
12 ನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಧರ್ಮಗುರು ಬಸವಣ್ಣನವರ ಬಗ್ಗೆ ಎಡೆಯೂರು ಸಿದ್ಧಲಿಂಗೇಶ್ವರಿಗೆ ಅಪಾರ ಭಕ್ತಿ ಗೌರವ. ತಮ್ಮ ಅನೇಕ ವಚನಗಳಲ್ಲಿ ಅತ್ಯಂತ ವಿನಮ್ರರಾಗಿ ತಮ್ಮ ಬಸವನಿಷ್ಠೆಯನ್ನು ಅಭಿವ್ಯಕ್ತಿಸಿದ್ದಾರೆ. ಈ ಪರಂಪರೆಯನ್ನು ಇನ್ನೂ ಅರ್ಥವತ್ತಾಗಿ ಮುಂದುವರಿಸಿದವರು ಶ್ರೀ ಸಿದ್ಧಲಿಂಗೇಶ್ವರರು. ಸಿದ್ಧಲಿಂಗೇಶ್ವರರ ಶಿಷ್ಯ-ಪ್ರಶಿಷ್ಯ ಪರಂಪರೆಯಲ್ಲಿ ಚನ್ನಂಜೆದೇವ ಎನ್ನುವ ಸಂಕಲನಕಾರ “ಬಸವಸ್ತೋತ್ರದ ವಚನಗಳು” ಎಂಬ ವಿಶಿಷ್ಟ ವಚನ ಸಂಕಲನವನ್ನೇ ರೂಪಿಸಿರುವುದು ಗಮನಾರ್ಹ.
ಶ್ರೀ ಸಿದ್ಧಲಿಂಗೇಶ್ವರರಿಗೆ ಲಿಂಗಾಯತ ಧರ್ಮದ ಸಮಗ್ರ ಇತಿಹಾಸ ತಿಳಿದಿತ್ತು. ಹೀಗಾಗಿ ಈ ಧರ್ಮದ ಸ್ಥಾಪಕರು ಯಾರು? ಯಾರಿಂದ ತಾವು ಪ್ರಭಾವಿತರಾದೆವು? ಯಾರ ಸ್ಮರಣೆಯಿಂದ ನಮ್ಮ ಬದುಕು ಸಾರ್ಥಕವಾಗುವುದು? ಎಂಬುದನ್ನು ಅವರು ತಮ್ಮ ವಚನಗಳಲ್ಲಿ ಅತ್ಯಂತ ಸ್ಪಷ್ಟವಾದ ನುಡಿಗಳಲ್ಲಿ ಪ್ರತಿಪಾದಿಸುತ್ತ, ಬಸವ ನಾಮವೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ. ಪ್ರಾಯಶಃ ಲಿಂಗಾಯತ ಧರ್ಮವು ಪ್ರಾಚೀನವಾಗಿದ್ದರೆ, ಪೂರ್ವದ ವ್ಯಕ್ತಿಗಳನ್ನು ಅವರು ಬಸವಣ್ಣನವರಷ್ಟೇ ಭಕ್ತಿಯಿಂದ ಸ್ಮರಿಸುತ್ತಿದ್ದರು. ಬಸವ ಸಮಕಾಲೀನ ಹಿರಿಯ ಶರಣರಾಗಿದ್ದ ರೇವಣಸಿದ್ಧರ ಹೆಸರನ್ನು ಮಾತ್ರ ಒಂದು ವಚನದಲ್ಲಿ ಉಲ್ಲೇಖಿಸಿದ್ದಾರೆ.
ಬಹಳಷ್ಟು ಜನರು ಶ್ರೀ ಸಿದ್ಧಲಿಂಗೇಶ್ವರರ ಒಂದು ವಚನದಲ್ಲಿ “ರೇಣುಕ” ಎಂಬ ಪದ ಉಲ್ಲೇಖ ಮಾಡಿರುವುದನ್ನು ಗಮನಿಸಿ, ಸಿದ್ಧಲಿಂಗೇಶ್ವರರು ರೇಣುಕರನ್ನು ಸ್ಮರಿಸಿಕೊಂಡಿರುವುದರಿಂದ ತಮ್ಮ ಧರ್ಮವು ಅತ್ಯಂತ ಪ್ರಾಚೀನ ಎಂದು ಹೇಳುತ್ತಾರೆ. ಆದರೆ ಈ ವಚನ ಕುರಿತು ನಮ್ಮ ನಾಡಿನ ದಾರ್ಶನಿಕ ವಿದ್ವಾಂಸರಾದ ಡಾ. ಎನ್. ಜಿ. ಮಹಾದೇವಪ್ಪನವರು ನೀಡುವ ವಿವರಣೆ ತುಂಬ ಮಾರ್ಮಿಕವಾಗಿದೆ:
ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯ[ವಾ]ಗದಿರ್ದಡೆ,
ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೊ?
ಆ ಶಿವನಲ್ಲಿಯೆ ಹುಟ್ಟಿ ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು,
ಅನಾದಿಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ
ನಾಯಕನರಕ ತಪ್ಪದು.
ಸಕಲಕೋಟಿ ಬ್ರಹ್ಮಾಂಡಕ್ಕಾಧಾರಕಾರಣವಾಗಿಯು
ಸಮಸ್ತ ಲೋಕಂಗಳ ಪವಿತ್ರಕಾರಣವಾಗಿಯು
ಪರಮೇಶ್ವರನ ನಿಜಚಿನ್ಮಯಮಪ್ಪ ಊರ್ಧ್ವಮುಖದಲ್ಲಿ
ಚಿತ್ಕಲಾಸ್ವರೂಪರಪ್ಪ ರುದ್ರಗಣಂಗಳುದಯವಾದರು ನೋಡಾ.
ಆ ರುದ್ರಗಣಂಗಳು ಮತ್ತೂ ಜಗತ್ಪಾವನ ಕಾರಣ
ಮರ್ತ್ಯದಲ್ಲಿ ಅವತರಿಸಿದಡೆ,
ಅದೇನು ಕಾರಣ ಉದಯವಾದರು
ವಾಸನಾಗುಣವಿಲ್ಲದೆ ಎಂದು ಸಂದೇಹಿಸುವ
ಅವಲಕ್ಷಣ ನಾಯ ನಾಲಗೆಯ, ಯಮದೂತರು ಕೀಳದೆ ಮಾಣ್ಬರೆ?
ಇವರಿಂಗೆ ನಾಯಕನರಕ ತಪ್ಪದು ಕಾಣಾ,
ಎಲೆ ಶಿವನೆ ನೀ ಸಾಕ್ಷಿಯಾಗಿ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-28/ವಚನ ಸಂಖ್ಯೆ-61)
“ಆದಿಯಲ್ಲಿ ಶಿವತತ್ವದಲ್ಲಿ ರೇಣುಕರುದಯವಾಗದಿರ್ದಡೆ ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೊ? ಶಿವನಲ್ಲಿಯೇ ಹುಟ್ಟಿ, ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು ಅನಾದಿ ಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ
ಈ ವಚನವನ್ನು ಉದ್ಧರಿಸುವ ಪಂಡಿತರ ಪ್ರಕಾರ ರೇಣುಕ ಅಥವಾ ರೇವಣಸಿದ್ಧ ಲಿಂಗೋದ್ಭವ, ಉಳಿದವರಲ್ಲ. ಈ ವಚನವನ್ನು ಪೂರ್ತಿ ಓದಿದಾಗ:
- ರೇಣುಕರ ವೀರಶೈವ ಧರ್ಮದ ಸ್ಥಾಪಕರು ಎಂದಾಗಲಿ,
- ರೇಣುಕರು ಮಾತ್ರ ಲಿಂಗದಿಂದ ಉದಯವಾದವರು ಉಳಿದವರಲ್ಲ ಎಂದಾಗಲಿ,
- ಶ್ರೀ ಸಿದ್ಧಲಿಂಗೇಶ್ವರರು ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ ಮುಂತಾದ ಶರಣರಿಗೆ ಕೊಡುವುದಕ್ಕಿಂತ ಹೆಚ್ಚಿನ ಗೌರವವನ್ನು ರೇಣುಕರಿಗೆ ಕೊಡುತ್ತಾರೆ ಎಂದಾಗಲಿ,
ಅರ್ಥವಾಗುವುದಿಲ್ಲ.
ಮಾತೆಯಿಲ್ಲದ ಅಜಾತನು; ತಂದೆಯಿಲ್ಲದ ಇಂದುಧರನು,
ತಂದೆ ತಾಯಿ ಹೆಸರು ಕುಲವಿಲ್ಲದ ಪರಮನು.
ಲಿಂಗದಲ್ಲಿ ಉದಯನಾದ ಚಿನುಮಯನು ನೋಡಾ, ಭಕ್ತನು.
ನಿರ್ವಿಕಲ್ಪ ನಿರಂಜನನಾಗಿ ಮಾಯಾರಂಜನೆಯಿಲ್ಲದ
ಮಹಾಮಹಿಮನು ನೋಡಾ, ಭಕ್ತನು.
ಒಳಹೊರಗನರಿಯದ ಪರಿಪೂರ್ಣಸರ್ವಮಯವಾದ
ಜಗಭರಿತನು, ಅದ್ವಯನು ನೋಡಾ ಭಕ್ತನು.
ಇಂತಪ್ಪ ನಿರುಪಾಧಿಕ ಭಕ್ತನ, ನಿರ್ಗುಣ ಚರಿತ್ರವನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-228/ವಚನ ಸಂಖ್ಯೆ-510)
ಒಂದು ವಚನದ ಒಂದು ಶಬ್ದದ ಹೊರ ರೂಪವನ್ನು ನೋಡಿ, ಅದರ ಒಳ ಅರ್ಥವನ್ನು ಬೇಕೆಂದೇ ಕಾಣದಿರುವ ಈ ಜಾಣಕುರುಡರ ಬಗ್ಗೆ ಓದುಗರು ಎಚ್ಚರಿಕೆಯಿಂದಿರಬೇಕು. (ಡಾ. ಎನ್. ಜಿ. ಮಹಾದೇವಪ್ಪ: ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಗಳಲ್ಲಿ ರೇಣುಕ ಮತ್ತು ಬಸವಾದಿ ಶರಣರು | ಸಂಪಾದಕೀಯ: ಲಿಂಗಾಯತ ಪತ್ರಿಕೆ ಸಂಪುಟ 3 ಸಂಚಿಕೆ. 08.11.2008, ಪುಟ. ಸಂ. 2)
ಇದಕ್ಕಿಂತ ಹೆಚ್ಚಿನ ವಿವರಣೆ ಅಗತ್ಯವಿಲ್ಲವೆನಿಸುತ್ತದೆ. ಇಲ್ಲಿ ರೇಣುಕ ಎಂಬ ಪದವನ್ನು ಕೈಲಾಸದಲ್ಲಿರುವ ಒಬ್ಬ ಗಣ ಎಂಬ ಅರ್ಥದಲ್ಲಿ ಶ್ರೀ ಸಿದ್ಧಲಿಂಗೇಶ್ವರರು ಬಳಸಿದ್ದಾರೆ. ರೇವಣಸಿದ್ಧರು ಭೂಲೋಕದಲ್ಲಿ ಹುಟ್ಟಿದವರೆಂಬ ಕಾರಣಕ್ಕೆ ಅವರ ಮುಕ್ತ ನಿಲುವನ್ನು ಕುರಿತು ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೆ ಶ್ರೀ ಜ. ಚ. ನಿ. ಅವರು ವಿಭೂತಿ ಕೃತಿಯಲ್ಲಿ ಒಂದು ಲೇಖನ ಬರೆಯುತ್ತ:
“ಸಿದ್ಧಲಿಂಗೇಶ್ವರರ ರೇಣುಕರೇ ಬೇರೆ, ರೇವಣಸಿದ್ಧರೇ ಬೇರೆ”
ಎಂದು ಹೇಳಿದ್ದಾರೆ. ಈ ವಚನವನ್ನು ಸೂಕ್ಷ್ಮವಾಗಿ ಗಮನಿಸಿದರೆ, ರೇಣುಕ ಎನ್ನುವುದು ಕೈಲಾಸದಲ್ಲಿರುವ ಒಬ್ಬ ಗಣವರನ ಹೆಸರು, ರೇವಣಸಿದ್ಧ ಎನ್ನುವುದು ಬಸವ ಸಮಕಾಲೀನ ಶರಣನ ಹೆಸರು ಎಂಬುದು ಸ್ಪಷ್ಟವಾಗುತ್ತದೆ.
ಸಿದ್ಧಲಿಂಗೇಶ್ವರರಿಗೆ ರೇಣುಕರ ಮೇಲೆ ಅಷ್ಟೊಂದು ಭಕ್ತಿ ಇದ್ದಿದ್ದರೆ, ಇನ್ನೂ ಹತ್ತಾರು ವಚನಗಳಲ್ಲಿ ಬಸವಣ್ಣನವರಂತೆ ಅವರನ್ನೂ ಸ್ತುತಿಸುತ್ತಿದ್ದರು. ಇನ್ನೂ ಮಹತ್ವದ ಸಂಗತಿಯೆಂದರೆ ಬಸವಣ್ಣನವರನ್ನು ಅನೇಕ ವಿಧದಲ್ಲಿ ಸ್ತುತಿಸಿದ್ದಾರೆ, ರೇಣುಕರನ್ನು ಯಾವುದೋ ವಿಚಾರದ ಸ್ಪಷ್ಟೀಕರಣಕ್ಕಾಗಿ ಕ್ವಚಿತ್ತಾಗಿ ಒಂದು ಬಾರಿ ನೆನಪಿಸಿಕೊಂಡಿದ್ದಾರೆ ಎನ್ನುವುದನ್ನು ಗಮನಿಸಿದರೆ, ಅವರಿಗೆ ರೇಣುಕ ಎಂಬ ಗಣವರನಕ್ಕಿಂತ, ಬಸವಣ್ಣನವರ ಮೇಲೆ ಅಪಾರ ಪ್ರೀತಿ ಗೌರವ ಭಕ್ತಿ ಇತ್ತು ಎಂಬುದು ಸ್ಪಷ್ಟವಾಗುತ್ತದೆ.
ಸದ್ರೂಪವೇ ಸಂಗನಬಸವಣ್ಣ ನೋಡಾ.
ಚಿದ್ರೂಪವೇ ಚೆನ್ನಬಸವಣ್ಣ ನೋಡಾ.
ಆನಂದ ಸ್ವರೂಪವೇ ಪ್ರಭುದೇವರು ನೋಡಾ.
ಇದು ಕಾರಣ,
ಸದ್ರೂಪವಾದ ಸಂಗನ ಬಸವಣ್ಣನೇ ಗುರು;
ಚಿದ್ರೂಪವಾದ ಚೆನ್ನಬಸವಣ್ಣನೇ ಲಿಂಗ;
ಆನಂದಸ್ವರೂಪವಾದ ಪ್ರಭುದೇವರೇ ಜಂಗಮವು ನೋಡಾ.
ನಿತ್ಯ ನಿರಂಜನ ಪರತತ್ವ ತಾನೆ ಮೂರು ತೆರನಾಯಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-20/ವಚನ ಸಂಖ್ಯೆ-41)
12 ನೇ ಶತಮಾನದಲ್ಲಿ ಜರುಗಿದ ಕಲ್ಯಾಣ ಕ್ರಾಂತಿಯ ಪೂರ್ಣ ನೇತೃತ್ವ ವಹಿಸಿದವರು ಬಸವಣ್ಣನವರು, ಚನ್ನಬಸವಣ್ಣನವರು ಮತ್ತು ಪ್ರಭುದೇವರು. ಈ ಮೂವರು ಗುರು-ಲಿಂಗ-ಜಂಗಮ ಸ್ವರೂಪರಾಗಿ ನಿರಂಜನ ಪರತತ್ವಕ್ಕೆ ಪರ್ಯಾಯ ನಾಮವಾಗಿದ್ದಾರೆ ಎಂಬುದನ್ನು ಶ್ರೀ ಸಿದ್ಧಲಿಂಗೇಶ್ವರರು ಇಲ್ಲಿ ಹೇಳುತ್ತಿದ್ದಾರೆ. ಸತ್ ಸ್ವರೂಪ ಬಸವಣ್ಣನವರಾದರೆ, ಚಿತ್ ಸ್ವರೂಪ ಚೆನ್ನಬಸವಣ್ಣನವರು, ಇನ್ನು ಆನಂದ ಸ್ವರೂಪರಾಗಿ ಪ್ರಭುದೇವರು. ಹೀಗಾಗಿ ಬಸವಣ್ಣನವರೇ ಗುರುವಾಗಿ, ಚೆನ್ನಬಸವಣ್ಣನವರೇ ಲಿಂಗವಾಗಿ, ಪ್ರಭುದೇವರೇ ಜಂಗಮವಾಗಿ ಶ್ರೀ ಸಿದ್ಧಲಿಂಗೇಶ್ವರರಿಗೆ ಕಂಡಿದ್ದಾರೆ. ಈ ಮೂವರು ನಿತ್ಯ ನಿರಂಜನ ಪರತತ್ವದ ಸ್ವರೂಪವೇ ಆಗಿದ್ದಾರೆ ಎಂಬುದು ಅವರ ಬಲವಾದ ನಂಬಿಕೆ.
ಅನಾದಿ ಪರಶಿವತತ್ವದಿಂದ ಚಿತ್ತು ಉದಯವಾಯಿತ್ತು.
ಆ ನಿರ್ಮಲಮಹಾಜ್ಞಾನಚಿತ್‍ಸ್ವರೂಪವೇ ಬಸವಣ್ಣ ನೋಡಾ.
ಆ ಬಸವಣ್ಣನಿಂದ ನಾದ ಬಿಂದು ಕಳೆ.
ಆ ನಾದ ಬಿಂದು ಕಳೆ ಸಮರಸವಾಗಿ
ಅಖಂಡಪರಿಪೂರ್ಣಗೋಳಕಾಕಾರ ತೇಜೋಮೂರ್ತಿ
ಲಿಂಗಸ್ವರೂಪವಾಯಿತ್ತು ನೋಡಾ.
ಆ ಮಹಾಲಿಂಗದ ಪಂಚಸಾದಾಖ್ಯಮೂರ್ತಿಉತ್ಪತ್ತಿಯಾಯಿತ್ತು ನೋಡಾ.
ಇದು ಕಾರಣ,
ಅನಾದಿಶರಣ ಆದಿಲಿಂಗವೆಂದೆ ಬಸವಣ್ಣನಿಂದ ಲಿಂಗವಾದ ಕಾರಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-24/ವಚನ ಸಂಖ್ಯೆ-53)
ಐತಿಹಾಸಿಕವಾಗಿ ಇದೊಂದು ಬಹಳ ಮಹತ್ವದ ವಚನವಾಗಿದೆ. ಬಸವಣ್ಣನವರಿಂದಲೇ ಇಷ್ಟಲಿಂಗದ ಉದಯವಾಯಿತು ಎಂಬುದನ್ನು ಶ್ರೀ ಸಿದ್ಧಲಿಂಗೇಶ್ವರರು ತುಂಬ ಸ್ಪಷ್ಟವಾಗಿ ದಾಖಲಿಸಿದ್ದಾರೆ. ಇಷ್ಟಲಿಂಗದ ಜನಕ ಬಸವಣ್ಣನವರೇ ಎಂಬುದನ್ನು ದಾರ್ಶನಿಕ ನೆಲೆಯಲ್ಲಿ ವಿವೇಚಿಸಿದ್ದಾರೆ. ಅನಾದಿ ಪರಶಿವತತ್ವದಿಂದ ಚಿತ್ತು ಎನ್ನುವುದು ಹುಟ್ಟಿತು. ಆ ನಿರ್ಮಲವಾದ ಮಹಾಜ್ಞಾನ ಚಿತ್ತು ಸ್ವರೂಪವೇ ಬಸವಣ್ಣನವರು. ಬಸವಣ್ಣನವರಿಂದಲೇ ನಾದ ಬಿಂದು ಕಳೆಗಳಾದವು. ಅಖಂಡ ಪರಿಪೂರ್ಣ ಗೋಳಾಕಾರ ತೇಜೋಮೂರ್ತಿ ಲಿಂಗಸ್ವರೂಪವಾಯಿತ್ತು ಎಂಬ ಶಬ್ದವನ್ನು ತುಂಬ ಗಂಭೀರವಾಗಿ ಪರಿಶೀಲಿಸಿದರೆ, ಇಂದು ನಾವು ಧರಿಸುವ ಇಷ್ಟಲಿಂಗದ ಸಂಪೂರ್ಣ ಚಿತ್ರಣ ಇಲ್ಲಿ ಸಿಗುತ್ತದೆ. ಲಿಂಗ ಆದಿಯಾದರೆ, ಅದನ್ನು ನಮ್ಮ ಕರಸ್ಥಲದಲ್ಲಿರಿಸಿದ ಬಸವಣ್ಣನವರು ಅನಾದಿ ಶರಣರಾಗಿದ್ದಾರೆ. ಹೀಗಾಗಿ ಬಸವಣ್ಣನಿಂದ ಲಿಂಗವಾದ ಕಾರಣ ಎನ್ನುವ ಪದವನ್ನು ಶ್ರೀ ಸಿದ್ಧಲಿಂಗೇಶ್ವರರು ತುಂಬ ಎಚ್ಚರಿಕೆಯಿಂದ ಬಳಸಿದ್ದಾರೆ. ಮುಂದೆ ಕೆಲವು ವಿತಂಡವಾದಿಗಳು ಬರಬಹುದು, ಬಸವಣ್ಣನವರು ಇಷ್ಟಲಿಂಗ ಜನಕರಲ್ಲ ಎಂದು ಹೇಳಬಹುದು ಎಂಬುದರ ಕಲ್ಪನೆ ಶ್ರೀ ಸಿದ್ಧಲಿಂಶ್ವರರಿಗಿದ್ದಂತೆ ತೋರುತ್ತದೆ. ಅದಕ್ಕಾಗಿಯೇ ಅವರು ಈ ವಚನದಲ್ಲಿ ಬಸವಣ್ಣನವರೇ ಇಷ್ಟಲಿಂಗ ಆವಿಷ್ಕಾರ ಮಾಡಿದ ಮಹಾನುಭಾವರು ಎಂಬುದನ್ನು ಮನಗಾಣಿಸಿಕೊಟ್ಟಿದ್ದಾರೆ.
ಲಿಂಗದಿಂದ ಶರಣರುದಯಯವಾಗದಿರ್ದಡೆ,
ಬಸವ ಚೆನ್ನಬಸವ ಪ್ರಭುದೇವರು ಮುಖ್ಯವಾದ
ಏಳುನೂರುಯೆಪ್ಪತ್ತು ಅಮರಗಣಂಗಳು
ಎಲ್ಲರೂ ಕ್ಷೀರ ಕ್ಷೀರವ ಬೆರಸಿದಂತೆ, ನೀರು ನೀರು ಬೆರಸಿದಂತೆ,
ಘೃತ ಘೃತವ ಬೆರಸಿದಂತೆ, ಬಯಲು ಬಯಲ ಬೆರಸಿದಂತೆ
ಲಿಂಗವ ಬೆರಸಿ ಮಹಾಲಿಂಗವೆಯಾದರು ಹೇಂಗೆ ನೋಡಾ?
ಲಿಂಗದಿಂದ ಶರಣರುದಯವಾಗದಿರ್ದಡೆ,
ನೀಲಲೋಚನೆಯಮ್ಮ ಲಿಂಗದೊಳಗೆ ತನ್ನಂಗವನೇಕೀಕರಿಸಿ,
ಕೇವಲ ಪರಂಜ್ಯೋತಿರ್ಲಿಂಗದಲ್ಲಿ ನಿರವಯವಾದಳು ಹೇಂಗೆ ನೋಡಾ?
ಇಂತಪ್ಪ ದೃಷ್ಟವ ಕಂಡು ನಂಬದಿರ್ಪುದು ಕರ್ಮದ ಫಲ.
ಅದು ಇವರ ಗುಣವೆ?
ಶಿವನ ಮಾಯಾಪ್ರಪಂಚಿನ ಗುಣ ನೋಡಾ.
ಈ ಪ್ರಪಂಚುಜೀವಿಗಳು ಅಲ್ಲ ಎಂಬುದು, ಅಹುದೆಂಬುದು
ಪ್ರಮಾಣೆ? ಅಲ್ಲ ನೋಡಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-28/ವಚನ ಸಂಖ್ಯೆ-60)
ಈ ಲೋಕದ ಜನರಿಗೆ ಹೇಗೆ ತಿಳಿಸಿ ಹೇಳಬೇಕೆಂಬುದೇ ತಿಳಿಯದಾಗಿದೆ. ಅಹುದು ಎಂದರೆ ಇಲ್ಲ ಎನ್ನುತ್ತಾರೆ; ಇಲ್ಲ ಎಂದರೆ ಅಹುದು ಎನ್ನುತ್ತಾರೆ. ಇಂತಹವರಿಗೆ ಏನು ಹೇಳುವುದು ಎನ್ನುತ್ತಾರೆ ಶ್ರೀ ಸಿದ್ಧಲಿಂಗೇಶ್ವರರು. “ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯವಾಗದಿರ್ದಡೆ…” ಎಂಬ ವಚನವನ್ನೇ ಕೆಲವರು ಮುಂದು ಮಾಡಿ, ರೇಣುಕರು ಲಿಂಗೋದ್ಭವರು ಎಂಬುದನ್ನು ಶ್ರೀ ಸಿದ್ಧಲಿಂಗೇಶ್ವರರೇ ಒಪ್ಪಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಆದರೆ ಈ ವಚನದಲ್ಲಿ ಬಸವಣ್ಣನವರು ಲಿಂಗೋದ್ಭವರೇ ಎಂದು ಕರೆದಿರುವುದು ಇವರ ಮೊಂಡು ವಾದಕ್ಕೆ ಬೆಲೆಯಿಲ್ಲದಂತಾಗಿದೆ. ಈ ವಚನ ಕೂಡ ಐತಿಹಾಸಿಕವೇ ಆಗಿದೆ. ಇಲ್ಲಿ ಬಸವ-ಚನ್ನಬಸವ-ಅಲ್ಲಮರ ಜೊತೆಗೆ ನೀಲಲೋಚನೆಯವರ ಹೆಸರೂ ಕೂಡ ಪ್ರಸ್ತಾಪವಾಗಿದೆ. ಇನ್ನೂ ವಿಶೇಷವೆಂದರೆ ಏಳು ನೂರು ಎಪ್ಪತ್ತು ಅಮರಗಣಂಗಳ ಎಂಬ ಶಬ್ದವೂ ಮುಖ್ಯವಾಗಿದೆ. ಬಸವಣ್ಣನವರ ಕಾಲದಲ್ಲಿ ಇಷ್ಟು ಜನ ಅಮರ ಗಣಂಗಳು ಇದ್ದರೆಂಬುದಕ್ಕೆ ಸಿದ್ಧಲಿಂಗೇಶ್ವರರ ವಚನ ಸಾಕ್ಷಿಯಾಗಿದೆ. ಈ ಶರಣ ಸಮೂಹವೆಲ್ಲ ಬೇರೆಯಲ್ಲ; ಪರಶಿವ ಬೇರೆಯಲ್ಲ. ಎರಡೂ ಒಂದೇ. ಹಾಲಿನಲ್ಲಿ ಹಾಲು ಬೆರೆತಂತೆ, ನೀರಿನಲ್ಲಿ ನೀರು ಬೆರೆತಂತೆ, ತುಪ್ಪದಲ್ಲಿ ತುಪ್ಪ ಬೆರೆದಂತೆ ಇವರೆಲ್ಲ ಪರಶಿವತತ್ವದಲ್ಲಿ ಅಡಗಿ ಮಹಾಲಿಂಗದ ಸ್ವರೂಪವೇ ಆಗಿದ್ದಾರೆ. ಇದನ್ನು ನಂಬದಿರುವುದು ನಿಮ್ಮ ಕರ್ಮದ ಫಲ ಎಂದು ಶ್ರೀ ಸಿದ್ಧಲಿಂಗೇಶ್ವರರು ಲೋಕದ ಮಾನವರನ್ನು ವಿಡಂಬಿಸುತ್ತಾರೆ.
ಆದಿಪಿಂಡ ಮಧ್ಯಪಿಂಡ ಅನಾದಿಪಿಂಡವೆಂದು
… … … … … … … … … … …
… … … … … … … … … … …
ಆ ಲೋಹದ ಗುಣ ಕೆಟ್ಟು ಚಿನ್ನವಾದಂತೆ,
ಆ ಶರಣರು ಬಂದು ಆ ಲಿಂಗವ ಸೋಂಕಲಾಗಿ,
ಆ ಪಂಚಭೂತದ ಪ್ರಕೃತಿಕಾಯ ಹೋಗಿ, ಪ್ರಸಾದಕಾಯವಾಗಿತ್ತಾಗಿ,
ಇದು ಕಾರಣ, ಬಸವ ಮೊದಲಾದ ಪ್ರಮಥರು
ಧರಿಸಿದ ಶರೀರವೆಲ್ಲ
ಸುಜ್ಞಾನಪಿಂಡವೆಂದು ಹೇಳಲ್ಪಟ್ಟಿತ್ತು.
… … … … … … … … … … …
… … … … … … … … … … …
ಚಿದ್ಭನಲಿಂಗಕ್ಕೆ ಚಿದ್ಭಾಂಡಸ್ಥಾನವಾಗಿದ್ದಂಥದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-41/ವಚನ ಸಂಖ್ಯೆ-79)
ಆದಿಪಿಂಡ, ಮಧ್ಯಪಿಂಡ, ಅನಾದಿಪಿಂಡ ಎಂದು ಮೂರು ಪ್ರಕಾರದ ಪಿಂಡ ಸ್ವರೂಪ ಹೇಳಲಾಗಿದೆ. ಆದಿಪಿಂಡವೇ ಜೀವ ಪಿಂಡ ಎನಿಸಿದರೆ, ಮಧ್ಯಪಿಂಡ ಸುಜ್ಞಾನ ಪಿಂಡವಾಗಿದೆ. ಅನಾದಿ ಪಿಂಡವೇ ಜೀವಪಿಂಡವೆನಿಸಿದೆ. ಅಷ್ಟತನುಮೂರ್ತಿಗಳಿಂದ ಈ ಪಿಂಡಗಳು ಉತ್ಪತ್ತಿಯಾದವು. ಅಂದಿನಿಂದ ಈ ಭೂಲೋಕದಲ್ಲಿ ಶಿವಕೃಪೆಯಿಂದ ಭವಕಲ್ಪಿತವನ್ನೆಲ್ಲ ತ್ಯಜಿಸಿ, ಶಿವವಾಸನಾ ಪಿಂಡಸ್ವರೂಪವನ್ನು ಅಂಗೀಕರಿಸಿ ಜೀವ ಪಿಂಡವಾಗಿ, ಸುಜ್ಞಾನಪಿಂಡವಾಗಿ ಪರವಸ್ತುವಿನ ಚಿದಂಶವೇ ಸಾಕಾರವಾಗಿ ಈ ಮರ್ತ್ಯಲೋಕದಲ್ಲಿ ಜಗದ್ದಿತಾರ್ಥಕಾರಣವಾಗಿ ಹುಟ್ಟಿತು. ಹೀಗೆ ಶರೀರ ಸಂಬಂಧ ಇಟ್ಟುಕೊಂಡು ಜನಿಸಿದರೂ ಆ ಶರೀರದ ಗುಣಧರ್ಮ ಕರ್ಮಗಳನ್ನು ಹೊದ್ದಿಯೂ ಹೊದ್ದಂತೆ ಇರುವ ಸ್ಥಿತಿಯನ್ನು ಪಡೆದಿತ್ತು. ಕಾರಣ ಚಿತ್ತುವಿನ ಅಂಶಿಕವಾದ್ದರಿಂದ ಬೆಂಕಿ ಬಂದು ಕರ್ಪೂರ ಮುಟ್ಟಿದಾಗ, ಕರ್ಪೂರ ತನ್ನ ಗುಣವನ್ನೆಲ್ಲ ಸುಟ್ಟು ಉರಿಯೇ ಆಗಿ ಪರಿಣಮಿಸುವಂತೆ, ಪರುಷಮಣಿ ಮುಟ್ಟಲು ಕಬ್ಬಿಣ ಬಂಗಾರವಾಗುವಂತೆ, ಶರಣರು ದೇಹಧಾರಿಗಳಾಗಿ ಈ ಲೋಕಕ್ಕೆ ಬಂದು ಲಿಂಗವನ್ನು ಧರಿಸಿದಾಕ್ಷಣ ಅವರು ಪಂಚಭೂತ ಪ್ರಕೃತಿಕಾಯದಿಂದ ಮುಕ್ತರಾಗಿ ಪ್ರಸಾದಕಾಯರಾಗಿ ಪರಿಣಮಿಸಿದರು. ಆದ್ದರಿಂದ ಬಸವಣ್ಣನವರು ಮೊದಲಾದ ಪ್ರಮಥರು ಧರಿಸಿದ ಶರೀರವೆಲ್ಲ ಸುಜ್ಞಾನಪಿಂಡವೆನಿಸಿ ಇಡೀ ಪಂಚಭೂತಗಳನ್ನೇ ಪವಿತ್ರ ಮಾಡುವ ಸಲುವಾಗಿ ಧರಿಸಿದ ಪಿಂಡವಾಯಿತೇ ಹೊರತು ಇದು ವಾಸನಾಧರ್ಮದ ಪಿಂಡವಲ್ಲ ಎನ್ನುತ್ತಾರೆ ಸಿದ್ಧಲಿಂಗೇಶ್ವರರು. ಬಸವಾದಿ ಶಿವಶರಣರು ಕೇವಲ ದೇಹಧಾರಿಗಳು, ವಾಸನಾಪಿಂಡ ಧರಿಸಿದವರು ಎಂದು ಹೇಳುವುದು ತೀರ ಅಜ್ಞಾನ ಎನ್ನುತ್ತಾರೆ.
ಮರವೆಯ ತಮವ ಕಳೆಯಯ್ಯ.
ಅರುಹಿನ ಜ್ಯೋತಿಯ ಬೆಳಗಯ್ಯ.
ಅರುಹಿನ ಜ್ಯೋತಿಯ ಬೆಳಗಿ,
ನಿಮ್ಮ ಕುರುಹ ಕಂಡು ಕೂಡುವ
ತುರ್ಯಾವಸ್ಥೆಯ ಸುಖವನೆ ಕೊಡು ಕಂಡಾ ಮಹಾಲಿಂಗ ತಂದೆ.
ಕೊಡದಿರ್ದಡೆ ನಿನಗೆ ಪ್ರಮಥರಾಣೆ, ಬಸವಣ್ಣನಾಣೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-49/ವಚನ ಸಂಖ್ಯೆ-101)
ಪರಮಾತ್ಮನಿಗೂ ಬಸವಣ್ಣನವರ ಆಣೆ ಇಡುತ್ತಿದ್ದಾರೆ ಶ್ರೀ ಸಿದ್ಧಲಿಂಗೇಶ್ವರರು. ಪರಮಾತ್ಮನೇ ನನ್ನಲ್ಲಿರುವ ಮರವೆಯ ಕತ್ತಲೆಯನ್ನು ಕಳೆ, ಅರಿವಿನ ಜ್ಯೋತಿ ಬೆಳಗು, ಆ ಜ್ಯೋತಿಯ ಬೆಳಗಿನಲ್ಲಿ ನಿಮ್ಮ ಕುರುಹು ಕಾಣುವಂತೆ ಮಾಡು, ತುರ್ಯಾವಸ್ಥೆಯ ಸುಖವನ್ನು ಕೊಡು ತಂದೆ. ನೀನು ಇದನ್ನೆಲ್ಲ ಕೊಡದಿದ್ದರೆ ನಿನಗೆ ಪ್ರಮಥರ ಆಣೆ, ಬಸವಣ್ಣನಾಣೆ ಎಂದು ಹೇಳಿ, ಪರಮಾತ್ಮನಿಗೂ ಬಸವಣ್ಣನವರ ಹೆಚ್ಚುಗಾರಿಕೆಯನ್ನು ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ.
ಕಾಲನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ;
ಕಾಮನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ;
ತನುತ್ರಯಂಗಳೆಂಬ ತ್ರಿಪುರವ
ಚಿತ್ಶಿಖಿಯೆಂಬ ಜ್ಞಾನಾಗ್ನಿಯಿಂದ ದಹಿಸಿದ ಭಸ್ಮವ
ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ;
ಸಂಚಿತ ಪ್ರಾರಬ್ಧ ಆಗಾಮಿಯೆಂಬ ಕರ್ಮತ್ರಯಂಗಳ ದಹಿಸಿದ ಭಸ್ಮವ
ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಸತ್ವ ರಜ ತಮಂಗಳ ಸುಟ್ಟುರುಹಿದ ಭಸ್ಮವ
ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳ ದಹಿಸಿದ ಭಸ್ಮವ
ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಜೀವಭಾವ ಇಂದ್ರಿಯಭಾವ ವಿಷಯಭಾವ ಭೂತಭಾವ
ಜನನಭಾವ ಬೀಜಭಾವವೆಂಬ ಭವಾಶ್ರಯವ
ಜ್ಞಾತೃ ಜ್ಞಾನ ಜ್ಞೇಯವೆಂಬ
ತ್ರಿಪುಟಿಯೇಕಾರ್ಥವಾದ ಅಗ್ನಿಯಿಂದ ಸುಟ್ಟುರುಹಿದ ಭಸ್ಮವ
ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಸ್ವರ್ಗ ಮರ್ತ್ಯಪಾತಾಳಕ್ಕೆ ಆಧಾರಸ್ಥಾನವೇ ಚಿತ್ತು.
ಆ ಚಿತ್‌ಸ್ವರೂಪವೇ ಬಸವಣ್ಣ.
ಇದು ಕಾರಣ ಚಿದ್ವಿಭೂತಿಯನೆ ಸದಾಕಾಲದಲ್ಲಿ ಧರಿಸಿ,
ಶುದ್ಧ ಚಿದ್ರೂಪನಾಗಿರ್ದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-86/ವಚನ ಸಂಖ್ಯೆ-131)
ಸಿದ್ಧಲಿಂಗೇಶ್ವರರು ಈ ವಚನದಲ್ಲಿ ವಿಭೂತಿ ಮತ್ತು ಬಸವಣ್ಣನವರ ಮಹಿಮೆಗಳನ್ನು ಏಕಾರ್ಥಗೊಳಿಸಿ ಶ್ಲೇಷೆಯ ರೀತಿಯಲ್ಲಿ ವಿವರಿಸುತ್ತಿರುವುದು ತುಂಬ ಔಚಿತ್ಯಪೂರ್ಣವಾಗಿದೆ. ಯಾವ ಯಾವ ರೀತಿಯ ಭಸ್ಮವನ್ನು ಧರಿಸಿದೆ ಎನ್ನುವುದರ ಸುದೀರ್ಘ ವಿವರಣೆ ಇಲ್ಲಿದೆ. ಕಾಲ ಮತ್ತು ಕಾಮ ಎರಡೂ ಮನುಷ್ಯನ ಅವನತಿಯ ಸಂಕೇತಗಳು. ಇವೆರಡನ್ನು ಸುಟ್ಟು ಭಸ್ಮ ಧರಿಸಿಕೊಂಡೆ ಎನ್ನುತ್ತಾರೆ. ಭಾರತೀಯರನ್ನು ಮೂಢರನ್ನಾಗಿಸಿದ ತತ್ವಗಳಲ್ಲಿ ಕರ್ಮಸಿದ್ಧಾಂತವೂ ಒಂದು. ಈ ಕರ್ಮಸಿದ್ಧಾಂತವನ್ನು ಮೂರು ಬಗೆಯಾಗಿ ಹೇಳುತ್ತಾರೆ. ಸಂಚಿತಕರ್ಮ, ಪ್ರಾರಬ್ಧಕರ್ಮ ಮತ್ತು ಆಗಾಮಿಕರ್ಮ. ಸಮಸ್ತ ಮಾನವಕುಲವನ್ನು ಕತ್ತಲೆಯಲ್ಲಿಟ್ಟ ಈ ಮೂರು ಬಗೆಯ ಕರ್ಮಸಿದ್ಧಾಂತದ ಮೊಂಡುವಾದವನ್ನು ಸುಟ್ಟುಹಾಕಿ ಭಸ್ಮಧರಿಸಿದೆ ಎನ್ನುತ್ತಾರೆ. ಆಣವ, ಮಾಯಾ, ಕಾರ್ಮಿಕ ಎನ್ನುವ ಮಲತ್ರಯಗಳನ್ನು ದಹಿಸಿದೆ, ಜೀವ ನನ್ನದು, ಇಂದ್ರಿಯಗಳು ನನ್ನವು, ವಿಷಯಗಳು ನನ್ನವು ಎಂಬ ಭಾವ ಭೇದವನ್ನು ಸುಟ್ಟು ಹಾಕಿದೆ, ಜ್ಞಾತೃ (ತಾನು), ಜ್ಞಾನ (ತನ್ನರಿವು), ಜ್ಞೇಯ (ಶಿವತತ್ವ) ಈ ಮೂರು ಏಕಾರ್ಥವಾದ ಬೆಂಕಿಯಿಂದ ಸುಟ್ಟು ಬೆಳಗಿದ ಭಸ್ಮವ ಧರಿಸಿದೆ ಬಸವಣ್ಣ ನಿಮ್ಮಿಂದ ಎನ್ನುತ್ತಾರೆ. ಏಕೆಂದರೆ ಸ್ವರ್ಗ, ಮರ್ತ್ಯ, ಪಾತಾಳಕ್ಕೆ ಆಧಾರವಾದುದು ಚಿತ್‌ಸ್ವರೂಪನಾದ ಪರಮಾತ್ಮ. ಆ ಚಿತ್‌ಸ್ವರೂಪ ಅಥವಾ ಪರಮಾತ್ಮನ ಸ್ವರೂಪ ಬಸವಣ್ಣ. ಹೀಗಾಗಿ ಬಸವಣ್ಣನವರು ಕೊಟ್ಟ ಭಸ್ಮವನ್ನು ಸದಾವಕಾಲ ಧರಿಸಿ ಶುದ್ಧ ಚಿತ್ರೂಪನಾದೆ ಎಂದು ವಿನಮ್ರಭಾವದಿಂದ ಬಸವಣ್ಣನವರ ಘನತೆಯನ್ನು ಸಿದ್ಧಲಿಂಗೇಶ್ವರರು ಕೊಂಡಾಡುತ್ತಾರೆ.
ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ
ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ
ಪರಕೆ ಪರವಾದ ಪರಾಪರವು ತಾನೆ ನೋಡಾ.
ಆ ಪರಾಪರವು ತಾನೆ
ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ, ಪರಿಪೂರ್ಣನಾಗಿ,
ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ
ಅಕಳಂಕನು ನೋಡಾ.
ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ
ಅದ್ವಯನು ನೋಡಾ.
ನವಚಕ್ರಾಂಬುಜಗಳ ದಳ ಕುಳ ವರ್ಣಾದಿ ದೇವತೆಗಳ
ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ
ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು.
ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ.
ಆ ಚಿದದ್ವಯವಾದ ಬಸವಣ್ಣನೇ
ಎನ್ನ ಅಂಗಲಿಂಗ, ಎನ್ನ ಪ್ರಾಣಲಿಂಗ, ಎನ್ನ ಭಾವಲಿಂಗ,
ಎನ್ನ ಸರ್ವಾಂಗಲಿಂಗವು ಕಾಣಾ.
ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು
ಬಸವಣ್ಣನಾದ ಕಾರಣ,
ಬಸವಲಿಂಗ ಬಸವಲಿಂಗ ಬಸವಲಿಂಗಾಯೆಂದು ಜಪಿಸಿ
ಭವಾರ್ಣವ ದಾಂಟಿದೆನು ಕಾಣಾ,
ಬಸವಣ್ಣನೇ ಪತಿಯಾಗಿ, ನಾನೇ ಸತಿಯಾಗಿ ಶರಣನಾದೆನು ಕಾಣಾ.
ಬಸವನೇ ಲಿಂಗವಾದ ಕಾರಣ ನಾನಂಗವಾದೆನು.
ಕರ್ತೃವೇ ಬಸವಣ್ಣ, ಭೃತ್ಯನೇ ನಾನು.
ಒಡೆಯನೇ ಬಸವಣ್ಣ, ಬಂಟನೇ ನಾನಾದ ಕಾರಣ
ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ.
ಇದು ಕಾರಣ,
ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ,
ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ.
ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ
ನಾನು ಶರಣನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-215/ವಚನ ಸಂಖ್ಯೆ-478)
ಏಳು ವಿಧದ ಬ್ರಹ್ಮಚಕ್ರದಲ್ಲಿ ಉದಯವಾದ ಸ್ವಯಂಜ್ಯೋತಿಯು, ಮೂವತ್ತಾರು ತತ್ವಗಳಿಂದ ವ್ಯಾಪಿಸಿಕೊಂಡಿರುವಂತಹ ಪರಿಪೂರ್ಣನಾಗಿ ಕೂಡಿಯೂ ಕೂಡದಂತಹ, ಮುಟ್ಟಿಯೂ ಮುಟ್ಟದಂತಹ, ಕಳಂಕರಹಿತನು ನಿಃಕಲ ಪರಬ್ರಹ್ಮ ಸ್ವರೂಪನು. ಒಂಬತ್ತು ಚಕ್ರಗಳ ಸಮೂಹಗಳು, ನವದಳಗಳು, ನವವಿಧ ವರ್ಣಗಳು, ನವವಿಧ ಅಧಿದೇವತೆಗಳ ಸಾಕಾರ ಮಾಯಾ ರಂಜನೆಯಿಲ್ಲದ ಪರಶಿವ ಲಿಂಗವು. ಲಿಂಗಾಯತ ಸಾಧಕನು ತನ್ನ ಸಾಧನೆಯ ಹಾದಿಯಲ್ಲಿ ಸಾಗುವಾಗ ತ್ರಿಲಿಂಗೋಪಾಸನೆ ಮಾಡುತ್ತಾನೆ. ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗ ಎಂದು ತ್ರಿವಿಧ ರೀತಿಯ ಲಿಂಗಸಂಬಂಧ ಉಂಟಾಗುವುದು. ಈ ಸರ್ವಾಂಗಲಿಂಗ ಸ್ವರೂಪವೇ ಬಸವಣ್ಣನವರು. ಅಂತೆಯೆ ಅವರು ಷಡಕ್ಷರ ಮಂತ್ರ ಸ್ವರೂಪರಾಗಿದ್ದಾರೆ. ಬಸವಲಿಂಗ ಎಂಬುದು ಮಂತ್ರವಾಗಿದೆ. ಬಸವಲಿಂಗ ಎಂಬ ಷಡಕ್ಷರವೇ ಮಂತ್ರವಾಗಿರುವುದರಿಂದ ಅದನ್ನು ನಿತ್ಯ ಜಪಿಸಿ, ಈ ಭವವನ್ನು ಗೆದ್ದೆ ಎನ್ನುತ್ತಾರೆ ಶ್ರೀ ಸಿದ್ಧಲಿಂಗೇಶ್ವರರು. ಲಿಂಗಾಯತ ಧರ್ಮವು ಶರಣಸತಿ-ಲಿಂಗಪತಿ ಭಾವನೆಯುಳ್ಳ ಪರಿಕಲ್ಪನೆ ಹೊಂದಿದೆ. ಇಲ್ಲಿ ಬಸವಣ್ಣ ಲಿಂಗ ರೂಪದ ಪತಿಯಾಗಿ, ತಾನು ಸತಿಯಾದೆ ಎನ್ನುತ್ತಾರೆ. ನಾನು ಅಂಗ-ಬಸವಣ್ಣ ಲಿಂಗ, ಕರ್ತೃ ಬಸವಣ್ಣ, ನಾನು ಅವನ ಭೃತ್ಯ, ಒಡೆಯ ಬಸವಣ್ಣ-ನಾನು ಸೇವಕ, ನಾನು ದೇಹವನ್ನು ಹೊಂದಿದ್ದರೂ ದೇಹದೊಳಗಿನ ಜೀವಚೈತನ್ಯ ಬಸವಣ್ಣನವರೇ ಆಗಿದ್ದಾರೆ. ನಡೆ-ನುಡಿ ಒಂದಾಗಿ ಬದುಕಿದ ಬಸವಣ್ಣನವರು ಸರ್ವಚೈತನ್ಯಾತ್ಮಕ ಸ್ವರೂಪರಾಗಿದ್ದಾರೆ. ಇಂತಹ ಬಸವಣ್ಣನವರ ಪದತಲದಲ್ಲಿ ನಾನು ಶರಣಾಗುವೆ ಎಂಬ ವಿನೀತ ಭಾವ ಇಲ್ಲಿದೆ.
ಹೆಣ್ಣಿನ ರೂಪು ಕಣ್ಣಿಗೆ ರಮ್ಯವಾಗಿ ತೋರುವದಿದು
ಕರಣಂಗಳ ಗುಣ ಕಾಣಿರಣ್ಣಾ.
ಕರಣದ ಕತ್ತಲೆಯ ಲಿಂಗದ ಬೆಳಗನುಟ್ಟು ಕಳೆದು
ಮುಕ್ಕಣ್ಣನೇ ಕಣ್ಣಾಗಿಪ್ಪ ಶರಣ ಬಸವಣ್ಣನ ಪಾದವ ತೋರಿಸಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-223/ವಚನ ಸಂಖ್ಯೆ-494)
ಘನ ವೈರಾಗ್ಯ ಚಕ್ರವರ್ತಿಗಳಾದ ಸಿದ್ಧಲಿಂಗೇಶ್ವರರು ತಮ್ಮ ವೈರಾಗ್ಯಕ್ಕೆ ಮುಳುವಾದ ಕರಣಗಳನ್ನು ನಿಯಂತ್ರಿಸುವ ಬೆಳಗು ಲಿಂಗವಾಗಿದೆ. ಆ ಲಿಂಗಕ್ಕೆ ಕಣ್ಣಾಗಿರುವರು ಬಸವಣ್ಣನವರು. ಅಂತಹ ಪರಮಗುರು ಬಸವಣ್ಣನವರ ಪಾದವನ್ನು ತೋರಿ ಬದುಕಿಸು ಎಂದು ಪ್ರಾರ್ಥಿಸುತ್ತಾರೆ.
ಕಾಯಕ್ಕಾಧಾರ ಭಕ್ತ. ಜೀವಕ್ಕಾಧಾರ ಭಕ್ತ.
ಕರಣಕ್ಕಾಧಾರ ಭಕ್ತ. ಲಿಂಗಕ್ಕಾಧಾರ ಭಕ್ತ.
ಜಂಗಮಕ್ಕಾಧಾರ ಭಕ್ತ. ಪ್ರಸಾದಕ್ಕಾಧಾರ ಭಕ್ತ.
ಶಕ್ತಿಗಾಧಾರ ಭಕ್ತ. ಭಕ್ತಿಗಾಧಾರ ಭಕ್ತ.
ಎನಗಾಧಾರ ಭಕ್ತ. ನಿನಗಾಧಾರ ಭಕ್ತ.
ನಾನು ನೀನೆನ್ನದೆ ನಿರವಯ ನಿರ್ಮಾಯನಯ್ಯ ಭಕ್ತನು
ಇಂತಪ್ಪ ಭಕ್ತ ಸಂಗನಬಸವಣ್ಣನ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-227/ವಚನ ಸಂಖ್ಯೆ-508)
ಅನುಭವ ಮಂಟಪದಲ್ಲೊಮ್ಮೆ ಪ್ರಭುದೇವರು:
“ಬಸವ ಬಾರೈ, ಮರ್ತ್ಯಲೋಕದೊಳಗೆ ಭಕ್ತರುಂಟೆ? ಹೇಳಯ್ಯಾ”
“ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ.
ನಾನೊಬ್ಬನೆ ಭಕ್ತನು, ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮ,
ಲಿಂಗ ನೀನೆ ಅಯ್ಯಾ” ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-252/ವಚನ ಸಂಖ್ಯೆ-894)
“ಬಸವ ಬಾರಯ್ಯ ಮರ್ತ್ಯಲೋಕದಲ್ಲಿ ಮತ್ತೆ ಭಕ್ತರುಂಟೆ?” ಎಂದು ಕೇಳುತ್ತಾರೆ. ಆಗ ಬಸವಣ್ಣನವರು “ಮತ್ತಾರು ಇಲ್ಲ, ಮತ್ತಾರು ಇಲ್ಲ, ನಾನೊಬ್ಬನೆ ಭಕ್ತ” ಎಂದು ಹೇಳುತ್ತಾರೆ. ಭಕ್ತಸ್ಥಲದಿಂದ ಪರಮಾತ್ಮನಲ್ಲಿ ಐಕ್ಯನಾಗುವವರೆಗಿನ ಷಟ್ಸ್ಥಲ ಸಿದ್ಧಾಂತದಲ್ಲಿ ಭಕ್ತನಿಗೆ ತುಂಬ ಪ್ರಾಮುಖ್ಯತೆ ಇದೆ. ಈ ಭಕ್ತ ಎಂಬ ಶಬ್ದಕ್ಕೆ ವ್ಯಾಖ್ಯಾನವಾಗಿ ಬದುಕಿದವರು ಬಸವಣ್ಣನವರು. ಭಕ್ತನೆಂದರೆ ಬಸವಣ್ಣನವರೊಬ್ಬರೆ ಎನ್ನುವಷ್ಟರ ಮಟ್ಟಿಗೆ ಅವರು ಭಕ್ತರಾಗಿ ಲೋಕದಲ್ಲಿ ಗೋಚರಿಸಿದವರು. ಇಂತಹ ಪರಮಭಕ್ತ ಸಂಗನಬಸವಣ್ಣನ ಶ್ರೀಚರಣದಲ್ಲಿ ಭ್ರಮರನಾಗಿ ಕಾಲ ಕಳೆಯುವ ಎಂದು ಶ್ರೀ ಸಿದ್ಧಲಿಂಗೇಶ್ವರರು ಹೇಳುತ್ತಾರೆ.
ಬಸವಣ್ಣನ ಪ್ರಸಾದದಿಂದ ಭಕ್ತಿಜ್ಞಾನ ವೈರಾಗ್ಯ ಸಂಪನ್ನನಾದೆನಯ್ಯ.
ಚೆನ್ನಬಸವಣ್ಣನ ಪ್ರಸಾದದಿಂದ ಷಟ್‌ಸ್ಥಲಜ್ಞಾನಸಂಪನ್ನನಾದೆನಯ್ಯ.
ಪ್ರಭುದೇವರ ಪ್ರಸಾದದಿಂದ ಪರಶಿವತತ್ವ ಸ್ವರೂಪವೇ
ಎನ್ನ ಸ್ವರೂಪವೆಂದರಿದು
ಸಮಸ್ತ ಸಂಸಾರಪ್ರಪಂಚ ಕೊಡಹಿದೆನು ನೋಡಾ.
ನೀಲಲೋಚನೆಯಮ್ಮನ ಪ್ರಸಾದದಿಂದ ನಿಜಲಿಂಗೈಕ್ಯನಾದೆನಯ್ಯ.
ಮಹಾದೇವಿಯಕ್ಕಗಳ ಪ್ರಸಾದದಿಂದ
ಸುತ್ತಿದ ಮಾಯಾಪಾಶವ ಹರಿದು ನಿರ್ಮಾಯನಾಗಿ
ನಿರ್ವಾಣಪದದಲ್ಲಿ ನಿಂದೆನಯ್ಯ.
ಸಿದ್ಧರಾಮಯ್ಯನ ಪ್ರಸಾದದಿಂದ
ಶುದ್ಧ ಶಿವತತ್ವವ ಹಡೆದೆನಯ್ಯ.
ಮೋಳಿಗೆಯ ಮಾರಿತಂದೆಗಳ ಪ್ರಸಾದದಿಂದ
ಕಾಯದ ಕಳವಳನಳಿದು ಕರ್ಮನಿರ್ಮಲನಾಗಿ
ವೀರಮಾಹೇಶ್ವರನಾದೆನು ನೋಡಾ.
ಇವರು ಮುಖ್ಯವಾದ ಏಳುನೂರೆಪ್ಪತ್ತಮರಗಣಂಗಳ
ಪರಮಪ್ರಸಾದದಿಂದ
ಎನ್ನ ಕರಣಂಗಳೆಲ್ಲವು ಲಿಂಗಕರಣಂಗಳಾಗಿ
ಕರಣೇಂದ್ರಿಯಂಗಳ ಕಳೆದುಳಿದು
ಇಂದ್ರಿಯಂಗಳಿಗೆ ನಿಲುಕದ ಸ್ಥಾನದಲ್ಲಿರ್ದು
ಪರಮಾನಂದ ಪ್ರಭಾಮಯನಾಗಿರ್ದೆನು ನೋಡಾ.
ನಿಮ್ಮ ಶರಣರ ಪ್ರಸಾದದಿಂದ ನಾನು
ಪ್ರಸಾದಿಯಾಗಿರ್ದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-242/ವಚನ ಸಂಖ್ಯೆ-537)
ಬಸವಾದಿ ಪ್ರಮಥರಿಂದ ತಾವು ಏನನ್ನು ಪಡೆದುಕೊಂಡೆವು ಎಂಬುದನ್ನು ಸಿದ್ಧಲಿಂಗೇಶ್ವರರು ಮೇಲಿನ ವಚನದಲ್ಲಿ ವಿಸ್ತಾರವಾಗಿ ನಿವೇದಿಸಿದ್ದಾರೆ. ಬಸವಣ್ಣನವರ ಪ್ರಸಾದದಿಂದ ಭಕ್ತಿ-ಜ್ಞಾನ-ವೈರಾಗ್ಯ, ಚನ್ನಬಸವಣ್ಣನವರಿಂದ ಷಟ್‌ಸ್ಥಲಜ್ಞಾನ, ಪ್ರಭುದೇವರಿಂದ ಪರಶಿವತತ್ವ ಸ್ವರೂಪವೇ ತನ್ನ ಸ್ವರೂಪವೆಂಬುದನ್ನು ಅರಿತುಕೊಂಡೆ ಎನ್ನುತ್ತಾರೆ. ನೀಲಲೋಚನೆಯಮ್ಮನಿಂದ ನಿಜಲಿಂಗೈಕ್ಯಸ್ಥಿತಿ ಅರಿತುಕೊಂಡೆ. (ಬಸವಣ್ಣನವರು ಕೂಡಲಸಂಗಮಕ್ಕೆ ಬಂದ ನಂತರ, ತಮ್ಮ ಪತ್ನಿ ನೀಲಲೋಚನೆ ಯನ್ನು ಕರೆದುಕೊಂಡು ಬರಲು ಹಡಪದ ಅಪ್ಪಣ್ಣನವರನ್ನು ಕಳಿಸುತ್ತಾರೆ. ಆಗ ನೀಲಮ್ಮನವರು “ಅಲ್ಲಿರುವ ಲಿಂಗ ಇಲ್ಲಿಲ್ಲವೆ! ನೋಡು ನೋಡು ಲಿಂಗ” ಎಂಬ ಸ್ವರಪದವನ್ನು ಹಾಡಿ, ಅಲ್ಲಿಯೇ ಲಿಂಗೈಕ್ಯಪದವಿಯನ್ನು ಸಾಧಿಸುತ್ತಾರೆ ಎಂಬುದನ್ನು ಗಮನಿಸಬೇಕು) ಮಹಾದೇವಿಯಕ್ಕನಿಂದ ಮಾಯಾಪಾಶವನ್ನು ಹರಿದು, ನಿರ್ಮಾಯ ನಿರ್ವಾಣ ಪದವನ್ನು ಸಂಪಾದಿಸಿಕೊಂಡೆ. ಸಿದ್ಧರಾಮನಿಂದ ಶುದ್ಧ ಶಿವತತ್ವ, ಮೋಳಿಗೆ ಮಾರಿತಂದೆಗಳಿಂದ ದೇಹದ ಬಗೆಗಿನ ಕಳವಳತೆಯನ್ನು ಕಳೆದುಕೊಂಡು ಕರ್ಮ ನಿರ್ಮಲನಾಗಿ ವೀರಮಾಹೇಶ್ವರತ್ವ ಪಡೆದುಕೊಂಡೆ. ಬಸವ-ಚನ್ನಬಸವ-ಅಲ್ಲಮ-ಅಕ್ಕ-ಸಿದ್ಧರಾಮ, ಮಾರಿತಂದೆ ಇವರೆ ಮೊದಲಾದವರಲ್ಲದೆ ಏಳುನೂರು ಎಪ್ಪತ್ತು ಅಮರಗಣಂಗಳ ಪರಮ ಪ್ರಸಾದದ ಕಾರಣದಿಂದ ಎನ್ನ ಕರಣಗಳೆಲ್ಲವೂ ಲಿಂಗಕರಣ ಗಳಾಗಿ, ಪರಮಾನಂದ ಪಡೆದು, ತಾನು ಶುದ್ಧ ಪ್ರಸಾದಿಯಾದೆ ಎಂದು ಹೆಮ್ಮೆ ಮತ್ತು ಅಭಿಮಾನದಿಂದ ಶ್ರೀ ಸಿದ್ಧಲಿಂಗೇಶ್ವರರು ಇಲ್ಲಿ ವಿವರಿಸಿದ್ದಾರೆ.
ಆಜ್ಞಾಚಕ್ರದ ದ್ವಿದಳ ಪದ್ಮದಲ್ಲಿ ಅವಿರಳ ಸುಜ್ಞಾನ ಪೀಠದೊಳಗೆ
ಅಮೃತಮಯ ಲಿಂಗವ ಕಂಡೆನು ನೋಡಾ.
ಆ ಲಿಂಗ ಸಂಗದಿಂದ ಉತ್ಪತ್ತಿ ಸ್ಥಿತಿ ಪ್ರಳಯವ ಗೆಲಿದು
ನಿತ್ಯ ನಿರಂಜನ ಪ್ರಸಿದ್ಧ ಪ್ರಸಾದಿಯಾದೆನು ಕಾಣಾ.
ಆ ಪ್ರಸಿದ್ಧ ಪ್ರಸಾದವೆ ಒಂದೆರಡಾಗಿ ಎರಡು ಮೂರಾಗಿ
ಮೂರು ಆರಾಗಿ ಆರು ಮೂವತ್ತಾರಾಗಿ
ಮೂವತ್ತಾರು ಇನ್ನೂರಹದಿನಾರಾಗಿ
ಆ ಇನ್ನೂರ ಹದಿನಾರರ ಬೆಳಗು
ಪಿಂಡಾಂಡದಲ್ಲಿ ಪರಿಪೂರ್ಣವಾಗಿ ಸದಾ ಸನ್ನಿಹಿತವಾಗಿಪ್ಪುದು.
ನಿಮ್ಮ ಶರಣ ಸಂಗನ ಬಸವಣ್ಣ
ಮೊದಲಾದ ಪ್ರಮಥರಿಗೆ ಸಾಧ್ಯವಲ್ಲದೆ
ಅಜ ಹರಿ ಸುರ ಮನು ಮುನಿಗಳಿಗೆ
ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-243/ವಚನ ಸಂಖ್ಯೆ-541)
ಲಿಂಗಾಯತ ಸ್ಥಲಮೀಮಾಂಸೆಯನ್ನು ವಿವರಿಸುವ ಅಮೂಲ್ಯವಾದ ವಚನವಿದು. ದೇಹಾತ್ಮದೊಳಗಿನ ಲಿಂಗಸಂಗದಿಂದ ಜನನ ಮರಣಗಳೆಂಬ ಸೃಷ್ಟಿ ಸ್ಥಿತಿ ಲಯಗಳೆಂಬ ಪ್ರಳಯಗಳನ್ನು ಗೆದ್ದು ನಿತ್ಯ ನಿರಂಜನ ಸ್ವರೂಪವಾದ ಪ್ರಸಿದ್ಧ ಪ್ರಸಾದಿಯಾದೆ ಎನ್ನುತ್ತಾರೆ. ಈ ಪ್ರಸಾದ ತತ್ವವೇ ಒಂದು ಎರಡಾಗಿ, ಅಂದರೆ ಅಂಗ-ಲಿಂಗ ಎಂದು ಎರಡಾಗಿ, ಎರಡು ಮೂರಾಗಿ, ತ್ಯಾಗ-ಭೋಗ-ಯೋಗ ಮೂರಂಗ ಮೀರಿ ತ್ರಿವಿಧ ಲಿಂಗವಾಗಿ, ಮೂರು ಆರಾಗಿ-ಅಂದರೆ ಆರು ವಿಧದ ಲಿಂಗಗಳಾಗಿ, ಆ ಆರು ಲಿಂಗಗಳೇ ಮೂವತ್ತಾರು ತತ್ವಗಳಾಗಿ, ಅವೇ ವಿಸ್ತಾರವಾಗುತ್ತ 216 ಸ್ಥಲಗಳಾಗಿ ರೂಪಗೊಳ್ಳುತ್ತವೆ. ಈ ಸ್ಥಲಗಳ ಬೆಳಗಿನ ಬೆಳಗು ಬಸವಣ್ಣನವರಿಗೆ ಮಾತ್ರ ಅರ್ಥವಾಗುವಂತಹದು. ಬಸವಣ್ಣನವರಿಗೆ ಮಾತ್ರ ಈ ಸ್ಥಲತತ್ವಮೀಮಾಂಸೆಯನ್ನು ಅರಿತು ಆಚರಿಸುವಂತವ ಸಾಮರ್ಥ್ಯವಿರುವುದು. ಇದು ಅಜ-ಬ್ರಹ್ಮ, ಹರಿ-ನಾರಾಯಣ, ಸುರ-ದೇವೇಂದ್ರರನ್ನು ಒಳಗೊಂಡು, ಮನು-19 ಮನುಗಳು, ಮುನಿ-88 ಕೋಟಿ ಯಮಿಜನಂಗಳಿಗೆ ಗೋಚರವಾಗದ, ಪ್ರಮಾಣಿಸಲು ಸಾಧ್ಯವಾಗದ ಮಹಾಲಿಂಗಗುರುವಿನ ನಿಲುವನ್ನು ಬಸವಣ್ಣನವರೊಬ್ಬರೆ ಬಲ್ಲರು. ಅಂತೆಯೆ ಅವರು ನನಗೆ ಆದ್ಯರು ಎಂದು ಶ್ರೀ ಸಿದ್ಧಲಿಂಗೇಶ್ವರರು ಇಲ್ಲಿ ಪ್ರತಿಪಾದಿಸಿದ್ದಾರೆ.
ಶಿವಭಾವದಿಂದ ಆತ್ಮ ಹುಟ್ಟಿ
ಶಿವ ತಾನೆಂಬುಭಯವನಲಂಕರಿಸಿದನಾಗಿ
ಆತ್ಮಂಗೆ ಭಾವವೆಂಬ ಹೆಸರಾಯಿತ್ತು.
ಆತ್ಮನು ಆಕಾಸವ ಬಂದು ಕೂಡಿದಲ್ಲಿ
ಜ್ಞಾನವೆಂಬ ಹೆಸರಾಯಿತ್ತು.
ಆತ್ಮನು ವಾಯುವ ಬಂದು ಬೆರೆಸಿದಲ್ಲಿ
ಮನಸ್ಸೆಂಬ ಹೆಸರಾಯಿತ್ತು.
ಆತ್ಮನು ಅಗ್ನಿಯ ಬಂದು ಕೂಡಿದಲ್ಲಿ
ಅಹಂಕಾರವೆಂಬ ಹೆಸರಾಯಿತ್ತು.
ಆತ್ಮನು ಅಪ್ಪುವ ಬಂದು ಕೂಡಿದಲ್ಲಿ
ಬುದ್ಧಿಯೆಂಬ ಹೆಸರಾಯಿತ್ತು.
ಆತ್ಮನು ಪೃಥ್ವಿಯ ಬಂದು ಕೂಡಿದಲ್ಲಿ ಚಿತ್ತ ಪುಟ್ಟಿತ್ತಯ್ಯ.
ಚಿತ್ತವಾಚಾರಲಿಂಗವ ಧರಿಸಿಪ್ಪುದು.
ಬುದ್ಧಿ ಗುರುಲಿಂಗವ ಧರಿಸಿಪ್ಪುದು.
ಅಹಂಕಾರ ಶಿವಲಿಂಗವ ಧರಿಸಿಪ್ಪುದು.
ಮನಸ್ಸು ಜಂಗಮಲಿಂಗವ ಧರಿಸಿಪ್ಪುದು.
ಜ್ಞಾನ ಪ್ರಸಾದಲಿಂಗವ ಧರಿಸಿಪ್ಪುದು.
ಭಾವ ಮಹಾಲಿಂಗವ ಧರಿಸಿಪ್ಪುದು.
ಈ ಭೇದವನರಿದು ಲಿಂಗವ ಧರಿಸಬಲ್ಲರಾಗಿ
ನಿಮ್ಮ ಶರಣರು ಸರ್ವಾಂಗಲಿಂಗಿಗಳಯ್ಯ.
ಬಸವ, ಪ್ರಭು, ಚೆನ್ನಬಸವಣ್ಣ ಮೊದಲಾದ ವೀರಶಿವೈಕ್ಯರ
ಬಂಟರಬಂಟನಾಗಿರಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-249/ವಚನ ಸಂಖ್ಯೆ-547)
ಲಿಂಗಾಯತ ಸಿದ್ಧಾಂತವನ್ನು ಪೂರ್ಣಪ್ರಮಾಣದಲ್ಲಿ ಪ್ರತಿಪಾದಿಸಿ, ಅದನ್ನು ಆಚರಿಸಿ, ಅನುಷ್ಠಾನಕ್ಕೆ ತಂದು ಸರ್ವಾಂಗಲಿಂಗಗಳಾದ ಬಸವ-ಪ್ರಭು-ಚನ್ನಬಸವರ ಸೇವಕರ ಸೇವಕನಾಗಿ ನಾನು ಇರಲು ಬಯಸುವೆ ಎಂದು ಶ್ರೀ ಸಿದ್ಧಲಿಂಗೇಶ್ವರರು ಹೇಳಬೇಕಾದರೆ ಬಸವಾದಿ ಶಿವಶರಣರ ಘನತೆ ಎಷ್ಟು ಘನತರವಾಗಿತ್ತೆಂಬುದರ ಕಲ್ಪನೆ ನಮಗಾಗುವುದು.
ಶ್ರೀ ಸಿದ್ಧಲಿಂಗೇಶ್ವರರು ಬಸವಣ್ಣನವರನ್ನು ಸ್ಮರಿಸಿದಷ್ಟು ಉಳಿದ ಯಾವ ಆಚಾರ್ಯರನ್ನೂ ಸ್ಮರಿಸಿಕೊಂಡಿಲ್ಲ. ಹೀಗಿದ್ದೂ ಕೆಲವು ಆಚಾರ್ಯರು ಶ್ರೀ ಸಿದ್ಧಲಿಂಗೇಶ್ವರ ನಮ್ಮ ಭಕ್ತನಾಗಿದ್ದ ಎಂದು ಸುಳ್ಳು ಪ್ರತಿಪಾದಿಸುತ್ತ, ನಿರಂಜನ ವಿರಕ್ತ ಪರಂಪರೆಗೆ ಅಗೌರವ ತರುವ ಕಾರ್ಯ ಮಾಡುತ್ತಿದ್ದಾರೆ. ಇದು ನಿಜಕ್ಕೂ ದುರಂತದ ಸಂಗತಿ. ಶ್ರೀ ಸಿದ್ಧಲಿಂಗೇಶ್ವರರಿಗೆ ಆದರ್ಶವಾದುದು ಬಸವಾದಿ ಪ್ರಮಥರ ಮಾರ್ಗ. ಬಸವಣ್ಣ-ಚನ್ನಬಸವಣ್ಣ-ಅಲ್ಲಮರು ರೂಪಿಸಿದ ಸಲ್ಲಲಿತ ಸನ್ಮಾರ್ಗ. ಹೀಗಾಗಿ ಸಿದ್ಧಲಿಂಗೇಶ್ವರರು ಲಿಂಗಾಯತ ಸಂಸ್ಕೃತಿಯನ್ನು ಉನ್ನತೀಕರಿಸಿದ ಮಹಾತ್ಮರಲ್ಲಿ ಅಗ್ರಗಣ್ಯರಾಗಿದ್ದಾರೆ.
ಶ್ರೀ ಪ್ರಕಾಶ ಗಿರಿಮಲ್ಲನವರ,
ಐ. ಟಿ. ಐ ಕಾಲೇಜು,
ಶಿವಬಸವ ನಗರ,
ಬೆಳಗಾವಿ – 590 010
ಮೊಬೈಲ್ ಸಂ: 99021 30041
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in