
“ಮಂಟಪ” ದ ಪರಿಕಲ್ಪನೆ ಸ್ಥಾವರವೆನಿಸಿದರೂ “ಅನುಭವ” ವೆಂಬುದು ಸದಾ ಚಲನಶೀಲವಾದುದು. 12 ನೇ ಶತಮಾನದ ಸಂದರ್ಭವಂತೂ ಅನುಭವಗಳ ದಾಖಲೀಕರಣ. ಅದು ಅರಿವಿನ ಸ್ಪೋಟವಾದ ಯುಗ, ಮಾನವರ ಬದುಕಿನಲ್ಲಿ ಅನುಭವವೆಂಬುದು ಅರಿವಿನ ಮೂಲಸ್ಥಾನ. ಯಾರು ಬದುಕನ್ನು ಅನುಭವಿಸುತ್ತಾ ಬದುಕುತ್ತಾರೋ ಅಂತಹವರಿಗೆ ಮಾತ್ರ ಅನುಭವದ ನಿಜದ್ರವ್ಯ ದೊರೆಕಿಕೊಳ್ಳಲು ಸಾಧ್ಯ. ಒಂದು ಸಮುದಾಯ ಇನ್ನೊಂದು ಸಮುದಾಯದ ಅಶೋತ್ತರಗಳಿಗೆ ಸ್ಪಂದಿಸುತ್ತಾ ತಾನು ಬದುಕುತ್ತಾ ಇತರಿಗೂ ಆ ಬದುಕು ದೊರೆಯಲಿ ಎಂದು ಬಯಸುವ ಸಹಜೀವನದ ಈ ಸರಳ ವಿಧಾನದ ಬದುಕು 12 ನೇ ಶತಮಾನದ ಶರಣರದಾಗಿತ್ತು. ಇವರೆಲ್ಲ ಕಾಯಕ ಜೀವಿಗಳಾಗಿದ್ದರು. ವಿವಿಧ ವೃತ್ತಿಗಳನ್ನು ಅವಲಂಬಿಸಿದ ಇವರುಗಳೆಲ್ಲಾ ಪರಸ್ವರ ಸಹಕಾರ ತತ್ವದಲ್ಲಿ ಬದುಕುತ್ತಿದ್ದರು. ಇವರು ಮಾಡುವ “ಕಾಯಕ” ಕ್ಕೆ ಪಾವಿತ್ರ್ಯತೆ ಮತ್ತು ಅರ್ಥ ಒದಗುವಂತಹ ಮಾಟ ಬಂದದ್ದು ಅಪ್ಪ ಬಸವಣ್ಣನವರ ನೇತೃತ್ವದಲ್ಲಿ. ಅಪ್ಪ ಬಸವಣ್ಣನವರು ಸಮಾಜಮುಖಿ ಚಿಂತಕರು ಹಾಗೂ ವ್ಯಷ್ಟಿಯಿಂದ ಸಮಷ್ಠಿಯ ಹಿತ ಕಾಯ್ದುವರು. ಶ್ರಮಜೀವಿಗಳಾದ ಶರಣರ ಬೇವರ ಹನಿ ಎಲ್ಲೂ ವ್ಯರ್ಥವಾಗಬಾರದು ಎಂಬ ವಿಚಾರದಿಂದ ಅವರು “ದಾಸೋಹ” ದ ಪರಿಕಲ್ಪನೆಯನ್ನು ತಂದರು. ಸಂಘ ಮತ್ತು ಸಂಘಟನೆಯಿಂದ ಒಂದು ಸಮುದಾಯವನ್ನು ಸರಿಯಾದ ಗತಿಯಲ್ಲಿ ಮುನ್ನೆಡೆಸಲು ಸಾಧ್ಯವಿದೆ ಎಂಬ ವಿಚಾರ ಬಸವಣ್ಣನವರದಾಗಿತ್ತು. ಈ ದೃಷ್ಟಿಯಿಂದ ಅವರು ಶರಣರ ದೈನಂದಿನ ಬದುಕಿನ ಶ್ರಮದ ಬೆವರು ಕರಗಿ ಹೋಗುವ ಮುನ್ನ, ಅವರ ಅನುಭವ ಮಾಸುವ ಮುನ್ನ ಒಂದು ಕಡೆ ಅದರ ಸಂಗ್ರಹ, ದಾಖಲೀಕರಣ, ಚರ್ಚೆ ನಡೆಯಬೇಕು ಎಂಬ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸಲು ಕಟ್ಟಿದ ಸಂಸ್ಥೆಯ ಅನುಭವ ಮಂಟಪವಾಯಿತು.
12 ನೇ ಶತಮಾನದ ಈ ಅನುಭವ ಮಂಟಪ ಯಾವುದೇ ಕಟ್ಟಡ, ಗೋಡೆಗಳ ಅಡಿಯಲ್ಲಿ ನಡೆದದ್ದಲ್ಲ. ಇದು ಬಯಲು ತತ್ವ ಆಗಿತ್ತು. ಬಯಲೇ ಅನುಭವದ ಮಂಟಪವಾಗಿತ್ತು. ಇಂತಹ ಬಯಲು ಅನುಭವ ಮಂಟಪದ ಪರಿಕಲ್ಪನೆಯು ದೃಷ್ಟಿ ಹೀನರಿಗೆ ಕಾಣುವುದಾದರೂ ಹೇಗೆ?!
ಶ್ರೇಣಿಕೃತ ಗೋಡೆಗಳನ್ನು ಒಡೆಯಬೇಕೆಂದ ಬಸವಣ್ಣನವರ ಆಶೋತ್ತರಗಳು ಶ್ರೇಣಿಕೃತ ವ್ಯವಸ್ಥೆಯನ್ನೇ ಹಾಸಿ ಹೊದ್ದುಕೊಂಡುವವರಿಗೆ ಅರ್ಥವಾದರೂ ಹೇಗಾದೀತು? ಹೀಗಾಗಿ ಪಟ್ಟಭದ್ರ ಹಿತಾಸಕ್ತಿಯನ್ನು ಕಾಪಿಟ್ಟುಕೊಂಡು, ಅದನ್ನು ಮುಂದುವರಿಸಿಕೊಂಡು ಬರುತ್ತಿರುವವರಿಗೆ ಅನುಭವ ಮಂಟಪದ ಕುರಿತು ಇವತ್ತಿನವರೆಗೂ ತಪ್ಪು ಕಲ್ಪನೆ ಇದೆ. ತಪ್ಪು ಕಲ್ಪನೆ ಎಂಬುದಕ್ಕಿಂತ ಅಜ್ಞಾನವೇ ಇದೆ ಎಂದು ಹೇಳಿದರೂ ತಪ್ಪಿಲ್ಲ. ಇವತ್ತಿಗೂ ಬಸವಕಲ್ಯಾಣದಲ್ಲಿ “ಪರುಷಕಟ್ಟೆ” ಸಾರಿ ಸಾರಿ ಹೆಳುತ್ತಿದೆ, ಅಲ್ಲಿ ದೊಡ್ಡ ಫಲಕವೂ ಸಹ ಇದೆ. ಕಲ್ಯಾಣದ ಜನರೆಲ್ಲ ಅಲ್ಲಿ ಸೇರುತ್ತಿದ್ದರು. ಪರಸ್ಪರ ಆತ್ಮ ಚಿಂತನೆ, ಸಮಾಧಾನದ ವಿಚಾರಗಳ ಹಂಚಿಕೆ ಆಗುತ್ತಿದ್ದವು. ಸರಳವಾದ ದಯಾ ಮೂಲ ಧರ್ಮ ಚಿಂತನೆಗಳು ಅಲ್ಲಿ ನಡೆಯುತ್ತಿದ್ದ ಕುರಿತು ದಾಖಲೆ ಇದೆ. ಅಪ್ಪ ಬಸವಣ್ಣನವರು ಆ ಕಟ್ಟೆಯ ಮೇಲೆ ಕುಳಿತು ಎಲ್ಲ ಶರಣರ ಜೊತೆಗೆ ಮಾತುಕತೆಯಾಡುವ ಪವಿತ್ರ ಸ್ಥಳ ಅದಾಗಿತ್ತು. ಪರುಷಕಟ್ಟೆ ಮತ್ತೇನೂ ಅಲ್ಲ ಅದು ಬಯಲಕಟ್ಟೆ ಅಂದರೆ ಅಲ್ಲಿ ಎಲ್ಲರೂ ವರ್ಗ, ವರ್ಣ, ಲಿಂಗ ತಾರತಮ್ಯದಿಂದ ದೂರವಾಗಿ ಒಂದೆಡೆ ಸೇರುವ ಸ್ಥಳ. ಪರಸ್ಪರ ವಿಚಾರ ವಿನಿಮಯದ ನಂತರ ಮತ್ತೆ ಸತ್ಯ ಶುದ್ಧ ಕಾಯಕದೆಡೆ ಎಲ್ಲರೂ ತೆರಳುವುದಾಗಿತ್ತು. ಇದೇ ವಿಸ್ತರಿಸಿಕೊಂಡು ಅನುಭವಮಂಟಪದ ರಚನೆ.
ಅನುಭವ ಮಂಟಪವೆಂಬುದು ಜೇನುಗೂಡು ಅಲ್ಲಿ ಬಸವಣ್ಣನವರ ರಾಣಿಜೇನಿನಂತಿದ್ದರೆ, ಅಲ್ಲಮಪ್ರಭುಗಳು ಮಾರ್ಗದರ್ಶನ ನೀಡುವ ಹಿರಿಯ ಹೆಜ್ಜೇನು ಶರಣರ ಅನುಭವದ ಜೇನು ನಿತ್ಯ ಸಂಗ್ರಹಿತವಾಗಿ ವಚನಗಳೆಂಬ ಸವಿಜೇನ ರಸ ಅಲ್ಲಿ ಸಂಗ್ರಹವಾಯಿತು. ಶರಣರ ಅನೇಕ ವಚನಗಳಲ್ಲಿ ಇದು “ಮಹಾಮನೆ” ಎಂಬ ಪರ್ಯಾಯ ಹೆಸರಿನಲ್ಲಿ ಉಲ್ಲೇಖವಾಗಿದೆ. ಕಾಲಜ್ಞಾನ ವಚನಗಳಲ್ಲಂತೂ ವಿಚಾರಮಂಟಪ, ವಿಶಾಲಮಂಟಪ, ಆಚಾರ ಸಂಪನ್ನರ ಮಂಟಪ, ಪ್ರಕಾಶ ಮಂಟಪ, ಪ್ರಸಾದ ಮಂಟಪ ಎಂಬ ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳಲ್ಪಟ್ಟಿದೆ. ಸ್ವತಃ ಉತ್ತಂಗಿ ಚನ್ನಬಸಪ್ಪನವರು “ಶಿವಾನುಭವ ಮಂಟಪ” ವೆಂದೇ ಅನುಭವ ಮಂಟಪ ಕರೆಯಿಸಿಕೊಂಡಿತ್ತು ಎಂದು ವಿಶದೀಕರಿಸುತ್ತಾರೆ. ಬಸವಕಲ್ಯಾಣದ ಕೀರ್ತಿ ಕಳಶವೇ ಅನುಭವ ಮಂಟಪ. ಅನುಭವ ಮಂಟಪವಿಲ್ಲದ ಕಲ್ಯಾಣವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾದುದು.
ಕಲ್ಯಾಣದ ಅನುಭವ ಮಂಟಪ ಸಮಾಜೋ–ಧಾರ್ಮಿಕ ಸಂಸ್ಥೆ. ಶರಣರ ಕಲ್ಯಾಣದ ತತ್ವದ ಬೀಜಗಳು ಮೊಳಕೆಯೊಡೆದ ಫಲವತ್ತಾದ ಭೂಮಿ ಅದು. ಕಾಯಕ, ದಾಸೋಹ, ಸಮಾನತೆ, ಇಷ್ಟಲಿಂಗ ಪೂಜೆ, ಗುರು, ಲಿಂಗ, ಜಂಗಮ ಮುಂತಾದ ಅಂಶಗಳಿಗೆ ವೈಚಾರಿಕ, ವೈಜ್ಞಾನಿಕತೆಯ ಮನೋಭೂಮಿಕೆಯೇ ಅನುಭವ ಮಂಟಪ. ದಯೆಯೇ ಧರ್ಮದ ಮೂಲವೆಂದು ಸಾರಿದ ಮೊಟ್ಟಮೊದಲ ಕಟ್ಟೆ ಇದು. ಧರ್ಮವೆಂಬುದು ದಯಾ ಮೂಲವಾಗಿದ್ದು, ಅದೊಂದು ಜವಾಬ್ದಾರಿಯಾಗಿ ಸಮಾಜದ ಸುಂದರ ರಚನೆಗೆ ಕಾರಣವಾಗಬೇಕು ಎಂಬುದನ್ನು ಹುಟ್ಟು ಹಾಕಿದ ಅನುಭವ ಮಂಟಪ ನಿಜವಾದ ಶರಣ ಧರ್ಮಕ್ಕೆ ನಾಂದಿ ಹಾಡಿತು. ಶರಣರು ಬಿತ್ತಿದ ಒಂದೊಂದು ತತ್ವ ಬೀಜವೂ ಇವತ್ತಿಗೂ ಉಣ್ಣುವ ಧಾನ್ಯವಾಗಿದೆ. ಬಸವಣ್ಣನವರು, ಅಲ್ಲಮಪ್ರಭುಗಳು, ಚನ್ನಬಸವಣ್ಣನವರು, ಸಿದ್ಧರಾಮೇಶ್ವರರು, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಮಾದಾರ ಚೆನ್ನಯ್ಯ, ಉರಿಲಿಂಗಗಪೆದ್ದಿ, ಮೋಳಿಗೆಯ ಮಾರಯ್ಯ, ಹಾವಿನಾಳ ಕಲ್ಲಯ್ಯ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಮಾರಯ್ಯ, ಮುಕ್ತಾಯಕ್ಕೆ, ಅಮುಗೆ ರಾಯಮ್ಮ, ಸತ್ಯಕ್ಕೆ ಮುಂತಾದ ಮುತ್ತು–ರತ್ನ-ಹವಳದಂತಿರುವ ಅಸಂಖ್ಯಾತ ಶಿವಶರಣ-ಶರಣೆಯರು ನೆಲೆ ನಿಂತು ಅನುಭಾವಿಕ ಚರ್ಚೆ ನಡೆಸಿ, ಸಮಾನತೆಯ ಬೆಳಕು ನೀಡಿದ ಅನುಭವ ಮಂಟಪ ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ಪ್ರಪ್ರಥಮವಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ವಿಶ್ವದ ಮೊಟ್ಟ ಮೊದಲ ಪಾರ್ಲಿಮೆಂಟ (ಸಂಸತ್ತು) ಎಂಬ ಹೆಗ್ಗಳಿಗೆ ಪಾತ್ರವಾದದ್ದು ಸಾಮಾನ್ಯ ಸಂಗತಿ ಅಲ್ಲ. ಮಾನವರ ಅತ್ಯೋದ್ದಾರಕ್ಕಾಗಿ ಬಸವಕಲ್ಯಾಣ ಆತ್ಮಕಲ್ಯಾಣವಾಗಿ ನಿಂತರೆ ಅನುಭವ ಮಂಟಪ ಮಾನವರ ಬದುಕಿನ ಸುಗಮತೆಗೆ ಮಾನವೀಯ ಮೌಲ್ಯಗಳನ್ನು ಕೊಟ್ಟು, ಸಮಾನ ಬದುಕು, ಸಮಾನ ಅವಕಾಶ, ಸಮಾನ ಹಕ್ಕುಗಳು ಎಂಬ ತತ್ವದಡಿ ಮಾನವರಷ್ಟೇ ಅಲ್ಲ ಸಕಲ ಜೀವಾತ್ಮರಿಗೂ ಲೇಸನ್ನೂ ಬಯಸುವಲ್ಲಿ ಅಂದಿನ ಕಾಲಘಟ್ಟದಲ್ಲಿ ಯಶಸ್ವಿಯಾಗಿತ್ತು ಎಂಬುದು ಇವತ್ತಿಗೂ ಗಮನಾರ್ಹ ಸಂಗತಿಯಾಗಿದೆ. ಇದನ್ನು ಪ್ರಜ್ಞಾವಂತರು ಪೂರ್ವಾಗ್ರಹ ಪೀಡಿತರಾಗದೇ ಪರಾಮರ್ಶಿಸಬೇಕಾಗಿದೆ.
ಅನುಭಾವ ಮತ್ತು ಅನುಭವ ಈ ಎರಡು ಪದಗಳ ಸೂಕ್ಷ್ಮ ಅರ್ಥ ತಿಳಿಯದೆ ಅನುಭವ ಮಂಟಪದ ನಿಜವಾದ ಪರಿಕಲ್ಪನೆ, ರಚನೆ ಅರ್ಥ ಆಗುವುದಿಲ್ಲ. ಅನುಭವ ಎಂದರೆ Experience. ಇಂಗ್ಲೀಷಿನ Experience ಎಂಬ ಪದಕ್ಕೆ ಕನ್ನಡದ ಸಂವಾದಿ ಪದ ಅನುಭವ ಎಂಬುದಾಗಿದೆ. ಈ ಅನುಭವ ದೊರೆಯುವುದು ಮಾನವರಿಗೆ ಅನುಭವೇಂದ್ರಿಯಗಳ ಮೂಲಕ. ಅನುಭವೇಂದ್ರಿಯಗಳೇ ಪಂಚೇಂದ್ರಿಯಗಳು. ಕರ್ಮೆಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯ. ಇಂದ್ರಿಯಗಳು ಬಾಹ್ಯದಿಂದ ಅನುಭವ ಹೊಂದಲು ಶರೀರದಲ್ಲಿ ಆತ್ಮನಿರಬೇಕು. ಆತ್ಮನಿರದ ದೇಹ ಶವ. ಶವಕ್ಕೆ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಕೈ, ಕಾಲು ಎಲ್ಲ ಇದ್ದರೂ ಆತ್ಮನಿಲ್ಲದೆ ಅವುಗಳಿಗೆ ಯಾವ ಸಂವೇದನೆಗಳೂ ದಕ್ಕುವುದಿಲ್ಲ. ಶರಣರು ಈ ಕಾರಣದಿಂದ ದೇಹದೊಳಗಿರುವ ಆತ್ಮನೊಂದಿಗೆ ಅನುಸಂಧಾನಗೊಳ್ಳಲು ಶರೀರದ ಅಂಗಾಂಗಗಳೊಂದಿಗೆ ಆತ್ಮನನ್ನು ಸಾಮರಸ್ಯಗೊಳಿಸಿಕೊಂಡು ಅತೀಂದ್ರಿಯ ಅನುಭವ ಹೊಂದಿದರು. ಇದಕ್ಕಾಗಿ ಅವರು ಇಷ್ಟಲಿಂಗವನ್ನು ಪೂಜಿಸುತ್ತಾ ಆತ್ಮನೊಂದಿಗೆ ಅಂಗವನ್ನು ಬೆರೆಸಿಕೊಂಡು ಲಿಂಗಾಂಗ ಸಾಮರಸ್ಯ ಸಾಧಿಸಿದರು. ಆತ್ಮ ಅಂದರೆ ಪರಮಾತ್ಮ. ಅಂದರೆ ಉಚ್ಛತಮವಾದ ಪರಮ ಆತ್ಮ. ಅದೇ ಶಿವಯೋಗ. ಅಲ್ಲಿ ಶರಣರು ಮಹಾಬೆಳಕನ್ನು ದರ್ಶಿಸುತ್ತಿದ್ದರು. ಸಮಾಧಿ ಸ್ಥಿತಿಯಲ್ಲಿ ಶೂನ್ಯ ಸ್ಥಿತಿಯಲ್ಲಿ ಆ ದಿವ್ಯ ಪ್ರಕಾಶವನ್ನು ಅವರ ಇಂದ್ರಿಯಗಳ ಅನುಭವಿಸುತ್ತಿದ್ದವು. ಈ ಅನುಭವ ಅನಿವರ್ಚನೀಯ ಅದನ್ನು ಅನುಭವಿಸಿಯೇ ತಿಳಿದುಕೊಳ್ಳಬೇಕು. ಅನುಭವಿಸಿದ ಆ ಮಹಾಲಿಂಗದ ಬೆಳಕನ್ನು 12 ನೇ ಶತಮಾನದಲ್ಲಿ ಶಿವಶರಣರು ವಚನಗಳ ಮೂಲಕ ವಿವರಿಸಲು ಪ್ರಯತ್ನಿಸಿದರು. ಇಂತಹ ಅನಿವರ್ಚನೀಯ ಅನುಭವದ ನಿರ್ವಚನಕ್ಕೆ ಅನುಭವ ಎಂದು ಕರೆಯಲಾಗಿದೆ. ಅನುಭವ ವೈಯಕ್ತಿಕವಾಗಿದ್ದರೇ ಅದು ನಿರ್ವಚನಕ್ಕೆ ಒಳಗಾದಾಗ ಅನುಭಾವ ಎಂದು ಕರೆಯಿಸಿಕೊಳ್ಳುತ್ತದೆ.
ಅನುಭಾವ ಎಂಬ ಕನ್ನಡ ಪದಕ್ಕೆ ಇಂಗ್ಲೀಷನ ಸಂವಾದಿ ಪದ ಎಂದರೆ “Spiritual Experience” ಎಂಬುದಾಗಿದೆ. Mystic ಎಂಬ ಪದವೂ ಪರ್ಯಾಯವಾಗಿ ಬಳಕೆಯಾಗುತ್ತದೆ. ಈ “Spiritual Experience” ಅಥವಾ Mystic ಎಂಬುದಕ್ಕೆ ಶಿವಾನುಭವ, ಲಿಂಗಾನುಭವ, ಆತ್ಮಾನುಭವ, ಅದ್ವೆತ್ವಸ್ಥಿತಿ, ಶಿವಯೋಗ, ಲಿಂಗಾಂಗ ಸಾಮರಸ್ಯ ಎಂಬ ನಾನಾ ಅರ್ಥಗಳಿವೆ. ಇಂತಹ ಅನುಭಾವದ ಚರ್ಚೆಯನ್ನು ವಚನಕಾರರು ಅಥವಾ ಶಿವಶರಣರು ಅನುಭಾವ ಎನ್ನುವ ರೂಢಿ ಇದೆ. ಆದ್ದರಿಂದ ಅನುಭವ ಮಂಟಪ ಎಂಬುದು ಕೇವಲ ವಚನಗಳ ಕುರಿತಾದ ಚರ್ಚೆಗೆ ಸೀಮಿತವಾಗಿರದೇ ಅನುಭಾವದ ಎತ್ತರಕ್ಕೆ ತಲುಪುವ ತರಬೇತಿ ನೀಡುವ ಸಂಸ್ಥೆಯಾಗಿತ್ತು ಎಂಬುದು ಸತ್ಯವಾದುದು. ಅನುಭಾವದೆತ್ತರಕ್ಕೆ ಏರಲು ಪ್ರಾಥಮಿಕ ಹಂತದ ಆಧ್ಯಾತ್ಮ ಸಾಧಕರಿಗೆ ಶರಣರ ಸಂಗ, ಸಾಮಿಪ್ಯ ಅವಶ್ಯಕವಾಗಿತ್ತು. ಅದಕ್ಕಾಗಿ ಕಲ್ಯಾಣದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದರು. ಆ ಅನುಭವ ಮಂಟಪದಲ್ಲಿ ಅನುಭವದ ತರಬೇತಿಗಾಗಿ, ಶರಣರ ಸಂಗಕ್ಕೆ ಹಾತೊರೆದು ಬೇರೆ ಬೇರೆ ರಾಜ್ಯಗಳಿಂದ, ದೇಶಗಳಿಂದ ಶರಣರು ಬಂದು ಶಿವಯೋಗ ಸಾಧಿಸಿದ ಇತಿಹಾಸ ನಮ್ಮ ಕಣ್ಣ ಮುಂದೆಯೇ ಇದೆ. ಇಂತಹ ಅಪೂರ್ವ ಅವಕಾಶವನ್ನು ಅನುಭವ ಮಂಟಪ ಸ್ಥಾಪಿಸಿ ಕೊಡಮಾಡಿದ್ದು ಬಸವಣ್ಣನವರ ಶ್ರೇಯಸ್ಸು. ಸ್ವತಃ ಬಸವಣ್ಣನವರ ವಿಚಾರಪತ್ನಿ ಎನಿಸಿದ ಶರಣೆ ನೀಲಾಂಬಿಕೆಯವರ ವಚನದಲ್ಲಿ ನಾವು ಈ ವಿವರಗಳನ್ನು ದರ್ಶಿಸಬಹುದು. ಇದೊಂದು ಬಹು ಧೀರ್ಘವಾದ ವಚನವಾಗಿದೆ. ಪೂರ್ತಿಯಾಗಿ ಕಲ್ಯಾಣದಲ್ಲಿ ನಡೆದ ಅನುಭವ ಮಂಟಪದ ರಚನೆ ಮತ್ತು ಅದರ ಕಾರ್ಯಗಳ ವಿವರಗಳು ದೊರೆಯುತ್ತವೆ. ಬಸವಣ್ಣನವರ ವ್ಯಕ್ತಿತ್ವದೊಂದಿಗೆ ಅವರು ಮಾಡಿದ ಮಹತ್ಕಾರ್ಯಗಳ ದಾಖಲೆಯನ್ನು ನೀಲಾಂಬಿಕೆಯವರ ಈ ವಚನ ವಿಶದೀಕರಿಸುತ್ತದೆ. ಸ್ವತಃ ನೀಲಾಂಬಿಕೆಯವರ ಈ ವಚನವೇ ಸಾಕ್ಷಿ ಇರುವಾಗ ಅನುಭವ ಮಂಟಪ ಎಂಬುದು ಕಾಲ್ಪನಿಕ ಎಂಬ ಮಾತುಗಳ ಹುಸಿತನ ಇಲ್ಲಿ ಬಯಲಾಗುತ್ತದೆ.
ಆದಿ ಆಧಾರವಿಲ್ಲದ ಸಂದರ್ಭದಲ್ಲಿ ಏನೂ ಪರಿಕಲ್ಪನೆಯ ಇಲ್ಲದಂದು ಇಷ್ಟಲಿಂಗ ಪರಿಕಲ್ಪನೆಯ ನೀಡಿ, ಇಷ್ಟಲಿಂಗ ಮಹಾಲಿಂಗದ ಪ್ರತಿರೂಪವೆಂದು ಸಾರಿದವನು ನಮ್ಮ ಬಸವಯ್ಯ ಎಂದು ನೀಲಮ್ಮನವರು ವಚನದ ಪ್ರಾರಂಭದಲ್ಲಿ ಪ್ರತಿಪಾದಿಸುತ್ತಾರೆ. ಕೈಲಾಸವನ್ನೇ ಕಲ್ಯಾಣ ಮಾಡಿದಾತ ಬಸವಯ್ಯನು ಎನ್ನುವ ನೀಲಮ್ಮ ತಾಯಿ ಕಲ್ಯಾಣವೇ ಕೈಲಾಸವಾಯಿತು. ಅಲ್ಲಿ ಪ್ರಥಮ ಗಣಂಗಳು, ರುದ್ರಗಣಂಗಳು, ಅಮರಗಣಂಗಳು, ಪುರಾತನಗಣಂಗಳು, ಪುಣ್ಯಗಣಂಗಳು, ಮಹಾಗಣಂಗಳು, ಮುಖ್ಯ ಗಣಂಗಳು, ಮಹಾಲಿಂಗೈಕ್ಯ ಸಂಪನ್ನರು, ಭಕ್ತ, ಮಾಹೇಶ್ವರ, ಪ್ರಸಾದಿ ಪ್ರಾಣಲಿಂಗಿ ಶರಣ, ಐಕ್ಯರೆಂಬ ಆಚಾರಾದಿ ಮಹಾಲಿಂಗ ಸಂಪನ್ನರು … … ಮುಂತಾದ ಶಿವಗಣಂಗಳನ್ನೇ ತಂದು ನೆರಹಿದಾತ ನಮ್ಮ ಬಸವಯ್ಯನು ಎನ್ನುವ ಮಾತುಗಳಲ್ಲಿ ಅನುಭವ ಮಂಟಪದಲ್ಲಿ ಇವರೆಲ್ಲರೂ ಅನುಭಾವದ ನೆಲೆಗೆ ಏರುತ್ತಿದ್ದರು, ಅಲ್ಲಿ ಇಷ್ಟಲಿಂಗ ಪೂಜಿಸುತ್ತಾ ಸಾಧನೆ ಮಾಡುತ್ತಿದ್ದರು ಎಂಬ ಸ್ಪಷ್ಟ ಚಿತ್ರಣ ದೊರೆಯುತ್ತದೆ. “ಮರ್ತ್ಯಲೋಕವನೆ ಮಹಾಪ್ರಮಥರ ಬಿಡಾರದವ ಮಾಡಿದಾತ ನಮ್ಮ ಬಸವಯ್ಯನು” ಎಂಬುದೂ ಸಹ ಅನುಭವ ಮಂಪಟದ ಅಸ್ತಿತ್ವಕ್ಕೆ ಸಾಕ್ಷಿ ಹೇಳುತ್ತಿದೆ. ಬಿಡಾರ ಎಂದರೆ ಉಳಿದುಕೊಳ್ಳುವ ಮನೆ ಎಂದೇ ಅರ್ಥವಲ್ಲವೇ? ಅಷ್ಟೇ ಅಲ್ಲ ಮುಂದುವರೆದು ನೀಲಮ್ಮಾ ತಾಯಿ ಇನ್ನೂ ಸ್ಪಷ್ಟತೆ ನೀಡುತ್ತಾರೆ;
ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು,
ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು,
… … … … … … … … … … … …
… … … … … … … … … … … …
ಬಯಲನೊಂದು ರೂಪಮಾಡಿ ಬಣ್ಣಕ್ಕೆ ತಂದು,
ಆ ಬಣ್ಣವ ನಿಜದಲ್ಲಿ ನಿಲಿಸಿದಾತ ನಮ್ಮ ಬಸವಯ್ಯನು.
ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಇಚ್ಫೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು.
ಅಂಗಸಂಗಿಗಳನಂತರಿಗೆ
ಅಂಗನೆಯರ ಅನುಭವವ ನಡಸಿದಾತ ನಮ್ಮ ಬಸವಯ್ಯನು.
… … … … … … … … … … … …
… … … … … … … … … … … …
ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯಬೆಳೆಯ ಬೆಳೆದು,
ಪರಮಪ್ರಸಾದವನೊಂದು ರೂಪಮಾಡಿ ಮೆರೆದು,
ಭಕ್ತಿಫಲವನುಂಡಾತ ನಮ್ಮ ಬಸವಯ್ಯನು.
ಚೆನ್ನಬಸವನೆಂಬ ಪ್ರಸಾದಿಯ ಪಡೆದು,
ಅನುಭವಮಂಟಪವನನುಮಾಡಿ,
ಅನುಭವಮೂರ್ತಿಯಾದ ನಮ್ಮ ಬಸವಯ್ಯನು.
… … … … … … … … … … … …
… … … … … … … … … … … …
ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲ ಕೂಡಿ,
ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-323/ವಚನ ಸಂಖ್ಯೆ-843)
ಬಯಲನೊಂದು ರೂಪ ಮಾಡಿ ಬಣ್ಣಕ್ಕೆ ತಂದು,
ಆ ಬಣ್ಣವ ನಿಜದಲ್ಲಿ ನಿಲಿಸಿದಾತ ನಮ್ಮ ಬಸವಯ್ಯನು,
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮಕ್ಕೆ
ಇಚ್ಛೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು
ಅಂಗಸಂಗಿಗಳ ನಂತರಿಗೆ
ಅಂಗನೆಯರ ಅನುಭವ ನಡೆಸಿದಾತ ನಮ್ಮ ಬಸವಯ್ಯನು,
ಎಂಬ ನುಡಿಗಳಲ್ಲಿ ಮಹಾಲಿಂಗಕ್ಕೆ ಇಷ್ಟಲಿಂಗ ರೂಪ ಮಾಡಿ, ಲಕ್ಷದ ಮೇಲೆ ತೊಂಭತ್ತಾರು ಸಾವಿರ ಜಂಗಮಕ್ಕೆ ಪ್ರಸಾದ ವ್ಯವಸ್ಥೆ ಮಾಡುವ ಕಾರ್ಯದ ಮೇಲೆ ಬೆಳಕು ಚೆಲ್ಲುತ್ತ ದಾಸೋಹ ಮಹಾಮನೆಯ ಚಿತ್ರಣ ಕೊಡುತ್ತಾರೆ. ಅಂಗನೆಯರ ಅನುಭಾವ ನಡೆಸಿದಾತ ನಮ್ಮ ಬಸವಯ್ಯ ಎಂಬಲ್ಲಿ ಶಿವರಣೆಯರೂ ಸಹ ವಚನ ರಚನೆ ಮಾಡಿದ್ದು ಅನುಭಾವದ ನೆಲೆಗೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿರುವ ಚಿತ್ರಣ ಇಲ್ಲಿದೆ. ಶಿವಶರಣೆಯರಿಗೂ ಅನುಭವ ಮಂಟಪ ಸ್ಥಾನ ನೀಡಿತ್ತು ಎಂಬ ವಿವರ ಇಲ್ಲಿ ಸಿಗುತ್ತದೆ.
ಪ್ರಣವ ಬೀಜವ ಬಿತ್ತಿ, ಪಂಚಾಕ್ಷರಿಯ ಬೆಳೆಯ ಬೆಳೆದು,
ಪರಮ ಪ್ರಸಾದವನೊಂದು ರೂಪಮಾಡಿ ಮೆರೆದು,
ಭಕ್ತಿಯ ಫಲವನುಂಡಾ ನಮ್ಮ ಬಸವಯ್ಯನು,
ಚನ್ನಬಸವನೆಂಬ ಪ್ರಸಾದಿಯ ಪಡೆದು,
ಅನುಭವಮಂಟಪವನು ಮಾಡಿ,
ಅನುಭವಮೂರ್ತಿಯಾದ ನಮ್ಮ ಬಸವಯ್ಯನು
ನೀಲಮ್ಮ ತಾಯಿಯವರ ಈ ಮಾತುಗಳಲ್ಲಂತೂ ಅನುಭವ ಮಂಟಪದ ಸ್ಪಷ್ಟ ಚಿತ್ರಣವಿದೆ. ಪ್ರಸಾದ, ಪಾದೋದಕ, ಮಂತ್ರಗಳ ಮಹತ್ವ ತಿಳಿಸಿಕೊಟ್ಟು ಅದನ್ನು ಸ್ವತಃ ನಡೆದು ತೋರಿದ ಭಕ್ತಿಬಂಡಾರಿ ಬಸವಯ್ಯ ಎನ್ನುವ ತಾಯಿ ನೀಲಮ್ಮ ಮುಂದುವರೆದು ಚನ್ನಬಸವಣ್ಣನಂತಹ ಪ್ರಸಾದಿಯ ಪಡೆದುಕೊಂಡು ಅನುಭವ ಮಂಟಪ ಮಾಡಿ ಶಿವಯೋಗದ ತತ್ವಗಳನ್ನು ಆ ಮಂಟಪದಲ್ಲಿ ಅಣಿಗೊಳಿಸಿ ಸ್ವತಃ ಅನುಭವ ಮೂರ್ತಿಯಾದ ಬಸವಯ್ಯನು ಮುಂದೆ ಆ ಅನುಭವ ಮಂಟಪವನ್ನು ಅರಿವು–ಆಚಾರದ ಮಂಟಪವಾಗಿಸಿದನು. ಬಸವಣ್ಣನವರು ನಿರ್ಮಿಸಿದ ಅರಿವಿನ ಮಂಟಪವೇ ಅನುಭವ ಮಂಟಪವಾಯಿತು. ತಾವೊಬ್ಬರೆ ಅರಿವು ಪಡೆದುಕೊಳ್ಳವೆ ಬಸವಣ್ಣನವರು ಅನುಭವ ಮಂಟಪದ ಮೂಲಕ ಎಲ್ಲರಿಗೂ ಅರಿವನ್ನು ಹಂಚಿದರು. ಹೀಗಾಗಿ ಅರಿವಿನ ಮಂಟಪ–ಅನುಭವ ಮಂಟಪವಾಯಿತು. ಆಚಾರದ ಮಂಟಪವಾಯಿತು. ಈ ಮಾತಿಗೂ ನೀಲಮ್ಮನವರ ಈ ವಚನವೇ ಸಾಕ್ಷಿಯಾಗುತ್ತದೆ.
ಅರಿವು ಸಂಪಾದಿಸಿ ಆಚಾರವನಂಗಂಗೊಳಿಸಿ, ಏಳನೂರೆಪ್ಪತ್ತು ಅಮರಗಣಂಗಳ ಅನುಭವ ಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು. ಏಳನೂರಾ ಎಪ್ಪತ್ತು ಅಮರಗಣಂಗಳಿಗೆ ಅರಿವು–ಆಚಾರವನ್ನು ಹಂಚಿ ಅವರನ್ನೆಲ್ಲಾ ಅನುಭವ ಮೂರ್ತಿ ಮಾಡಿದ ಬಸವಣ್ಣನವರು, ತಾವೊಬ್ಬರೇ ಅನುಭವ ಮೂರ್ತಿಯಾಗದೇ ಸಕಲರಲ್ಲೂ ಅರಿವು, ಆಚಾರ, ಅನುಭವ, ಅನುಭಾವ ಹಂಚಿ ಅನುಭವ ಮಂಟಪವನ್ನು ಅರಿವಿನ ಮಂಟಪವಾಗಿಸಿದ್ದೇ ಅಪ್ಪ ಬಸವಣ್ಣನವರ ಶ್ರೇಯಸ್ಸು. ನೀಲಮ್ಮ ತಾಯಿಯವರ ಈ ಸುಧೀರ್ಘ ವಚನವೇ ಕಲ್ಯಾಣ, ಅನುಭವ ಮಂಟಪ, ಮಹಾಮನೆ, ಶಿವಶರಣೆಯರ ಶಿವಯೋಗ, ಲಕ್ಷದ ಮೇಲೆ ತೊಂಭತ್ತಾರು ಶರಣರ, 770 ಅಮರಗಣಂಗಳ, ಸಾಕಷ್ಟು ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ.
ಇದೆಲ್ಲಾ ವಿವರಗಳಿಂದ 12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಅನುಭವ ಮಂಪಟ ಇತ್ತು, ಅದು ಅರಿವಿನ ಮಂಟಪವಾಗಿತ್ತು, ಆಚಾರದ ಮಂಪವಾಗಿತ್ತು. ಅದಕ್ಕೆ ಜಾತಿ–ಮತ, ಗಂಡು- ಹೆಣ್ಣು, ಶ್ರೀಮಂತ-ಬಡವನೆಂಬ ಗೋಡೆಗಳಿದ್ದಿಲ್ಲ ಎಂಬುದು ಸತ್ಯವಾದುದಾಗಿದೆ. ಹೀಗಾಗಿ ಕಲ್ಯಾಣದಲ್ಲಿ ಅಪ್ಪ ಬಸವಣ್ಣನವರಿಂದ ಕಟ್ಟಲ್ಪಟ್ಟ ಅನುಭವ ಮಂಟಪ ಜಗತ್ತಿನ ಪ್ರಪ್ರಥಮ ಸಂಸತ್ತೆಂದು ಪುರಸ್ಕರಿಸಲ್ಪಟ್ಟಿದೆ. ಮೊಟ್ಟ ಮೊದಲಿಗೆ ಪ್ರಜಾಸತ್ತಾತ್ಮಕ ಚಿಂತನೆ ನಡೆಸಿದ ಸಂಸ್ಥೆಯೆನಿಸಿದೆ. ಸಕಲಜೀವಿಗಳಿಗೆ ಬದುಕುವ ಹಕ್ಕನ್ನು ಎತ್ತಿ ಹಿಡಿದ ನ್ಯಾಯಕಟ್ಟೆ ಎನಿಸಿದೆ. ಅನ್ನ, ಅರಿವು ನೀಡಿದ ದಾಸೋಹದ ಮನೆ ಎನಿಸಿದೆ. ಕಾಯಕ ಜೀವಿಗಳ ಶ್ರಮದ ಬೆವರಿಗೆ ಬೆಲೆ ನೀಡಿದ, ಸ್ವಾಭಿಮಾನದ ಬದುಕನ್ನು ಶ್ರಮಜೀವಿಗಳು ಕಟ್ಟಿಕೊಳ್ಳಲು ಅವಕಾಶ ನೀಡಿದ ಬಹುದೊಡ್ಡ ಸಂಘಟನೆಯ ಸಂಸ್ಥೆಯಿದು. ಆಧ್ಯಾತ್ಮ, ವೈಚಾರಿಕತೆ, ವೈಜ್ಞಾನಿಕತೆ, ಸಾಹಿತ್ಯದ ನಿಜ ಚಿಂತನೆಯ ಮಂಪಟವಿದು. ಸರ್ವಸಮಾನತೆಯನ್ನು ಸಾರಿದ ಜಗತ್ತಿನ ಪ್ರಪ್ರಥಮ ಪಾರ್ಲಿಮೆಂಟ್ ಎಂದು ಕರೆಯಿಸಿಕೊಂಡ 900 ವರ್ಷಗಳ ಇತಿಹಾಸ ಹೊಂದಿದ ಅನುಭವ ಮಂಟಪದ ಕುರಿತು ನಿಜವಾದ ಚಿಂತನೆಗಳು ನಡೆಯಬೇಕು. ಕಲ್ಯಾಣದ ಅನುಭವ ಮಂಪಟ ಜಾಗತಿಕವಾಗಿ ಬೆಳೆದು ಅದರ ಬೆಳಕು ಎಲ್ಲೆಡೆ ಹರಿದಾಡಬೇಕಾಗಿದೆ. ಅನುಭವ ಮಂಟಪ, ಅರಿವಿನ ಮಂಟಪ ಎಂಬ ಸತ್ಯ ಜಗಜಾಹಿರಾಗಬೇಕಾಗಿದೆ.
ಡಾ. ಪುಷ್ಪಾವತಿ ಶಲವಡಿಮಠ
ಕನ್ನಡ ಉಪನ್ಯಾಸಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕಬಾಸೂರು,
ತಾ. ಬ್ಯಾಡಗಿ, ಜಿ. ಹಾವೇರಿ – 581 110
ಫೋನ್: 97407 38330
ಪರಾಮರ್ಶನ ಕೃತಿಗಳು:
1. ಲಿಂಗಾಯತಂ ಭೊ ಸ್ವತಂತ್ರಶೀಲ: ಡಾಸೋಮನಾಥ ಯಾಳವಾರ.
2. ಬಸವಯುಗದ ವಚನ ಮಹಾಸಂಪುಟ: ಪ್ರ.ಸಂ. ಡಾ.ಎಂ. ಎಂ. ಕಲಬುರ್ಗಿ.
3. ಅಲ್ಲಮನ ವಜ್ರಗಳು – ಡಾ. ಎನ್. ಜಿ. ಮಹಾದೇವಪ್ಪ.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51410