭಾವದಿಂ ಲಿಂಗವಾಯಿತ್ತು, ಬಳ್ಳೇಶ್ವರ ಮಲ್ಲಯ್ಯಗಳಿಂದ” ಎಂದು ನಿರೂಪಣೆ ಮಾಡಿದ್ದಾರೆ. ಈ ವಚನಗಳಿಂದ ತಿಳಿದು ಬರುವುದೇನೆಂದರೆ ಶರಣ ಬಳ್ಳೇಶ ಮಲ್ಲಯ್ಯನವರು ಅನುಭವ ಮಂಟಪದ ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು.

ಶರಣೆ ಸತ್ಯಕ್ಕನವರ ವಚನ:
ವಿಶ್ವಾಸದಿಂದ ನಂಬಿದರಯ್ಯಾ ಭಿಲ್ಲಮರಾಯನವರು.
ವಿಶ್ವಾಸದಿಂದ ನಂಬಿದರಯ್ಯಾ ಗೊಲ್ಲಾಳರಾಯನವರು.
ವಿಶ್ವಾಸದಿಂದ ನಂಬಿದರಯ್ಯಾ ಕೆಂಭಾವಿಯ ಭೋಗಣ್ಣನವರು.
ವಿಶ್ವಾಸದಿಂದ ನಂಬಿದರಯ್ಯಾ ಬಳ್ಳೇಶ್ವರಮಲ್ಲಯ್ಯಗಳು.
ವಿಶ್ವಾಸದಿಂದ ನಂಬಿದರಯ್ಯಾ ಸಾಮವೇದಿಗಳು.
ವಿಶ್ವಾಸದಿಂದ ನಂಬಿದರಯ್ಯಾ ದಾಸದುಗ್ಗಳೆಯವರು.
ವಿಶ್ವಾಸದಿಂದ ನಂಬಿದರಯ್ಯಾ ಸಿರಿಯಾಳಚಂಗಳೆಯವರು.
ವಿಶ್ವಾಸದಿಂದ ನಂಬಿದರಯ್ಯಾ ಸಿಂಧುಬಲ್ಲಾಳನವರು.
ವಿಶ್ವಾಸದಿಂದ ನಂಬಿದರಯ್ಯಾ ಬಿಬ್ಬಿಬಾಚಯ್ಯಗಳು.
ವಿಶ್ವಾಸದಿಂದ ನಂಬಿದರಯ್ಯಾ ಮರುಳಶಂಕರದೇವರು.
ಇಂತಪ್ಪ ವಿಶ್ವಾಸಿಗಳ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನಯ್ಯಾ
ಶಂಭುಜಕ್ಕೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-915 / ವಚನ ಸಂಖ್ಯೆ-1228)

ಶರಣ ಉಳಿಯುಮೇಶ್ವರ ಚಿಕ್ಕಣ್ಣನವರ ವಚನ:
ಶೈವನೇಮಸ್ತರ ಕೈಯಲುಪದೇಶವಾದೊಡೇನಯ್ಯಾ,
ಅಲ್ಲಿ ಏನೂ ಊನಯವಿಲ್ಲ, ಪಾರಂಪರ್ಯದಲ್ಲಿ ನಡದುತ್ತಾಗಿ.
ನದಿಯ ಮೂಲವನೂ ಗುರುವಿನ ಮೂಲವನೂ ಅರಸುವರೆ?
ಗುರುಲಿಂಗಜಂಗಮ ಸಾಕ್ಷಿಯಾಗಿ
ಷಡಕ್ಷರ ಪ್ರಣವಮಂತ್ರದಿಂ ಲಿಂಗದರ್ಶನವಾಯಿತ್ತಾಗಿ
ಕಳೆಯಬಾರದು, ಬೆರಸಿ ತನ್ನೊಳಗೆ ತಾನಚ್ಚೊತ್ತಿ ಕರಿಗೊಂಡಿತ್ತಾಗಿ.
ಅಂದು ಬಳ್ಳೇಶ್ವರದ ಮಲ್ಲಯ್ಯಗಳು
ಬಳ್ಳವ ಲಿಂಗವ ಮಾಡಿದರೆಂದು ಕಳೆದರೆ ಎಮ್ಮ ಪ್ರಮಥರು?
ಕಾಳಹಸ್ತಿಯಲ್ಲಿ ಕಣ್ಣಪ್ಪದೇವರು
ಸುಜ್ಞಾನಭಕ್ತಿಯಿಂದ ಸ್ಥಾವರವನೆ
ಗುರುರೂಪ ಮಾಡಿ ಪೂಜಿಸಿದರೆಂದು
ಕಳೆದರೆ ಎಮ್ಮ ಪುರಾತನರು?
ಅಂದು ಕಲ್ಯಾಣದಲ್ಲಿ ಹುಸಿಯನೆ ದಿಟಮಾಡಿ
ಬದನೆಕಾಯ ಲಿಂಗವ ಮಾಡಿ ಸಲಿಸನೆ ನಮ್ಮ ಬಸವಣ್ಣನು?
ಇವರೆಲ್ಲರೂ ನಿಮ್ಮ ಭಜಿಸಿ ನಿಮ್ಮತ್ತಲಾದರು,
ನಾ ನಿನಗೇನ ಮಾಡಿದೆನಯ್ಯಾ ಉಳಿಯುಮೇಶ್ವರಾ?
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1156 / ವಚನ ಸಂಖ್ಯೆ-1631)

ಶರಣ ಉರಿಲಿಂಗಪೆದ್ದಿಗಳ ವಚನ:
ಸಟೆಯ ದಿಟವಮಾಡಿ ಕಂಡು ಸ್ವಭಾವವಾಗಿ ಸದ್ಭಾವದಿಂ ಲಿಂಗವಾಗಿ
ಲಿಂಗವನು ಭಕ್ತಿಯಿಂದ ಪೂಜಿಸಿ
ಲಿಂಗದಲ್ಲಿ ವರವ ಪಡೆದು, ಶಿವಪದವ ಪಡೆದರು ಪುರಾತನರು.
ಅದೆಂತೆನಲು ಕೇಳಿರೆ:
ಬಳ್ಳ ಲಿಂಗವೆ? ಅಲ್ಲ, ಅದು ಸಟೆ,
ಸದ್ಭಾವದಿಂ ಲಿಂಗವಾಯಿತ್ತು, ಬಳ್ಳೇಶ್ವರ ಮಲ್ಲಯ್ಯಗಳಿಂದ.
ಆಡಿನ ಹಿಕ್ಕೆ ಲಿಂಗವೆ? ಅಲ್ಲ, ಅದು ಸಟೆ.
ಸದ್ಭಾವದಿಂ ಲಿಂಗವಾಯಿತ್ತು, ಗೊಲ್ಲಾಳರಾಯನಿಂದ.
ನರಮಾಂಸವ ಭಕ್ಷಿಸುವೆನೆಂಬವ ಜಂಗಮವೆ? ಅಲ್ಲ, ಅದು ಸಟೆ.
ಸದ್ಭಾವದಿಂ ಭಾವಿಸೆ ಜಂಗಮವಾಗಿ ಕೇವಲ ಲಿಂಗವಾಯಿತ್ತು ಸಿರಿಯಾಳನಿಂದ.
ಸತ್ತ ಕರುವ ಹೊತ್ತು ಮಾದಾರನಾಗಿಬರುವುದು ಜಂಗಮಲಕ್ಷಣವೇ?
ಅಲ್ಲ, ಅದು ಸಟೆ.
ಸದ್ಭಾವದಿಂ ಭಾವಿಸೆ ಜಂಗಮ ಲಿಂಗವಾಯಿತ್ತು
ಕೆಂಭಾವಿಯ ಭೋಗಣ್ಣನಿಂದ.
ಡೊಂಬಿತಿ ಗುರುವೆ? ಅಲ್ಲ, ಅದೂ ಸಟೆ.
ಸದ್ಭಾವದಿಂ ಭಾವಿಸೆ ಲಿಂಗವಾಯಿತ್ತು ಗುರುಭಕ್ತಯ್ಯಂಗಳಿಂದ.
ಇಂತು ಸಟೆಯ ದಿಟವ ಮಾಡಿ
ದಿಟವಾದರು, ಸದ್ಭಕ್ತರಾದರು, ಕೇವಲ ಲಿಂಗವ ಮಾಡಿದರು.
ದಿಟ ಶಿವನ ಸಟೆಯ ಮಾಡಿ ಕಂಡು
ಸನತ್ಕುಮಾರನೊಂಟೆಯಾದನು.
ದಿಟ ಶಿವನ ಸಟೆಯ ಮಾಡಿ ಕಂಡು
ಬ್ರಹ್ಮ ತನ್ನ ಶಿರವ ಹೋಗಾಡಿಕೊಂಡನು.
ದಿಟ ಶಿವನ ಸಟೆಯ ಮಾಡಿ ಕಂಡು
ದಕ್ಷನು ತನ್ನ ಶಿರವ ಹೋಗಾಡಿಕೊಂಡನು.
ದಿಟ ಶಿವನ ಸಟೆಯ ಮಾಡಿ ಕಂಡು
ನರಸಿಂಹನು ವಧೆಗೊಳಗಾದನು.
ಈ ಮಹಾ ತಪ್ಪುಗಳನ್ನು ಮಾಡಿ ದೋಷಿಗಳಾದರು.
ಮಹಾಲಿಂಗದ ಸದ್ಭಕ್ತರು,
ಮಹಾಶರಣಪ್ಪ ನಂದೀಶ್ವರ ವೀರಭದ್ರ ಮೊದಲಾದ ಮಹಾಗಣಂಗಳಿಗೆ
ಸದ್ಭಕ್ತಿಯ ಮಾಡಿ ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು.
ಸಟೆಯ ದಿಟವ ಮಾಡುವ ಶಕ್ತಿಯಿಲ್ಲ ಎಮ್ಮ ಸದ್ಭಕ್ತರಂತೆ.
ಅದಂತಿರಲಿ, ದಿಟವ ಸಟೆಯ ಮಾಡಿ ದೋಷಿಗಳಾದಿರಿ ಅಭಕ್ತರಂತೆ.
ಅದಂತಿರಲಿ, ಸಟೆಯ ದಿಟವ ಮಾಡಬೇಡ, ದಿಟವ ಸಟೆಯ ಮಾಡಬೇಡ.
ಸಹಜಸ್ವಭಾವ ನಿತ್ಯಸತ್ಯವಹ ತಾತ್ಪರ್ಯವನೆ
ವಿಶ್ವಾಸವ ಮಾಡಿ, ನಂಬಿ ಭಕ್ತಿಯಿಂ ಪೂಜಿಸಿ
ಅವಿಶ್ವಾಸದಿಂ ಕೆಡಬೇಡ, ಕೆಡಬೇಡ.
ಸಹಜವಹ ದೃಷ್ಟವಹ ಪರಶಿವನು
ಶ್ರೀಗುರು ವಿಶ್ವಾಸವಂ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ.
ಆ ಪರಶಿವನು ಶ್ರೀಗುರುಲಿಂಗವು ಏಕವಾದ ಲಿಂಗವು
ವಿಶ್ವಾಸವ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ.
ಆ ಪರಶಿವಮೂರ್ತಿ ಜಂಗಮವು
ವಿಶ್ವಾಸವ ಮಾಡಿ ನಂಗಿರಣ್ಣಾ, ಮತ್ತೆಯೂ ನಂಬಿರಣ್ಣಾ.
ಕೇವಲವಿಶ್ವಾಸವ ಮಾಡಿ ಪ್ರಸಾದವ ಪಡೆದು ಮುಕ್ತರಾಗಿ, ಇದು ದೃಷ್ಟ.
ಅವಿಶ್ವಾಸದಿ ಕೆಡದಿರಿ ಕೆಡದಿರಿ. ಸರ್ವಸದ್ಭಾವವಿಶ್ವಾಸದಿಂ ಬದುಕಿರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವ ನಂಬಿರಣ್ಣಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1148 / ವಚನ ಸಂಖ್ಯೆ-1585)

ಅನುಭವ ಮಂಟಪದಲ್ಲಿ ಸಮಾಜದ ಎಲ್ಲಾ ಸಮಾಜದ ಜನರೂ ಪಾಲ್ಗೊಳ್ಳುತ್ತಿದ್ದರು. ಶ್ರೇಣೀಕೃತ ಸಮಾಜದಲ್ಲಿದ್ದ ಮೇಲು-ಕೀಳೆಂಬ ಧ್ವನಿಯನ್ನು ಬೇರು ಸಹಿತ ಕಿತ್ತುಹಾಕುವ ಪ್ರಯತ್ನದಲ್ಲಿ ಅನುಭವ ಮಂಟಪ ಯಶಸ್ವಿಯಾದ ಪ್ರಯೋಗ. ಶರಣ ಬಳ್ಳೇಶ ಮಲ್ಲಯ್ಯನವರಂತೆ ಜೈನ ಧರ್ಮವನ್ನು ಬಿಟ್ಟು ಶರಣ ಧರ್ಮವನ್ನು ಅಪ್ಪಿಕೊಂಡವರಲ್ಲಿ ಶರಣ ಆದಯ್ಯ ಮತ್ತು ಶರಣ ಮನುಮುನಿ ಗುಮ್ಮಟದೇವ ಪ್ರಮುಖರು.

ಜನ್ಮಸ್ಥಳ : ಕೋಳೂರು, ಬಳ್ಳಾರಿ ಜಿಲ್ಲೆ.
ವಚನಾಂಕಿತ : ಬಳ್ಳೇಶ್ವರಲಿಂಗ.
ಕಾಯಕ : ಸರಕು ಸಾಗಣೆ ಮತ್ತು ಮಾರಾಟ ಮಾಡುವವನು.
ಐಕ್ಯಸ್ಥಳ : ಬೆಳ್ಳೇರಿ, ನರಗುಂದ ತಾಲೂಕ (ನಿಖರವಾದ ಮಾಹಿತಿ ಇಲ್ಲ).

Bellary Dist. Gazetteer1972_BALLESHA MALLAYYA

ಶರಣ ಬಳ್ಳೇಶ ಮಲ್ಲಯ್ಯನವರ ಜನ್ಮಸ್ಥಳ ಈಗಿನ ಬಳ್ಳಾರಿ ಜಿಲ್ಲೆಯ “ಕೋಳೂರು” ಅಂತಾ ತಿಳಿದು ಬರುತ್ತದೆ. ಇದರ ಉಲ್ಲೇಖವನ್ನು 1972 ರಲ್ಲಿ ಪ್ರಕಟವಾದ “ಬಳ್ಳಾರಿ ಜಿಲ್ಲೆಯ ಗೆಝೇಟೀಯರ್‌ ನಲ್ಲಿ ಕಾಣಬಹುದು.

ಕೆಲವು ಸಾಧಕರ ಜೀವನವನ್ನು ನೋಡಿದರೆ ಅವರಲ್ಲಿ ಉಂಟಾದ ಪರಿವರ್ತನೆ ಅತ್ಯಂತ ಅನಿರೀಕ್ಷಿತವೂ ಆಶ್ಚರ್ಯಕರವೂ ಆಗಿದ್ದುದು ಕಂಡು ಬರುತ್ತದೆ. ಕೆಲವರಂತೂ ಆಧ್ಯಾತ್ಮ ಮಾರ್ಗಕ್ಕೆ ಬಹುದೂರದಲ್ಲಿದ್ದಂಥವರು ಯಾವುದೋ ಒಂದು ಘಟನೆಯಿಂದ ಪರಿವರ್ತನೆಗೊಂಡು ಇದ್ದಕ್ಕಿದ್ದಂತೆ ತಮ್ಮ ಜೀವನವನ್ನು ಅದಕ್ಕೆ ಸಮರ್ಪಿಸಿಕೊಂಡವರಿದ್ದಾರೆ. ಅವರಲ್ಲಿ ಮಹಾರಾಷ್ಟ್ರದ ನಾಮದೇವ, ಬಂಗಾಳದ ಸಂತ ಚೈತನ್ಯ ಹಾಗೂ ಪಾಶ್ಚಿಮಾತ್ಯ ರಾಷ್ಟ್ರದ ಸಂತ ಪಾಲ್‌/ಪಾಲ್‌ ದ ಅಪೋಸ್ಟಲ್, ಅಲ್ಜೀರಿಯಾದ ಸಂತ ಅಗಸ್ಟೀನ್‌, ಜರ್ಮನಿಯ ಮಾರ್ಟಿನ್‌ ಲೂಥರ್‌ ಮುಂತಾದವರು ಪ್ರಮುಖರು.

ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಮಹಾರಾಷ್ಟ್ರದ ಸಂತ ನಾಮದೇವ ಅವರು. ಪೂರ್ವಾಶ್ರಮದಲ್ಲಿ ನಾಮದೇವ ಅವರು ದಾರಿಹೋಕರನ್ನು ಹೊಡೆದು ಬಡಿದು ಸುಲಿಗೆ ಮಾಡುತ್ತಿದ್ದ ಕೊಲೆಗಾರನಾಗಿದ್ದರು. ಒಂದು ಸಾರಿ 84 ಜನರನ್ನು ಕೊಂದು ಕ್ರೌರ್ಯವನ್ನು ತೋರಿದ್ದವರು. ಅದಾದ ನಂತರ ಒಮ್ಮೆ ದೇವಾಲಯದ ಹತ್ತಿರ ಹೋಗುತ್ತಿರುವಾಗ ಹಸಿವಿನಿಂದ ಅಳುತ್ತಿರುವ ಮಗುವನ್ನು ಸಂತೈಸುತ್ತಿದ್ದ ತಾಯಿಯನ್ನು ಕಂಡರು. ವಿಚಾರಿಸಿದಾಗ ಆ 84 ಜನರಲ್ಲಿ ಒಬ್ಬನನ್ನು ಅವರು ಕೊಂದಿದ್ದರು. ತನ್ನ ಕ್ರೌರ್ಯಕ್ಕೆ ಬಲಿಯಾಗಿ ವಿಧವೆಯಾಗಿರುವುದಕ್ಕೆ ಕಾರಣ ಎನ್ನುವುದನ್ನು ತಿಳಿದು ಬಹಳಷ್ಟು ನೊಂದುಕೊಳ್ಳುತ್ತಾರೆ. ಆ ಮಗುವಿನ ಅನಾಥ ಮುಖವನ್ನು ನೋಡಿದ ನಾಮದೇವರ ಹೃದಯಲ್ಲೊಂದು ವಿಚಿತ್ರ ಪರಿವರ್ತನೆಯಾಗುತ್ತದೆ. ಅದೂವರೆಗೂ ಮುಚ್ಚಿಟ್ಟಿದ್ದ ಯಾವುದೋ ಒಂದು ತೆರೆ ಸರಿದಂತಾಯ್ತು. ಅತ್ಯಂತ ದುಃಖದಿಂದ ಹೃದಯ ಉಕ್ಕಿ ಬರುತ್ತದೆ. ನೇರವಾಗಿ ದೇವಾಲಯವನ್ನು ಪ್ರವೇಶಿಸಿ ಪಶ್ಚಾತ್ತಾಪದಿಂದ ತನ್ನ ರಕ್ತದಿಂದ ಮೂರ್ತಿಗೆ ಅಭಿಷೇಕ ಮಾಡುತ್ತಾರೆ. ಅಂದಿನಿಂದ ಅವರ ಜೀವನದ ಮಾರ್ಗವೇ ಬದಲಾಗುತ್ತದೆ. ಪಂಡರಾಪುರಕ್ಕೆ ಹೋಗಿ ಮಹಾ ಭಕ್ತನಾಗಿ ಸಾಧನೆಯನ್ನು ಕೈಗೊಂಡು ದೊಡ್ಡ ಸಂತರಾಗುತ್ತಾರೆ.

ಹಾಗೆಯೇ ಮೂಲತ: ಪೂರ್ವಾಶ್ರಮದಲ್ಲಿ ಬಳ್ಳೇಶ ಮಲ್ಲಯ್ಯನವರು ಸವಣ ಅಥವಾ ಜೈನರು. ಮಲ್ಲಶೆಟ್ಟಿ ಎಂದು ಹೆಸರಿದ್ದ ಇವರು ಶರಣರ ಪ್ರಭಾವಕ್ಕೊಳಗಾಗಿ ಶರಣ ಧರ್ಮ ಸ್ವೀಕರಿಸಿ ಶರಣ ಮಲ್ಲಯ್ಯನಾದರು. ಲಿಂಗಭಕ್ತರಾದರು, ಲಿಂಗ ನೇಮಸ್ಥರಾದರು. ಲಿಂಗಕ್ಕೆ ನೈವೇದ್ಯವನ್ನು ಅರ್ಪಿಸದೇ ತಾನು ಪ್ರಸಾದ ಸೇವಿಸುವುದಿಲ್ಲವೆಂದು ನಿಯಮವನ್ನು ಪಾಲಿಸುತ್ತಿದ್ದರು.

ಪ್ರಾಚೀನ ಕಾಲದಿಂದಲೂ ಅಳತೆಯನ್ನು ಮಾಡುಲು ಕೆಲವು ಅಳತೆಗೋಲು ಅಥವಾ ಸಾಧನಗಳನ್ನು ಉಪಯೋಗಿಸುತ್ತಿದ್ದರು.

ದವಸ-ಧಾನ್ಯಗಳನ್ನು ಅಳೆಯಲು ಬಳ್ಳ, ಕೊಪ್ಪರಿಗೆ, ಸೇರು, ಅಚ್ಚೇರು, ಪಾವು, ಚಟಾಕು, ಕಾಲು ಚಟಾಕು, ಪಾವು, ಅರೆ ಪಾವು (ಅರ್ಪಾವು), ಸವ್ವಾಸೇರು, ಅಡಿಸೇರು, ಪಂಚೇರು, ಹೆಚ್ಚಲಿ, ಸೊಲಿಗೆ, ಪಡಿ, ಮಾನ, ಕೊಳಗ, ಹಿಡಿ, ಬೊಗಸೆ, ಪಲ್ಲ ಮುಂತಾದವುಗಳನ್ನು ಬಳಸುತ್ತಿದ್ದರು. ತುಪ್ಪವನ್ನು ಅಳೆಯಲು ಇಬ್ಬಳಿಗೆ ಎನ್ನುವ ಸಾಧನವನ್ನು ಬಳಸುತ್ತಿದ್ದರು.

ಈ ಎಲ್ಲ ಅಳತೆ ಸಾಧನೆಗಳ ಒಂದು ವಿಸ್ತೃತ ಮಾಹಿತಿಯನ್ನು ನಾವು ಜಾನಪದ ವಿಶ್ವವಿದ್ಯಾಲಯ, ಹಾವೇರಿ ಪ್ರಕಟಿಸಿದ “ಜಾನಪದ ವಸ್ತುಕೋಶ” ಪುಸ್ತಕದಲ್ಲಿ ಕಾಣಬಹುದು. ಕೆಲವು ಮಾಪನಗಳು ಇಂದಿಗೂ ಕಂಡು ಬರುತ್ತವೆ.

ಧಾನ್ಯವನ್ನು ಅಳೆಯುವ ಬಳ್ಳ ಅಥವಾ ಸೇರನ್ನು ತಿರುಗು ಮುರುಗಾಗಿ ಇಟ್ಟು ಲಿಂಗಸ್ವರೂಪದಲ್ಲಿ ಪೂಜಿಸಿ ‘ಬಳ್ಳೇಶ ಮಲ್ಲಯ್ಯ’ ಆದರು. ಬಳ್ಳವನ್ನೇ ಯಾಕೆ ಪೂಜಿಸಿದರು ಎನ್ನುವುದಕ್ಕೆ ಒಂದು ಕಥೆಯಿದೆ.

ಊರಿಂದ ಊರಿಗೆ ವ್ಯಾಪಾರಕ್ಕೆ ಹೋಗುತ್ತಿದ್ದ ಶರಣ ಬಳ್ಳೇಶ ಮಲ್ಲಯ್ಯ ಮತ್ತು ಅವರ ಪರಿವಾರದವರು ಈಗಿನ ಬಳ್ಳಾರಿಗೆ ಬರುತ್ತಾರೆ. ಬೆಳಗಿನ ಝಾವ ಅವರಿಗೆ ವಿಪರೀತ ಕಣ್ಣು ನೋವು ಕಾಣಿಸಿಕೊಳ್ಳುತ್ತದೆ. ಅವರಿಗೆ ದೃಷ್ಟಿ ಮಂದವಾಗುತ್ತದೆ. ಆದರೂ ಲಿಂಗಪೂಜೆ ಮಾಡಲೇಬೇಕು. ಸುತ್ತಮುತ್ತ ಯಾವುದೇ ದೇವಸ್ಥಾನ ಕಂಡು ಬರುವುದಿಲ್ಲ. ಅದಕ್ಕೆ ಅವರ ಭಾವ-ಮೈದುನರು ಲಿಂಗವನ್ನೇ ತಿರುಗು-ಮುರುಗಾಗಿ ಇರಿಸುತ್ತಾರೆ. ಇದಾವುದನ್ನು ಗಮನಿಸುವುದಕ್ಕೆ ಮಲ್ಲಯ್ಯನವರಿಗೆ ಕಣ್ಣು ಕಾಣಿಸಲಿಲ್ಲ. ಹಾಗಾಗಿ ಬಳ್ಳವನ್ನೇ ಲಿಂಗವೆಂದು ಅತ್ಯಂತ ಶ್ರದ್ಧೆ ಮತ್ತು ನಿಷ್ಠಾಭಕ್ತಿಯಿಂದ ಪೂಜಿಸುತ್ತಾರೆ. ಇದೇ ಕಾರಣಕ್ಕಾಗಿ ಬಳ್ಳಾರಿಗೂ ಕೂಡ ಈ ಹೆಸರು ಬರಲು ಕಾರಣವಾಯಿತು. ಇದರ ನಿರೂಪಣೆಯನ್ನು ಕೋಟೆ ಮಲ್ಲೇಶ್ವರನ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ. ನರಸಿಂಹಾಚಾರ್‌ ಅವರು ತಿಳಿಸಿದ್ದಾರೆ.

ಶ್ರೀ. ತ. ಸು. ಶಾಮರಾಯರು ಬರೆದ “ಶಿವಶರಣ ಕಥಾ ರತ್ನಕೋಶ” ದ ಪುಟ 281 ರಲ್ಲಿ ಈ ವಿಚಾರ ಕುರಿತು ಉಲ್ಲೇಖ ಮಾಡಿದ್ದಾರೆ.

ಜೈನ ಕುಲದಲ್ಲಿ ಹುಟ್ಟಿ ಜೈನ ಸ್ತ್ರೀಯನ್ನು ಮದುವೆಯಾಗಿ ಹೇರಿನ ವ್ಯಾಪಾರದಿಂದ ಉಪಜೀವಿಸುತ್ತಿದ್ದ ಮಲ್ಲಶೆಟ್ಟಿಗೆ ವೀರಶೈವ ಧರ್ಮದಲ್ಲಿ ಆಸಕ್ತಿ ಹುಟ್ಟಿ ಶಿವಭಕ್ತನಾದನು. ಲಿಂಗಕ್ಕೆ ನೈವೇದ್ಯವನ್ನು ಸಲ್ಲಿಸಿ ಅನಂತರ ಊಟ ಮಾಡುವುದು ಆತನ ನಿಯಮವಾಗಿತ್ತು. ಒಮ್ಮೆ ವ್ಯಾಪಾರಕ್ಕಾಗಿ ಹೋಗಿದ್ದಾಗ ಕಣ್ಣು ಬೇನೆಯಾಗಿ ಭಾವ ಮೈದುನರ ಮೋಸದಿಂದ ಅಳೆಯುವ ಒಂದು ಬಳ್ಳವನ್ನೇ ಲಿಂಗವೆಂದು ಭಾವಿಸಿ ಅದನ್ನು ಪೂಜಿಸಿದನು. ಈತನ ಮಹಿಮೆಯಿಂದ ಬಳ್ಳವು ಲಿಂಗವೇ ಆಯಿತು. ಇದು ನಡೆದುದು ಬಳ್ಳಾರಿಯ ಸಮೀಪದಲ್ಲಿ. ಬಳ್ಳಾರಿ (ಬಳ್ಳ + ಅರೆ [ಬಂಡೆ]) ಎಂಬ ಹೆಸರು ಬಂದುದು ಇದರಿಂದಲೇ. ಬಳ್ಳಾರಿ ಜಿಲ್ಲೆಯ ಚೆಲ್ಲಗುರ್ಕಿ ಗ್ರಾಮದ “ಎರ್ರಿತಾತನವರ ಲೀಲಾವಿಲಾಸ” ದಲ್ಲಿ ಇದರ ಉಲ್ಲೇಖವನ್ನು ಮಾಡಲಾಗಿದೆ.

ಮೇಲಿನ ವಿವರಗಳನ್ನು ಗಮನಿಸಿದರೆ ತ್ರಿಷಷ್ಟಿ ಪುರಾತನರ ಚರಿತ್ರೆಯಲ್ಲಿ ಬರುವ ನಂಬಿಯಣ್ಣನವರ ನೆನಪಾಗುತ್ತದೆ. ಪ್ರಾಪಂಚಿಕ ಭೋಗಲಾಲಸೆಗಳಲ್ಲೇ ಮುಳುಗಿ ಹೋಗಿದ್ದ ನಂಬಿಯಣ್ಣನವರ ಕಣ್ಣುಗಳ ದೃಷ್ಟಿ ಹೋದವು. ಮತ್ತೆ ಪಾರ್ವತಿಯನ್ನು ಸ್ತುತಿಸಿ ದೃಷ್ಟಿ ಪಡೆದ ಅಂತಾ ಹರಿಹರನ ನಂಬಿಯಣ್ಣನ ರಗಳೆಯಲ್ಲಿ ಪ್ರಸ್ತಾಪಿಸಲಾಗಿದೆ.

ಬಳ್ಳಾರಿಯಲ್ಲಿ ಮೋತಿ ಚಲನ ಚಿತ್ರಮಂದಿರದ ಹತ್ತಿರವಿರುವ ಕೋಟೆಯ ಮಗ್ಗುಲಿಗೆ ಬೆಟ್ಟದ ಮಡಿಲಿನಲ್ಲಿ ಮಲ್ಲೇಶ್ವರನ ಗುಡಿಯಿದೆ. ಈ ಕೋಟೆ ಮಲ್ಲೇಶ್ವರ ದೇವಾಲಯದಲ್ಲಿ ಈತ ಪೂಜಿಸಿದ ಬಳ್ಳ ಲಭ್ಯವಿದೆ. ಈ ದೇವಸ್ಥಾನವನ್ನು ಕದಂಬರ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಶರಣ ಮಲ್ಲಯ್ಯನರು ಬಳಸಿದ ಬಳ್ಳವನ್ನು ಅತ್ಯಂತ ಶ್ರದ್ಧೆಯಿಂದ ಪೂಜಿಸುವ, ಬಳ್ಳವೇ ಲಿಂಗವಾದುದರ ಚಿತ್ರಗಳನ್ನು ಈ ದೇವಸ್ಥಾನದಲ್ಲಿ ಕಾಣಬಹುದು.

ಹೇರಿನ ವೃತ್ತಿ, ದವಸ-ಧಾನ್ಯಗಳ ಅಥವಾ ಸರಕು ಸಾಗಣೆ ವೃತಿಯನ್ನು ಶರಣ ಬಳ್ಳೇಶ ಮಲ್ಲಯ್ಯನವರು ಮಾಡುತ್ತಿದ್ದರು. ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಸರಕು ಸಾಗಿಸುವ ವ್ಯಾಪಾರ. ಹೇರು ಅಂದರೆ ಒಂದು ಗಾಡಿಯಲ್ಲಿ ತುಂಬುವಷ್ಟು ಪ್ರಮಾಣದ ಧವಸ, ಭಾರ, ಒಜ್ಜೆ.

ಇವರು ಶರಣರ ಅನುಭಾವಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ತಾವೂ ಅನುಭಾವಿಯಾಗಿ ವಚನಗಳನ್ನು ರಚಿಸಿದ್ದಾರೆ. “ಬಳ್ಳೇಶ್ವರಲಿಂಗ” ವಚನಾಂಕಿತದಿಂದ ರಚಿಸಿದ 9 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ಇದರಲ್ಲಿ 6 ವಚನಗಳು ಬೆಡಗಿನ ರೂಪದಲ್ಲಿದ್ದರೆ 3 ವಚನಗಳು ಕಾವ್ಯಾತ್ಮಕವಾಗಿವೆ.

ಶರಣರ ವಚನಗಳನ್ನು ಓದಿದಾಗ, ಸಾಮಾನ್ಯವಾಗಿ ಗ್ರಹಿಕೆಗೆ ನಿಲುಕುವುದೇನಂದರೆ ಶರಣರು ತಮ್ಮ ಲೌಕಿಕದ ನಡೆ-ನುಡಿಗಳಿಂದ ನಿಲುಕಿದ ಲೋಕಾನುಭವದ ಮೂಲಕ ದೃಷ್ಟಾಂತ, ರೂಪಕ, ಪ್ರತಿಮೆ, ಪ್ರತೀಕ ಹಾಗೂ ಸಾಂಕೇತಿಕ ರೂಪದಲ್ಲಿ ಶಬ್ದಗಳನ್ನು ತಮ್ಮ ವಚನಗಳಲ್ಲಿ ಉಪಯೋಗಿಸಿದ್ದಾರೆ. ಹೊಸ ಪರಿಭಾಷೆಯ ಪದಗಳನ್ನು ಜೋಡಿಸುತ್ತಾ ಆಧ್ಯಾತ್ಮಿಕ ಚಿಂತನೆಯನ್ನು ಮಂಡಿಸಿದ್ದಾರೆ.

ಬೆಡಗಿನ ವಚನಗಳು ಅಂದ ತಕ್ಷಣ ನಮಗೆ ಶ್ಲೇಷಾಲಂಕಾರದ ನೆನಪಾಗುತ್ತದೆ. ಒಂದು ಪದಕ್ಕೆ ಎರಡು ಅಥವಾ ಹೆಚ್ಚು ಅರ್ಥಗಳನ್ನಿಟ್ಟು ಶಬ್ದಜೋಡಣೆ ಮಾಡುವ ಅಲಂಕಾರ. ಉದಾಹರಣೆಗೆ “ನಂಬಿ ಕರೆದಡೆ ಓ ಎನ್ನನೇ ಶಿವನು” ಈ ವಾಕ್ಯದಲ್ಲಿ ನಂಬಿ ಎನ್ನುವ ಪದಕ್ಕೆ ನಂಬಿಯಣ್ಣ ಮತ್ತು ನಂಬಿಕೆ ಎರಡು ಅರ್ಥಗಳಿವೆ. “ನಿನ್ನ ಚರಣ ಕಮಲದೊಳಾನು ತುಂಬಿ” ಈ ವಾಕ್ಯದಲ್ಲಿ ತುಂಬಿ ಎನ್ನುವ ಶಬ್ದಕ್ಕೆ ತುಂಬಿಕೊಳ್ಳು ಮತ್ತು ದುಂಬಿ ಎನ್ನುವ ಎರಡು ಅರ್ಥಗಳಿವೆ. ಆದರೆ ಬೆಡಗಿನ ವಚನಗಳು ಶಬ್ದ ಮತ್ತು ಅರ್ಥದಲ್ಲಿ ಬೇರೆ ಬೇರೆ ನಿರೂಪಣೆಯನ್ನು ನೀಡುತ್ತವೆ. ನೇರವಾಗಿ ಹೇಳದೇ ಒಗಟಿನ ರೂಪಕಲ್ಲಿ ಹೇಳುವುದು ಬೆಡಗು. ಈ ಬೆಡಗು ನಮ್ಮ ಅಂತರಂಗದ ಅರಿವನ್ನು ಬೆಳಗಿಸುವ ಶಕ್ತಿಯನ್ನು ಹೊಂದಿವೆ. ಇದು “ನಾರಿಕೇಳ ಪಾಕ” ದಂತೆ ಕಾಣುತ್ತವೆ. ಕೊಬ್ಬರಿಯನ್ನು ತೆಗೆದು ಪಾಕ ಮಾಡಿ ಊಟ ಮಾಡುವ ಸಂತೋಷಕ್ಕೆ ಮುನ್ನ ತೆಂಗಿನಕಾಯಿಯನ್ನು ಚಚ್ಚಿ ಚಚ್ಚಿ ತೆಗೆಯುವ ಕಷ್ಟ ಅನುಭವಿಸಬೇಕು. ಹಾಗೆಯೇ ಈ ವಚನಗಳಲ್ಲಿ ಬರುವ ಶಬ್ದಾರ್ಥವನ್ನು ಅರಿಯುವ ಮುನ್ನ ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ. ಅವು ಪ್ರತಿನಿಧಿಸುವ ಶಬ್ದಾರ್ಥವೇ ಒಂದು ಹಾಗೂ ಅವುಗಳು ನೀಡುವ ಅನುಭವವೇ ಇನ್ನೊಂದು.

ಈ ಹಿನ್ನೆಲೆಯಲ್ಲಿ ತಾವು ಅನುಭವಿಸಿದ ಮತ್ತು ತಮ್ಮ ಅಂತರಂಗಕ್ಕೆ ಬಂದ ಅನುಭಾವವನ್ನು ವಚನಕಾರರು ಬೆಡಗಿನ ರೂಪದಲ್ಲಿ ವಚನಗಳನ್ನು ಚಿತ್ರಿಸಿದ್ದಾರೆ. ಹಾಗಾಗಿ ವಚನಗಳು ಲೌಕಿಕದ ಅನುಭವ ಹಾಗೂ ಅಲೌಕಿಕದ ಅನುಭೂತಿಯನ್ನು ಹದವಾಗಿ ಮಿಶ್ರಣ ಮಾಡಿದ ಭಕ್ತಿ ರಸಾಯನದಲ್ಲಿ ಮೂಡಿಬಂದ ಜ್ಞಾನದ ಕಿರಣಗಳಾಗಿವೆ. ಶರಣರ ವಚನಗಳು ಬೆರಗು ಮತ್ತು ಬೆಡಗನ್ನು ತಮ್ಮ ನುಡಿ ನಡಿಗೆಯ ಗತಿಗೆ ಶೃತಿ ಮಾಡಿ ಒಗ್ಗಿಸಿಕೊಂಡ ಕಾರಣದಿಂದ ಸಾಮಾನ್ಯ ಗ್ರಹಿಕೆಗೆ ನಿಲುಕಲಾರದೇ ಹೋಗಬಹುದು. ಅಂತಹ ಬೆಡಗನ್ನು ಶರಣ ಬಳ್ಳೇಶ ಮಲ್ಲಯ್ಯ ಶರಣರ ವಚನಗಳಲ್ಲಿ ಕಾಣಬಹುದು.

ಶರಣ ಬಳ್ಳೇಶ ಮಲ್ಲಯ್ಯನವರ ವಚನಗಳಲ್ಲಿ ಕಾವ್ಯಾಂಶ ಕಡಿಮೆ ಎನಿಸಿದರೂ ರಚನೆಯಲ್ಲಿ ವೈಶಿಷ್ಟತೆ ತೋರಿ ಬರುತ್ತದೆ. ಅವರ ವಚನಗಳಲ್ಲಿ ಶಿವಭಕ್ತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಕಾಣಬಹುದು. ಅಪಾರ ಮಹಾ ಮಹಿಮನಾದ ಶಿವ ಬೇಡಿದ್ದನ್ನೆಲ್ಲಾ ನೀಡುತ್ತಾನೆ ಎನ್ನುವ ಭಾವ ಅವರದು.

ಆವ ಪ್ರಾಣಿಗೆಯೂ ನೋವ ಮಾಡಬೇಡ.
ಪರನಾರಿಯರ ಸಂಗ ಬೇಡ.
ಪರಧನಕ್ಕಳುಪಬೇಡ, ಪರದೈವಕ್ಕೆರಗಬೇಡ.
ಈ ಚತುರ್ವಿಧ ತವಕವ ಮಾಡುವಾಗ
ಪರರು ಕಂಡಾರು, ಕಾಣರು ಎಂದೆನಬೇಡ.
ಬಳ್ಳೇಶ್ವರಲಿಂಗಕ್ಕಾರು ಮರೆಮಾಡಬಾರದಾಗಿ
ಅಘೋರನರಕದಲ್ಲಿಕ್ಕುವ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1376 / ವಚನ ಸಂಖ್ಯೆ-193)

ಪೂರ್ವಾಶ್ರಮದ ಜೈನ ಸಂಸ್ಕಾರದಿಂದ ಬಂದಂಥ ಅಹಿಂಸಾ ತತ್ವದ ಬಳುವಳಿಯನ್ನು ಈ ವಚನದಲ್ಲಿ ಕಾಣಬಹುದು. ಈ ಸಂಗತಿಯನ್ನು ಲೋಕಕ್ಕೆ ತಿಳಿಸುವ ಪ್ರಯತ್ನ ಇದಾಗಿದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಣ್ಣನವರಂತೆ ಶರಣ ಬಳ್ಳೇಶ ಮಲ್ಲಯ್ಯನವರೂ ಕೂಡ “ಆವ ಪ್ರಾಣಿಗೆಯೂ ನೋವ ಮಾಡಬೇಡ” ಎಂದು ಕರೆ ಕೊಡುತ್ತಾರೆ. ಜೈನ ಧರ್ಮದ “ಅಹಿಂಸಾ ಪರಮೋಧರ್ಮಃ” ಎನ್ನುವ ತತ್ವವೂ ಕೂಡ ಇದಕ್ಕೆ ಪ್ರೇರಣೆಯಾಗಿರಬಹುದು. ಜೀವನದ ಮೌಲ್ಯಗಳನ್ನು ಎಚ್ಚರದಿಂದ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದರೆ ಸಮಾಜದಲ್ಲಿ ನೈತಿಕ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕೆನ್ನುವ ಸಂದೇಶವನ್ನು ಈ ಮೂಲಕ ನೀಡುತ್ತಾರೆ. “ಪರನಾರಿಯರ ಸಂಗ ಬೇಡ ಪರಧನಕ್ಕಳುಪಬೇಡ ಪರದೈವಕ್ಕೆರಗಬೇಡ” ಎನ್ನುವ ತತ್ವ ಸಿದ್ಧಾಂತಗಳನ್ನು ಪ್ರಾಮಾಣಿಕವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಪರರು ನಮ್ಮನ್ನು ನೋಡಿದರೇನು? ಎನ್ನುತ್ತಾ ತನ್ನ ತಾನರಿದು ನಂಬಿದ ಲಿಂಗಕ್ಕೆ ಮರೆಮಾಡದೆ ಪ್ರಾಮಾಣಿಕ ಕ್ರಿಯೆಯನ್ನು ನೆರವೇರಿಸಬೇಕು. ಅದರಲ್ಲಿಯೇ ಉನ್ನತಿಯನ್ನು ಕಾಣಬೇಕೆಂದು ತಿಳಿಸಿದ್ದಾರೆ.

ಕೆಲವು ವಚನಗಳ ಅಂತ್ಯದಲ್ಲಿ ಬರುವ “ಬಳ್ಳೇಶ್ವರ ಲಿಂಗದ ಡಂಗುರ” “ಬಳ್ಳೇಶ್ವರನ ಕನ್ನಡ ಹೇಳುವಡೆ ಯುಗಸಂಖ್ಯೆ” “ಬಳ್ಳೇಶ್ವರನ ಕನ್ನಡ ವಿಪರೀತ” ಎಂಬ ಉಕ್ತಿಗಳನ್ನು ಗಮನಿಸಬೇಕು. ಆಗಿನ ಕಾಲಘಟ್ಟದಲ್ಲಿ ಸಂಸ್ಕೃತ ಹಾಗೂ ತೆಲುಗಿನ ಪ್ರಭಾವ ಸಾಕಷ್ಟು ಇತ್ತು. ಹಾಗಾಗಿ ಕನ್ನಡತನವನ್ನು ಉಳಿಸಿಕೊಳ್ಳುವ ಮತ್ತು ಕನ್ನಡ ಶ್ರೇಷ್ಠವೆನ್ನುವದನ್ನು ತಮ್ಮ ವಚನಗಳ ಮೂಲಕ ಹೇಳಿರಬಹುದು. ಪಾಂಡಿತ್ಯ ಪ್ರದರ್ಶನಕ್ಕಿಂತ ಸರಳವಾಗಿ ಸಂವಹನವಾಗುವ ರೀತಿಯಲ್ಲಿ ಹೇಳುವುದು ನಿಜಾವಾದ ಸಾಹಿತ್ಯದ ಶಕ್ತಿ ಎನ್ನುವುದನ್ನು ಅವರ ವಚನಗಳ ಮೂಲಕ ನಾವು ಗಮನಿಸಬೇಕು.

ಶಿವನೊಬ್ಬನೆ ಜಗವೆಲ್ಲಕ್ಕೊಡೆಯನೆಂದು
ಹೊಡೆವ ಭೇರಿ ನಿಸ್ಸಾಳವಯ್ಯಾ.
ಶಿವನಲ್ಲದೆ ಅತಃಪರವಿಲ್ಲೆಂದು ಒದರುವ
ವೇದ ಶಾಸ್ತ್ರ ಪುರಾಣಾಗಮಂಗಳಯ್ಯಾ.
ಶಿವನು ಅಲ್ಲವೆಂಬವನ ಬಾಯ ತ್ರಿಶೂಲದಲ್ಲಿರಿವುದು.
ಬಳ್ಳೇಶ್ವರನ ಡಂಗುರ ಜಗದೊಳಗಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1377 / ವಚನ ಸಂಖ್ಯೆ-197) ಪಾರಿಭಾಷಿಕ ಶಬ್ದಗಳ ಅರ್ಥ:

ಭೇರಿ: ವಾದ್ಯ ವಿಶೇಷ
ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ.

ಶಿವನೊಬ್ಬನೆ ಜಗತ್ತಿಗೆ ಒಡೆಯನೆಂದು ಭೇರಿ ನಿಸ್ಸಾಳವನ್ನು ಹೊಡೆಯುವೆನು ಎನ್ನುತ್ತಾ ಶಿವನಲ್ಲಿ ಭಕ್ತಿ ಪರಾಕಾಷ್ಠೆಯನ್ನು ಮೆರೆದಿದ್ದಾನೆ. ವೇದ ಶಾಸ್ತ್ರ ಪುರಾಣಗಳು ಸ್ಮಶಾನವಾಸಿ ಶಿವ ಅಮಂಗಳವೆನ್ನುತ್ತವೆ ಮತ್ತು ಶಿವನೆಲ್ಲಿದ್ದಾನೆ? ಇಲ್ಲವೇ ಇಲ್ಲ ಎಂದು ಹೇಳುವವರ ಬಾಯಿಯನ್ನು ತ್ರಿಶೂಲದಿಂದ ಇರಿಯುತ್ತೇನೆ ಎಂದು ಡಂಗೂರ ಸಾರುತ್ತೇನೆ. ಹೀಗೆ ಶಿವ ಪಾರಮ್ಯವನ್ನು ಮೆರೆಯಿತ್ತಾರೆ.

ಅಪಾರ ಮಹಿಮನೆಂಬುದು ನಿಮ್ಮ ಭೇರಿ.
ಬೇಡಿತ್ತನೀವನೆಂಬುದು ನಿಮ್ಮ ತಮ್ಮಟ.
ಜಗವಂದಿತ ಲೋಕದೊಡೆಯನೆಂಬುದು ನಿಮ್ಮ ಶಂಖ.
ಪರದೈವವಿಲ್ಲವೆಂಬುದು ನಿಮ್ಮ ಡಮರುಗ.
ಶಿವ ಕಾಡನೆಂಬವರ ಬಾಯ ತ್ರಿಶೂಲದಲ್ಲಿರಿವ
ಬಳ್ಳೇಶ್ವರಲಿಂಗದ ಡಂಗುರ ಮೂಜಗದೊಳಗಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1376 / ವಚನ ಸಂಖ್ಯೆ-191)

ಪಾರಿಭಾಷಿಕ ಶಬ್ದಗಳ ಅರ್ಥ:
ತಮ್ಮಟ: ಪೂಜಾರಿ.

ತಾನು ನಂಬಿದ ಶಿವ ಬೇಡಿದ ವರಗಳನ್ನೆಲ್ಲ ಪೂರೈಸುತ್ತಾನೆ. ಜಗತ್ತಿಗೆ ಒಡೆಯನೆಂಬುದನ್ನು ಶಂಖದಿಂದ ವಾದ್ಯವ ಮಾಡಿ ಹೇಳುತ್ತೇನೆ. ನೀವೇನಾದರೂ ಶಿವ ಪರದೈವವೆಂದು ಡಮರುಗದಂತೆ ಬಾರಿಸಿದರೆ ನಿಮ್ಮ ನಾಲಿಗೆಯನ್ನು ತ್ರಿಶೂಲದಿಂದ ಸೀಳುವೆ ಎನ್ನುತ್ತಾರೆ ಶರಣ ಬಳ್ಳೇಶ ಮಲ್ಲಯ್ಯನವರು. ಇಡೀ ಜಗತ್ತಿಗೆಲ್ಲ ವಂದಿತ ಎಂದು ನಾನು “ಡಂಗೂರ ಸಾರುವೆ” ಎನ್ನುತ್ತಾರೆ. ಒಟ್ಟಾರೆ ಶಿವತತ್ವ ಚಿಂತನೆಯ ಅಗಾಧ ಪ್ರಭಾವವನ್ನು ಶರಣ ಬಳ್ಳೇಶ ಮಲ್ಲಯ್ಯನವರ ವಚನಗಳಲ್ಲಿ ಕಾಣಬಹುದು.

ಭೇರಿ, ನಿಸ್ಸಾಳ ಎನ್ನುವವು ಚರ್ಮ ವಾದ್ಯಗಳು. ಈ ಚರ್ಮವಾದ್ಯಗಳನ್ನು ರಣಭೇರಿ ವಾದ್ಯಗಳು ಅಂತಾನೂ ಕರೆಯುತ್ತಾರೆ. ಒಂದು ಯುದ್ಧ ಸನ್ನಿವೇಶವನ್ನು ವಾದ್ಯದ ಮೂಲಕ ತಿಳಿಸುವ ವಾದ್ಯಗಳು ಮತ್ತು ಭೇರಿ, ಶಂಖ, ಡಮರುಗ ಮುಂತಾದ ವಾದ್ಯಗಳು ಸಾಮಾನ್ಯವಾಗಿ ಮಂಗಳಕರ ವಾದ್ಯಗಳು.

ಈ ವಿಷಯವನ್ನು ಕನ್ನಡ ವಿಶ್ವವಿದ್ಯಾಲಯದ‌ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಅವರು ಬರೆದ “ಚರ್ಮ ವಾದ್ಯಗಳು” ಎನ್ನುವ ಪುಸ್ತಕದಲ್ಲಿ ಅತ್ಯಂತ ಸವಿವರವಾಗಿ ಮತ್ತು ಅದ್ಭುತವಾಗಿ ನಿರೂಪಣೆ ಮಾಡಿದ್ದಾರೆ.

ಸಹಸ್ರಮುಖದ ಕೊರಳೊಂದು ನಾಸಿಕದಲುಂಬ ಸುಖ
ಘಾಸಿ ಮಾಡಿದಡದರ ರೂಪು ನೋಡಾ.
[ಘಾ]ಸಿಯಾದ ಭಾಷೆಯೇಕೆ?
ವರ್ಣದ ಕೌತುಕದಿಂದ ಕಾಂತೆ ನೋಡಿದಳು ಕನ್ನ[ಡಿಯ] ಬೆ[ಳ]ಗ.
ಸೂಸಲೀಯದೆ ಉಣ್ಣಬಲ್ಲವನ ತೋರುತ್ತಿದೆ.
ಬಳ್ಳೇಶ್ವರನ ಕೊರಳ ಮತ್ಸ್ಯವ ನೋಡಿ ನಗುತ್ತಿದೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1377 / ವಚನ ಸಂಖ್ಯೆ-199)

ಇಲ್ಲಿ ಶರಣ ಬಳ್ಳೇಶ ಮಲ್ಲಯ್ಯನವರು ಸಹಸ್ರಮುಖ ಎನ್ನುವ ಶಬ್ದಪ್ರಯೋಗ ಮಾಡಿದ್ದಾರೆ. ಯಾವುದಾದರೂ ಒಂದು ದೇವರ, ದೇವತೆಯ ಅಥವಾ ಇನ್ನಾವುದಾದರೂ ನಾವು ನಂಬಿರುವ ಶಕ್ತಿಯ ಉಲ್ಲೇಖವನ್ನು ಮಾಡುವಾಗ ಸಹಸ್ರ ಮುಖ, ವಿಶ್ವ ವ್ಯಾಪಿ, ಸಹಸ್ರ ಹಸ್ತ ಇಂತಹ ವ್ಯಾಪಕ ವರ್ಣನೆಗಳನ್ನು ಕಾಣುತ್ತೇವೆ ಹಾಗೂ ಇವುಗಳ ಪೂಜೆಯನ್ನು ಮಾಡಬೇಕೆನ್ನುವ ಉತ್ಸಾಹ ಮೂಡಿ ಬರುತ್ತದೆ. ಇಲ್ಲಿ ಆ ಶಕ್ತಿಯ ರೂಪ ನಮ್ಮ ಕಲ್ಪನೆಗೆ ಎಟುಕುವುದಿಲ್ಲ. ಆದ್ದರಿಂದ ಅವುಗಳ ಸಗುಣ ರೂಪದ ಉಪಾಸನೆಯನ್ನು ಮಾಡುತ್ತೇವೆ. ಅದರಿಂದ ಭಾವ ಜಾಗೃತಿಯೂ ಕೂಡ ಆಗಬಹುದು. ಮುಂದುವರೆದು “ನಾಸಿಕದಲುಂಬ ಸುಖ” ಎಂದು ಪಂಚೇಂದ್ರಿಯಗಳ ಸುಖವನ್ನು ನಾಸಿಕವನ್ನು ಸಾಂಕೇತಿಕವಾಗಿ ಬಳಸಿದ್ದಾರೆ. ನಮಗೆ ನಿಲುಕಿದಷ್ಟೂ ಸುಖ ದೊರೆತರೆ ಆಗುವ ಆನಂದ ಬಹಳ. ಆದರೆ ಆ ಸುಖ ಎಟುಕದೇ ಹೋದರೆ ನಾವು ಬಳಸುವ ಭಾಷೆ ಎಂಥವರನ್ನೂ ಕೂಡ ಘಾಸಿಗೊಳಿಸಬಹುದು. ಮಾಯೆಯೆಂಬ ಕಾಂತೆಯ ಮುಖ ಕನ್ನಡಿಯೊಳಗಿನ ಸುಂದರವಾದ ಛಾಯೆ. ಅದನ್ನು ನೋಡಿಯೇ ಅನುಭವಿಸಬೇಕೆ ಹೊರತು ಲೌಕಿಕ ಅನುಭವಕ್ಕೆ ಸಿಲುಕಲಾರದು. ಸಿಕ್ಕರೂ ಸಿಗದಿದ್ದರೂ ನಿರ್ಲಿಪ್ತತೆಯನ್ನು ಅನುಭವಿಸುವುದು ಶರಣರ ಮಾರ್ಗ. ಇಂಥ ಮಾಯೆಯ ಪ್ರಭಾವಕ್ಕೆ ಒಳಗಾದವರನ್ನು ಬಳ್ಳೇಶ್ವರಲಿಂಗವು ನೋಡಿ ವಿಡಂಬನಾತ್ಮಕವಾಗಿ ನಗುತ್ತದೆ. ಮಾಯೆಯ ಅತ್ಯಂತ ಬೆಡಗಿನ ಸುಂದರ ಚಿತ್ರಣವನ್ನು ಶರಣ ಬಳ್ಳೇಶ ಮಲ್ಲಯ್ಯನವರು ಇಲ್ಲಿ ನಿರೂಪಣೆ ಮಾಡಿದ್ದಾರೆ.

ಧರೆಯೊಳಗೆ ಚೋದ್ಯವ ನೋಡಿರೆ:
ಒಂದು ಹರಿಣಿಯ ಮೃಗವು ಓದು ಬಲ್ಲುದಾ?
ಚೆಲುವ ಗಿಳಿಯಲ್ಲಿ ವಿಪರೀತ ಕೊಂಬು ಕೊಂಬುಗಳುಂಟು.
ಇಂಬು ಕಾಲಲ್ಲಿ ಮುಖವು.
ಜಂಬುದ್ವೀಪದ ಬೆಳಗಿನುದಯದಾಹಾರವದಕೆ.
ಸಂಭ್ರಮವ ನುಡಿವ ಕವಿಗಳ ಮುಖವ ಝಳಪಿಸಿತ್ತು
ಶಂಭು ಬಳ್ಳೇಶ್ವರನ ಕೊರಳಹಾರವ ನೋಡಿ ನಗುತ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1376 / ವಚನ ಸಂಖ್ಯೆ-195)

ಪಾರಿಭಾಷಿಕ ಶಬ್ದಗಳ ಅರ್ಥ:
ಚೋದ್ಯ : ಆಶ್ಚರ್ಯ.
ಇಂಬು : ಆಶ್ರಯ, ಅವಕಾಶ, ವಿಸ್ತಾರ, ಸ್ಥಳ.

ಇದು ಆಶ್ಚರ್ಯ ಸೂಚಕ ಬೆಡಗಿನ ವಚನ. ಜಿಂಕೆ ಎನ್ನುವದು ನಮ್ಮ ಮನಸ್ಸಿನ ಚಂಚಲತೆಯ ಅಥವಾ ಮಾಯೆಗೊಳಗಾದ ಚಿತ್ತ ಚಂಚಲತೆಯ ಪ್ರತೀಕವಾಗಿ ಇಲ್ಲಿ ಪ್ರಯೋಗಿಸಲಾಗಿದೆ. “ಹರಿಣಿಯ ಮೃಗವು ಓದು ಬಲ್ಲುದಾ?” ಎನ್ನುವ ಸಾಲುಗಳಲ್ಲಿ ಮಾಯೆಯ ಪ್ರಭಾವಕ್ಕೊಳಗಾದವರು ತಮ್ಮ ಅಂತರಂಗದ ಅರಿವನ್ನು ಕಂಡುಕೊಳ್ಳುವಲ್ಲಿ ತಡಕಾಡುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. “ಚೆಲುವ ಗಿಳಿಯಲ್ಲಿ ವಿಪರೀತ ಕೊಂಬು” ಗಿಳಿ ತನ್ನ ಚೆಲುವಿನ ಅಹಂಕಾರದಲ್ಲಿ ಮಿಂದೆದ್ದ ಪಕ್ಷಿಯಾಗಿ ಕಾಣುತ್ತದೆ. ಕೊಂಬು ಇದು ಅಹಂಕಾರದ ಸಂಕೇತ. ವ್ಯೋಮಮೂರ್ತಿ ಅಲ್ಲಮ ಪ್ರಭುಗಳ ವಚನಗಳಲ್ಲಿ ಈ ಶಬ್ದ ಪ್ರಯೋಗವನ್ನು ಅತ್ಯಂತ ಪ್ರಬುದ್ಧವಾಗಿ ಉಪಯೋಗ ಮಾಡಿದ್ದಾರೆ. “ಇಂಬು ಕಾಲಲ್ಲಿ ಮುಖವು” ಎನ್ನುವಲ್ಲಿ ತಾನು ಆಶ್ರಯ ಪಡೆದ ಸ್ಥಾನದಲ್ಲಿಯೇ ಅಹಂಕಾರ ಮತ್ತು ದರ್ಪವನ್ನು ಪ್ರದರ್ಶಿಸುವ ಮನಸ್ಥಿತಿಯನ್ನು ಸೂಚಿಸುತ್ತದೆ. ಇಂತಹ ಪ್ರಾಣಿ-ಪಕ್ಷಿಗಳು ಬೇಟೆಗಾರನಿಗೆ ಆಹಾರವಾಗುವುದನ್ನು ಯಾರೂ ತಪ್ಪಿಸಲಾರರು ಎನ್ನುವ ಅರ್ಥದಲ್ಲಿ ನಿರೂಪಣೆ ಮಾಡಲಾಗಿದೆ. ಜಿಂಕೆಯ ಚಂಚಲತೆ ಮತ್ತು ಗಿಳಿಯ ಅಹಂಕಾರಗಳ ಥಳುಕು ಬಳುಕು ಪ್ರದರ್ಶಿಸುವುದನ್ನು ಕವಿಗಳು ವಿಡಂಬನಾತ್ಮವಾಗಿ ನೋಡುತ್ತಾರೆ ಎನ್ನುವುದು ಈ ವಚನದ ಸ್ಥೂಲ ಅರ್ಥ ವಿವರಣೆ.

ಆರು ಬಣ್ಣದ ಹಕ್ಕಿ, ತೋರಿದ ಗುರಿಯ ನುಂಗಿ
ಮೀರಿ ನಿಂದುದು ಗಗನ ಮಂಡಲದಲ್ಲಿ.
ಸಾರುತೈದೂದೆ ಹೋಗಿ ಮೀರಿ ಬರಬೇಡಾ ಎಂದು
ಬೇರೆ ಮತ್ತೊಂದು ದಿಕ್ಕ ತೋರುತ್ತದೆ.
ಮೂರುಕೋಣೆಯೊಳಗೆ ಈರೈದು ತಲೆಯುಂಟು,
ನೋಡಿ ಬಂದಾ ಶಿಶು ಬೆಸಗೊಂಬುದು.
ಪ್ರಾಣವಿಲ್ಲದ ಸೇನೆ ಪದ್ಮಸಂಖ್ಯೆಯು ಕೋಟೆದಾಳಿವರಿದುದು
ಎಂಟುಜಾವದೊಳಗೆ.
ಜಾಲಗಾರನ ಕೈಯ ಮಾಣಿಕ್ಯ ಸಿಕ್ಕದೆ ಆಳಿಗೊಂಡಿತ್ತು.
ಜಗವ ಬೇಳುಮಾಡಿ, ಜಾಣ ಕವಿಗಳಿಗೆ ಎದೆ ದಲ್ಲಣ.
ಬಳ್ಳೇಶ್ವರನ ಕನ್ನಡವು ಹೇಳುವಡೆ ಯುಗಸಂಖ್ಯೆ ಶಿವ ಶಿವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1376 / ವಚನ ಸಂಖ್ಯೆ-192)

ಪಾರಿಭಾಷಿಕ ಶಬ್ದಗಳ ಅರ್ಥ:
ಬೇಳು : ಹೋಮದಲ್ಲಿ ಬಲಿಯನ್ನು ಅರ್ಪಿಸು.
ಎಂಟುಜಾವ : ಅಷ್ಟತನು.
ದಲ್ಲಣ : ಎದೆ ನಡುಕ.

ಆರು ಬಣ್ಣದ ಹಕ್ಕಿ, ಮೂರುಕೋಣೆ, ಈರೈದು ತಲೆ, ಪದ್ಮಸಂಖ್ಯೆ, ಎಂಟುಜಾವ ಹೀಗೆ ಬೆಡಗಿನ ಶಬ್ದಗಳನ್ನು ಪ್ರಯೋಗ ಮಾಡಿದ್ದಾರೆ.

“ಆರು ಬಣ್ಣದ ಹಕ್ಕಿ” ಅಂದರೆ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ತುಂಬಿದ ದೇಹ. ಈ ಎಲ್ಲ ಅರಿಷಡ್ವರ್ಗಗಳನ್ನು ಭಕ್ತನು ಮೀರಿ ಶರಣನಾಗುವ ಮಾರ್ಗವನ್ನು ಹಿಡಿಯಬೇಕು. ಇಲ್ಲವಾದರೆ ಶರಣನಾಗುವ ಗುರಿಯನ್ನು ಈ ಅರಿಷಡ್ವರ್ಗಗಳು ನುಂಗಿಬಿಡುತ್ತವೆ. ಒಂದು ದಿಕ್ಕಿನಿಂದ ಅರಿವು ಮೂಡಿದರೆ ಇನ್ನೊಂದು ದಿಕ್ಕಿನಿಂದ ಮಾಯೆಯು ತನ್ನ ದಿಕ್ಕನ್ನು ತೋರುವ ಪ್ರಯತ್ನ ಮಾಡುತ್ತದೆ. ಹೀಗೆ ಗುರಿತಪ್ಪಿ ಹಾರಾಡುವ ಪಕ್ಷಿಗೆ ಅರಿವು ಎನ್ನುವ ಗುರುವನ್ನು ಹಾಗೂ ಕೈಯಲ್ಲಿ ಇಷ್ಟಲಿಂಗವನ್ನಿತ್ತು ಸರಿ ದಾರಿಯನ್ನು ತೋರಿಸುತ್ತದೆ.

“ಮೂರುಕೋಣೆ” ಇದು ಮೂರು ಶರೀರಗಳಾದ ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳನ್ನು ಮತ್ತು ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗವನ್ನು ಪ್ರತಿನಿಧಿಸುತ್ತದೆ. “ಈರೈದು ತಲೆ” ಇದು ಪಂಚೇಂದ್ರಿಯಗಳಾದ ಕಣ್ಣು, ಕಿವಿ, ನಾಲಗೆ, ಮೂಗು. ಚರ್ಮಗಳನ್ನು ಸೂಚಿಸುತ್ತದೆ. ಹೀಗೆ ಪಂಚೇಂದ್ರಿಯಗಳು ಶಿಶುವೆಂಬ ಜೀವವನ್ನು ಆಶ್ರಯಿಸುತ್ತವೆ. ಮುಂದಿನ ಸಾಲಿನಲ್ಲಿ “ಪದ್ಮಸಂಖ್ಯೆ” ಯನ್ನು ಶರಣ ಬಳ್ಳೇಶ ಮಲ್ಲಯ್ಯನವರು ಮಾಡುತ್ತಾರೆ. ಪದ್ಮದ ಕುರಿತು ಅಲ್ಲಮ ಪ್ರಭುಗಳು ಸುಂದರವಾಗಿ ತಮ್ಮ ಒಂದು ವಚನದಲ್ಲಿ ಚಿತ್ರಣ ಮಾಡುತ್ತಾರೆ.

ನಾಭಿಮಂಡಲದೊಳಗೆ ಈರೈದು ಪದ್ಮದಳ,
ಸದಮದ ಗಜಮಸ್ತಕದೊಳಗೆ ತೋರುತ್ತದೆ.
ಅಕಾರ ಉಕಾರ ಮಕಾರ ಮರ್ಮಸ್ಥಾನ ತ್ರಿಕೂಟಸ್ಥಾನದ
ಸಮರಸದ ಸುಖದಲ್ಲಿ ಬೆಳೆದ ಕಂದ ಮೂಲಾದಿಗಳ,
ಹೊಸರಸದ ಅಮೃತವನು ಓಸರಿಸಿ,
ದಣಿಯುಂಡ ತೃಪ್ತಿಯಿಂದ ಸುಖಿಯಾದೆನು ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-157 / ವಚನ ಸಂಖ್ಯೆ-244)

ನಾಭಿಮಂಡಲದಲ್ಲಿ ಹತ್ತುದಳದ ಕಮಲವಿದೆ. ಈ ಮಂಡಲದಿಂದಲೇ ಸಾಧಕನ ಊರ್ಧ್ವಮುಖ ಪಯಣ ಆರಂಭವಾಗುವುದು. ಆತ ಅನಾಹತ, ವಿಶುದ್ಧಿ ಚಕ್ರಗಳನ್ನು ಏರುತ್ತಾ ಊರ್ಧ್ವಚಕ್ರವನ್ನು ತಲುಪುತ್ತಾನೆ. ಅಲ್ಲಿಯ ತ್ರಿಕೂಟ ಸ್ಥಾನದಲ್ಲಿ ಅಕಾರ, ಉಕಾರ ಮತ್ತು ಮಕಾರಗಳೆಂಬು ಸಮಾವಿಷ್ಠಗೊಂಡು ಓಂಕಾರವೆಂಬ ಪ್ರಣವನಾದದ ಶಿವೋಹಂ ನಾದ ಪ್ರಾಪ್ತಿಯಾಗುತ್ತದೆ. ಅದರಿಂದ ಸಾಧಕ ಶರಣನು ಈ ಜೀವರಸದ ಅನುಭಾವವನ್ನು ಸೇವಿಸಿ ಪರಮ ತೃಪ್ತನಾಗಿ ಅನಂತ ಸುಖಿಯಾಗಿತ್ತಾನೆ. ಇದು ಪ್ರಾಣಲಿಂಗಿಯಾಗುವ ಹಂತ. ಇದು ಶರಣ ಬಳ್ಳೇಶ ಮಲ್ಲಯ್ಯನವರು ಉಲ್ಲೇಖಿಸಿದ “ಪದ್ಮಸಂಖ್ಯೆ” ಯ ನಿರೂಪಣೆ.

ಇಂಥ ಪದ್ಮಸಂಖ್ಯೆಯ ಕೋಟೆಯನ್ನು ಅಷ್ಟತನುವಿನ ಮೂಲಕ ದಾಟಿ ನಿಂತ ಶರಣನು ಮಾಯೆಯೆಂಬ ಮೋಹಜಾಲದಲ್ಲಿ ಸಿಲುಕದೆ ಮಾಣಿಕ್ಯವಾಗಿ ಹೊರ ಹೊಮ್ಮಬೇಕು. ಪ್ರಾಣವಿಲ್ಲದ ಸೇನೆ ಅಂದರೆ ದಿನನಿತ್ಯ ಕರಗುವ ನಮ್ಮ ಆಯುಷ್ಯ. ಈ ಸೇನೆ ದಿನ ದಿನವೂ ನಮ್ಮನ್ನು ಕೊನೇಯ ದಿನಗಳತ್ತ ಬೊಟ್ಟು ಮಾಡಿ ತೋರಿಸುತ್ತಾ ಇರುತ್ತದೆ. ಬೇಳು ಎಂದರೆ ಹೋಮಕ್ಕೆ ಅರ್ಪಿಸುವ ಬಲಿ. ಜಗತ್ತನ್ನೇ ಬಲಿ ಪಶುವನ್ನಾಗಿ ಮಾಡುವ ಈ ವಿಷಯವನ್ನು ಹೇಳಲು ಜಾಣ ಕವಿಗಳ ಎದೆ ನಡುಗುತ್ತದೆ. ಅಂಥ ಕನ್ನಡ ಭಾಷೆಯನ್ನು ಬಳಸಿದರೆ ಅಥವಾ ಸತ್ಯವನ್ನು ತಿಳಿಸಿದರೆ ಅರ್ಥ ಮಾಡಿಕೊಳ್ಳಲು ಯುಗ ಯುಗಗಳೇ ಬೇಕಾಗಬಹುದು ಶಿವನ ಸಾಕ್ಷಿಯಾಗಿ ಎನ್ನುತ್ತಾರೆ ಶರಣ ಬಳ್ಳೇಶ ಮಲ್ಲಯ್ಯನವರು.

ಅಂತರಂಗ ಮತ್ತು ಬಹಿರಂಗದ ಸರ್ವತೋಮುಖ ವಿಕಾಸಕ್ಕಾಗಿ ಮಾನಸಿಕ ಸ್ವಾಸ್ಥ್ಯ ಮುಖ್ಯ ಎನ್ನುತ್ತಾರೆ ಶರಣ ಬಳ್ಳೇಶ ಮಲ್ಲಯ್ಯನವರು. ಶಿವಜ್ಞಾನವನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳುವ ಪಥವನ್ನು, ಇಷ್ಟಲಿಂಗದ ಅರಿವನ್ನು ಸಂಪಾದಿಸಿಕೊಳ್ಳುವ ಸಾತ್ವಿಕ ಪರಿಯನ್ನು ಶರಣ ಬಳ್ಳೇಶ ಮಲ್ಲಯ್ಯನವರು ತಮ್ಮ ವಚನಗಳ ಮೂಲಕ ಪ್ರತಿಪಾದಿಸುತ್ತಾರೆ.

ಕಲ್ಯಾಣ ಕ್ರಾಂತಿಯ ನಂತರ ವಚನ ಕಟ್ಟುಗಳ ರಕ್ಷಣೆಗಾಗಿ ವೀರಗಂಟಿ ಶರಣ ಮಡಿವಾಳ ಮಾಚಿದೇವರ ಜೊತೆಗೆ ಇದ್ದು ಅವರು ಲಿಂಗೈಕ್ಯರಾದ ನಂತರ ನರಗುಂದ ತಾಲೂಕಿನ ಕುಳಗೇರಿಯ ಮೂಲಕ ಇಂದಿನ ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆಳ್ಳೇರಿ ಗ್ರಾಮಕ್ಕೆ ಬಂದು ನೆಲೆಸಿ ಅಲ್ಲಿಯೇ ಲಿಂಗೈಕ್ಯರಾದರೆಂದು ತಿಳಿದು ಬರುತ್ತದೆ. ಬೆಳ್ಳೇರಿಯಲ್ಲಿರುವ ಬಳ್ಳಾಲಲಿಂಗೇಶ್ವರ ದೇವಸ್ಥಾನದಲ್ಲಿರುವ ಗದ್ದುಗೆ ಅವರ ಸಮಾಧಿ ಸ್ಥಳವೆಂದು ಗ್ರಾಮದ ಹಿರಿಯರ ಅಂಬೋಣ. ಆದರೆ ಇದಕ್ಕೆ ಯಾವ ಸಾಕ್ಷಿ ಪುರಾವೆಗಳು ಇಂದಿಗೂ ಲಭ್ಯವಾಗಿಲ್ಲ. ಕೆಲವರು ತಾನು ಹೇಳಿದ್ದೇ ಸತ್ಯವೆಂದು ಡಂಗೂರ ಸಾರತಾ ಇದಾರೆ. ಅದು ಅವರವರ ಸನ್ಮತಿಗೆ ಬಿಟ್ಟಿದ್ದು. Let us assume this is the place where Sharana Ballesha Mallayya was there until his last breath.

ಶರಣ ಬಳ್ಳೇಶ ಮಲ್ಲಯ್ಯನವರ ಈ ಲೇಖನ ಬರೆಯುವುದಕ್ಕೆ ಸಾಕಷ್ಟು ವಿವರಣೆ, ಸಲಹೆ-ಸೂಚನೆ ಮತ್ತು ಗ್ರಂಥಗಳ ಸಹಾಯ ನೀಡಿದ ಕಲಬುರ್ಗಿಯ ಡಾ. ಜಯಶ್ರೀ ದಂಡೆಯವರಿಗೆ ಹಾಗೂ ಗಂಗಾವತಿಯ ಮಿತ್ರರಾದ ಡಾ. ಜಾಜಿ ದೇವೇಂದ್ರಪ್ಪನವರಿಗೂ ನನ್ನ ಕೃತಜ್ಞಾಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.

ವಚನಗಳ ಅಧ್ಯಯನವೆಂದರೆ ಅದು ಒಂದು ಮಾನವನ ಸಾಂಸ್ಕೃತಿಕ ಅಧ್ಯಯನ. ಒಂದು ಕಡೆ ನಾಗಾಲೋಟದಲ್ಲಿ ಸಾಗುತ್ತಿರುವ ನವನಾಗರೀಕತೆಯ ಕೋಲಾಹಲ ಮತ್ತೊಂದು ಕಡೆ ಜಾಗತೀಕರಣದ ದಟ್ಟ ಪ್ರಭಾವದಿಂದ ಇಂದಿನ ಸಮಾಜ ಸಾಂಸ್ಕೃತಿಕವಾಗಿ ಕಲುಷಿತಗೊಳ್ಳುತ್ತಾ ನಡೆದಿದೆ. ಇಂತಹ ಅಪಸವ್ಯಗಳ ನಡುವೆಯೂ ನಮ್ಮ ಮೂಲ ಸಂಸ್ಕೃತಿಯ ಬೇರುಗಳನ್ನು ತಡಕಾಡುವ, ಅದರ ವಿಚಾರಗಳನ್ನು ದಾಖಲಿಸುವ ಪ್ರಯತ್ನಗಳನ್ನು ಮಾಡುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಇಂತಹ ಪ್ರಯತ್ನಗಳು ಬಹಳಷ್ಟು ನಡೆಯುವ ಅಗತ್ಯತೆ ಇದೆ ಅಂತ ಹೇಳತಾ ಈ ಲೇಖನಕ್ಕೆ ವಿರಾಮವನ್ನು ಹೇಳುತ್ತೇನೆ.

ಶರಣು ಶರಣಾರ್ಥಿಗಳು.

ಸಂಗ್ರಹ ಮತ್ತು ಲೇಖನ:
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್‌ ನಂ : 9741 357 132
ಈ-ಮೇಲ್‌ : vijikammar@gmail.com

ಸಹಾಯಕ ಗ್ರಂಥಗಳು :
ಶರಣ ಸೌರಭ : ಶ್ರೀ. ಚ. ವೇದಮೂರ್ತಿ
ಶರಣ ದರ್ಶನ : ಸಂ. ಡಾ. ಎಮ್. ನಾಗರಾಜ.
ತಲೆದಂಡ : ಡಾ. ಗಿರೀಶ ಕಾರ್ನಾಡ.
ಚರ್ಮವಾದ್ಯಗಳು : ಡಾ. ವೀರೇಶ ಬಡಿಗೇರ.
ಬಸವೇಶ್ವರರ ಸಮಕಾಲೀನರು : ಬಸವ ಸಮಿತಿ ಬೆಂಗಳೂರು.
ಕಲ್ಯಾಣದ ಶರಣರು : ಡಾ. ವೀರಣ್ಣ ದಂಡೆ.
ಶರಣ ಸಾಹಿತ್ಯ-ಸಂಸ್ಕೃತಿ ಅಧ್ಯಯನ : ಸಂ. ಡಾ. ಎಚ್. ಟಿ. ಶೈಲಜ.
ಅಮರಗಣಂಗಳ ಕಾಯಕ ಚಿತ್ರ ದರ್ಶನ : ಶ್ರೀ. ಶಾಮಲಿಂಗ ಜವಳಗಿ.
ಬಸವ ಯುಗದ ವಚನ ಮಹಾಸಂಪುಟ : ಡಾ. ಎಮ್. ಎಮ್. ಕಲಬುರ್ಗಿ.
ಜನಪದ ವಸ್ತುಕೋಶ : ಜನಪದ ವಿಶ್ವವಿದ್ಯಾಲಯ, ಹಾವೇರಿ.
Bellary Dist Gazetteer1972_BALLESHA MALLAYYA

Loading

Leave a Reply