ಅಲ್ಲಮರ ವಚನಗಳಲ್ಲಿ “ಲಿಂಗಾಚಾರ” / ಸುನಿತಾ ಮೂರಶಿಳ್ಳಿ, ಧಾರವಾಡ.

ಅನಾದಿ ಕಾಲದಿಂದಲೂ ಲಿಂಗವೆಂಬುದು ಮೂರ್ತರೂಪದಲ್ಲಿ ಸ್ಥಾವರಲಿಂಗವಾಗಿ ಚರಲಿಂಗವಾಗಿ ಪೂಜಿಸುತ್ತಾ ಬಂದಿದೆ. ಆದರೆ ಲಿಂಗವೆಂಬುದನ್ನು ಚೈತನ್ಯದ ಕುರುಹಾಗಿ ಸಮಷ್ಟಿಯ ಕುರುಹಾಗಿ ಇಷ್ಟಲಿಂಗವೆಂದು ಕರಸ್ಥಲಕ್ಕೆ ತಂದುಕೊಟ್ಟವರು ಬಸವಣ್ಣನವರು.  ಲಿಂಗವೇ ಬಸವ ಧರ್ಮದ ಬುನಾದಿ. ಸರ್ವಸಮಾನತೆಯ ಪಾತಳಿಯ ಮೇಲೆ ನಿಂತು ಎಲ್ಲ ಅಸಮಾನತೆಗಳನ್ನು ತೊಡೆದು ಹಾಕಿದ ಈ ಲಿಂಗದ ಪರಿಕಲ್ಪನೆ ವ್ಯಷ್ಟಿ ಹಾಗೂ ಸಮಷ್ಟಿಗಳ ವಿಕಾಸದ ಮಧ್ಯದ ಸೇತುವೆ ಆಗಿದೆ. ಅಂಗದಿಂದ ಲಿಂಗವಾಗುವ ಪಯಣವೇ ಬಯಲ ಪಯಣ, ಲಿಂಗ ಪಯಣ, ಸತ್ಯದ ಗಂತವ್ಯ.

ವ್ಯಕ್ತಿಯ ಆತ್ಮೋನ್ನತಿಗಾಗಿ ತನ್ಮೂಲಕ ಜಗದ ಒಳಿತಿಗೆ ಹಾಕಿದ ನೈತಿಕ ಚೌಕಟ್ಟುಗಳೇ ಪಂಚಾಚಾರಗಳು. ಅದರಲ್ಲಿ ಲಿಂಗಾಚಾರವು ಸರ್ವಾಂಗೀಣ ಅಭಿವೃದ್ಧಿಯ ಮೂಲದ್ರವ್ಯ. ಇದನ್ನು ಎರಡು ಆಯಾಮಗಳಲ್ಲಿ ಗುರುತಿಸಬಹುದು. ಒಂದು ಲಿಂಗದ ಸಿದ್ಧಿಗಾಗಿ ನಿರ್ವಹಿಸುವ ಆಚಾರ, ಇನ್ನೊಂದು ಲಿಂಗವೇ ತಾನಾಗುವ ಆಚಾರ. ಅಲ್ಲಮರ ವಚನಗಳ ಮೂಲಕ ಲಿಂಗವನ್ನು ಇಲ್ಲಿ ವಿಶ್ಲೇಷಿಸ ಬಯಸುವೆ.

ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ,
ಲಿಂಗವನರಿದಬಳಿಕ ಮತ್ತೇನನರಿದಡೆಯು ಫಲವಿಲ್ಲ.
ಸರ್ವಕಾರಣ ಲಿಂಗವಾಗಿ,
ಲಿಂಗವನ್ನು ಅರಿದರಿದು, ಲಿಂಗ ಸಂಗವನ್ನೇ ಮಾಡುವೆ.
ಸಂಗಸುಖದೊಳು ಓಲಾಡುವೆ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-277 / ವಚನ ಸಂಖ್ಯೆ-1483)

ಈ ಒಂದು ವಚನ ಲಿಂಗವಂತರ ಲಿಂಗದ ಪರಿಭಾಷೆಯನೀವ ಮೂಲ ಆಕರ. ಲಿಂಗವೇ ಸರ್ವಸ್ವ. ಲಿಂಗದ ಅಂಶವೇ ಆದ ಈ ಲಿಂಗ ಶರೀರ, ಇದರ ಅನುಭೂತಿಗಾಗಿ ಇಷ್ಟಲಿಂಗವೆಂಬ ಸಾಕಾರದ ಪೂಜೆ. ಸಾಕಾರದಿಂದ ನಿರಾಕಾರಕ್ಕೆ ಸಾಗುವ ಅದ್ಭುತ ಪಯಣವೇ ಲಿಂಗ ಪಯಣ, ಲಿಂಗಾಚಾರ. ಅದಕ್ಕಾಗಿ ಲಿಂಗವನ್ನು ಅರಿಯಲೇಬೇಕು ಇದನ್ನರಿಯದೆ ಏನನರಿತರೂ ಅದು ಗಮ್ಯ ಸೇರಿಸಲಾರದು. ಆದ್ದರಿಂದ ಲಿಂಗವನ್ನು ಅರಿತು ಲಿಂಗವನ್ನು ಪೂಜಿಸಿ ಲಿಂಗವಾಗುವ ಲಿಂಗಸಖಿಯಾಗುವ, ಸುಖಿಯಾಗುವ ಈ ಲಿಂಗದ ಗಮ್ಯ, ಗಮನ ಏನಿರಬಹುದು?

ಭವವುಳ್ಳನ್ನಕ್ಕ ಧಾವತಿ ಮಾಣದು, ಶರೀರ ಉಳ್ಳನ್ನಕ್ಕ  ಅವಸ್ಥೆ ಮಾಣದು.
ಗುಹೇಶ್ವರನೆಂಬ [ನೆನಹು] ಉಳ್ಳನ್ನಕ್ಕ
ಲಿಂಗವೆಂಬುದ ಬಿಡಲಾಗದು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-148 / ವಚನ ಸಂಖ್ಯೆ-125)

ಈ ಭವಕ್ಕೆ ಬಂದಮೇಲೆ ಈ ವ್ಯವಸ್ಥೆಯಲ್ಲಿ ಈ ಚೌಕಟ್ಟುಗಳಲ್ಲಿ ಬದುಕಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಒಡಲ ಕಳವಳವಿದೆ, ಧಾವಂತವಿದೆ. ಈ ಕಾಯ ಇದೆ ಎಂದ ಮೇಲೆ ಇದಕ್ಕೆ ಅವಸ್ಥೆಗಳಿವೆ, ಹುಟ್ಟು-ಸಾವು ಇವೆ. ಹಾಗೆಯೇ ಲಿಂಗದ ನೆನಹು, ಅರಿವಿನ ಆಚರಣೆ ಕೂಡಾ ಇದೆ. ಆದ್ದರಿಂದ ಲಿಂಗವ ಬಿಡಲಾಗದು.

ಲಿಂಗವಿಡಿದು ಅರಿವ ಅರಿವು, ಅರಿವಲ್ಲದೆ
ಗುರುವಿಡಿದು ಅರಿವ ಅರಿವು ಅರಿವಲ್ಲ.
ಗುರುವಿಡಿದು ಲಿಂಗ ಉಂಟೆಂಬುದು ಕಲ್ಪಿತ,
ತನ್ನಿಂದ ತಾನಹುದಲ್ಲದೆ,
ಗುಹೇಶ್ವರ ಲಿಂಗದಲ್ಲಿ ಹಂಗು ಹರಿಯದನ್ನಕ್ಕರ
ತಾನಾಗಬಾರದು ಕಾಣಾ ಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-277 / ವಚನ ಸಂಖ್ಯೆ-1485)

ವ್ಯಕ್ತಿ ಕಲ್ಪಿತ ಮೂರ್ತ ರೂಪ ವಿಷಯಗಳಲ್ಲಿ ಬೆಂಬತ್ತಿ ಅರಿವು ಸಿಕ್ಕಿತು ಎಂಬುದು ಒಂದು ಭ್ರಾಂತಿ. ತನ್ನ ದಾರಿ ತಾನೇ ಸವೆಸಬೇಕು. ತನ್ನ ಊಟ ತಾನೆ ಉಣ್ಣಲೇಬೇಕು. ಹಾಗೆಯೇ ಗುರುವಿನ ಬೆಂಬತ್ತುವುದರಿಂದ ಸಾಧನೆ ಸಿದ್ಧಿಸದು. ಅರಿವೆಂಬ ಬೆಳಕು ಗೋಚರಿಸದು. ಆದ್ದರಿಂದ ಗುಹೇಶ್ವರ ಲಿಂಗದಲ್ಲಿ ಎಲ್ಲಾ ಉಪಾಧಿಗಳನ್ನು ಕಳಚಲೇಬೇಕು.

ಅರೂಪ ಕಾಣಬಾರದು, ಪೂಜಿಸುವ ಪರಿ ಇನ್ನೆಂತೋ?
ರೂಪಿಂಗೆ ಕೇಡುಂಟು, ಪೂಜಿಸುವ ಪರಿ ಇನ್ನಂತೋ?
ಸಕಲ ನಿಷ್ಕಲ ಪೂಜೆಗೆ ಕಾರಣವಲ್ಲ!
ಇನ್ನೆಂತಯ್ಯಾ ಲಿಂಗವಂತರಿಗೆ ಪೂಜಿಸುವ ಪರಿ?
ಲಿಂಗದ ಪರಿ ಇನ್ನೆಂತಯ್ಯಾ?
ಅರಿಯಬಾರದ ಲಿಂಗವನು ಅರಿವಂತೆ ಮಾಡಿಕೊಟ್ಟನು ಶ್ರೀಗುರು.
ಈ ಎರಡುವನರಿದು ಪೂಜಿಸಬೇಕು ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-212 / ವಚನ ಸಂಖ್ಯೆ-840)

ಅರಿವಿನ ಕುರುಹಾದ ಲಿಂಗವು ಕರಸ್ಥಲದಲ್ಲಿದೆ. ತನ್ಮೂಲಕ ಪ್ರಾಣಸ್ಥ ಭಾವಸ್ಥದಲ್ಲಿ ಬೆಳಗುವುದು. ರೂಪವಾದದ್ದನ್ನು ಪೂಜಿಸಲಾಗದು. ಹಾಗಾದರೆ ಪೂಜಿಸುವ ಪರಿ ಯಾವುದು? ಅದಕ್ಕಾಗಿಯೇ ಇಷ್ಟಲಿಂಗ ಅರಿವಿನ ಕುರುಹಾಗಿ ಬಂದಿದೆ ಬಸವಣ್ಣನವರ ಮೂಲಕ.

ಸಕಲವೆಲ್ಲ ಲಿಂಗದೊಳಗೆ ತೋರಿದನು.
ಆ ಲಿಂಗದ ಬೆಳಗ ಸಕಲದೊಳಗೆ ತೋರಿದನು.
ಎನ್ನ ಮನಕ್ಕೆ ಅತಿಶಯವ ತೋರಿ ತೋರಿ ರಕ್ಷಿಸಿದನು.
ಎನ್ನೊಳಗೆ ತನ್ನ ತೋರಿದನು, ತನ್ನೊಳಗೆ ಎನ್ನ ತೋರಿದನು.
ಮತ್ತೆ ಎರಡುವನು ಏಕ ಮಾಡಿ
ಎನ್ನೊಳಗೆ ಗುಹೇಶ್ವರನಾದನು, ಹೊರಗೆ ಮಹಾಲಿಂಗವಾಗಿ ನಿಂದನು.
ಶ್ರೀಗುರುಲಿಂಗ ಬಸವಣ್ಣನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-283 / ವಚನ ಸಂಖ್ಯೆ-1539)

ಹೀಗೆ ಸಕಲ ಬ್ರಹ್ಮಾಂಡವನ್ನು ಲಿಂಗದೊಳಗೆ ತೋರಿ ಲಿಂಗದ ಬೆಳಗನ್ನು ವ್ಯಕ್ತಿ ಚೈತನ್ಯದ ಮೂಲಕ ವಿಶ್ವ ಚೈತನ್ಯವಾಗಿ ಮತ್ತೆ ವಿಶ್ವ ಚೈತನ್ಯವನ್ನು ತನ್ನೊಳಗೆ ತೋರಿ ಎರಡನ್ನು ಒಂದು ಮಾಡಿ ಅಂತರಂಗದಲ್ಲಿ ಲಿಂಗವಾಗಿ ಬೆಳಗಿತದ್ದು ಮಹಾಲಿಂಗದ ಒಂದು ಅಂಶವೇ ಎಂಬ ಸತ್ಯವನ್ನು ಹೇಳುತ್ತಾ ಲಿಂಗದ ವ್ಯಾಪ್ತಿಯನ್ನು ವಿಸ್ತರಿಸುವರು ಅಲ್ಲಮರು.

ಅಂಗದ ಮೇಲೆ ಲಿಂಗ ಸಂಬಂಧವಾದ ಬಳಿಕ,
ಪ್ರಾಣದ ಮೇಲೆ ಜ್ಞಾನ ನಿರ್ಧಾರವಾಯಿತ್ತು ನೋಡಾ.
ಒಳಹೊರಗೆಂಬ  ಉಭಯವು ಏಕಾರ್ಥವಾಯಿತ್ತು.
ಗುಹೇಶ್ವರಾಶ್ವರ ನಿಮ್ಮ ನೆನೆದೆನಾಗಿ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-170 / ವಚನ ಸಂಖ್ಯೆ-410)

ಹೀಗೆ ಅಂಗದ ಮೇಲೆ ಲಿಂಗ ಸಂಬಂಧವಾದ ಬಳಿಕ ಜ್ಞಾನದ ಹಣತೆ ಬೆಳಗಿದ ಬಳಿಕ ಎರಡು ಎಂಬ ಭೇದ ಅಳಿದು ಒಂದೇ ಆಗಿತ್ತು. ಲಿಂಗ ಬೇರೆ ಅಲ್ಲ ತಾನು ಬೇರೆ ಅಲ್ಲ ಎಂಬ ಭಾವ ಬಲಿವುದು. ಮನವಿ ಲಿಂಗವಾದ ಬಳಿಕ ಯಾರನ್ನು ನೆನೆವುದು. ಎಲ್ಲ ಶರಣರಲ್ಲಿ ಪ್ರಾರಂಭಿಕ ಹಂತದಲ್ಲಿ ಲಿಂಗವನ್ನು ಭಿನ್ನಬಿಟ್ಟು ನೋಡಿ ವಿಕಾಸವಾದಂತೆ ಆ ಲಿಂಗವೇ ತಾನಾಗುವ ಸ್ಥಿತಿ ತಲುಪುವುದು. ಹೀಗೆ ಲಿಂಗಾಚಾರವು ಇಷ್ಟದಲ್ಲಿ, ಪ್ರಾಣದಲ್ಲಿ ಮತ್ತು ಭಾವದಲ್ಲಿ ಅಂದರೆ ಸ್ಥೂಲ, ಸೂಕ್ಷ್ಮ ಮತ್ತು ಕಾರಣಗಳಲ್ಲಿ ವಿಕಾಸ ಹೊಂದುತ್ತಾತಾನೆ. ಲಿಂಗವಾದ ಬಳಿಕ ಅರ್ಚನೆಯಿಲ್ಲ, ಪೂಜೆಯಿಲ್ಲ, ತಾನೂ ಇಲ್ಲ, ಲಿಂಗವೂ ಇಲ್ಲ. ಹೀಗೆ ಲಿಂಗಾಚಾರ ಲಿಂಗವಾಗುವ ಸಾಧನೆಯ ಪ್ರಕ್ರಿಯೆ ಒಂದಾದರೆ ಲಿಂಗವಾದ ಆಚಾರವೇ ತಾನಾಗಿ ಇರುವಿಕೆ ಮತ್ತೊಂದು. ಈ ಹಂತದಲ್ಲಿ ಅಲ್ಲಮರ ವಚನಗಳು ಅಧಿಕವಾಗಿವೆ.

ತಾನು ಮಿಂದು ಕಾಲು ತೊಳೆದ ಬಳಿಕ ಲಿಂಗಕ್ಕೆ ಮಜ್ಜನಕ್ಕೆರೆವರು,
ತಾನು ಲಿಂಗವೋ? ಲಿಂಗ ಲಿಂಗವೋ?
ಏನು ಲಿಂಗವು? ಬಲ್ಲಡೆ ನೀವು ಹೇಳಿರೇ.
ಲಿಂಗ ಸಂಬಂಧವನ್ನರಿಯದೆ ಕೆಟ್ಟರು ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-165 / ವಚನ ಸಂಖ್ಯೆ-341)

ಇಲ್ಲಿ ಸ್ಪಷ್ಟವಾಗಿ ಲಿಂಗದ ನೆಲೆ ಯಾವುದು ಎಂದು ಹೇಳುವರು ಅಲ್ಲಮರು. ಲಿಂಗವು ಸ್ಥೂಲವೋ ಸೂಕ್ಷ್ಮವೋ, ಅಂಗದಿಂದ ಲಿಂಗವಾದ ಬಳಿಕ ನಾನು ತಾನೆಂಬುದಿಲ್ಲ ಇಲ್ಲಿ ಸಂಬಂಧವೇ ಅಸಂಬಂಧವಾಗಿ ಅಸಂಬಂಧವೇ ಸಂಬಂಧವಾಗಿ ಅಂದರೆ ಲೌಕಿಕ ಬಂಧನಗಳು ಕಳಚಿಕೊಂಡು ವಿಶ್ವಚೇತನದೊಂದಿಗೆ ಬೆರೆತು ಬಿಡುವುದು.

ಲಿಂಗ ಒಳಗೋ-ಹೊರಗೋ? ಬಲ್ಲಡೆ ನೀವು ಹೇಳಿರೆ?
ಲಿಂಗ ಎಡನೇ ಬಲನೋ? ಬಲ್ಲಡೆ ನೀವು ಹೇಳಿರೇ?
ಲಿಂಗ ಮುಂದೋ ಹಿಂದೋ? ಬಲ್ಲಡೆ ನೀವು ಹೇಳಿರೇ?
ಲಿಂಗ ಸ್ಥೂಲವೋ ಸೂಕ್ಷ್ಮವೋ? ಬಲ್ಲಡೆ ನೀವು ಹೇಳಿರೇ?
ಲಿಂಗ ಪ್ರಾಣವೋ, ಪ್ರಾಣಲಿಂಗವೋ?
ಬಲ್ಲಡೆ ನೀವು ಹೇಳಿರೇ ಗುಹೇಶ್ವರಲಿಂಗವನು?
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-150 / ವಚನ ಸಂಖ್ಯೆ-153)

ಹೀಗೆ ಲಿಂಗ ಎಂಬುದಕ್ಕೆ ನಿರ್ದಿಷ್ಟ ಸ್ಥಳವಿದೆಯೆ? ಸೀಮೆ ಇದೆಯೆ? ಅದು ಕೈಗಳಿಗೆ ನಿಲುಕುವುದೇ ಎಂದು ಪ್ರಶ್ನಿಸುತ್ತಾರೆ.

ವರ್ಣವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ಮಾಡುವರು.
ನುಡಿಯಬಾರದ ಲಿಂಗಕ್ಕೆ ಜಪಸ್ತೋತ್ರ ಪೂಜೆಯ ಮಾಡುವರು.
ಮುಟ್ಟಬಾರದ ಲಿಂಗಕ್ಕೆ ಕೊಟ್ಟು ಕೊಂಡಾಡಿಹೆವೆಂಬರು.
ಬೊಟ್ಟಿಡಲು ಎಡೆಯಿಲ್ಲದ ಲಿಂಗವ ಮುಟ್ಟಿ
ಪೂಜಿಸಿಹೆನೆಂಬ ಭ್ರಷ್ಟರ ನೋಡಾ ಗುಹೇಶ್ವರಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-278 / ವಚನ ಸಂಖ್ಯೆ-1495)

ನಾಮವಿಲ್ಲದ ದೇವರಿಗೆ ನೇಮ ಎಲ್ಲಿಯದು ಎಂದು ಪ್ರಶ್ನಿಸುವ ಅಲ್ಲಮರು ಯಾವುದು ನಿರ್ಗುಣವಾಗಿದೆ ನಿರಾಕಾರವಾಗಿದೆ ಅದಕ್ಕೆ ರೂಪಗಳನ್ನು ಕೊಟ್ಟು ಪೂಜಿಸುವರು. ಹುಟ್ಟು ಸಾವಿಲ್ಲದ ಅಜಾತ ಲಿಂಗಕ್ಕೆ ಪ್ರಾಣಪ್ರತಿಷ್ಠೆ ಮಾಡುವರು. ನುಡಿಯನತಿಗಳೆದ ನಿಶ್ಯಬ್ದವಾದ ಲಿಂಗಕ್ಕೆ ಜಪ ಸ್ತೋತ್ರದ ಪೂಜೆಯ ಮಾಡುವರು. ಜಗದಗಲ ಮುಗಿಲಗಲವಾದ ಲಿಂಗವನ್ನು ಮುಟ್ಟಿ ಪೂಜಿಸಿಹೆ ಎಂಬವರಿಗೆ ಭ್ರಷ್ಟರೆಂದು ಕರೆವ ಅಲ್ಲಮರು ಈ ಎಲ್ಲ ಲೋಕದ ಆಚಾರಗಳನ್ನು ನಿರಾಕರಿಸಿ ಬಿಡುವರು.

ಅಷ್ಟವಿಧಾರ್ಚನೆ ಷೋಡಶೋಪಚಾರಗಳ
ಹಂಗು ಹರಿ ಇಲ್ಲದೆ ಮಾಡುವೆನು ನಾನು
ಮಾಡುವ ಕ್ರಿಯೆಗಳೆಲ್ಲವೂ ನೀನೆ ಆದಕಾರಣ
ಗುಹೇಶ್ವರ ನಿಮ್ಮಲ್ಲಿ ತದ್ಗತವಾದೆನು.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-305 / ವಚನ ಸಂಖ್ಯೆ-849)

ಎಂದು ಮಾಡುವ ಆಚಾರಗಳಲ್ಲಿ ನೀನೇ ಆದಕಾರಣ ನೀನು ನಾನೆಂಬ ಭೇದ ಇಲ್ಲದೆ ತದ್ಗತವಾದೆನು ಎಂಬ ಅಲ್ಲಮರ ನುಡಿ ಎಲ್ಲ ಹಂಗು ಹರಿದ ಸೂಚಕವಾಗಿ ನಿಲ್ಲುವುದು. ಸತ್ಯಜ್ಞಾನ ಆನಂದವೇ ತಾನಾಗಿ ನಿಂದ ಗುಹೇಶ್ವರದ ಅಲ್ಲಯ್ಯ ಜಗತ್ತಿಗೆ ಒಬ್ಬನೇ. ಎಲ್ಲ ಆಚಾರಗಳಾಚೆ ಬೆಳೆದು ನಿಲ್ಲುವರು ನಿರಾಭಾರಿ, ನಿರಾಮಯ, ನಿರುಪಾದಧಿಕ ಅಲ್ಲಮರು.  ಜಗತ್ತಿಗೆ ಅತೀತವಾದ ಅಲ್ಲಮರ ಲಿಂಗದ ನಂಟು ಶರಣರು ಮಾತ್ರ ಅರಿಯಬಲ್ಲರು.

ಶ್ರೀಮತಿ ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥಪುರ,
ಮಾಳಮಡ್ಡಿ,ಧಾರವಾಡ – 580 007.
ಮೋಬೈಲ್‌ ನಂ. 99864 37474

Loading

Leave a Reply