ಅನ್ನಭೇದ-ಪಂಕ್ತಿಭೇದದ ಕ್ರೌರ್ಯಾಸಹ್ಯಕ್ಕೆ ಸಮಾನತೆಯ ಸೂತ್ರ / ಡಾ. ಬಸವರಾಜ ಸಾದರ, ಬೆಂಗಳೂರು.

ಉಚ್ಚವರ್ಣದವರ ಊಟದ ಪಂಕ್ತಿಯಲ್ಲಿ ಕುಳಿತ ಶೂದ್ರ ವ್ಯಕ್ತಿಗಳನ್ನು ಅಲ್ಲಿಂದ ಎಬ್ಬಿಸಿ ಹೊರಗಟ್ಟಿದ ಹಲವಾರು ಘಟನೆಗಳು ನಮ್ಮಲ್ಲಿ ವರದಿಯಾಗಿದೆ. ಸೆಕ್ಯೂಲರ್ ಪ್ರಜಾಪ್ರಭುತ್ವದ ಕಾನೂನುಗಳನ್ನು ತುಳಿದಿಕ್ಕಿ, ಜಾತ್ಯಹಂಕಾರವನ್ನೇ ಮೆರೆಸುವ ವರ್ಣವ್ಯವಸ್ಥೆ ಜೀವಂತವಿರುವಲ್ಲಿ ಇವು ಮೊದಲನೆಯ ಘಟನೆಗಳೇನೂ ಅಲ್ಲ; ಕೊನೆಯವೂ ಆಗಲಿಕ್ಕಿಲ್ಲ. ಪಂಕ್ತಿ ಮತ್ತು ಊಟಕ್ಕೆ ಮಾತ್ರ ಸೀಮಿತವಾಗದ ಹಾಗೂ ಇಡೀ ಶೂದ್ರವರ್ಗವನ್ನು ಹಲವು ಬಗೆಗಳಲ್ಲಿ ಶೋಷಿಸುತ್ತ ಬಂದಿರುವ ಈ ಮಾನವ ಕ್ರೌರ್ಯವು ಪಶು-ಪಕ್ಷಿ ಸಂಕುಲದಲ್ಲಿಯೂ ಇಲ್ಲ. ತಳವರ್ಗಗಳ ಅಸ್ತಿತ್ವ ಮತ್ತು ಅಸ್ಮಿತೆಯನ್ನೇ ಮಣ್ಣು ಮಾಡುತ್ತಿರುವ ಇಂಥ ಅಸ್ಪೃಶ್ಯತೆಯಾಚರಣೆ ಭರತ ಭೂಮಿಗಂಟಿದ ಮಹಾ ಕೊಳೆ. ಅನ್ಯಾಯ-ಅಸಮಾನತೆ-ಅಸ್ಪೃಶ್ಯತೆಯನ್ನು ನಿಯಂತ್ರಿಸಲೆಂದೇ ಕಠಿಣ ಕಾನೂನುಗಳು ಜಾರಿಯಿರುವ ಹಾಗೂ ಮಾನವ ಹಕ್ಕುಗಳೂ ಕಾರ್ಯಪ್ರವೃತ್ತವಾಗಿರುವ ಇಪ್ಪತ್ತೊಂದನೆಯ ಶತಮಾನದ ಈ ಕಾಲಘಟ್ಟದಲ್ಲಿಯೂ ಅಂಥ ಕೊಳೆಯನ್ನು ತೊಳೆಯಲು ಆಗಿಲ್ಲವೆಂದರೆ, ಜಾತಿ ಸಮಾನತೆಯನ್ನು ಕುರಿತು ಆಡುತ್ತಿರುವ ಎಲ್ಲ ಮತ್ತು ಎಲ್ಲರ ಮಾತುಗಳೂ ಕೇವಲ ಬುರುಡೆಯೆನ್ನದೆ ಬೇರೆ ದಾರಿಯಿಲ್ಲ.

ತಮ್ಮ ಪಂಕ್ತಿಯಲ್ಲಿ ಕುಳಿತ ಶೂದ್ರನನ್ನು ಹೊರ ಹಾಕಿದ್ದು ಮೇಲ್ವರ್ಣದವರ ದುರಾಚಾರದ ಒಂದು ಉದಾಹರಣೆಯಾದರೆ, ಇದಕ್ಕೆ ಪೂರಕ ದುಷ್ಕೃತ್ಯವೆಂಬಂತೆ ಒಂದು ಪ್ರತ್ಯೇಕ ಪಂಕ್ತಿಯಲ್ಲಿ ಕುಳಿತ ಉಚ್ಚಜಾತಿಯವರಿಗೆ ಪಾಯಸ, ಜಿಲೇಬಿ, ತುಪ್ಪ, ಹಪ್ಪಳ, ಹೋಳಿಗೆ, ಮೃಷ್ಠಾನ್ನ, ಮೊಸರು, ಮಜ್ಜಿಗೆ ಮೊದಲಾದ ಪಂಚ ಪಕ್ವಾನ್ನಗಳನ್ನು ಬಡಿಸಿ, ಮತ್ತೊಂದು ಪಂಕ್ತಿಯಲ್ಲಿ ಕುಳಿತ ಇತರೇ ಶೂದ್ರ ಜಾತಿಯವರಿಗೆ ಅನ್ನ-ಗೊಡ್ಡು ಸಾರು ಹಾಕುವ ತರತಮದ ಉದಾಹರಣೆಗಳೂ ನಮ್ಮಲ್ಲಿ ಬೇಕಾದಷ್ಟಿವೆ. ಅನ್ನದಾನದ ಹೆಸರಲ್ಲೂ ನಡೆಯುವ ಇಂಥ ಭೇದ ಪ್ರವೃತ್ತಿಯಾಚರಣೆಗಳೇ ಇಂದಿಗೂ ಸಾಮಾಜಿಕ ಅಸಮಾನತೆಯನ್ನು ಜೀವಂತವಾಗಿಟ್ಟಿವೆ. ಇವುಗಳೊಂದಿಗೆ ಮೂಲಭೂತವಾದಿ ಆಚರಣೆಗಳೂ ತಳುಕು ಹಾಕಿಕೊಂಡಿರುವುದು ಇನ್ನೂ ದೊಡ್ಡ ದುರಂತ. ಈ ಬಗೆಯ ಕ್ರೌರ್ಯಗಳಿಂದಾಗಿ ಸಹಸ್ರಾರು ವರ್ಷಗಳಿಂದ ಶೂದ್ರ ಮತ್ತು ಕೆಳವರ್ಗ-ವರ್ಣದ ಜನರು ಎಲ್ಲ ಕ್ಷೇತ್ರಗಳಲ್ಲೂ ನಿರಂತರ ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ.

ಇಂಥ ಅಸಮಾನತೆಯನ್ನು ಕಿತ್ತೆಸೆಯಲೆಂದೇ 12 ನೇಯ ಶತಮಾನದಲ್ಲಿ ಶರಣರು ಕಲ್ಯಾಣದಲ್ಲಿ ಬಹುದೊಡ್ಡ ಕ್ರಾಂತಿ ನಡೆಸಿದರು. ಅವರ ಆ ಸಂಘಟಿತ ಕ್ರಾಂತಿಯನ್ನೂ ವಿಫಲಗೊಳಿಸಿದ ಜಾತ್ಯಸ್ಥರ ಅಹಂಕಾರ ಇಂದಿಗೂ ತನ್ನ ಕರಾಳ ಮುಖಗಳ ಪ್ರದರ್ಶನ ಮಾಡುತ್ತಿರುವುದು ರಾಜಕೀಯದ ವೈಫಲ್ಯಕ್ಕೂ ಸಾಕ್ಷಿಯಾಗಿದೆ. ಮನುಷ್ಯರೇ ಮನುಷ್ಯರನ್ನು ಶೋಷಿಸುವ ಇಂಥ ತರತಮ ಹಾಗೂ ಅಮಾನವೀಯ ಶೋಷಣೆಗಳ ವಿರುದ್ಧ ಆಗಲೇ ದನಿ ಎತ್ತಿದ್ದು ಶರಣ ಕ್ರಾಂತಿಯ ಬಹುದೊಡ್ಡ ಸಾಧನೆ. ಆ ಕ್ರಾಂತಿ ಸಂಪೂರ್ಣ ಸಫಲವಾಗಿರಲಿಕ್ಕಿಲ್ಲ, ಆದರೆ ಪ್ರತಿಭಟನೆಯ ಒಂದು ಹೊಸ ಅಧ್ಯಾಯವನ್ನು ನಿರ್ಮಿಸಿದ್ದಂತೂ ವಾಸ್ತವ. ಶರಣರ ಆ ಕ್ರಾಂತಿಯ ಮಾರ್ಗದಲ್ಲಿ ದಲಿತರೊಂದಿಗೆ ಕುಳಿತು ಸಹಭೋಜನ ಮಾಡಿದ್ದು ಒಂದು ಮಹತ್ವದ ಹೆಜ್ಜೆ. ಸಹ ಭೋಜನವಷ್ಟೇ ಅಲ್ಲ, ಸಹ ಭೋಜನದಲ್ಲಿ ಕಾಯ್ದುಕೊಳ್ಳಬೇಕಾದ ಅನ್ನ ಸಮಾನತೆಯ ನೀತಿಯನ್ನೂ ಅವರು ತೋರಿಸಿಕೊಟ್ಟದ್ದು ಇನ್ನೂ ವಿಶೇಷ. ಇದು ಮನಷ್ಯರೆಲ್ಲರನ್ನೂ ಸಮಾನ ನೆಲೆಯಲ್ಲಿ ಕಾಣುವ ಉನ್ನತ ಸಾಮಾಜಿಕ ನೀತಿ. ಶರಣರ ಇಂಥ ವಿನೂತನ ಕ್ರಮವನ್ನು ದೃಢೀಕರಿಸುವ ಏಲೇಶ್ವರ ಕೇತಯ್ಯನ ಒಂದು ಅಪರೂಪದ ವಚನ ಇಲ್ಲಿದೆ.  

ಒಡೆಯರು ಭಕ್ತರಿಗೆ ಸಲುವ ಸಹಪಂಕ್ತಿಯಲ್ಲಿ,
ಗುರು ಅರಸೆಂದು, ತನ್ನ ಪರಿಸ್ಪಂದವೆಂದು
ರಸದ್ರವ್ಯವ ಎಸಕದಿಂದ ಇಕ್ಕಿದಡೆ,
ಅದು ತಾನರಿದು ಕೊಂಡಡೆ ಕಿಸುಕುಳದ ಪಾಕುಳ.
ಅಲ್ಪ ಜಿಹ್ವೆಲಂಪಟಕ್ಕೆ ಸಿಕ್ಕಿ ಸಾವ ಮತ್ಸ್ಯದಂತೆಯಾಗದೆ-
ಈ ಗುಣವ ನಿಶ್ಚಯಿಸಿದಲ್ಲಿ ಏಲೇಶ್ವರಲಿಂಗವನರಿಯಬಲ್ಲ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-739/ವಚನ ಸಂಖ್ಯೆ-1666)
ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ಪರಿಸ್ಪಂದ: ಪರಿವಾರ.
ರಸದ್ರವ್ಯ: ವರ್ಣಿಸಲಸಾಧ್ಯವಾದ ಸ್ವಾದಿಷ್ಠ ಭೋಜನ.
ಎಸಕ: ಕಾರ್ಯ, ಅಧಿಕ್ಯ.
ಕಿಸುಕುಳ: ಹೊಲಸು, ಮಲ, ಹೇಸಿಗೆ, ಕೊಳೆ, ಕ್ಷುದ್ರ, ಹೊಲಸಿನ ಗುಂಡಿ.
ಪಾಕುಳ: ಹೊಲಸು, ತೊಂದರೆ, ಪಾಚಿ, ಕೆಸರು.

ವಚನದ ಮೊದಲ ಪಂಕ್ತಿಯಲ್ಲಿರುವ “ಸಹಪಂಕ್ತಿ” ಭೋಜನದ ಪ್ರಸ್ತಾಪ ತುಂಬ ಮಹತ್ವದ ಅಂಶವಾಗಿ ಗಮನ ಸೆಳೆಯುತ್ತದೆ. ಶರಣರು ನಿಯಮಿತವಾಗಿ ಅನುಸರಿಸುತ್ತಿದ್ದ ಸಹಪಂಕ್ತಿಯ ಅಗತ್ಯ ಮತ್ತು ಮಹತ್ವವನ್ನೂ ಇದು ಸೂಚ್ಯವಾಗಿ ಸಾರುತ್ತದೆ. ಅಷ್ಟೇ ಅಲ್ಲ; ಅವರು ಸದಾ ಸಹಪಂಕ್ತಿಯಲ್ಲಿ ಕುಳಿತೇ ಊಟ ಮಾಡುತ್ತಿದ್ದರೆಂಬ ಸತ್ಯವೂ ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಹೀಗೆ ಆರಂಭವಾಗುವ ಪ್ರಸ್ತುತ ವಚನದಲ್ಲಿ ಆ ಸಹಪಂಕ್ತಿಯಲ್ಲಿ ಯರ‍್ಯಾರು ಕುಳಿತುಕೊಳ್ಳುತ್ತಿದ್ದರೆಂಬುದನ್ನು ಖಚಿತವಾಗಿ ಹೇಳುತ್ತದೆ. ಅದರಲ್ಲಿ ಮೊದಲ ಸ್ಥಾನ ಒಡೆಯರದು. ಇಲ್ಲಿ ಒಡೆಯರೆಂದರೆ ರಾಜರು, ಶ್ರೀಮಂತರು, ದೇವ ಸ್ವರೂಪಿಗಳೆಂದು ಕರೆಯಲ್ಪಡುತ್ತಿದ್ದವರು. ಅದರಲ್ಲಿ ಜಂಗಮರು ಮತ್ತು ಗುರು ವರ್ಗದವರೂ ಸೇರ್ಪಡೆಯಾಗುತ್ತಿದ್ದರು. ಇಂಥ ದೊಡ್ಡವರ ಜೊತೆಯಲ್ಲಿಯೇ ಭಕ್ತರು ಮತ್ತು ಜನ ಸಾಮಾನ್ಯರೂ ಸಹಪಂಕ್ತಿಯ ಊಟಕ್ಕೆ ಕುಳಿತುಕೊಳ್ಳುತ್ತಿದ್ದರೆಂಬುದು ಮುಖ್ಯವಾದುದು. ಇಲ್ಲಿಯೇ ಖಚಿತವಾಗುತ್ತದೆ ಶರಣರು ಆಚರಿಸುತ್ತಿದ್ದ ಸರ್ವ ಸಮಾನತೆಯ ತತ್ವ.

ಇಂಥ ಸಹಪಂಕ್ತಿಯಲ್ಲಿ “ಎಲ್ಲರೂ” ಸರಿ ಸಮನಾಗಿ ಕುಳಿತು ಊಟ ಮಾಡುವಾಗ ಅವರೆಲ್ಲರಿಗೂ ಊಟ ನೀಡುವ ವ್ಯಕ್ತಿಯು, ಇವರು ದೇವರು, ಇವರು ಭಕ್ತರು, ಇವರು ಜಂಗಮರು, ಇವರು ಗುರು, ಈತ ಅರಸ, ಇವರು ನನ್ನ ಸಂಬಂಧಿಕರು ಎಂದು ಭಾವಿಸಿ, ಅದೇ ತರತಮದ ಭಾವನೆಯಿಂದ ಅವರವರ ಅಂತಸ್ತುಗಳಿಗೆ ಅನುಗುಣವಾಗಿ ರಸಪದಾರ್ಥಗಳನ್ನು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ನೀಡಿದರೆ ಅದು ಅಸಹ್ಯ, ಅಕ್ರಮ ಎನ್ನುತ್ತಾನೆ ಏಲೇಶ್ವರ ಕೇತಯ್ಯ. ಊಟ ಬಡಿಸುವವನು ಹೀಗೆ ಸಹಪಂಕ್ತಿಯಲ್ಲಿರುವ ಕೆಲವರಿಗೆ ಮಾತ್ರ ಅತಿಯಾದ ಮಮತೆಯಿಂದ ಹೆಚ್ಚು ಪದಾರ್ಥಗಳನ್ನು ನೀಡಿದಾಗ, ಸಹಪಂಕ್ತಿಯಲ್ಲಿ ಕುಳಿತವರು ಅದನ್ನು ಅರಿತೂ ಅರಿತೂ ಸುಮ್ಮನೇ ತಿಂದುಬಿಟ್ಟರೆ ಅದು (ಹೊಲಸು) ಹೇಸಿಗೆಯನ್ನು ತಿಂದಷ್ಟೇ ತುಚ್ಛ ಕೆಲಸ ಎಂಬುದು ಶರಣ ಏಲೇಶ್ವರ ಕೇತಯ್ಯನವರ ಖಚಿತ ಅಭಿಮತ. ಈ ಕೃತ್ಯವು ನಾಲಿಗೆಯ ರುಚಿಗಾಗಿ, ಗಾಳಕ್ಕೆ ಸಿಕ್ಕಿಸಿದ ಹುಳವನ್ನು ತಿನ್ನಲು ಹೋಗುವ ಮೀನವು, ತಾನೇ ಆ ಗಾಳದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸ್ಥಿತಿಯಂತೆ ಆಗುತ್ತದೆ ಎನ್ನುತ್ತಾರೆ. ಹಾಗೆ ಮಾಡುವುದು ಸಾಮಾಜಿಕವಾಗಿ ಮಹಾ ಪಾಪವೆಂಬುದೇ ಇಲ್ಲಿರುವ ಅಭಿಪ್ರಾಯ. ಇಂಥ ತರತಮದ ಹಾಗೂ ಭೇದ-ಭಾವದ ಕೆಟ್ಟ ಪರಿಣಾಮಗಳನ್ನು ಅರಿತು, ಅವುಗಳಿಗೆ ತುತ್ತಾಗದೆ, ಸರ್ವರೂ ಸಮಾನರೆಂಬ ಭಾವದಿಂದ ಎಲ್ಲರೂ ಒಂದೇ ತೆರನಾದ ಊಟ ಮಾಡಬೇಕೆಂಬುದೇ ಇಲ್ಲಿರುವ ಮುಖ್ಯ ಅಪೇಕ್ಷೆ. ಈ ಸತ್ಯವನ್ನರಿತು ಅದರಂತೆ ಆಚರಿಸುವುದು ದೇವರಿಗೂ ಪ್ರೀತಿಯಾಗುವ ಕೆಲಸ. ದೇವರಿಗೆ ಪ್ರಿಯವಾದದ್ದು ಇಡೀ ಸಮಾಜಕ್ಕೂ ಪ್ರಿಯವಲ್ಲವೆ?

ಮನುಷ್ಯನೇ ಆದ ಶೂದ್ರನನ್ನು ಉಚ್ಚವರ್ಣದ ಕೆಲವರು ತಮ್ಮ ಊಟದ ಪಂಕ್ತಿಯಿಂದ ಹೊರದಬ್ಬಿದ ಚಿತ್ರಣವನ್ನು ಮತ್ತೊಮ್ಮೆ ಕಣ್ಮುಂದೆ ತಂದುಕೊಂಡರೆ, ಶರಣರು ತೋರಿಸಿದ ಸರ್ವಸಮಾನತೆಯ ದಾರಿಗೆ ಉಚ್ಚವರ್ಣೀಯರು ಮುಳ್ಳು ನೆಡುತ್ತಿರುವುದು ಸ್ಪಷ್ಟವಾಗುತ್ತದೆ. ಯಾಕೆ ಶೂದ್ರರಿಗೆ ಈ ಅವಮಾನ? ಅವರೇಕೆ ಅಸ್ಪೃಶ್ಯರಾಗಬೇಕು? ಇಂಥ ಅಸ್ಪೃಶ್ಯರು ಮತ್ತು ಶೂದ್ರರೇ ಅಲ್ಲವೇ ಅನ್ನ ಬೆಳೆದುಕೊಡುವ ಶ್ರಮಜೀವಿಗಳು? ಅನ್ನ ಬೆಳೆದು ಕೊಡುವಾಗ ಕಾಡದ ಶೂದ್ರತ್ವವು ಮೇಲ್ವರ್ಣದವರ ಊಟದ ಪಂಕ್ತಿಯಲ್ಲಿ ಮಾತ್ರ ಒಮ್ಮೆಲೇ ಹೇಗೆ ಜಾಗೃತವಾಗುತ್ತದೆ? ಮೈಲಿಗೆಯಾಗಿ ಹೇಗೆ ಕಾಡುತ್ತದೆ? ಇದೇ ಸೋಜಿಗ! ತರ್ಕ ಮತ್ತು ವೈಚಾರಿಕತೆಗಳೇ ಇಲ್ಲದ ಈ ಬಗೆಯ ಅಮಾನವೀಯ ನಡೆ ಇತಿಹಾಸ ಕಾಲದಿಂದಲೂ ಚಾಲ್ತಿಯಲ್ಲಿರುವುದು ಮನುಕುಲವೇ ನಾಚಿಕೆ ಪಡುವಂಥದ್ದು. ಇದನ್ನೇ ಶರಣರು ಪ್ರಶ್ನಿಸಿದರು, ಪ್ರತಿಭಟಿಸಿದರು, ನಿರಾಕರಿಸಿದರು. ಇಷ್ಟಕ್ಕೇ ನಿಲ್ಲದೇ ಕೀಳು ಕುಲದವರೆಂದು ಊರಾಚೆಗೆ ಇಡಲ್ಪಟ್ಟಿದ್ದ ಶೂದ್ರರ ಮನೆಯಲ್ಲಿ, ಅವರ ಸರಿಸಮಾನ ನೆಲೆಯಲ್ಲಿ ಕುಳಿತು ಊಟ ಮಾಡಿ ತೋರಿಸಿದರು. ಬಸವಣ್ಣನವರೇ ಮುಂದಾಗಿ ಮಾಡಿ ತೋರಿಸಿದ ಈ ಕಾರ್ಯವು ಈಗಿನ ರಾಜಕಾರಣಿಗಳ ದಲಿತ ಕೇರಿಗಳ ವಾಸ್ತವ್ಯದ ನಾಟಕದಂತೆ ಕೇವಲ ಪ್ರದರ್ಶನದ್ದಾಗಿರಲಿಲ್ಲ; ಉಚ್ಚಜಾತಿಯವರ ಅಹಂಕಾರವನ್ನು ಇಳಿಸುವ ಗುರಿಯದಾಗಿತ್ತು. ಜೊತೆಗೆ ಶೂದ್ರ ವರ್ಗದ ಮನುಷ್ಯರಲ್ಲಿ ಮನೆ ಮಾಡಿದ್ದ ಕೀಳರಿಮೆಯನ್ನು ದೂರ ಮಾಡಿ ಅವರೂ ತಮ್ಮ ಮನುಷ್ಯಾಸ್ಮಿತೆಯನ್ನು ಗುರುತಿಸಿಕೊಳ್ಳಲು ನಿರ್ಮಿಸಿದ ಪರ್ಯಾಯ ಮಾರ್ಗವಾಗಿತ್ತು ಕೂಡ. ಈ ಹಿನ್ನೆಲೆಯಲ್ಲಿ ಗಮನಿಸುವಾಗ ಸಹ ಪಂಕ್ತಿಭೋಜನದ ಸಂದರ್ಭದಲ್ಲಿ ಅನುಸರಿಸಬೇಕಾದ ಸರ್ವಸಮಾನತೆಯ ನೀತಿ ಸೂತ್ರಗಳನ್ನು ಪ್ರತಿಪಾದಿಸಿ, ಅವುಗಳಂತೆ ನಡೆಯಲು ಸೂಚಿಸುವ ಶರಣ ಏಲೇಶ್ವರ ಕೇತಯ್ಯನವರ ಈ ವಚನ ಬಹು ದೊಡ್ಡ ಕ್ರಾಂತಿಯ ಮಾರ್ಗವನ್ನೇ ತೆರೆದು ತೋರಿಸುತ್ತದೆ. ಅದು ಮನುಷ್ಯ ಸಮಾನತೆಯ ನೀತಿ ಸೂತ್ರಗಳನ್ನು ಸ್ಪಷ್ಟವಾಗಿ ಮಂಡಿಸುತ್ತದೆಯಷ್ಟೇ ಅಲ್ಲ; ಅವುಗಳನ್ನು ಮೀರಿದರೆ ಆಗುವ ಕೆಟ್ಟ ಮತ್ತು ಅಸಹ್ಯ ಪರಿಣಾಮಗಳನ್ನೂ ಎತ್ತಿ ಹೇಳುತ್ತದೆ.

ಸಮುದಾಯದ ಎಲ್ಲರೂ ಸಹಪಂಕ್ತಿಯಲ್ಲಿ ಸಮಾನರಾಗಿ ಕುಳಿತು ಊಟ ಮಾಡುವುದನ್ನು ಅಪೇಕ್ಷಿಸುವ ಮತ್ತು ಹಾಗೆ ಕುಳಿತವರಲ್ಲಿ, ಅವರವರ ಸ್ಥಾನಮಾನಗಳನ್ನಾಧರಿಸಿ ಅನ್ನ ವಿತರಣೆಯಲ್ಲಿ ತರತಮಗಳನ್ನು ಮಾಡಬಾರದೆಂಬ ನೀತಿಯನ್ನು ಸಾರುವ ಶರಣ ಏಲೇಶ್ವರ ಕೇತಯ್ಯನವರ ಈ ವಚನ ಜಾತಿಸಮತೆ ಸಾಧಿಸುವ ಹಿನ್ನೆಲೆಯಲ್ಲಿ ಮಹತ್ವದ ಚಾರಿತ್ರಿಕ ದಾಖಲೆಯಾಗುತ್ತದೆ. ಈಗಲೂ ಸಹಪಂಕ್ತಿಭೋಜನದ ಸಂದರ್ಭದಲ್ಲಿ ಉಚ್ಚವರ್ಣೀಯರು ಆಚರಿಸುತ್ತಿರುವ ಅಸ್ಪೃಶ್ಯತೆಗೆ, ತರತಮಗಳಿಗೆ ಮತ್ತು ತತ್ಸಂಬಂಧಿ ಘರ್ಷಣೆಗಳಿಗೆ ಶರಣರು ಸೂಚಿಸಿರುವ ಈ ದಾರಿಯೇ ಅಂತಿಮ ಪರಿಹಾರ. ಇದನ್ನು ಪಂಕ್ತಿಭೇದ ಮತ್ತು ಅನ್ನಭೇದ ಮಾಡುವವರು ಅರಿತು, ಅನುಸರಿಸಬೇಕು. ಅದೇ ಮಾನವೀಯತೆ ಮತ್ತು ಸರ್ವಸಮಾನತೆಗೆ ದಾರಿ. ಸಾಮಾಜಿಕ ಸಂಘರ್ಷಗಳ ಅಂತ್ಯಕ್ಕೂ ಅದೇ ಪರಿಹಾರಪಥ.                                  

ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
#303, ಎಸ್. ‌ ಎಲ್. ‌ ವಿ. ತೇಜಸ್‌, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್‌ ಸಂ. +91 98869 85847

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply