
ಆ ಮಾತು, ಈ ಮಾತು, ಹೋ ಮಾತು- ಎಲ್ಲವೂ ನೆರೆದು ಹೋಯಿತ್ತಲ್ಲಾ.
ಭಕ್ತಿ ನೀರಲ್ಲಿ ನೆರೆದು ಜಲವ ಕೂಡಿ ಹೋಯಿತ್ತಲ್ಲಾ.
ಸಾವನ್ನಕ್ಕ [ಸರಸ] ಉಂಟೇ ಗುಹೇಶ್ವರಾ?
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-149 / ವಚನ ಸಂಖ್ಯೆ-133)
ಲೌಕಿಕ ಜನರ ನಾಲಿಗೆಯ ಚಪಲದ ಮಾತುಗಳನ್ನು ಕುರಿತು ಅಲ್ಲಮರು ಈ ವಚನದಲ್ಲಿ ತುಂಬಾ ಮಾರ್ಮಿಕವಾಗಿ ವಿವರಿಸಿದ್ದಾರೆ. ಸಾಂಸಾರಿಕ ಜೀವನದಲ್ಲಾಗಲಿ ಪಾರಮಾರ್ಥಿಕ ಕ್ಷೇತ್ರದಲ್ಲಾಗಲಿ ಅನೇಕ ಜನ ಪುಂಖಾನು ಪುಂಖವಾಗಿ ಮಾತನಾಡುವುದನ್ನು ನೋಡುತ್ತೇವೆ. ನಿತ್ಯ ಜೀವನದಲ್ಲಿ ಆಡುವ ಕೆಲ ಮಾತುಗಳಿಂದ ಆಗುವ ಅನಾಹುತಗಳನ್ನೂ ಕಂಡಿದ್ದೇವೆ, ಕಾಣುತ್ತಲೇ ಇದ್ದೇವೆ. ಕಾರ್ಯಸಾಧನೆ, ಮುಖಸ್ತುತಿ, ನಿಂದನೆ, ಹೊಟ್ಟೆಕಿಚ್ಚು, ಮಾತ್ಸರ್ಯ, ಆರೋಪ – ಪ್ರತ್ಯಾರೋಪ, ಆತ್ಮಸ್ತುತಿ, ಪ್ರಶಂಸೆ, ಇತ್ಯಾದಿಗಳಿಗಾಗಿ ನಮ್ಮ ಮಾತುಗಳು ಬೇಕಾಬಿಟ್ಟಿಯಾಗಿ ಬಳಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇವೆಲ್ಲವೂ ಕಂಠಸ್ಥ ಮಾತುಗಳು ಹಾಗೂ ಸ್ವಾರ್ಥ ಉದ್ದೇಶಪೂರಿತವಾದವುಗಳು. ಕ್ಷಣಿಕ ಸುಖಕ್ಕಾಗಿ, ಲಾಭದಾಸೆಗಾಗಿ ಆಡುವ ನುಡಿಗಳಿಂದ ನಮ್ಮ ವ್ಯಕ್ತಿತ್ವದ ಹನನವಾಗುತ್ತದೆ. ಎಂಬುದರ ಅರಿವಿದ್ದರೂ, ವ್ಯಕ್ತಿತ್ವ ಹಾಳಾದರೂ ಚಿಂತೆ ಇಲ್ಲ ಕಾರ್ಯ ಸಾಧನೆಯಾದರೆ ಸಾಕೆನ್ನುವ ಭಂಡರು ಸಮಾಜದಲ್ಲಿ ಸಾಕಷ್ಟು ಜನರಿದ್ದಾರೆ.
ಇನ್ನು ಆಧ್ಯಾತ್ಮ ಮತ್ತು ಪಾರಮಾರ್ಥಿಕ ಕ್ಷೇತ್ರದಲ್ಲಿಯೂ ಮಾತಿನ ಮಲ್ಲರು, ಪಾಂಡಿತ್ಯ ಪ್ರದರ್ಶಿಗಳು ಸಾಕಷ್ಟಿದ್ದಾರೆ. ಇಲ್ಲಿ ಅವರು ತಮ್ಮನ್ನು ತಾವು ಸಮಾಜದಲ್ಲಿ ಪ್ರೊಜೆಕ್ಟ್ ಮಾಡಿಕೊಳ್ಳುವ ಹಪಾಹಪಿಯಲ್ಲಿದ್ದಾರೆ. ಎಲ್ಲವನ್ನೂ ಬಲ್ಲೆನೆಂದು ತೋರಿಸಿಕೊಳ್ಳುವ ಕಂಠಸ್ಥ ಪಂಡಿತರು ಕೆಲವರಿದ್ದಾರೆ. ಕೀರ್ತಿಶನಿ ಎಂಬುದು ಇವರ ಹೆಗಲೇರಿ ಕುಳಿತು ಇವರನ್ನು ಸದಾ ತಾಮಸ ಕಾರ್ಯಗಳತ್ತ ಪ್ರಚೋದಿಸುತ್ತಿರುತ್ತದೆ. ಇಂಥವರನ್ನು ಕುರಿತು ಇನ್ನೊಂದು ವಚನದಲ್ಲಿ;
ಅಡವಿಯೊಳಗೆ ಕಳ್ಳರು ಕಡವಸಿದ್ಧ ಸ್ವಾಮಿಯನು
ಹುಡುಕಿ ಹುಡುಕಿ ಅರಸುತ್ತೈದಾರೆ. ಸೊಡರು ನಂದಿ ಕಾಣದೆ!
ಅನ್ನ ಪಾನದ ಹಿರಿಯರೆಲ್ಲರು ತಮ್ಮ ತಾವರಿಯದೆ,
ಅಧರಪಾನವನುಂಡು ತೇಗಿ, ಸುರಾಪಾನವ ಬೇಡುತ್ತೈದಾರೆ.
ಅರಿದ ಹಾರುವನೊಬ್ಬನು ಅರಿದ ತಲೆಯ ಹಿಡಿದುಕೊಂಡು,
ಆಧ್ಯಾತ್ಮವಿಕಾರದ ನೆತ್ತರ ಕುಡಿದನು ನೋಡಾ, ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-141 / ವಚನ ಸಂಖ್ಯೆ-33)
“ಅರಿದ ಹಾರುವನೊಬ್ಬನು ಅರಿದ ತಲೆಯ ಹಿಡಿದುಕೊಂಡು, ಆಧ್ಯಾತ್ಮವಿಕಾರದ ನೆತ್ತರ ಕುಡಿದನು ನೋಡಾ, ಗುಹೇಶ್ವರಾ”
ಎಂದಿದ್ದಾರೆ. ಶಾಸ್ತ್ರಗಳಲ್ಲಿ ಪಾರಂಗತರಾದ ಪಂಡಿತರು ‘ಅಹಂ’ ನಿಂದ ಪರಸ್ಪರ ಚರ್ಚೆಗಿಳಿದು ಕಚ್ಚಾಡಿಕೊಳ್ಳುತ್ತಾರೆ. ಮತ್ತೊಬ್ಬರ ಸೋಲಿನಲ್ಲಿ ಅಸುರಿ ಆನಂದ ಪಡೆವ, ಈ ಶಾಬ್ಧಿಕ ಜ್ಞಾನಿಗಳು ವಿಕೃತ ಮನದ ವಿಕಾರಿಗಳು. ಇವರದು ವಿಕಾರಗೊಂಡ ಆಧ್ಯಾತ್ಮ. ಹೀಗಾಗಿ ಇವರಿಗೆ ಭಕ್ತಿ ಸಮನಿಸದು, ಶಿವಾನುಭೂತಿಯ ಶಾಂತಿ ದೊರಕಲಾರದು.
ಈ ರೀತಿಯ ವ್ಯರ್ಥಾಲಾಪದ ನುಡಿಗಳಿಂದ ಏನೂ ಸಾಧನೆಯಾಗದು. ಬದಲಾಗಿ ನಮ್ಮಲ್ಲಿರಬಹುದಾದ ಅಲ್ಪಸ್ವಲ್ಪ ಭಕ್ತಿ ಭಾವ ಶ್ರದ್ಧೆಗಳು ಹಾಗೂ ಇವುಗಳಿಂದ ರೂಪುಗೊಂಡ ವ್ಯಕ್ತಿತ್ವವು, ಅರಿಷಡ್ವರ್ಗ ಮತ್ತು ವ್ಯಸನಗಳ ಪ್ರವಾಹದಲ್ಲಿ ಸೇರಿ ಹರಿದು ಹಾಳಾಗಿ ಹೋಗುತ್ತದೆ.
ಆಧ್ಯಾತ್ಮ ಪಥದಲ್ಲಿ ಮಾತುಗಳಿಗೆ ಎಳ್ಳು ಕಾಳಿನಷ್ಟೂ ಬೆಲೆ ಇಲ್ಲ. ಇಲ್ಲಿ ಮಾತು ವಾಚಾಳಿ, ಮೌನ ಘನ ಗಂಭೀರ. ಒಂದು ಮಾತಿಗೆ ನೂರ್ಮಡಿ ಅರ್ಥವನ್ನು, ಸುಪ್ರಸನ್ನ ಭಾವದ ಮೌನ ಸ್ಪುರಿಸುತ್ತದೆ. ಇದನ್ನೇ ಅಲ್ಲಮರು “ಮಾತೆಂಬುದು ಜ್ಯೋತಿರ್ಲಿಂಗ” ಎಂದಿದ್ದಾರೆ. “ಮಾತೆಂಬುದು ಮಾಣಿಕ್ಯ” ವಾಗಬೇಕೆಂದು ಸರ್ವಜ್ಞ ಹೇಳಿದ್ದು ಈ ಅರ್ಥದಲ್ಲಿಯೇ. ಬಸವಣ್ಣನವರ ಈ ವಚನ ನಾವಾಡುವ ನುಡಿ ಹೇಗಿರಬೇಕೆಂಬುದಕ್ಕೆ ಭಾಷ್ಯ ಬರೆದಂತಿದೆ.
ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು.
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ?
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-72 / ವಚನ ಸಂಖ್ಯೆ-803)
ನಾವಾಡುವ ನುಡಿಯು ಮುತ್ತಿನ ಹಾರದಂತೆ ಸುಂದರವೂ ಔಚಿತ್ಯಪೂರ್ಣವೂ, ಸ್ಪಟಿಕದ ಸಲಾಕೆಯಂತೆ ಸ್ಪಷ್ಟವೂ – ಪ್ರಖರವೂ, ಮಾಣಿಕ್ಯದ ಮಹಾಬೆಳಗಿನಂತೆ, ಲೋಕ ಮೆಚ್ಚುವಂತೆ, ಪರಹಿತ ಬಯಸುವಂತೆ, ಬೇರೊಬ್ಬರ ಮನ ನೋಯಿಸದಂತೆಯೂ, ಆತ್ಮ-ಸ್ತುತಿ, ಪ್ರಶಂಸೆಗಳಿಗೆ ಇಂಬಿಲ್ಲದಂತಿರಬೇಕು. ಹಾಗಿದ್ದಾಗ ಮಾತ್ರ ನಮ್ಮ ಮಾತಿಗೆ ಲಿಂಗಯ್ಯ ಮೆಚ್ಚಿ ತಲೆದೂಗುತ್ತಾನೆ. ವಚನದ ಕೊನೆಯ ಸಾಲಿನ, “ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯಾ” ಎಂಬುದು ಇಡೀ ವಚನದ ದಿಕ್ಸೂಚಿಯಂತಿದೆ ಮುತ್ತಿನ ಹಾರದ, ಸ್ಪಟಿಕದ ಸಲಾಕೆಯ, ಮಾಣಿಕ್ಯದದೀಪ್ತಿಯ ನುಡಿಗಳು ಕೇವಲ ಬಾಯಿ ಚಪಲದ ತೋರಿಕೆಯ ಮಾತುಗಳಾಗಬಾರದು. ಅವು ನಡೆಯಲ್ಲಿಯೂ ಅಳವಡಬೇಕು. ನುಡಿದು ನಡೆಯದಿದ್ದರೆ ಪರಮಾತ್ಮ (ಸಮಾಜ, ಆತ್ಮ ಚೈತನ್ಯ) ಎಂದಿಗೂ ಮೆಚ್ಚಲಾರನು.
“ಸಾವನ್ನಕ್ಕ ಸರಸ ಉಂಟೇ ಗುಹೇಶ್ವರಾ” ಎಂಬ ಕೊನೆಯ ಸಾಲೂ ಕೂಡ ಇದೇ ಅರ್ಥವನ್ನು ಸ್ಪುರಿಸುತ್ತದೆ. ಅಂದರೆ ನಮ್ಮ ಮಾತು ನಡೆಯನನುಸರಿಸಬೇಕು. ನಮ್ಮ ನಡತೆಯು ಭಕ್ತಿಪಥದಲ್ಲಿದ್ದು ಪಾರಮಾರ್ಥಿಕ ಸಾಧನೆಗೆ ಪೋಷಕವಾಗಿರಬೇಕು. ಅಂತಹ ದೃಢ ಭಕ್ತಿ ಮಾತ್ರ, ಮನದಲ್ಲಿ ಸ್ಥಿರಗೊಳ್ಳಲು ಸಾಧ್ಯವಾಗುತ್ತದೆ.
“ಸಾವನ್ನಕ್ಕರ” ಎಂಬುದು ಸಾಯುವವರೆಗೆ ಇಂತಹ ಅಸಂಖ್ಯ, ಅರ್ಥಹೀನ ಮಾತುಗಳನ್ನಾಡುವುದರಿಂದ ಏನೂ ಪ್ರಯೋಜನವಿಲ್ಲ. ಇಂಥವರಿಗೆ ಭಕ್ತಿರಸಾನಂದ ಅಸಾಧ್ಯವೆಂಬರ್ಥ ಮೇಲ್ನೋಟಕ್ಕೆ ಕಂಡು ಬರುತ್ತದೆ. “ಸಾವನ್ನಕ್ಕರ” ಎಂಬುದಕ್ಕೆ ನಶಿಸು, ಇಲ್ಲವಾಗು ಎಂಬ ಅರ್ಥಗಳೂ ಇವೆ. ನಮ್ಮ ಅರ್ಥಹೀನ ಮಾತುಗಳು ನಿಂತು ಹೋಗಿ ನಶಿಸುತ್ತಾ, ನಶಿಸುತ್ತಾ ಇಲ್ಲವಾಗುತ್ತವೆ. ಮಾತಿನ ವ್ಯಾಮೋಹ ನಶಿಸುವವರೆಗೆ ಭಕ್ತಿಯ ಪರಮಾನಂದ ದೊರಕದು.
ಕಾರಣ ನಮ್ಮ ಮಾತುಗಳು ಮೌನದಲ್ಲಡಗಲಿ! “ಮೌನ ಮೊಗ್ಗೆಯೊಡೆದು ಮಾತರಳಿ ಬರಲಿ. ಮೂರು ದಿನದ ಬಾಳು ಮಗಮಗಿಸುತಿರಲಿ” ಎಂಬ ಕವಿವಾಣಿ ನಮ್ಮ ಬಾಳಿಗೆ ದಿಕ್ಸೂಚಿಯಾಗಲಿ.
ಪ್ರೊ. ಜಿ ಎ. ತಿಗಡಿ
ಧಾರವಾಡ
ಮೋಬೈಲ್ ನಂ. +91 99026 71015
ಅತ್ಯಂತ ಉಪಯುಕ್ತ ವಿಷಯಗಳು ಸರಳ ಜೀವನದ ಪರಿಪೂರ್ಣ ಅರಿವು ಮೂಡಿಸುವ ಚಿಂತನೆಯ ಸಾಮೂಹಿಕ ಪ್ರಯೋಜನದ ಬಗ್ಗೆ ವಿವರಣೆ ನೀಡಿದ್ದೀರಿ
ದನ್ಯವಾದಗಳು ತಿಗಡಿ ಸಾರ್
ಮತ್ತು ವಿಜಯಕುಮಾರ್ ಸಾರ್