
ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ,
ಇಂತೀ ನಾಲ್ಕರ ಮಧ್ಯದ ಮನೆಗೆ
ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ,
ಮಾಂಸದ ಗೋಡೆ, ಚರ್ಮದ ಹೊದಿಕೆ,
ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು
ಚಿತ್ರದ ಮನೆ ನೋಡಯ್ಯ.
ಆ ಮನೆಗೊಂಬತ್ತು ಬಾಗಿಲು,
ಇಡಾ ಪಿಂಗಳವೆಂಬ ಗಾಳಿಯ ಬಾದಳ,
ಮೃದು ಕಠಿಣವೆಂಬೆರಡು ಅಗುಳಿಯ ಭೇದ ನೋಡಾ,
ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಟ್ಟಿ,
ದಿವಾರಾತ್ರಿಯೆಂಬ ಅರುಹು ಮರೆಹಿನ
ಉಭಯವ ಕದಕಿತ್ತು ನೋಡಯ್ಯಾ.
ಮನೆ ನಷ್ಟವಾಗಿ ಹೋದಡೆಯೂ
ಮನೆಯೊಡೆಯ ಮರಳಿ ಮತ್ತೊಂದು ಮನೆಗೆ
ಬಪ್ಪುದು ತಪ್ಪದು ನೋಡಯ್ಯಾ.
ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ,
ಕಾಮಭೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1167 / ವಚನ ಸಂಖ್ಯೆ-1731)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಗಳು : ಕೋಲು.
ಮಜ್ಜೆ : ಕೊಬ್ಬು
ಶ್ರೋಣಿತ : ರಕ್ತ.
ಬಾದಳ : ಸಣ್ಣಕಿಂಡಿ
ಅಗುಳಿ : ಚಿಲಕ
ಆಧ್ಯಾತ್ಮಿಕ ಸೊಗಡಿರುವ ವಚನ ಸಾಹಿತ್ಯಕ್ಕೂ ಮತ್ತು ವೈಜ್ಞಾನಿಕ ವೈದ್ಯಕೀಯ ಶಾಸ್ತ್ರಕ್ಕೂ ಸಾಮ್ಯತೆ ಮತ್ತು ಅಂಗರಚನಾ ಶಾಸ್ತ್ರ ಶರಣ ಒಕ್ಕಲಿಗ ಮುದ್ದಣ್ಣನವರಿಗೆ ಗೊತ್ತಿತ್ತು ಎನ್ನುವುದನ್ನು ಈ ವಚನ ತಿಳಿಸುತ್ತದೆ. ದೇಹದ ಪ್ರತಿಯೊಂದು ಅಂಗಾಂಗವೂ ಕೂಡ ಲೌಕಿಕ ಅಂದರೆ ಕ್ರಿಯಾ ಶಕ್ತಿ ಮತ್ತು ಅಲೌಕಿಕ ಅಂದರೆ ಆಧ್ಯಾತ್ಮಿಕ ಶಕ್ತಿಯ ಪರಿಚಯವನ್ನು ನೀಡುತ್ತದೆ ಎನ್ನುವುದನ್ನು ಇಲ್ಲಿ ನಾವು ಕಾಣಬಹುದು. ದೇಹವೇ ದೇವಾಲಯ ಅಥವಾ ದೇಹವನ್ನು ಕಾಯಪ್ರಸಾದ ಎನ್ನುವ ಸಕಾರಾತ್ಮಕ ನಿಲುವು ಬಸವಾದಿ ಶರಣರದು. ಈ ವಚನದಲ್ಲಿ ಅಸ್ಥಿ, ನರ, ಮಾಂಸ, ಚರ್ಮ, ಶ್ರೋಣಿತ ಹೀಗೆ ದೇಹ ರಚನೆಯನ್ನು ವಿವರಿಸಿದ್ದಾರೆ.
“ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ” ಎನ್ನುವಲ್ಲಿ ದೇಹ ಮತ್ತು ಆತ್ಮ ಎನ್ನುವ ಎರಡು ದೊಡ್ಡ ಕಂಭಗಳ ಉಲ್ಲೇಖ ಮಾಡುತ್ತಾ ಹಾಗೆಯೇ ಮುಂದಿನ ಜೀವವನ್ನು ಮುಂದುವರೆಸಲು ಶುಕ್ಲ ಮತ್ತು ವೀರ್ಯವೆಂಬ ಧಾತುಗಳನ್ನು ಎರಡು ಚಿಕ್ಕ ಕಂಭಗಳ ನಿರೂಪವನ್ನು ಕೊಡುತ್ತಾರೆ. ಆಧುನಿಕ ವೈದ್ಯ ವಿಜ್ಞಾನದಲ್ಲಿ ಇವುಗಳನ್ನು ಮುಖ್ಯ ಘಟಕಗಳೆಂದು (Main Elements) ಗುರುತಿಸಲಾಗಿದೆ.
ಮುಂದಿನ ಸಾಲುಗಳಲ್ಲಿ ದೇಹವನ್ನು ಮನೆಗೆ ಹೋಲಿಸಿದ್ದಾರೆ. “ಇಂತೀ ನಾಲ್ಕರ ಮಧ್ಯದ ಮನೆಗೆ ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ, ಮಾಂಸದ ಗೋಡೆ, ಚರ್ಮದ ಹೊದಿಕೆ, ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಯ್ಯ”. ಈ ದೇಹವೆಂಬ ಮನೆಗೆ ಭಾರವನ್ನು ಹೊರುವಂತೆ ಅಸ್ಥಿಗಳು ಇರುತ್ತವೆ. ರಕ್ತ ಸಂಚಾರ ಮಾಡಿ ಇಡೀ ದೇಹವನ್ನು ಚೈತನ್ಯಯುಕ್ತವಾಗಿ ಮತ್ತು ಸ್ವಸ್ಥವಾಗಿಡುವುದು ಈ ನರಗಳು ಮತ್ತು ರಕ್ತವಾಹಕಗಳು. ಸಪ್ತಧಾತುಗಳಾದ ರಸ, ರುಧಿರ (ರಕ್ತ), ಮಾಂಸ, ಮೇಧಸ್ಸು, ಅಸ್ಥಿ ಮತ್ತು ಶುಕ್ಲವನ್ನು ಈ ದೇಹವೆಂಬ ಮಂಡಲವನ್ನು ಆವರಿಸಿವೆ, ದಿನ ನಿತ್ಯದ ಚಟುವಟಿಕೆಗಳಲ್ಲಿ ಪಾತ್ರವಹಿಸಿವುದು ನವದ್ವಾರಗಳು. ಈ ನವದ್ವಾರಗಳು ಎರಡು ಕಣ್ಣುಗಳು, ಎರಡು ಕಿವಿಗಳು, ಮೂಗು, ಬಾಯಿ, ಮೂತ್ರದ್ವಾರ, ಗುದದ್ವಾರ, ಗಂಟಲು. ಇದನ್ನು ಶರಣ ಒಕ್ಕಲಿಗ ಮುದ್ದಣ್ಣನವರು “ಆ ಮನೆಗೊಂಬತ್ತು ಬಾಗಿಲು” ಎಂದು ಇಲ್ಲಿ ತಿಳಿಸಿದ್ದಾರೆ.
ಇಲ್ಲಿಂದ ಮುಂದೆ ಶರಣ ಒಕ್ಕಲಿಗ ಮುದ್ದಣ್ಣನವರು “ಇಡಾ ಪಿಂಗಳವೆಂಬ ಗಾಳಿಯ ಬಾದಳ” ಎನ್ನುವಲ್ಲಿ ದೇಹದಲ್ಲಿ ಪ್ರಾಣಶಕ್ತಿ ಸಂಚರಿಸುವ ಮಾರ್ಗಗಳನ್ನೂ ಗುರುತಿಸಿದ್ದಾರೆ. ಇಡಾ ಮತ್ತು ಪಿಂಗಳಾ ನಾಡಿಗಳು ಶಿವ ಹಾಗೂ ಶಕ್ತಿಯನ್ನು ಪ್ರತಿನಿಧಿಸುತ್ತವೆ. “ಮೃದು ಕಠಿಣವೆಂಬೆರಡು ಅಗುಳಿಯ ಭೇದ ನೋಡಾ” ಎಂದು ತಿಳಿಸುತ್ತಾ, ಇಡಾ ಮತ್ತು ಪಿಂಗಳಾ ನಾಡಿಗಳ ನಡುವೆ ಸಮತೋಲನವನ್ನು ತಂದರೆ ಬದುಕಿನಲ್ಲಿ ನಮ್ಮ ನಡೆ ನುಡಿಗಳು ಉತ್ತಮವಾಗಿ ಶರಣನಾಗುವ ಮಾರ್ಗ ಸುಲಭ. ಆದರೆ ಇಡಾ ಮತ್ತು ಪಿಂಗಳಾಗಳನ್ನು ಸಮತೋಲನೆಯನ್ನು ಕಾಯ್ದುಕೊಂಡು ಹೋಗುವದರಲ್ಲಿಯೇ ಬದುಕು ಸವೆದು ಹೋಗಬಹುದು.
“ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಟ್ಟಿ, ದಿವಾರಾತ್ರಿಯೆಂಬ ಅರುಹು ಮರೆಹಿನ ಉಭಯವ ಕದಕಿತ್ತು ನೋಡಯ್ಯಾ”, ಎನ್ನುವ ಸಾಲುಗಳಲ್ಲಿ ಸುಷುಮ್ನಾ ನಾಳದ ಪ್ರಾಮುಖ್ಯತೆಯನ್ನು ಪ್ರಸ್ತಾಪ ಮಾಡುತ್ತಾರೆ. ಮಾನವ ಶರೀರದ ಅತ್ಯಂತ ಮಹತ್ವದ ಅಂಶವಾದ ಸುಷುಮ್ನಾ ನಾಡಿಯು ಯಾವಾಗ ಅಂತರಂಗದಲ್ಲಿ ಪ್ರವೇಶ ಆಗುತ್ತದೆಯೋ ಆವಾಗ ಬದುಕು ನಿಜವಾಗಿಯೂ ಪ್ರಾರಂಭವಾಗುತ್ತದೆ.
“ಮನೆಯೊಡೆಯ ಮರಳಿ ಮತ್ತೊಂದು ಮನೆಗೆ ಬಪ್ಪುದು ತಪ್ಪದು ನೋಡಯ್ಯಾ” ಬಹುಶಃ ಶರಣ ಒಕ್ಕಲಿಗ ಮುದ್ದಣ್ಣನವರು ಇಲ್ಲಿ ಇನ್ನೊಂದು ಜೀವಿಯ ಜನ್ಮವನ್ನು ಅಥವಾ ಮಗುವಿನ ಜನನವನ್ನು ಉಲ್ಲೇಖ ಮಾಡಿದಂತಿದೆ. “ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ” ಅಂದರೆ ಪುನರ್ಜನ್ಮವನ್ನು ನಿರಾಕರಣೆ ಮಾಡುತ್ತಾರೆ. ಬಸವಾದಿ ಶರಣರು ಈ ಪುನರ್ಜನ್ಮವನ್ನು ಸಾರಾ ಸಗಟಾಗಿ ನಿರಾಕರಿಸಿದ್ದನ್ನು ಇಲ್ಲಿ ಪುನಃ ಸಮರ್ಥನೆ ಮಾಡಿದ್ದಾರೆ.
ಇಂಥ ಚಿಂತನೆಯನ್ನು ಶರಣ ಉಳಿಯುಮೇಶ್ವರ ಚಿಕ್ಕಣ್ಣನವರೂ ಕೂಡ ತಮ್ಮ ಒಂದು ವಚನದಲ್ಲಿ ನಿರೂಪಣೆ ಮಾಡಿದ್ದಾರೆ.
ಅಸ್ಥಿ, ಚರ್ಮ, ಮಾಂಸ, ರಕ್ತ, ಖಂಡದ ಚೀಲ
ಬಾ [ತೆ] ಗೆಟ್ಟೊಡಲ ನಾನೆಂತು ಸಲಹುವೆನಯ್ಯಾ?
ಹುರುಳಿಲ್ಲದಿಹ ಸಂಸಾರ
ಎಂದಿಂಗೆ ನಾನಿದ ಹೊತ್ತು ತೊಳಲುವುದೆ ಬಿಡುವೆನಯ್ಯಾ?
ಎಂದಿಂಗೆ ನಾನಿದರ ಸಂಶಯವನಳಿವೆನಯ್ಯಾ?
ಎಡಹಿ ಕೊಡ ನೀರೊಳಗೆ ಒಡೆದಂತೆ
ಎನ್ನೊಡಲೊಡೆದು ನಿಮ್ಮೊಳೆಂದು ನೆರೆವೆನೊ ಉಳಿಯುಮೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1155 / ವಚನ ಸಂಖ್ಯೆ-1618)
ಶರಣ ಒಕ್ಕಲಿಗ ಮುದ್ದಣ್ಣನವರು ಈ ವಚನದಲ್ಲಿ ದೇಹದ ರಚನೆ, ಅದರ ಕಾರ್ಯ ವೈಖರಿ, ಹುಟ್ಟು ಸಾವುಗಳ ವಿವರಗಳನ್ನು ಮನ ಮುಟ್ಟುವಂತೆ ನಿವೇದಿಸಿದ್ದಾರೆ. ಅವರ ವೈದ್ಯಕೀಯ ವಿಜ್ಞಾನದ ದೃಷ್ಟಿಕೋಣದ ಅರಿವು ನಮಗೆ ಈ ವಚನದ ಮೂಲಕ ತಿಳಿದು ಬರುತ್ತದೆ.
ವಿಜಯಕುಮಾರ ಕಮ್ಮಾರ,
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್ ನಂ : +91 9741 357 132
ಈ-ಮೇಲ್ : vijikammar@gmail.com
ಸೊಗಸಾದ ಪರಿಪೂರ್ಣ ಅರ್ಥಪೂರ್ಣ ಅರಿವು ಮೂಡಿಸುವ ವಿಶ್ಲೇಷಣೆ ಮಾಡಿದ್ದೀರಿ.
ಉಪಯುಕ್ತ ಮಾಹಿತಿಗಳು
ಸರಳವಾಗಿ ಹೇಳುವುದಾದರೆ ಶರಣ ಚಿಂತನೆಗಳನ್ನು ಎಲ್ಲಾರಿಗೂ ತಿಳಿಸಲು ಹರ್ಷಿಸುತ್ತೇವೆ
ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮಗೆ ಶುಭವಾಗಲಿ, ಯಶಸ್ವಿಯಾಗಿ ಮುಂದುವರಿಸಿಕೊಂಡುಸಾಗಲು ಹಾರೈಸುತ್ತೇವೆ
ಧನ್ಯವಾದಗಳು ಸರ್.
ಉತ್ತಮ ವಚನ ವಿವರಣೆ.
Sir I could glance some of the articles of great writers. I appreciate your efforts in coordinating all these people & bring them under one banner of ‘Vachanmandar’. I may with your permission select few of them & try to publish them in our Basava path.Please advise.My congratulations.