
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಯೋಗದ ಹೊಲಬ ನೀನೆತ್ತ ಬಲ್ಲೆ?
ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು
ಮದ ಮತ್ಸರ ಬೇಡ ಹೊದುಕುಳಿಗೊಳಬೇಡ
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-156 / ವಚನ ಸಂಖ್ಯೆ-229)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಅಗ್ನಿ: ಹೃದಯದಲ್ಲಿ ಹುದುಗಿದ ಜ್ಞಾನ, ಸ್ವಾನುಭವ ಪ್ರಭೆ, ತನು ಗುಣ ಸಂಬಂಧಿ, ಅಹಂಕಾರದಿಂದ ಕೂಡಿದ ದೇಹ, ಅರಿಷಡ್ವರ್ಗಗಳ ಸಂಕೇತ.
ಉದಕ : ನೀರು, ಸಂಸಾರ ವಿಷಯ-ವ್ಯಾಮೋಹಗಳ ಸಂಕೇತ, ಮನಸ್ಸು, ಮನದ ನಿಲುವು, ಪರಮಾನಂದ ಜಲ, ಪ್ರಶಾಂತ ಭಾವ.
ವಾಯು: ಪ್ರಾಣಶಕ್ತಿಯ ಸಂಕೇತ.
ಆಕಾಶ: ಮಹಾಜ್ಞಾನ, ಚಿದಾಕಾಶದ ಸಂಕೇತ, ಆತ್ಮ ತತ್ವ.
ಹೊಲಬ: ಆಶ್ರಯ, ರೀತಿ, ಮಾರ್ಗ, ದಾರಿ
ಕದಳಿ: ಪ್ರಶಾಂತವಾದ ಸ್ಥಳ, ತನು, ಮನ, ಘೋರಾರಣ್ಯ.
ಹೊದಕುಳಿ: ತಳಮಳ, ದುಃಖ.
ಕಲ್ಪಿತ: ಊಹಿಸಲ್ಪಟ್ಟದ್ದು, ಸೃಷ್ಟಿ, ಬ್ರಹ್ಮಲಿಖಿತ.
ಮಾಯೆಗಳಿಂದ ಭಾಧೆಗೊಳಗಾಗಿ ದಿಕ್ಕು ತಪ್ಪುವ ಹಾಗೂ ಅಂತರಂಗ ಮತ್ತು ಬಹಿರಂಗದ ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳುವ ವ್ಯೋಮಮೂರ್ತಿ Mystic Messiah ಅಲ್ಲಮ ಪ್ರಭುಗಳ ಈ ವಚನ ತನ್ನ ಬೆಡಗಿನ ಗಂಭೀರತೆ ಮತ್ತು ಸಾಹಿತ್ಯದಲ್ಲಿನ ಆಧ್ಯಾತ್ಮದ ನಿಲುವನ್ನು ನಿರೂಪಣೆ ಮಾಡುತ್ತದೆ.
ಅಲ್ಲಮ ಪ್ರಭುಗಳು ಈ ವಚನವನ್ನು “ಅಗ್ನಿಯ ಸುಡುವಲ್ಲಿ” ಅಂತ ಚತುಷ್ಟಯಗಳು, ಪಂಚೇಂದ್ರಿಯಗಳು, ಅರಿಷಡ್ವರ್ಗಗಳು, ಸಪ್ತವ್ಯಸನಗಳು, ಅಷ್ಟಮದಗಳಂಥ ಮಾಯೆಗಳಿಂದ ಮಾನವ ಸಾತ್ವಿಕ ಬದುಕಿನಿಂದ ವಿಮುಖನಾಗುತ್ತಾನೆ. ತನ್ನಲ್ಲೇ ಅಡಗಿರುವ ಶಿವನ ಪ್ರಕಾಶವನ್ನು ಮರೆತು ಮಾಯೆಯ ಆಕರ್ಷಣೆಗೆ ತುತ್ತಾಗುತ್ತಾನೆ. ಇಂತಹ ಆಕರ್ಷಣೆಗೆ ಒಳಗಾದ ಮಾನವ ಭಕ್ತಿ ಮಾರ್ಗವನ್ನು ತೊರೆದು ಭೌತಿಕ ಲಾಲಸೆಗಳನ್ನು ಬೆನ್ನು ಹತ್ತಿ ಕಾರ್ಮಿಕ ಮಲ, ಮಾಯಾ ಮಲ ಮತ್ತು ಆಣವ ಮಲಗಳೆಂಬ ಮಲತ್ರಯಗಳನ್ನು ಅಥವಾ ಕಲ್ಮಷಗಳನ್ನು ತನು ಮನದಲ್ಲಿ ತುಂಬಿಕೊಂಡು ಬಂಧಿಯಾಗುತ್ತಾನೆ.
“ಉದಕವ ತೊಳೆವಲ್ಲಿ” ಎನ್ನುತ್ತಾ ಉದಕ ಎನ್ನುವ ಶಬ್ದಕ್ಕೆ ಅಲ್ಲಮ ಪ್ರಭುಗಳ ವ್ಯಾಖ್ಯಾನ ಬಹಳ ಸುಂದರ ಮತ್ತು ಆಧ್ಯಾತ್ಮಿಕತೆಯಿಂದ ಕೂಡಿದೆ. ಈ ದೇಹದ ಅಂತರಂಗವನ್ನು ಆಟವಾಡಿಸುವ ವಿಷಯಾಸಕ್ತ ಮನಸ್ಸನ್ನು ನೀರಿಗೆ ಹೋಲಿಸುತ್ತಾರೆ. ಉದಕ ಬಾಯಾರಿ ಬಳಲುತ್ತಿದೆ ಅಂದರೆ ವಿಷಯಸುಖಗಳಿಗೆ ಹಾತೊರೆಯುವ ಮನಸ್ಸು. ಅದಕ್ಕಾಗಿ ಬಾವಿಯನ್ನು ತೋಡಿ ತೋಡಿ ಬಾಯಾರಿಕೆ ಎನ್ನುವ ಬಯಕೆಗಳನ್ನು ನೀಗಿಸುವ ಹಂಬಲ. ಕೊನೆಗೆ ತಾನೆ ತೆಗೆದ ಬಾವಿ ತನ್ನನ್ನೇ ನುಂಗಿ ತಾನೂ ಬತ್ತಿ ಹೋಗುವುದನ್ನು ಅದ್ಭುತವಾದ ಸುಂದರ ಪ್ರತಿಮೆಯನ್ನು ಕಟ್ಟಿ ಕೊಡುತ್ತಾರೆ ಅಲ್ಲಮ ಪ್ರಭುಗಳು. ಹೀಗೆ ಮಾಯಾಜಾಲವೆಂಬ ಜೇಡರ ಬಲೆಯಲ್ಲಿ ಸಿಲುಕಿದ ಈ ಮಾನವ ಜನ್ಮ ಅಂತ್ಯವಾಗುತ್ತದೆ. ಇದು ಉದಕವೆಂಬ ಮಯಾಯೆಂಬ ಮನಸ್ಸಿನ ಹೊಯ್ದಾಟ ಮತ್ತು ಅದರಲ್ಲಿ ಸಿಲುಕಿ ಅಂತ್ಯವನ್ನು ಕಾಣುವ ನೋಟ. ಹೀಗಾಗಿ ಪ್ರಸ್ತುತ ಈ ವಚನದಲ್ಲಿ ನಮ್ಮ ತನು-ಮನದಲ್ಲಿರುವ ವಿಷಯಾಸಕ್ತಿಗಳನ್ನು ತೊಳದುಕೊಳ್ಳಬೇಕು ಎನ್ನುತ್ತಾ “ಉದಕವ ತೊಳೆವಲ್ಲಿ” ಎನ್ನುವ ಪ್ರತಿಮೆಯನ್ನು ಅನಾವರಣಗೊಳಿಸುತ್ತಾರೆ.
“ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ” ಎನ್ನುವ ಶಬ್ದ ಪುಂಜದಲ್ಲಿ ಅಲ್ಲಮ ಪ್ರಭುಗಳು ಈ ತನುವಿಗೆ ಶಕ್ತಿ ನೀಡುವ ಪ್ರಾಣ ವಾಯುವನ್ನು ಕುರಿತು ಮಾತನಾಡಿದ್ದಾರೆ. ಈ ದೇಹದ ಅಸ್ತಿತ್ವ ಮತ್ತು ಚಲನಶೀಲತೆಯ ಪ್ರಜ್ಞೆ ವಾಯು ಅಂದರೂ ತಪ್ಪಾಗಲಾರದು. ಅಂಥ ಶಕ್ತಿಯನ್ನು ಮೆಟ್ಟಿ ನಿಂತು ಆಕಾಶವೆಂಬ ಆತ್ಮ ಚೈತನ್ಯವನ್ನು ಕಂಡುಕೊಳ್ಳಬೇಕು ಮತ್ತು ಅರಿತುಕೊಳ್ಳಬೇಕೆಂದು ಅಲ್ಲಮ ಪ್ರಭುಗಳು ಇಲ್ಲಿ ವರ್ಣಿಸಿದ್ದಾರೆ.
ಇಷ್ಟೆಲ್ಲ ವಿವರಗಳನ್ನು ನಿರೂಪಿಸಿದ ವ್ಯೋಮಮೂರ್ತಿ ಅಲ್ಲಮ ಪ್ರಭುಗಳು ಈ ವಚನದಲ್ಲಿ “ಯೋಗದ ಹೊಲಬ ನೀನೆತ್ತ ಬಲ್ಲೆ?” ಅಂತಾ ಪ್ರಶ್ನಿಸುತ್ತಾರೆ. ಹಾಗಾದರೆ ವಚನ ಸಾಹಿತ್ಯದಲ್ಲಿ ಯೋಗ ಅಂದರೇನು ಎನ್ನುವುದನ್ನು ತಿಳಿದುಕೊಳ್ಳೋಣ.
ವಚನಕಾರರು ಕಂಡುಕೊಂಡ ಯೋಗ ಅಂದರೆ “ಅಂತರಂಗದಲ್ಲಿ ಅರಳುವ ಮತ್ತು ವಿಕಾಸವಾಗುವ ನಿರಂತರ ಪ್ರಯೋಗ”. ಯೋಗ ಅಂದರೆ ನಮಗೆ ಸಾಧ್ಯವಾದಷ್ಟೂ ತನ್ಮಯತೆಯಿಂದ ಅನುಭವಿಸುವುದು. ಮನಸ್ಸು ತನ್ಮಯತೆಯಿಂದ ಮುಳುಗಿ ಹೋದಾಗ ಆನಂದವನ್ನು ಅನುಭವಿಸುವ ಸ್ಥಿತಿಯೇ ಯೋಗ. ಶರಣರ ದೃಷ್ಟಿಯಲ್ಲಿ ಅದು ಲಿಂಗಾಂಗ ಯೋಗ. ತನು-ಮನಗಳು ಒಂದಾದ ಸ್ಥಿತಿ. ಅಂತರಂಗದಲ್ಲಿ ಬದಲಾವಣೆ ಅಥವಾ ಅರಿವು ಮೂಡಬೇಕಾದರೆ ಅಂತರಂಗದಲ್ಲಿ ಯೋಗಾಭ್ಯಾಸವಾದಾಗ ಮಾತ್ರ ಸಾಧನೆಯನ್ನು ಮಾಡಲು ಸಾಧ್ಯ. ಇದನ್ನೇ ಅಲ್ಲಮ ಪ್ರಭುಗಳು ಯೋಗದ ಹೊಲಬ ನೀನೆತ್ತ ಬಲ್ಲೆ? ಎಂದು ಮಾಯೆಗಳನ್ನು ಮೆಟ್ಟಿ ನಿಲ್ಲುವವರೆಗೆ, ಮನಸ್ಸಿನಲ್ಲಿರುವ ಸಾಂಸಾರಿಕ ಜಂಜಾಟಗಳನ್ನು ಕಳೆದುಕೊಳ್ಳುವವರೆಗೆ ಮತ್ತು ಅಂತರಂಗದಲ್ಲಿ ಚೈತನ್ಯ ಅರಳುವವರೆಗೆ ಯೋಗದ ದಾರಿ ಅರಿವಾಗುವುದಿಲ್ಲವೆನ್ನುವುದನ್ನು ನಿರೂಪಣೆ ಮಾಡುತ್ತಾರೆ.
ಮುಂದುವರೆದು ಅಲ್ಲಮ ಪ್ರಭುಗಳು “ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು” ಎನ್ನುವ ಮನಮಂದಿರಕ್ಕೆ ತಟ್ಟುವಂತೆ ಹೇಳುತ್ತಾರೆ. ಕದಳಿ ಎನ್ನುವ ಪದವೇ ಅದ್ಭುತವಾದದ್ದು. ವೈರಾಗ್ಯನಿಧಿ ಶರಣೆ ಅಕ್ಕ ಮಹಾದೇವಿಯವರಂತೂ ಕದಳಿ ಎನ್ನುವ ಶಬ್ದವನ್ನು ಅತ್ಯಂತ ಸೂಕ್ಷ್ಮವಾಗಿ, ಅದ್ಭುತವಾಗಿ ಮತ್ತು ವಿಹಂಗಮವಾಗಿ ಚಿತ್ರಿಸಿದ್ದಾರೆ. ಶರಣೆ ಅಕ್ಕಮಹಾದೇವಿಯವರಿಗೆ ಅದು ಆಧ್ಯಾತ್ಮ ಸಾಧನೆಯ ಪ್ರತಿಮೆ. ಅಂಥದ್ದೊಂದು ಪ್ರತಿಮೆಯನ್ನು ಅವರು ಈ ವಚನದಲ್ಲಿ ಸುಂದರವಾಗಿ ಕಟೆದು ನಿಲ್ಲಿಸಿದ್ದಾರೆ.
ಕದಳಿ ಎಂಬುದು ತನು ಕದಳಿ ಎಂಬುದು ಮನ
ಕದಳಿ ಎಂಬುದು ವಿಷಯಂಗಳು
ಕದಳಿ ಎಂಬುದು ಭವಘೋರಾರಣ್ಯ
ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು
ಭವ ಗೆದ್ದು ಬಂದ ಮಗಳೆಂದು
ಕರುಣದಿ ತೆಗೆದು ಬಿಗಿದಪ್ಪಿದಡೆ
ಚೆನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-800 / ವಚನ ಸಂಖ್ಯೆ-139)
“ಕದಳಿ” ಎಂದರೆ ಭಾಷಾ ವಿಜ್ಞಾನದಲ್ಲಿ ಬಾಳೆ. ಇದರ ಆಧ್ಯಾತ್ಮಿಕ ಅನುವಾದ ಅಥವಾ ತತ್ಸಮ ಶಬ್ದ “ಬದುಕು” ಅಂತಾ ಸ್ಥೂಲವಾಗಿ ಹೇಳಬಹುದು. ಭಾಷಾ ಪಂಡಿತರನ್ನೂ ನಿಬ್ಬೆರಗಾಗುವಷ್ಟು ಅರ್ಥದಲ್ಲಿ ಕದಳಿ ಎನ್ನುವ ಶಬ್ದ ಪ್ರಯೋಗವನ್ನು ನಾವು ವಚನ ಸಾಹಿತ್ಯದಲ್ಲಿ ಕಾಣಬಹುದು. ಶರಣೆ ಅಕ್ಕಮಹಾದೇವಿಯವರು ಈ ವಚನದಲ್ಲಿ ತನು, ಮನಸ್ಸಿಗೆ ಅಂಟಿದ ಮಾಯೆ, ಕಷ್ಟ-ಕೋಟಲೆಗಳ ಅನುಭವ ನೀಡುವ ಘೊರಾರಣ್ಯಗಳಿಗೆ ಹೋಲಿಸುತ್ತಾರೆ. ಅಕ್ಷರಶಃ ಅಕ್ಕಮಹಾದೇವಿಯವರು ತಾವು ಸ್ವತಃ ಅನುಭವಿಸಿದ ಅವಮಾನ, ಕಷ್ಟ-ಕೋಟಲೆಗಳನ್ನೆಲ್ಲ ಸಾಂಕೇತಿಕವಾಗಿ ಕದಳಿ ಎನ್ನುವ ಶಬ್ದದ ಮೂಲಕ ನಿರೂಪಣೆ ಮಾಡಿದ್ದಾರೆ.
“ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು” ಎನ್ನುವ ಪ್ರಸ್ತುತ ವಚನದ ಈ ಸಾಲುಗಳು ಕದಳಿ ಶಬ್ದದ ಬಗ್ಗೆ ವಿವರಣೆಯನ್ನು ಬಯಸುತ್ತದೆ. ಮಾಯೆಗಳಿಂದ ಆವೃತ್ತವಾದ ಈ ಸಂಸಾರವೆಂಬ ಘೋರಾರಣ್ಯವನ್ನು ದಾಟಿ ಮುಂದೆ ಸಾಗಲು ಕದಳಿ ಎನ್ನುವ ದೇಹ ಮತ್ತು ಮನಸ್ಸನ್ನು ಅರಿತು ಪೂರ್ಣತ್ವವನ್ನು ಪಡೆಯಬೇಕು. ಅಂತರಂಗದ ಅರಿವನ್ನು ಪಡೆಯುವ ತತ್ವವನ್ನು ಈ ವಚನದಲ್ಲಿ ಅಲ್ಲಮ ಪ್ರಭುಗಳು ಹೇಳಿದ್ದಾರೆ.
ಇನ್ನೂ ಮುಂದುವರೆದು ಅಲ್ಲಮ ಪ್ರಭುಗಳು ಹೇಳತಾರೆ “ಮದ ಮತ್ಸರ ಬೇಡ, ಹೊದುಕುಳಿಗೊಳಬೇಡ”. ಸಂಪೂರ್ಣ ಶರಣನಾಗುವ ದಾರಿಯಲ್ಲಿ ಮದ-ಮತ್ಸರ ಬೇಡವೆಂಬ ಸರಳ ಮಂತ್ರವನ್ನು ಜಪಿಸಬೇಕು ಎನ್ನುತ್ತಾರೆ. ಇಂಥ ಲಿಂಗತತ್ವ ಹೊರಗಿರುವುದಿಲ್ಲ, ಅದು ತನುವಿನೊಳಗೆ ಇರುವ ಶಿವನ ಪ್ರಕಾಶ. ತನು ಪ್ರಸಾದ ಕಾಯವಾಗುವ ಪ್ರಕ್ರಿಯೆ. ಇಂಥದ್ದೊಂದು ಸಾಧನೆಯನ್ನು ಮಾಡಲು ಯಾವ ಅಂಜಿಕೆಯೂ ಬೇಡವೆನ್ನುತ್ತಾರೆ ಅಲ್ಲಮ ಪ್ರಭುಗಳು.
ವಚನದ ಕೊನೆಯ ಸಾಲಿನಲ್ಲಿ “ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ” ಎಂದು ಹೇಳುತ್ತಾ ಗುಹೇಶ್ವರ ಎನ್ನುವದು ಕೇವಲ ಶಬ್ದವಲ್ಲ ಮತ್ತು ಕಲ್ಪನೆಯೂ ಅಲ್ಲ. ತನ್ನನ್ನು ತಾನು ತಿಳಿಯುವ ಪ್ರತಿಮಾ ರೂಪಕ. ಗುಹೆ ಅಂದರೆ ದೇಹ ಹಾಗು ಈಶ್ವರ ಎಂದರೆ ಮನಸ್ಸಿನ ಶುದ್ಧತೆ, ತನ್ನದೇ ನಿಜಸ್ವರೂಪ. ಭವಿಯಿಂದ ಭಕ್ತ ಮತ್ತು ಭಕ್ತನಿಂದ ಶರಣಾನಾಗುವ ದಾರಿಯಲ್ಲಿ ಸಾಧನೆಯೇ ಮೂಲ ಶಕ್ತಿ. ಹಾಗಾಗಿ ಗುಹೇಶ್ವರ ಎನ್ನುವ ತತ್ವ ಕಲ್ಪಿತವಲ್ಲ ಸಾಧನೆಯ ಮೂಲ ಮಂತ್ರ. ಕಲ್ಪಿತ ಎನ್ನುವುದಕ್ಕೆ ಭಾಷಾ ಶಾಸ್ತ್ರದಲ್ಲಿ ಸಂಕಲ್ಪ, ಅವಾಸ್ತವ, ಕಾಲ್ಪನಿಕವಾದ, ಸಜ್ಜುಗೊಳಿಸಿದ, ಸೃಷ್ಟಿಸಿದ ಮತ್ತು ಊಹಿಸಿದ ಹೀಗೆ ಅನೇಕ ರೀತಿ ವಿಶ್ಲೇಷಣೆ ಕೊಟ್ಟಿದ್ದಾರೆ. ಕಲ್ಪಿತವೆನ್ನುವ ಶಬ್ದವನ್ನು ಬಳಸುವ ಅಲ್ಲಮ ಪ್ರಭುಗಳು ಗುಹೇಶ್ವರಲಿಂಗವೆನ್ನುವುದು ಕಲ್ಪಿತವಲ್ಲ. ಅದನ್ನು ನಾವು ತತ್ವ ಸಿದ್ಧಾಂತಗಳನ್ನು ಆಚರಣೆಗೆ ತರುವುದರ ಮೂಲಕ ಪಡೆಯಬೇಕು ಎನ್ನುವುದನ್ನು ಸಾಂಕೇತಿಕವಾಗಿ ಪ್ರಸ್ತುತ ವಚನದಲ್ಲಿ ನಿರೂಪಿಸಿದ್ದಾರೆ.
ಒಟ್ಟಾರೆ “ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ” ವಚನದ ಸಾರಾಂಶವೆಂದರೆ ಅಂತರಂಗದಲ್ಲಿರುವ ಕಾಮನೆಗಳನ್ನು ಸುಟ್ಟು ಹಾಕಬೇಕು. ಮನಸ್ಸಿನ ಕಾಮ ವಾಸನೆಗಳನ್ನು ತೊಳೆಯಬೇಕು. ಈ ಮಾಯಾ ವಾಸನೆಗಳು ಹೋಗದೆ ನಮ್ಮ ನಿಜದ ಸ್ವರೂಪದ ಅರಿವು ಆಗಲಾರದು. ವಿಷಯ ಸುಖಗಳನ್ನು ನಿಗ್ರಹಿಸದೇ ಮೆಟ್ಟಿ ನಿಲ್ಲುವ ಸಾಧನೆ ಆಗಬೇಕು. ಅನುಭವ ಮತ್ತು ಅನುಭಾವದ ದಾರಿಯನ್ನು ಅನುಭವಿಸಿಯೇ ತಿಳಿದುಕೊಳ್ಳಬೇಕು. ನಿರಾಕಾರ ಶಿವನ ಪ್ರಕಾಶವನ್ನು ನಮ್ಮಲ್ಲಿಯೇ ಹುಡುಕುವ ಪ್ರಯತ್ನ ಮಾಡಬೇಕು. ಅದುವೇ ಯೋಗ ಮಾರ್ಗ. ಲಿಂಗಾಂಗ ಸಾಮರಸ್ಯವನ್ನು ಕಾಣುವ ಹಾದಿ.
ವಚನಗಳು ಸಾಹಿತ್ಯದ ದೃಷ್ಟಿಯಿಂದಲೂ ಮೌಲಿಕವಾಗಿವೆ. ವಚನಗಳು ವಿಭಿನ್ನ ನೆಲೆಯ ಅಧ್ಯಯನಕ್ಕೆ ಆಹ್ವಾನಿಸುತ್ತವೆ. ಶತ ಶತಮಾನಗಳಿಂದ ಅವರವರು ತಮಗೆ ಬೇಕಾದ ನೆಲೆಯ ಅಧ್ಯಯನಕ್ಕೆ ಅವನ್ನು ಒಳಪಡಿಸುತ್ತಾ ಬಂದಿದ್ದಾರೆ. ಆದರೆ ವಚನದ ಆಶಯಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಅದು ವ್ಯಾಪಕ ಅಧ್ಯಯನದಿಂದ ಮಾತ್ರ ಸಾಧ್ಯ ಎಂದು ಹೇಳತಾ ಈ ಉಪನ್ಯಾಸಕ್ಕೆ ಅಲ್ಪ ವಿರಾಮ ಹೇಳುತ್ತೇನೆ. ಯಾಕಂದರ ಇಂತ ಚಿಂತನೆಗಳಿಗೆ, ವಿಮರ್ಶೆಗಳಿಗೆ ಪೂರ್ಣ ವಿರಾಮ ಎಂದೂ ಇರೋದಿಲ್ಲ ಮತ್ತು ಇವು ನಿತ್ಯ ನೂತನ ನಿರಂತರ.
ಶರಣು ಶರಣಾರ್ಥಿಗಳು.
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಸ್ಕೂಲ್ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್ ನಂ: 9741 357 132
ಈ-ಮೇಲ್: vijikammar@gmail.com
ಸಹಾಯಕ ಗ್ರಂಥಗಳು :
• Lives of Saints: Dr. Ujwala S. Hiremath
• ವಚನ ನಿಧಿ: ಡಾ. ಹೆಚ್. ಚಂದ್ರಶೇಖರ
• ಅಲ್ಲಮಪ್ರಭುದೇವರ ವಚನ ನಿರ್ವಚನ: ಶ್ರೀ ಸಿದ್ಧೇಶ್ವರ ಸ್ವಾಮಿಗಳು
• ಮಾತು ವಚನವಾಗಬೇಕು: ಡಾ. ವೀರಣ್ಣ ರಾಜೂರ
• ಬಸವಯುಗದ ವಚನ ಮಹಾಸಂಪುಟ: ಡಾ. ಎಮ್. ಎಮ್. ಕಲಬುರ್ಗಿ
• ವಚನ ವೈಭವ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು.
• Allama Prabhu: Dr. Ujwala S. Hiremath
• Sunya Sampadane: Dr M S Sunkapur, Prof. Armando Menezes
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in