ಅರಮನೆ-ಗುರುಮನೆ ಹಿರಿದಾದ ಕಾರಣ, ಹಾದರ ಸಲ್ಲ/ ಡಾ. ಬಸವರಾಜ ಸಾದರ.

ಸಮಾನತೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಧಾನ ತತ್ವ ಮತ್ತು ಲಕ್ಷಣ. ಇದನ್ನು 900 ವರ್ಷಗಳ ಹಿಂದೆಯೇ ತಮ್ಮ ವೈಯಕ್ತಿಕ ಮತ್ತು ಸಾಮುದಾಯಿಕ ಬದುಕುಗಳಲ್ಲಿ ಪ್ರಾಯೋಗಿಕವಾಗಿ ಆಚರಿಸಿ, ಅದರ ಫಲಿತಗಳನ್ನು ವ್ಯವಸ್ಥೆಯ ಸುಸ್ಥಿತಿಗಾಗಿ ಧಾರೆಯೆರೆದವರು ಕನ್ನಡ ಶರಣರು. ಪುರಾತನ ಭಾರತೀಯ ಪರಂಪರೆಯ ಕ್ರೌರ್ಯದ ಪರಮಾಧಿಯೆಂಬಂತೆಯೇ ಹರಿದುಕೊಂಡು ಬಂದಿದ್ದ ಶೋಷಣೆಯನ್ನು ಪ್ರತಿಭಟಿಸಿ, ಸ್ಥಗಿತ ವ್ಯವಸ್ಥೆಯನ್ನು ಚಲನಶೀಲಗೊಳಿಸಿ, ವರ್ಗ, ವರ್ಣ, ಲಿಂಗಭೇದರಹಿತ ಸಮಾಜವನ್ನು ನಿರ್ಮಿಸುವ ಗುರಿ ಹೊಂದಿದ್ದ ಅವರು, ಸಾಧ್ಯವಿರುವ ಎಲ್ಲ ಕ್ಷೇತ್ರಗಳಲ್ಲೂ ಸಮಾನತೆಯ ಕ್ರಿಯಾಪರಿಕಲ್ಪನೆಯನ್ನು ಆಚರಣೆಗಳ ಮೂಲಕ ಜಾರಿಗೆ ತಂದರು. ಇದರ ಫಲಿತವೆಂಬಂತೆ ಶೂದ್ರವರ್ಗದ ಜನ ಹಾಗೂ ಮಹಿಳೆಯರು ಸಮಾಜದ ಮುಂಚೂಣಿಯಲ್ಲಿ ನಿಂತು ಮುಕ್ತವಾಗಿ ಮಾತನಾಡಿದರು ಮತ್ತು ತಮ್ಮ ಮೇಲಾಗುತ್ತಿದ್ದ ಶೋಷಣೆಯ ವಿರುದ್ಧ ಗಟ್ಟಿಯಾದ ದನಿ ಎತ್ತಿದರು. ಆ ಮೂಲಕ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನೂ ಗುರುತಿಸಿಕೊಂಡರು. ಈ ಎಲ್ಲ ಪ್ರಯೋಗಗಳ ಪ್ರತ್ಯುತ್ಪನ್ನವಾಗಿ ಮೂಡಿಬಂದ ಶರಣರ ವಚನಗಳು ಇಂದಿಗೂ ಸಮಾನತೆಯ ಆಶಯ ಮತ್ತು ಅಪೇಕ್ಷೆಯ ಅಧಿಕೃತ ದಾಖಲೆಗಳಾಗಿಯೇ ಉಳಿದಿವೆ. ಇವು ಬರೀ ಸಿದ್ಧಾಂತಗಳ ಪ್ರತಿಪಾದನೆ ಮಾತ್ರವಾಗದೆ, ಅವುಗಳನ್ನು ಆಚರಣೆಯಲ್ಲಿ ತಂದ ಕ್ರಿಯಾತ್ಮಕ ಮೌಲ್ಯಗಳೂ ಆಗಿರುವುದು ಮಹತ್ವದ ಸಂಗತಿ. ಇದಕ್ಕೆ ಸಾಕ್ಷಿಯೆಂಬಂತಿದೆ ಕಿನ್ನರಿ ಬ್ರಹ್ಮಯ್ಯನ ಒಂದು ವಚನ.

ಆವ ಮಡಕೆಯಾಗಲಿ ಸ್ವಾದ
ಸಾಕಾರದಲ್ಲಿ ಭೇದವಿಲ್ಲ.
ಮಣ್ಣ ಮಡಕೆ ಒಕ್ಕಲಿಗನಲ್ಲಿ,
ಚಿನ್ನದ ಮಡಕೆ ಅರಮನೆಯಲ್ಲಿ.
ಅರಮನೆ ಗುರುಮನೆ ಹಿರಿದಾದ ಕಾರಣ –
ಹಾದರ ಸಲ್ಲದು ಕಾಣಾ ತ್ರಿಪುರಾಂತಕಲಿಂಗವೆ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-26 / ವಚನ ಸಂಖ್ಯೆ-51)

ಎಲ್ಲರ ಮನೆಗಳಲ್ಲೂ ಉಪಯೋಗಿಸುವ ಮಡಕೆಯ ರೂಪಕ ಬಳಸಿ, ಅದರ ಆಕಾರದ ಸಾಮ್ಯತೆಯನ್ನು ಸಮಾನತೆಯ ಸಂಕೇತವೆಂಬಂತೆ ಬಿಂಬಿಸುತ್ತಾನೆ ಕಿನ್ನರಿ ಬ್ರಹ್ಮಯ್ಯ ಈ ವಚನದ ಆರಂಭದಲ್ಲಿ. ಹಾಗೆ ತೋರಿಸುತ್ತ, ಬೇರೆ ಬೇರೆ ಜನವರ್ಗದವರು ಬಳಸುವ ಇಂಥ ಮಡಕೆಯಲ್ಲಿಯೇ ಸ್ವರೂಪ ಭೇದವಿರುವುದನ್ನು ಸ್ಪಷ್ಟಪಡಿಸಿ, ಆ ಮೂಲಕ ವಿವಿಧ ವರ್ಗಗಳ ಜನರಲ್ಲಿ ಇರುವ ಸ್ಥರಭೇದಗಳನ್ನು ಮತ್ತು ವ್ಯತ್ಯಾಸಗಳನ್ನೂ ಆತ ಎತ್ತಿ ತೋರಿಸುತ್ತಾನೆ. ಉದಾಹರಣೆಗೆ, ಮಣ್ಣಿನ ಮಡಕೆ ಬಳಸುವವರು ರೈತರು, ಶ್ರಮಜೀವಿಗಳು ಮತ್ತು ಒಟ್ಟಾರೆ ಶೂದ್ರರು; ಬಂಗಾರದ ಮಡಕೆ ಉಪಯೋಗಿಸುವವರು ಅರಮನೆ ಮತ್ತು ಗುರುಮನೆಗಳಲ್ಲಿ ವಾಸಿಸುವವ ಶ್ರೀಮಂತರು ಹಾಗೂ ಮೇಲ್ವರ್ಗ-ವರ್ಣದವರು. ಇಲ್ಲಿ ಮಣ್ಣು ಮತ್ತು ಚಿನ್ನದ ಮಡಕೆಗಳು ಅವುಗಳನ್ನು ಬಳಸುವವವರ ಸಾಮಾಜಿಕ ಮತ್ತು ಆರ್ಥಿಕ ನೆಲೆ-ಬೆಲೆ-ಅಂತಸ್ತುಗಳನ್ನು ನಿರ್ಧರಿಸುತ್ತವೆ. ಇಂಥ ತರ-ತಮಗಳನ್ನು ಒಪ್ಪಬಹುದಾದರೂ, ಮಡಕೆ ಮಣ್ಣಿನದೇ ಇರಲಿ, ಚಿನ್ನದ್ದೇ ಇರಲಿ ಅದರ ಆಕಾರ ಮತ್ತು ಅದರಲ್ಲಿ ಮಾಡಿದ ಅಡುಗೆಯ ರುಚಿ ಒಂದೇ ತೆರನಾಗಿರುವುದು ವಾಸ್ತವ. ಈ ಸತ್ಯವನ್ನು ಅಲ್ಲಗಳೆಯಲಾಗದು. ಕಿನ್ನರಿ ಬ್ರಹ್ಮಯ್ಯ ಇದನ್ನೇ ತನ್ನ ವಚನದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸುತ್ತಾನೆ. ಹೀಗೆ ಮಡಕೆ ಒಂದೇ ಆಗಿರುವುದು ಸಮಾನತೆಯ ಸಂಕೇತವಾದರೂ, ಮಣ್ಣಿನ ಮತ್ತು ಚಿನ್ನದ ಮಡಕೆಗಳು ಬಳಕೆಯಾಗುವ ಸ್ಥಳ ಮತ್ತು ಸ್ಥರಗಳು ಮಾತ್ರ ಭಿನ್ನ ಭಿನ್ನ. ಈ ಭಿನ್ನತೆ ಸಾಮಾಜಿಕ ಏರು-ಪೇರುಗಳನ್ನೂ ಸೂಚಿಸುತ್ತದೆ. ಇಂಥ ತರ-ತಮಗಳು ಬರೀ ಸಾಮಾಜಿಕ ನೆಲೆಯವು ಮಾತ್ರವಾಗಿದರೆ, ಅವು ಆಯಾ ವರ್ಗದ ಜನರ ನಡೆ-ನಡಾವಳಿಗಳನ್ನೂ ಧ್ವನಿಸುತ್ತವೆ. ಇದು ತುಂಬ ಗಮನಾರ್ಹ. ಸೂಕ್ಷ್ಮ ದೃಷ್ಟಿಗೆ ಕಾಣಬಹುದಾದ ಸತ್ಯವಿದು.
ನಮ್ಮ ಸಮಾಜೋ-ಧಾರ್ಮಿಕ ವ್ಯವಸ್ಥೆಯಲ್ಲಿ ಶೂದ್ರರು ಮತ್ತು ಶ್ರಮಜೀವಿಗಳೆಂದರೆ ಕೀಳು ಹಾಗೂ ಅರಸರು ಮತ್ತು ಗುರು ವರ್ಗದವರು ಮೇಲು ಅಥವಾ ಶ್ರೇಷ್ಠ ಎಂಬ ಅಸಮಾನತೆ ಪರಂಪರಾಗತವಾಗಿ ಜಾರಿಯಲ್ಲಿ ಬಂದಿದೆ. ಆಯಾ ವರ್ಗದ ಜನರ ಅಧಿಕಾರ ಮತ್ತು ಅಂತಸ್ತುಗಳಿಗೆ ಅನುಗುಣವಾಗಿ ಅವರು ಬಳಸುವ ವಸ್ತುಗಳು, ಅವರ ಜೀವನದ ಸ್ಥರ ಮತ್ತು ಶೈಲಿಗಳಲ್ಲಿಯೂ ವ್ಯತ್ಯಾಸಗಳಿವೆ. ಈ ವ್ಯತ್ಯಾಸ ಬರೀ ವಸ್ತುಗಳದು ಮಾತ್ರವಲ್ಲ; ಮನೋಭಾವಗಳದೂ ಹೌದು. ಮೇಲ್ವರ್ಗ ಮತ್ತು ಮೇಲ್ವರ್ಣದವರಿಗೆ ಅವರ ಸುಖಭೋಗ ಮತ್ತು ನಡತೆಗಳಲ್ಲಿ ಇದ್ದ ಅವಕಾಶಗಳು ಶ್ರಮಿಕ ಮತ್ತು ಶೂದ್ರ ವರ್ಗದವರಿಗೆ ಇಲ್ಲ. ಜೊತೆಗೆ ಮೇಲ್ವರ್ಗ ಮತ್ತು ವರ್ಣದ ಜನರು ಏನು ಮಾಡಿದರೂ ನಡೆಯುತ್ತದೆಯೆಂಬ ಅಲಿಖಿತ “ಮಾಫಿ” (ರಿಯಾಯತಿ) ಕೂಡಾ ಒಳಗೊಳಗೆ ಚಲಾವಣೆಯಲ್ಲಿದೆ. ಅದನ್ನು ಬಳಿಸಿಕೊಂಡೇ ಮೇಲ್ವರ್ಗದ ಕೆಲವರು ಕಳ್ಳತನ, ಹಾದರ, ಅನಾಚಾರ, ಅತ್ಯಾಚಾರದಂಥ ಕುಕೃತ್ಯಗಳಲ್ಲಿ ತೊಡಗಿದ್ದೂ ಇದೆ. ಅಧಿಕಾರ, ಅಂತಸ್ತು ಮತ್ತು ಹಣವುಳ್ಳ ಅನೇಕರು ಇಂಥ ಕುಕೃತ್ಯಗಳಲ್ಲಿ ತೊಡಗುತ್ತಿರುವುದನ್ನು ದಿನನಿತ್ಯದ ವರದಿಗಳೇ ಸಾಬೀತುಪಡಿಸುತ್ತವೆ. ಅವರಿಗೆ ಮೇಲ್ವರ್ಗದ ಆ ಸ್ಥಾನವೇ ಒಂದು ಬಗೆಯಲ್ಲಿ ರಕ್ಷಾ ಕವಚವಾಗಿರುತ್ತದೆ. ಆದರೆ, ಬಡವರು, ಶೂದ್ರರು ಮತ್ತು ಕೆಳವರ್ಗ-ವರ್ಣದವರು ಇಂಥ ಒಂದೇ ಒಂದು ಸಣ್ಣ ತಪ್ಪು (ಯಾರೂ ಇಂಥ ತಪ್ಪುಗಳನ್ನು ಮಾಡಬಾರದೆಂಬುದೇ ಸಾಮಾಜಿಕ ನೀತಿ ಮತ್ತು ಅಪೇಕ್ಷೆ) ಮಾಡಿದರೂ ಅವರ ಕಥೆ ಮುಗಿದೇ ಹೋಗುತ್ತದೆ. ಇಂಥ ಸ್ಥಿತಿ ಎಲ್ಲ ಕಾಲದಲ್ಲೂ ಇರುವಂಥದ್ದೇ. ಈ ಸತ್ಯವನ್ನೇ ಕಿನ್ನರಯ್ಯ ತನ್ನ ವಚನದಲ್ಲಿ ನವಿರಾಗಿ ದಾಖಲಿಸುತ್ತಾನೆ. ಹಾಗೆ ದಾಖಲಿಸುವುದರ ಜೊತೆಗೇ, “ಅರಮನೆ ಗುರುಮನೆ ಹಿರಿದಾದ ಕಾರಣ ಹಾದರ ಸಲ್ಲದು ಕಾಣಾ” ಎಂಬ ಅರ್ಥವತ್ತಾದ ಮಾತು ಹೇಳುತ್ತ, ಅಧಿಕಾರ ಮತ್ತು ಅಂತಸ್ತುಗಳ ಕಾರಣದಿಂದ ಏನು ಮಾಡಿದರೂ ನಡೆಯುತ್ತದೆ ಎಂದು ಭಾವಿಸುವ ಮೇಲ್ವರ್ಗದ ಜನರಿಗೆ ನೇರವಾಗಿಯೇ ಎಚ್ಚರಿಕೆ ಕೊಡುತ್ತಾನೆ. ಬಡವರ ಮೆನೆಯೇ ಇರಲಿ, ಅರಮನೆ-ಗುರುಮನೆಗಳೇ ಇರಲಿ, ಹಾದರ ಹಾದರವೆ. ಅಂಥ ಹಾದರ ಎಲ್ಲಿಯೂ ಸಲ್ಲದೆಂಬ ಗಟ್ಟಿ ಧ್ವನಿಯೇ ವಚನದ ಆಂತರ್ಯದಲ್ಲಿ ಹುದುಗಿದೆ. ಸಾಮಾಜಿಕ ಸ್ವಾಸ್ಥ್ಯದ ಕಾಳಜಿ ಇಲ್ಲಿ ಮುಖ್ಯವಾಗಿರುವುದು ಗಮನಾರ್ಹ. ಇಂಥ ಸ್ವಾಸ್ಥ್ಯ ಒಬ್ಬರಿಂದ ಅಥವಾ ಒಂದು ವರ್ಗದಿಂದ ಮಾತ್ರ ಸಾಧ್ಯವಿಲ್ಲ; ಅದು ಎಲ್ಲರಿಂದಲೂ ಆಗಬೇಕೆಂಬ ಆಶಯವೇ ಇಲ್ಲಿದೆ.

ಕೆಳವರ್ಗ-ವರ್ಣದವರಿಗೆ ಮಾತ್ರ ನೀತಿ-ನಿರ್ಬಂಧಗಳಿರುತ್ತವೆ, ಅವು ತಮಗಲ್ಲವೆಂದೇ ಮೆರೆಯುತ್ತಿದ್ದ ಮೇಲ್ವರ್ಗವರಿಗೆ ಒಂದು ದೊಡ್ಡ ಪಾಠದಂತಿದೆ ಪ್ರಸ್ತುತ ವಚನ. ಕಿನ್ನರಯ್ಯ ಇಲ್ಲಿ ಬಳಸಿರುವ “ಮಡಕೆ” ಶಬ್ದವು ಮನುಷ್ಯರ ಶರೀರವನ್ನೂ ಸಂಕೇತಿಸುತ್ತಿದ್ದು, ಬಡವರದೇ ಇರಲಿ, ಶ್ರೀಮಂತ ಅಥವಾ ಗುರುವರ್ಗದವರದೇ ಆಗಿರಲಿ, ಶರೀರ ಎಲ್ಲರದೂ ಸಮಾನ ನೆಲೆಯದೇ ಎಂದು ಸೂಚಿಸುತ್ತ, ಹೀಗಿರುವಾಗ ಅಂಥ ಶರೀರರಿಂದ ಯಾರು ಹಾದರ ಮಾಡಿದರೂ ಅದು ಅನೈತಿಕವೇ ಎಂಬ ಸತ್ಯವನ್ನು ನೈಜ ನೆಲೆಯಲ್ಲಿ ಪ್ರತಿಪಾದಿಸುತ್ತದೆ. ಆನುಭಾವಿಕ ನಡೆಗಂತೂ ನೈತಿಕತೆ ಅತ್ಯಗತ್ಯವೆನ್ನುವುದನ್ನು ಮರೆಯಲಾಗದು. ಇದು ಶರಣತತ್ವದ ನೈತಿಕ ಮುಖ ಕೂಡ. ಇಂಥ ನಡೆ ಬಡವ, ಬಲ್ಲಿದ, ಶ್ರೇಷ್ಠ ಜಾತಿಯವರು, ಶೂದ್ರರು-ಹೀಗೆ ಎಲ್ಲರಿಗೂ ಅಗತ್ಯವೆಂಬುದೇ ವಚನದ ಆಂತರ್ಯ.

ಹೀಗೆ ಲೌಕಿಕ ವಿದ್ಯಮಾನದ ಬಗೆಗೆ ಮಾತಾಡುತ್ತಲೇ ಈ ವಚನವು, ಬಡವರ ಮತ್ತು ಶ್ರೀಮಂತರ ಭಕ್ತಿಯಾಚರಣೆಯಲ್ಲಿ ಇರಬೇಕಾದ ಸಮಾನತೆಯತ್ತಲೂ ನಮ್ಮ ಗಮನ ಸೆಳೆಯುತ್ತದೆ. ಅಲ್ಲಿ ಯಾವುದೇ ವ್ಯತ್ಯಾಸವೂ ಇರಬಾರದೆಂಬುದೇ ಇಲ್ಲಿರುವ ಮುಖ್ಯ ಆಶಯ. ಭಕ್ತಿ ಯಾರದಾದರೂ ಭಕ್ತಿಯೇ. ಶ್ರೀಮಂತರ ಭಕ್ತಿ ಎಂದ ಮಾತ್ರಕ್ಕೆ ಅದು ಹೆಚ್ಚಲ್ಲ, ಬಡವರದೆಂದ ಮಾತ್ರಕ್ಕೆ ಅದು ಕಡಿಮೆಯದಲ್ಲ. ಹಾಗೆಯೇ ನೈತಿಕತೆ ಕೂಡ.

ಸಮಾನತೆ ತತ್ವ ಎಲ್ಲರಿಗೂ ಸಮಾನವಾಗಿಯೇ ಅನ್ವಯವಾಗಬೇಕೆಂಬ ಸಮಾಜವಾದಿ ಅಪೇಕ್ಷೆಯನ್ನು ಶರಣರು ಶತ-ಶತಮಾನಗಳ ಹಿಂದೆಯೇ ದಾಖಲಿಸಿದ್ದು ಐತಿಹಾಸಿಕ ಕ್ರಾಂತಿ. ಜೊತೆಗೆ, ಅನೈತಿಕತೆ ಎಲ್ಲಿಯೂ ಸಲ್ಲದು ಎಂಬ ಅವರ ಸಮಾಜ ಸ್ವಾಸ್ಥ್ಯದ ಧ್ವನಿಯೂ ಅಷ್ಟೇ ಮುಖ್ಯವಾಗುತ್ತದೆ. ಇದನ್ನೆಲ್ಲ ತುಂಬ ಸೂಕ್ಷ್ಮ ಮತ್ತು ಅರ್ಥವತ್ತಾದ ರೀತಿಯಲ್ಲಿ ಕಟ್ಟಿಕೊಡುವ ಕಿನ್ನರಿ ಬ್ರಹ್ಮಯ್ಯನ ಪ್ರಸ್ತುತ ವಚನವು ಆತನ ವೈಚಾರಿಕತೆಗೆ ಮತ್ತು ಸಮಾನತೆಯ ತಾರ್ಕಿಕ ಜ್ಞಾನಕ್ಕೆ ಸಾಕ್ಷಿಯಾಗುತ್ತದೆ. ಇಂಥ ಕಾರಣಕ್ಕಾಗಿಯೇ ಈ ವಚನದ ಆಶಯವು ಯಾವ ಕಾಲಕ್ಕಾದರೂ ಪ್ರಸ್ತುತವಾಗುತ್ತದೆ.

ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
303, ಎಸ್. ಎಲ್. ವಿ. ತೇಜಸ್‌, 3 ನೇ ಮಹಡಿ,2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್‌ ಸಂ. +91 98869 85847

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

This Post Has One Comment

  1. Basavaraju B

    ಅರ್ಥಪೂರ್ಣ ಲೇಖನ. ಅಂದು ಶರಣರು ಕಂಡುಕೊಂಡ ಸತ್ಯವನ್ನು ನಾವು ಕಳೆದುಕೊಂಡಿದ್ದೇವೆ. ಅದರ ಪ್ರತಿಫಲವಾಗಿ ಇಂದು ಬೇರೆ ಧರ್ಮ ಗಳು ವಿಕಾರ ಮತ್ತು ವಿನಾಶಗಳ ಆಶಯದೊಂದಿಗೆ ವಿಪರೀತ ಬೆಳೆಯುತ್ತಿವೆ. ಶರಣರ ಆಶಯ ಮರೆತು,
    ಗರ್ಭಗುಡಿಯ ಸಂಸ್ಕೃತಿ ವಿನಾಕಾರಣ ಮೈಗೂಡಿಸಿಕೊಂಡು ಅತ್ತೂ ಸಲ್ಲದೆ ಇತ್ತು ಸಲ್ಲದೆ ಶರಣರ ಚಿಂತನೆಗಳನ್ನು ಕೊಂದು ಬದುಕುತ್ತಿದ್ದೇವೆ.

Leave a Reply