
ಪ್ರಸಕ್ತ ಸಮಾಜದಲ್ಲಿ ನಮ್ಮ ಬದುಕು ಸಂಕೀರ್ಣ ಮತ್ತು ಸಂಕಷ್ಟಮಯವಾಗುತ್ತಿದೆ. ಭೋಗ ಭಾಗ್ಯಗಳ “ಕಂಸ್ಯೂಮರ್” ಜಗತ್ತಿನಲ್ಲಿ ʼಹಣ-ವಸ್ತು-ರಂಜನೆʼಯಿಂದಲೆ ಸುಖ-ಸಂತೋಷವೆಂಬ ಸೂತ್ರ ನಮ್ಮನ್ನು ಬಂಧಿಸಿದೆ. Marks-Materials-Money ಈ ಮೂರೂ ʼಎಂʼಗಳೂ ಬಾಲ್ಯದಿಂದ ಮುಪ್ಪಿನವರೆಗೆ ನಮ್ಮನ್ನು ಕಾಡುತ್ತಿವೆ. ಶಾಲಾ-ಕಾಲೇಜು ವಿದ್ಯಾಭ್ಯಾಸದಲ್ಲಿ Marks (ಅಂಕಗಳು) ನಂತರ ಹಣ ಸಂಪಾದನೆ-ಬೇರೆಯವರಿಗಿಂತ ಹೆಚ್ಚಾಗಿ ನಮಗೇ ಸಿಗಬೇಕು. ಹಾಗೆಯೇ ಐಷಾರಾಮಿ ವಸ್ತುಗಳು (Materials) ಎಷ್ಟಿದ್ದರೂ ಸಾಲದು. ಮನೆಯೊಳಗಿನ ಸ್ನೇಹ ಸಂಬಂಧಗಳು ಮನೆಯ ಹೊರಗಿನ ಸ್ನೇಹ ಸಂಬಂಧಗಳು ಶಿಥಿಲವಾಗುತ್ತಿವೆ. ಯಾರಿಗೆ ಯಾರೋ ಎರವಿನ ಸಂಸಾರ. ನಾನು ಕಂಡ ಹಲವಾರು ಕುಟುಂಬಗಳಲ್ಲಿ ಗಂಡನಿಗೆ ಹೆಂಡತಿಯ ಆಸರೆ ಇಲ್ಲ. ಹೆಂಡತಿಗೆ ಗಂಡನ ಆಸರೆ ಇಲ್ಲ. ತಂದೆ ತಾಯಿಗಳಿಗೆ ಮಕ್ಕಳ ಆಸರೆ ಇಲ್ಲ. ವ್ಯಕ್ತಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ʼನಾನು ಕ್ಷೇಮʼ ಎಂಬುದಕ್ಕೆ ಮಾತ್ರ ಸೀಮಿತವಾಗಿದೆ. ʼನೀವು ಕ್ಷೇಮವೇʼ ಎಂದು ಕೇಳುವವರಿಲ್ಲದಂತಾಗಿದೆ. ಇಷ್ಟ ಬಂದಾಗ ಇತಿ ಮಿತಿಯಿಲ್ಲದ ಆಹಾರ ಸೇವನೆ. ಯಾವಾಗಲೋ ನಿದ್ರೆ, ಖುಷಿಗಾಗಿ ಯಾರೊಂದಿಗಾದರೂ ಮೈಥುನ, ನೀತಿ ನಿಯಮಗಳ ಉಲ್ಲಂಘನೆ. ಸದಾ ಅತೃಪ್ತಿ, ಅಸಮಾಧಾನ, ಆತಂಕ, ಬೇಸರ, ಸಿಟ್ಟು, ಮತ್ಸರ, ಚಿಂತೆ-ವ್ಯಥೆ, ಒತ್ತಡಗಳು ನಮ್ಮ ಮೈಮನಸ್ಸುಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ತತ್ಫಲವಾಗಿ ಶೇಕಡಾ 75 ರಷ್ಟು ಜನ ಒಂದಲ್ಲಾ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡವೋ, ಸಿಹಿಮೂತ್ರ ರೋಗವೋ, ಥೈರಾಯಿಡ್ ಸಮಸ್ಯೆಯೋ, ಖಿನ್ನತೆಯ ಆತಂಕವೋ, ಅಸಿಡಿಟಿ ಅಲ್ಸರೋ, ತಲೆನೋವೋ ಇರದ ವ್ಯಕ್ತಿಗಳು ಅಪರೂಪವಾಗುತ್ತಿದ್ದಾರೆ. ಅಲೋಪತಿ, ಆಯುರ್ವೇದ, ಹೋಮಿಯೋಪತಿ ಔಷಧಿಗಳನ್ನು ನುಂಗುತ್ತಿರುತ್ತಾರೆ. ಕಸರತ್ತು ಮಾಡುತ್ತಾರೆ. ವಾಕಿಂಗ್ ಜಾಗಿಂಗ್ ಮಾಡುತ್ತಾರೆ. ಯೋಗ-ಪ್ರಾಣಾಯಾಮ ಮಾಡುತ್ತಾರೆ. ದೇವಸ್ಥಾನ, ಮಸೀದಿ, ದರ್ಗಾ-ಚರ್ಚುಗಳಿಗೆ ಹೋಗಿ ಆರೋಗ್ಯಕ್ಕೆ ಪ್ರಾರ್ಥನೆ ಪೂಜೆ ಸಲ್ಲಿಸುತ್ತಾರೆ. ಆದರೂ ಆರೋಗ್ಯಭಾಗ್ಯ ಬಹು ಜನರಿಗೆ ಒಂದು ಮರೀಚಿಕೆಯಾಗಿಯೇ ಉಳಿದಿದೆ.
12 ನೇ ಶತಮಾನದ ವಚನಕಾರರು ಈ ಎಲ್ಲ ದ್ವಂದ್ವಗಳಿಗೆ ಮನಸ್ಸಿನ ನೋವು ನಿರಾಶೆ, ಹತಾಶೆಗಳಿಗೆ, ಸರಳ ಕನ್ನಡದಲ್ಲಿ ಪಾಮರರಿಗೂ ಅರ್ಥವಾಗುವ ಹಾಗೆ, ಮನಮುಟ್ಟುವ ಹಾಗೆ ತಿಳಿಯ ಹೇಳಿದ್ದಾರೆ. ನಮ್ಮ ಆಸೆ-ಆಕಾಂಕ್ಷೆಗಳು ನಿಲುವು ಧೋರಣೆಗಳು ಹೇಗಿರಬೇಕು? ದುಃಖವನ್ನು ಹೇಗೆ ಭರಿಸಬೇಕು? ಕೋಪವನ್ನು ಹೇಗೆ ನಿಗ್ರಹಿಸಬೇಕು? ಭಯವನ್ನು ಹೇಗೆ ತಪ್ಪಿಸಬೇಕು? ಎಂಬುದನ್ನು ವಿವರಿಸಿದ್ದಾರೆ.
ಬದುಕಲು ಹಣ ಬೇಕು ನಿಜ ಆದರೆ ಹಣ ಸಂಪಾದನೆಗೆ ಅಕ್ರಮ ಮಾರ್ಗಗಳನ್ನು ಅನುಸರಿಸಿದರೆ, ಇತರರ ಹೊಟ್ಟೆಯ ಮೇಲೆ ಹೊಡೆದರೆ ಹೇಗೆ?
ಒಡವೆ ಭಂಡಾರ ಕಡವರ ದ್ರವ್ಯದ ಬಡ್ಡಿಯ ವ್ಯವಹಾರಕ್ಕೆ ಕೊಟ್ಟು
ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ
ಅದು ಎನ್ನರ್ಥವಲ್ಲ, ಅನರ್ಥನೆಂಬೆ.
ಸಂಗಮದೇವಾ, ನೀ ಜಂಗಮರೂಪಾಗಿ ಬಂದು
ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ,
ನಾ ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ – ಬಸವಣ್ಣ
ಎಂದಿದ್ದಾರೆ ಬಸವಣ್ಣನವರು.
ಹೆಚ್ಚು ಹಣ/ಆಸ್ತಿ ಮನುಷ್ಯನಿಗೆ ಮದ-ಅಹಂಕಾರವನ್ನು ತರುತ್ತವೆ. ಅವನಲ್ಲಿ ಮಾನವೀಯ ಗುಣಗಳು ಮರೆಯಾಗುತ್ತವೆ. ಬಡವರನ್ನು ದುರ್ಬಲರನ್ನು ನಿಕೃಷ್ಟವಾಗಿ ಕಾಣುತ್ತಾನೆ. ಪರಪೀಡನೆ ಮಾಡುತ್ತಾನೆ. ಅಂಥವರನ್ನೂ ಕೂಡ ಬಸವಣ್ನ
ಹಾವು ತಿಂದವರ ನುಡಿಸಬಹುದು ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ
ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರಯ್ಯಾ, ಕೂಡಲಸಂಗಮದೇವಾ – ಬಸವಣ್ಣ.
ಎಂದಿದ್ದಾರೆ.
ಹಣ-ಹೆಣ್ಣು-ಮಣ್ಣು ಈ ಮೂರು ಮನುಷ್ಯನ ಮನಸ್ಸನ್ನು ಕೆಡಿಸುತ್ತವೆ. ಅವನ ಕೈಯಲ್ಲಿ ಅನಾಚಾರವನ್ನು ಮಾಡಿಸುತ್ತಾನೆ. ಆದ್ದರಿಂದ
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ
ಛಲಬೇಕು ಶರಣಂಗೆ ಲಿಂಗಜಂಗಮನೊಂದೆಂಬ
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ಕೂಡಲ ಸಂಗಮದೇವ – ಬಸವಣ್ಣ.
ಎಂದು ಹೇಳಿ ಎಚ್ಚರಿಸಿದ್ದಾರೆ.
ಇದೇ ಮಾತನ್ನು ಬಳ್ಳೇಶ ಮಲ್ಲಯ್ಯನೆಂಬ ವಚನಕಾರ ಹೀಗೆ ಹೇಳಿದ್ದಾನೆ.
ಆವ ಪ್ರಾಣಿಗೂ ನೋವ ಮಾಡಬೇಡ
ಪರನಾರಿಯರ ಸಂಗ ಬೇಡ
ಪರಧನಕ್ಕಳುಪಬೇಡ ಪರದೈವಕ್ಕೆರಗಬೇಡ
ಈ ಚತುರ್ವಿಧ ತವಕವ ಮಾಡುವಾಗ
ಪರರು ಕಂಡಾರು, ಕಾಣರು ಎಂದೆನಬೇಡ
ಬಳ್ಳೇಶ್ವರಲಿಂಗಕ್ಕಾರು ಮರೆಮಾಡಬಾರದಾಗಿ
ಅಘೋರ ನರಕದಲ್ಲಿಕ್ಕುವ – ಬಳ್ಳೇಶ ಮಲ್ಲಯ್ಯ.
ಭಯ-ಅಂಜಿಕೆ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುತ್ತದೆ. ಅಪಾಯವಿದೆ ಎನ್ನುವ ಆಲೋಚನೆಯೇ ಭಯವನ್ನುಂಟು ಮಾಡುತ್ತದೆ. ನಿಜವಾದ ಅಪಾಯ ಎದುರಾದರಂತೂ ಭಯ ಮೇರೆ ಮೀರುತ್ತದೆ. ಭಯದಿಂದ ವ್ಯಕ್ತಿ ದುರ್ಬಲನಂತೆ ಓಡಿಹೋಗುತ್ತಾನೆ. ಅದನ್ನು ಕಂಡು ಶರಣೆ ಅಕ್ಕಮಹಾದೇವಿ ನಮಗೆ ಯಾವ ರೀತಿ ಸಾಂತ್ವ ಹೇಳುತ್ತಾಳೆ ಕೇಳಿ.
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಯಂತಯ್ಯಾ?
ಸಮುದ್ರದಾ ತಡಿಯಲೊಂದು ಮನೆ ಮಾಡಿ
ನೆರೆತೊರೆಗಳಿಗಂಜಿದಡೆಯಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು
ಬಂದಡೆ ಮನದಲ್ಲಿ ಕೋಪವ ತಾಳದೆ
ಸಮಾಧಾನಿಯಾಗಿರಬೇಕು – ಅಕ್ಕಮಹಾದೇವಿ
ಹಸಿವಾದೊಡೆ ಊರೊಳಗೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆಹಳ್ಳ ಭಾವಿಗಳುಂಟು
ಅಂಗ ಶೀತಕ್ಕೆ ಬೀಸಾಟ ಅರಿವೆಗಳುಂಟು
ಶಯನಕ್ಕೆ ಹಾಳು ದೇಗುಲಗಳುಂಟು
ಚನ್ನಮಲ್ಲಿಕಾರ್ಜುನಯ್ಯ
ಆತ್ಮ ಸಂಗಾತಕ್ಕೆ ನೀನೆಗುಂಟು – ಅಕ್ಕಮಹಾದೇವಿ
ಕೋಪವೆಂಬುದು ಬೆಂಕಿ-ಕಾಡ್ಗಿಚ್ಚು. ಕೋಪಿಸಿಕೊಂಡವನನ್ನೇ ಅದು ಮೊದಲು ಸುಡುತ್ತದೆ ಎನ್ನುತ್ತಾರೆ ಬಸವಣ್ಣ
ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯ
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು
ಮನದ ಕೋಪ ತನ್ನ ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ – ಬಸವಣ್ಣ
ಆರು ಮುನಿದು ನಮ್ಮನೇನ ಮಾಡುವರು?
ಊರು ಮುನಿದು ನಮ್ಮನೆಂತು ಮಾಡುವರು?
ನಮ್ಮ ಕುನ್ನಿಗೆ ಕೂಸ ಕೊಡಬೇಡ
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ
ನಮಗೆ ನಮ್ಮ ಕೂಡಲಸಂಗನುಳ್ಳಕ್ಕ? – ಬಸವಣ್ಣ
ಎಂದಿದ್ದಾರೆ.
ಸಾವು ಕಂಡರೆ ಎಲ್ಲರಿಗೂ ಭಯ. ಅದು ಯಾವಾಗ ಹೇಗೆ ಬರುವಿದೋ ಎಂಬ ಹೆದರಿಕೆ. ಇನ್ನು ಆತ್ಮೀಯರು ಸತ್ತರೆ, ದುಃಖವನ್ನು ಸಹಿಸಲಾಗದು. ಸಾವು ದೀರ್ಘಕಾಲದ ನೋವನ್ನುಂಟು ಮಾಡುತ್ತದೆ. ವಚನಕಾರರು ಶರಣರಿಗೆ ಮರಣವೇ ಮಹಾನವಮಿ ಎಂದರು. ಸಾವು ಬಂದಾಗ ಒಪ್ಪಿಕೊಳ್ಳಿ ಎಂದರು.
ಆಯುಷ್ಯ ತೀರಿದಲ್ಲದೆ ಮರಣವಿಲ್ಲ
ಭಾಷೆ ತಪ್ಪಿದಲ್ಲದೆ ದಾರಿದ್ರ್ಯವಿಲ್ಲ
ಅಂಜಲದೇತಕೋ, ಲೋಕವಿಗುರ್ಬಣೆಗೆ?
ಅಂಜಲದೇಕೋ ಕೂಡಲಸಂಗಮದೇವಾ ನಿಮ್ಮಾಳಾಗಿ – ಬಸವಣ್ಣ
ಅಂಜಿದಡೆ ಮಾಣದು ಅಳುಕಿದಡೆ ಮಾಣದು
ವಜ್ರಪಂಜರದಳಗಿದ್ದಡೆಮಾಣದು ತಪ್ಪದುವೋ ಲಲಾಟಲಿಖಿತ
ಕಕ್ಕುಲತೆ ಬಂದಡೆ ಆಗದು ನೋಡಾ
ಧೃತಿಗೆಟ್ಟು, ಮನ ಧಾತುಗೆಟ್ಟಡೆ
ಅಪ್ಪುದು ತಪ್ಪದು ಕೂಡಲಸಂಗಮದೇವಾ – ಬಸವಣ್ಣ
ನಾಳೆ ಬಪ್ಪುದು ನಮಗಿಂದೇ ಬರಲಿ
ಇಂದು ಬಪ್ಪುದು ನಮಗೀಗಲೇ ಬರಲಿ
ಇದಕಾರಂಜುವರು ಇದಕಾರಳಕುವರು?
ʼಜಾತಸ್ಯ ಮರಣಂ ಧೃವಮ್ʼಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರಹವ
ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ – ಬಸವಣ್ಣ
ಅಕ್ಕಮಹಾದೇವಿಯೂ ಕೂಡ ಸಾವು ನಮ್ಮ ಬೆನ್ನ ಬಿಡದು ಎನ್ನುತ್ತಾಳೆ.
ಆವ ವಿದ್ಯೆ ಕಲಿತಡೇನು
ಸಾವ ವಿದ್ಯೆ ಬೆನ್ನಬಿಡದು
ಆಶನವ ತೊರೆದಡೇನು, ವ್ಯಸನವ ಮರೆದಡೇನು?
ಉಸುರ ಹಿಡಿದಡೇನು ಬಸುರ ಕಟ್ಟಿದಡೇನು?
ಚನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಹೊದ್ದುವಂತೆ ಮಾಡಾ, ನಿಮ್ಮ ಧರ್ಮ – ಅಕ್ಕಮಹಾದೇವಿ.
ನಾವು ಹೇಗೆ ಬದುಕಬೇಕು? ನಮಗೂ ಹಿತವಾಗಿ, ಪರರಿಗೂ ಹಿತವಾಗಿ ಬದುಕಿದರೆ ಎಷ್ಟು ಚಂದ. ಎಲ್ಲ ಧರ್ಮಗಳ ನೀತಿ ಬೋಧೆಯನ್ನು ಈ ವಚನದಲ್ಲಿ ಅಣ್ಣನವರು ಸೆರೆ ಹಿಡಿದಿದ್ದಾರೆ.
“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೆ ಅಂತರಂಗಶುದ್ಧಿ, ಇದೆ ಬಹಿರಂಗಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ – ಬಸವಣ್ಣ
ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ
ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡುವುದೇ ಮರ್ತ್ಯಲೋಕ
ಆಚಾರವೇ ಸ್ವರ್ಗ, ಅನಾಚಾರವೇ ನರಕ
ಕೂಡಲಸಂಗಮದೇವಾ ನೀವೇ ಪ್ರಮಾಣು – ಬಸವಣ್ಣ
ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ
ಮೃದುವಚನವೆ ಸಕಲ ಜಪಂಗಳಯ್ಯಾ
ಮೃದು ವಚನವೇ ಸಕಲ ತಪಂಗಳಯ್ಯಾ
ಸದುವಿನಯವೆ ಸದಾಶಿವನ ಒಲುಮೆಯಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ – ಬಸವಣ್ಣ
ಮಾತಿನ ಮಹತ್ವ:
ಮಾತು ನಮ್ಮನ್ನು ಬದುಕಿಸಬಲ್ಲುದು. ಮಾತು ನಮ್ಮನ್ನು ಕೊಲ್ಲಲೂಬಹುದು. ಒಳ್ಳೆಯ ಮಾತುಗಳು ನಮಗೆ ಸ್ನೇಹಿತರನ್ನು ತಂದುಕೊಟ್ಟರೆ, ಕೆಟ್ಟ ಮಾತುಗಳು ಶತೃಗಳ ದಂಡನ್ನೇ ಸೃಷ್ಟಿಸುತ್ತದೆ. ಜೊತೆಯಲ್ಲಿ ಅಪಾಯವನ್ನೂ ತರುತ್ತದೆ.
ನುಡಿದಡೆ ಮುತ್ತಿನ ಹಾರದಂತಿರಬೇಕು
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ
ಕೂಡಲಸಂಗಮದೇವನೆಂತಿಲಿವನಯ್ಯಾ? – ಬಸವಣ್ಣ
ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ;
ತಾಳೋಷ್ಟ್ರಸಂಪುಟವೆಂಬುದು ನಾದಬಿಂದು ಕಳಾತೀತ,
ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ – ಅಲ್ಲಪ ಪ್ರಭು
ತನ್ನನಾನರಿದಡೆ ನುಡಿಯೆಲ್ಲಾ ತತ್ವ ನೋಡಾ೧
ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ!
ಅರಿದು ಮರೆದ ಶಿವಯೋಗಿಯ ಶಬ್ದವೆಲ್ಲವು
ಉಪದೇಶವಲ್ಲದೆ ಭಿನ್ನವುಂಟೆ?
ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ
ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ!
ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ
ಬಾಯ್ದೆಗೆದೆನಲ್ಲದೆ, ಭಿನ್ನವುಂಟೆ ಹೇಳಾ ಮರಿಳೆ? – ಅಲ್ಲಮಪ್ರಭು
ಆಹಾರಕ್ಕೂ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೂ ಇರುವ ಸಂಬಂಧವನ್ನುಅಕ್ಕಮಹಾದೇವಿ ಚೆನ್ನಾಗಿ ವಿವರಿಸಿದ್ದಾಳೆ.
ಆಹಾರವ ಕಿರಿದು ಮಾಡಿರಣ್ಣಾ,
ಆಹಾರವ ಕಿರಿದು ಮಾಡಿ,
ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ,
ಆಹಾರದಿಂ ನಿದ್ರೆ, ನಿದ್ರೆಯಿಂ ತಾಮಸ, ಅಜ್ಞಾನ, ಮೈಮರಹು,
ಅಜ್ಞಾನದಿಂ ಕಾಮವಿಕಾರ ಹೆಚ್ಚಿ,
ಕಾಯವಿಕಾರ, ಮನೋವಿಕಾರ, ಇಂದ್ರಿಯವಿಕಾರ
ಭಾವವಿಕಾರ, ವಾಯುವಿಕಾರವನುಂಟು ಮಾಡಿ,
ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿಪೋಷಣ ಬೇಡ
ಅತಿಪೋಷಣೆಯಿಂದ ಮೃತ್ಯುವೆಂದುದು
ಜಪ ತಪ ಧ್ಯಾನ ಧಾರಣ ಪೂಜೆಗೆ
ಸೂಕ್ಷ್ಮದಿಂ ತನುಮಾತ್ರವಿದ್ದರೆ ಸಾಲದೇ?
ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು,
ತನು ಪೋಷಣೆಯಿಂದ ತಾಮಸ ಹೆಚ್ಚಿ
ಅಜ್ಞಾನದಿಂ ವಿರಕ್ಕತಿ ಹಾನಿ,
ಅರಿವು ನಷ್ಟ, ಪರವು ದೂರ, ನಿರಕೆ ನಿಲವಿಲ್ಲದ ಕಾರಣ,
ಚನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯವ
ಕೆಡಿಸದೆ ಉಳಿಸಿಕೊಳ್ಳಿರಯ್ಯಾ – ಅಕ್ಕಮಹಾದೇವಿ
ವಚನಕಾರ ಶರಣ ಬಹುರೂಪಿ ಚೌಡಯ್ಯನವರು, ಅಕ್ಕಮಹಾದೇವಿಯವರ ಮಾತುಗಳನ್ನು ಪುನರುಚ್ಛರಿಸಿದ್ದಾರೆ
.“ಮಿತ ಭೋಜನ, ಮಿತವಾಕು ಮಿತನಿದ್ರೆಯ ಮಾಡಿರಣ್ಣಾ
ಯೋಗಸಿದ್ಧಿ ಬೇಕಪ್ಪಡೆ ಅತ್ಯಾಹಾರ ಇಂದ್ರಿಯ ವ್ಯವಹಾರ
ರೇಕಣ್ಣಪ್ರಿಯ ನಾಗಿನಾಥನಲ್ಲಿ ಅಳಿಯದಂತೆ
ಉಳುಹಿಕೊಳ್ಳಿರಣ್ಣ, ಯೋಗ ಸಾಧ್ಯವಪ್ಪನ್ನಕ್ಕ – ಬಹುರೂಪಿ ಚೌಡಯ್ಯ.
ಆಸೆ-ಅತಿ ಆಸೆಯ ಅಪಾಯದ ಬಗ್ಗೆ ಅಲ್ಲಮಪ್ರಭು ಹೀಗೆ ಎಚ್ಚರಿಸುತ್ತಾನೆ.
ಆಸೆ ಎಂಬ ಶೂಲದ ಮೇಲೆ, ವೇಷವೆಂಬ ಹೆಣನ ಕುಳ್ಳಿರಿಸಿ;
ಧರೆಯ ಮೇಲುಳ್ಳ ಹಿರಿಯರು ಹೀಂಗೆ ಸವೆದರು ನೋಡಾ!
ಆಸೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರ ಕಂಡು,
ಹೇಸಿಕೆಯಾಗಿತ್ತು ಗುಹೇಶ್ವರಾ – ಅಲ್ಲಮಪ್ರಭು
ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ,
ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ – ಅಲ್ಲಮಪ್ರಭು
ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರಾ – ಅಲ್ಲಮಪ್ರಭು.
ಅಂಬಿಗರ ಚೌಡಯ್ಯ, ಅಂತ್ಯವಿಲ್ಲದ ನಮ್ಮ ಆಸೆಯ ಬಗ್ಗೆ ಸೊಗಸಾದ ವಚನವನ್ನು ರಚಿಸಿದ್ದಾನೆ.
ಬಡತನಕ್ಕೆ ಉಂಬುವ ಚಿಂತೆ, ಉಣಲಾರದೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ, ಇಡಲಾರದೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು,
ಶಿವನ ಚಿಂತೆಯಲ್ಲಿದ್ದವರನೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ – ಅಂಬಿಗರ ಚೌಡಯ್ಯ.
ಅತಿ ಆಸೆಯಂತೆ ಅತಿ ಹೊಗಳಿಕೆಯೂ ಬೇಡ ಎನ್ನುತ್ತಾರೆ ಬಸವಣ್ಣನವರು
“ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ
ಎನ್ನ ಹೊಗಳತೆ ಎನ್ನ ನಿಮ್ಮೈಗೊಂಡಿತಲ್ಲಾ-
ಅಯ್ಯೋ ನೊಂದೆನು, ಸೈರಿಸಲಾರೆನು!
ಅಯ್ಯಾ ನಿಮ್ಮ ಮನ್ನಣೆಯೇ, ಮಸೆದಲಗಾಗಿ ತಾಗಿತಲ್ಲಾ-
ಅಯ್ಯೋ ನೊಂದೆನು ಸೈರಿಸಲಾರೆನು .
ಕೂಡಲಸಂಗಮದೇವಾ, ನೀನೆನಗೆ ಒಳ್ಳಿದನಾದಡೆ
ಎನ್ನ ಹೊಗಳತೆಗಡ್ಡ ಬಾರಾ, ಧರ್ಮಿ – ಬಸವಣ್ಣ
ಯಾವುದೇ ಕಷ್ಟ ನಷ್ಟ ನೋವು, ರೋಗ-ರುಜಿನ ಬರಲಿ, ಕೂಡಲಸಂಗಮದೇವನನ್ನು ನೆನೆಯಿರಿ, ಅವನ ಮೊರೆ ಹೋಗಿರಿ ಎನ್ನುತ್ತಾರೆ ಬಸವಣ್ಣನವರು.
“ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ, ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ,
ಎನ್ನ ಮಾನಾಪಮಾನವೂ ನಿಮ್ಮದಯ್ಯ
ನೀನು ಒಲಿದರೆ ಕೊರಡು ಕೊನರುವುದಯ್ಯ,
ಬಳ್ಳಿಗೆ ಕಾಯಿ ದಿಮಿತ್ತೆ, ಕೂಡಲಸಂಗಮದೇವಾ – ಬಸವಣ್ಣ
ನೀನೊಲಿದಡೆ ಕೊರಡು ಕೊನರುವುದಯ್ಯಾ
ನೀನೊಲಿದಡೆ ಬರಡು ಹಯನಹುದಯ್ಯಾ.
ನೀನೊಲಿದಡೆ ವಿಷವೆಲ್ಲಾ ಅಮೃತವಹುದಯ್ಯಾ
ನೀನೊಲಿದಡೆ ಸಕಲ ಪಡಿಪದಾರ್ಥ
ಇದಿರಲ್ಲಿರ್ಪುವು ಕೂಡಲಸಂಗಮದೇವಾ – ಬಸವಣ್ಣ
ಹೀಗೆ ವಚನಗಳು ನಮ್ಮ ಮನಸ್ಸಿನ ನೆಮ್ಮದಿ ಸಮಾಧಾನಕ್ಕೆ ಆರೋಗ್ಯಕ್ಕೆ ದಾರಿ ತೋರುತ್ತವೆ. ಅರ್ಥ ಮಾಡಿಕೊಂಡು ಜೀವನ ಮಾಡಬೇಕು.
ಡಾ. ಸಿ. ಆರ್ ಚಂದ್ರಶೇಖರ
ಬೆಂಗಳೂರು.
ಫೋನ್ ನಂ:+91 98456 05615
ವಚನ ಸಾಹಿತ್ಯ ಬದಕುವ ಹಾರಿಸುವುದು. ಹಾಗೆ ಆ ದಾರಿಯಲ್ಲಿ ನಾವು ಸಾಗಬೇಕು. – ಎಂ. ಎಸ್. ಪಾವಟೆ , ಬಾಗಲಕೋಟೆ