
ಅಫ್ಜಲಪುರ ತಾಲೂಕಿನ ಚಿಕ್ಕಹಳ್ಳಿ ಬಿದನೂರಿನಲ್ಲಿ ಮಡಿವಾಳಪ್ಪನವರು ಹುಟ್ಟಿದರು. ತಾಯಿ ಗಂಗಮ್ಮ. ಇವರು ತಂದೆಯ ಹೆಸರನ್ನು ಬಚ್ಚಿಟ್ಟರು. ಮಡಿವಾಳಪ್ಪನವರಿಗೆ ಇದು ಒಂದು ದೊಡ್ಡ ಪ್ರಶ್ನೆ ಆಯ್ತು. ಇದೆ ಮುಂದೆ ಅವರಿಗೆ ಸತ್ವ ಪರೀಕ್ಷೆ ಆಗಿ ಪರಿಣಮಿಸಿತು. ಮಡಿವಾಳಪ್ಪನವರು ಬಾಲಕರಾಗಿದ್ದಾಗ ಆಟ ಆಡುವಾಗ ಒಬ್ಬ ಹೆಣ್ಣು ಮಗಳಿಗೆ ಚೆಂಡು ಬಡಿದಿದ್ದಕ್ಕೆ “ಹಾಟ್ಯಾ ಇನ್ನ ತಂದಿ ಇದ್ರ ಎಷ್ಟು ಮೆರೀತಿದ್ದಿಯೋ ಏನೋ” ಅಂತ ಧ್ವನಿ ಎತ್ತರಿಸಿ ಒದರಾಡಿದಳು. ಆಕಸ್ಮಿಕವಾಗಿ ಮಡಿವಾಳಪ್ಪನವರ ಮೇಲೆ ಆದ ಈ ಆಘಾತದಿಂದ ಅವರು ಘಾಸಿಗೊಂಡರೂ ಅವರಲ್ಲಿನ ಚೈತನ್ಯ ಜಾಗೃತವಾಯಿತು. ಆಗ ಕರುಣಿಯಾಗಿ ಮಾರ್ಗ ತೋರಿದವರು ಬಿದನೂರು ಮಠದ ವಿರುಪಾಕ್ಷ ಸ್ವಾಮಿಗಳು. “ಚಿಣಮಗೇರಿಯ ಗುಡ್ಡದ ಮಹಾಂತರ ಹರಕೆಯ ಬಲದ ಕೃಪೆಯಿಂದ ನೀನು ಜನಿಸಿರುವೆ ಅವರೇ ನಿನಗೆ ನಾಮಕರಣ ಮಾಡಿದ್ದಾರೆ” ಎಂದು ತಿಳಿಸಿ ಅವರ ಸೇವೆ ಮಾಡಿ ಅವರ ಕೃಪೆಗೆ ಪಾತ್ರನಾಗು ಎಂದು ಆಶೀರ್ವದಿಸಿದರು. ಆಗಿನಿಂದಲೆ ಮಡಿವಾಳಪ್ಪನವರು ಗುರುಸೇವೆಗೆ ತೊಡಗಿಸಿಕೊಂಡರು.
ಮಡಿವಾಳಪ್ಪನವರು ಒಂದು ದಿವಸ ಕಲಬುರ್ಗಿಯ ಶರಣಬಸಪ್ಪನವರಲ್ಲಿ ಹೋಗಿ ತಿಪ್ಪಿಯಲ್ಲಿ ಬೆಳೆದ ಪತ್ರಿ ಪೂಜೆಗೆ ಅರ್ಹವೋ ಅಂತ ಕೇಳುತ್ತಾರೆ. ಆಗ ಅಪ್ಪ ಅವರು ಆಗುತ್ತೆ ಯಾಕೆ ಆಗಲ್ಲಾ ಪತ್ರಿ ಪತ್ರಿನೆ ಅದು ತಿಪ್ಪೆಯಲ್ಲಿ ಬೆಳೆದರೆ ಏನು ಬೇರೆಡೆ ಬೆಳೆದರೆ ಏನು ಅದು ಪವಿತ್ರನೇ ಅಂತ ಹೇಳ್ತಾರೆ. ಆಗ ಮಡಿವಾಳಪ್ಪನವರು ಶರಣಬಸಪ್ಪ ಅವರಿಗೆ ಲಿಂಗ ದೀಕ್ಷೆ ಮಾಡಿ ಅಂತ ಕೇಳತಾರೆ. ಆಗ ಅಪ್ಪಾ ಅವರು ಅವರಿಗೆ ಲಿಂಗದೀಕ್ಷೆ ಮಾಡಿದಾಗ ಇದನ್ನು ಇಲ್ಲಿ ಸಮಾಜ ವಿರೋಧಿಸ್ತದೆ ಒಪ್ಪುವುದಿಲ್ಲ, ತೊಂದರೆ ಕೊಡುತ್ತಾರೆ. ಆದ್ದರಿಂದ ಇಲ್ಲಿಂದ ಹೋಗು ಅಂತ ಅವರಿಗೆ ಸಲಹೆ ಕೊಡುತ್ತಾರೆ. ಆಗ ಮಡಿವಾಳಪ್ಪನವರು ಕಲಬುರ್ಗಿ ಬಿಟ್ಟು ಹೋಗ್ತಾರೆ. ಇದು ಅವರ ಚರಿತ್ರೆಯಲ್ಲಿ ಬರುವಂತಹ ಒಂದು ಮಾತು. ಬಾಲ್ಯದಿಂದಲೇ ಸಮಾಜದ ಈ ಕಹಿಯನ್ನು ಉಣ್ಣುತ್ತಾ ಎದುರಿಸುತ್ತಾ ಬೆಳೆದಂತಹ ಮಡಿವಾಳಪ್ಪನವರು ಆಧ್ಯಾತ್ಮದ ಉತ್ತುಂಗದ ಸ್ಥಿತಿಯನ್ನು ಏರುತ್ತಾರೆ. ಅವರು ಸಾವಿರಾರು ತತ್ವಪದಗಳನ್ನ ಸ್ವರವಚನಗಳನ್ನ ಬರೆದಿದ್ದಾರೆ. ಅವರ ಅಂಕಿತನಾಮ “ಮಹಾಂತ”, “ಗುರುಮಹಾಂತ, “ಗುಡ್ಡದಮಹಾಂತ” ಅಂತ ಬರುತ್ತೆ. ಸಮಾಜದ ಅಸಂಗತಗಳನ್ನ, ಓರೆಕೋರೆಗಳನ್ನ ಅವರು ಅತ್ಯಂತ ಕಠೋರವಾದ ಶಬ್ದಗಳಲ್ಲಿ ಖಂಡಿಸಿದ್ದಾರೆ.
“ಮುಡಚಟ್ಟಿನೊಳು ಬಂದು ಮುಟ್ಟಿತಟ್ಟಿ ಅಂತೀರಿ
ಮುಡಚಟ್ಟು ಎಲ್ಯಾದ್ಹೇಳಣ್ಣ
ಮುಟ್ಟಾದ ಮೂರು ದಿನಕ ಹುಟ್ಟಿ ಬಂದಿರಿ ನೀವು
ಮುಡಚಟ್ಟು ಎಲ್ಯಾದ್ಹೇಳಣ್ಣ”
ಎಂದು ಮುಟ್ಟುತಟ್ಟು, ಸೂತಕಗಳನ್ನ ವೈಜ್ಞಾನಿಕ ನೆಲೆಯಲ್ಲಿ ಪ್ರಶ್ನಿಸಿದರು.
“ಧನವ ಗಳಿಸಬೇಕು ಇಂಥದ್ದು
ಈ ಜನರಿಗೆ ತಿಳಿಯದಂತದ್ದು
ಅನುದಿನ ಅಜಹರಿ ಮನುಮುನಿಗಳಿಗೆಲ್ಲ
ಹೌದು ಹೌದು ಹೌದೆಂಬಂತದ್ದು ಕೊಟ್ಟರೆ ಹೋಗದಂಥಾದ್ದು
ಅದು ಇಟ್ಟರೆ ತೀರದಂತದ್ದು
ಕಟ್ಟಿದ ಗಂಟು ಬೈಲೊಳಗಿಟ್ಟರೆ
ಮುಟ್ಟಲು ಬಾರದಂಥಾದ್ದು
ಮರವಿಗೆ ಬಾರದಂಥಾದ್ದು
ನಿಜ ಅರುವಿನಲ್ಲಿ ಇರುವಂಥಾದ್ದು
ಮರವು ಕಳೆದು ಶ್ರೀ ಗುರುಮಹಾಂತೇಶನ
ಕರುಣದಿಂದ ಕಾಯುವಂಥಾದ್ದು”
ಎಂದು ಅರಿವೆಂಬ ಧನವನ್ನು ಗಳಿಸಬೇಕೆಂದು ಹೇಳುವರು.
“ಮರ್ಕಟ ಬುದ್ದಿಯವರು ವಿರಕ್ತರಪ್ಪ
ವಿರಕ್ತ ಮಠದೊಳು ತೊಟ್ಟಿಲು ಕಟ್ಟುವರಪ್ಪ“
ಅಂತ ಇಂದಿನ ಸ್ಥಿತಿಗತಿಗಳನ್ನೂ ಕಾಲಜ್ಞಾನದಲ್ಲಿ ವ್ಯಕ್ತಪಡಿಸಿರುವರು.
“ಮಂಡಲದೊಳಗೆ ಈ ಮಂದಿ ಮಾಡುದು ಕಂಡು
ಅದಕ್ಕೆ ಬಂದಾವಪ್ಪಾ ಇಂಥಾ ದಿನ
ಮಂಡಮೂಳರು ಕೂಡಿ
ಕುಂಡಿ ಚಿವುಟರು ಕೂಡಿ
ಕುಂಡಿ ನೋಡಿ ಮಣಿ ಹಾಕುವರಣ್ಣ“
ಲೋಕದ ನಡವಳಿಕೆಗಳನ್ನ ಅವರದೇ ಆದ ಭಾಷೆಯಲ್ಲಿಯೆ ಹೇಳುವರು. ಆದರೂ ನಿಂದಕರು ಇದ್ದಾಗಲೆ ಸಾಧನೆ ಸಾಧ್ಯ ಎಂದೂ ಹೇಳುವರು/
“ನಿಂದಕರಿರಬೇಕೋ ಹತ್ತು
ಹಂದಿ ಇದ್ದರೆ ಕೇರಿ ಹಸನಾಗುವದು
ಪಾಕೋ ತಂದಿ ತಾಯಿಗಿಂತ ಅಧಿಕೋ
ಮುಂಜಾನೆದ್ದು ನಿಂದಕರಿಗೆ ಶರಣು ಕೊಡಬೇಕೋ”
ಎಂದು ನಿಂದಕರಿಗೆ ಶರಣುಹೇಳುವರು.
“ಮರಣ ಬಂದರೇನು ಸಿಟ್ಟಿಲ್ಲಾ
ಮಹಾ ತಿಳಿದ ಮಹಾತ್ಮರಿಗೆ ಬಿಟ್ಟಿಲ್ಲಾ
ಮಾನವರಿವರೇನು ಘಟ್ಟಿಲ್ಲಾ ಮಹದೇವನ
ಹಿಡಿದವರ್ಯಾರು ಕೆಟ್ಟಿಲ್ಲಾ”
ಎಂದು ಮರಣವೇ ಮಹಾನವಮಿ ಎಂದು ಶರಣರಂತೆ ಸಂಭ್ರಮಿಸಿ ಶರಣರಾಗಿ ಐಕ್ಯರಾದವರು ಕಡಕೋಳ ಮಡಿವಾಳಪ್ಪನವರು.
ಶ್ರೀಮತಿ. ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥಪುರ,
ಮಾಳಮಡ್ಡಿ,
ಧಾರವಾಡ – 580 007.
ಮೋಬೈಲ್ ನಂ. 99864 37474
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51410