
ಅಷ್ಟಾವರಣಗಳು ಅಂಗವಾದರೆ, ಪಂಚಾಚಾರಗಳು ಪ್ರಾಣ, ಷಟ್ ಸ್ಥಲಗಳು ಆತ್ಮ. ಇವು ಮೂರೂ ಶರಣ ಧರ್ಮದ ಬೆನ್ನೆಲಬುಗಳು. ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳನ್ನು ಅಂತರಂಗದ ಅರಿವಿನ ಪ್ರಜ್ಞೆಗಳು ಎಂದು ಭಾವಿಸಲಾಗಿದೆ. ಅಷ್ಟಾವರಣಗಳು ಮಾಯೆಯ ಬಾಹ್ಯ ಗೊಂದಲಗಳು ಮತ್ತು ಪ್ರಭಾವಗಳಿಂದ ಭಕ್ತನನ್ನು ರಕ್ಷಿಸುವ ಗುರಾಣಿಗಳು ಅಥವಾ ಹೊದಿಕೆಗಳಾಗಿ ಕಾರ್ಯ ನಿರ್ವಹಿಸುವ 8 ಸದ್ಗುಣಗಳು. ಗುರು, ಲಿಂಗ, ಜಂಗಮ, ಭಸ್ಮ, ರುದ್ರಾಕ್ಷ, ಮಂತ್ರ, ಪ್ರಸಾದ, ಪಾದೊದಕ ಇವು ಅಷ್ಟಾವರಣಗಳು. ಮೊದಲ ಮೂರು ಪೂಜ್ಯವಾದವುಗಳು, ನಂತರದ ಮೂರು ಪೂಜಾ ಸಾಧನಗಳು, ಕೊನೆಯ ಎರಡು ಪೂಜಾ ಪರಿಣಾಮಗಳು.
ಬಸವಣ್ಣನವರಿಗಿಂತಲೂ ಹಿಂದೆಯೂ ನಮ್ಮ ನಾಡಿನಲ್ಲಿ ಗುರು ಲಿಂಗ (ಸ್ಥಾವರಲಿಂಗ) ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಮತ್ತು ಪ್ರಸಾದಗಳು ಇದ್ದವು. ಇವುಗಳನ್ನು ಧಾರ್ಮಿಕ ಚಿನ್ಹೆಗಳಾಗಿ ಉಪಯೋಗಿಸುವ ಆಚರಣೆ ಬಹಳ ಹಿಂದಿನಿಂದಲೂ ನಡೆದು ಬಂದಿದೆ, ಬಹುತೇಕ ಈ ಚಿಹ್ನೆಗಳು ಬಾಹ್ಯ ಆಚರಣೆಗೆ ಮಾತ್ರ ಸೀಮಿತವಾಗಿದ್ದವು. ಆದರೆ ಬಸವಣ್ಣನವರು ಈ ಚಿಹ್ನೆಗಳಿಗೆ ಸಂಪೂರ್ಣ ಭಿನ್ನ ಆಯಾಮವನ್ನು ಕೊಟ್ಟು ಸೂತ್ರ ರೂಪದಲ್ಲಿ ಜೋಡಿಸಿ ಅವುಗಳಿಗೆ ಅಷ್ಟಾವರಣವೆಂದು ಕರೆದು, ಇವುಗಳನ್ನು ಬಾಹ್ಯ ಆಡಂಬರಕ್ಕಾಗಿ ಅಥವಾ ತೋರಿಕೆಗಾಗಿ ಬಳಸದೆ ಅಂತರಂಗದ ಅರಿವನ್ನು, ಆಚಾರವನ್ನು ಶುದ್ಧಗೊಳಿಸಲು ಮತ್ತು ಸ್ವಾನುಭಾವವನ್ನು ನೆಲೆಗೊಳಿಸಿಕೊಳ್ಳಲು ನೆರವಾಗಲಿಕ್ಕೆ ಅಷ್ಟಾವರಣಗಳ ಸೂತ್ರವನ್ನು ಬಳಸಿದರು. ಗುರು ಬಸವಣ್ಣನವರು ಚರಲಿಂಗದ ಸ್ಥಾನದಲ್ಲಿ ಇಷ್ಟಲಿಂಗವನ್ನು ಅಂಗದ ಮೇಲೆ ಸಾಹಿತ್ಯವ ಮಾಡಿದರು. ಅಷ್ಟಾವರಣಗಳನ್ನು ಸದಾ ಅಂಗದ ಮೇಲೆ ಹಿಂಗದೆ ಧರಿಸುವುದರಿಂದ ಆಚಾರ ಶುದ್ಧಿಗೊಂಡು, ಲೌಕಿಕ-ದೈಹಿಕ ವ್ಯಾಧಿಗಳು, ಮಾನಸಿಕ ಕ್ಲೇಷಗಳು ನಿವೃತ್ತಿಯಾಗಿ ಭಾವ ನಿಷ್ಪತ್ತಿಯೆಡೆಗೆ ಸಾಧಕನನ್ನು ಕೊಂಡೊಯ್ಯುವಲ್ಲಿ ಮಹತ್ತರ ಪಾತ್ರವಹಿಸುತ್ತವೆ.
ಪ್ರಸಾದ:
ಪ್ರಸಾದ ಅಷ್ಟಾವರಣದ ಪ್ರಮುಖ ತತ್ವ. ಪ್ರಸಾದವು ಅನುಗ್ರಹ ಎಂಬ ಅರ್ಥ ಕೊಡುವ ಪದ. ಗುರು, ಲಿಂಗ, ಜಂಗಮದ ಮೂಲಕ ಬಂದ ಆಶೀರ್ವಾದದ ಅನುಗ್ರಹ ಅಥವಾ ಅಂತರಂಗದ ಅರಿವು ಬಂದಾಗ ಆಗುವ ಅನುಭೂತಿಯೆ ಪ್ರಸಾದ. ತನ್ನನ್ನು ತಾನು ಗುರು ಲಿಂಗ ಜಂಗಮಕ್ಕೆ ಅರ್ಪಿಸಿಕೊಳ್ಳುವದೆ ಪ್ರಸಾದದ ಮಹತ್ವ.
“ಪ್ರಸಾದ” ಪದವು ಅನೇಕ ಧಾರ್ಮಿಕಾಚರಣೆಗಳಲ್ಲಿ ಬಳಕೆಯಲ್ಲಿದೆ. ಆದರೆ ಲಿಂಗಾಯತ ಧರ್ಮದಲ್ಲಿ ಪ್ರಸಾದದ ಪರಿಕಲ್ಪನೆ ತುಂಬ ಉದಾತ್ತವಾದುದಾಗಿದೆ. ಸ್ಥಾವರಲಿಂಗಕ್ಕೆ ನೈವೇದ್ಯ ಮಾಡಿ ಪಡೆಯುವ ಹಣ್ಣು-ಹಾಲು-ಆಹಾರ ಇವುಗಳನ್ನು ಪ್ರಸಾದವೆಂದು ಉಳಿದ ಧರ್ಮದ ಭಕ್ತರು ನಂಬಿದರೆ, ಶರಣರು ಹೇಳಿರುವ ಪ್ರಸಾದದ ಪರಿಕಲ್ಪನೆಗಳು ವಿನೂತನವಾದವುಗಳಾಗಿದೆ.
ಶರಣರ ಪರಿಕಲ್ಪನೆಯಲ್ಲಿ ಪ್ರಸಾದವೆಂದರೆ ಸುಜ್ಞಾನವಾಗಿದೆ. ಆತ್ಮದ ಮೂಲಕ ಹುಟ್ಟಿಕೊಂಡ ಅಂತರಂಗದ ಅರಿವಾಗಿದೆ. ಜಂಗಮ ಪ್ರಸಾದವೇ ಇಲ್ಲಿ ಪ್ರಾಣವಾಗಿದೆ. ಗುರು-ಲಿಂಗ-ಜಂಗಮಗಳ ಮೂಲಕ, ಅರಿವು-ಆಚಾರ-ಸುಜ್ಞಾನಗಳು ಅನುಷ್ಠಾನಗೊಂಡು ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದಗಳಾಗಿವೆಯೆಂದು ಶರಣರು ಹೇಳಿದ್ದಾರೆ. ಅಂಗ ಗುಣವನ್ನಳಿದು, ಲಿಂಗಗುಣ ಪಡೆಯುವದೇ ಪ್ರಸಾದವಾಗಿದೆ. ಕಾಮ-ಕ್ರೋಧಗಳನ್ನು ತೊರೆದು ದಯೆ-ಅಂತಃಕರಣಗಳನ್ನು ಪಡೆದುಕೊಳ್ಳುವದೇ ನಿಜವಾದ ಪ್ರಸಾದದ ಪರಿಕಲ್ಪನೆಯಾಗಿದೆ.
ದಿನನಿತ್ಯಮಾಡುವ ಅಡುಗೆ ಪದಾರ್ಥವಾದರೆ, ಅದನ್ನು ದೇವರಿಗೆ ಅರ್ಪಿಸಿ, ನೈವೇದ್ಯ ಮಾಡಿದ ನಂತರ ಸ್ವೀಕರಿಸುವುದು ಪ್ರಸಾದವೆಂದು ಇತರ ಧಾರ್ಮಿಕಾಚರಣೆಗಳಲ್ಲಿ ಕಾಣಬಹುದಾಗಿದೆ. ಆದರೆ ಲಿಂಗಾಯತ ಧರ್ಮದಲ್ಲಿ ಬರುವ ಪ್ರಸಾದದ ಪರಿಕಲ್ಪನೆ ತುಂಬ ಭಿನ್ನವಾದುದಾಗಿದೆ.
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ?
ಕುಲವುಂಟೆ ಜಂಗಮವಿದ್ದೆಡೆಯಲ್ಲಿ?
ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ?
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ,
ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದಿಲ್ಲ.
(ಸಮಗ್ರ ವಚನ ಸಂಪುಟ-1 / 2021 / ಪುಟ ಸಂ. 212 / ವ. ಸಂ. 770)
ಈ ವಚನದಲ್ಲಿ ಬಸವಣ್ಣನವರು ಪ್ರಸಾದದ ಮಹತ್ವವನ್ನು ತಿಳಿಸಿದ್ದಾರೆ. ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ? ಎಂದು ಪ್ರಶ್ನೆ ಮಾಡತಾರೆ. ಬಸವಣ್ಣನವರ ಪ್ರಕಾರ ಲಿಂಗವು ಹೊಲೆಯನ್ನು ಹೋಗಲಾಡಿಸುತ್ತದೆ, ಜಂಗಮನು ಕುಲ ಬೇಧವನ್ನು ಅಳಿಸಿ ಹಾಕುತ್ತಾರೆ. ಅದೇ ರೀತಿ ಪ್ರಸಾದವು ಎಂಜಲವಾಗದೆ ಪವಿತ್ರವಾಗುತ್ತದೆ. ಹೀಗಾಗಿ ಈ ಲಿಂಗ-ಜಂಗಮ-ಪ್ರಸಾದಗಳು ಕೇವಲ ಅಲಂಕಾರಿಕವಾಗಿರದೆ, ಹೊಲೆಯನ್ನೋಡಿಸಲು, ಕುಲಭೇಧವನ್ನು ಅಳಿಸಿಹಾಕಲು, ಸಹಾಯಕವಾಗಿವೆ.
ಪ್ರಸಾದ ಪ್ರಸಾದವೆಂದು ಹೆಸರಿಟ್ಟು
ನುಡಿವವರಿಗೆ ಪ್ರಸಾದವೆಲ್ಲಿಯದೋ?
ಮನಮುಟ್ಟಿ ಕೊಂಡುದು ಪ್ರಸಾದವಲ್ಲ,
ತನುಮುಟ್ಟಿ ಕೊಂಡುದು ಪ್ರಸಾದವಲ್ಲ,
ಧನಮುಟ್ಟಿ ಕೊಂಡುದು ಪ್ರಸಾದವಲ್ಲ.
ಅವು ಏಕಾಗಿ ತ್ರಿವಿಧ ಸಾಹಿತ್ಯದಲ್ಲಿ
ಮುಟ್ಟಿ ಕೊಂಡುದು ಪ್ರಸಾದವಲ್ಲ.
ಇಕ್ಕುವವ ಶಿವದ್ರೋಹಿ, ಕೊಂಬವ ಗುರುದ್ರೋಹಿ.
ಇದು ಕಾರಣ, ಕೂಡಲಚೆನ್ನಸಂಗಯ್ಯನ ಪ್ರಸಾದ
ಘನಕ್ಕೆ ಮಹಾಘನ, ನಾನೇನೆಂದು ಬಣ್ಣಿಸುವೆ.
(ಸಮಗ್ರ ವಚನ ಸಂಪುಟ-3 / 2021 / ಪುಟ ಸಂ. 212 / ವ. ಸಂ. 246)
ಚೆನ್ನಬಸವಣ್ಣನವರು ಈ ವಚನದಲ್ಲಿ ಪ್ರಸಾದ ಎಲ್ಲಕ್ಕಿಂತಲೂ ಘನವಾದುದೆಂದು ಹೇಳಿದ್ದಾರೆ. ತನು-ಮನ-ಧನಗಳನ್ನು ಮೀರಿ ನಿಂತುದೇ ಪ್ರಸಾದವೆಂದು ತಿಳಿಸಿದ್ದಾರೆ. ಪ್ರಸಾದವಾವುದು? ಓಗರವಾವುದು? ಎಂಬುದನ್ನು ತಿಳಿಯದ ಮೂಢರನ್ನು ಕಂಡು ವಿಡಂಬಿಸಿದ್ದಾರೆ. ಪ್ರಸಾದಕ್ಕೂ ಅನ್ನಕ್ಕೂ ವ್ಯತ್ಯಾಸವಿದೆಯೆಂದು ಇಲ್ಲಿ ತಿಳಿಸಲಾಗಿದೆ.
ಗುರು ಮುಟ್ಟಿಬಂದ ಶುದ್ಧ ಪ್ರಸಾದಿಯಾದಡೆ,
ವಾತ ಪಿತ್ತ ಶ್ಲೇಷ್ಮವಳಿದಿರಬೇಕು,
ಲಿಂಗ ಮುಟ್ಟಿಬಂದ ಸಿದ್ಧ ಪ್ರಸಾದಿಯಾದಡೆ,
ಆದಿ ವ್ಯಾದಿಗಳಿಲ್ಲದಿರಬೇಕು.
[ಜಂಗಮ ಮುಟ್ಟಿ ಬಂದ ಪ್ರಸಿದ್ಧ ಪ್ರಸಾದಿಯಾದಡೆ,
ಅಜ್ಞಾನ ರೋಗವಿಲ್ಲದಿರಬೇಕು]
ಮೂರರ ಅರುಹುಗಟ್ಟಿಗೊಳ್ಳುವ
ಮಹಾ ಪ್ರಸಾದಿಯಾದಡೆ,
ಮರಣವಿಲ್ಲದಿರಬೇಕು
ಪ್ರಸಾದ ಪ್ರಸಾದವೆಂದು ತ್ರಿವಿಧ ಪ್ರಸಾದವ ಸೇವಿಸಿ,
ಸರ್ವರಂತೆ ಮಲತ್ರಯಕೊಳಗಾಗುವರ
ಪ್ರಸಾದಿಗಳೆಂದು ನಂಬದಿರಾ,
ಕಪಿಲಸಿದ್ಧ ಮಲ್ಲಿಕಾರ್ಜುನ ಸಾಕ್ಷಿಯಾಗಿ ಕಬ್ಬಿಲರಿರಾ.
(ಸಮಗ್ರ ವಚನ ಸಂಪುಟ-4 / 2021 / ಪುಟ ಸಂ. 489 / ವ. ಸಂ. 1575)
ನಿಜವಾದ ಪ್ರಸಾದಿಯಾಗಬೇಕಾದರೆ, ಗುರುಮುಖದಿಂದಾದ ಪ್ರಕಾಶದಲ್ಲಿ ಅಂತರಂಗ, ಅರಿವು ಮತ್ತು ತನು ಹೀಗೆ ತ್ರಿವಿಧದಲ್ಲಿಯೂ ಶುದ್ಧನಾಗಿರಬೇಕು. ಲಿಂಗ ಮುಟ್ಟಿದ ಪ್ರಸಾದಿಯಾದರೆ ಅಂತರಂಗ ಮತ್ತು ಬಹಿರಂಗದಲ್ಲಿ ಸಂಸ್ಕಾರಯುತನಾಗಿರಬೇಕು. ಜಂಗಮ ಮುಟ್ಟಿದ ಪ್ರಸಾದಿಯಾದರೆ ಅಜ್ಞಾನವನ್ನು ತೊರೆದು ಸುಜ್ಞಾನಿಯಾಗಿ ಸಮಷ್ಠಿಯಲ್ಲಿ ಸಮಕಳೆಯನ್ನು ಬಿತ್ತುವವನಂತಿರಬೇಕು.
ಚೆನ್ನಬಸವಣ್ಣವರು ಮತ್ತೊಂದು ವಚನದಲ್ಲಿ ಈ ರೀತಿ ಹೇಳಿದ್ದಾರೆ.
ಶುದ್ಧ ಸಿದ್ಧ ಪ್ರಸಿದ್ಧವೆಂತುಟೆಂದು ಹೇಳಿಹೆ ಕೇಳಿರೆ:
ಶುದ್ಧಪ್ರಸಾದವು ಗುರುವಿನಲ್ಲಿ,
ಸಿದ್ಧಪ್ರಸಾದವು ಲಿಂಗದಲ್ಲಿ,
ಪ್ರಸಿದ್ಧಪ್ರಸಾದವು ಜಂಗಮದಲ್ಲಿ,
ಇದರೊಳಗಾವುದು ಘನವೆಂಬೆನಾವುದು ಕಿರಿದೆಂಬೆ?
ಘನಕ್ಕೆ ಘನ ಮಹಾಘನ ಪ್ರಸಾದವು.
ಕೂಡಲಚೆನ್ನಸಂಗನಲ್ಲಿ ತ್ರಿವಿಧಪ್ರಸಾದವನು
ಸುಯಿಧಾನದಲ್ಲಿ ಕೊಳಬಲ್ಲನಯ್ಯಾ ಬಸವಣ್ಣನು
(ಸಮಗ್ರ ವಚನ ಸಂಪುಟ-4 / 2021 / ಪುಟ ಸಂ. 109 / ವ. ಸಂ. 249)
ಶುದ್ಧ ಸಿದ್ಧ ಪ್ರಸಿದ್ಧ ಎಂದು ಪ್ರಸಾದಗಳಲ್ಲಿ ಮೂರು ವಿಧಗಳನ್ನು ಚೆನ್ನಬಸವಣ್ಣನವರು ಇಲ್ಲಿ ಪ್ರಸ್ತಾಪ ಮಾಡುತ್ತಾರೆ. ಇವುಗಳನ್ನು ಇಷ್ಟಲಿಂಗ, ಪ್ರಾಣಲಿಂಗ ಪ್ರಸಾದ ಮತ್ತು ಭಾವಲಿಂಗ ಪ್ರಸಾದಗಳೆಂದೂ ಗುರುತಿಸುತ್ತಾರೆ. ಅರಿವು ಮತ್ತು ಜ್ಞಾನವನ್ನು ತಿಳಿಸುವ ಈ ಶುದ್ಧ ಪ್ರಸಾದವು ಗುರುವಿನಲ್ಲಿ ಎಂದು ಹೇಳುವ ಮೂಲಕ ಇದನ್ನು ಗುರು ಪ್ರಸಾದವೆಂತಲೂ, ಇಷ್ಟಲಿಂಗ ಪ್ರಸಾದವೆಂತಲೂ ತಿಳಿಯಬಹುದು. ಅರಿವು ತಾನಾಗುವ ಮತ್ತು ತಾನೇ ಅರಿವಾಗುವ ಶಬ್ದ ಮುಗ್ಧವಾಗುವ ಈ ಸಿದ್ಧ ಪ್ರಸಾದವು ಲಿಂಗದಲ್ಲಿ ಎಂದು ಹೇಳುವುದರ ಮೂಲಕ ಇದನ್ನು ಪ್ರಾಣಲಿಂಗ ಪ್ರಸಾದವೆಂತಲೂ ತಿಳಿಯಬಹುದು. ಜಂಗಮದ ಅರಿವನ್ನು ಅರಿತು ಅರಿವಿನ ಭಾವ ಪ್ರಸಿದ್ಧ ಪ್ರಸಾದವು ಜಂಗಮದಲ್ಲಿ ಎಂದು ಹೇಳುವುದರ ಮೂಲಕ ಭಾವಲಿಂಗ ಪ್ರಸಾದವೆಂತಲೂ ತಿಳಿಯಬಹುದು. ಈ ಮೂರು ಪ್ರಸಾದಗಳು ಯಾವುದೂ ಹೆಚ್ಚಿಲ್ಲ ಯಾವುದೂ ಕಡಿಮೆಯಿಲ್ಲ. ಎಲ್ಲವೂ ಮಹಾಘನ ತತ್ವಗಳು ಮತ್ತು ಕಾಯವನ್ನು ಪ್ರಸಾದ ಕಾಯವಾಗಿಸುವ ನಿಟ್ಟನಲ್ಲಿ ನೋಡುವಂತಹ ತತ್ವಗಳು. ಈ ಮೂರು ಪ್ರಸಾದಗಳು ಆತ್ಮದ ಶುದ್ಧಿ, ಅರಿವಿನ ಶುದ್ಧಿ ಮತ್ತು ಚಿತ್ತ ಶುದ್ಧಿಯನ್ನು ನೀಡುತ್ತವೆ.
ಗುರು ಲಿಂಗ ಜಂಗಮದಿಂದವೇ ಪ್ರಸಾದ ಎನ್ನುವುದು ಆದಯ್ಯನವರ ಅಭಿಪ್ರಾಯ.
ಗುರುವಿಡಿದು ಲಿಂಗವಾವುದೆಂದರಿಯಬೇಕು,
ಲಿಂಗವಿಡಿದು ಜಂಗಮವಾವುದೆಂದರಿಯಬೇಕು,
ಜಂಗಮವಿಡಿದು ಪ್ರಸಾದವಾವುದೆಂದರಿಯಬೇಕು,
ಪ್ರಸಾದವಿಡಿದು ಪರಮಪರಿಣಾಮವೆಡೆಗೊಳ್ಳಬೇಕು.
ಅಂತಪ್ಪ ಪರಮಪರಿಣಾಮವೆ ಪರಬ್ರಹ್ಮವೆಂದರಿತಲ್ಲಿ,
ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತ.
(ಸಮಗ್ರ ವಚನ ಸಂಪುಟ-6 / 2021 / ಪುಟ ಸಂ. 329 / ವ. ಸಂ. 906)
ಪ್ರಸಾದದ ಬಗ್ಗೆ ಚನ್ನಬಸವಣ್ಣನವರು ಹೀಗೆ ಹೇಳುತ್ತಾರೆ.
ಬಯಸಿ ಬಂದುದು ಅಂಗ ಭೋಗ,
ಬಯಸದೆ ಬಂದುದು ಲಿಂಗ ಭೋಗ,
ಅಂಗಭೋಗ ಅನರ್ಪಿತ, ಲಿಂಗ ಭೋಗ ಪ್ರಸಾದ.
ಬೇಕೆಂಬುದು ಕಾಯಗುಣ, ಬೇಡೆಂಬುದು ವೈರಾಗ್ಯ.
ಬೇಕೆಂಬುದೂ ಇಲ್ಲ, ಬೇಡೆಂಬುದೂ ಇಲ್ಲಾ
ಈ ಉಭಯವನತಿಗಳೆದು ಭೋಗಿಸಬಲ್ಲಡೆ
ಕೂಡಲಚನ್ನಸಂಗಮದೇವಾ ನಿಮ್ಮ ಶರಣನೆಂಬೆ.
(ಸಮಗ್ರ ವಚನ ಸಂಪುಟ-3 / 2021 / ಪುಟ ಸಂ. 126 / ವ. ಸಂ. 295)
ಪ್ರಸಾದಕ್ಕೆ ಸಂಬಂಧಿಸಿದಂತೆ ವಿವಿಧ ಅಭಿವ್ಯಕ್ತಿಗಳನ್ನು ಕೆಳಗಿನ ವಚನಗಳಲ್ಲಿ ಕಾಣಬಹುದು.
ವೈರಾಗ್ಯನಿಧಿ ಅಕ್ಕಮಹಾದೇವಿ:
ಪ್ರಾಣ ಲಿಂಗವೆಂದರಿದ ಬಳಿಕ, ಪ್ರಾಣ ಪ್ರಸಾದವಾಯಿತ್ತು.
ಲಿಂಗ ಪ್ರಾಣವೆಂದರಿದ ಬಳಿಕ, ಅಂಗದಾಸೆ ಹಿಂಗಿತ್ತು.
ಲಿಂಗ ಸೋಂಕಿನ ಸಂಗಿಗೆ, ಕಂಗಳೆ ಕರುವಾದವಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ, ಹಿಂಗದೆ ಅನಿಮಿಷನಾಗಿಹ ಶರಣಂಗೆ
(ಸಮಗ್ರ ವಚನ ಸಂಪುಟ-5 / 2021 / ಪುಟ ಸಂ. 98 / ವ. ಸಂ. 280)
ಪ್ರಾಣಲಿಂಗ ಅಂದರೆ ತನ್ನದೇ ಆದ ತನ್ನೊಳಗೇ ಇರುವ ಅಂತರಂಗ ಮತ್ತು ಅಂತರಾತ್ಮಗಳನ್ನು ಸಂಪೂರ್ಣವಾಗಿ ಅರಿಯುವ ಸಾಧನೆಯ ಮಾರ್ಗ. ಸಾಧಕನು ಮಾಡುವ ಪ್ರತಿಯೊಂದು ಕ್ರಿಯಯೂ ಗುರು-ಲಿಂಗ-ಜಂಗಮಕ್ಕೆ ಸಲ್ಲುವ ಧ್ವನಿ ಪ್ರಸ್ಥಾನವಾಗಿದೆ. ಭಕ್ತಿ ಮತ್ತು ಇಚ್ಛಾಶಕ್ತಿಭಾವ ಚಿಗುರೊಡೆದು ಹೆಮ್ಮರವಾಗಿ ಬೆಳೆದು ಲಿಂಗದಲ್ಲಿ ಬೆರೆತು ಪ್ರಾಣಪ್ರಸಾದವಾಗಿ ಮನಸ್ಸು ಅಂತರಂಗದ ಅರಿವಿನಿಂದ ಅರಳುವುದು.
ಶರಣೆ ಮೋಳಿಗೆ ಮಹಾದೇವಿಯವರು ತಮ್ಮ ವಚನಗಳಲ್ಲಿ ಪ್ರಾಣಲಿಂಗಿಸ್ಥಲದ ಬಗ್ಗೆ ವಿವರಿಸಿದ್ದಾರೆ.
ಇಷ್ಟಲಿಂಗ ಪ್ರಾಣಲಿಂಗವೆಂದು ವಿಭೇದಿಸುವಲ್ಲಿ
ಕುಸುಮದ ಗಿಡುವಿಂಗೆ ವಾಸನೆಯುಂಟೆ ಕುಸುಮಕಲ್ಲದೆ?
ಅದು ಗಿಡುವಿಡಿದಾದ ಕುಸುಮವೆಂಬುದನರಿದು
ಗಿಡುವಿನ ಹೆಚ್ಚುಗೆ ಕುಸುಮದ ನಲವು ಸುಗಂಧದ ಬೆಳೆ
ಭಕ್ತಿಗೆ ಕ್ರೀ ಕ್ರೀಗೆ ಶ್ರದ್ಧೆ ಶ್ರದ್ಧೆಗೆ ಪೂಜೆ
ಪೂಜೆಗೆ ವಿಶ್ವಾಸ ವಿಶ್ವಾಸಕ್ಕೆ ವಸ್ತು ತನ್ಮಯವಾಗಿಪ್ಪುದು
ಇದು ತುರೀಯ ಭಕ್ತಿಯ ಇರವು
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಲಿಂಗವ
ಮೆಲ್ಲ ಮೆಲ್ಲನೆ ಕೂಡುವ ಪರಿ
(ಸಮಗ್ರ ವಚನ ಸಂಪುಟ-5 / 2021 / ಪುಟ ಸಂ. 410 / ವ. ಸಂ. 1143)
ಶರಣೆ ಮೋಳಿಗೆ ಮಹಾದೇವಿಯವರು ಈ ವಚನಗದಲ್ಲಿ ಅಂಗ ಮತ್ತು ಲಿಂಗವನ್ನು ಗಿಡ ಮತ್ತು ಕುಸುಮದ ಅಲಂಕಾರದೊಂದಿಗೆ ಪ್ರಾಣ ಪ್ರಸಾದದ ವಿವರಣೆಗೆ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಂಗವೆಂಬ ಗಿಡದಲ್ಲಿ ಲಿಂಗಪೂಜೆಯೆಂಬ ಅಂತರಂಗ ಸಾಧನೆಯಿಂದ ಲಿಂಗಾಂಗ ಸಾಮರಸ್ಯವೆಂಬ ಸುವಾಸನೆ ಭರಿತ ಹೂವು ಅರಳುವುದರ ಪರಿಕಲ್ಪನೆಯೇ ಅತ್ಯಂತ ಅದ್ಭುತ. ಶ್ರದ್ಧೆ, ಭಕ್ತಿ ಮತ್ತು ವಿಶ್ವಾಸದಿಂದ ಕ್ರಿಯೆ ಮತ್ತು ಪೂಜೆಯನ್ನು ಮಾಡುವಲ್ಲಿ ಲಿಂಗಾಂಗ ಸಾಮರ್ಥ್ಯದ ಬೆಳಕು ಮೂಡುವಲ್ಲಿ ಸಹಕಾರಿಯಾಗುತ್ತದೆ. ಇಂಥ ಶರಣನು ಪ್ರಸಾದಿಯಾಗಿ ನಿಲ್ಲಲು ಸಮರ್ಥನಾಗುತ್ತಾನೆ. ಇದನ್ನೇ ಅಕ್ಕಮಹಾದೇವಿಯವರೂ ಕೂಡ ತಮ್ಮ ವಚನದಲ್ಲಿ ಲಿಂಗ ಪ್ರಾಣವೆಂದರಿದ ಬಳಿಕ, ಅಂಗದಾಸೆ ಹಿಂಗಿತ್ತು ಎಂದು ನಿರೂಪಣೆ ಮಾಡಿದ್ದಾರೆ.
ಶರಣೆ ಆಯ್ದಕ್ಕಿ ಲಕ್ಕಮ್ಮ:
ಬಸವಣ್ಣನ ಪ್ರಸಾದವಕೊಂಡು, ಎನ್ನಕಾಯ ಶುದ್ಧವಾಯಿತ್ತಯ್ಯಾ.
ಚೆನ್ನಬಸವಣ್ಣನ ಪ್ರಸಾದವಕೊಂಡು, ಎನ್ನಜೀವ ಶುದ್ಧವಾಯಿತ್ತಯ್ಯಾ.
ಮಡಿವಾಳಯ್ಯನ ಪ್ರಸಾದವಕೊಂಡು, ಎನ್ನಭಾವ ಶುದ್ಧವಾಯಿತ್ತಯ್ಯಾ.
ಶಂಕರ ದಾಸಿಮಯ್ಯನ ಪ್ರಸಾದವಕೊಂಡು, ಎನ್ನ ತನು ಶುದ್ಧವಾಯಿತ್ತಯ್ಯಾ.
ಸಿದ್ಧರಾಮಯ್ಯನ ಪ್ರಸಾದವಕೊಂಡು, ಎನ್ನ ಮನ ಶುದ್ಧವಾಯಿತ್ತಯ್ಯಾ.
ಘಟ್ಟಿವಾಳಯ್ಯನ ಪ್ರಸಾದವಕೊಂಡು, ಎನ್ನ ಪ್ರಾಣ ಶುದ್ಧವಾಯಿತ್ತಯ್ಯಾ.
ಅಕ್ಕನಾಗಾಯಮ್ಮನ ಪ್ರಸಾದವಕೊಂಡು, ಎನ್ನ ಅಂರಂಗ ಶುದ್ಧವಾಯಿತ್ತಯ್ಯಾ.
ಮುಕ್ತಾಯಕ್ಕಳ ಪ್ರಸಾದವಕೊಂಡು, ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ.
ಪ್ರಭುದೇವರ ಪ್ರಸಾದವಕೊಂಡು, ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ.
ಇವರು ಮುಖ್ಯವಾದ ಏಳುನೂರೆಪ್ಪತ್ತು
ಅಮರಗಣಂಗಳ ಪ್ರಸಾದವಕೊಂಡು ಬದುಕಿದೆನಯ್ಯಾ.
ಮಾರಯ್ಯಪ್ರಿಯ ಅಮರೇಶ್ವರಾ,
ನಿಮ್ಮ ಶರಣರ ಪಾದಕ್ಕೆ ಅಹೋರಾತ್ರಿಯಲ್ಲಿ,
ನಮೋ ನಮೋ ಎನುತಿರ್ದೆನು.
(ಸಮಗ್ರ ವಚನ ಸಂಪುಟ-5 / 2021 / ಪುಟ ಸಂ. 272 / ವ. ಸಂ. 719)
ಶರಣೆ ನೀಲಮ್ಮ:
ಪ್ರಸಾದಿಗಳು ಪ್ರಸಾದಿಗಳೆಂದೆಂಬರಯ್ಯ
ತಾವು ಪ್ರಸಾದಿಗಳಾದ ಪರಿಯೆಂತಯ್ಯ?
ಪರಿಪೂರ್ಣದ ನೆಲೆಯ ತಿಳಿದು
ಪರಂಜ್ಯೋತಿಯ ಅನುಭವವನ್ನರಿಯದನ್ನಕ್ಕ
ತಾವು ಪ್ರಸಾದಿಗಳಾದ ಪರಿಯೆಂತಯ್ಯ?
ಪರಮ ಸುಖದ ಅನುಭವವನರಿದು
ಇತರೇತರ ಮಾರ್ಗವ ಕಾಣದೆ ಬಯಲ ಕೂಡಿದಾತ
ನಮ್ಮ ಬಸವನ ಪ್ರಸಾದಿಯಲ್ಲದೆ
ಮತ್ತಾರಿಗೂ ಪ್ರಸಾದಿಸ್ಥಲ ಸಾಧ್ಯವಾಘದಯ್ಯ ಸಂಗಯ್ಯ
(ಸಮಗ್ರ ವಚನ ಸಂಪುಟ-5 / 2021 / ಪುಟ ಸಂ. 366 / ವ. ಸಂ. 997)
ಪ್ರಾಣವೇ ಲಿಂಗವಾದಾಗ ಪ್ರಾಣಪ್ರಸಾದವಾಯಿತೆಂದು ಹೇಳಿರುವ ಅಕ್ಕಮಹಾದೇವಿ ಇಲ್ಲಿ ಪ್ರಸಾದವೆಂದರೆ ಆಹಾರವಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಬಸವಣ್ಣ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವರ ಪ್ರಸಾದವಕೊಂಡು, ತನ್ನ ಕಾಯ-ಜೀವ-ಭಾವ ಶುದ್ಧವಾಯಿತೆಂದು ಆಯ್ದಕ್ಕಿ ಲಕ್ಕಮ್ಮ ಹೇಳಿದರೆ, ಪ್ರಸಾದಿಗಳಾಬೇಕಾದರೆ, ಪರಿಪೂರ್ಣದ ನೆಲೆಯನರಿತು ಪರಂಜ್ಯೋತಿಯ ಅನುಭಾವವನರಿಯಬೇಕೆಂದು ಮತ್ತು ಲಿಂಗಾಂಗ ಸಾಮರಸ್ಯದ ಮುಂದೆ ಯಾವ ಸುಖವೂ ಶ್ರೇಷ್ಠವಲ್ಲ ಅಂತಾ ನೀಲಮ್ಮನವರು ಹೇಳಿದ್ದಾರೆ.
ಶರಣ ಆದಯ್ಯ:
ಪ್ರಸಾದವೆ ಪರಮಜ್ಞಾನ, ಪ್ರಸಾದವೆ ಪರಾಪರ,
ಪ್ರಸಾದವೆ ಪರಬ್ರಹ್ಮ, ಪ್ರಸಾದವೆ ಪರಮಾನಂದ,
ಪ್ರಸಾದವೆ ಗುರು, ಪ್ರಸಾದವೆ ಲಿಂಗ, ಪ್ರಸಾದವೆ ಜಂಗಮ,
ಪ್ರಸಾದವೆ ಪರಿಪೂರ್ಣ,
ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸನ್ನತೆಯೆ ಪ್ರಸಾದ.
ಇಂತಪ್ಪ ಪ್ರಸಾದ ಮಹಾತ್ಮೆಗೆ
ಆನು ನಮೋ ನಮೋಯೆನುತಿರ್ದೆನು
(ಸಮಗ್ರ ವಚನ ಸಂಪುಟ-6 / 2021 / ಪುಟ ಸಂ. 377 / ವ. ಸಂ. 1023)
ಪ್ರಾಸಾದವೆಂದರೆ ಸ್ವಸ್ವರೂಪದ ಅನುಭವವನ್ನು ನೀಡುವ ಪರಮ ಶಿವ ಜ್ಞಾನ. ಪ್ರಸಾದವೆಂದರೆ ಪರಕ್ಕೆ ಪರವೆನಿಸುವ ಪರಮ ವಸ್ತು. ಪ್ರಾಸಾದವೆಂದರೆ ನಿರಾಕಾರ, ನಿರ್ವಿಕಾರ. ಸರ್ವಕಾರಣವೆನಿಸುವ ಪರಬ್ರಹ್ಮ ವಸ್ತು. ಪ್ರಸಾದವೆಂದರೆ ಶಿವಯೋಗಿಗಳು ಅಂತರಂಗದಲ್ಲಿ ಅನವರತವೂ ಅನುಭವಿಸುವ ಪರಮಾನಂದ. ಪ್ರಸಾದವೆಂದರೆ ಕೇವಲ ಅರಿವೆನಿಸುವ ಗುರು. ಪ್ರಸಾದವೆಂದರೆ ಸರ್ವವ್ಯಾಪಿಯಾದ, ಸಕಲಕ್ಕೂ ಆಧಾರವಾದ ಲಿಂಗವು. ಪ್ರಸಾದವೆಂದರೆ ಚಲಿಸುವ ಚೇತನವೆನಿಸುವ ಜಂಗಮಲಿಂಗ. ಪ್ರಸಾದವೆಂದರೆ ಎಲ್ಲೆಲ್ಲೂ ತುಂಬಿ ತುಳುಕುತ್ತಿರುವ ಪರಿಪೂರ್ಣ ಎನಿಸುವ ಪರಶಿವ ತತ್ವವು. ಪ್ರಸಾದವೆಂದರೆ ವಿಶ್ವವನ್ನೊಳಗೊಂಡ ವಿಶ್ವಾತ್ಮನೆನಿಸುವ ಪರಶಿವಲಿಂಗ, ಪರಿಶುದ್ಧ ಪ್ರಶಾಂತ ಪ್ರಸನ್ನತೆಯು ಎಂಬುದು ಆದಯ್ಯನ ಅಭಿಪ್ರಾಯ ಅಂತಾ ಹೇಳತಾ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ.
ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರೋಡ್, ಕೇಶ್ವಾಪೂರ,
ಹುಬ್ಬಳ್ಳಿ.
ಮೋಬೈಲ್ ನಂ. +91 98458 10708