
ಮನುಷ್ಯ ದುಃಖಿತನಾಗುವುದು ಸಹಜ, ಅದರ ಹಿನ್ನೆಲೆ ಅರಿತು ಪರಿಹಾರ ಕಂಡುಕೊಳ್ಳದಿದ್ದರೆ ಶೋಷಣೆ ಬೆಂಬಿಡದೆ ಕಾಡುತ್ತದೆ. ಧರ್ಮ ಎಂದೂ ಶೋಷಣೆ ಅಸ್ತ್ರವಾಗಬಾರದು, ಜ್ಞಾನಿಗಳು, ಅನುಭಾವಿಗಳು, ಶರಣರು ಇದರ ಪೂರ್ವಾಪರ ಚಿಂತನೆ ಮಾಡಿ ಪರಿಹಾರ ಹುಡುಕುವ ಮನೋಭೂಮಿಕೆ ಬಸವಾದಿ ಶರಣರು ನಮಗೆ ಧಾರೆ ಎರೆದಿದ್ದಾರೆ.
ಬದುಕು ಸುಧಾರಿಸಲು ಪಾಠ ಕಲಿಸಿದವರು ಮಹಾವೀರ, ಬುದ್ಧ, ಬಸವ. ಆದರೆ ಇನ್ನೂತನಕ ನಾವಾದರು ನಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳದೆ ಅಜ್ಞಾನವೆಂಬ ಕೂಪದಲ್ಲಿ ಬಿದ್ದು ಅಹಂಕಾರವೆಂಬ ಮಿತಿಗೆ ಒಳಪಟ್ಟು ಇಡೀ ಜೀವನ ಜರ್ಝರಿತ ಮಾಡಿಕೊಳ್ಳುತಿರುವುದು ಸರ್ವೆ ಸಾಮಾನ್ಯವಾಗಿದೆ. ನಮ್ಮ ಶಕ್ತಿ ಸಾಮರ್ಥ್ಯ ನಮಗೆ ಅರಿವಾಗಬೇಕಾದರೆ ಕೆಲವೊಂದು ಮೂಲಭೂತ ಗುಣಗಳನ್ನು ಅಳವಡಿಸಿಕೊಳ್ಳಲು ಬಸವಣ್ಣನವರು ಸೂಕ್ತ ಸಂದೇಶಗಳನ್ನು ವಚನಗಳ ಮೂಲಕ ನೀಡಿದ್ದಾರೆ.
ಅಹಂಕಾರ, ಅಜ್ಞಾನ ನಮ್ಮ ವ್ಯಕ್ತಿತ್ವದ ಹಿನ್ನಡೆಗೆ ಪ್ರಮುಖ ಕಾರಣಗಳಾಗಿವೆ. ನಕರಾತ್ಮಕ ಮಂಥನಗಳು ಆದಷ್ಟು ಬೇಗ ನಮ್ಮಿಂದ ಆಚೆ ಹೋದಾಗ ಮಾತ್ರ ಸಕರಾತ್ಮಕವಾದ ಒಲವು ಬಂದು ನಮ್ಮ ನಡುವಳಿಕೆಗಳು ಸುಧಾರಿಸಲು ಸಾಧ್ಯವಾಗುತ್ತದೆ. ಮೊದಲು ನಮ್ಮನ್ನು ನಾವು ಅರಿತು ಪ್ರೀತಿಸಬೇಕು, ನಿರ್ಲಕ್ಷತೆಯಿಂದ ದೂರ ಸರಿಯಲು ಪ್ರಯತ್ನಿಸಬೇಕು. ತನ್ನ ತಪ್ಪಿನಿಂದ ಬೇರೆಯವರಿಗೆ ತೊಂದರೆಯಾಗದಂತೆ ನಿಗಾವಹಿಸತಕ್ಕದ್ದು, ಇಲ್ಲವಾದರೆ ಅನ್ಯರ ಅಮೂಲ್ಯವಾದ ಸಮಯ ಹಾಳು ಮಾಡಿದಂತಾಗುತ್ತದೆ.
ವ್ಯಕ್ತಿಯ ಬದುಕಿನಲ್ಲಿ ಅನೇಕ ಅವಗುಣಗಳಿವೆ, ಅವುಗಳು ಬಿಟ್ಟು ಹೊರಬಂದರೆ ವ್ಯಕ್ತಿ ಮಾನಸಿಕವಾಗಿ, ಶಾರೀರಿಕವಾಗಿ ವ್ಯಕ್ತಿತ್ವ ಒಳ್ಳೆ ರೀತಿಯಿಂದ ರೂಪಗೊಂಡು ಗುಣ ಸಂಪನ್ನರಾಗಲು ಸಾಧ್ಯ. ಮನಸ್ಸನ್ನು ಹಿಡಿದಿಟ್ಟುಕೊಂಡಾಗ ಚಂಚಲತೆ ಕಡಿಮೆಯಾಗುತ್ತದೆ. ನಮ್ಮ ಪಂಚೇಂದ್ರಿಯಗಳು ಆದಷ್ಟು ನಿಗ್ರಹತೆ ಮಾಡಿಕೊಂಡರೆ ಅತ್ಯಾಕಾಂಕ್ಷೆಗೆ ಪೂರ್ಣವಿರಾಮ ನೀಡಲು ಸಾಧ್ಯ. ನಮ್ಮ ದೈಹಿಕ ವ್ಯಾಮೋಹದ ಮಮತೆ ಕಡಿಮೆಗೊಳಿಸಿಕೊಳ್ಳಲು ಸಕರಾತ್ಮಕವಾದ ಭಾವನೆ ಹೊರಹೊಮ್ಮಬೇಕು. ಅನ್ಯರಿಂದ ಭಯಂಕರವಾದ ಅಪೇಕ್ಷೆ ಹಾಗೂ ನಿರೀಕ್ಷೆ ತಪ್ಪಬೇಕು.
ಮಲ, ಮೂತ್ರ, ಬೆವರು ಇದು ಸಹಜವಾದ ಪ್ರಕ್ರಿಯೆ ಎಂಬ ವಿವೇಚನ ನಮ್ಮಲ್ಲಿ ಮೈಗೂಡಬೇಕು. ಸಂಸಾರವೆಂಬ ಕೂಪಕ್ಕೆ ಜೋತು ಬಿದ್ದು ನೈಜತೆಯ ಬದುಕಿಗೆ ತೊಂದರೆ ಮಾಡಿಕೊಳ್ಳದೆ ನಿರ್ಲಿಪ್ತ ಭಾವನೆ ಅನುಸರಿಸಬೇಕು. ಸರ್ವಪ್ರಪಂಚ, ಸಮನ್ವಯತೆ ಸಾಧಿಸಬೇಕು. ಅಹಂ-ಮಮತೆ, ರಾಗ-ದ್ವೇಷ, ಸರ್ವಸುಖದ ಜೀವನದ ಅರಿವು ನಮಗಾಗಲು ಸಾಧ್ಯ, ವ್ಯಕ್ತಿ ಆದಷ್ಟು ಮಟ್ಟಿಗೆ ಅವಗುಣಗಳನ್ನು ಬಿಟ್ಟು ಶಿವಗುಣಗಳನ್ನು ಅಸ್ವಾಧಿಸುವುದೇ ಜೀವನ ದರ್ಶನ.
ಡಾ. ಸಿದ್ದು ಯಾಪಲಪರವಿ,
ಆಂಗ್ಲ ಭಾಷಾ ಪ್ರಾಧ್ಯಾಪಕರು (ನಿ),
ಗದಗ. ಮೋಬೈಲ್ ಸಂ. 94483 58040.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in