
ಎನ್ನನಾಗಳೆ ಬಂದಿವಿಡಿದೆ ಗಡ ನೀನು.
ನಿಮ್ಮ ಹಿಡಿವಡೆ ಹಿಡಿವರು, ತನುವಿರೆ ತನು ಬೇರಾದವರು.
ನಿಮ್ಮ ಹಿಡಿವಡೆ ಹಿಡಿವರು, ಮನವಿರೆ ಮನ ಬೇರಾದವರು.
ನಿಮ್ಮ ಹಿಡಿವಡೆ ಹಿಡಿವರು, ಕೈಯಿರೆ ಕೈಬೇರಾದವರು.
ಈಸುಳ್ಳವರು ಮೊದಲಾಗಿ ನಿಮ್ಮ ಹಿಡಿಯಲಾರರು.
ಕಪಿಲಸಿದ್ಧಮಲ್ಲಿಕಾರ್ಜುನಾ
ನಿಮ್ಮ ಹಿಡಿದು ತಡೆಯಲಾನೇತರವನಲ್ಲ.
ಕರುಣದಿಂದ ಬಾರಾ, ಎನ್ನ ದೇವರ ದೇವಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-388/ವಚನ ಸಂಖ್ಯೆ-1246)
ಶರಣ ಸಂಕುಲದಲ್ಲಿ ಶಿವಯೋಗಿ ಸಿದ್ಧರಾಮರದು ತುಂಬಾ ಮಹತ್ವದ ಪಾತ್ರವಾಗಿದೆ. ವಿಶಿಷ್ಟ ಆಲೋಚನೆಯುಳ್ಳ ಸಿದ್ಧರಾಮೇಶ್ವರರು ಅದ್ಭುತ ಕನಸುಗಾರರು. “ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು, ಅನುಗೊಂಬನಿತು ಕಾಯಕ ನಡೆಯಬೇಕು” ಎಂಬುದು ಇವರ ಧ್ಯೇಯವಾಕ್ಯವಾಗಿತ್ತು. ಅಂಗಕ್ಕೆ ಲಿಂಗೋಪದೇಶ ಮನಕ್ಕೆ ಮಂತ್ರೋಪದೇಶವಾದ ಮೇಲೆ ಸಿದ್ಧರಾಮೇಶ್ವರರ ಆಲೋಚನೆಗಳು ಉದಾತ್ತವಾಗಿವೆ.
ಸೊನ್ನಲಿಗೆಯ ಸಿದ್ಧರಾಮೇಶ್ವರರು ಕಾಯಕಜೀವಿ. ಸಾಮಾಜಿಕ ಜವಾಬ್ದಾರಿಗಳನ್ನು ಜತನದಿಂದ ಕೈಗೊಂಡ ಕರ್ಮಯೋಗಿ. ಲೋಕ ಕಲ್ಯಾಣಾರ್ಥವಾಗಿ ತಮ್ಮ ಬದುಕನ್ನು ಸವೆಸಿದ ಸಿದ್ಧ ಶಿವಯೋಗಿ. “ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳ ಸಿದ್ಧರಾಮನೊಬ್ಬನೆ ಯೋಗಿ” ಎಂದು ಸೊಡ್ಡಳ ಬಾಚರಸರು ಶಿವಯೋಗಿ ಸಿದ್ಧರಾಮೇಶ್ವರರನ್ನು ಮನದುಂಬಿ ಹೊಗಳಿದ್ದಾರೆ. ಶಿವಯೋಗಿ ಸಿದ್ಧರಾಮರ ವಚನಾಂಕಿತಗಳು ನಾನಾ ವಿಧವಾಗಿವೆ. ಸುಪರಿಚಿತವಾದ ಅಂಕಿತನಾಮವೆಂದರೆ “ಕಪಿಲಸಿದ್ಧಮಲ್ಲಿಕಾರ್ಜುನಾ” ಅಥವಾ “ಕಪಿಲಸಿದ್ಧಮಲ್ಲಿನಾಥಾ” ಎಂಬುದಾಗಿದೆ. ಇವುಗಳ ಹೊರತಾಗಿ:
- ಕಪಿಲಸಿದ್ಧಮಲ್ಲೇಶ್ವರಾ.
- ಕಪಿಲಸಿದ್ಧಮಲ್ಲೇಶ್ವರ ದೇವರು.
- ಕಪಿಲಸಿದ್ಧಮಲ್ಲೇಶ.
- ಕಪಿಲಸಿದ್ಧಮಲ್ಲಿಕಾರ್ಜುನಲಿಂಗ.
- ಕಪಿಲಸಿದ್ಧಮಲ್ಲ.
- ಕಪಿಲಸಿದ್ಧಮಲ್ಲಿಕಾರ್ಜುನ.
- ಕಪಿಲಸಿದ್ಧಮಲ್ಲಿಕಾರ್ಜುನಲಿಂಗ.
- ಕಪಿಲಸಿದ್ಧಮಲ್ಲೇಶ್ವರ.
- ಕಪಿಲಸಿದ್ಧ ಮಲ್ಲಿನಾಥಯ್ಯ.
- ಯೋಗಿನಾಥ.
ಇಷ್ಟು ವಿಧದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ವಚನಾಂಕಿತಗಳು ಕಂಡುಬಂದಿವೆ.
ಸಿದ್ಧರಾಮೇಶ್ವರರನ್ನು ವಚನಕಾರರಾಗಿ ನೋಡಲಾಗಿ ಇವರು ವಚನಗಳನ್ನು ಭಾವದ ಅಭಿವ್ಯಕ್ತಿಗಾಗಿ ಬರೆದಿಲ್ಲ. ವಚನ ರಚನೆಯು ತನ್ನ ಕಪಿಲಸಿದ್ಧಮಲ್ಲಿಕಾರ್ಜುನನ್ನು ತಿಳಿಯುವ ಮಾರ್ಗವೆಂದು ಭಾವಿಸಿದ್ದಾರೆ. ವಚನವೆಂದರೆ ಇವರ ಪಾಲಿಗೆ “ಆದ್ಯರ ಆಜ್ಞೆ”, “ಈಶ್ವರನಿಗೆ ಬೆಳಗುವ ಜ್ಯೋತಿ” ಯಂತೆ ಕಂಗೊಳಿಸಿದೆ. ಮಾತಿಗಿಂತ ನಡೆಗೆ ಪ್ರಾಮುಖ್ಯತೆ ನೀಡುವ ಇವರು ಅನುಭವಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಸಿದ್ಧರಾಮ ಶಿವಯೋಗಿಗಳ ದಿವ್ಯ ಸಂದೇಶವೇ “ಅನುಭವವೆಂಬುದು ಅನುಭಾವಿಗಲ್ಲದೆ ಹೊತ್ತಗೆಯಲಿಲ್ಲ ನೋಡಾ” ಎಂಬುದಾಗಿದೆ.
ಪ್ರಸ್ತುತ ಶಿವಯೋಗಿ ಸಿದ್ಧರಾಮೇಶ್ವರರ ಈ ಮೇಲಿನ ವಚನವು ಲಿಂಗಾನುಸಂಧಾನದ ಸುಖ ಮತ್ತು ಲಿಂಗದೇವನು ಒಲಿಯುವ ಪರಿಯನ್ನು ಪ್ರಸ್ತುತಪಡಿಸುತ್ತದೆ. ಈ ವಚನದಲ್ಲಿ ಸಿದ್ಧರಾಮೇಶ್ವರರು ಬಳಸಿದ ಪದಗಳ ವಿಶೇಷತೆಯನ್ನು ನಾವು ಗಮನಿಸಬೇಕು.
- ಹಿಡಿವಡೆ: ಹಿಡಿಯುವ ಕ್ರಿಯೆ, ಹಿಡಿಯುವುದು ಎಂದರೆ ಬಂಧಿಸುವುದು, ವಶಪಡಿಸಿಕೊಳ್ಳುವುದು, ತನ್ನದಾಗಿಸಿಕೊಳ್ಳುವುದು.
- ತನು ಬೇರಾದವರು: ಮಲತ್ರಯಗಳಿಂದ, ದೇಹ ಮೋಹದಿಂದ ಬೇರ್ಪಟ್ಟವನು.
- ಮನ ಬೇರಾದವರು: ವಿಷಯ ವಾಸನಗಳಿಂದ, ಅರಿಷಡ್‌ವರ್ಗಗಳಿಂದ ಅಷ್ಟಮದಗಳಿಂದ, ಚಂಚಲತೆಯಿಂದ, ಅಸ್ಥಿರತೆಯಿಂದ ಬೇರ್ಪಟ್ಟವರು.
- ಕೈ ಬೇರಾದವರು: ದುಷ್ಟ ಕಾರ್ಯಗಳಿಂದ, ಲಂಚ-ವಂಚನೆಯಿಂದ ಬೇರ್ಪಟ್ಟವರು
- ಈಸುಳ್ಳವರು: ಈಸು-ಇಷ್ಟು, ಉಳ್ಳವರು-ಇಷ್ಟು ಉಳ್ಳವರು ಅಂದರೆ ತನು, ಮನ, ಕೈ ಉಳ್ಳವರು.
ಇವೆಲ್ಲಾ ಪದಗಳ ಅರ್ಥ ಒಂದೆಡೆಯಾದರೆ ವಚನದ ಭಾವವೇ ಮತ್ತೊಂದು ಅರ್ಥದತ್ತ ಕೊಂಡೊಯ್ಯುತ್ತದೆ. ಲಿಂಗತಂದೆಯನ್ನು ಹಿಡಿದು ಕರೆ ತರುವುದು ಅಷ್ಟು ಸುಲಭವಾದುದಲ್ಲ. ತನುವಿನಿಂದ, ಮನದಿಂದ, ಕೈಯಿಂದ ಲಿಂಗತಂದೆಯನ್ನು ಹಿಡಿದು ತರುವುದು ಅಥವಾ ತನು, ಮನ, ಕೈಗಳಿದ್ದ ಮಾತ್ರಕ್ಕೆ ಲಿಂಗತಂದೆಯನ್ನು ವಶಪಡಿಸಿಕೊಳ್ಳುತ್ತೇನೆ ಎಂಬುದು ಹುಚ್ಚು ಸಾಹಸದ ಕೆಲಸವೆಂದು ಸಿದ್ಧರಾಮೇಶ್ವರರು ಈ ವಚನದ ಮೂಲಕ ತಿಳಿಯಪಡಿಸಲು ಹೊರಟಿದ್ದಾರೆ.
ತನುವನ್ನು ಸವೆಸಿ ಮಾಡುವ ಭಕ್ತಿಯಿಂದ ದೇವ ಒಲಿಯುವನೇ? ವ್ರತ, ನಿಷ್ಠೆ, ಉಪವಾಸ, ಉರುಳುಸೇವೆ, ಅಸ್ತ್ರ ಹಾಕಿಸುವುದು, ಬೆಂಕಿ ಹಾರುವುದು ಇವುಗಳೆಲ್ಲಾ ಕೇವಲ ತನುವನ್ನು ದಂಡಿಸುವ ಕ್ರಿಯೆಗಳು, ಲಿಂಗತಂದೆಗೆ ಇಂತಹ ಆಚರಣೆಗಳ ಅವಶ್ಯಕತೆಯೇ ಇಲ್ಲ. ಹಾಗಾದರೆ ‘ಲಿಂಗತಂದೆ’ಯನ್ನು ಹಿಡಿಯಲು ಅಂದರೆ ವಶಪಡಿಸಿಕೊಳ್ಳಲು ಯಾರಿಗೆ ಸಾಧ್ಯವಿದೆ? ಎಂಬುದಕ್ಕೆ ಸಿದ್ಧರಾಮೇಶ್ವರರು ಕಂಡುಕೊಂಡ ಮಾರ್ಗ ಇಂತಿದೆ; “ನಿಮ್ಮ ಹಿಡಿವಡೆ ಹಿಡಿವರು, ತನುವಿರೆ ತನು ಬೇರಾದವರು” ಅಂದರೆ ನಿಮ್ಮನ್ನು ಹಿಡಿಯುವವರೇ ಹಿಡಿಯುವರು. ಅವರು ಯಾರೆಂದರೆ ತನುವಿದ್ದೂ ತನುವಿಂದ ಬೇರ್ಪಟ್ಟವರು. ತನುವಿನೊಳಗಿದ್ದು ತನುವ ಗೆದ್ದವರು. ತನುವಿನೊಳಗೆ ಆವರಿಸಿಕೊಂಡಿರುವ ಮಾಯೆಯಂಬ ತಮೋಶಕ್ತಿಯನ್ನು ಗೆದ್ದವರಿಗೆ ಮಾತ್ರ ಲಿಂಗತಂದೆಯ ಅನುಸಂಧಾನ ಸಾಧ್ಯ. ತನುವಿಗೆ ಈ ಮಾಯೆಯು ದುಷ್ಟಭಾವ, ದುಷ್ಟಗುಣ, ದುಷ್ಟಕ್ರಿಯೆಗಳಿಗೆ ಪ್ರೇರೇಪಿಸುತ್ತಲೇ ಇರುತ್ತದೆ. ಅಣವ, ಮಾಯಾ, ಕಾರ್ಮಿಕ ಎಂಬ ಮಲತ್ರಯಗಳು, ಶರೀರಕ್ಕೆ ಒದಗುವ ರೋಗ, ರುಜಿನ, ಸಾವು, ನೋವು, ಮುಂತಾದ ತಾಪತ್ರಯಗಳನ್ನು ನೀಗಿ ಯಾರು ಈ ತನುವಿಗೆ ಉಂಟಾಗುವ ಹಸಿವು, ತೃಷೆ, ಕಾಮಗಳನ್ನು ನಿಯಂತ್ರಸಿಕೊಂಡು ತನುವನ್ನು ಗೆಲ್ಲುವರೋ ಅವರಿಗೆ ಮಾಯೆಯೆಂಬ ಕತ್ತಲು ದೂರಾಗಿ ಲಿಂಗ ಬೆಳಕು (ಜ್ಞಾನ, ಅರಿವಿನ ಬೆಳಕು) ಒಳಗೊಳ್ಳುವುದು. ಇದೇ “ತನುವಿರೆ ತನು ಬೇರಾದವರಿಗೆ” ಮಾತ್ರ ಲಿಂಗಾನುಸಂಧಾನವಾಗಲು, ಲಿಂಗದ ಸಾಕ್ಷಾತ್ಕಾರವಾಗಲು ಸಾಧ್ಯ ಎಂಬುದನ್ನೇ ಇಲ್ಲಿ ಮನಗಾಣಬಹುದು.
ಇದೇ ತೆರನಾಗಿ ಲಿಂಗ ಸಾಕ್ಷಾತ್ಕಾರವಾಗುವುದು “ಮನದೊಳಗಿದ್ದು ಮನವ ಗೆದ್ದವರಿಗೆ” ಮಾತ್ರ. ಇದನ್ನೇ ಸಿದ್ಧರಾಮೇಶ್ವರರ ನುಡಿಯಲ್ಲಿ ಹೇಳುವುದಾದರೆ “ನಿಮ್ಮ ಹಿಡಿವಡೆ ಹಿಡಿದವರು, ಮನವಿರೆ ಮನ ಬೇರಾದವರು”. ಅಂದರೆ ಬಹಿರಂಗ ಪೂಜೆ ಬಿಟ್ಟು ಅಂತರಂಗದಲ್ಲಿ ‘ಲಿಂಗ’ವನ್ನು ಧ್ಯಾನಿಸಿ ಒಲಿಸಿಕೊಳ್ಳುವೆ, ವಶಪಡಿಸಿಕೊಳ್ಳುವೆ ಎಂದರೆ ಅದು ಅಸಾಧ್ಯವಾದದ್ದು. ಮನಕ್ಕಂಟಿದ ಧನ, ಕುಲ, ವಿದ್ಯಾ, ರೂಪ, ಯೌವನ, ಬಲ, ಪರಿವಾರ, ಅಧಿಕಾರ ಎಂಬ ಅಷ್ಟಮದಗಳನ್ನು ಕಳೆದುಕೊಂಡು, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಅಷ್ಟು ಅರಿಷಡ್ವರ್ಗಗಳಿಂದ ಬೇರ್ಪಟ್ಟು, ತನು, ಮನ, ಧನ, ರಾಜ, ಉತ್ಸಾಹ, ವಿಶ್ವಸೇವಕ ಎಂಬ ಸಪ್ತ ವ್ಯಸನಗಳಿಂದ ಬೇರ್ಪಟ್ಟು, ಅವಿದ್ಯೆ, ಅಹಂಕಾರ, ಬಯಕೆ, ದ್ವೇಷ, ಜೀವ ಬೆದರಿಕೆ ಎಂಬ ಪಂಚಕ್ಲೇಷಗಳಿಂದ ಬೇರ್ಪಟ್ಟು, ಇರುವಿಕೆ, ಹುಟ್ಟುವಿಕೆ, ಬೆಳೆಯುವಿಕೆ, ಪರಿಣಾಮಿಸುವಿಕೆ, ಕ್ಷೀಣಿಸುವಿಕೆ, ನಶಿಸುವಿಕೆ ಎಂಬ ಷಡ್ಭಾವಗಳಿಂದ ಬೇರ್ಪಟ್ಟು ಮನವನ್ನು ಇಂತಹ ಬಂಧನಗಳಿಂದ ಬೇರ್ಪಡಿಸಿಕೊಂಡವರಿಗೆ ಲಿಂಗಾನುಸಂಧಾನ, ಲಿಂಗಸಾಕ್ಷಾತ್ಕಾರ ಸಾಧ್ಯವಾಗುತ್ತದೆ.
ಅಂತೆಯೇ “ನಿಮ್ಮ ಹಿಡಿವಡೆ ಹಿಡಿವರು, ಕೈಯಿರೆ ಕೈ ಬೇದಾದವರು” ಅಂದರೆ ಲಿಂಗಕ್ಕೆ ಕೈಯಿಂದ ಮಾಡುವ ಷೋಡಶ ಪೂಜೆಗಿಂತ ಕೈ ಶುದ್ಧವಾದ ಅಂದರೆ ತನುಶುದ್ಧ, ಮನಶುದ್ಧವಾದಂತೆ ಕೈಶುದ್ಧವಾದ ನಿರಾಳ ಪೂಜೆಯಿಂದ ಲಿಂಗದೇವನನ್ನು ವಶಪಡಿಸಿಕೊಳ್ಳಬಹುದು ಎಂದು ಸವಿಸ್ತಾರವಾದ ಭಾವಗಳು ಈ ವಚನದಿಂದ ದೊರೆಯುತ್ತವೆ.
ಆದರೆ ಪ್ರಾಪಂಚಿಕರು ತನುವಿದ್ದು, ಮನವಿದ್ದು, ಕೈಯಿದ್ದು, ಬಾಯಿದ್ದು ಇಷ್ಟೆಲ್ಲವನ್ನು ಹೊಂದಿದ್ದರೂ ದೇವನನ್ನು ಹಿಡಿಯಲು ಸೋತು ಹೋಗಿದ್ದಾರೆ. ತನುವಿಗೆ, ಮನಕ್ಕೆ ಅಂಟಿಕೊಂಡ ಮಾಯೆಯನ್ನು ಕಳೆದುಕೊಂಡಾಗ (ಬೇರ್ಪಟ್ಟಾಗ) ಜಗವು ದೇವನಲ್ಲಿ, ದೇವ ಭಕ್ತನಲ್ಲಿ ಅಡಗಲು ಸಾಧ್ಯವಾಗುತ್ತದೆ. ನಾನೂ ಕೂಡ ಆ ದೇವನಲ್ಲಿ ಅಡಗಲು ದೇವನನ್ನು ವಶಪಡಿಸಿಕೊಳ್ಳಲು ಹಂಬಲಿಸುತ್ತಿರುವೆ. ಅದೂ ಕೂಡ ನನ್ನ ಸಾಮರ್ಥ್ಯವಲ್ಲ. ಲಿಂಗತಂದೆಯೇ ನಿನ್ನ ವಶ ಮಾಡಿಕೊಳ್ಳುವುದು, ನಿನ್ನ ತಡೆ ಹಿಡಿಯುವುದು ನನ್ನ ಸಾಮರ್ಥ್ಯವಲ್ಲ. “ಲಿಂಗದೇವನೇ ಒಲಿಯುವುದಾದರೆ ನೀನೇ ಕರುಣೆ ತೋರಿ ನನ್ನೊಳಗೆ ಒಂದಾಗು, ದೇವರ ದೇವಾ’ ಎಂದು ವಿನೀತರಾಗಿ ಬೇಡಿಕೊಳ್ಳುತ್ತಾರೆ. ಸಿದ್ಧರಾಮೇಶ್ವರರು.
ಈ ಭಾವವನ್ನು ವೀರವಿರಾಗಿಣಿ ಅಕ್ಕಮಹಾದೇವಿಯರಲ್ಲಿಯೂ ಕಾಣಬಹುದು. ಅಕ್ಕಮಹಾದೇವಿ “ತನುವಿನೊಳಗಿದ್ದು ತನುವ ಗೆದ್ದವಳು, ಮನದೊಳಗಿದ್ದು ಮನವ ಗೆದ್ದವಳು, ವಿಷಯದೊಳಗಿದ್ದು ವಿಷಯಂಗಳ ಗೆದ್ದವಳು”. ಸಿದ್ಧರಾಮೇಶ್ವರರ ಈ ವಚನದ ಭಾವವೆಲ್ಲಾ ಅಕ್ಕಮಹಾದೇವಿಯರ ಈ ವಚನದಲ್ಲೂ ಕಾಣಬಹುದು:
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ?
ನೀನು ಬಹಿರಂಗವ್ಯವಹಾರ ದೂರಸ್ಥನು.
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ?
ನಿನೂ ವಾಙ್ಮನಕ್ಕತೀತನು.
ಜಪ ಸ್ತೋತ್ರದಿಂದ ಒಲಿಸುವೆನೆ ಅಯ್ಯಾ?
ನೀನು ನಾದಾತೀತನು.
ಭಾವಜ್ಞಾನದಿಂದ ಒಲಿಸುವೆನೆ ಅಯ್ಯಾ?
ನೀನು ಮತಿಗತೀತನು.
ಹೃದಯಕಮಲಮಧ್ಯದಲಿ ಇಂಬಿಟ್ಟುಕೊಂಬೆನೆ ಅಯ್ಯಾ?
ನೀನು ಸರ್ವಾಂಗ ಪರಿಪೂರ್ಣನು.
ಒಲಿಸಲು ಎನ್ನವಳವಲ್ಲ; ನೀನೊಲಿಯುವುದೆ ಸುಖವಯ್ಯಾ
ಚನ್ನಮಲ್ಲಿಕಾರ್ಜುನಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-22/ವಚನ ಸಂಖ್ಯೆ-49)
“ಬಹಿರಂಗ ವ್ಯವಹಾರದಿಂದ ದೂರವಾದ, ವಾಙ್ಮನಕ್ಕತೀತನಾದ ನಾದಾತೀತನಾದ, ಮತಿಗತೀತನು, ಸರ್ವಾಂಗ ಪರಿಪೂರ್ಣನಾದ ಲಿಂಗದೇವನನ್ನು ಒಲಿಸುವ ಸಾಮರ್ಥ್ಯ ನನಗಿಲ್ಲ, ನೀನಾಗಿ ನೀನು ಒಲಿಯುವದರಲ್ಲಿ ಸುಖವಿದೆ ಎಂಬ ಅಕ್ಕಮಹಾದೇವಿಯರ ಭಾವದಂತೆ ಸಿದ್ಧರಾಮೇಶ್ವರರು ಸಹ “ನಿಮ್ಮ ಹಿಡಿದು ತಡೆಯಲಾನೇತರವನಲ್ಲ ಕರುಣದಿಂದ ಬಾರಾ, ಎನ್ನ ದೇವರ ದೇವಾ” ಎಂದು ಮನಃಪೂರ್ವಕವಾಗಿ ಆ ಲಿಂಗತಂದೆಗೆ ಶರಣಾಗಿ ಬಿಟ್ಟಿದ್ದಾರೆ. ಇದು ಸೋತು ಗೆಲ್ಲುವ ಪರಿ. ಯಾವಾಗಲೂ ಶರಣ ಸದ್ಭಕ್ತರು ದೇವನನ್ನು “ಸತ್ಯವೆಂಬ ಕೂರಲಗನೆ ಹಿಡಿದು” ಗೆದ್ದವರು. ಶಿವಯೋಗಿ ಸಿದ್ಧರಾಮರು ಇದೆ ಮಾರ್ಗದಲ್ಲಿ ನಡೆದವರು. ಅದಕ್ಕೆ ವಚನ ಪ್ರಾರಂಭದಲ್ಲೇ “ಎನ್ನನಾಗಳೆ ಬಂದಿವಿಡಿದೆ ಗಡ ನೀನು” ಎಂದಿದ್ದಾರೆ.
ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹಾನಗಲ್ಲ, ಹಾವೇರಿ ಜಿಲ್ಲೆ.
ಮೊಬೈಲ್ ಸಂ. 97407 38330
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()





Total views : 55993