ಇಂದು ದೇಶ ವಿದೇಶಗಳೆಲ್ಲಡೆಯೂ ಶರಣ ಧರ್ಮ, ಶರಣ ಸಂಸ್ಕೃತಿ, ಶರಣ ಸಾಹಿತ್ಯ ಸಂಶೋಧನೆ, ವಚನ ತಾಡೋಲೆಗಳ ಡಿಜಿಟಲೀಕರಣ ಹೀಗೆ ಶರಣ ಧರ್ಮದ ವಿವಿಧ ಆಯಾಮಗಳ ಕುರಿತಾದ ಚರ್ಚೆ, ವ್ಯಾಖ್ಯಾನ, ವಿಚಾರ ಸಂಕೀರಣ, ಗ್ರಂಥ ಪ್ರಕಟಣೆಗಳು, Online Seminar ಗಳು ಹಾಗೂ Google Meet ಗಳಂತಹ ಚಟುವಟಿಕೆಗಳು ನಿತ್ಯವೂ ನಡೆಯುತ್ತಿವೆ. ಶರಣರ ವಚನಗಳು ಈಗಾಗಲೇ 37 ಕ್ಕಿಂತಲೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ ಮತ್ತು ಇನ್ನೂ ನಡೆದಿವೆ. ಹೀಗೆ ಶರಣ ಧರ್ಮದ ಕುರಿತಾದ ಕಾರ್ಯಕ್ರಮ ಹಾಗೂ ವಿವಿಧ ಚಟುವಟಿಕೆಗಳ ವಾರ್ತೆಗಳು ಜಗತ್ತಿನಾದ್ಯಂತ ಪ್ರಸಾರವಾಗುತ್ತಿದೆ. ಶರಣ ಧರ್ಮದ ಉದ್ಧಾರಕ್ಕೆಂದೇ ಜಾಗತಿಕ ಮಟ್ಟದ ಸಂಸ್ಥೆಗಳು ಇತ್ತೀಚೆಗೆ ತಲೆ ಎತ್ತಿವೆ. ಅವು ಅತ್ಯಾಧುನಿಕ ಸಕಲ ಸೌಕರ್ಯಪೂರಿತ ಕಛೇರಿ ಹಾಗೂ ಸಭಾ ಭವನಗಳನ್ನು ಹೊಂದಿವೆ. ಅಲ್ಲಿ ವಿಶ್ವ ಸಂಸ್ಥೆಯಲ್ಲಿ ನಡೆಯುವ ಸಭೆಗಳ ಮಾದರಿಯಲ್ಲಿ ಧರ್ಮಧುರೀಣರೂ, ಜನನಾಯಕರೂ, ಸಮಾಜೋದ್ಧಾರಕರೂ, ತತ್ವಜ್ಞಾನಿಗಳೂ, ವಿದ್ವಜ್ಜನರೂ ಹೀಗೆ ಘನವ್ಯಕ್ತಿಗಳೆಲ್ಲರಿಂದ ಧರ್ಮೋದ್ದಾರದ ಘನ ಗಂಭೀರ ಸಮಾಲೋಚನೆಗಳು ನಡೆಯುತ್ತಿವೆ. Digital ಮಾಧ್ಯಮದಲ್ಲಿಯಂತೂ ನೂರಾರು Group ಗಳಲ್ಲಿ ಶರಣರ ಭಾವಚಿತ್ರ ಪ್ರದರ್ಶನ, ವಚನ ವಿಶ್ಲೇಷಣೆ, ಚರ್ಚೆ, ವಚನ ಸಂಗೀತ, ಆಧುನಿಕ ವಚನಕಾರರ ವಚನ ಮಂಡನೆ ಹೀಗೆ ಅನೇಕ ರೀತಿಯಲ್ಲಿ ಶರಣ ಧರ್ಮದ ಕುರಿತಾಗಿ ವಿಷಯ ವಿವೇಚನೆಗಳು ನಿರಂತರ ನಡೆಯುತ್ತಲೇ ಇವೆ. ಹಲವಾರು ಮಠಮಾನ್ಯಗಳಲ್ಲಿ ಶರಣ ಸಂಸ್ಕೃತಿ ಉತ್ಸವ, ಪುರಾಣ ಪ್ರವಚನಗಳು, ಪಟ್ಟಾಭಿಷೇಕಗಳು ಹೀಗೆ ವೈವಿಧ್ಯಮಯ ಹೆಸರುಗಳ ಅಡಿಯಲ್ಲಿ ದೊಡ್ಡ ದೊಡ್ಡ ಮಂತ್ರಿಮಹೋದಯರ ದಿವ್ಯ ಸಾನ್ನಿಧ್ಯದಲ್ಲಿ, Ph.D ವಿದ್ವಾಂಸರ ಶ್ರೇಷ್ಠತಮ ವ್ಯಾಖ್ಯಾನಗಳು, ವಿವಧ ರಂಗಗಳಲ್ಲಿಯ ಪರಮ ಶ್ರೇಷ್ಠ ಸಾಧಕರಿಗೆ ದಯಪಾಲಿಸುವ ಬಿರುದು ಬಾವಲಿಗಳು ಹಾಗೂ ಪ್ರಶಸ್ತಿಗಳನ್ನು ಕೊಡುವ ಸುಂದರ ಸಮಾರಂಭಗಳು, ಶ್ರೇಷ್ಠ ಗ್ರಂಥಗಳ ಬಿಡುಗಡೆಯ ಪವಿತ್ರ ಕ್ಷಣಗಳು, ಅಪಾರ ದಾನಿಗಳ ಸತ್ಕಾರ ಸಮಾರಂಭಗಳು ಹೀಗೆ ಎಲ್ಲವುಗಳೂ Religious Reality Show ಗಳಂತೆ ರಂಗು ರಂಗಾಗಿ ಝಗಮಗಿಸುತ್ತಿವೆ. ಆಚರಿಸುವವರು Celebrity ಗಳಾಗಿ ಸಂಭ್ರಮಿಸುತ್ತಿದ್ದಾರೆ. ಅಂತೂ ಧರ್ಮೋದ್ದಾರವು ಹಿಂದೆಂದಿಗಿಂತಲೂ ಇಂದಿನ ದಿನಗಳಲ್ಲಿ ಶೀಘ್ರಗತಿಯಲ್ಲಿ ದಾಪುಗಾಲಿಟ್ಟು ಸಾಗುತ್ತಿರುವುದು ಸಂತೋಷದ ಸಂಗತಿ.
ಈ ಎಲ್ಲ ಸಭೆ ಸಮಾರಂಭಗಳಲ್ಲಿಯೂ ಸಭಾ ನಿರೂಪಕರು ಆಕರ್ಷಕ ಬಗೆಯಲ್ಲಿ ನಿರೂಪಿಸುತ್ತಾರೆ. ಪ್ರಾರಂಭದಲ್ಲಿ ಪ್ರಾರ್ಥನೆ! ಕೆಲವೆಡೆ “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂದೂ ಇನ್ನೂ ಕೆಲವೆಡೆ “ಶ್ರೀ ಗುರುಬಸವ ಲಿಂಗಾಯ ನಮಃ” ಎಂದು ಪ್ರಾರ್ಥಿಸುವ ಪರಿಪಾಠವಿದೆ. ಹಾಗಾದರೆ ನಾವೆಲ್ಲರೂ ಪ್ರಾರ್ಥಿಸುವ ಪ್ರಾರ್ಥನೆಯು ನಮ್ಮ ಧರ್ಮ ಸಂಸ್ಥಾಪಕರಾದ ಬಸವಣ್ಣನವರ ಕುರಿತಾದ ಪ್ರಾರ್ಥನೆಯೋ ಅಥವಾ ಅವರಿಂದ ಕೊಡ ಮಾಡಲ್ಪಟ್ಟ ಇಷ್ಟಲಿಂಗದ ಪ್ರಾರ್ಥನೆಯೋ? ಬಸವಣ್ಣನವರ ಪ್ರಾರ್ಥನೆಯೆಂದಿದ್ದರೆ ಅದು ಶ್ರೀ ಗುರು ಬಸವಾಯ ನಮಃ ಎಂದಾಗಬೇಕಲ್ಲವೇ? ಅದೇನೇ ಆಗಿರಲಿ ಅದು ನಮ್ಮ ಶೃದ್ಧೆ ನಂಬಿಕೆಗಳ ಪವಿತ್ರ ಪ್ರಾರ್ಥನೆ! ಹಾಗಾದರೆ ಈ ಪ್ರಾರ್ಥನೆಯನ್ನು ನಾವು ಹೇಗೆ ಹೇಳುತ್ತಿದ್ದೇವೆ? ಅಲ್ಲಿಯ ಶಬ್ದೋಚ್ಛಾರಗಳನ್ನು ಹಾಗೂ ಯತಿ ಸ್ಥಾನಗಳನ್ನು ಸರಿಯಾಗಿ ಪಾಲಿಸಿಕೊಂಡು ಪ್ರಾರ್ಥನೆಯನ್ನು ಹೇಳುತ್ತಿದ್ದೇವೆಯೇ? ಶಾಬ್ದಿಕ ಧ್ವನಿಗಳೊಂದಿಗೆ ಒಟ್ಟು ನಮ್ಮ ಪ್ರಾರ್ಥನಾ ಕ್ರಮವು ಭಕ್ತಿಭಾವಪೂರ್ಣವಾಗಿದೆಯೇ? ಸಭೆ ಸಮಾರಂಭಗಳಲ್ಲಿ ಸಾಮೂಹಿಕವಾಗಿ ಹೇಳುವ ಪ್ರಾರ್ಥನೆಯ ಕ್ರಮ ಒತ್ತಟ್ಟಿಗಿರಲಿ ನಮ್ಮಿಂದಲೇ, ನಮ್ಮ ಸಂಸ್ಥೆಗಳಿಂದಲೇ ನಿರ್ಮಾಣಗೊಂಡ ಧ್ವನಿ ಮುದ್ರಣಗಳಲ್ಲಾದರೂ ಸರಿಯಾದ ಕ್ರಮವಿದೆಯೇ? ನಮ್ಮ ಧರ್ಮಗುರು ಮಹಾತ್ಮಾ ಬಸವೇಶ್ವರರು ಹೆಜ್ಜೆ ಹೆಜ್ಜೆಗೂ ತಮ್ಮ ನಡೆ ನುಡಿಗಳನ್ನು ಅವಲೋಕಿಸಿಕೊಂಡಿದ್ದಾರೆ. ಅವರಷ್ಟು ಆತ್ಮಾವಲೋಕನ ಮಾಡಿಕೊಂಡವರು ಇನ್ನಾರೂ ಇಲ್ಲ ಅಲ್ಲವೇ? ಹಾಗಾದರೆ ನಿತ್ಯವೂ ನಾವು ಮಾಡುವ ನಮ್ಮ ಪ್ರಾರ್ಥನಾ ಕ್ರಮವನ್ನು ನಾವೇ ನಮ್ಮ ಮನಃಸಾಕ್ಷಿಯಾಗಿ ಲಿಂಗಸಾಕ್ಷಿಯಾಗಿ ಸಕಲ ಶರಣರ ಸಾಕ್ಷಿಯಾಗಿ ಅವಲೋಕಿಸಿಕೊಳ್ಳೋಣವೇ?
“ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬುದು ಸಂಸ್ಕೃತ ಭಾಷೆಯ ಒಂದು ಸರಳ ಪರಿಪೂರ್ಣ ವಾಕ್ಯ. ಇಲ್ಲಿ “ಓಂ” ಎನ್ನುವುದು ಪ್ರಣವಾಕ್ಷರ. “ಶ್ರೀ” ಎಂಬುದು ಮಂಗಲಕರ ಹಾಗೂ ಸಮೃದ್ಧಿಯ ಸಂಕೇತಾಕ್ಷರ. “ಗುರು” ಎಂಬುದು ಸಂಸ್ಕೃತ, “ಲಿಂಗಾಯ” ಇದು ಚತುರ್ಥಿ ವಿಭಕ್ತಿಯ ಪ್ರತ್ಯಯಯುಕ್ತ ಸಂಸ್ಕೃತ ಪದ. “ನಮಃ” ಕ್ರಿಯಾಪದ. ಇಡೀಯಾಗಿ “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂದರೆ “ಓಂ ಶ್ರೀ ಗುರು ಬಸವಲಿಂಗನಿಗೆ ಶರಣು” ಎಂದು ಅರ್ಥೈಸಬಹುದು. ಈ ಪ್ರಾರ್ಥನೆಯ ವಾಕ್ಯವನ್ನು ಬರೆಯುವಾಗ “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂದು ಸರಿಯಾದ ಕ್ರಮದಲ್ಲಿಯೇ ಬರೆಯುತ್ತೇವೆ. ಮುದ್ರಣ ಹಾಗೂ ಬೆರಳಚ್ಚಿನಲ್ಲಿಯೂ ಸರಿಯಾದ ಕ್ರಮದಲ್ಲಿಯೇ ಇರುತ್ತದೆ. ಆದರೆ ಪ್ರಾರ್ಥನಾ ವಾಕ್ಯವನ್ನು ಧ್ವನಿಗೆ ರೂಪಾಂತರಿಸುವಾಗ ಮಾತ್ರ “ಓಂ ಶ್ರೀ ಗುರು ಬಸವಲಿಂಗಾSS ಯನಮಃ” ಎಂದೇ ಆಗುವುದಿಲ್ಲವೇ?
ಈ ವರೆಗೂ ನಮ್ಮ ಈ ಪ್ರಾರ್ಥನೆಯ ಉಚ್ಚಾರಣೆಯಲ್ಲಿನ ಶುದ್ಧತೆಯ ಕುರಿತು ಯಾರಾದರೂ ಹಾಗಲ್ಲಾ ಹೀಗೆ … … ಎಂದು ಎಲ್ಲಿಯಾದೂ ಸೂಚಿಸಿರುವರೇ? ಇದು ಯಾರ ಹೊಣೆ ಎಂಬುದು Million Dollar ಪ್ರಶ್ನೆಯಾಗಿದೆಯಲ್ಲ? ಏಕೆಂದರೆ ನಮ್ಮ ಸಭೆ ಸಮಾರಂಭಗಳಲ್ಲಿ ಉಪನ್ಯಾಸಕರು, ಸಂಶೋಧಕರು, ತತ್ವಜ್ಞಾನಿಗಳು, ದಾರ್ಶನಿಕರು, ಪಂಡಿತರು, ವಿದ್ವಾಂಸರು, ವಾಗ್ಮಿಗಳು, ಮಠಾಧೀಶರು, ಜಗದ್ಗುರುಗಳು, ಅನುಭಾವಿಗಳು ವಿದ್ವನ್ಮಣಿಗಳು, ಕಲಾವಿದರು, ಇತರರೆಲ್ಲರಿಗೂ ಕಿವಿಗೊಡುವ ಪ್ರೋತೃಗಳು ಹೀಗೆ ಪಾಲ್ಗೊಂಡಿರುವರು. ಆದರೆ ಈ “ಯನಮಃ” ಎಂಬ ಉಚ್ಚಾರಣೆಯು ಯಾರಿಗೂ ಕೇಳಿಸುತ್ತಿಲ್ಲವೆ? ಕೆಲವರು ವಚನಗಳನ್ನು ತೆಗೆದುಕೊಂಡು ಸಮರ್ಥಿಸಿಕೊಳ್ಳಲೂಬಹುದು. ಏಕೆಂದರೆ ಬಸವಣ್ಣನವರೇ ಹೇಳುವಂತೆ “ತಾಳಮಾನ ಸರಿಸಮವೆಂದರಿಯೆ ಓಜೆ ಬಜಾವಣೆಯ ಲೆಕ್ಕವನರಿಯೆ ಅಮೃತಗಣ ದೇವಗಣವನರಿಯೆ ಕೂಡಲಸಂಗಮದೇವಾ ನಿಮಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆನು” ಎಂಬ ವಚನವು ಸಮರ್ಥನೆಗೆ ಪೂರಕವಾಗಿದೆ. ಹಾಗಾದರೆ ಇದೇ ಪ್ರಾರ್ಥನೆಯನ್ನು “ಓಂ ಶ್ರೀ ಗುರು ಬಸವಲಿಂಗಾ ಯನಮಃ” ಎಂದೂ ಹೇಳಬಹುದಲ್ಲವೆ? ಪ್ರತೀ ವಚನಕ್ಕೂ ತನ್ನದೇ ಆದ ಸಾಂದರ್ಭಿಕ ಇತಿಹಾಸವುಂಟು. ನಮ್ಮ ವೈಗುಣ್ಯವನ್ನು ಸಮರ್ಥಿಸಿಕೊಳ್ಳಲು ಶರಣರ ವಚನಗಳನ್ನು ನಮಗೆ ಬೇಕಾದ ಹಾಗೆ ಅನ್ವಯಿಸಿಕೊಳ್ಳುವುದು ಸಹೃದಯ ಶರಣರಿಗೆ ಸಲ್ಲದು.
ಇಂದು ದೇಶ ವಿದೇಶಗಳಲ್ಲಿಯೂ ಜಗತ್ತಿನಾದ್ಯಂತವೂ ಇಷ್ಟು ಸಾವಿರ ಇಷ್ಟು ಲಕ್ಷ ಜನರು ನಮ್ಮ ಧರ್ಮೋದ್ದಾರದ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಿದ್ದಾರೆಂಬ ಹೇಳಿಕೆಯೊಡನೆ ನಾವು ಅಭಿಮಾನದಿಂದ ಬೀಗುತ್ತಿದ್ದೇವೆ. ಜೊತೆಯಲ್ಲಿಯೇ ನಮ್ಮ ಪ್ರಾರ್ಥನೆಯ ಸರಿಯಾದ ಪರಿಯೇ ನಮಗೆ ಗೊತ್ತಿಲ್ಲ ಎಂಬ ಪ್ರತ್ಯಕ್ಷ ಸತ್ಯವನ್ನು ಜಗತ್ತಿನಾದ್ಯಂತ Digital ಮಾಧ್ಯಮದ ಮುಖಾಂತರ ಹರಡುತ್ತಿದ್ದೇವೆ.
ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂಬ ಈ ನಮ್ಮ ಪ್ರಾರ್ಥನೆಯು ಧ್ವನಿಯ (ನಾದ) ನಾಲ್ಕನೇಯ ಹಂತದ ಅಂದರೆ ಪರಾಪಶ್ಯವಾಗಿ ಮಾಧ್ಯಮಗಳ ನಂತರ ಬರುವ ವೈಖರಿ ಹಂತದ ವಾಣಿಯಾಗಿದೆ. ನಮ್ಮಲ್ಲಿ ವರ್ಣೋತ್ವಯ ವಿವಿಧ ಸ್ಥಾನಗಳಿವೆ. ಆಯಾ ಸ್ಥಾನಗಳಲ್ಲಿ ಉಂಟಾಗುವ ಉಸುರಿನ ತಾಡನೆ ಅಥವಾ ಕಂಪನಗಳಿಂದ ವರ್ಣಗಳು ಸ್ಪಷ್ಟವಾಗಿ ವಾಣಿಯ ರೂಪ ಪಡೆಯುತ್ತವೆ. ಆ ಸ್ಥಾನಗಳನ್ನು ನಾವು ಧ್ವನ್ಯಗಳೆಂದು ಕರೆಯುತ್ತೇವೆ. ಅವುಗಳನ್ನು ಸರಿಯಾಗಿ ತಿಳಿದುಕೊಂಡು ಪ್ರತಿ ವರ್ಣವನ್ನು ಕ್ರಮಬದ್ಧ ರೀತಿಯಲ್ಲಿ ಉಚ್ಚರಿಸಲು ಸಮರ್ಥ ವ್ಯಕ್ತಿಯಿಂದ ಮೌಖಿಕವಾಗಿ ಕಲಿಯಬಹುದಲ್ಲವೇ? “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂದು ಹೇಳುವಾಗ ಬಸವ ಲಿಂಗಾಯ ಎಂಬ ಪದದ ನಂತರ ಒಂದು ಕ್ಷಣ ವಿರಾಮ ಕೊಟ್ಟು (ಯತಿ) ನಮಃ ಎಂದು ಹೇಳಿದರೆ ಸಾಕು, ನಮ್ಮ ಪ್ರಾರ್ಥನೆಗೆ ಸರಿಯಾದ ಅರ್ಥ ಹಾಗೂ ಭಾವನೆಯುಂಟಾಗುವುದು. ಇಷ್ಟು ಸರಳವಾದ ಕ್ರಮವನ್ನು ಕಲಿತು ರೂಢಿ ಮಾಡಿಕೊಳ್ಳಲು ಐದರಿಂದ ಹತ್ತು ನಿಮಿಷಗಳು ಸಾಕು!
ಇನ್ನು ಓಂ ಎನ್ನುವ ಪ್ರಣವಾಕ್ಷರದ ಉಚ್ಚಾರಣೆಯು ಕ್ರಮ ಅದರ ಮಾತ್ರೆಗಳು ಅವುಗಳ ಅವಧಿ ಇವು ಓಂಕಾರದ ಸ್ವತಂತ್ರ ಉಚ್ಚಾರಣೆಯೋ ಅಥವಾ ಸ್ವರ ಸಾಧನೆಗೋ, ಸ್ವರ ತ್ರಾಟಕಕ್ಕೋ ಎಂಬ ಉದ್ದೇಶಗಳ ಮೇಲೆ ಅವಲಂಬಿಸಿದೆ. ಶ್ರೀ ಎಂಬ ಮಂಗಲಕರ ಸಮೃದ್ಧಿ ಸೂಚಕ ಸಂಕೇತಾಕ್ಷರದ ಉಚ್ಚಾರಣೆ ಅದರ ಸ್ವನ ಅವಧಿ ಹಾಗೂ ಇನ್ನುಳಿದ ಪದಗಳನ್ನು ಉಚ್ಚರಿಸಲು ಅನುಸರಿಸುವ ಸ್ವರ ಸ್ಥಾನಗಳನ್ನು “ಅನುದಾತ್ತ” “ಉದಾತ್ತ” “ಸ್ವಂತ” ಹಾಗೂ ದೀರ್ಘ ಸ್ವರಿತಗಳೆಂಬ ಸ್ವರಗಳ, ಸ್ವರಗಳ ಮಾತ್ರಗಳು ಹಾಗೂ ಉಚ್ಚಾರಣೆಗೆ ಪೂರಕವಾದ ಆಂಗಿಕ ಸಂಕೇತಗಳ ಪರಿಜ್ಞಾನದ ಸಂಗತಿಗಳು ವಿಶೇಷ ಸಾಧಕರಿಗೆ ಬೇಕಾಗುತ್ತದೆ. ಅವರು ಅವುಗಳನ್ನು ಕಲಿತು ಪ್ರಯೋಗಿಸುತ್ತಾರೆ.
ಪ್ರಾರ್ಥನಾ ಪಥದಲ್ಲಿ ಪ್ರಾರ್ಥನೆಯನ್ನು ತಮ್ಮ ಉಸಿರಾಗಿರಿಸಿಕೊಂಡವರು ಅದನ್ನು ತಮ್ಮ ಹೃದಯ ಸ್ಪಂದನದ ಜೊತೆಗೆ ಶೃತಿಗೊಳಿಸಿಕೊಂಡಿರುತ್ತಾರೆ. ತಮ್ಮ ಸಾಧನಾ ಪಥದಲ್ಲಿ ಸಾಗಲು ಒಂದು ಸೂತ್ರವನ್ನು ಒದಗಿಸುವ ಉಪಕರಣದಂತೆ ಪ್ರಾರ್ಥನೆಯನ್ನು ಮಾಡುತ್ತಾರೆ. ಅವರಿಗೆ ನಮ್ಮಂತೆ ಸಾಕಾರದ ಅವಶ್ಯಕತೆ ಇರುವುದಿಲ್ಲ. ಆ ನಿರಾಕಾರದ ನೆಲೆಯನ್ನು ಪರಿಪೂರ್ಣವಾಗಿ ಏಕಾತ್ಮ ಭಾವದಲ್ಲಿ ಅನವರತವಾಗಿ ಅರಿತುಕೊಳ್ಳಲು ತಮ್ಮನ್ನು ಸಂಪೂರ್ಣ ತಾದಾತ್ಮ್ಯಗೊಳಿಸಿಕೊಂಡಿರುತ್ತಾರೆ. ಆ ತಾದಾತ್ಮ್ಯತೆಯ ಸ್ಪಂದನಕ್ಕೆ ಅಭಿವ್ಯಕ್ತಗೊಳ್ಳುವ ಧ್ವನಿಯು ಮೇಲ್ನೋಟಕ್ಕೆ ಲೌಕಿಕ ಪ್ರಪಂಚದ ಶಬ್ದ ಸಂರಚನೆಯಲ್ಲಿದ್ದಂತೆ ಕಂಡರೂ ಅಲ್ಲಿ ಆ ಶಬ್ದಗಳು ಕೇವಲ ಸಾಂಕೇತಿಕ ಸ್ವರೂಪದಲ್ಲಿ ಪೂರಕವಾಗಿರುತ್ತವೆ. ಪ್ರಾರ್ಥನಾ ಹಂತದ ಸಾಧಕರಿಗೆಂದೇ ಕೆಲವು ವಿಶೇಷ ನಿಯಮಗಳಿವೆ. ಸಾಧಕನ ಆತ್ಮವು ವಿಶ್ವಗೀತದ ನಾದಕ್ಕೆ (ಅನಾಹತ ನಾದ) ಅನುಸ್ಪಂದನೆಗೊಂಡು ಮಿಡಿಯುತ್ತಿದ್ದರೆ ಆತನ ಜೀವನ ವಿಧಾನವೇ ಪ್ರಾರ್ಥನೆಯಾಗಿರುತ್ತದೆ. ಅಲ್ಲಿ ಪ್ರಾರ್ಥನೆ ಮತ್ತು ಜೀವನ ಪದ್ಧತಿಗಳ ಮಧ್ಯೆ ವ್ಯತ್ಯಾಸವೇ ಇರುವುದಿಲ್ಲ. ಈ ಹಂತದಲ್ಲಿ ಆತನು ಭವದ ಬಯಕೆಗಳ “ಭಾವ ಕವಚ” ವನ್ನು ತೋರದೇ ಸಾಧಕನಾಗಿರುವನು. ಆತನ ಮೃಣ್ಮಯವನ್ನು ಆಧರಿಸಿಕೊಂಡು ನಿಂತಿದ್ದರೂ ತನ್ನಲ್ಲಿಯ ಧೀ ಶಕ್ತಿಯನ್ನು ಬಳಸಿಕೊಂಡು ಅನಂತದಲ್ಲಿ ಚಿನ್ಮಯದೆಡೆಗೆ ಪಯಣಿಸಲು ಸಮರ್ಥನಾಗಿರುವನು. ಜೀವ-ಜೀವನವನ್ನು ಪರಿವರ್ತಿಸಿಕೊಂಡು ದಿವ್ಯ ಜೀವನದ ಭವ್ಯಸಾರವನ್ನು ಸುಶ್ರಾವ್ಯಗೊಳಿಸಿಕೊಂಡು ಆತ್ಮದ ತುಡಿತದ ಅಭಿಲಾಷೆಯ ಸ್ಪಂದನವನ್ನು ನಿರಂತರ ಹೊಂದಿ ಈ ಮನುಕುಲ ಮತ್ತು ಜಗತ್ತನ್ನು ವಿಕಸನದತ್ತ ಕೊಂಡೊಯ್ಯುವ ದಿಶೆಯಲ್ಲಿ ಸಾಗಿರುತ್ತಾನೆ. ಈ ಹಂತದ ಆತನ ಪ್ರಾರ್ಥನೆಯೇ ಆತನ ಜೀವ ವಿಧಾನವಾಗಿರುತ್ತದೆ. ಇದನ್ನೇ ಅಲ್ಲಮ ಪ್ರಭುಗಳು ತಮ್ಮ ಒಂದು ವಚನದಲ್ಲಿ:
ಗುರು, ಶಿಷ್ಯ ಸಂಬಂಧವನರಸಲೆಂದು ಹೋದಡೆ,
ತಾನೆ ಗುರುವಾದ, ತಾನೆ ಶಿಷ್ಯನಾದ, ತಾನೆ ಲಿಂಗವಾದ.
ಗುಹೇಶ್ವರಾ_ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟಡೆ,
ಭಾವ ಬತ್ತಲೆಯಾಯಿತ್ತು!
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-24/ವಚನ ಸಂಖ್ಯೆ-63)
ಭಾವ ಬೆತ್ತಲೆಯಾಗಿ ಮನ ದಿಗಂಬರವಾದಾಗ ಆತ್ಮ ವಿಶ್ವಂಭರವಾಗುತ್ತದೆ ಎನ್ನುವುದು ಈ ವಚನದ ಆಶಯ.
ಶ್ರೀ ವಿಜಯ ತೇಲಿ
ಬುಡಾ ಸ್ಟೀಮ್ ನಂ. 51, ಪ್ಲಾಟ್ ನಂ. 38,
“ಮಲ್ಹಾರ” ಫೆಡೆರಲ್ ಬ್ಯಾಂಕ ಹಿಂಭಾಗ, ಲಕ್ಷ್ಮೀ ಟೇಕಡಿ,
ಬೆಳಗಾಂವಿ – 590 009
ಮೋಬೈಲ್ ಸಂ. 94481 87739
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in