
ಸರ್ಕಾರವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಈ ನೆಲಕ್ಕೆ ಮತ್ತು ಈ ನಾಡಿಗೆ ಅರ್ಪಿಸಿದ ಒಂದು ಉತ್ಕೃಷ್ಟ ಗೌರವ ಆಗಿದೆ. ಪ್ರಸ್ತುತದಲ್ಲಿ ಇದು ಯಾವ ರೀತಿಯಾಗಿ ಔಚಿತ್ಯಪೂರ್ಣವಾಗಿದೆ ಎಂಬುದನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ.
ಮೊದಲಿಗೆ ಸಂಸ್ಕೃತಿಯ ಪರಿಭಾಷೆ ವ್ಯಾಖ್ಯಾನಿಸುವುದಾದರೆ; ಸಂಸ್ಕೃತಿ ಎಂದರೆ ಒಂದು ಸಮುದಾಯದ ಜೀವನ ವಿಧಾನ, ರೀತಿ-ನೀತಿ, ನಂಬಿಕೆ, ಆಚಾರ-ವಿಚಾರ, ಸಂಪ್ರದಾಯ, ಮೌಲ್ಯಗಳು, ನೈತಿಕತೆ ಇವೆಲ್ಲವುಗಳ ಒಟ್ಟಾರೆ ಮೊತ್ತ. ಡಿ. ವಿ. ಜಿ ಅವರ ಪ್ರಕಾರ ಪ್ರಕೃತಿ ಸಿದ್ಧವಾದ ಪದಾರ್ಥವನ್ನು ಮನುಷ್ಯ ವಿವೇಕದಿಂದ ಸೊಗಸುಗೊಳಿಸಿದರೆ ಅದು ಸಂಸ್ಕೃತಿ. ಸಂಸ್ಕೃತಿಯು ಬರೀ ಬಾಯಿ ಮಾತಿನ ಸೊಗಸುಗಳಿಗೆ ಮಾತ್ರ ಸೇರಿದ್ದಲ್ಲ. ಅದು ಬಹಿರಂಗದ ಸಂಸ್ಕೃತಿ. ಅದಕ್ಕಿಂತ ಮೇಲ್ಮಟ್ಟದ್ದು ಎಂದರೆ ಅಂತರಂಗದ ಸಂಸ್ಕೃತಿ. ಆಸೆ-ಆಮಿಷ, ಮೋಹಗಳು, ಪ್ರಕೃತಿಯಾದರೆ ನ್ಯಾಯ-ವಿವೇಕಗಳು ಸಂಸ್ಕೃತಿ. ರೋಷ-ಅಸೂಯೆಗಳು ಪ್ರಕೃತಿಯಾದರೆ ಕ್ಷಮೆ-ಸಹನೆಗಳು ಸಂಸ್ಕೃತಿ. ಒಂಭತ್ತು ಶತಮಾನಗಳು ಕಳೆದರೂ ಇನ್ನೂ ಎಲ್ಲರ ಮನಗಳಲ್ಲಿ ಬೆಳಗುತ್ತಿರುವ ಈ ಶರಣ ಸಂಸ್ಕೃತಿ ಎಂಥದು, ಇದರ ಶಕ್ತಿ ಎಂಥದು, ಇದರ ಜೀವಾಳ ಯಾವದು, ಇದರ ವ್ಯಾಪ್ತಿ ಏನು ಎಂಬುದೇ ಇಲ್ಲಿನ ಚಿಂತನೆಯ ವಿಷಯ.
12 ನೇಯ ಶತಮಾನದಲ್ಲಿ ಬಸವಾದಿ ಶರಣರು ವಿಕಾರಗೊಂಡಿದ್ದ ಬದುಕಿನ ವಿವಿಧ ಆಚರಣೆ, ನಂಬಿಕೆ, ಮೌಢ್ಯ, ಶೋಷಣೆಗಳೆಲ್ಲವುಗಳನ್ನು ಧಿಕ್ಕರಿಸಿದರು. ಮಾನವೀಯ ನೆಲೆಯಲ್ಲಿ, ಸಮಾನತೆಯ ಅಡಿಯಲ್ಲಿ “ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು” ಎಂಬ ಧ್ಯೇಯದ ಮೂಲಕ ಹೊಸದೊಂದು ಸಂಸ್ಕೃತಿಯನ್ನು ಹುಟ್ಟು ಹಾಕಿದರು. ಬಸವಣ್ಣನವರೇ ಇದರ ಜನಕ ಹಾಗೂ ನಾಯಕ. ತನ್ನ ಸ್ವಹಿತವನ್ನು ಕಡೆಗಣಿಸಿ ಪರಹಿತಾರ್ಥವಾಗಿ ಬದುಕನ್ನು ಮುಡಿಪಾಗಿಟ್ಟು ಶ್ರಮಿಸುವವರು ನಿಜವಾದ ನಾಯಕರು. ನಾಯಕತ್ವದ ಪರಿಭಾಷೆಗೆ ಹೊಸ ವ್ಯಾಖ್ಯಾನವನ್ನು ಬರೆದವರು ಬಸವಣ್ಣನವರು. ನಾಯಕ ಎಂದರೆ ಕೇವಲ ಮುನ್ನಡೆಸುವವ ಮಾತ್ರ ಅಲ್ಲ, ತನ್ನ ಹಿಂಬಾಲಿಗರನ್ನು ಸೃಷ್ಟಿಸುವಾತನೂ ಅಲ್ಲ. ಅಸಂಖ್ಯ ನಾಯಕರನ್ನು ಸೃಷ್ಟಿಸುವಾತನೆ ನಿಜವಾದ ನಾಯಕ. “A leader is one who creates many more leaders not just fallowers” ಎಂಬ ನುಡಿಯಂತೆ 12 ನೇಯ ಶತಮಾನದಲ್ಲಿ ಬಸವಣ್ಣನವರು ಅಸಂಖ್ಯಾತ ಶರಣರ ಸಮೂಹವನ್ನು ಕಟ್ಟಿ ಕ್ರಾಂತಿ ಮಾಡಿದ್ದು ಕಲ್ಪನಾತೀತವಾದ ಕಾರ್ಯ. ಅಂದು ಅಸಂಖ್ಯಾತ ಶೋಷಿತ ಜೀವಿಗಳಿಗೆ ಬದುಕಿನ ದೈವವಾದವರು ಬಸವಣ್ಣ. ಆ ಮೌಲಿಕ ಬದುಕಿನ ಕಾರಣವಾಗಿ ಅವರು ಸರ್ವಕಾಲಕ್ಕೂ ಆದರ್ಶ ಆಗಿದ್ದಾರೆ.
ಇಂದಿಗೂ ನಾವು ನಿನ್ನೆತ್ತರಕೆ ಏರಲಾರದೆ
ಅಯ್ಯೋ! ಮತದ ಉಸುಬಿಗೆ
ಸಿಲುಕಿ ತತ್ತರಿಸಿಹೆವಯ್ಯಾ
ಬಾರಯ್ಯ ಕೈ ಹಿಡಿದೆತ್ತಿ ಬದುಕಿಸು
ಎಂಬ ಕುವೆಂಪು ಅವರ ಮಾತು ನಿತ್ಯ ಸತ್ಯ.
ಇವತ್ತು ಬಸವಣ್ಣನವರನ್ನು ವಿಶ್ವಗುರು, ವಿಶ್ವಮಾನವ, ಜಗಜ್ಯೋತಿ ಎಂದೆಲ್ಲ ಕರೆಯುವಾಗ ಅವರ ತತ್ವಗಳು ವಿಶ್ವಮಾನ್ಯ ಆಗಿರುವಾಗ ಅವರನ್ನು ಕೇವಲ “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎನ್ನುವುದು ಹೆಮ್ಮೆಯ ಸಂಗತಿಯಾದರೂ ಕೂಡ ಅವರನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸದೇ ಇಡೀ ಪ್ರಪಂಚದ ಸಾಂಸ್ಕೃತಿಕ ನಾಯಕ ಎನ್ನುವುದು ಸಮಂಜಸ ಎಂಬುದು ನಮ್ಮೆಲ್ಲರ ಚಿಂತನೆ. ಕರುನಾಡಿನ ನೆಲದಲ್ಲಿ ಇಂಥ ಒಬ್ಬ ವಿಭೂತಿ ಪುರುಷ ಜನ್ಮವೆತ್ತಿ ಬಂದು ಯುಗ ಪರಿವರ್ತನೆಗೆ ಕಾರಣರಾದರು ಎಂಬುದೇ ನಮಗೆ ಅತ್ಯಂತ ಹೆಮ್ಮೆ ಹಾಗೂ ವಿಸ್ಮಯದ ವಿಷಯ ಆಗಿದೆ. ಪ್ರಜಾಪ್ರಭುತ್ವದ ತಾಯಿಯಾದ ಇಂಗ್ಲಡ್‌ನಲ್ಲಯೂ ಕೂಡಾ ಬಸವ ಮೂರ್ತಿ ನಿಲ್ಲಿಸಿರುವದು ಅವರ ವಿಶ್ವಮಾನ್ಯತೆಗೆ ಸಾಕ್ಷಿ.
12 ನೇ ಶತಮಾನದಲ್ಲಿ ಜರುಗಿದ ಕಲ್ಯಾಣ ಕ್ರಾಂತಿ ಸಾಮಾನ್ಯವಾದುದಲ್ಲ. ಅದರ ಸ್ವರೂಪ, ಉದ್ದೇಶ, ಧ್ಯೇಯ ಎಲ್ಲವೂ ಅಸಾಮಾನ್ಯ. ನಿಜವಾದ ಕ್ರಾಂತಿಯೆಂದರೆ ಬರಿ ವಿಚಾರಗಳಲ್ಲಿ ಆಗುವ ಬದಲಾವಣೆ ಅಲ್ಲ, ನಮ್ಮ ಸಂವೇದನೆಗಳಲ್ಲಿ ಆಗುವ ಬದಲಾವಣೆ. ನಮ್ಮ ನಾಡಿನಲ್ಲಿ ಇಂದಿಗೂ ಅನೇಕ ಸವಾಲುಗಳಿವೆ. ಅವನ್ನು ಬಗೆಹರಿಸಲು ಕಾನೂನಾತ್ಮಕವಾದ ಪರಿಹಾರಗಳನ್ನು ಕೂಡ ಹುಡುಕಿಕೊಂಡಿದ್ದೇವೆ. ಎಲ್ಲದರ ಹತೋಟಿಗಾಗಿ ಹೆಣ್ಣಿನಪರ, ದಲಿತಪರ, ಅಲ್ಪಸಂಖ್ಯಾತಪರ ಎಂದೆಲ್ಲಾ ಕಾನೂನುಗಳನ್ನು ಮಾಡಿಕೊಂಡಿದ್ದೇವೆ. ಹಾಗಿದ್ದರೂ ಕೂಡ ಈ ದೇಶ ಏಕೆ ಸಮಸ್ಯೆಗಳ ಆಗರ ಆಗಿದೆಯೆಂದರೆ ನಮ್ಮ ಆಲೋಚನೆಗಳಲ್ಲಿ ಬದಲಾವಣೆ ಆಗಿದೆ ಸಂವೇದನೆಗಳಲ್ಲಿ ಆಗಿಲ್ಲ ಎನ್ನುವುದು ಸತ್ಯವೆಂದು ನಾವು ಒಪ್ಪಿಕೊಳ್ಳಲೇಬೇಕು.
ಬಸವಣ್ಣನವರ ನಿಸ್ವಾರ್ಥವಾದ ತಾಯಿತನದ ಧಾರೆ ಅವರನ್ನು ವಿಶ್ವಮಾನವನನ್ನಾಗಿಸಿದೆ. ತನ್ನಲ್ಲಿರುವ ಸರ್ವಸ್ವವನ್ನು ಕೊಡುವುದರ ಬದಲಾಗಿ ಏನನ್ನು ಅಪೇಕ್ಷಿಸದಿರುವ ಅವರ ಘನ ವ್ಯಕ್ತಿತ್ವವೆ ಅನನ್ಯ.
ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ,
ಇವ ನಮ್ಮವನೆಂದೆನಿಸಯ್ಯಾ
ಕೂಡಲ ಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-20/ವಚನ ಸಂಖ್ಯೆ-62)
ಎಂಬ ವಚನ ಬಸವಣ್ಣನವರ ವ್ಯಕ್ತಿತ್ವದ ಧಾರೆಯಾಗಿದೆ. ಒಬ್ಬ ಬಸವಣ್ಣನವರಂಥ ಮಹಾಪುರುಷನನ್ನು ಆದರ್ಶವಾಗಿರಿಸಿಕೊಂಡಾಗ ಮೊದಲು ಜಾಗೃತವಾಗುವದು ನೈತಿಕ ಪ್ರಜ್ಞೆ. ಯಾವುದೇ ತಪ್ಪುಗಳು ಸಂಭವಿಸಿದಾಗಲೂ ಬಸವಣ್ಣನ ವಾರಸುದಾರರು ಇಂಥ ತಪ್ಪು ಮಾಡಬಹುದೆ? ಎಂದು ಕೇಳುವಂಥ ನೈತಿಕ ಹಕ್ಕೊತ್ತಾಯವನ್ನು ನಾವು ಇಂದು ಅವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳುವುದರ ಮೂಲಕ ಪಡೆದುಕೊಂಡಿದ್ದೇವೆ.
ಜಗತ್ತಿನಲ್ಲಿ ಎಲ್ಲರೂ ತಮ್ಮ ಕುಲ ಗೋತ್ರ ಅಧಿಕಾರ ಎಂಬೆಲ್ಲ ಉತ್ಕೃಷ್ಟತೆಗಳಿಂದ ಗುರುತಿಸಿಕೊಂಡರೆ ಅವರು ಗುರುತಿಸಿಕೊಳ್ಳುವದು ಹೀಗೆ:
ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರೂ ಹೊಲದಲ್ಲಿ ಬೆರಣಿಗೆ ಹೋಗಿ,
ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-90/ವಚನ ಸಂಖ್ಯೆ-346)
ಅವರ ವಿನಯ, ವಿವೇಕ, ಆತ್ಮ ಶೋಧನೆಗೊಡ್ಡುವ ಪರಿ ಅವರನ್ನು ತಮ್ಮೊಳಗೆ ತಾ ಅನವರತವೂ ಎಚ್ಚರವಾಗಿರಿಸುವ ರೀತಿಯಾಗಿದೆ.
ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ,
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ.
ಕೂಡಲಸಂಗಮದೇವಾ, ಎನಗಿದೇ ದಿಬ್ಯ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-88/ವಚನ ಸಂಖ್ಯೆ-335)
ಎಂದು ಹೇಳುವ ಮೂಲಕ ಎಲ್ಲ ಹಿರಿಮೆಯ ಭ್ರಮೆಗಳನ್ನು ಕಳಚಿಕೊಳ್ಳುವರು. ಯಾವ ಅನ್ಯ ಸಾಕ್ಷಿ ಆಧಾರಗಳೂ ಇಲ್ಲಿ ಬೇಕಿಲ್ಲ. ಕೇವಲ ಮನಸಾಕ್ಷಿ ಹಾಗೂ ಆತನ ಪಾದಸಾಕ್ಷಿ ಸಾಕು ಎನ್ನುವದೇ ಪ್ರಾಂಜಲತೆಯ ಶಿಖರವಾಗಿದೆ.
ಜಗತ್ತಿನ ಬಹುದೊಡ್ಡ ಸಮುದಾಯದ ದೈವವಾದ ಏಸುಕ್ರಿಸ್ತ ತಾನು ದೇವರ ಮಗ, ದೇವರೆ ತನ್ನನ್ನು ಭೂಮಿಗೆ ಕಳುಹಿದನೆಂದು ಹೇಳುವನು. ಬಸವಣ್ಣವರು “ಉತ್ತಮ ಕುಲದಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯ” ಎನ್ನುವರು.
ಉತ್ತಮಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,
ದಾಸಯ್ಯಾ ಶಿವದಾನವನೆರೆಯ ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತ ಮಹಿಮ,
ಕೂಡಲಸಂಗಮದೇವಾ, ಶಿವಧೋ ಶಿವಧೋ!
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-90/ವಚನ ಸಂಖ್ಯೆ-344)
ಶರಣ ಸಮೂಹದಲ್ಲಿ “ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ” ಎನ್ನುವರು.
ಮಾವಿನಕಾಯೊಳಗೆ ಒಂದು ಎಕ್ಕೆಯ ಕಾಯಿ ನಾನಯ್ಯಾ.
ಆನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ,
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-87/ವಚನ ಸಂಖ್ಯೆ-333)
ಸಾಮಾನ್ಯವಾಗಿ ನಾಯಕನಿಗಿರುವ ಅಹಮಿಕೆ, ಗರ್ವ, ಕೀರ್ತಿ, ಪ್ರತಿಷ್ಟೆಗಳ ವ್ಯಾಮೋಹ ಇವು ಯಾವವೂ ಅವರನ್ನು ಕಾಡುವದಿಲ್ಲ. ಇಷ್ಟೊಂದು ಮೃದು ಭಾವದ ಬಸವಣ್ಣವರು ಪ್ರಭುತ್ವವನ್ನು ಎದುರಿಸುವ ಪ್ರಶ್ನೆ ಬಂದಾಗ, ಶೋಷಿತರ ಬೆಂಬಲದ ಪ್ರಶ್ನೆ ಬಂದಾಗ ಅಷ್ಟೇ ಗಟ್ಟಿಗೊಂಡುಬಿಡುವರು.
ನ್ಯಾಯ ನಿಷ್ಠುರಿ; ದಾಕ್ಷಿಣ್ಯಪರ ನಾನಲ್ಲ,
ಲೋಕವಿರೋಧಿ; ಶರಣನಾರಿಗಂಜುವವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪವನಾಗಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-204/ವಚನ ಸಂಖ್ಯೆ-754)
ಎನ್ನುವರು.
ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ,
“ಅಯ್ಯಾ” ಎಂದಡೆ ಸ್ವರ್ಗ, “ಎಲವೊ” ಎಂದಡೆ ನರಕ.
ದೇವಾ, ಭಕ್ತಾ, ಜಯಾ, ಜೀ[ಯಾ] ಎಂಬ ನುಡಿಯೊಳಗೆ
ಕೈಲಾಸವೈದುವುದೆ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-65/ವಚನ ಸಂಖ್ಯೆ-240)
“ಅಯ್ಯಾ ಎಂದಡೆ ಸ್ವರ್ಗ; ಎಲವೋ ಎಂದಡೆ ನರಕ” ಆ ಎರಡೂ ಲೋಕಗಳು ಮತ್ತೆಲ್ಲಿಯೂ ಇಲ್ಲ ಆಡುವ ಮಾತಿನಲ್ಲೇ ಇವೆ ಎಂದು ಸುಸಂಸ್ಕೃತ ನುಡಿ-ನಡೆಗಳೇ ಬದುಕಿನ ನಿಜ ಮೌಲ್ಯಗಳೆನ್ನುವರು.
ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-44/ವಚನ ಸಂಖ್ಯೆ-155)
ಎಂದು ಹೇಳುತ್ತ ಇಹದ ಬದುಕಿನಲ್ಲಿ ಬೇಕಾದವರು ಪರದ ನೆಲೆಗೆ ಸನ್ನಿಹಿತರು, ಇಲ್ಲಿ ಬೇಡವಾದವರು ಅಲ್ಲಿಗೂ ಅನರ್ಹರು ಎಂದು ಈ ಬದುಕಿನ ಬಂಡವಾಳವೇ ಸನ್ನಡತೆ, ಸದ್ವಿಚಾರ ಆಗಿವೆ ಎನ್ನುವರು.
ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-67/ವಚನ ಸಂಖ್ಯೆ-247)
ಎಂದು ದಯೆಯೇ ಎಲ್ಲ ಧರ್ಮಗಳ ಬೇರು ಆಗಿದೆ ಎಂಬ ಮಾತು ಅವರ ಜೀವಕಾರುಣ್ಯಕೆ ಮಿಡಿಯುವ ಅದಮ್ಯ ಭಾವಸ್ಪಂದನೆ ಆಗಿದೆ. ಇಂತಹ ಅತೀತವಾದ ಕರುಣಾರಸವೇ ಅವರನ್ನು ದೇಶ, ಕಾಲ, ಭಾಷೆಗಳ ಗಡಿ ದಾಟಿಸುತ್ತಲೇ ಇರುವದು.
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು.
ಕೊಂದಹರೆಂಬುದನರಿಯದೆ ಬೆಂದ ಒಡಲ ಹೊರೆವುತ್ತಲದೆ,
ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು.
ಕೊಂದವರುಳಿವರೆ ಕೂಡಲಸಂಗಮದೇವಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-37/ವಚನ ಸಂಖ್ಯೆ-129)
ಹುಟ್ಟಿದ್ದು ಸಾಯುವದು ಸಹಜ. ಆದರೆ ಜೀವ ಕೊಡಲು ಯೋಗ್ಯತೆ ಇಲ್ಲದ ಜನರಿಗೆ ಕೊಲ್ಲುವ ಅಧಿಕಾರ ಇದೆಯೆ? ತಮ್ಮ ಜೀವದ ಹರಕೆಗಾಗಿ ಕೊಲ್ಲುವವರು ತಾವೇನು ಶಾಶ್ವತವಾಗಿ ಇರುವರೇ, ಅವರಿಗೆ ಸಾವಿಲ್ಲವೇ ಎಂದು ಪರಮ ಸತ್ಯದ ಅರಿವನ್ನು ಬಸವಣ್ಣನವರು ಕೊಡುವರು.
ಇತ್ತೀಚೆಗೆ ಪ್ರಧಾನ ಮಂತ್ರಿಗಳು ಸ್ವಚ್ಛತಾ ಅಭಿಯಾನವೆಂದು ಭಾರತವನ್ನ ಸ್ವಚ್ಛವಾಗಿ ಇರಿಸಲು ಅನೇಕ ಯೋಜನೆಗಳನ್ನು ಕೈಗೊಂಡಿದ್ದರು. ಅವು ಎಷ್ಟರ ಮಟ್ಟಿಗೆ ಸಫಲವಾದವು ಎಂದು ಹೇಳಲಾಗದು. ಆದರೆ 12 ನೇಯ ಶತಮಾನದಲ್ಲಿ ಬಸವಣ್ಣನವರು ಕೈಗೊಂಡದ್ದು ಒಳಗಿನ ಮತ್ತು ಹೊರಗಿನ ಪರಿಶುದ್ಧತೆಯ ಅಭಿಯಾನ. ಇದು ಒಳಶುದ್ಧತೆಯಿಂದ ಹೊರಶುದ್ಧತೆಯೆಡೆಗೆ ಗಮಿಸುವ ನಿರಂತರ ಪಯಣ.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-235)
ಈ ಪರಿಶುದ್ಧತೆಗಾಗಿ ಬಹಿರಂಗದ ಯಾವ ಕಾನೂನು ಕಟ್ಟೆಳೆಗಳು ಬೇಕಿಲ್ಲ. ಸ್ವಯಂಪ್ರೇರಣೆಯಿಂದಾಗುವ ಪರಿವರ್ತನೆ ಇದು. ಅಂತರಂಗದ ಸಂಸ್ಕಾರಯುತ ಸದ್ಭಾವನೆಗಳೇ ಇಲ್ಲಿ ಚೌಕಟ್ಟು. ಆ ಮನಸಾಕ್ಷಿ ಬಿಟ್ಟು ಬೇರೊಂದು ಇಲ್ಲ ಅನ್ನುವ ಭಾವವೇ ಆ ಮಹಾನ್ ಸಂಸ್ಕೃತಿಗೆ ಕಳಶಪ್ರಾಯವಾಗಿದೆ. ಈ ರೀತಿ ಬಸವ ಎನ್ನುವ ಪ್ರಜ್ಞೆ ನಮಗೆ ದಕ್ಕುವುದು ಅರಿವು ಹಾಗೂ ಅಂತಃಕರಣದ ಸ್ಫುರಣೆಯ ನೆಲೆಯಲ್ಲಿ ಮಾತ್ರ.
ಬಸವಣ್ಣನವರ ಬಹು ದೊಡ್ಡ ಕೊಡುಗೆ ಎಂದರೆ ಕಾಯಕ ಸಂಸ್ಕೃತಿ. ಇಲ್ಲಿಯವರೆಗೆ ಇದ್ದ ಕಸುಬುಗಳಿಂದ ಆದ ಜಾತಿಗಳು ಆ ಜಾತಿ ವರ್ಗದ ಮೂಲಕ ಶೋಷಣೆ ಎಲ್ಲದಕ್ಕೂ ಬಸವಣ್ಣವರು ಕೊಟ್ಟದ್ದು ಒಂದೇ ಏಟು. ಅವರು ಇಲ್ಲಿಯವರೆಗೆ ಇದ್ದ ಆ ಎಲ್ಲ ಕಾಯಕಗಳ ಪರಿಭಾಷೆಯನ್ನೇ ಸಂಪೂರ್ಣವಾಗಿ ಬೇರು ಸಮೇತ ಬದಲಿಸಿದರು. ಶ್ರದ್ಧೆಯಿಂದ, ಪ್ರೀತಿಯಿಂದ, ಸತ್ಯದಿಂದ ಮಾಡುವ ಯಾವುದೇ ಕೆಲಸವು ಕಾಯಕ. ಕಾಯಕದಲ್ಲಿ ಮೇಲಿಲ್ಲ ಕೀಳಿಲ್ಲ ಎಂದು ಕಾಯಕವನ್ನು ದಿವ್ಯತ್ವದ ಸ್ಥಿತಿಗೆ ಒಯ್ದರು. ಇಷ್ಟೇ ಅಲ್ಲದೆ ಗಳಿಸಿದ ಹಣದಲ್ಲಿ ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಬಳಸಿ ಉಳಿದದ್ದನ್ನು ಸಮಾಜಕ್ಕೆ ಮರಳಿಸುವ ಬಹು ದೊಡ್ಡ ವ್ಯಾಪ್ತಿಯನ್ನು ಅದಕ್ಕೆ ಒದಗಿಸಿ ಅದನ್ನು ದಾಸೋಹ ಎಂದರು. ಸಮಾನ ಹಂಚಿಕೆಯ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಕಾರಣರಾದರು.
ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ
ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು
ವಂದಿಸಿ, ಪೂಜಿಸಿ,
ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ.
ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-235)
“ದಾಸಿ ಪುತ್ರನಾಗಲಿ, ವೇಶ್ಯಾ ಪುತ್ರನಾಗಲಿ ಶಿವದೀಕ್ಷೆಯಾದಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ ಪೂಜಿಸಿ” ಎನ್ನುವುದರ ಮೂಲಕ ಜಗತ್ತಿನಲ್ಲಿ ಎಲ್ಲಿಯೂ ಕಾರ್ಯಗತ ಆಗದಂಥ ಸಮಾಜದಿಂದ ತುಚ್ಛೀಕರಿಸಲ್ಪಟ್ಟ ವೇಶ್ಯೆಯರನ್ನೂ ಅವರ ಸಂತಾನವನ್ನೂ ಮುಖ್ಯವಾಹಿನಿಗೆ ತಂದು ಸೇರಿಸಿದ್ದು ಒಂದು ವಿಸ್ಮಯವೇ ಸರಿ.
ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ,
ರುದ್ರಪದವಿಯನೊಲ್ಲೆ.
ನಾನು ಮತ್ತಾವ ಪದವಿಯನೊಲ್ಲೆನಯ್ಯಾ.
ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-94/ವಚನ ಸಂಖ್ಯೆ-361)
“ಬ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ, ರುದ್ರ ಪದವಿಯನೊಲ್ಲೆ, ಆನು ಮತ್ತಾವ ಪದವಿಯನೊಲ್ಲೆಯಯ್ಯಾ ಕೂಡಲಸಂಗಮದೇವಾ ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ” ಎಂದು ಶರಣರ ಸೇವೆಗಾಗಿಯೇ ಅನವರತ ಹಾತೊರೆಯುವ ಆ ಮನಸ್ಸು ಬಸವಣ್ಣನವರದಲ್ಲದೆ ಮತ್ತಾರದೂ ಇರಲು ಸಾಧ್ಯವಿಲ್ಲ.
ಶರಣರೆಲ್ಲರೂ ಬಸವಣ್ಣವರನ್ನು ಜಗ ಬೆಳಗಿದ ಸೂರ್ಯನೆಂದು ಪರಿಪರಿಯಾಗಿ ಭಕ್ತಿ, ಗೌರವಾದರಗಳಿಂದ ಸ್ಮರಿಸಿದ್ದಾರೆ.
ಸುಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ದುಃಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ.
ಇದು ಕಾರಣ, ಬಸವಣ್ಣ ಬಸವಣ್ಣ
ಎನುತಿರ್ದೆನು ಕಾಣಾ, ಕಲಿದೇವಯ್ಯ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-310/ವಚನ ಸಂಖ್ಯೆ-760)
ಸುಖ ಬಂದಾಗಲೂ ದುಃಖ ಬಂದಾಗಲೂ ಬಸವಣ್ಣನವರನ್ನೇ ನೆನೆವೆನು. ಬಸವಣ್ಣನ ನೆನೆದಲ್ಲದೆ ಭಕ್ತಿಯೂ ಇಲ್ಲ ಮುಕ್ತಿಯೂ ಇಲ್ಲ ಎಂದು ವೀರಗಂಟಿ ಶರಣ ಮಡಿವಾಳ ಮಾಚಿದೇವರು ಸ್ಮರಿಸುವರು.
ದೇವಲೋಕದವರಿಗೂ ಬಸವಣ್ಣನೆ ದೇವರು.
ಮರ್ತ್ಯಲೋಕದವರಿಗೂ ಬಸವಣ್ಣನೆ ದೇವರು.
ನಾಗಲೋಕದವರಿಗೂ ಬಸವಣ್ಣನೆ ದೇವರು.
ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ
ಬಸವಣ್ಣನೆ ದೇವರು.
ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂ
ನಿಮ್ಮ ಶರಣರಿಗೂ ಬಸವಣ್ಣನೆ ದೇವರು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-83/ವಚನ ಸಂಖ್ಯೆ-234)
“ದೇವಲೋಕ, ಮರ್ತ್ಯಲೋಕ, ಮೇರುಗಿರಿ, ಮಂದರಗಿರಿ, ಶರಣರೆಲ್ಲರಿಗೂ ಬಸವನೇ ದೇವರು” ಎಂದು ವೈರಾಗ್ಯನಿಧಿ ಅಕ್ಕಮಹಾದೇವಿಯವರು ಭಕ್ತಿಯಿಂದ ನೆನೆವರು. ಸಮಕಾಲೀನ ಶರಣರು ಮಾತ್ರವಲ್ಲದೆ ಅಂದಿನಿಂದ ಇಂದಿನವರೆಗೂ ಎಲ್ಲಾ ಕವಿಗಳು, ಸಂತರು,ದಾರ್ಶನಿಕರು ಅವರನ್ನು ನೆನೆಯುತ್ತಲೇ ಬಂದಿರುವರು.
ಬಸವನೆಂದಡೆ ಪಾಪ ದೆಸೆಗೆಟ್ಟು ಹೋಗುವುದು,
ಬಸವನ ಪಾದ ನಂಬಿದ ಭಕ್ತರು,
ಹಸನಾದರಯ್ಯ ಸರ್ವಜ್ಞ.
ಎಂದು ಸರ್ವಜ್ಞ ಕೂಡ ಅವರ ಮಹಿಮೆಯನ್ನು ಕೊಂಡಾಡುವನು.
ಬಸವರಾಜ್ಯದ ಸಿರಿಯು ಬಸವ ಬಡವರ ನಿಧಿಯು
ಬಸವ ಮಳೆ ಬೆಳೆಯು ನಾಡೊಳಗೆ ನಿಜದೀಪ
ಬಸವನೇ ಸಗ್ಗ ಸೋಪಾನ.
ಎಂದು ಜನಪದರರು ಕೊಂಡಾಡುವರು.
ಅಂತಹ ದಿವ್ಯ ಚೇತನದ ಹೆಸರನ್ನು ನಮ್ಮ ನಾಡಿನ ಗೌರವ, ಅಭಿಮಾನ, ಸಂಸ್ಕೃತಿಯ ಕುರುಹಾಗಿ ಸಾಂಸ್ಕೃತಿಕ ನಾಯಕ ಎಂದು ಇರಿಸಿಕೊಂಡಿರುವದು ನಾಡಿಗೆ ಸಂದ ನಿಜವಾದ ಗೌರವವಾಗಿದೆ. ಒಬ್ಬ ಮಹಾನ್ ದಾರ್ಶನಿಕನ ನಾಮಸ್ಮರಣೆಯಿಂದ ಅಂತರಂಗದ ಅರಿವಿನ ಎಚ್ಚರವನ್ನು ಸದಾ ಕಾಪಿಡಬಲ್ಲದಾದರೆ ಅದಕ್ಕಿಂತ ಮಿಗಿಲಾದುದು ಯಾವುದೂ ಬೇಕಿಲ್ಲ. ಒಂದು ಸುಸಂಸ್ಕೃತ ಸಮಸಮಾಜದ ಪ್ರತಿನಿಧಿಯಾಗಿ ಅವರನ್ನು ಇರಿಸಿಕೊಂಡು ಮತ್ತೆ ಕಲ್ಯಾಣವನ್ನಾಗಿ ಈ ನಾಡನ್ನು ಕಟ್ಟಬೇಕಿದೆ. ಅದಕ್ಕಾಗಿ “ಕರುನಾಡಿನ ಸಾಂಸ್ಕೃತಿಕ ನಾಯಕ” ಎಂದು ಇರಿಸಿದ ಈ ಮೊದಲ ಹೆಜ್ಜೆ ನಿಜದ ನೆಲೆಯಲ್ಲಿ ಸಾರ್ಥಕತೆ ಪಡೆಯಲಿ.
ಶ್ರೀಮತಿ. ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥ ಪುರ,
ಮಾಳಮಡ್ಡಿ, ಧಾರವಾಡ.
ಫೋ ನಂ. 9986 437 474
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51410