
ಆಡುವಡೆ ಸದಾಚಾರಿಗಳ ಕೂಡೆ ಆಡುವುದು.
ನುಡಿವಡೆ ಜಂಗಮಪ್ರೇಮಿಯ ಕೂಡೆ ನುಡಿವುದು.
ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವುದು.
ಭಕ್ತಿಹೀನನ ಕಂಡಡೆ ಮನ ಮುನಿಸ ಮಾಡಿಸಾ
ರೇಕಣ್ಣಪ್ರಿಯ ನಾಗಿನಾಥಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1370 / ವಚನ ಸಂಖ್ಯೆ-131)
ಇದು ಬಹುರೂಪಿ ಚೌಡಯ್ಯನವರ ವಚನ. ಇವರು ಬಹುರೂಪಿ ಕಾಯಕದ ಜನಪದ ಕಲಾವಿದರು. ರೇಕಳಿಕೆ ಗ್ರಾಮದಲ್ಲಿ ಹುಟ್ಟಿದ ಇವರ ಕಾರ್ಯಕ್ಷೇತ್ರ ಕಲ್ಯಾಣ, ‘ರೇಕಣ್ಣಪ್ರಿಯ ನಾಗಿನಾಥಾ‘ ಇವರ ಅಂಕಿತ. ಇದು ಇವರ ದೀಕ್ಷಾಗುರು ರೇಕನಾಥ, ಜ್ಞಾನಗುರು ನಾಗಿನಾಥರ ಸಂಯುಕ್ತ ಹೆಸರಿನಿಂದ ಕೂಡಿದುದು. ಬಸವಣ್ಣನವರೆಂದರೆ ಇವರಿಗೆ ಪಂಚಪ್ರಾಣ. ಇವರ ವಚನಗಳಲ್ಲಿ ಲಿಂಗಾಂಗ ಸಾಮರಸ್ಯ, ಶರಣ ವಿಧೇಯತೆ, ಜಂಗಮ ನಿಷ್ಠೆ, ನೇರ ಹಾಗೂ ನಿಷ್ಠೂರ ಸ್ವಭಾವಗಳು ಕಂಡುಬರುತ್ತವೆ. ಇವರ 66 ವಚನಗಳು ನಮಗೆ ಇಲ್ಲಿಯವರೆಗೆ ದೊರೆತಿವೆ.
ನಡೆ ನುಡಿಯ ಶುದ್ಧಿಯ ಕುರಿತಾಗಿ ಇವರು ತಮ್ಮ ಈ ವಚನದಲ್ಲಿ ಪ್ರಸ್ತಾಪಿಸಿದ್ದಾರೆ. ಇವರ ಮಾತುಗಳನ್ನು ಕೇಳುವಾಗ ‘ಅಲ್ಪರ ಸಂಗ ಅಭಿಮಾನ ಭಂಗ‘ ಎಂದು ನಾಣ್ಣುಡಿ ನೆನಪಿಗೆ ಬರುತ್ತದೆ. ಬದುಕಿನ ಸದಾಚಾರ, ಜಂಗಮ ನಿಷ್ಠೆ, ಪ್ರಸಾದತ್ವದ ಬಗೆಗೆ ಇವರಿಗೆ ಒಲವು.
“ನಿನ್ನ ಸ್ನೇಹಿತರನ್ನು ತೋರಿಸು, ನೀನು ಹೇಗೆಂದು ತಿಳಿಸುತ್ತೇನೆ‘ ಎನ್ನುತಿದೆ ಅನುಭಾವಿಗಳ ನುಡಿಯೊಂದು. ಅಂದರೆ ನಾವು ಯಾರ ಜೊತೆಗಿದ್ದೇವೆ. ಯಾರೊಡನೆ ಗೆಳೆತನ ಬೆಳೆಸುತ್ತೇವೆ, ಯಾರೊಡನೆ ಕೂಡಿ ಆಡುತ್ತೇವೆ ಅದರ ಮೇಲೆ ನಮ್ಮ ವ್ಯಕ್ತಿತ್ವ ಅಡಗಿದೆ. ಇಂದು ಮೊಬೈಲ್, ಇಂಟರ್ನೆಟ್, ಫೇಸ್ಬುಕ್ಗಳ ಅಬ್ಬರದಲ್ಲಿ ನಮಗೆ ವಿಶ್ವವಿಡೀ ಗೆಳೆಯರಿದ್ದಾರೆ. ಆದರೆ ಅದರಲ್ಲಿ ನಮ್ಮವರು ಯಾರು? ಗೆಳೆತನಕ್ಕೆ ಯೋಗ್ಯರಾರು ಎಂಬ ಅರಿವೇ ನಮಗಿಲ್ಲ. ಚಂದಿರನಲ್ಲಿ ಮಂದಿರ ಕಟ್ಟಲು ಹೊರಟಿರುವ ನಾವು ನೆರೆಮನೆಯವರಿಗೆ ಅಪರಿಚಿತರಾಗಿದ್ದೇವೆ. ಇದು ಸಮಕಾಲೀನ ಪ್ರಪಂಚದ ವಾಸ್ತವ ಕಟು ಸತ್ಯ
ನಾವು ಗೆಳೆತನ ಬೆಳೆಸಬೇಕಾದರೆ ‘ಗೆಳೆತನಕ್ಕೆ ಯೋಗ್ಯರಾದವರನ್ನೇ ಆರಿಸಿಕೊಳ್ಳಬೇಕು. ವಚನಕಾರರು ಇಲ್ಲಿ ಸದಾಚಾರಿ ಪದ ಪ್ರಯೋಗಿಸಿದ್ದಾರೆ. ಸದಾಚಾರಿಯೆಂದರೆ ಒಳ್ಳೆಯ ಆಚಾರ, ಒಳ್ಳೆಯ ಆಚರಣೆ, ಒಳ್ಳೆಯ ನಡೆ ನುಡಿಯುಳ್ಳವನು. ‘ಸಜ್ಜನರ ಸಂಗವದು ಹೆಚ್ಚೇನು ಸವಿದಂತೆ‘ ಎಂಬ ಸರ್ವಜ್ಞ ಕವಿಯ ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಸದಾಚಾರ ಎಂದರೆ ಪ್ರಾಮಾಣಿಕನಾಗಿದ್ದು ಸಕಲ ಪ್ರಾಣಿಗಳ ಹಿತ ಬಯಸುವುದು. ಇಂಥವರೊಡನೆ ಕೂಡಿಯಾಡಿದರೆ ಅದು ಜೊತೆಗಿನ ಸ್ನೇಹವಾಗುತ್ತದೆ. ಚೆನ್ನಬಸವಣ್ಣನವರು, ‘ಪಂಚಾಚಾರ ಪ್ರತಿಷ್ಠೆಯುಳ್ಳಾತನೆ ಕೂಡಲ ಚೆನ್ನಸಂಗಯ್ಯನಲ್ಲಿ ಸದಾಚಾರಿ‘ ಎಂದಿದ್ದಾರೆ.
ಜಂಗಮತ್ವವೆಂದರೆ ಚೈತನ್ಯಯುತವಾದ ಅರಿವನ್ನು ಹೊಂದುವಂತಹುದು. ಪ್ರಸಾದಿಯೆಂದರೆ ಶಿವ (ಸಮಾಜ) ನಿಗೆ ಸಮರ್ಪಿಸಿದ ನಂತರ ಉಳಿದುದನ್ನು ತಾನು ಭಕ್ತಿ ಪ್ರೀತಿಯಿಂದ ಇಂತಹ ಜಂಗಮರು, ಪ್ರಸಾದಿಗಳು ಸದಾ ಜಗದೊಳಿತನ್ನು ಬಯಸುವವರು. ಇವರೊಡನೆ ಮಾತನಾಡಿದರೆ ನಮ್ಮ ಬದುಕ ಭಾಗ್ಯ ಅರಳುತ್ತದೆ. ಆ ಮಾತು ಮಂತ್ರ ಸಮಾನವಾಗುತ್ತದೆ. ಎದೆಯಲ್ಲಿ ರಿಂಗಣಗುಡುತ್ತದೆ. ಮನದ ಕೊಳೆ, ಕಲ್ಮಷ, ಕ್ಲೀಶೆ, ಕತ್ತಲು ತೊಲಗುತ್ತದೆ. ಬದುಕು ಪರಿಶುದ್ಧವಾಗಿ ಆತ್ಮ ಅಪರಂಜಿಯಾಗುತ್ತದೆ.
‘ಬದುಕಿನಲ್ಲಿ ಬದ್ಧತೆ ಇರದವರ ಸ್ನೇಹವೇ ಬೇಡ, ಅವರೊಡನೆ ಮನವು ಸೇರುವುದೇ ಬೇಡ‘ ಎನ್ನುವ ವಚನಕಾರರು ಬದುಕ ಸಾರ್ಥಕತೆ ಇರುವುದಾವುದರಲಿ ಎಂಬುದನ್ನು ಮನಗಾಣಿಸಿದ್ದಾರೆ. ಇದರಿಂದ ನಾವು ಅನುಭವ ಮಂಟಪದ ಹಿರಿಮೆಯನ್ನೂ, ಸತ್ಸಂಗದ ಲಾಭವನ್ನೂ, ಸದಾಚಾರದ ಒಳಿತುಗಳನ್ನೂ ಅರಿಯಬಹುದು. ಅರಿತು ಬೆಳಕಾಗಬಹುದು.
ಡಾ. ಪ್ರದೀಪಕುಮಾರ ಹೆಬ್ರಿ,
ಮಂಡ್ಯ.
ಮೋಬೈಲ್. ನಂ. 9844018457