ಆಧುನಿಕ ವಚನಕಾರರ ಸಾಮಾಜಿಕ ಚಿಂತನೆಗಳು | ಪ್ರೊ. ರಾಜಶೇಖರ ಜಮದಂಡಿ, ಮೈಸೂರು.

ಸಾಮಾನ್ಯವಾಗಿ “ವಚನ” ಎಂಬುದಕ್ಕೆ ಮಾತು, ನುಡಿ, ಪ್ರತಿಜ್ಞೆ, ಭಾಷೆ, ಕೊಟ್ಟಮಾತು, ಉಪದೇಶ, ನುಡಿಗಟ್ಟು, ಸಲಹೆ ಎಂದೆಲ್ಲಾ ಕರೆಯಬಹುದು. ಆಗ 12 ನೇ ಶತಮಾನದ ಬಸವಾದಿ ಶರಣರ ವಚನಗಳು ನೆನಪಾಗುತ್ತವೆ. ಅವರು ಸಮಾಜವನ್ನು ತಿದ್ದುವುದಕ್ಕಾಗಿ ವಚನ ರಚನೆ ಮಾಡಿದರೇ ಹೊರತು ಸಾಹಿತ್ಯಕ್ಕಾಗಿ ಅಲ್ಲ. ಅವರ ವಚನಗಳು ದೇಶಕಾಲಾತೀತವಾಗಿರುವುದಲ್ಲದೆ ಈಚೆಗೆ ಭಾಷಾತೀತವಾಗಿ ದೇಶವಿದೇಶಗಳ ಭಾಷೆಗಳಲ್ಲಿ ಅನುವಾದವಾಗಿ ಎಲ್ಲರೂ ಓದುವಂತೆ ಅನುಕೂಲ ಕಲ್ಪಿಸಿರುವುದು ಸ್ತುತ್ಯಾರ್ಹ. ಇದರ ಜಾಡನ್ನು ಹಿಡಿದು 20 ನೇ ಶತಮಾನದಲ್ಲಿ ಆಧುನಿಕ ಕನ್ನಡ ವಿದ್ವಾಂಸರು ಪ್ರಸ್ತುತ ಸಮಾಜವನ್ನು ತಿದ್ದುವ ಪ್ರಯತ್ನದಲ್ಲಿ ತಮ್ಮದೇ ಆದ ವಿಚಾರಗಳನ್ನು ವಚನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆಧುನಿಕ ವಚನಗಳು ಯಾರ ಹಂಗಿಲ್ಲದೆ, ನೇರವಾಗಿ, ಕಿರಿದಾಗಿ ಹೇಳುವ ಸಾಮರ್ಥ್ಯ ಪಡೆದಿವೆ. ಅಂದಿನ ನಡುಗನ್ನಡ ವಚನಕಾರರಂತೆ ಇಂದಿನ ಹೊಸಗನ್ನಡ ವಚನಕಾರರು ತಮ್ಮ ವಚನದ ಕೊನೆಗೆ ಅಂಕಿತನಾಮವಾಗಿ ತಮ್ಮದೇ ನಾಮಧ್ಯೇಯ, ಇಷ್ಟದೈವ ಅಥವ ಇನ್ಯಾವುದೋ ಕುರುಹನ್ನೋ ಬಳಸಿಕೊಂಡಿರುವುದುಂಟು. ಇಬ್ಬರ ಆಶಯಗಳು ಜನಮುಖಿ ಮತ್ತು ಜೀವನಮುಖಿಯಾಗಿವೆ.  ಸಮಾಜ ಪರಿವರ್ತನೆಗೆ ಬೇಕಾಗುವ ಗುಣಗಳಲ್ಲಿ ಸಮೃದ್ಧವಾಗಿ ಕಂಡುಬರುವ ದೈವೀಶ್ರದ್ಧೆ, ಶ್ರಮದ ದುಡಿಮೆ, ಗುಣದೋಷಗಳ ವಿಮರ್ಶೆ, ಆತ್ಮನಿರೀಕ್ಷೆ, ಜೀವನಪ್ರೀತಿ, ಉಪಕಾರಸ್ಮರಣೆ, ನಿಸರ್ಗನಂಬಿಕೆ, ಪ್ರಾಮಾಣಿಕತೆ, ವಿಚಾರಶೀಲತೆ, ಮನೋವೈಶಾಲ್ಯತೆ, ಸಭ್ಯತೆ ಇತ್ಯಾದಿ ಅಂಶಗಳನ್ನು ಆಧುನಿಕ ವಚನಗಳಲ್ಲಿ ಕಾಣುತ್ತೇವೆ.

ಅಂದಿನ ವಚನಕಾರರಂತೆ ಆಧುನಿಕ ವಚನಕಾರರೂ ಸಹ ಪ್ರಸ್ತುತ ಸಮಾಜ ಹೇಗಿದೆ? ಹೇಗಿರಬೇಕು? ಎಂಬ ಪ್ರಶ್ನೋತ್ತರ ರೀತಿಯಲ್ಲಿ ಅನಾವರಣಗೊಳಿಸಿದ್ದಾರೆ. ರಾಜಕೀಯ ಕಾನೂನುಗಳ ಮೂಲಕ ಸಮಾಜವನ್ನು ತಿದ್ದುವ ಪ್ರಕ್ರಿಯೆ ಒಂದುಕಡೆಯಾದರೆ, ಸಾಹಿತ್ತಿಕವಾಗಿ ಮನುಷ್ಯನ ಗುಣಾವಗುಣಗಳನ್ನು ತಿದ್ದುವ ಪ್ರಕ್ರಿಯೆ ಕಾಣಬಹುದು. ಅವರು ವಚನಗಳನ್ನು ಮಾರ್ಮಿಕವಾಗಿ, ಸರಳವಾಗಿ, ಸಂದರ್ಭೋಚಿತವಾಗಿ ಅತ್ಯಂತ ಪೂರಕವಾದ ವಿಷಯಗಳೊಂದಿಗೆ ಹೆಣೆದಿದ್ದಾರೆ. ಸಮಾಜದಲ್ಲಿ ಬೇರೂರಿರುವ ಅನಾರೋಗ್ಯಕರ ಅಂಶಗಳ ಬಗೆಗೆ ಸೆಟೆದು ನಿಲ್ಲುವ, ಪ್ರತಿರೋಧವನ್ನು ದಾಖಲಿಸುವ ನಿಲುವು ಕಾಣಬಹುದು. ಸೃಜನಶೀಲ ಭಾಷೆಯ ಬಳಕೆ ಮತ್ತು ಕಲಾತ್ಮಕತೆಯ ಹಿನ್ನಲೆಯಲ್ಲಿ ಸಾಮಾಜಿಕ ಅನ್ಯಾಯಗಳನ್ನು ವಿರೋಧಿಸುವ ಅಂಶಗಳು ಮುಖ್ಯವಾಗಿವೆ. ೧೨ನೇ ಶತಮಾನದ ವಚನಕಾರರ ಪ್ರಭಾವ, ಪ್ರೇರಣೆಗಳಿದ್ದಾಗ್ಯೂ ಸ್ವತಂತ್ರ ಆಲೋಚನೆ, ಸ್ವಾಭಿಮಾನದ ಅಸ್ಮಿತೆಗೆ ಇಂದಿನವರಲ್ಲಿ ಯಾವ ಧಕ್ಕೆ ಕಾಣಬರುವುದಿಲ್ಲ.

ಆಧುನಿಕ ವಚನಕಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಕುರಿತಾಗಿ ಸಂಗ್ರಹ, ಸಂಕಲನ, ಸಂಪಾದನೆ, ಪ್ರಕಟಣೆಗಳು ಸಹಜವಾಗಿವೆ. ಈಗಲೂ ಕನ್ನಡ ಕಾವ್ಯ ಲೋಕದಲ್ಲಿ ವಚನ ಮಾಧ್ಯಮ ಪ್ರಭಾವಶಾಲಿಯಾಗಿ ಬೆಳೆಯುತ್ತಿರುವುದು ಅನೇಕ ಆಧುನಿಕ ವಚನಕಾರರಿಂದ ಸಾಬೀತುಗೊಂಡಿದೆ. ಕೆಲವರ ವಚನಗಳಲ್ಲಿ ಹಿಂದಿನ ವಚನಕಾರರಂತೆ ಸಾಧಕ ದೃಷ್ಟಿ ಮುಂದುವರೆದಿದೆ. ಆಧುನಿಕರಲ್ಲಿ ದಾರ್ಶನಿಕ ಅನುಭವದ ಸೂಚನೆಗಳನ್ನು ಗುರುತಿಸಬಹುದು. ಲೌಕಿಕದಲ್ಲಿ ಬಾಳುತ್ತಿದ್ದರೂ ಸಹ ಅಲೌಕಿಕ ಚಿಂತನೆಯ ಸತ್ವವನ್ನು ಅರಗಿಸಿಕೊಂಡು ಶರಣ ಜೀವನದ ಪ್ರತಿಭೆಯನ್ನೂ, ಅಂತೆಯೇ ಆಧುನಿಕ ಪರಿಸರಕ್ಕೆ ಒಡ್ಡಿಕೊಂಡ ವಿಚಾರಶೀಲ ಮನಸ್ಸಿನ ಪರಿಭಾವನೆಯ ಪ್ರಭಾವವನ್ನೂ ಕಾಣಬಹುದು. ಸಮಾಜದಲ್ಲಿನ ಸಮಕಾಲೀನ ಸಮಸ್ಯೆಗಳ ಪ್ರಜ್ಞೆಯ ಹಿನ್ನೆಲೆಯಲ್ಲಿ ಎಚ್ಚರಿಸುವ ಹಂಬಲದೊAದಿಗೆ ದೌರ್ಬಲ್ಯಗಳನ್ನೂ ಸೂಚಿಸುವ ಅನುಸಂಧಾನ ಎದ್ದುಕಾಣುತ್ತದೆ. ವರ್ತಮಾನದ ತಲ್ಲಣಗಳು ಕನ್ನಡದಷ್ಟೇ ಆಂಗ್ಲ ಸಾಹಿತ್ಯದ ಪ್ರಕಾರಗಳಲ್ಲೂ ವೇಗವಾಗಿ ಪ್ರಕಟಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕನ್ನಡದ ಆಧುನಿಕ ವಚನಗಳ ರಚನೆ ಸತ್ವಯುತವಾಗಿರುವುದು ಓದುಗರು ಸ್ವಾಗತಿಸುವುದಕ್ಕೆ ಸಾಕ್ಷಿಯಾಗಿವೆ. ಇವುಗಳ ಅಧ್ಯಯನ ವಾಸ್ತವಿಕ ಸಮಾಜಕ್ಕೆ ಕೈಗನ್ನಡಿಯಾಗಿರುವುದಲ್ಲದೆ ಬದುಕನ್ನು ತೆರೆದ ಕಣ್ಣಿಂದ ನೋಡುವಲ್ಲಿ ಸಹಕಾರಿಯಾಗಿವೆ.

ಆಧುನಿಕ ವಚನಕಾರರು ಈ ಮಾಧ್ಯಮವನ್ನು ಗಮನಾರ್ಹವಾಗಿ ಬಳಸಿಕೊಂಡಿದ್ದಾರೆ- ಬಳಸಿಕೊಳ್ಳುತ್ತಿದ್ದಾರೆ. ಅಂತಹವರಲ್ಲಿ ಮುಖ್ಯವಾಗಿ ಎಸ್. ವಿ. ರಂಗಣ್ಣ, ಜ. ಚ. ನಿ, ಮೂ. ಜ. ಗಂ, ಎಸ್. ವಿ. ಪರಮೇಶ್ವರಭಟ್ಟ, ಹರ್ಡೇಕರ ಮಂಜಪ್ಪ, ಸಿಂಪಿ ಲಿಂಗಣ್ಣ, ಸಿದ್ಧಯ್ಯ ಪುರಾಣಿಕ್, ಸಿ. ಪಿ. ಕೆ., ಗೊ. ರು. ಚನ್ನಬಸಪ್ಪ, ರಾಮಚಂದ್ರ ಪಾಟೀಲ್, ಟಿ. ಎನ್. ಮಹಾದೇವಯ್ಯ, ಎಚ್. ತಿಪ್ಪೇರುದ್ರಸ್ವಾಮಿ, ಜರಗನಹಳ್ಳಿ ಶಿವಶಂಕರ, ಮಹಾದೇವ ಬಣಕಾರ, ಸಂಗಮೇಶ ಹೊಸಮನಿ, ಸಿದ್ಧಣ್ಣ ಲಂಗೋಟಿ, ಬಸವರಾಜ ಸಬರದ, ಸಿ. ಪಿ. ಸಿದ್ಧಾಶ್ರಮ, ಎನ್. ಎಂ. ಗಿರಿಜಾಪತಿ, ಯಲ್ಲಪ್ಪ ದರೋಜಿ, ಎಂ. ಜಿ. ಗಂಗನಪಳ್ಳಿ, ಬಸವರಾಜ ಮೋದಿ, ರಾಜಶೇಖರ ಜಮದಂಡಿ, ರತ್ನ ಕಾಳೇಗೌಡ, ಡಾ. ಕೆ. ಎಸ್. ರತ್ನಮ್ಮ, ಅನ್ನಪೂರ್ಣ ಮನ್ನಾಪುರ, ದಾಕ್ಷಾಯಿಣಿ, ಕಲ್ಯಾಣಮ್ಮ, ಕಮಲಾ ಹಂಪನಾ, ವಿಜಯಶ್ರೀ ಸಬರದ ಎಂ. ಪುಟ್ಟತಾಯಮ್ಮ, ಎಚ್. ಆರ್. ಲೀಲಾವತಿ, ಶೈಲಜಾ ಉಡಚಣ, ಬಿ. ಕೆ. ಶಶಿಕಲಾ ಮುಂತಾದ ಆರುನೂರಕ್ಕೂ ಹೆಚ್ಚಿನವರ ಹೆಸರನ್ನು ಹೇಳಬಹುದು. ಈ ವರೆಗೆ ಸುಮಾರು ಹತ್ತಾರು ವಚನ ಸಂಪುಟಗಳನ್ನು ಸಹ ಪ್ರಕಟಿಸಲಾಗಿದೆ.

ಸ್ವತಂತ್ರಧೀರ ಸಿದ್ಧೇಶ್ವರ’ ಎಂಬ ಅಂಕಿತದೊಂದಿಗೆ ಪ್ರಖ್ಯಾತವಾಗಿರುವ ಸಿದ್ಧಯ್ಯ ಪುರಾಣಿಕರ ವಚನಗಳೆಂದರೆ ಓದುಗರಿಗೆ ತುಂಬಾ ಅಪ್ಯಾಯಮಾನ. ಅವರ ವಚನಗಳಲ್ಲಿ            ಸಮಾಜವನ್ನು ತಿದ್ದುವ ಅಂಶಗಳನ್ನು ಕಾಣುತ್ತೇವೆ.

ಹಲವೆಡೆಯ ಹಕ್ಕಿಗಳು ಹೆಮ್ಮರವೊಂದನ್ನು ಸೇರಿ
ತುಸುಹೊತ್ತು ಚಿಲಿಪಿಲಿ ಸ್ವರಗೈದು
ಮತ್ತೆ ಚೆದುರಿ ಹೋದಂತೆ ಈ ಸಂಸಾರ ಎಂಬರಯ್ಯ!
ಹಕ್ಕಿಗಳು ಹೆಸರು ಕೆಡಿಸುವ ಹೋಲಿಕೆಯಿದು
ಇರುವಷ್ಟು ಸಮಯ ಸವಿಯಾಗಿ ಹಾಡುತ್ತವೆ;
ಇದ್ದಷ್ಟು ಹಣ್ಣುಗಳ ಗುದ್ದಾಡದೆ ಸವಿಯುತ್ತವೆ;
ವಿರೋಧವಿಲ್ಲದೆ ಕೂಡಿ, ಕಲಹವಿಲ್ಲದೆ ಆಡಿ,
ಮಾದರಿ ಗೆಳೆತನ ಮಾಡಿ ಹೋಗುತ್ತವೆ ಹಕ್ಕಿಗಳು!
ಇಂಥ ಹಕ್ಕಿಗಳಿಗೆ ಹೋಲಿಸುವುದೆ
ಕಾದಾಡುವ, ಕಚ್ಚಾಡುವ, ಕಿತ್ತುತಿನ್ನುವ ನರರ
ಸ್ವತಂತ್ರಧೀರ ಸಿದ್ದೇಶ್ವರ?

ತಮ್ಮದೇ ಸೀಮಿತ ಭಾಷೆ, ಭಾವ, ಚಲನವಲನಗಳ ಮೂಲಕ ಒಂದೆ ಮರದಲ್ಲಿ ಕೆಲಹೊತ್ತು  ಕೂಡುವ ಪಕ್ಷಿಗಳು ಯಾವ ತಂಟೆ-ತಕರಾರು ಮಾಡುವುದಿಲ್ಲ. ಅವುಗಳಲ್ಲಿ ಹಂಚಿಕೊಂಡು ತಿನ್ನುವ, ಸಹಕರಿಸುವ ಮನೋಭಾವ ಕಾಣಬಹುದು. ಡಾ. ಪುರಾಣಿಕರು ಪ್ರಾಣಿ-ಪಕ್ಷಿಗಳಲ್ಲಿರುವ ಹೊಂದಾಣಿಕೆ  ವಿವರಿಸುವುದರೊಂದಿಗೆ, ಮಾನವನ ಕೀಳುತನದ ಗುಣವನ್ನು ಅನಾವರಣ ಮಾಡಿದ್ದಾರೆ. ಒಳಿತನ್ನು ನಿರಾಕರಿಸಿ ಕೆಡುಕನ್ನೇ ಹುಡುಕುವ ಮನುಷ್ಯನ ಕೀಳು ಸ್ವಭಾವದಿಂದ ಪರಿಸರಕ್ಕೆ ಹಾನಿ ಎಂಬುದನ್ನು ತಿಳಿಯಪಡಿಸಿದ್ದಾರೆ. ಇಂತಹ ಗೋಮುಖವ್ಯಾಘ್ರ ಮನುಷ್ಯನಿಗೆ ಪ್ರಾಣಿ-ಪಕ್ಷಿಗಳ ಹೋಲಿಕೆ ಸಲ್ಲದು ಎಂದಿದ್ದಾರೆ. ನಿಸ್ವಾರ್ಥ ಭಾವನೆಯಿಂದ ಬದುಕುವ ಪ್ರಾಣಿಪಕ್ಷಿಗಳೆಲ್ಲಿ? ಮೈತುಂಬಾ ಸ್ವಾರ್ಥವನ್ನೇ ತುಂಬಿಕೊಂಡಿರುವ ಮನುಷ್ಯನೆಲ್ಲಿ?

ಮೈಸೂರಿನ ಪ್ರೊ. ಸಿ. ಪಿ. ಸಿದ್ದಾಶ್ರಮ ಅವರು ಆಧುನಿಕ ವಚನಕಾರರಾಗಿ ಇನ್ನೂರಕ್ಕೂ ಹೆಚ್ಚು ವಚನಗಳನ್ನು “ಹರಿಗೋಲ ಚಿದಾನಂದ” ಎಂಬ ಅಂಕಿತದಲ್ಲಿ ಬರೆದಿದ್ದಾರೆ. ಭಾರತೀಯರು ಸ್ವಚ್ಛತೆಯೆಡೆಗೆ  ಭಾಷಣ ಬಿಗಿದು ಕಸ ಗೂಡಿಸುವುದಷ್ಟೇ ಅಲ್ಲ. ಮನದೊಳಗಿನ ಕಲ್ಮಷಗಳನ್ನೂ ಕಳೆದುಕೊಳ್ಳವುದೂ ಮುಖ್ಯ. ಸಮಾಜದಲ್ಲಿರುವ ಮೇಲು-ಕೀಳು, ಜಾತಿ, ಮೂಢನಂಬಿಕೆ, ಭ್ರಷ್ಟತೆ, ಲಂಚ ಇತ್ಯಾದಿಗಳನ್ನು ಹೊಡೆದೋಡಿಸಿದಾಗ ನಿಜವಾದ ಸ್ವಚ್ಛತೆ ಕಾಣಲು ಸಾಧ್ಯವೆಂಬುದನ್ನು ಡಾ. ಸಿದ್ಧಾಶ್ರಮ ಅವರು ವಚನವೊಂದರಲ್ಲಿ:

ಸ್ವಚ್ಛ ಭಾರತವೆಂದರೆ
ಬೀದಿಗೂಡಿಸುವುದಷ್ಟೇ ಅಲ್ಲ
ಊರುಕೇರಿಗಳಲ್ಲಿ ಹಳ್ಳಿದಿಳ್ಳಿಗಳಲ್ಲಿ
ಜಾತಿಯದೇ ಮೇಲಾಟವಯ್ಯಾ
ದೊಡ್ಡವರು ಚಿಕ್ಕವರು
ತಿಳಿದವರು ತಿಳಿಯದವರು
ಎಲ್ಲರೂ ಜಾತಿ ಬಂಧಿಗಳೇ ಈ ದೇಶದಲ್ಲಿ
ಹುಟ್ಟುವಾಗಲೂ ಜಾತಿ ಸತ್ತಾಗಲೂ ಜಾತಿ
ಜಾತಿಭೂತದ ಕ್ರೂರ ನರ್ತನ ಚಿಂದಿ ಉಡಾಯಿಸಿದೆ
ಮನುಕುಲವ ಹರಿಗೋಲ ಚಿದಾನಂದ

ಜಾತಿಮತಧರ್ಮದ ಸಮಸ್ಯೆಗಳು ಕಾಲಕಾಲಕ್ಕೆ ಕಡಿಮೆಯಾಗುತ್ತಿವೆ ಎಂದಾಗ್ಯೂ ಅವುಗಳು ಇನ್ನೂ ಸಂಪೂರ್ಣವಾಗಿ ನಾಶವಾಗಿಲ್ಲ. ಇದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಇತ್ಯಾದಿ ಕ್ಷೇತ್ರಗಳ ಪ್ರಗತಿ ಕುಂಠಿತವಾಗುತ್ತಿವೆ. ಮುಖ್ಯವಾಗಿ ಪ್ರತಿಭೆಗೆ ಮಾನ್ಯತೆ ನೀಡಬೇಕೇ ಹೊರತು ಜಾತಿಯ ಪಟ್ಟಕಟ್ಟಿ ಸೋಮಾರಿಯಾಗಿಡುವುದು ಯಾವ ನ್ಯಾಯ? ನಮಗೆ ಬೇಕಾಗಿರುವುದು ಜಾತಿಗಿಂತ ನೀತಿಯಲ್ಲವೆ? ನೀತಿಯಿಂದ ಬಾಳಬಹುದಾದ ಅವಕಾಶಗಳು ವಿಪರೀತವಾಗಿದ್ದರೂ ಅಲ್ಲೆಲ್ಲಾ ಯಂತ್ರಗಳು ಆವರಿಸಿಕೊಂಡಿವೆ. ಅವು ಮನುಷ್ಯನನ್ನೇ ಆಳುವ ಅರಸರಾಗಿ ಮೆರೆಯುತ್ತಿವೆ.

ಹೊಸಪೇಟೆಯ ಡಾ. ಎನ್. ಎಂ. ಗಿರಿಜಾಪತಿಯವರು ಆಧುನಿಕ ವಚನಗಳನ್ನು “ಶ್ರೀಶಿವಲಿಂಗೇಶ್ವರ ಪ್ರಭುವೆ” ಎಂಬ ಅಂಕಿತದಲ್ಲಿ ಬರೆದಿದ್ದಾರೆ. ಸಮಾಜದಲ್ಲಿ ಅನಾಯಸವಾಗಿ, ಅಸಹಜವಾಗಿ ದೊರೆತ ವಸ್ತು ಅಥವಾ ಕೆಲಸಕ್ಕೆ ಬೆಲೆ ಇರುವುದಿಲ್ಲ. ಅದಕ್ಕಾಗಿ ಸ್ವಲ್ಪವಾದರೂ ಶ್ರಮವೆಂಬುದು ಬೇಕೇಬೇಕು. ಯಾವುದೇ ಯೋಗ್ಯತೆ ಅಥವಾ ಯಶಸ್ವಿಗಳೆಂಬಿವು ಶ್ರಮವಿಲ್ಲದೆ ಬರಲಾರವು ಮತ್ತು ಬರಬಾರದೂ ಕೂಡ. ಅದಕ್ಕಾಗಿ ಸತತ ಪ್ರಯತ್ನ ಮತ್ತು ಆಸಕ್ತಿ ಮುಖ್ಯವೆಂಬುದಕ್ಕೆ ಡಾ. ಗಿರಿಜಾಪತಿಯವರು

ಶ್ರಮವಿಲ್ಲದೆ ವಿದ್ಯೆ ಬೇಕೆಂಬುವರು
ಕ್ರಮವಿಲ್ಲದ ಓದಾಳಿತನ ಬಯಸುವರು
ಭ್ರಮೆ ತುಂಬಿದ ಬದುಕು ಬೇಡುವರು
ಪರಿಶ್ರಮವಿಲ್ಲದೆ ಗಳಿಕೆಗೆ ಹಾತೊರೆಯುವರು
ಅತಿಕ್ರಮದಿ ಇಡು ಗಂಟು ಕೋರುವರು
ವಿಭ್ರಮೆಯ ಸುಳಿಯಲಿ ಮುಳುಗು ಹಾಕುವರು
ಯೋಗ್ಯರೆಂತಾದರು ಶಿವಲಿಂಗೇಶ್ವರ ಪ್ರಭುವೆ!

ಪ್ರತಿಯೊಂದು ಕೆಲಸಗಳಿಗೆ ಪೂರ್ವಾಲೋಚನೆ ಅತ್ಯಗತ್ಯ.  ಸಮಾಜದಲ್ಲಿ ಶ್ರಮವಿಲ್ಲದೆ ಬರುವ ಹಣ, ಅಧಿಕಾರ, ಅಂತಸ್ತುಗಳಿಗೆ ಕಿಂಚಿತ್ತೂ ಬೆಲೆ ಇರುವುದಿಲ್ಲ. ಭಗವಂತ ಕೊಟ್ಟಿರುವ ಬುದ್ಧಿಯ ಮೂಲಕ ಉತ್ತಮ ಸಂಸ್ಕಾರ-ಸAಸ್ಕೃತಿಗಳನ್ನು ರೂಢಿಸಿಕೊಳ್ಳಬೇಕು. ಅಡ್ಡದಾರಿಯಿಂದ ಪಡೆದುಕೊಳ್ಳುವ ಪ್ರತಿಯೊಂದು ಯಶಸ್ಸು ಮಾನಸಿಕ ನೆಮ್ಮದಿ ಕೊಡದೇ ಸಾಮಾಜಿಕ ಸ್ವಾಸ್ತö್ಯ ಹಾಳು ಮಾಡುತ್ತದೆ.

ಅದೇರೀತಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿಯ ಬಿ. ಬಿ. ಬಳಿಗಾರವರು ಸಮಾಜದಲ್ಲಿ ನಾವು ಹೇಗೆ ಬಾಳಿದರೂ ಒಂದಲ್ಲ ಒಂದು ಹೆಸರಿಡುವವರಿದ್ದೇ ಇರುತ್ತಾರೆ ಎಂಬುದನ್ನು:

ಚಿಗುರಿದೊಡೆ ಚಿವುಟುವರು
ಗಿಡವಾದೊಡೆ ಬಗ್ಗಿಸುವರು
ಮರವಾದೊಡೆ ಕಡಿಯುವರು
ಎನ್ನ ಒಡೆಯ ಶ್ರೀ ಗುರು
ಬೇರಾಗಿ ಇರುವುದೇ ಲೇಸು ಭುವಿಯಲ್ಲಿ

ಪ್ರಪಂಚದಲ್ಲಿ ಹೇಗಿದ್ದರೂ ಜನ ಅನ್ನುವುದು ತಪ್ಪುವುದಿಲ್ಲ. ಇದಕ್ಕೆ ಪೂರಕವಾಗಿ ಹೇಳುವುದಾದರೆ, ಹೆಚ್ಚು ಮಾತಾಡಿದರೆ ವಾಚಾಳಿ, ಸುಮ್ಮನಿದ್ದರೆ ಮೌನಿ ಎನ್ನುವವರಿದ್ದಾರೆ. ಪಾತ್ರೆಯ ಬಾಯಿ ಮುಚ್ಚಬಹುದು ಆದರೆ ಸದಾ ಟೀಕಿಸುವವರ ಬಾಯಿ ಮುಚ್ಚುವುದು ಕಷ್ಟ. ಹಾಗಾಗಿ ಸಮಾಜದಲ್ಲಿ ಇತರರ ಬಗೆಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದಿದ್ದಾರೆ. ಬೆಂಗಳೂರಿನ ರತ್ನ ಕಾಳೇಗೌಡರವರು ‘ರತ್ನದೀಪ’ ಎಂಬ ವಚನಾಂಕಿತದಿAದ ವಚನ ರಚನೆಗೈದಿದ್ದಾರೆ.  ಸಮಾಜದಲ್ಲಿ ರಾಜ-ಭಿಕ್ಷುಕರ ನಡುವೆ ಹಸಿವು ಮತ್ತು ನಿದ್ದೆ ಸಮವಾಗಿರುತ್ತವೆಂದು ಹೇಳುತ್ತಾ:

ಅರಮನೆಯ ರಾಜನಾದರೇನು?
ಬಡವ ಭಿಕ್ಷುಕನಾದರೇನು?
ಇಬ್ಬರಿಗೂ ಒಂದೇ ರೀತಿಯ ಹಸಿವು
ಅನ್ನವೇ ಇಬ್ಬರ ಹೊಟ್ಟೆ ತುಂಬಿಸುವುದು
ಅರಮನೆಯಲ್ಲಿ ಮಲಗುವುದಕ್ಕೆ ಮಂಚ
ಭಿಕ್ಷುಕರಿಗೆ ಪಾರ್ಕಿನ ಕಲ್ಲು ಬೆಂಚೇ ಮಂಚ
ಇಬ್ಬರೂ ಮಾಡುವುದು ನಿದ್ದೆ ಎಂಬುದ
ತಿಳಿದು ಬಾಳಯ್ಯ –ರತ್ನದೀಪ

ರಾಜ(ಶ್ರೀಮಂತ)ನಾಗಿರಲಿ, ಭಿಕ್ಷುಕನಾಗಿರಲಿ ಹಸಿವು ನಿದ್ದೆ ಅವೆರೆಡೂ ಇಲ್ಲದಿದ್ದರೆ ಅವನ ಆರೋಗ್ಯ ಅಯೋಮಯ. ದಾಸರು ಹೇಳಿದಂತೆ “ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಅಂದರೆ ದುಡಿಯುವುದು ಹೊಟ್ಟೆ ಬಟ್ಟೆಗಾಗಿಯೇ ಹೊರತು ವೃತಾ ಕಾಲಹರಣಕ್ಕಾಗಿ ಅಲ್ಲ. ಸಮಾಜದಲ್ಲಿ ಅನ್ನವೆಂಬುದು ಎಲ್ಲಾ ಆಹಾರಾದಿಗಳಿಗೆ ಮೇಲುಗೈ ಇತರೇ ಸಿಹಿ-ಖಾರ ಪದಾರ್ಥಗಳು ಇದಕ್ಕೆ ಸಮ ಬರಲಾರವು. ಅದೇರೀತಿ ನಿದ್ದೆ ಬಂದಾಗ ಇಂಥದ್ದೇ ಮಂಚ, ಹಾಸಿಗೆ, ಹೊದಿಕೆ, ದಿಂಬು ಬೇಕಾಗುವುದಿಲ್ಲ. ಬರೀ ನೆಲವಾದರೂ ಸರಿ.

ಕೊಪ್ಪಳದ ಶ್ರೀಮತಿ ವಿಜಯಲಕ್ಷ್ಮಿ ಕೊಟಗಿಯವರು “ಶ್ರೀವಿಜಯ” ಎಂಬ ಅಂಕಿತದೊಂದಿಗೆ ಅನೇಕ ವಚನಗಳನ್ನು ಬರೆದಿದ್ದಾರೆ. ಸಮಾಜದಲ್ಲಿನ ಲಂಚ, ಅಧಿಕಾರ, ಹಣ, ಅಸ್ಪೃಷ್ಯತೆ, ದೌರ್ಜನ್ಯ, ಶೋಷಣೆ, ಪಕ್ಷಪಾತ ಕಿತ್ತುಹಾಕಿ ಸಂಘರ್ಷರಹಿತ ಸಮಾಜ ನಿರ್ಮಾಣದ ಕನಸು ಕಂಡವರು. ತಮ್ಮದೊಂದು ವಚನದಲ್ಲಿ

ಬಾಗಿ ನಡೆಯುವುದು ದೌರ್ಬಲ್ಯವೆನಬೇಡ
ಬಾಗಿದ್ದು ಮುಂದೊಮ್ಮೆ ತಲೆ ಎತ್ತೀತು
ಬಾಗುವುದು ಸದ್ವಿನಯ ನೋಡಾ
ಸಹನೆಯಿಂದಿರುವುದ ದೌರ್ಬಲ್ಯವೆನಬೇಡ
ಸಹನೆಯೊಳಗೊಂದು ಸಹಕಾರ ಉದಿಸೀತು
ಸಹನೆ ಸದ್ವರ್ತನೆಯು ನೋಡಾ
ನಡೆ ನುಡಿಯೊಂದಾಗಲು ಬಾಳಬೆಳಗು
ಲಿಂಗಾರ್ಪಿತವೆಂದ ಶ್ರೀವಿಜಯ.

ಸಮಾಜದಲ್ಲಿ ವಿನಯ, ಸೌಜನ್ಯ, ಸಹಾಯ, ಸಹನೆ ಶ್ರೇಷ್ಠವಾಗಿರುತ್ತವೆ. ಬಾಗುವುದು, ಮೌನವಾಗಿರುವುದು  ಕೀರ್ತಿಪತಾಕೆಗೆ ದಾರಿಯಾಗಿರುತ್ತವೆ. ತೆಂಗಿನಗಿಡ ಗರಿಗಳನ್ನು ಬಾಗಿಸುತ್ತಲೇ ಎತ್ತರಕ್ಕೆ ಬೆಳೆಯುತ್ತದೆ, ಬಾಳೆಗಿಡ ಎಲೆಗಳನ್ನು ನೆಲಕ್ಕೆ ಬಾಗಿಸುತ್ತಲೇ ಬೆಳೆದು ಫಲ ನೀಡುತ್ತದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ಮನುಷ್ಯ ಅಹಂಕಾರ, ಅಸಹನೆ ಬಿಡಬೇಕೆಂಬ ಸೂಚನೆಯನ್ನು ಶ್ರೀಮತಿ ಕೊಟಗಿಯವರ ವಚನದಲ್ಲಿ ಗುರುತಿಸಬಹುದು.

ಹಗರಿಬೊಮ್ಮನಹಳ್ಳಿಯ ಗುರುಮೂರ್ತಿ ಪೆಂಡಕೂರು ಅವರು “ಶ್ರೀ ವಿರೂಪಾಕ್ಷ” ಎಂಬ ಅಂಕಿತದಲ್ಲಿ ಆಧುನಿಕ ವಚನಗಳನ್ನು ರಚಿಸಿದ್ದಾರೆ. ಮನುಷ್ಯನಿಗೆ ಕೆಲವೊಂದು ರೋಗಗಳು ವಯೋಸಹಜ. ಇನ್ನು ಕೆಲವು ಅನಿವಾರ್ಯ. ಇಂತಹ ರೋಗಗಳು ಎಂಥವರಿಗೆ ಬರಬೇಕೆಂಬುದನ್ನು ತಮ್ಮ ವಚನದಲ್ಲಿ ಸೂಚಿಸುತ್ತಾ:

ಹಲ್ಲು ನೋವಿಗಿಂತ ಬೇರೆ
ಕೊಲ್ಲುವ ನೋವುಂಟೆ?
ಇಕ್ಕಳವ ಹಾಕಿ ವಸಡಿಯ ಕಿತ್ತಂತೆ
ನರಕದಲ್ಲಿ ದೊರೆವ ಶಿಕ್ಷೆಯಂತೆ
ದೇವಾ ದುಷ್ಟರಿಗೆ, ಖೂಳರಿಗೆ, ಪಾತಕಿಗಳಿಗೆ
ತಪ್ಪದಂತೆ ಸದಾ ದಯಪಾಲಿಸು
ಹಲ್ಲುನೋವಾ ಶ್ರೀ ವಿರೂಪಾಕ್ಷ!

ಪೆಂಡಕೂರು ಅವರು ಹಲ್ಲುನೋವಿನ ಆಳವನ್ನು ಇಲ್ಲಿ ವಿಶಧಿಕರಿಸಿ ಇದರಿಂದ ಆಹಾರ-ನೀರು ಏನೂ ಸ್ವೀಕರಿಸಲು ಆಗದ ಪರಿಸ್ಥಿತಿ ಚಿಂತಾಜನಕವಾಗಿ ನರಕದ ಶಿಕ್ಷೆ ಪ್ರತ್ಯಕ್ಷವಾಗಿ ಅನುಭವಿಸಿದಂತಾಗುತ್ತದೆ. ಇಂತಹ ಸಂಕಷ್ಟ ಸಮಾಜದಲ್ಲಿರುವ ದುಷ್ಟರಿಗೆ, ಖೂಳರಿಗೆ, ಪಾತಕಿಗಳಿಗೆ ತಪ್ಪದಂತೆ ದೇವರೇ ಸದಾ ನೀಡೆಂದು ಪ್ರಾರ್ಥಿಸಿದ್ದಾರೆ. ಇದರಿಂದಲ್ಲಾದರೂ ಅವರಲ್ಲಿರುವ ಕೊಳಕು ಮನಸ್ಸು ಸರಿಹೋಗಬಹುದು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವಸ್ವಾಮೀಜಿಯವರು ಅನೇಕ ವಚನಗಳನ್ನು “ಅಥಣೀಶ” ಎಂಬ ಅಂಕಿತದಲ್ಲಿ ಬರೆದಿದ್ದಾರೆ. ಮನುಷ್ಯ ಏನೇ ಕೆಲಸ ಮಾಡಲಿ ಪೂರ್ವಾಯೋಜನೆ, ಯೋಚನೆಗಳು ಮುಖ್ಯ.  ಸಿದ್ಧತೆಗಳಿಲ್ಲದೆ ಮಾಡುವ ಕೆಲಸ, ಮಾತು, ಕೃತಿ ಎಲ್ಲವೂ ವ್ಯರ್ಥವೆಂಬುದನ್ನು

ಭೂಷಣವಿಲ್ಲದ ಭಾಷಣಗಳು
ಉಪಯುಕ್ತವಿಲ್ಲದ ಉಪದೇಶಗಳು
ಸಂಯಮವಿಲ್ಲದ ಸನ್ಮಾನಗಳು
ಅನುಸರಣೆಯಿಲ್ಲದ ಆಶ್ವಾಸನೆಗಳು
ಹದ್ದುಮೀರಿದ ಹೊಗಳಿಕೆಗಳು
ಇಷ್ಟೆಲ್ಲ ನಮ್ಮ ಸಮಾಜದ ಅರ್ಥಹೀನ
ಆಚರಣೆಗಳಿಂದ ಅಥಣೀಶ

ಆಡುವ ಮಾತುಗಳು ತೂಕ ಮಾಡಿದಂತಿರಬೇಕೆದು ಜನಪದರು ಹೇಳಿದ್ದಾರೆ. ನಾವಾಡುವ ಮಾತು ಮತ್ತು ನಡವಳಿಕೆಯನ್ನು ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆಂಬ ಎಚ್ಚರಿಕೆ ಅಗತ್ಯ. ಹಾಳು ಹರಟೆ ಹಾಗೂ ಅರ್ಥಹೀನ ಬೋಧನೆಯಿಂದ ಯಾವ ಪ್ರಯೋಜನವಿಲ್ಲ. ಜೀವನದಲ್ಲಿ ಸಮಾಜಕ್ಕೆ ನಾವು ನೀಡುವ ಭಾಷಣ, ಉಪದೇಶ, ಆಶ್ವಾಸನೆ, ಹೊಗಳಿಕೆಗಳೆಲ್ಲಾ ಅರ್ಥಪೂರ್ಣವಾಗಿರಬೇಕು. ಆಚಾರ-ವಿಚಾರಗಳು ಒಂದೇಯಾಗಿದ್ದಾಗ ಹೇಳುವ-ಕೇಳುವ ಸಾಮರ್ಥ್ಯ  ಬರುತ್ತದೆ.

ಹೀಗೆ ಆಧುನಿಕ ವಚನಕಾರರು ತಮ್ಮದೇ ವೈಚಾರಿಕ ಚಿಂತನೆಯಲ್ಲಿ ಸಮಾಜವನ್ನು ತಿದ್ದುವ ಕೆಲಸವನ್ನು ವಚನಗಳ ಮೂಲಕ ಮಾಡಿದ್ದಾರೆ. ಇಲ್ಲಿ ಪ್ರಾತಿನಿಧಿಕವಾಗಿ ಕೆಲ ವಚನಕಾರರ ವಚನಗಳ ಹಿನ್ನಲೆಯಲ್ಲಿ ಸಮಾಜ ಸ್ಥಿತಿಗತಿಯನ್ನು ವಿವರಿಸಿರುವೆನು.

ಮುಗಿಸುವ ಮುನ್ನ

ಆಧುನಿಕ ವಚನಕಾರರು 12 ನೇ ಶತಮಾನದ ವಚನಕಾರರಂತೆ ಸಮಕಾಲೀನ ಸಾಮಾಜಿಕ ವಿಚಾರಗಳನ್ನು ತನ್ಮಯವಾಗಿ ಅನಾವರಣಗೊಳಿಸಿದ್ದಾರೆ. ಶರಣರ ವಚನಗಳು ವೈಚಾರಿಕತೆಯ ಹಿನ್ನೆಲೆಯಲ್ಲಿ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದರು. ಹಾಗೆಯೇ 21 ನೇ ಶತಮಾನದ ಇಂತಹ ಸಂಧಿಗ್ದ ಸಂದರ್ಭದಲ್ಲಿ ಸಮಾಜದಲ್ಲಿನ ಸ್ಥಿತಿ-ಗತಿಗಳ ಕುರಿತು ದೊಡ್ಡಧ್ವನಿಯಲ್ಲಿ ಆಧುನಿಕ ವಚನಕಾರರು  ಸಮಾಜದ ಚಲನವಲನಗಳನ್ನು ವೀಕ್ಷಿಸಿ ವಚನಗಳನ್ನು ಬರೆದಿದ್ದಾರೆ. ಇವು 12 ನೇ ಶತಮಾನದಲ್ಲಿನ ಶಿವಶರಣಶರಣೆಯರು ಬರೆದ ವಚನಗಳಂತೆಯೇ ಸಮಾಜವನ್ನು ತಿದ್ದುವ ನಿಟ್ಟಿನಲ್ಲಿರುವುದನ್ನು ಕಾಣುತ್ತೇವೆ. ಬಸವಾದಿ ಶರಣರ ಆಧ್ಯಾತ್ಮಿಕ ಆಂದೋಳನದ ನಂತರ ಥಟ್ಟನೆ ಇದು ನಿಂತು ಹೋದಂತೆ ಕಂಡರೂ ಇದರ ಸೆಲೆ ಪೂರ್ಣವಾಗಿ ಬತ್ತಲಿಲ್ಲ. ಗುಪ್ತಗಾಮಿನಿಯಾಗಿ ಮುಂದೆ 21 ನೇ ಶತಮಾನದಲ್ಲಿ ಮತ್ತೆ ತಲೆ ಎತ್ತಿತು.      

ಪ್ರಾಚೀನ ವಚನ ಮಾಧ್ಯಮವು ಹೇಗೆ ವಿಚಾರಶೀಲವಾಗಿತ್ತೆಂಬುದಕ್ಕೆ ಅಲ್ಲಿ ದೊರೆಯುವ ಉದಾಹರಣೆಗಳಂತೆ ಇಂದಿನ ವಚನ ಮಾಧ್ಯಮದಲ್ಲೂ ಕಂಡುಕೊಳ್ಳಬಹುದಾಗಿದೆ. ಅವರ ವೈಚಾರಿಕ ಪ್ರಜ್ಞೆಯಂತೆ ಮುಖ್ಯವಾಗಿ ಸಾಮಾಜಿಕ ಸಮಸ್ಯೆಗಳನ್ನು ಅರಿಯುವ ದೃಷ್ಟಿಯೇ ಹರಿತವಾಗಿದೆ. ತಾವು ಕಾಣುವ ಸಮಾಜ ಹೇಗಿದೆ? ಹೇಗಿರಬೇಕು? ಹಾಗೆ ಆಗದಿರಲು ಕಾರಣಗಳೇನು? ಅದಕ್ಕಿರುವ ಅಡ್ಡಿಆತಂಕಗಳೇನು? ಎಂಬತಹ ಪ್ರಶ್ನೆಗಳನ್ನು ಮಾಡಿದ್ದಾರೆ. ಅಲ್ಲದೆ ಅಸಮಾನತೆ, ತಾರತಮ್ಯ, ದೌರ್ಜನ್ಯ, ಪಕ್ಷಪಾತ ಇತ್ಯಾದಿಗಳನ್ನು ಬೇರು ಸಮೇತ ಕಿತ್ತು ಹಾಕಿ, ಅಲ್ಲಿ ಸಂಘರ್ಷರಹಿತ ಸರ್ವಸಮಾನತೆಯನ್ನು ಬಿತ್ತುವ ಕೆಲಸ ಮಾಡುತ್ತಾ ಬಂದಿದ್ದಾರೆ.   

ಆರ್ವಾಚಿನ ವಚನ ಸಾಹಿತ್ಯವೂ ಸಹ ಸತ್ವಯುತವೂ, ಸಮೃದ್ಧವೂ, ವೈವಿಧ್ಯಮಯವೂ, ಸಂಪದ್ಭರಿತವೂ ಆಗಿ ಮುಂದುವರೆದಿದೆ. ವಾಸ್ತವಿಕ ಸಮಾಜದಲ್ಲಿ ಕಂಡುಬರುವ ಚಿತ್ರವಿಚಿತ್ರವಾದ ಸಮಯ, ಸನ್ನಿವೇಶ, ಸಂದರ್ಭಗಳಲೆಲ್ಲಾ ಮನುಷ್ಯ ಹೇಗೆಲ್ಲಾ ವರ್ತಿಸುತ್ತಾನೆ? ತನ್ನತನವನ್ನು ಕಳೆದುಕೊಂಡು ಹೇಗೆ ಹೆಣಗಾಡುತ್ತಾನೆ? ಮುಂದಾಲೋಚನೆ ಇಲ್ಲದೆ ಅಮಾನವೀಯವಾಗಿ ನಡೆದು ಇತರರಿಗೆ ಮುಜುಗರ ಮಾಡುತ್ತಾನೆ ಎಂಬುದನ್ನೆಲ್ಲಾ ಆಧುನಿಕ ವಚನಗಳಲ್ಲಿ ಗುರುತಿಸಬಹುದು. ಒಟ್ಟಾರೆಯಾಗಿ ಕನ್ನಡದ ಅನೇಕ ಮಹಾನ್ ಸಾಹಿತಿಗಳು ಮತ್ತು ಸ್ವಾಮೀಜಿಗಳು ಮೌಲ್ಯಯುತವಾದ ವಚನಗಳ ರಚನೆ ಮಾಡುವುದರ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದಾರೆ.

ಪ್ರೊ. ರಾಜಶೇಖರ ಜಮದಂಡಿ.
ಶ್ರೀನಿವಾಸ ವಿಶ್ವವಿದ್ಯಾಲಯ,
ಮಂಗಳೂರು.
ಮೋಬೈಲ್.‌ ನಂ. 94484 41471.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply