ಒಂದೇ ಶರೀರದ ಇತ್ತಲೆಯಲ್ಲಿ ಒತ್ತಲೆಗೆ ವಿಷ ಹಾಕಿದರೆ? / ಡಾ. ಬಸವರಾಜ ಸಾದರ, ಬೆಂಗಳೂರು.

ಸಮಾಜವಾದ ಎಂಬ ಶಬ್ದವನ್ನು ಬಳಸದೆ, ಆ ಸಿದ್ಧಾಂತಕ್ಕೆ ಸಮರ್ಥ ಉದಾಹರಣೆಯಾಗಬಲ್ಲ, ಸಮತೆಯುಕ್ತ ಸಮಾಜದ ನಿರ್ಮಾಣಕ್ಕೆ ಮೊದಲು ಮಾಡಿದರು 12 ನೇಯ ಶತಮಾನದ ಶರಣರು. ಇದು ಚಾರಿತ್ರಿಕ ವಾಸ್ತವ. ಸರ್ವರ ಹಿತವನ್ನು ಸಮಾನ ನೆಲೆಯಲ್ಲಿ ಸಾಧಿಸ ಹೊರಟ ಅವರ ಕ್ರಿಯಾತ್ಮಕ ನಡೆ ಎಲ್ಲ ಕಾಲಕ್ಕೂ ಮಾದರಿಯಾಗುವಂಥದ್ದು. ‘ವ್ಯಕ್ತಿ ಹಿತದಲ್ಲಿಯೇ ಸಮಾಜದ ಹಿತವಿದೆ’ ಎಂಬ ಪ್ರಾಯೋಗಿಕ ಸಿದ್ಧಾಂತವನ್ನು ಅನುಸರಿಸುವುದರ ಜೊತೆಗೆ, ಏಕಕಾಲದಲ್ಲಿ ವ್ಯಕ್ತಿ ಮತ್ತು ಸಮುದಾಯ ಎರಡರ ಹಿತವನ್ನೂ ಸಾಧಿಸ ಹೊರಟ ಅವರ ಒಟ್ಟು ಉದ್ದೇಶ ‘ಸಕಲಜೀವಾತ್ಮರ ಲೇಸನ್ನೇ ಬಯಸು’ ವುದಾಗಿತ್ತು. 20 ನೇಯ ಶತಮಾನದಲ್ಲಿ ಇದನ್ನೇ ಗಾಂಧೀಜೀಯವರ ‘ಸರ್ವೋದಯ’ ಎಂಬ ಅನನ್ಯ (ಇದು ಜಾನ್ ರಸ್ಕಿನ್‌ರ ‘ಅನ್ ಟು ದಿ ಲಾಸ್ಟ್’ ಎಂಬ ಗ್ರಂಥದಿಂದ ಪ್ರಭಾವಿತವಾದದ್ದು) ಪರಿಕಲ್ಪನೆಯಾಗಿ ರೂಪಿಸಿ, ಅದನ್ನು ಕ್ರಿಯೆಯಲ್ಲಿ ತರಲು ಶ್ರಮಿಸಿದರು. ಇಂಥ ಸಿದ್ಧಾಂತವನ್ನು ಸಾಮುದಾಯಿಕ ಬದುಕಿನ ಪ್ರಗತಿಯ ಮಾರ್ಗವಾಗಿ ಅನ್ವಯಿಸಿಕೊಳ್ಳುವ ಇರಾದೆ ಮತ್ತು ಅದನ್ನು ಕಾರ್ಯಗತಗೊಳಿಸಿ, ಪ್ರಯೋಗ ಸತ್ಯವನ್ನಾಗಿ ಪ್ರಮಾಣೀಕರಿಸುವ ಅಪೇಕ್ಷೆ– ಈ ಎರಡೂ ಶರಣರ ಹೋರಾಟದ ಬಹು ಮುಖ್ಯ ಉದ್ದೇಶವಾಗಿದ್ದವು. ಹೀಗೆ ಸರ್ವರ ಹಿತವನ್ನು ಸಮಾನ ನೆಲೆಯಲ್ಲಿ ಸಾಧಿಸುವ ಅನನ್ಯ ಕ್ರಿಯಾತ್ಮಕ ಮಾರ್ಗವನ್ನೇ ಚೆನ್ನಬಸವಣ್ಣನ ಒಂದು ವಚನ ಅತ್ಯದ್ಭುತ ರೂಪಕದ ಮೂಲಕ, ಅರ್ಥವತ್ತಾಗಿ ಕಟ್ಟಿಕೊಡುತ್ತದೆ.

ಗಂಡಭೇರುಂಡನೆಂಬ ಪಕ್ಷಿಗೆ ತಲೆ ಎರಡು, ದೇಹವೊಂದು.
ಒಂದು ತಲೆಯಲ್ಲಿ ಹಾಲನೆರೆದು, ಒಂದು ತಲೆಯಲ್ಲಿ ವಿಷವನೆರೆದಡೆ,
ಆ ಪಕ್ಷಿಗೆ ಮರಣವಲ್ಲದೆ ಜಯವಪ್ಪುದೆ ಅಯ್ಯಾ?
ಲಿಂಗವ ಪೂಜಿಸಿ ಜಂಗಮವ ಮರೆದಡೆ
ಕುಂಭಿನೀನರಕ ತಪ್ಪದು ಕಾಣಾ, ಕೂಡಲಚೆನ್ನಸಂಗಮದೇವಯ್ಯಾ.
(ಸಮಗ್ರ ವಚನ ಸಂಪುಟ-2016 / ಪುಟ ಸಂಖ್ಯೆ-431 / ವಚನ ಸಂಖ್ಯೆ-1181)

ಎರಡು ತಲೆಗಳಿರುವ ಮತ್ತು ಒಂದೇ ಶರೀರವನ್ನು ಹೊಂದಿರುವ ಗಂಡಭೇರುಂಡ ಪಕ್ಷಿಯೊಂದು ಇದೆಯೆಂಬ ನಂಬಿಕೆ ನಮ್ಮಲ್ಲಿದೆ. (ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆ ಈ ಪಕ್ಷಿಯನ್ನೇ ತನ್ನ ಲೋಗೋದಲ್ಲಿ ಸಂಕೇತವನ್ನಾಗಿಸಿದೆ) ಈ ಪಕ್ಷಿ ಇದೆಯೋ, ಇಲ್ಲವೋ? ಅಥವಾ ಅದೊಂದು ಕಲ್ಪನೆಯೋ, ಕವಿಸಮಯವೋ? ಎಂಬ ಜಿಜ್ಞಾಸೆಗಿಂತ, ಅಂಥ ಪಕ್ಷಿಯು ಸಂಕೇತಿಸುವ ರೂಪಕಾರ್ಥದ ಪರಿಕಲ್ಪನೆಯೇ ಬಹಳ ಮುಖ್ಯವಾದುದು ಮತ್ತು ಕುತೂಹಲಕಾರಿಯಾದುದು. ಒಂದು ಬಗೆಯ ಅಚ್ಚರಿಯೇ ಆಗಿ ಕಾಣುವ, ಎರಡು ಬಾಯಿಗಳಿರುವ (ವಚನದಲ್ಲಿ ‘ತಲೆ’ಯಲ್ಲಿ ಎಂದು ಹೇಳಿದ್ದರೂ ಅದನ್ನು ಬಾಯಲ್ಲಿ ಎಂದೇ ಅರ್ಥ ಮಾಡಿಕೊಳ್ಳಬೇಕಿದೆ) ಈ ಪಕ್ಷಿಯ ಒಂದು ಬಾಯಲ್ಲಿ ಹಾಲನ್ನು ಮತ್ತು ಇನ್ನೊಂದು ಬಾಯಲ್ಲಿ ವಿಷವನ್ನು ಹಾಕಿದರೆ ಅದರಿಂದಾಗುವ ಪರಿಣಾಮ ಏನು? ಇದು ಇಲ್ಲಿ ಬಹಳ ಮುಖ್ಯ ಪ್ರಶ್ನೆ. ಈ ಪ್ರಶ್ನೆಗೆ, ಯಾವ ಗೋಜಲೂ ಇಲ್ಲದ ರೀತಿಯಲ್ಲಿ, ವಚನದ ಆರಂಭದಲ್ಲೇ ಅತ್ಯಂತ ನೇರವಾಗಿ ಉತ್ತರ ಕೊಡುತ್ತಾರೆ ಚೆನ್ನಬಸವಣ್ಣನವರು, ಅವರ ಆ ಉತ್ತರ ಎಲ್ಲರ ಅರಿವಿಗೂ ಸರಳವಾಗಿ ದಕ್ಕುವಂಥದ್ದು. ಎರಡು ಬಾಯಿಗಳನ್ನು ಹೊಂದಿದ್ದರೂ, ಶರೀರ ಮಾತ್ರ ಒಂದೇ ಆಗಿರುವ ಕಾರಣಕ್ಕೆ, ಯಾವುದೇ ಒಂದು ಬಾಯಲ್ಲಿ ವಿಷ ಹಾಕಿದರೂ, ಮತ್ತು ಯಾವುದೇ ಒಂದು ಬಾಯಲ್ಲಿ ಹಾಲು ಹಾಕಿದರೂ ಅವೆರಡೂ ಇಡೀ ಶರೀರಕ್ಕೆ ವ್ಯಾಪಿಸುವುದು ಅತ್ಯಂತ ಸಹಜವೆ. ಹೀಗಿರುವಾಗ ಒಂದು ಬಾಯಲ್ಲಿ ಹಾಕಲಾಗುವ ವಿಷದ ಪರಿಣಾಮ ಆ ಗಂಡಭೇರುಂಡ ಪಕ್ಷಿಯ ಇಡೀ ಶರೀರದ ಮೇಲಾಗುವುದೂ ಅಷ್ಟೇ ಸಹಜ. ಹೀಗೆ ಮಾಡಿದರೆ ಗಂಡಭೇರುಂಡ ಪಕ್ಷಿ ಖಂಡಿತವಾಗಿ ಸಾಯುತ್ತದೆ; ಅದು ಬದುಕಿ ಉಳಿಯಲಾರದು. ಇದು ವೈಜ್ಞಾನಿಕ ಸತ್ಯ.

ಈ ರೂಪಕವನ್ನೇ ಮುಂದೆ ನಮ್ಮ ಸಮಾಜದ ಸಂರಚನೆಗೂ ಸಮೀಕರಿಸುತ್ತಾರೆ ಚೆನ್ನಬಸವಣ್ಣನವರು. ಶರಣರ ಚಿಂತನೆಯ ಪ್ರಕಾರ ಸಮಾಜದಲ್ಲಿ, ಲಿಂಗ ಮತ್ತು ಜಂಗಮ ಎಂಬ ಎರಡು ‘ವ್ಯಕ್ತಿಪರಿಕಲ್ಪನೆ’ ಗಳಿವೆ. ಲಿಂಗವು ವ್ಯಕ್ತಿ ನೆಲೆಯನ್ನು ಮತ್ತು ಜಂಗಮವು ಜನಸಮೂಹವನ್ನು (ಸಮಾಜವನ್ನು) ಪ್ರತಿನಿಧಿಸುತ್ತವೆ. ವ್ಯಕ್ತಿನೆಲೆ ಗಂಭೇರುಂಡದ ಒಂದು ಮುಖದಂತಿದ್ದರೆ, ಜಂಗಮನೆಲೆ ಅದರ ಮತ್ತೊಂದು ಮುಖ. ಹೀಗೆ ಈ ಎರಡೂ ಮುಖಗಳು ಬೇರೆ ಬೇರೆಯಾದರೂ, ಅವುಗಳ ಅಸ್ತಿತ್ವಕ್ಕೆ ಮೂಲ ಆಧಾರವಾಗಿರುವುದು ಒಂದೇ, ಅದು ಸಮಾಜ. ಗಂಡಭೇರುಂಡ ಪಕ್ಷಿಗಿರುವ ಒಂದೇ ಶರೀರದಂತೆ ಈ ಸಮಾಜವಿದೆ. ಅದು ಲಿಂಗ ಮತ್ತು ಜಂಗಮ ಎರಡಕ್ಕೂ ಶರೀರದೋಪಾದಿಯಲ್ಲಿದೆ, ಮತ್ತು ಕೇವಲ ಒಂದೇ ಆಗಿದೆ.

ಗಂಡಭೇರುಂಡ ಪಕ್ಷಿಯ ಒಂದು ಬಾಯಿಗೆ ವಿಷ ಹಾಕುವಂತೆ, ಇಲ್ಲಿ ಸಮಾಜದ ಒಂದು ಮುಖವಾದ ಲಿಂಗದ ಅಥವಾ ವ್ಯಕ್ತಿಯ ಬಾಯಿಗೆ ವಿಷ ಹಾಕಿದರೂ, ಮತ್ತೊಂದು ಮುಖವಾದ ಜಂಗಮದ ಅಥವಾ ಸಮಾಜದ ಬಾಯಿಗೆ ವಿಷ ಹಾಕಿದರೂ ಆಗುವ ಪರಿಣಾಮ ಒಂದೇ, ಇಡೀ ಸಮಾಜಕ್ಕೇ ವಿಷವೇರುವುದು. ಯಾಕೆಂದರೆ, ಲಿಂಗ-ಜಂಗಮವೆಂಬ ಬಾಯಿಗಳು ಬೇರೆಯಾದರೂ ಅವೆರಡರ ಶರೀರ ರೂಪದ ಸಮಾಜ ಒಂದೇ ಆಗಿರುವ ಕಾರಣ, ವಿಷವು ಇಡೀ ಸಮಾಜ ಶರೀರಕ್ಕೆ ವ್ಯಾಪಿಸಿ, ಅದು ಮಾಡುವ ಕೆಟ್ಟ ಪರಿಣಾಮ ಎರಡಕ್ಕೂ ಸಮಾನವಾಗಿಯೇ ತಟ್ಟುತ್ತದೆ. ಇದು ಬರೀ ತರ್ಕವಲ್ಲ, ವೈಜ್ಞಾನಿಕ ಸತ್ಯ. ಸಮಾಜಕ್ಕೆ ಹಾನಿಕಾರಕವಾಗುವ ಈ ವಿಷವು ಯಾವ ಬಗೆಯದಾದರೂ ಆಗಿರಬಹುದು, ಪರಿಣಾಮ ಮಾತ್ರ ಕೆಡುಕು. ಹಾಗಾದರೆ, ಇಂಥ ಕೆಡುಕು ಅಥವಾ ಅನಾಹುತವನ್ನು ತಪ್ಪಿಸುವುದು ಹೇಗೆ? ಇದೇ ಇಲ್ಲಿರುವ ಮುಖ್ಯ ಪ್ರಶ್ನೆ. ಈ ಪ್ರಶ್ನೆಗೆ ಚೆನ್ನಬಸವಣ್ಣನವರು ಸಮರ್ಥ ಉತ್ತರ ಕೊಡುತ್ತಾರೆ ವಚನದ ಮುಂದಿನ ಭಾಗದಲ್ಲಿ.

ಸಮಾಜದ ಒಂದು ಮುಖವಾದ ವ್ಯಕ್ತಿಯನ್ನು ಮಾತ್ರ ಗೌರವಿಸಿ, ಅದರ ಮತ್ತೊಂದು ಮುಖವಾದ ಜಂಗಮವನ್ನು ಕಡೆಗಣಿಸಬಾರದು, ಅಥವಾ ಜಂಗಮವನ್ನು ಬೆಳೆಸಿ ವ್ಯಕ್ತಿಯನ್ನು ಕಡೆಗಣಿಸಬಾರದು ಎಂಬುದೇ ಚೆನ್ನಬಸವಣ್ಣನನವರ ಇಲ್ಲಿನ ಮಹತ್ವದ ಆಶಯ. ‘ಲಿಂಗವ ಪೂಜಿಸಿ ಜಂಗಮವ ಮರೆದಡೆ, ಕುಂಭಿನೀನರಕ ತಪ್ಪದು ಕಾಣಾ’ ಎಂಬ ಮಾತಿನಲ್ಲಿ ಆವರು ಅದನ್ನು ಸ್ಪಷ್ಟ ಮತ್ತು ಖಚಿತವಾಗಿಯೇ ಹೇಳುತ್ತಾರೆ. ಲಿಂಗ (ವ್ಯಕ್ತಿ) ಮತ್ತು ಜಂಗಮ (ಸಮಾಜ) ಎರಡಕ್ಕೂ ಅವಕಾಶಗಳು ಸಮಾನವಾಗಿಯೇ ದೊರೆಯಬೇಕು, ಮತ್ತು ಅವೆರಡೂ ಜೊತೆಯಾಗಿಯೇ ಬೆಳವಣಿಗೆ ಹೊಂದಬೇಕು ಎಂಬ ಧ್ವನಿ ಕೂಡ ಇಲ್ಲಿದೆ. ಇದನ್ನು ಬಿಟ್ಟು, ಒಂದನ್ನು ಗೌರವಿಸಿ, ಮತ್ತೊಂದನ್ನು ಉಪೇಕ್ಷಿಸಿದರೆ ಅಂಥವರಿಗೆ ಕುಂಭಿನೀ ನರಕ ತಪ್ಪದು ಎನ್ನುವ ಚೆನ್ನಬಸವಣ್ಣನವರ ಮಾತಿನಲ್ಲಿ ಒಂದನ್ನು ಗೌರವಿಸಿ, ಮತ್ತೊಂದನ್ನು ಕಡೆಗಣಿಸುವ ಹಾಗೂ ಆ ಮೂಲಕ ಸಮಾಜವನ್ನು ಒಡೆದು ಆಳುವವರಿಗೆ ಅಂಥ ನರಕವೇ ಗತಿ ಎಂಬ ಸ್ಪಷ್ಟ ಸೂಚನೆಯಿದೆ. ಅದು ಸಮಾಜವನ್ನು ಒಡೆಯುವವರಿಗೆ ಮಾತ್ರ ಬರುವ ಗತಿಯಲ್ಲ; ಒಟ್ಟು ಸಮಾಜವನ್ನೇ ನರಕ ಮಾಡುವ ಕೆಟ್ಟ ಕೃತ್ಯ ಕೂಡ.

ಚೆನ್ನಬಸವಣ್ಣನವರ ಈ ವಚನದ ಆಶಯವನ್ನು ಸಮುದಾಯದ ಸಮಗ್ರ ಮತ್ತು ಸಮಾನ ಪ್ರಗತಿಯ ಅಪೇಕ್ಷೆಯಾಗಿಯೂ ಮತ್ತು ಅಂಥ ಪ್ರಗತಿಯ ಮಾನದಂಡವಾಗಿಯೂ ಇಟ್ಟುಕೊಳ್ಳಬಹುದಾಗಿದೆ. ಇಂದಿನ ರಾಜಕಾರಣವೇ ಇರಲಿ, ರಾಜಕಾರಣಿಗಳೇ ಇರಲಿ, ಸಮುದಾಯಗಳ ನೇತಾರರೇ ಇರಲಿ, ಯಾರಿದ್ದರೂ, ಅವರೆಲ್ಲ ತಮ್ಮ ಸ್ವಾರ್ಥ ಸಾಧನೆಗಾಗಿ ಇಡೀ ಸಮಾಜವನ್ನೇ ಒಡೆದು ಹಾಕುತ್ತಿದ್ದಾರೆ. ಆ ಮೂಲಕ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ದುರುದ್ದೇಶದಿಂದ, ಅವರೆಲ್ಲರೂ ಸಮಾಜವನ್ನು ಹೋಳು, ಹೋಳುಗಳಾಗಿ ಒಡೆದು, ಒಂದಕ್ಕೆ ಸುಣ್ಣ ಮತ್ತು ಇನ್ನೊಂದಕ್ಕೆ ಬೆಣ್ಣೆಯನ್ನು ಒದಗಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸಾಮಾಜಿಕ ಅಸಮತೋಲನ ಉಂಟಾಗುತ್ತಿದೆಯಷ್ಟೇ ಅಲ್ಲ, ಸಮುದಾಯದ ಜನರಲ್ಲಿ ಅಸಮಧಾನಗಳು ತಲೆದೋರಿ, ಒಬ್ಬರ ಮೇಲೆ ಮತ್ತೊಬ್ಬರು ಪ್ರತಿಕಾರ ತೀರಿಸಿಕೊಳ್ಳುವ ಹಂತಕ್ಕೂ ತಲುಪುತ್ತಿದ್ದಾರೆ. ಇದು, ಗಂಡಭೇರುಂಡ ಪಕ್ಷಿಯ ಒಂದು ಬಾಯಲ್ಲಿ ವಿಷ ಮತ್ತೊಂದು ಬಾಯಲ್ಲಿ ಹಾಲನ್ನು ಹಾಕುವಂಥ ರೀತಿಯ ಕೆಟ್ಟ ಕ್ರಿಯೆಯ ಪರಿಣಾಮವೇ ಆಗಿದೆ. ಇದೆಲ್ಲದರ ಒಟ್ಟು ಪರಿಣಾಮವೆಂದರೆ, ಇಡೀ ಸಮಾಜವೇ ಛಿದ್ರ ವಿಚ್ಛಿದ್ರವಾಗುವದು. ಈ ಹಿನ್ನೆಲೆಯಲ್ಲಿ ಚೆನ್ನಬಸವಣ್ಣನವರ ಈ ವಚನ ವರ್ತಮಾನಕ್ಕೇ ಹೆಚ್ಚು ಪ್ರಸ್ತುತವಾಗುತ್ತದೆ. ಇಂಥ ತರ-ತಮಗಳು ದೂರವಾಗಬಾಕಾದರೆ ಎರಡೂ ಬಾಯಿಗಳಲ್ಲಿ ಹಾಲನ್ನೇ ಹಾಕುವ ಕೆಲಸ ಮೊದಲು ಆಗಬೇಕಿದೆ. ಅಥವಾ ಒಂದು ಬಾಯಲ್ಲಿ ವಿಷ ಹಾಕುವ ಕೆಟ್ಟ ಕೆಲಸ ನಡೆಯದಂತೆ ಕೂಡ ನೋಡಿಕೊಳ್ಳಬೇಕಿದೆ. ಇದು ಮಾತ್ರವೇ ಪರಿಹಾರಾತ್ಮಕ ಮಾರ್ಗ. ಇಡೀ ವಚನವು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಅರ್ಥ ಇದೇ ಆಗಿದೆ.

ಸಮಸಮಾಜ ನಿರ್ಮಾಣದ ಶರಣರ ಕ್ರಿಯಾಸಿದ್ಧಾಂತಕ್ಕೆ ಪ್ರಾಯೋಗಿಕ ಪಠ್ಯದಂತಿದೆ ಚೆನ್ನಬಸವಣ್ಣನವರ ಪ್ರಸ್ತುತ ವಚನ. ಇಂಥ ಸಿದ್ಧಾಂತವನ್ನು ಶರಣರು ಬರೀ ಹೇಳಲಿಲ್ಲ; ಕ್ರಿಯಾತ್ಮಕವಾಗಿ ಆಚರಿಸಿದರು. ಅವರ ಸಮಾನತೆಯ ಪರಿಕಲ್ಪನೆ, ವರ್ಗ, ವರ್ಣ ಮತ್ತು ಲಿಂಗ ಸಮಾನತೆಗೆ ಮಾತ್ರ ಮಿತಗೊಂಡಿರಲಿಲ್ಲ, ಇಡೀ ಸಮಾಜದ ಸಮಗ್ರ ಮತ್ತು ಸಮಾನ ಪ್ರಗತಿಯ ಆಶಯದ್ದಾಗಿತ್ತು. ಅವರ ಅಂಥ ಕ್ರಿಯಾತ್ಮಕ ನಡೆ ಇಂದಿನ ಸಮಾಜಕ್ಕೂ ಮತ್ತು ಆ ಸಮಾಜವನ್ನೇ ಪ್ರಧಾನ ಘಟಕವಾಗಿ ಹೊಂದಿರುವ ಪ್ರಜಾಪ್ರಭುತ್ವಕ್ಕೂ ಅತ್ಯಗತ್ಯವಿದೆ.

ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
303, ಎಸ್. ಎಲ್. ವಿ. ತೇಜಸ್‌, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್‌ ಸಂ. +91 98869 85847

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply