ಅಲ್ಲಮಪ್ರಭುದೇವರ ವಚನ ವಿಶ್ಲೇಷಣೆ / ಶ್ರೀ ಅಳಗುಂಡಿ ಅಂದಾನಯ್ಯ, ಬೆಳಗಾವಿ.

ಅಲ್ಲಮಪ್ರಭುಗಳ ಬೆಡಗಿನ ನುಡಿಗಳ ಈ ವಚನವನ್ನು ಮೊದಲಿಗೆ ಸಹಜವಾಗಿ ಓದಿದಾಗ, ಅಲ್ಲಿ ಬಳಸಿರುವ ರೂಪಕದ ಭಾಷೆಯಲ್ಲಿರುವಂಥಾ ಆ ದೃಷ್ಟಾಂತದ ಪದಗಳು; ಸರ್ವೇ ಸಾಮಾನ್ಯವಾದ ಮತ್ತು ಸಿದ್ಧಮಾದರಿಯ ಹಾಗೂ ಜನಜನಿತವಾದ ಅರ್ಥವನ್ನು ನೀಡುತ್ತವೆ. ಅದುದರಿಂದ ಪ್ರತಿ ಸಾಲುಗಳು ನೀಡುವ ಚಿತ್ರಣವನ್ನು ಸುಲಭವಾಗಿ ಗ್ರಹಿಸಿಕೊಂಡು ರೂಪವಾದಂಥ ಒಂದು ಅರ್ಥವನ್ನಿಲ್ಲಿ ಸಹಜವಾಗಿ ಹೇಳಿ ಬಿಡಬಹುದೆಂದು ಖರೆ ಅನಿಸುತ್ತದೆ! ಆದರೆ, ಇಲ್ಲಿ ಮೇಲ್ನೋಟಕ್ಕೆ ಹಾಗೆ ಸಿಗುವಷ್ಟೇ ಅರ್ಥವನ್ನು ಪ್ರಸ್ತುತ ಈ ವಚನವು ಹೇಳುವುದಿಲ್ಲ! ಅದು ತನ್ನ ಬೆಡಗಿನ ನುಡಿಗಳಲ್ಲಿ ಹೂತಿಟ್ಟ ಮಹತ್ವದ ವಿಚಾರ ಸಂಪತ್ತನ್ನು ಕುರಿತು ಹೇಳಲು ಇಲ್ಲಿ ತವಕಿಸುತ್ತಿದೆ ಎಂಬುದು ಖಂಡಿತಾ ಅನಿಸುತ್ತದೆ. ಅಲ್ಲಮಪ್ರಭುಗಳಂಥ ಮಹಾಜ್ಞಾನಿಗಳು ರಚಿಸಿರುವ, ಅದೂ ಇಷ್ಟು ಸರಳ ಕಾಣುವ ವಚನವು  ಅಷ್ಟು ಸಹಜ ಮತ್ತು ಸರಳವಾಗಿ ತನ್ನ ನಿಜಾರ್ಥವನ್ನು ನೀಡಿ ದಕ್ಕುವಂಥದ್ದಲ್ಲ. ಹಾಗಾಗಿ ಈ ನುಡಿ ಬೆಳಕನ್ನು ಎಚ್ಚರದ ಹಿನ್ನೆಲೆಯಲ್ಲಿಟ್ಟುಕೊಂಡು ಅನುಸಂಧಾನ ಮಾಡುವ ಮೂಲಕ ಈ ವಚನಲ್ಲಿನ ರಹಸ್ಯಾರ್ಥವನ್ನು ಕಾಣಲು ಹಾಗೂ ಅದರಲ್ಲಿನ ನಿಜಸ್ವರೂಪದ ಅರಿವನ್ನ ಹೊಂದಲು ಸಾಧ್ಯ ವಾಗುತ್ತದೆ. ಈಗ ಅಂಥ ಒಂದು ಪ್ರಯತ್ನ ವನ್ನು ಇಲ್ಲಿ ಮಾಡಿ ನೋಡೋಣ.

ಕೆಂಡದ ಗಿರಿಯ ಮೇಲೊಂದು, ಅರಗಿನ ಕಂಬವಿದ್ದಿತ್ತು ನೋಡಯ್ಯಾಎನ್ನುವ ವಚನದ ಈ ಪ್ರಾರಂಭದ ಸಾಲುಗಳು; ಕೆಂಡದ ಗಿರಿಯ ಮೇಲೆ ಒಂದು ಅರಗಿನ ಕಂಭ ಇದೆ ಎಂದು ಸಹಜವಾಗಿ ಹೇಳಿಬಿಡುತ್ತವೆ. ಆದರೆ ಅದು ವಚನವು ಹೇಳುವ ನಿಜವಾದ ಅರ್ಥವಲ್ಲ. ಕೆಂಡದಗಿರಿ ಮತ್ತು ಅರಗಿನ ಕಂಭ ಈ ಎರಡು ಜೋಡಿ ಪದಗಳು ಇಂಬಿಟ್ಟುಕೊಂಡ ನಿಜವಾದ ಅರ್ಥ; ಅದು ಪಿಂಡಾಂಡ ಮತ್ತು ಬ್ರಹ್ಮಾಂಡದ ನಡುವಿನ ನಿಜವಾದಂಥ ಅರ್ಥ ಸಂಬಂಧವನ್ನು ಉದ್ದೇಶಿಸಿ ಈ ಸಾಲುಗಳು ಇಲ್ಲಿ ಮಾತನಾಡುತ್ತವೆ. ಬ್ರಹ್ಮಾಂಡದಲ್ಲಿನ ಪೃಥ್ವಿಯು ಇಂದಿಗೂ ತನ್ನಾಳದೊಳಗೆ ಕೊತ ಕೊತನೆ ಕುದಿಯುವ ಕೆಂಡದ ಲಾವಾರಸವನ್ನು ಹೊಂದಿದ ವೈಜ್ಞಾನಿಕ ಸತ್ಯವನ್ನು ಕೆಂಡದ ಗಿರಿಯ ರೂಪಕದ ಮೂಲಕ ವಚನಕಾರ ಅಲ್ಲಮರು ಹೇಳಿದರೆ, ಪಿಂಡಾಂಡವಾಗಿರುವ ಈ ಶರೀರವು ಪಂಚ ತತ್ವಗಳಾದಂಥ; ಭೂಮಿ, ನೀರು, ಬೆಂಕಿ, ಗಾಳಿ, ಮತ್ತು ಆಕಾಶ ಇವುಗಳಿಂದ ರೂಪುಗೊಂಡ ಸತ್ಯವನ್ನು ಅರಗಿನ ಕಂಭಪದ ಎಂದಿಲ್ಲಿ ಸೂಚ್ಯವಾಗಿ ಹೇಳಿದ್ದಾರೆ.

ಅರಗಿನ ಕಂಬದ ಮೇಲೆ ಹಂಸೆಯಿದ್ದಿತ್ತು, ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾಎನ್ನುವಲ್ಲಿ, ಪಂಚಭೂತಗಳ ಮೊತ್ತವಾದ ಅರಗಿನ ಸ್ವರೂಪದ ಈ ಶರೀರವೆಂಬ ಸ್ಥಾವರ ಕಂಭದ ಮೇಲೆ ಪ್ರಾಣಪಕ್ಷಿ ಎಂಬ ಹಂಸವು ಕುಳಿತಿದೆ! ಅರಿಷಡ್ವರ್ಗದ ಹಾಗೂ ಆಯುರ್ಮಾನದ ಉರಿಯು ತಾಗಿದ ಶರೀರದ ಈ ಕಂಭ ಒಂದು ನಿಗದಿತ ಸಮಯ (ಆಯುಷ್ಯ) ತೀರಿದಂದು ಅದು ಬೆಂದು ಹೋಗುತ್ತದೆ ಆದರೆ, ಜಂಗಮ ತತ್ವದ ಸ್ವರೂಪವೇ ಆದಂತಹ ಆತ್ಮ ಹಂಸ ಮಾತ್ರ ಹಾರಿಹೋಗುತ್ತದೆ! ಈ ಸತ್ಯವನ್ನು ಸಾರುವ ಮೂಲಕ ಭೂಮಿ ಮೇಲೆ ಹುಟ್ಟಿದ ಮನುಷ್ಯನ ಬದುಕಿಗೆ ಈ ವಚನವು ಒಂದು ಭಾಷ್ಯವನ್ನು ಬರೆಯುವುದರ ಜೊತೆ ಜೊತೆಗೆ, ಶರೀರ ಎಂಬ ಪಿಂಡಾಂಡ (ಪೃಥ್ವಿ ತತ್ವ) ಮತ್ತು ಬಯಲು ಎಂಬ ಬ್ರಹ್ಮಾಂಡ (ಶೂನ್ಯ ತತ್ವ) ಇವುಗಳ ನಡುವಿನ ನೇರ ಸಂಬಂಧಗಳ ಸೂಕ್ಷ್ಮವನ್ನು ಪ್ರಸ್ತುತ ವಚನ ವ್ಯಾಖ್ಯಾನ ಮಾಡುತ್ತದೆ ಎನ್ನುವ ಸತ್ಯವನ್ನ ಅಲ್ಲಮಪ್ರಭುಗಳು ಈ ವಚನ ದಲ್ಲಿ ಎರಕಹೊಯ್ದು ಕೊಟ್ಟಿದ್ದಾರೆಂದು ನಿಜಕ್ಕೂ ಅನಿಸುತ್ತದೆ..                        

ಶ್ರೀ ಅಳಗುಂಡಿ ಅಂದಾನಯ್ಯ
ಬೆಳಗಾವಿ.
ಫೋನ್ ನಂ:+919972950193

Loading

Leave a Reply