
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-26)
12 ನೇ ಶತಮಾನದಲ್ಲಿ ರಚನೆಯಾದ ಶರಣ ಸಾಹಿತ್ಯ ಅಥವಾ ವಚನ ಸಾಹಿತ್ಯವು 21 ನೇ ಶತಮಾನದಲ್ಲಿಯೂ ಕೂಡ ನಾವು ಬದುಕುತ್ತಿರುವ ಬದುಕಿನ ದಾರಿಗೆ ಮೌಲ್ಯಯುತವಾದ ಬೆಳಕನ್ನು ಚೆಲ್ಲುತ್ತಿರುವ ದಾರಿ ದೀಪಗಳಾಗಿವೆ. “ವ್ಯಕ್ತಿಗಳ ಪರಿವರ್ತನೆಯೇ ಸಮಾಜದ ಪರಿವರ್ತನೆ” ಎಂಬುದನ್ನು ಶರಣರು ತಮ್ಮ ಚಿಂತನೆಗಳ ಮೂಲಕ ತಮ್ಮ ನಡೆ-ನುಡಿ ಸಿದ್ಧಾಂತದ ಮೂಲಕ ಸಾಕ್ಷೀಕರಿಸಿದರು. ವಚನ ಸಾಹಿತ್ಯ ಎಂಬುದು ಕೇವಲ ಒಂದು ಸಾಹಿತ್ಯದ ಪ್ರಾಕಾರವಾಗಿ ನಿಲ್ಲಲಿಲ್ಲ. ಮೇಲಾಗಿ ವಚನ ಸಾಹಿತ್ಯವೆಂಬುದು ಜೀವಕಾರುಣ್ಯ ಹರಿಸಿದ ನಿರ್ಮಲ ಗಂಗೆಯಾಯಿತು. ವಚನ ಸಾಹಿತ್ಯವೆಂಬುದು ಸರಳ ಭಾಷೆಯಲ್ಲಿ ಅವಿರಳವಾದ ಅರಿವನ್ನು ಜನ ಸಾಮಾನ್ಯರಿಗೆ ತಲುಪಿಸಿದ ಸಾಹಿತ್ಯ. ಅಷ್ಟೇ ಅಲ್ಲಾ ಸರಳ ತತ್ವದಲ್ಲಿ ಜನ ಸಾಮಾನ್ಯರ ಅರಿವನ್ನು ವಿಸ್ತರಿಸಿದ ಸಾಹಿತ್ಯವಾಗಿದೆ.
ಕಾಲದಿಂದ ಕಾಲಕ್ಕೆ ಮೌಲ್ಯಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. “ಬದಲಾವಣೆ ಜಗದ ನಿಯಮ” ಎನ್ನಬಹುದಾದರೂ ಅಪಮೌಲ್ಯೀಕರಣವು ಸಮಾಜವನ್ನು ಅಸ್ವಸ್ಥಗೊಳಿಸುತ್ತದೆ. ಮೌಲ್ಯಯುತವಾದ ಬದಲಾವಣೆ ನಿಜಕ್ಕೂ ಸ್ವಾಗತಾರ್ಹ. ಆದರೆ, ಅಪಮೌಲ್ಯಗಳು ಸಮಾಜವನ್ನು ಆಳಿದರೆ ಸಮಾಜವು ಹಳಿ ತಪ್ಪುತ್ತದೆ. ಸಾಮಾಜೀಕರಣದ ನೈತಿಕತೆಯನ್ನು ಎತ್ತರಿಸಲು ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಕಷ್ಟು ಅರಿವನ್ನು ಜಾಗೃತಗೊಳಿಸುತ್ತಾರೆ. ಹಾಗಾಗಿ ಬಸವಣ್ಣನವರ ಈ ಪ್ರಸ್ತುತ ವಚನ “ಒಲೆ ಹತ್ತಿ ಉರಿದಡೆ ನಿಲಲು ಬಹುದಲ್ಲದೆ; ಧರೆ ಹತ್ತಿ ಉರಿದಡೆ ನಿಲಲೂಬಾರದು” ಎಂಬುದು ಅತ್ಯಂತ ಶ್ರೇಷ್ಠ ಸಾಮಾಜಿಕ ಚಿಂತನೆಯನ್ನು ನಿರೂಪಿಸುತ್ತದೆ.
ಸಾಮಾನ್ಯವಾಗಿ ವಚನ ಸಾಹಿತ್ಯದ ಓದು ಎರಡು ಮಾರ್ಗದಲ್ಲಿ ಸಾಗುತ್ತದೆ. ಒಂದು ಬೌದ್ಧಿಕ ಮಾರ್ಗ ಇನ್ನೊಂದು ಹೃದಯ ಮಾರ್ಗ ಅಂದರೆ ಮುಖ್ಯವಾಗಿ ವಿದ್ವತ್ತಿನ ಮಾರ್ಗ ಮತ್ತು ಜನಮುಖಿ ಅಧ್ಯಯನ ಮಾರ್ಗ. ವಿದ್ವತ್ ವಲಯದಲ್ಲಿ ಸಾಮಾನ್ಯವಾಗಿ ತಾತ್ವಿಕತೆ, ಭಾಷೆ, ಸಾಹಿತ್ಯಿಕ ಶ್ರೇಷ್ಠತೆ, ತೌಲನಿಕ ಅಧ್ಯಯನಗಳು ನಡೆದರೆ ಜನಮುಖಿ ಅಧ್ಯಯನದಲ್ಲಿ ಜನ ಸಾಮಾನ್ಯರ ಹೃದಯದಲ್ಲಿ ಅರಿವನ್ನು ಅರಳಿಸಿ ಸನ್ಮಾರ್ಗದತ್ತ ಕೊಂಡೊಯ್ಯುವ, ಮೌಢ್ಯವನ್ನು ಕಳೆಯುವ, ಮೌಲ್ಯಗಳನ್ನು ತಿಳಿಸುವ, ಸಮಾನತೆ, ಸ್ವಾತಂತ್ಯ, ಸುಖ-ಸಂತೋಷ, ನೆಮ್ಮದಿ ನೆಲೆಗೊಳ್ಳುವ ದೃಷ್ಟಿಕೋನದಿಂದ ನಡೆಯುತ್ತದೆ. ಒಂದರ್ಥದಲ್ಲಿ ಬೌದ್ಧಿಕತೆಯಿಂದ ಕಟ್ಟುವುದಕ್ಕಿಂತ ಹೃದಯದಿಂದ ಕಟ್ಟಬೇಕಾಗುತ್ತದೆ. ಇವತ್ತು ಮಾನವರು ಭೌತಿಕವಾಗಿ, ಬೌದ್ಧಿಕವಾಗಿ ಬಹು ಎತ್ತರದಲ್ಲಿದ್ದಾರೆ. ಆದರೆ ಮಾನವೀಯತೆಯಿಂದ, ಮೌಲ್ಯಗಳಿಂದ ಹಾಗೂ ನೈತಿಕತೆಯಿಂದ ತುಂಬಾ ಕೆಳಗಿಳಿಯುತ್ತಿದ್ದಾರೆ.
ಮನುಷ್ಯ ಮನುಷ್ಯರಲ್ಲಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಸ್ವಾರ್ಥತೆ, ಶ್ರೇಷ್ಠತೆ, ಜ್ಯೇಷ್ಠತೆ, ಕನಿಷ್ಠತೆಗಳು ಮನೆ ಮಾಡಿದ್ದರ ಅವುಗಳ ಫಲವಾಗಿ ಲಂಚಗುಳಿತನ, ಭ್ರಷ್ಠಾಚಾರ, ಕೊಲೆ, ಸುಲಿಗೆ, ಅತ್ಯಾಚಾರ ಇವುಗಳಿಂದ ಧರೆಯೇ ಹೊತ್ತಿ ಉರಿಯುತ್ತಿದೆ. ಭೌತಿಕವಾದ ಅಲೆ ಕೊಲ್ಲಲು ಮುಂದಾದರೆ ಬದುಕುವುದಾದರೂ ಹೇಗೆ? ಇವೇ ಪ್ರಶ್ನೆಗಳು ಈ ವಚನದಲ್ಲಿ ಕಾಣಿಸಿಕೊಳ್ಳುತ್ತವೆ.
- ಒಲೆ ಹತ್ತಿ ಉರಿದರೆ ನಿಲಬಹುದು. ಧರೆಯೇ ಹತ್ತಿ ಉರಿದರೆ ನಿಲ್ಲಲು ಸಾಧ್ಯವೇ?
- ನೀರಿನ ಸಂಗ್ರಹಣೆಗೆಂದು ಕಟ್ಟಿದ ಏರಿಯೇ ನೀರನ್ನು ಕುಡಿದರೆ?
- ಬೆಳೆಯ ರಕ್ಷಣೆಗಾಗಿ ಕಟ್ಟಿದ ಬೇಲಿಯೇ ಬೆಳೆಯನ್ನು ಮೇಯ್ದರೆ?
- ಮನೆಯನ್ನು ರಕ್ಷಿಸಿ ಮನೆತನ ಕಟ್ಟಬೇಕಾದ ಗೃಹಿಣಿಯೇ ತನ್ನ ಮನೆಯಲ್ಲಿ ಸುಳ್ಳು, ಮೋಸ, ವಂಚನೆ, ಕಳ್ಳತನ ಮಾಡಲು ಪ್ರಾರಂಭಿಸಿದರೆ?
- ಅಮೃತದಂತೆ ಜೀವದಾನ ಮಾಡಬೇಕಾದ ತಾಯಿಯ ಹಾಲು ಜೀವ ತೆಗೆಯುವ ವಿಷವಾದರೆ?
- ಯಾರಿಗೆ ದೂರು ನೀಡುವುದು?
ಒಂದು ವ್ಯವಸ್ಥೆಯ ನಂಬಿಕೆ, ವಿಶ್ವಾಸ, ಪ್ರೀತಿ, ಮಮತೆ, ವಾತ್ಸಲ್ಯ, ನಿಷ್ಠೆ, ಕರ್ತವ್ಯ, ಕರುಣೆ, ಮಾನವೀಯತೆ ಮುಂತಾದ ಮೌಲ್ಯಗಳ ಮೇಲೆ ನಿಂತಿರುತ್ತದೆ. ಈ ಮೌಲ್ಯಗಳ ಸೌಧ ಕುಸಿದು ಬಿದ್ದರೆ ಮುಂದೆ ಆಗುವುದೆಲ್ಲವೂ ದುರಂತವೇ.
ಧರೆ ಅಂದರೆ ಭೂಮಿ ಪಂಚಭೂತಗಳಲ್ಲಿಯೇ ಅತ್ಯಂತ ಪ್ರಮುಖ ಮತ್ತು ಮಹತ್ವವಾದದ್ದು. ಇಂದು ಈ ಭೂಮಿಯು ಮಲೀನವಾಗಿ ವಿಷವಾಗುತ್ತಿದೆ. ಭೂಮಿಯ ಮೇಲ್ಪದರ ಹಾಗೂ ಒಳಪದರ ಒಟ್ಟಾರೆ ಭೂಮಿಯ ಮೇಲೆ ಅವ್ಯಾಹತ ದಾಳಿಯಾಗುತ್ತಿದೆ. ಒಂದಲ್ಲಾ ಒಂದು ದಿನ ಭೂಮಿಯೇ ನಾಶವಾಗಲು ಪ್ರಾರಂಭಿಸಿದರೆ ನಮಗೆ ಬದುಕಲು ಸಾಧ್ಯವೇ? ಖಂಡಿತಾ ಇಲ್ಲಾ.
ನಮ್ಮನ್ನು ಕಾಯುವ ಮೂರು ಮುಖ್ಯ ಅಂಗಗಳು ಕಾವಿ, ಖಾಕಿ ಮತು ಖಾದಿ ಅಂದರೆ ಘಾರ್ಮಿಕ ವ್ಯವಸ್ಥೆ, ಪೋಲೀಸ್/ರಕ್ಷಣಾ ವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆಗಳೆ ಹಾದಿ ತಪ್ಪಿದರೆ ನಮ್ಮ ರಕ್ಷಣೆ ಸಾಧ್ಯವೇ? ಸಾಧ್ಯವೇ ಇಲ್ಲ. ಇಡೀ ಜಗತ್ತೇ ತಾಯ್ತನದ ಭಾವದಿಂದ ಕೂಡಿರಬೇಕು. ಅದರ ಬದಲಾಗಿ ಇವತ್ತು ವಿಷಮಯ ವಾತಾವರಣದಿಂದ ಕೂಡಿದೆ. ಕೋಮು ಗಲಭೆ, ಅರಾಜಕೀಯತೆ, ಅವಿಶ್ವಾಸ, ಅತಿಯಾದ ಸ್ವಾರ್ಥ, ಮೃಗೀಯ ಭಾವನೆ ಇದ್ದಾಗ ನೆಮ್ಮದಿಯ ಜೀವನ ಸಾಧ್ಯವೇ ಇಲ್ಲ. ಇವೆಲ್ಲವುಗಳಿಗೂ ನಮ್ಮಲ್ಲಿಯೇ ಉತ್ತರವಿದೆ. ಅದನ್ನು ನಾವು ಕಂಡುಕೊಳ್ಳಬೇಕಾಗಿದೆ. ನಾವು ಮನುಷ್ಯಾರಾಗಿ ಹುಟ್ಟಿಲ್ಲ ಆದರೆ ಮನುಷ್ಯರಾಗಲು ಹುಟ್ಟಿದ್ದೇವೆ. ಅದಕ್ಕಾಗಿ ಹೃದಯದಿಂದ, ಮೌಲ್ಯದಿಂದ, ಮಾನವೀಯತೆಯಿಂದ ಸಮಾಜವನ್ನು ಕಟ್ಟಬೇಕಿದೆ ಎಂಬ ಸಾಮಾಜಿಕ ಕಳಕಳಿ ಬಸವಣ್ಣನವರ ಈ ವಚನದಲ್ಲಿದೆ.
ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in