ಅಪ್ಪನ ಹೆಸರಿನ ಮಗ ಬಸವರಾಜ | ಡಾ. ಬಸವರಾಜ ಸಾದರ, ಬೆಂಗಳೂರು.

ಇಂದು ಅಪ್ಪಂದಿರ ದಿನವಂತೆ!!! ಇಂಥ ಯಾವ ದಿನಗಳ ತಳಬುಡಗಳೂ ಗೊತ್ತಿರದ ನನ್ನ ಅಪ್ಪನಂಥ ನಿರಕ್ಷರಿ. ತನ್ನ ಕುಟುಂಬದ ಸದಸ್ಯರ ತುತ್ತಿನ‌ ಚೀಲ ತುಂಬಿಸಲು ಹೆಣಗಾಡುತ್ತಿದ್ದ ದಿನಗಳು ನೆನಪಾಗಿ ಹೃದಯ ಕಲಕುತ್ತದೆ. ಶಿಕ್ಷಣದ ಖರ್ಚಿಗೆ ಕೊಡಲು ಹಣವಿಲ್ಲದೆ ತನ್ನ‌ ಮಗ ಕಲಿಯಲು ಅದು ಹೇಗೆ ಹಣ ಹೊಂದಿಸುತ್ತಿರಬಹುದು? ಎಂಬ ಕಲ್ಪನೆಯೂ ಇಲ್ಲದಿರುವಾಗ ಅದೊಂದು ದಿನ‌ ಧಾರವಾಡಕ್ಕೆ ಬಂದಾಗ ನಾನು‌ ಸಪ್ತಾಪುರದ ಕೆಲವು ಓಣಿಗಳಲ್ಲಿ ಮನೆ ಮನೆಗೆ ತಿರುತಿ ರುಗಿ ನಾನು ಪೇಪರ್ ಹಾಕುತ್ತಿದ್ದುದನ್ನು ನೋಡಿ “ಬಾ” ಎಂದು ಹೃದಯ ಬಿರಿವಂತೆ ಅತ್ತಿದ್ದು ನೆನಪಾದರೆ ಕರುಳು ಚುರ್ ಎನ್ನುತ್ತದೆ. ಇಷ್ಟಾದರೂ “ನನ್ನ‌ ಮಗ ಹೇಗೋ ಕಾಲೇಜು ಕಲಿಯುತ್ತಿದ್ದಾನೆ” ಎಂದು ಹೆಮ್ಮೆ ಪಡುತ್ತಿದ್ದ ಆತ. ರಜೆ ಬಿಟ್ಟಾಗ ಊರಿನ ಶ್ರೀಮಂತರ ಹೊಲಗಳಿಗೆ ಕೂಲಿ‌ಗೆ ಕರೆದುಕೊಂಡು ಹೋಗಿ ಕೆಲಸ ಮಾಡಲು ಕಲಿಸಿದ. ಆ ಕೂಲಿ ನಮ್ಮ‌ ಇಡೀ ಕುಟುಂಬದ ಮೂಲ ಆಧಾರವಾಗುತ್ತಿತ್ತು.

ಕಲಘಟಗಿ ತಾಲ್ಲೂಕಿನ ತುಮರಿಕೊಪ್ಪದ ಫಾದರ್ ಜೇಕಬ್ ಅವರು ಆರಂಭಿಸಿದ ಬೆಣಚಿಕೆರೆ ಮತ್ತು ನಮ್ಮ ಊರಿಂದ ಹತ್ತು ಕಿಲೋಮೀಟರ ದೂರದಲ್ಲಿ ಆರಂಭವಾದ ಕಮತ ಹೊಲದ ಕೆರಿ ಈ ಎರಡರ ಕಾಮಗಾರಿಗಳಿಗೆ ನನ್ನನ್ನು ಮತ್ತು ನನ್ನ ಅಣ್ಣನನ್ನು ಕರದುಕೊಂಡು ಹೋಗಿ ಮಣ್ಣು ಕಡಿದು ಬುಟ್ಟಿ ತುಂಬಿ ನಮ್ಮ ತಲೆಯ ಹೊರಿಸಿ ಅದರಿಂದ ಬರುವ ವಾರದ ಕೂಲಿಯಲ್ಲಿ ಸಂಸಾರ ನೂಕುವ ಸಾಹಸ ಮಾಡಿದ ಅಪ್ಪ. ಅದೂ ನಮ್ಮ‌ ಐದು ಜನರ ಸಂಸಾರಕ್ಕೆ ಸಾಲದಾದಾಗ ಆತ ದಾಂಡೇಲಿಯ ಹತ್ತಿರದ ಕುಳಗಿ ಅರಣ್ಯಕ್ಕೆ ಬಿದಿರು ಕಡಿಯಲು ಹೋಗುತ್ತಿದ್ದ. ಮೂರು ತಿಂಗಳು ಅಲ್ಲೇ ಉಳಿದು ತಾನೇ ಕೂಳು ಕುಚ್ಚಿಕೊಂಡು ದುಡಿದು ಅಷ್ಟಿಷ್ಟು ಸಂಪಾದಿಸಿಕೊಂಡು ಬಂದು ಮಳೆಗಾಲದ ನಮ್ಮ‌ ಬದುಕಿಗೆ ಅಶನ-ಆಸರೆ ಸಿಗುವಂತೆ ಮಾಡುತ್ತಿದ್ದ.

ಇಷ್ಟೆಲ್ಲ ಸಂಕಟ ಮತ್ತು ಯಾತನೆಗಳ ನಡುವೆಯೂ Rank ಮತ್ತು ಚಿನ್ನದ ಪದಕದೊಂದಿಗೆ ಎಂ. ಎ. ಪಾಸಾದಾಗ ಇಡೀ ಊರ ತುಂಬ ಓಡಾಡಿ “ನನ್ನ ಮಗಾ ಬಂಗಾರದ ಪದಕಾ ಗಳಿಸ್ಯಾನ” ಎಂದು‌ ಅಪ್ಪ ಎದೆಯುಬ್ಬಿಸಿ ಸಾರಿದ್ದು ನನಗೇ ಮಜಗುರ ಹುಟ್ಟಿಸಿತ್ತು. ಬಂಗಾರದ ಪದಕ‌ ಪಡೆಯವ ದಿನ‌ ನಾನು‌ ಅದನ್ನು ಸ್ವೀಕರಿಸಲು ವೇದಿಕೆಗೆ ಹೋಗುತ್ತಿದ್ದಾಗ ಕೆಳಗೆ ಕುಳಿತಿದ್ದ ಅಪ್ಪ. ಸಭಾ ಮರ್ಯಾದೆಯನ್ನೂ ಲೆಕ್ಕಿಸದೆ ಎದ್ದು ನಿಂತು “ಅಂವಾ ನನ್ನ ಮಗಾ” ಎಂದ ಕೂಗಿ ಆಗಿನ ರಾಜ್ಯಪಾಲರಾಗಿದ್ದ ಶ್ರೀ ಗೋವಿಂದ ನಾರಾಯಣ ಅವರೇ ಹೆಮ್ಮೆ ಪಡುವಂತೆ ಮಾಡಿದ್ದ. ಕಾಲ ಗತಿಸಿ, ಪಿ. ಎಚ್. ಡಿ ಸೇರಿ, ಯು. ಜಿ. ಸಿ. ಫೇಲೋಶಿಪ್ ಪಡೆದಾಗ “ನನ್ನ ಮಗಗ ಪಗಾರ ಬರಾಕ ಹತ್ತೇತಿ” ಎಂದು ಮತ್ತೊಮ್ಮೆ ಊರ ತುಂಬೆಲ್ಲ ಸಾರಿದ್ದನಂತೆ.

ಅದಾದ ಮೇಲೆ ದೆಹಲಿಗೆ (1983 ರಲ್ಲಿ ದೆಹಲಿಗೆ ಹೋದ ಕಲಘಟಗಿ ತಾಲ್ಲೂಕಿನ ಮೊದಲಿಗ) ಹೋಗಿ ಯಾವುದೇ ವಸೂಲಿ ಅಥವಾ ಹಣವಿಲ್ಲದೆ ಕೇವಲ‌ ಮೆರಿಟ್ ಆಧಾರದಲ್ಲೇ UPSC ಯಿಂದ ಆಯ್ಕೆಯಾಗಿ ಆಕಾಶವಾಣಿಯ ನೌಕರಿ ಪಡೆದಾಗ ಅತ ಮುಗಿಲಲ್ಲೇ ಇದ್ದ.

ನಂತರ ಹತ್ತಾರು ವರ್ಷಗಳು ಉರುಳಿ ಹೋಗಿವೆ. ನನಗೆ ವರ್ಗವಾಗಿ ಹೋದಲ್ಲೆಲ್ಲ ಅಪ್ಪ- ಅವ್ವನನ್ನು ಬೆನ್ನಿಗೆ ಕಟ್ಟಿಕೊಂಡು ಹೋಗುತ್ತಿದ್ದೆನಾದರೂ ಅವರಿಗೆ ಶಹರಗಳ ಯಾಂತ್ರಿಕ ಜೀವನ ಹಿಡಿಸದೆ “ಊರಿಗೇ ಹೋಗ್ತೇವಪಾ ನಾವು, ಇಲ್ಲಿರಾಕಾಗೂದುಲ್ಲ” ಎಂದು ಹಟ ಮಾಡಿ ಹಳ್ಳಿಗೇ ಹೋಗುತ್ತಿದ್ದರು. ತಿಂಗಳು‌ ತಿಂಗಳೂ‌ ನಿಯಮಿತವಾಗಿ ಮನಿಯಾರ್ಡರ್ ಹಣ ಹೋದಾಗ “ನನ್ನ ಮಗಾ ನನಗ ತಿಂಗಳಾ ತಿಂಗಳಾ ಪಗಾರ ಕಳಸ್ತಾನ” ಎನ್ನುತ್ತ Postman ಗೆ ಹತ್ತು ರೂಪಾಯಿ ಭಕ್ಷೀಸು ಕೊಟ್ಟು ಹಣ ತೆಗೆದುಕೊಳ್ಳುತ್ತಿದ್ದನಂತೆ. ಅಣ್ಣನ ಮನೆ ಈಗ ಸಂತಸದ ಬೀಡಾಗಿತ್ತು. ಬಡತನವನ್ನೇ ಹಾಸಿ ಹೊದ್ದು ಬದುಕು‌ ನೂಕುತ್ತ ಬಂದಿದ್ದ ನಮ್ಮ‌ ಮನೆತನ ಈಗ ನೆಮ್ಮದಿಯ ದಿನಗಳನ್ನು ಕಂಡಿತ್ತು. ಶಿಕ್ಷಣ ತಂದು ಕೊಟ್ಟ ಗೌರವವದು. ಅಪ್ಪ ಸಂತೋಷದಿಂದ ದಿನ ಕಳೆಯತೊಡಗಿದ. ಆವರೆಗೆ ಸಾಕಷ್ಟು‌ ದುಡಿದಿದ್ದ ಅಣ್ಣನೂ ಆಗ ನಿರಾಳನಾಗಿದ್ದ. ತಿಂಗಳು ತಿಂಗಳೂ ಮನಿಯಾರ್ಡರ್ ಹೋಗಿ ಅವರ ಬದುಕುಗಳೂ ನೆಮ್ಮದಿ ಕಂಡವು. ಹೊಲದಲ್ಲಿ ಹಾಕಿಸಿಕೊಟ್ಟ ಬೋರ್ ವೆಲ್ ಆತನ ಒಕ್ಕಲುತನಕ್ಕೆ ವೇಗ ಕಲ್ಪಿಸಿತು.

ನನಗೆ ಧಾರವಾಡಕ್ಕೆ ವರ್ಗವಾದಾಗ ಇನ್ನು ಮೇಲೆ ನೀವು ನಮ್ಮ ಜೊತೆಗೇ ಇರಬೇಕೆಂದು ಅಪ್ಪ-ಅವ್ವ ಇಬ್ಬರನ್ನೂ ಕರೆದುಕೊಂಡು ಬಂದಾಗ ಸೊಸೆಯನ್ನು ಮಗಳ ಹಾಗೆ ನೋಡಿಕೊಂಡರು. ನಾವು ಉಣ್ಣುವ ಮೊದಲೇ, ಅತ್ತೆ ಮಾವನಿಗೆ ಬಿಸಿ ರೊಟ್ಟಿ ಮಾಡಿ ಉಣಿಸುತ್ತಿದ್ದ ಸೊಸೆಯನ್ನು ಅವರು ಮಗಳಂತೆಯೇ ಕಂಡರು. ನನ್ನ ಇಬ್ಬರೂ ಹೆಣ್ಣು ಮಕ್ಕಳನ್ನು “ಡಾಜೂ” (ರಾಜೂ) “ಕೋತಾ” (ಕವಿತಾ) ಎಂದೇ ಕರೆಯುತ್ತಿದ್ದರು ಅಪ್ಪ ಅವ್ವ.

ಅವ್ವ ಜೀವನವಿಡೀ ಫಿಟ್ಸ್ ರೋಗದಿಂದ ನರಳಿದ್ದಳು. ಕೊನೆಗೆ ಅವಳು ಪ್ಯಾರಾಲೆಸಿಸ್ ಹೊಡೆದು ನುಜ್ಜು ಗುಜ್ಜಾದಳು. ಎರಡು ವರ್ಷಗಳ ಪರ್ಯಂತ ಅವರ ಸೊಸೆ ಮತ್ತು ನಾನು ಜೊತೆಯಾಗಿ ಎಳ್ಳಷ್ಟೂ ಕೊರತೆಯಾಗದಂತೆ ಅವ್ವನನ್ನು ಅಂಗೈಯಲ್ಲಿಟ್ಟುಕೊಂಡು ಜೋಪಾನ ಮಾಡಿದೆವು. ಕೊನೆಗೆ ಕಾಲ ಕರೆಯಿತು. ಅವ್ವ ಒಂದು ರಾತ್ರಿ‌ ಹನ್ನೊಂದು ಗಂಟೆಗೆ ಇಲ್ಲವಾದಳು. ಸಾಯುವ ಅರ್ಧ ತಾಸಿನ ಮೊದಲು ಕೈ ಸನ್ನೆ ಮಾಡಿ, “ಉಂಡ ಬಾ ಯಪ್ಪಾ” ಎಂದು ಸೂಚಿಸಿದ್ದು ಯಾವ ಮಹಾಕಾವ್ಯದ ಮೌಲ್ಯಗಳನ್ನೂ ಮೀರಿದ ಸಂದೇಶವಾಗಿತ್ತು.

ಅವ್ವ ಸತ್ತ ನಂತರ ಅಪ್ಪ ಅನಾಥನಂತಾಗಿಬಿಟ್ಟ. ಎಷ್ಟು ಸಮಾಧಾನ‌ ಹೇಳಿದರೂ ಆತ ಸುಧಾರಿಸಿಕೊಳ್ಳಲೇ ಇಲ್ಲ. ಅವ್ವ ತೀರಿಕೊಂಡು ಇನ್ನೂ ಎರಡು ತಿಂಗಳಾಗಿರಲಿಲ್ಲ, ಒಂದು ದಿನ‌ ಮಧ್ಯಾಹ್ನ ಊಟ ಮಾಡಿ ಮಲಗುತ್ತಿದ್ದಂತೆಯೇ ಒಂದು ಬಿಕ್ಕು ಬಂದಂತಾಗಿ ಮಗಳು ನೀರು ತಂದು ಕೊಡುವುದರ ಒಳಗೇ ಆತ ಇಲ್ಲವಾಗಿಬಿಟ್ಟ. ಅವ್ವ ಹೋದ ಜಾಗೆಗೆ ಹೋಗಲು ಆತ ತವಕಿಸುತ್ತಿದ್ದನೆಂದು ಕಾಣುತ್ತದೆ. ಅಪ್ಪನ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಡಾ. ಎಸ್. ಜೆ. ನಾಗಲೋಟಿಮಠ ಸರ್ ಅವರು ಆತನ‌ ಸಾವನ್ನು ನೆನೆದು “ಹತ್ತು ಲಕ್ಷ ರೂಪಾಯಿ ಹಣ ಕೊಡುತ್ತೇನೆ, ನನಗೆ ಇಂಥ ಸಾವು ಬರಲಿ” ಎಂದದ್ದು ಅಪ್ಪನ‌ ಸಾವು, ನೋವಿಲ್ಲದ ದೇವಸಾವು ಅನಿಸುತ್ತದೆ. ಅಪ್ಪ-ಅವ್ವ ಎರಡೂ ಹಿರಿ ಜೀವಗಳನ್ನು ಕಳೆದುಕೊಂಡ ನಮ್ಮ ಮುಂದಿನ ಜೀವನ ಅನಾಥವಾಯ್ತು. ಮುಖ್ಯವಾಗಿ ಇಬ್ಬರೂ ಮೊಮ್ಮಕ್ಕಳು ಏನೆಲ್ಲವನ್ನೂ ಕಳಕೊಂಡ ನೋವು ಅನುಭವಿಸಿದವು.

ಇದು ಮೇಲು ಮೇಲಿನ‌ ಸಂಕ್ಷಿಪ್ತ ಕಥೆ ಮಾತ್ರ. ಇದರಲ್ಲಿ ಅಪ್ಪ ಅನುಭವಿಸಿದ ಸಂಕಟ, ಯಾತನೆ, ಅವಮಾನ, ನೋವುಗಳ ಲೆಕ್ಕ ಇಡಲು ಸಾಧ್ಯವೇ ಇಲ್ಲ. ಅದು ಸಾವಿರ ಸಾವಿರ ಪುಟಗಳಿಗೂ ಮಿಕ್ಕುವ ಧಾರಾವಾಹಿ ಆದೀತು. ಇಂಥ ಅಪ್ಪನಿಗೆ ಈಗ “ಅಪ್ಪಂದಿರ ದಿನ” ದಂದು ನಾನು ಯಾವ ಮಾತಿನಲ್ಲಿ ಋಣ ತೀರಿಸಲಿ? ಅಪ್ಪನ ಈ ಮಹಾ ವ್ಯಕ್ತಿತ್ವಕ್ಕೆ ಹಣೆ ಹಚ್ಚಿ ನಮಿಸುವೆ.

ಮುಂದಿನದು, ಈಗ ಇಬ್ಬರು ಹೆಣ್ಣು ಮಕ್ಕಳ ಅಪ್ಪನಾದ ನನ್ನ ಅಧ್ಯಾಯ. ಇದರ ಬಗ್ಗೆ ಹೆಚ್ಚು ಬರೆಯುವುದಿಲ್ಲ. ನನ್ನ ಇಬ್ಬರೂ ಹೆಣ್ಣುಮಕ್ಕಳನ್ನು ನಾನು ಮತ್ತು ಅವರ ಅವ್ವ ಬೆಳೆಸಿದ್ದು ಕಡಿಮೆ; ಅವರು ಸ್ವತಂತ್ರವಾಗಿ ಬೆಳೆದದ್ದೇ ಹೆಚ್ಚು. ಅವರ ಬಗ್ಗೆ ಹೆಚ್ಚು ಹೇಳದೇ ಒಂದು ಘಟನೆಯನ್ನು ಮಾತ್ರ ಹೇಳುವೆ.

ಅದು ಕರೋನಾ ಸಂದರ್ಭ. ಯಾರಿಗೋ ಸಹಾಯ ಮಾಡಲು ಹೋಗಿ ಕರೋನಾ ನನಗೆ ಅಮರಿಕೊಂಡಾಗ, ಇಬ್ಬರೂ ಮಕ್ಕಳು ಮತ್ತು ಇಬ್ಬರೂ ಅಳಿಯಂದಿರು (ಅಳಿಯಂದಿರು ಮಕ್ಕಳಿಗಿಂತಲೂ ಮಕ್ಕಳು ಅವರು) ನನಗೆ ಮಾಡಿದ ಉಪಚಾರವನ್ನು ಶಬ್ದಗಳಲ್ಲಿ ಹೇಳಲಾಗದು. ದೊಡ್ಡ ಮಗಳು ತನ್ನ ನಾಲ್ಕು ವರ್ಷದ ಮಗನನ್ನು ಬಿಟ್ಟು ನನ್ನ ಸುಶ್ರೂಷೆಗೆ ನಿಂತರೆ, ಕೇವಲ ನಾಲ್ಕು ತಿಂಗಳ‌ ಕೂಸನ್ನೂ ತೊಟ್ಟಿಲಲ್ಲಿ ಬಿಟ್ಟು, ಸಣ್ಣ ಮಗಳು ಅಕ್ಕನ‌ ಜೊತೆಗೆ ಸಹಾಯಕ್ಕೆ ನಿಂತಳು. ಹೆಂಡತಿಯು ತಾಯಿಯಾಗಿ ಎಲ್ಲರನ್ನೂ ಪೊರೆದಳು.

ಎರಡು ಸಲ ಸಾವಿನ ಬಾಗಿಲಿನ (ಅನುಭವೈಕ ಸತ್ಯ) ವರೆಗೆ ಕರೆದುಕೊಂಡು ಹೋಗಿದ್ದ ಕರೋನಾದಿಂದ ಹೇಗೋ ಆರಾಮಾಗಿ ಮನೆಗೆ ಬಂದಾಗ ಮತ್ತೊಂದು ಭಯಾನಕ ಆಘಾತ ಕಾಯ್ದಿತ್ತು! ಬ್ಲ್ಯಾಕ್ ಫಂಗಸ್ ನನ್ನನ್ನೇ ಹುಡುಕುತ್ತ ಕುಳಿತಿತ್ತೆಂದು ತೋರುತ್ತದೆ. ಅದು ವಕ್ಕರಿಸಿದಾಗ ಮಕ್ಕಳು ಕೈಕಾಲನ್ನೇ ಕಳೆದುಕೊಂಡಂತಾಗಿ ವಿಲ ವಿಲ ಒದ್ದಾಡಿದರು. ಅದರೆ ಅದಾವುದನ್ನೂ ನನಗೆ ತೋರಗೊಡದೆ ಮೂರು ಮೂರು ಆಸ್ಪತ್ರೆಗಳನ್ನು ಬದಲಿಸಿ ಕೊನೆಗೊಂದು ದೊಡ್ಡ ಆಸ್ಪತ್ರೆಗೆ ಹಾಕಿದರು. ಅಲ್ಲಿ ಸರ್ಜರಿ ನಡೆದಾಗ ಅವರಿಬ್ಬರೂ ವೈದ್ಯರ ಹತ್ತಿರ ಹೋಗಿ ಕೈ ಮುಗಿದು ಕೇಳಿಕೊಂಡದ್ದು “ಸರ್, ನಮ್ಮ ಜೀವಗಳು ಹೋದರೂ ಸರಿ ಅಪ್ಪ‌ ಉಳಿಯಬೇಕು. ಏನು ಮಾಡ್ತೀರೋ ಮಾಡಿ, ಎಷ್ಟು ಖರ್ಚಾದರೂ ಅದನ್ನು ಎಲ್ಲಿಂದಲಾದರೂ ಹೊಂದಿಸಿ ಕೊಡುತ್ತೇವೆ. ನಮ್ಮ ಅಪ್ಪನನ್ನು ದಯವಿಟ್ಟು ಉಳಿಸಿಕೊಡಿ”

ತುಂಬ ಕಾಂಪ್ಲಿಕೇಟೆಡ್ ಸರ್ಜರಿ ಆದ ನಂತರ, ಉಳಿಯುವ ಚಾನ್ಸ್ ತುಂಬ ಕಡಿಮೆ ಇತ್ತು. ಒಮ್ಮೆಯಂತೂ ಆಕ್ಸಿಝನ್‌ ಲೆವೆಲ್ ತುಂಬ ಕೆಳಮಟ್ಟಕ್ಕೆ ಹೋಗಿ ಇನ್ನೇನು ಮುಗಿದೇ ಹೋಯಿತೆನ್ನುವಾಗ, (ಅದು ಮೂರನೆಯ ಸಲ ಸಾವಿನ‌ ಬಾಗಿಲು ನೋಡಿ ಬಂದದ್ದು) ಮಕ್ಕಳಿಬ್ಬರೂ ಪಟ್ಟ ಸಂಕಟ ಹೇಳತೀರದ್ದು. ಆಗವರು ರಕ್ತ ಹೊಂದಿಸಿದರು, ಹಣ ಹೊಂದಿಸಿದರು. ಸಿಗಲಾರದ ಔಷಧಿಗಳಿಗಾಗಿ ಇಬ್ಬರೂ ಜನರೇ ಇರಲಾರದ ಬೆಂಗಳೂರಿನ‌ ಎಲ್ಲ ರಸ್ತೆಗಳಲ್ಲಿ ಕಾಣುವ ಎಲ್ಲ ಔಷಧಿ ಅಂಗಡಿಗಳಿಗೂ ಸುತ್ತಾಡಿದರು. ಹಗಲೂ ರಾತ್ರಿ ನನ್ನ ಪಕ್ಕಕ್ಕೇ ನಿಂತರು. ಅವರ ಹೃದಯದ ನೋವು ದೇವರಿಗೆ ಕೇಳಿಸಿತೇನೋ! ಅವರ ಅಪ್ಪ ಬದುಕಿದ.

ಆದರೆ, ಇಷ್ಟರೊಳಗೆ ನನ್ನ ಮಕ್ಕಳಿಬ್ಬರೂ ಖರ್ಚು ಮಾಡಿದ ಒಟ್ಟು ಹಣದ ಮೊತ್ತ ಮೂವತ್ಮೂರು ಲಕ್ಷ ರೂಪಾಯಿಗಳಿಗೂ ಮೀರಿತ್ತು!!! ನಂತರದ ಒಂದು ವರ್ಷದವರೆಗೂ ಅವರಿಬ್ಬರೂ ತಮ್ಮ‌ ಮಕ್ಕಳ ರೀತಿಯಲ್ಲಿ ಅಪ್ಪನನ್ನು‌ ಜೋಪಾನ ಮಾಡಿದರು. ಎರಡು ವರ್ಷಗಳವರೆಗೆ ನನಗೆ ವಾಸನೆ ಮತ್ತು ರುಚಿ ಎರಡೂ ಹಿಂದಿರುಗದಿದ್ದಾಗ ಅವರು ಪಟ್ಟ ಸಂಕಟ, ಅವುಗಳನ್ನು ಹಿಂತಿರುಗಿಸಲು ಮಾಡಿದ ವೈದ್ಯಕೀಯ ಸಾಹಸಗಳು ಒಂದೆರಡಲ್ಲ.

“ಮೂವತ್ಮೂರು ಲಕ್ಷ ಹಣ ಹೇಗೆ ಹೊಂದಿಸಿದಿರಿ ಅವ್ವಾ” ಎಂದು ಕೇಳಿದರೆ, ಅವರು‌ ಕಣ್ಣೀರು ಹರಿಸುತ್ತ, ಈ ಪ್ರಶ್ನೆ ಕೇಳಬೇಡ ಅಪ್ಪಾ” ಎಂದು ಬಾಯಿ ಮುಚ್ಚಿಸುತ್ತಾರೆ. ಈಗಲೂ ಅವರದು ಅದೇ ಮಾತು.

ಆರಾಮಾದ ಕೂಡಲೇ ಊರಿಗೆ ಹೋಗಿ‌ ನಾನು ಮೊದಲು ಮಾಡಿದ್ದು, ಧಾರವಾಡದಲ್ಲಿ ಕಟ್ಟಿಸಿದ್ದ ಮನೆ ಮತ್ತು ನಿವೃತ್ತಿಯ ನಂತರ ಖರೀದಿಸಿದ್ದ ನಾಲ್ಕು ಎಕರೆ ಹೊಲ ಎರಡನ್ನೂ ಇಬ್ಬರಿಗೂ ಸರಿಸಮಾನ ಹಂಚಿ ಅವರವರ ಹೆಸರಿಗೆ ಹಚ್ಚಿದೆ.

ಮರಳಿ ಬೆಂಗಳೂರಿಗೆ ಬರುವಷ್ಟರಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು!!! ತಾವು ಸ್ವಂತ ಮನೆ ಮಾಡಿಕೊಂಡಿದ್ದ ಇಬ್ಬರೂ ಮಕ್ಕಳು, ನಮ್ಮಿಬ್ಬರಿಗೆ (ಅವ್ವ-ಅಪ್ಪ) ಒಂದು ಪ್ರತ್ಯೇಕ ಫ್ಯಾಟ್ ಖರೀದಿಸಿ ಅಲ್ಲಿಗೆ ನಮ್ಮನ್ನು ಕರೆದೊಯ್ದು ಗೃಹಪ್ರವೇಶ ಮಾಡಿಸಿದರು!!!

ಬಹಳಷ್ಟು ಇದೆ ಕಥೆ. ಈಗ ಇಷ್ಟು ಸಾಕು.

ಇವತ್ತು ಮುಂಜಾನೆ ಮಗಳು ಬಂದು ಅಪ್ಪಂದಿರ ದಿನದ ಶುಭಾಶಯ ಹೇಳಿದಾಗ ಇದೆಲ್ಲ ನೆನಪಾಗಿ ನನಗೆ ಸಂಕಟವಾಗುತ್ತಿತ್ತು. ನಾನು ಮಾಡಿದ್ದು ಸೊನ್ನೆ; ಮಕ್ಕಳಿಬ್ಬರೂ ನಮಗಾಗಿ ಮಾಡಿದ್ದು ಬೆಟ್ಟದಷ್ಟು. ಇಬ್ಬರೂ ಮಾಡಿದ ಆ ಬೆಟ್ಟದಷ್ಟು ಗಾತ್ರದ ಋಣದ ಹೊರೆ ನನ್ನ ಮೇಲಿರುವಾಗ, ಅವರ ಆ ಋಣ ತೀರಿಸುವ ದಾರಿ ಯವುದು? ಎಂಬ ಹುಡುಕಾಟದ ಸಂಕಟದಲ್ಲಿ ನಾನೀಗ ಒದ್ದಾಡುತ್ತಿರುವೆ. ನನಗೆ ಇಬ್ಬರೇ ಅಲ್ಲ, ಇನ್ನೂ ನಾಲ್ಕು ಜನ ಹೆಣ್ಣುಮಕ್ಕಳು ಇರಬೇಕಿತ್ತು ಎಂಬ ಮಹದಾಸೆ ಸದಾ ಕಾಡುತ್ತಿದೆ.

ಅಪ್ಪಂದಿರ ದಿನದಂದು, ನನಗೆ ಅಪ್ಪ-ಅವ್ವ ಇಬ್ಬರೂ ಆಗಿರುವ ನನ್ನ ಹೆಣ್ಣುಮಕ್ಕಳಿಗೆ ಥ್ಯಾಂಕ್ಸ್ ಹೇಳಲೆ? ಅದು ಬಹಳ ಸಣ್ಣ ಶಬ್ದವಾಗುತ್ತದೆ. ಇಲ್ಲ ಕಂದಮ್ಮಗಳೇ, ಸಾವಿರ ಸಾವಿರ “ಶಬ್ದಥ್ಯಾಂಕ್ಸ್” ಗಳೂ ನೀವು ಹೊರಿಸಿದ ಋಣಭಾರಕ್ಕೆ ಸಮನಾಗಲಾರವು. ಅವ್ವಂದಿರೆ, ನಾನು ಸದಾ ನಿಮ್ಮ‌ ಮಗನಾಗಿ ಇರಲು ಬಯಸುತ್ತೇನೆ. ನೀವು “ಅವ್ವ” ತತ್ವಕ್ಕಿಂತಲೂ ದೊಡ್ಡವರು.

ಸ್ವಪ್ರಯತ್ನದಿಂದ ನಿಮ್ಮ ಬದುಕುಗಳನ್ನು ರೂಪಿಸಿಕೊಂಡ ನಿಮಗೆ ಸದಾ ನೆಮ್ಮದಿಯಿರಲಿ. ಅಳಿಯಂದಿರಿಗೂ ಅದೇ ಹಾರೈಕೆ. ಮುದ್ದು ಮೊಮ್ಮಕ್ಕಳಿಗೆ ನಿಮ್ಮ ರೀತಿಯ ಸ್ವಪ್ರಯತ್ನದ ಬದುಕು ದಕ್ಕಲಿ ಎಂದು ಮನದಾಳದಿಂದ ಹಾರೈಸುವೆ.

ಶುಭಾಶಯಗಳು.

ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
303, ಎಸ್. ‌ ಎಲ್. ‌ ವಿ. ತೇಜಸ್‌, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್‌ ಸಂ. +91 98869 85847

Loading

Leave a Reply