ಆಯ್ದಕ್ಕಿ ಮಾರಯ್ಯನವರ ವಚನ –ನಿರ್ವಚನ | ಶ್ರೀಮತಿ. ಅರ್ಚನಾ ಮುತ್ತಗಿ, ಕಲಬುರಗಿ.

ಹಾಗದ ಕಾಯಕವ ಮಾಡಿ, ಹಣವಡ್ಡವ ತಾ ಎಂಬಲ್ಲಿ
ಸತ್ಯದ ಕಾಯಕ ಉಂಟೆ?
ಭಕ್ತರಲ್ಲಿ ಕಾಯಕಕ್ಕೆ ಕಡಿಮೆಯಾಗಿ ತಾ ಎಂಬುದು
ಅಮರೇಶ್ವರಲಿಂಗಕ್ಕೆ ಚಿತ್ತಶುದ್ಧದ ಕಾಯಕ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-442/ವಚನ ಸಂಖ್ಯೆ-1190)

ಕಾಯಕ ತತ್ವಕ್ಕೆ ಹೆಸರು ವಾಸಿಯಾಗಿರುವ ಆಯ್ದಕ್ಕಿ ಮಾರಯ್ಯ ಶರಣರು 12 ನೆಯ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. “ಅಮರೇಶ್ವರಲಿಂಗವಾಡೂ ಕಾಯಕದೊಳು” ಎಂದು ದೇವರಿಗೂ ಕಾಯಕ ತತ್ವದ ಮಹತ್ವವನ್ನು ತಿಳಿಸಿದ ಶರಣ ದಂಪತಿಗಳು ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯನವರು. ಇಡೀ ಜಗತ್ತಿಗೆ “ಕಾಯಕವೇ ಕೈಲಾಸ” ವೆಂಬ ಅದ್ವಿತೀಯ ತತ್ವವನ್ನು ತಿಳಿಸಿದ ಮೊದಲಿಗರು ಶರಣೆ ಆಯ್ದಕ್ಕಿ ಲಕ್ಕಮ್ಮನವರು.

ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ “ಯರಡೋಣಿ” ಎಂಬ ಗ್ರಾಮದಲ್ಲಿ ಬಸವಣ್ಣನವರ ಸಮಕಾಲೀನರಾದ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳಿದ್ದರು. ಅನನ್ಯ ಶಿವಭಕ್ತರಾಗಿದ್ದ ದಂಪತಿಗಳು ಯರಡೋಣಿ ಗ್ರಾಮಕ್ಕೆ ಸಮೀಪವಿದ್ದ ಗುಡಗುಂಟಿ ಗ್ರಾಮಲ್ಲಿದ್ದ “ಗುಡುಗುಂಟಿ ಅಮರೇಶ್ವರ” ನ ಸೇವೆಯಲ್ಲಿ ನಿರತರಾಗಿದ್ದರು. ಬಸವಣ್ಣನವರ ದಾಸೋಹ ಮತ್ತು ಕಾಯಕ ಸೇವೆಯನ್ನು ಅರಿತ ಮಾರಯ್ಯ ದಂಪತಿಗಳು ಅವರನ್ನು ಕಾಣುವ ಹಂಬಲದಿಂದ ಕಲ್ಯಾಣಕ್ಕೆ ಬಂದು, ಅಲ್ಲಿನ ಮಹಾಮನೆಯಲ್ಲಿ ಶರಣರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

“ಆಯ” ಅಂದರೆ ಕೂಲಿ ಮಾಡಿ ಬಂದ ಆದಾಯ. ಆಗಿನ ಕಾಲಘಟ್ಟದಲ್ಲಿ ಕೂಲಿಯನ್ನು ಬೇಳೆ-ಕಾಳು ಮತ್ತು ಅಕ್ಕಿಯ ರೂಪದಲ್ಲಿ ಕೊಡುತ್ತಿದ್ದರು. ಹಾಗಾಗಿ ಆಯದಿಂದ ಬಂದ ಅಕ್ಕಿಯಿಂದ ದಾಸೋಹ ನಡೆಸುತ್ತಿದ್ದ ದಂಪತಿಗೆ “ಆಯ್ದಕ್ಕಿ” ಎಂಬುದು ಅನ್ವರ್ಥಕ ನಾಮವಾಯಿತು. ಶರಣರೆಲ್ಲರೂ ಅವರನ್ನು ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ಎಂದೇ ಗುರುತಿಸುತ್ತಿದ್ದರು.

ಆಯ್ದಕ್ಕಿ ಲಕ್ಕಮ್ಮನವರು ಕಲ್ಯಾಣದ ಮಹಾಮನೆಯಲ್ಲಿ ಬೇಳೆಕಾಳುಗಳನ್ನು ಹಸನು ಮಾಡುವ ಕಾಯಕವನ್ನು ಮಾಡುತ್ತಿದ್ದರು. ಅವರು “ಮಾರಯ್ಯಪ್ರಿಯ ಅಮರೇಶ್ವರಲಿಂಗ” ವಚನಾಂಕಿತದಿಂದ ಬರೆದ 25 ವಚನಗಳು ಇದುವರೆಗೂ ಲಭ್ಯವಾಗಿವೆ.

ಆಯ್ದಕ್ಕಿ ಮಾರಯ್ಯನವರು ಶ್ರದ್ಧೆ ಮತ್ತು ನಿಷ್ಠೆಯಿಂದ ಮಹಾಮನೆಗೆ ಬರುವ ಬೇಳೆ-ಕಾಳು, ಬೆಲ್ಲ ಹಾಗೂ ಇತರೆ ಆಹಾರ ಮೂಟೆಗಳನ್ನು ಹೊತ್ತು ತಂದು ಉಗ್ರಾಣದಲ್ಲಿ ಇರಿಸುವ ಕೆಲಸ ಮಾಡುತ್ತಿದ್ದರು. ನಿಜ ಅರ್ಥದಲ್ಲಿ ಕಾಯಕದ ಮಹತ್ವವನ್ನು ತಿಳಿಸಿದವರಲ್ಲಿ ಮಾರಯ್ಯನವರು ಮೊದಲಿಗರು. “ಅಮರೇಶ್ವರಲಿಂಗ” ಎನ್ನುವ ವಚನಾಂಕಿತದಿಂದ ಬರೆದ 32 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ.

ಆಯ್ದಕ್ಕಿ ಲಕ್ಕಮ್ಮನವರ 25 ವಚನಗಳು ಮತ್ತು ಆಯ್ದಕ್ಕಿ ಮಾರಯ್ಯನವರ 32 ವಚನಗಳು ಸಂಖ್ಯೆಯಲ್ಲಿ ಕಡಿಮೆ ಎನಿಸಿದರೂ ಕಾಯಕ ತತ್ವ ಸಿದ್ಧಾಂತಗಳನ್ನು ಮೌಲಿಕವಾಗಿ ಬೆಳಕಿಗೆ ತರುವುದರ ಮೂಲಕ ಅರ್ಥಪೂರ್ಣವಾಗಿವೆ. ಅವುಗಳಲ್ಲಿ ಕಾಯಕ ತತ್ವನಿಷ್ಠೆ, ಸಮಯ ಪ್ರಜ್ಞೆಯಂತಹ ದಿಟ್ಟ ಗುಣಗಳನ್ನು ಕಾಣಬಹುದು. ಕಲ್ಯಾಣ ಕ್ರಾಂತಿಯ ಆಶಯಗಳನ್ನು ಹೊತ್ತ ನೈಜ ವಿಚಾರಗಳು ಇಲ್ಲಿವೆ. ಅದಕ್ಕಾಗಿಯೇ ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮನವರನ್ನು “ಕಾಯಕ ನಿಷ್ಠೆಯ ರಾಯಭಾರಿಗಳು” ಅಂದರೆ “Ambassadors of Work Ethics” ಅಂತಾನೂ ಹೇಳಬಹುದು.

ನಿರ್ವಚನ:
ಅಂದು ಬಸವಾದಿ ಪ್ರಮಥರು ಕೇವಲ ಗುರು, ಲಿಂಗ, ಜಂಗಮ ಪೂಜಿಸುವ ಕಾರ್ಯದಲ್ಲಿ ಮಾತ್ರ ಮೈಮರೆಯಲಿಲ್ಲ. ಕಾಯಕದೊಳಗೆ ಮೈಮರೆತವರು. ಅಂತೆಯೇ ಮಾರಯ್ಯ ಶರಣರು “ಕಾಯಕವೇ ಕೈಲಾಸ” ಎನ್ನುತ್ತಾರೆ. ಆ ಕಾಯಕ ಭಕ್ತಿಗೆ ಪರಶಿವನು ಅವರಿಗೆ ಶರಣಾಗತನಾದ, ಹೊರತು ಅವರೇನು ತಪಸ್ಸು ಮಾಡಲಿಲ್ಲ, ಸಂಸಾರ ಬಿಟ್ಟು ಓಡಿ ಹೋಗಲಿಲ್ಲ, ದೊಡ್ಡ ದೊಡ್ಡ ಪೂಜೆ ಮಾಡಲಿಲ್ಲ. ನಿಸ್ವಾರ್ಥದಿಂದ ಕಾಯಕಗೈದರು. ಕಾಯಕದ ಪ್ರತಿಫಲನದಿಂದ ದಾಸೋಹ ಮಾಡಿದರು.

ಆದ್ದರಿಂದ ಕಾಯಕ ಮತ್ತು ದಾಸೋಹ ಪರಿಭಾಷೆಯಲ್ಲಿ ಶರಣರು ಕೊಟ್ಟ ಅರ್ಥ ವಿಶೇಷವಾಗಿದೆ. ಕಾಯಕವು ಕಡ್ಡಾಯವಾಗಿದ್ದು ದೈವಿರೂಪ ಹೊಂದಿದ್ದು ಸಮಾನತೆಯ ತತ್ವ ಒಳಗೊಂಡು ಅಧಿಕಫಲ ಅಪೇಕ್ಷಿಸುವಂತಿರಲಿಲ್ಲ. ನೈತಿಕ ಪ್ರಜ್ಞೆಯಿಂದ ದಾಸೋಹ ಮಾಡುವುದು ಕಡ್ಡಾಯವಾಗಿತ್ತು. ಕಾಯಕವಿಲ್ಲದ ದಾಸೋಹ ಅಹಂಕಾಭಕ್ತಿಯಾದರೆ, ದಾಸೋಹವಿಲ್ಲದ ಕಾಯಕ ಜಿಪುಣ ಭಕ್ತಿಯಾಗುತ್ತದೆ ಎನ್ನುತ್ತಾರೆ. ಶರಣರ ಕಾಯಕ ತತ್ವವು ಅವರಿಗೆ ನಿಜವಾದ ಧರ್ಮವಾಗಿದೆ. ಅದು ಅವರಿಗೆ ನಿಜವಾದ ನಿರ್ಮಲವಾದ ನಿಸ್ವಾರ್ಥದ ವ್ರತವಾಯಿತು.

ಐದು ಸಾಲಿನ ಮಾರಯ್ಯ ಶರಣರ ಮೇಲಿನ ವಚನ ಕಾಯಕದ ವ್ಯಾಖ್ಯೆ ನೀಡುವದರೊಂದಿಗೆ ಅವರ ಆಧ್ಯಾತ್ಮಿಕ ಉನ್ನತಿಗೆ ತ್ತು ಸಾಮಾಜಿಕ ಸಾಮರಸ್ಯತೆಗೆ ಅದು ಹೇಗೆ ಕಾರಣವಾಯಿತೆಂಬುದು ವಿವರಿಸುವುದು. ಕಾಯಕವೆಂದರೆ ತಾ ಎಂಬುದು ಬಿಟ್ಟು ಬಿಡುವದು. ಇಲ್ಲಿ ತಾ ಎಂದರೆ ಇನ್ನೊಬ್ಬರ ಮುಂದೆ ಕೈಯೊಡ್ಡಿ, ಹೆಚ್ಚು ಹಣ ಗಳಿಸುವುದೇ ಆಗಿದೆ. ಶರಣ ಧರ್ಮದಲ್ಲಿ ಕೈಚಾಚುವುದಕ್ಕೆ ಆಸ್ಪದವೇ ಇಲ್ಲಾ. ಅಲ್ಲದೇ ಕಾಯಕವೆಂದರೆ ಕೆಲಸ. ನೌಕರಿ ಯಾವುದು ಅಲ್ಲ. ಅದು ಸಂಪಾದನೆಯ ಉದ್ಯೋಗವಲ್ಲ. ಮೊದಲನೆಯ ಸಾಲಿನಲ್ಲಿ ಹಾಗದ ಹಣ (ಹಣದ ಒಂದು ಪ್ರಮಾಣ) ಹಣವಡ್ಡ ಎಂದರೆ ಹಾಗದ ಎರಡು ಪಟ್ಟು. ಒಂದಾಣೆಯ ಶ್ರಮಗೈದು ಎರಡಾಣೆಯ ಲಾಭ ಬಯಸುವುದು ಕಾಯಕವಲ್ಲವೆಂದು ಮಾರಯ್ಯ ಶರಣರು ಹೇಳುತ್ತಾರೆ. ಅಲ್ಲದೇ ಅದು ಸತ್ಯ ಶುದ್ಧ ಕಾಯಕ ಅಲ್ಲ ಎನ್ನುತ್ತಾರೆ.

ಏಕೆಂದರೆ ಶರಣರದು ಸತ್ಯ ಶುದ್ಧ ಕಾಯಕವಾಗಿರುತ್ತದೆ. ಹಾಗದ ಕೆಲಸ ಮಾಡುವವರು ಮಾತ್ರ ತಾ ಎನ್ನುವರೆ ಹೊರತು ಅದು ಸತ್ಯದ ಕಾಯಕ ಆಗುವದಿಲ್ಲ. ಅಲ್ಪ ಅವಧಿಯೊಳು ಹೇಗಾದರು ಮಾಡಿ ಹೆಚ್ಚು ಹಣ ಗಳಿಸಬಹುದು. ಆದರೆ ಅದು ಕಾಯಕವಲ್ಲ, ಅಂತಹ ಹಣದಿಂದ ದಾಸೋಹ ಮಾಡಿದರೆ ಅದು ದಾಸೋಹ ಎನಿಸಿಕೊಳ್ಳುವದಿಲ್ಲ. ಚಿತ್ತಶುದ್ಧದಿಂದ ಕಾಯಕ ಮಾಡಬೇಕೆನ್ನುತ್ತಾರೆ ಮಾರಯ್ಯ ಶರಣರು.

ಚಿತ್ತಶುದ್ಧದಿಂದ ಎಂದರೆ ಮನಸ್ಸನ್ನು ಚಂಚಲ ಮಾಡಿಕೊಳ್ಳಬಾರದು, ದುಡ್ಡಿನ ಗುಣ ಮಾನವನ ಮನಸ್ಸು ಕೆಡಿಸುವದು, ಅಲ್ಲಸಲ್ಲದ ಕೆಲಸ ಮಾಡಿಸುವದು, ಅರಿಷಡ್ವರ್ಗಗಳನ್ನು ಆಹ್ವಾನಿಸುವದೇ ಆಗಿದೆ. ಆದ್ದರಿಂದ ಶರಣರು ಚಿತ್ತಶುದ್ಧದಿಂದ ಕಾಯಕ ಮಾಡಿದೆಯಾದರೆ ಇವು ಯಾವುದಕ್ಕೂ ಆಸ್ಪದವಿರುವದಿಲ್ಲ. ಜೊತೆಗೆ ನಾನು ನನಗಾಗಿ ನನ್ನ ಕುಟುಂಬಕ್ಕಾಗಿ ಎಂಬ ಭೇದವಿರದೆ ಈ ಕಾಯಕ ದಾಸೋಹಕ್ಕಾಗಿ ಎಂಬ ವಿಶಾಲ ಮನೋಭಾವದಿಂದ ಕೂಡಿರುವದೆ ಆಗಿರುತ್ತದೆ. ಮುಂದುವರಿದು ತಮ್ಮ ಆರಾಧ್ಯ ದೈವ ಅಮರೇಶ್ವರಲಿಂಗ ಒಲಿಯಬೇಕಾದರೆ ಚಿತ್ತಶುದ್ಧದ ಕಾಯಕದಿಂದ ಮಾತ್ರ ಸಾಧ್ಯ ಎನ್ನುವರು.

ಶ್ರೀಮತಿ. ಅರ್ಚನಾ ಮುತ್ತಗಿ,
ಶರಣ ತತ್ವ ಚಿಂತಕರು,
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್.‌ ಸಂ. 96203 61067

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply