ಆಧ್ಯಾತ್ಮ ನಿಷ್ಠೆಯಿಂದ ಅಂತರಂಗದ ಚೈತನ್ಯವನ್ನರಳಿಸಿದ  ಶರಣ ಶಂಕರ ದಾಸಿಮಯ್ಯನವರು

ವಚನಾಂಕಿತ : ನಿಜಗುರು ಶಂಕರದೇವ.
ಜನ್ಮಸ್ಥಳ : ಸ್ಕಂದಶಿಲೆ (ಕಂದಗಲ್ಲು), ಹುನಗುಂದ ತಾ., ಬಾಗಲಕೋಟೆ ಜಿಲ್ಲೆ.
ಕಾಯಕ : ಬಟ್ಟೆಗಳಿಗೆ ಬಣ್ಣ ಹಾಕುವ ನೇಕಾರ (ಬಣಗಾರ).
ಐಕ್ಯಸ್ಥಳ : ಸ್ಕಂದಶಿಲೆ (ಕಂದಗಲ್ಲು), ಹುನಗುಂದ ತಾ., ಬಾಗಲಕೋಟೆ ಜಿಲ್ಲೆ.

ಶರಣರ ನೆನೆದಾರ | ಸರಗೀಯ ಇಟ್ಟಾಂಗ ||
ಅರಳು ಮಲ್ಲಿಗೆ | ಮುಡಿದ್ಹಾಂಗ ||
ಕಲ್ಯಾಣ ಶರಣರ | ನೆನೆಯೋ ನನ ಮನವೇ ||


ನಮ್ಮ ಜನಪದರು ಎಷ್ಟು ಸೊಗಸಾಗಿ ಶರಣರನ್ನು ನೆನಪಿಸಿಕೊಂಡು ಹಾಡಿದ್ದಾರೆ. ಮುಗ್ಧ ಜನಪದರಿಗೆ ಶರಣರನ್ನು ಕುರಿತು ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಅನುಭಾವದ ಹಿನ್ನೆಲೆಯಲ್ಲಿ ಮುಗ್ಧ ಶರಣರ ಕುರಿತು ರಚಿಸಿದ ಹಾಡು ಯಾವುದೇ ವಿಚಾರದಲ್ಲಿ ಶಿವನ ಪ್ರಕಾಶದಂತೆ ಗೋಚರಿಸುತ್ತದೆ. ಶರಣರ ನೆನಪು ಸರಗಿಯನ್ನಿಟ್ಟಂತೆ, ಅರಳು ಮಲ್ಲಿಗೆ ಮುಡಿದಂತೆ, ಆ ನೆನಪು ಮೈ-ಮನಗಳಿಗೆ ಬೆಳದಿಂಗಳಂತೆ ಉಲ್ಲಾಸ ತರುತ್ತದೆ. ಗೆಲುವು ಒಲವುಗಳಿಗೆ ಚೈತನ್ಯ ಎಂಬ ಪರಿಕಲ್ಪನೆಯೇ ಉತ್ಸಾಹದ ಕಾರಂಜಿ.

ಕಾಯಕವೇ ಶಿವ ಭಕ್ತಿ | ಕಾಯಕವೇ ಶಿವ ಭಜನೆ ||
ಕಾಯಕವೇ ಲಿಂಗಪೂಜೆ | ಶಿವಪೂಜೆ ಶಿವಯೋಗ ||
ಕಾಯಕವೇ ಆಯಿತ್ತು | ಕೈಲಾಸ ||

ಶರಣರಿಗೆ ಕಾಯಕವೇ ಕೈಲಾಸ. ಜಗತ್ತಿಗೆ ಲಿಂಗಾಯತ ಧರ್ಮ ಕೊಟ್ಟ ಪರಿಣಾಮಕಾರಿ ಮತ್ತು ಶ್ರೇಷ್ಠ ಸೂತ್ರ ಈ ಕಾಯಕ ತತ್ವ. ಇಂಥ ಅಭೂತಪೂರ್ವ ಕಾಯಕ ತತ್ವ ಮತ್ತು ಆಧ್ಯಾತ್ಮದಲ್ಲಿ ನಿಷ್ಠೆಯುಳ್ಳ ಶರಣ ಶಂಕರ ದಾಸಿಮಯ್ಯ ಒಬ್ಬರು.

ವಚನ ಸಾಹಿತ್ಯದಲ್ಲಿ ದಾಸಿಮಯ್ಯ ಹೆಸರಿನ ನಮಗೆ ಒಟ್ಟು 5 ಶರಣರ ಉಲ್ಲೇಖ ಸಿಗುತ್ತದೆ.
ದೇವರ ದಾಸಿಮಯ್ಯ
ಜೇಡರ ದಾಸಿಮಯ್ಯ
ಶಂಕರ ದಾಸಿಮಯ್ಯ
ವೀರಶಂಕರ ದಾಸಿಮಯ್ಯ
ಶಿವದಾಸಿಮಯ್ಯ

ಶಂಕರ ದಾಸಿಮಯ್ಯ ಮತ್ತು ಶಿವ ದಾಸಿಮಯ್ಯ ಹೊಲಿಗೆ ಮತ್ತು ಬಟ್ಟೆಗಳಿಗೆ ಬಣ್ಣ ಹಾಕುವ ಬಣಗಾರ ಕಾಯಕ ಮಾಡುತ್ತಿದ್ದ ಸಹೋದರರು. ದೇವರ ದಾಸಿಮಯ್ಯನವರು ಅಪ್ಪಟ ಸನ್ಯಾಸಿಗಳು, ಕೃಷಿಕರು ಮತ್ತು ಶಿವನ ಆರಾಧಕರು. ಇಮ್ಮಡಿ ಜಯಸಿಂಹ ಮತ್ತು ಅವನ ರಾಣಿ ಸುಗ್ಗಲಾದೇವಿಯವರಿಗೆ ದೀಕ್ಷೆಯನ್ನು ಕೊಟ್ಟಿದ್ದಾರೆ ಎನ್ನುವದು ಇತಿಹಾಸದಿಂದ ತಿಳಿದು ಬರುತ್ತದೆ. ಜೇಡರ ದಾಸಿಮಯ್ಯನವರು ವಚನಕಾರರು. ಅವರು “ರಾಮನಾಥಾ” ಎನ್ನುವ ವಚನಾಂಕಿತದಿಂದ ಬರೆದ ಸುಮಾರು 176 ವಚನಗಳು ಸಿಕ್ಕಿರುತ್ತವೆ. ಅವರ ಪುಣ್ಯಸ್ತ್ರೀ ದುಗ್ಗಳೆಯವರು ಎರಡು ವಚನಗಳನ್ನು ಬರೆದಿದ್ದಾರೆ. ಶರಣೆ ದುಗ್ಗಳೆಯವರ ಎರಡೂ ವಚನಗಳಲ್ಲಿ ಬಸವಣ್ಣವರನ್ನು ಹೆಸರಿಸಿದ್ದಾರೆ.

ಬಸವಣ್ಣನಿಂದ | ಗುರುಪ್ರಸಾದಿಯಾದೆನು ||
ಚೆನ್ನಬಸವಣ್ಣನಿಂದ | ಲಿಂಗಪ್ರಸಾದಿಯಾದೆನು ||
ಪ್ರಭುದೇವರಿಂದ | ಜಂಗಮಪ್ರಸಾದಿಯಾದೆನು ||
ಮರುಳಶಂಕರದೇವರಿಂದ | ಮಹಾಪ್ರಸಾದಿಯಾದೆನು ||
ಇಂತೀ ಚತುರ್ವಿಧವು | ಏಕೀಭವಿಸಿ ||
ಪ್ರಾಣಲಿಂಗವಾದ | ಮಹಾಮಹಿಮಂಗೆ ಶರಣೆಂದು ||
ಬದುಕಿದೆನಯ್ಯಾ | ದಾಸಯ್ಯಪ್ರಿಯ ರಾಮನಾಥ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-874 / ವಚನ ಸಂಖ್ಯೆ-784)

ಭಕ್ತನಾದಡೆ | ಬಸವಣ್ಣನಂತಾಗಬೇಕು ||
ಜಂಗಮವಾದಡೆ | ಪ್ರಭುದೇವರಂತಾಗಬೇಕು ||
ಯೋಗಿಯಾದಡೆ | ಸಿದ್ಧರಾಮಯ್ಯನಂತಾಗಬೇಕು ||
ಭೋಗಿಯಾದಡೆ | ಚೆನ್ನಬಸವಣ್ಣನಂತಾಗಬೇಕು ||
ಐಕ್ಯನಾದಡೆ | ಅಜಗಣ್ಣನಂತಾಗಬೇಕು ||
ಇಂತಿವರ | ಕಾರುಣ್ಯಪ್ರಸಾದವ ಕೊಂಡು ||
ಸತ್ತ ಹಾಗಿರಬೇಕಲ್ಲದೇ | ತತ್ವದ ಮಾತು ||
ಎನಗೇಕಯ್ಯಾ | ದಾಸಯ್ಯಪ್ರಿಯ ರಾಮನಾಥಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-874 / ವಚನ ಸಂಖ್ಯೆ-785)

ಶಂಕರ ದಾಸಿಮಯ್ಯನವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸ್ಕಂದಶಿಲೆ (ಕಂದಗಲ್ಲು) ಗ್ರಾಮದವರು. ಶರಣೆ “ಶಿವದಾಸಿ (ಉಮ್ಮವ್ವೆ)” ಶಂಕರ ದಾಸಿಮಯ್ಯನವರ ಧರ್ಮಪತ್ನಿ. ಶಂಕರ ದಾಸಿಮಯ್ಯನ ರಗಳೆ, ಶಂಕರ ದಾಸಿಮಯ್ಯನ ಪುರಾಣ, ತೆಲುಗು ಮತ್ತು ಕನ್ನಡದಲ್ಲಿ ರಚನೆಯಾದ ಬಸವ ಪುರಾಣಗಳು, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಮುಂತಾದ ಗ್ರಂಥಗಳಲ್ಲಿ ಶಂಕರ ದಾಸಿಮಯ್ಯನವರ ಬಗ್ಗೆ ಉಲ್ಲೇಖ ಸಿಗುತ್ತದೆ. ನವಿಲೆಯ ಜಡೆಯ ಶಂಕರದೇವ ಇವರ ಆರಾಧ್ಯದೈವ. ನಿಷ್ಠಾವಂತ ಶರಣರಾಗಿದ್ದ ಶಂಕರ ದಾಸಿಮಯ್ಯನವರ ಹಣೆಯ ಮೇಲೆ ಕಣ್ಣಿನಂತಹ ಉಬ್ಬುಗಂಟು ಇತ್ತೆಂದು ಹೇಳಲಾಗುತ್ತದೆ. ಅವರನ್ನು ಜನ ತ್ರಿನೇತ್ರನೆಂದು ಭಾವಿಸಿದ್ದರು. ಅದಕ್ಕಾಗಿ ಶಂಕರ ದಾಸಿಮಯ್ಯನವರು ಕಟ್ಟಿಗೆಯಲ್ಲಿ ಮಾಡಿದ ನಂದಿಯ ಮುಖವಾಡವನ್ನು ಧರಿಸುತ್ತಿದ್ದರು. ಅದಕ್ಕಾಗಿ ಅವರನ್ನು “ಮೊಗವಾಡದಯ್ಯ” ಎಂದೂ ಕರೆಯುತ್ತಿದ್ದರು.

“ನಿಜಗುಣ ಶಂಕರದೇವ” ವಚನಾಂಕಿತದಿಂದ ಬರೆದಿರುವ 5 ವಚನಗಳು ಇಲ್ಲಿಯವರೆಗೂ ಲಭ್ಯವಾಗಿವೆ. ಒಂದು ವಚನದಲ್ಲಿ ಬಸವಣ್ಣ, ಚನ್ನಬಸವಣ್ಣ, ಮರಳ ಶಂಕರದೇವ ಮತ್ತು ಅಲ್ಲಪ್ರಭುದೇವರನ್ನು ಉಲ್ಲೇಖಿಸಿದ್ದಾನೆ. ಇವರ ವಚನಗಳು ಅನುಭಾವದ ನುಡಿಗಳು ಬಿಂಬಿತವಾಗಿವೆ.

ಎನ್ನ ಕಾಯಕ್ಕೆ | ಗುರುವಾದನಯ್ಯಾ ಬಸವಣ್ಣನು ||
ಎನ್ನ ಜೀವಕ್ಕೆ | ಲಿಂಗವಾದನಯ್ಯಾ ಚೆನ್ನಬಸವಣ್ಣನು ||
ಎನ್ನ ಪ್ರಾಣಕ್ಕೆ | ಪ್ರಸಾದವಾದನಯ್ಯಾ ಮರುಳಶಂಕರದೇವರು ||
ಎನ್ನ ಜ್ಞಾನಕ್ಕೆ | ಜಂಗಮವಾದನಯ್ಯಾ ಪ್ರಭುದೇವರು ||
ಇಂತಿವರ ಕರುಣದಿಂದ | ಲಾನು ಬದುಕಿದೆನಯ್ಯಾ ||
ನಿಜಗುರು | ಶಂಕರದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1632 / ವಚನ ಸಂಖ್ಯೆ-128)

ಎರಳೆ ಯತಿಯಂತೆ | ಕಾಕ ಪಿಕದಂತಿರಬೇಡವೆ ? ||
ತಿಟ್ಟನೆ ತಿರುಗಿ ತೊಟ್ಟನೆ ತೊಳಲಿ | ಬಳಲುವರ ಕಳ ಹೇಸಿಕೆಯ ನೋಡಾ ||
ಇರುಳು ಹಗಲೆನ್ನದೆ | ತಿರುಗುವವರ ಕಂಡು ಹೇಸಿದೆ ||
ಅರಿದಡೆ ಶರಣ | ಮರೆದಡೆ ಮಾನವ ||
ಸತ್ತ ಕಸನ ಹೊತ್ತುಕೊಂಡು | ಊರೂರಿಗೆ ಮಾರುವ ||
ಕಾಶಾಂಬರಧಾರಿಗಳನೊಲ್ಲ | ನಿಜಗುರು ಶಂಕರದೇವ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1632 / ವಚನ ಸಂಖ್ಯೆ-129)

ಹರನ ನಿರೂಪದಿಂದ ಧರೆಗೆ | ಬಸವಣ್ಣನವತರಿಸಿದ ಕಾರಣ ||
ಶಿವಾಚಾರ ಸದಾಚಾರವೆಂಬುದು | ಧರೆಗೆ ವಿಖ್ಯಾತವಾಯಿತ್ತು ||
ಶಿವಗಣ ಪ್ರಮಥಗಣಂಗಳೆಂಬ | ಮಹಾಮಹಿಮರ ಸುಳುಹು ||
ಧರೆಯ ಮೇಲೆ | ಕಾಣಬಂದಿತ್ತು ನೋಡಯ್ಯಾ ||
ಪರುಷವ ಸಾಧಿಸಿದಂತಾಯಿತ್ತು | ನಿಮ್ಮ ಶರಣರ ಸಂಗದಿಂದ ||
ಎನ್ನ ನಂದಿಯ ಮೊಗವಾಡ | ನೊಸಲಕಣ್ಣುಂಟೆಂಬ ||
ಅಹಂಕಾರವ | ಮುಂದುಗೊಂಡಿದ್ದೆನಯ್ಯಾ ||
ಎನ್ನ ಮದ ಉಡುಗಿ | ಸಂಗನಬಸವಣ್ಣನ ಕರುಣದಿಂದ ||
ಪ್ರಭುದೇವರೆಂಬ | ನಿರಾಳವ ಕಂಡು ||
ಬದುಕಿದೆನು ಕಾಣಾ | ನಿಜಗುರು ಶಂಕರದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1632 / ವಚನ ಸಂಖ್ಯೆ-132)

ಶಂಕರ ದಾಸಿಮಯ್ಯನವರು ಮುದೇನೂರಿಗೆ ಹೋಗಿ ಜೇಡರ ದಾಸಿಮಯ್ಯನವರ ಅಹಂಕಾರವನ್ನು ಅಳಿಸಿ ಹಾಕಿದ ಪ್ರಸಂಗದ ಉಲ್ಲೇಖ ಈ ಪುರಾಣಗಳಲ್ಲಿ ಬರುತ್ತದೆ. ಜೇಡರ ದಾಸಿಮಯ್ಯನವರು ಬಡವರಿಗೆ ಅನ್ನದಾನ ಮತ್ತು ತಾವೇ ನೇಯ್ದ ಬಟ್ಟಗಳನ್ನು ದಾನ ಮಾಡುತ್ತಿದ್ದೇನೆ ಎನ್ನುವ ಅಹಂಕಾರ ಬಂದಿತ್ತು. ಜೇಡರ ದಾಸಿಮಯ್ಯನವರು ಶಂಕರ ದಾಸಿಮಯ್ಯನವರನ್ನು ಭೇಟಿ ಮಾಡಲು ಧಾನ್ಯ ಮೂಟೆಗಳೊಂದಿಗೆ ಹೋಗುತ್ತಾರೆ. ಅವುಗಳನ್ನೆಲ್ಲ ತಿಪ್ಪೆಗೆ ಹಾಕಿಸಿದ ಶಂಕರ ದಾಸಿಮಯ್ಯನವರು ಒಂದು ಹಿಡಿ ಧಾನ್ಯವನ್ನು ಅವರಿಗೆ ನೀಡಲು ಜೇಡರ ದಾಸಿಮಯ್ಯನವರ ಅಹಂಕಾರ ಅಳಿಯಿತು. ಮುಂದೆ ಶ್ರದ್ಧಾ-ಭಕ್ತಿಗಳಿಂದ ನೇಕಾರಿಕೆಯನ್ನು ಮುಂದುವರೆಸಿದರು.

“ವೀರಶೈವಾಮೃತ ಮಹಾಪುರಾಣ” ದಲ್ಲಿ ಢಕ್ಕೆಯ ಮಾರಯ್ಯ ಅಥವಾ ಢಕ್ಕೆಯ ಬೊಮ್ಮಯ್ಯ ಎನ್ನುವ ಶರಣರು ಶಂಕರ ದಾಸಿಮಯ್ಯನವರ ಅಹಂಕಾರವನ್ನು ಮುರಿದರು ಎಂದು ನಿರೂಪಿತವಾಗಿದೆ. ಮಾರಿದೇವತೆಯನ್ನು ಹೊತ್ತು ತಿರುಗುತ್ತಿದ್ದ ಮಾರಯ್ಯನವರನ್ನು ಕಂಡು ಶಂಕರ ದಾಸಿಮಯ್ಯನವರು ಮಾರಿಯನ್ನು ಹೊತ್ತು ಯಾಕೆ ತಿರುಗುತ್ತಿದ್ದೀರಿ ಎಂದು ಪ್ರಶ್ನೆ ಮಾಡತಾರೆ. ಆಗ ಢಕ್ಕೆಯ ಮಾರಯ್ಯನವರು ನನಗೆ ತಲೆಯ ಮೇಲೆಲ್ಲ ಲಿಂಗವೇ ಕಾಣುತ್ತಿದೆ ನಿಮಗೇಕೆ ಕಾಣುತ್ತಿಲ್ಲವೆಂದು ಉತ್ತರಿಸುತ್ತಾರೆ. ಮಾರಯ್ಯನವರಿಗೆ ಲಿಂಗವಾಗಿ ಕಂಡದ್ದು ಶಂಕರ ದಾಸಿಮಯ್ಯನವರಿಗೆ ಮಾರಿಯಾಗಿ ಕಂಡು ಬಂದಿದೆ. ಆಗ ಏಕದೇವೋಪಾಸಕರಾಗಿದ್ದ ಶಂಕರ ದಾಸಿಮಯ್ಯನವರಿಗೆ ಇಷ್ಟಲಿಂಗ ಬೇರೆಯಲ್ಲ ಮಾರಿಯಮ್ಮ ಬೇರೆಯಲ್ಲ ಎನ್ನುವದು ಮನದಟ್ಟಾಗಿ, ಅಹಂಕಾರ ಅಳಿದು ಢಕ್ಕೆಯ ಮಾರಯ್ಯನವರನ್ನು ಮೆಚ್ಚಿಕೊಳ್ಳುತ್ತಾರೆ.

ಢಕ್ಕೆಯ ಮಾರಯ್ಯ ವೃತಿಯಿಂದ ಜಾನಪದ ಕಲಾವಿದರು. ಬೇವಿನ ಸೊಪ್ಪನ್ನು ಸೊಂಟಕ್ಕೆ ಕಟ್ಟಿಕೊಂಡು ಮಾರಿಯನ್ನು ಮೊರದ ಮೇಲೆ ಇರಿಸಿ ತಲೆಯ ಮೇಲೆ ಹೊತ್ತುಕೊಂಡು ಢಕ್ಕೆಯನ್ನು ಬಾರಿಸುತ್ತ ಮನೆ-ಮನೆಗೆ ಹೋಗಿ ಭಿಕ್ಷೆ ಎತ್ತುವ ಕಾಯಕ ಮಾಡುತ್ತಿದ್ದರು. ಇವರನ್ನು ಉತ್ತರ ಕರ್ನಾಟಕದಲ್ಲಿ ದುರುಗ ಮುರಿಗೆಯವರು ಎಂದು ಇಂದಿಗೂ ಕರೆಯಲಾಗುತ್ತದೆ. ದುರುಗಮ್ಮ-ಮುರುಗೆಮ್ಮ ದೇವತೆಗಳ ಆರಾಧಕರು. ಹೀಗೆ ದೇವಿಯನ್ನು ತಲೆಯ ಮೇಲೆ ಹೊತ್ತುಕೊಂಡು ಒಬ್ಬ ಕುಣಿಯುತ್ತಿದ್ದರೆ ಇನ್ನೊಬ್ಬ ಢಕ್ಕೆಯನ್ನು ಬಾರಿಸುತ್ತಾ ಹೋಗುತ್ತಾರೆ.

ಢಕ್ಕೆಯ ಮಾರಯ್ಯನವರು “ಕಾಲಾಂತಕ ಭೀಮೇಶ್ವರಲಿಂಗ” ಎನ್ನುವ ವಚನಾಂಕಿತದಿಂದ ಬರೆದ ಸುಮಾರು 90 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ.

ಶರಣ ಶಂಕರ ದಾಸಿಮಯ್ಯನವರು ತಮ್ಮ ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸ್ಕಂದಶಿಲೆ (ಕಂದಗಲ್ಲು) ಗ್ರಾಮದಲ್ಲಿಯೇ ಐಕ್ಯರಾಗಿದ್ದಾರೆಂದು ತಿಳಿದು ಬರುತ್ತದೆ. ಅನಂತ ಶ್ರಾವಣ ಮಾಸದ ಶುದ್ಧ ಚತುರ್ಥಿಯಂದು ಸ್ಮರಣೋತ್ಸವವನ್ನು ಆಚರಿಸಲಾಗುತ್ತದೆ. ಈಗಲೂ ಶಿವಶಿಂಪಿ ಲಿಂಗಾಯತ ಸಮಾಜದವರು ಕಂದಗಲ್ಲು ಗ್ರಾಮಕ್ಕೆ ಭೇಟಿ ನೀಡಿ ಶಂಕರ ದಾಸಿಮಯ್ಯನವರ ಸ್ಮರಣೆ ಮಾಡುತ್ತಾರೆ.

ಶರಣರು ಲಿಂಗಾಯತರ ಜೀವೋನ್ಮುಖ ತತ್ವಗಳಾದ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಗುರು-ಲಿಂಗ-ಜಂಗಮ ಸೇವೆಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ನುಡಿದಂತೆ ನಡೆದವರು. ಇಂಥ ಮಾನವೀಯ ಮೌಲ್ಯಗಳನ್ನು ಅವರು ಕೋಣೆಗಳ ನಡುವೆ ಕುಳಿತುಕೊಂಡು ಕಲಿತದ್ದಲ್ಲ. ಬೆಳ್ಳಿ ಬಂಗಾರದ ಕೀರೀಟವನ್ನಿಟ್ಟುಕೊಂಡು ಅಡ್ಡ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೋಗಿ ಜಪಿಸಿದ ಮಂತ್ರದಿಂದಲ್ಲ. ಕಾಯಕ ಯೋಗಿಗಳಾಗಿ ದಾಸೋಹಿಗಳಾಗಿ ಗಳಿಸಿದ ಅನುಭಾವ ಅಂತ ಹೇಳತಾ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ.

ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಸ್ಕೂಲ್‌ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್‌ ನಂ : 97413 57132
ಈ-ಮೇಲ್‌ : vijikammar@gmail.com

Loading

Leave a Reply