ಕಲ್ಯಾಣವೆಂಬ ಪ್ರಣತಿ; ಬಿಂಬ-ಪ್ರತಿಬಿಂಬ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು,
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?
ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು
ಬದುಕಿದೆನು ಕಾಣಾ ಸಿದ್ಧರಾಮಯ್ಯಾ.
… … ವ್ಯೋಮಕಾಯ ಅಲ್ಲಮ ಪ್ರಭುಗಳು.

ಕಲ್ಯಾಣವನ್ನು ಅವಿಮುಕ್ತ ಕ್ಷೇತ್ರವನ್ನಾಗಿಸಿದ ಬಸವಣ್ಣನವರನ್ನು ಜ್ಞಾನ ವೈರಾಗ್ಯನಿಧಿ ಅಲ್ಲಮ ಪ್ರಭುಗಳು ಗುಹೇಶ್ವರ ಲಿಂಗದಲ್ಲಿ ದರ್ಶಿಸುತ್ತಾರೆ. ಶಿವಯೋಗಿ ಸಿದ್ಧರಾಮೇಶ್ವರರನ್ನು ಉದ್ದೇಶಿಸಿ ಹೇಳಿದ ಮಾತು “ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ” ಎನ್ನುವುದು ಇಡೀ ವಚನ ಚಳುವಳಿಯ ನೇತಾರರಾದ ಬಸವಣ್ಣನವರನ್ನು ಕೇಂದ್ರೀಕರಿಸಿಕೊಳ್ಳುತ್ತಾ ಅವರ ಬಹುಮುಖ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವಂತಿದೆ ಅಲ್ಲಮ ಪ್ರಭುಗಳ ಈ ವಚನ.

ಕಲ್ಯಾಣವೆಂಬುದು ಶುಭಕರ, ಮಂಗಳಕರ, ಶ್ರೇಯಸ್ಕರ, ಒಳಿತು, ಹಿತ ಎಂಬೆಲ್ಲ ಅರ್ಥಗಳಿಗೆ ನೆಲೆಯಾಗಿದೆ. ಕಲ್ಯಾಣವೆಂಬುದು ಕಲ್ಲು-ಮಣ್ಣುಗಳಿಂದ ಕಟ್ಟಿದ ಒಂದು ರಾಜ್ಯವಲ್ಲ. ದಯೆ, ಕರುಣೆ, ಪ್ರೀತಿ, ವಾತ್ಸಲ್ಯ, ಮಮತೆ ಮತ್ತು ಮಾನವೀಯತೆ ಎಂಬ ಹೃದಯ ರಸ ಬಸಿದು ಕಟ್ಟಿದಂಥ ಅಪರೂಪದಲ್ಲಿ ಅಪರೂಪದ ಸಾಮ್ರಾಜ್ಯ. ಕಲ್ಲು-ಮಣ್ಣುಗಳಿಂದ ಕಟ್ಟಿದ ಸಾಮ್ರಾಜ್ಯ ಕೆಡುವಂತಹದ್ದು. ಹೀಗಾಗಿ ಕಲ್ಯಾಣವೆಂಬುದು ಎರಡು ಅರ್ಥಗಳಲ್ಲಿ ನಿರೂಪಣೆಯಾಗುವ ರಾಜಧಾನಿ. ಒಂದು ಅರಸೊತ್ತಿಗೆಯ ಅರಸ ಬಿಜ್ಜಳನ ಕಲ್ಯಾಣ. ಮತ್ತೊಂದು ಭಕ್ತಿಯ ಬೆಳಸನ್ನು ಮಾನವ ಧರ್ಮವೆಂಬ ಭೂಮಿಯಲ್ಲಿ ಹುಲುಸಾಗಿ ಬೆಳೆಸಿದ ಸಾಮಾನ್ಯ ಭಕ್ತ ಕಟ್ಟಿದ ಕಲ್ಯಾಣ, ಅದುವೇ ಬಸವ ಕಲ್ಯಾಣ. ಬಿಜ್ಜಳನ ಕಲ್ಯಾಣಕ್ಕೆ ಯಾರು ಬೇಕೋ ಅವರು ಹೋಗಬಹುದಿತ್ತು ಬರಬಹುದಿತ್ತು. ಆದರೆ, ಬಸವ ಕಲ್ಯಾಣಕ್ಕೆ ಅಷ್ಟು ಸುಲಭವಾಗಿ ಹೋಗಲು ಅಸಾಧ್ಯವಾಗಿತ್ತು. ಬಿಜ್ಜಳನ ಕಲ್ಯಾಣವನ್ನು ಸುಲಭವಾಗಿ ಕೆಡವಬಹುದಿತ್ತು. ಆದರೆ ಬಸವ ಕಲ್ಯಾಣವನ್ನು ಅಷ್ಟು ಬೇಗ ಕೆಡವಲು ಆಗದು. ಸುಲಭವಾಗಿ ಪ್ರವೇಶಿಸಲೂ ಆಗದು. ಇದನ್ನೇ ವೈರಾಗ್ಯನಿಧಿ ಅಕ್ಕಮಹಾದೇವಿಯವರು ತಮ್ಮ ಒಂದು ವಚನದಲ್ಲಿ ಸ್ಪಷ್ಟಪಡಿಸುತ್ತಾರೆ.

ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು?
ಹೊಗಬಾರದು, ಅಸಾಧ್ಯವಯ್ಯಾ.
ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು.
ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು.
ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು.
ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು.

ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು? (ಯಾರು ಪ್ರವೇಶಿಸಬಹುದು?) ಎಂಬುದೇ ಅಕ್ಕಮಹಾದೇವಿಯವರ ಮುಖ್ಯ ಪ್ರಶ್ನೆ. ಈ ಪ್ರಶ್ನೆಯೇ ಆತ್ಮ ಜಾಗೃತಿಗೆ ಕೊಟ್ಟ ಕರೆಯಂತಿದೆ. ಯಾರಿಗೆ ಆಸೆ-ಆಮಿಷದಿಂದ ದೂರವಿರಲು ಸಾಧ್ಯವಿಲ್ಲವೋ ಅಂಥವರಿಗೆ ಕಲ್ಯಾಣದ ಪ್ರವೇಶ ಅಸಾಧ್ಯ. ಒಳಗಿನಿಂದಲೂ – ಹೊರಗಿನಿಂದಲೂ ಅಂದರೆ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಲ್ಲದವರಿಗೆ ಕಲ್ಯಾಣವನ್ನು ಪ್ರವೇಶಿಸುವುದು ಅಸಾಧ್ಯ. ನೀನು-ನಾನು ಎಂಬ ಉಭಯ ಭಾವವನ್ನು ಇನ್ನೂ ಯಾರಿಗೆ ಹರಿದೊಗೆಯಲು ಸಾಧ್ಯವಿಲ್ಲವೋ ಅಂಥವರಿಗೂ ಕಲ್ಯಾಣವನ್ನು ಪ್ರವೇಶಿಸಲು ಅಸಾಧ್ಯ. ನಾನು ಚೆನ್ನಮಲ್ಲಿಕಾರ್ಜುನನಿಗೆ ಒಲಿದ ಕಾರಣ ನಾನು-ನೀನು ಎಂಬ ದ್ವೈತದಿಂದ ಅದ್ವೈತ ಭಾವ (ಉಭಯ ಲಜ್ಜೆಯಳಿದೆನಾಗಿ) ಹೊಂದಿದೆನಾಗಿ ಕಲ್ಯಾಣದ ಒಳಗೆ ಪ್ರವೇಶ ಪಡೆಯಲು ನನ್ನಿಂದ ಸಾಧ್ಯವಾಯಿತು ಎಂದು ಅಕ್ಕಮಹಾದೇವಿಯವರು ಹೇಳುವಲ್ಲಿ ಕಲ್ಯಾಣದ ಪ್ರವೇಶ ಆತ್ಮಕಲ್ಯಾಣವಾಗಿ ಪರಿವರ್ತಿತವಾಗುವುದರ ಸ್ಪಷ್ಟ ಚಿತ್ರಣವಾಗಿದೆ.

ಶ್ರೀ. ಮಹಾಂತಪ್ಪ ನಂದೂರ ಅವರ “ಕಲ್ಯಾಣವೆಂಬ ಪ್ರಣತಿ” ನಿರ್ಮಾಣಕ್ಕೂ ಅದರ ಒಳಗಿನ ಪ್ರವೇಶಕ್ಕೂ ಆತ್ಮಕಲ್ಯಾಣವೆಂಬುದೇ ಸೇತುವೆಯಾಗಿದೆ. ಹೌದು ಶ್ರೀ ಮಹಾಂತಪ್ಪ ನಂದೂರ ಅವರು ಅರವತ್ಮೂರು ಶರಣರ ಸಚ್ಚಾರಿತ್ರ ದರ್ಶನ ಮಾಡಿ ಆತ್ಮಕಲ್ಯಾಣ ಕೈಗೊಂಡಿದ್ದರೆ, ಕೃತಿ ಓದಿ ಪುನೀತನಾದ ಸಹೃದಯವೂ ಆತ್ಮಕಲ್ಯಾಣ ಹೊಂದುವುದರಲ್ಲಿ ಎಡರು ಮಾತಿಲ್ಲ. ಇದೊಂದು ಕರ್ಪೂರದ ಬೆಳಕನ್ನು ಕಾಣುವ ಪರಿ. ಲೇಖಕನನ್ನಾವರಿಸಿದ ಶರಣರ ಬೆಳಕು ಸಹೃದಯನ ಆತ್ಮಕ್ಕೂ ಹರಿದು ಬರುವ ಪರಿಯು ಆತ್ಮಕಲ್ಯಾಣದ ಬೆಳಕು. ಇಂತಹ ಕಲ್ಯಾಣವೆಂಬ ಪ್ರಣತೆಯಲ್ಲಿ ಬೆಳಗಿದ ಬಸವಾದಿ ಶರಣರ ಮಹಾ ಬೆಳಕಿನಲ್ಲಿ ಮಿಂದೇಳುವ ಸೌಭಾಗ್ಯ ಈ ಕೃತಿಯಿಂದ ದೊರಕೊಳ್ಳುವುದರಿಂದ “ಕಲ್ಯಾಣವೆಂಬ ಪ್ರಣತಿ” ಎಂಬ ಶಿರೋನಾಮೆ ಇಲ್ಲಿ ಸಾರ್ಥಕತೆ ಪಡೆದುಕೊಂಡಿದೆ.

“ಕಲ್ಯಾಣವೆಂಬ ಪ್ರಣತಿ” ಶ್ರೀ ಮಹಾಂತಪ್ಪ ನಂದೂರ ಅವರ ವಿನೂತನ ಕಾವ್ಯ ಪ್ರಯೋಗ. ಆಧುನಿಕ ವಚನಗಳ ರಚನೆಯ ಈ ಕಾಲಘಟ್ಟದಲ್ಲಿ ಕಲ್ಯಾಣದ ಶರಣ ದೀಪಗಳನ್ನು ಸಾನೆಟ್ (ಅಷ್ಟಷಟ್ಪದಿ) ಎಂಬ ಕಾವ್ಯ ರೂಪದಲ್ಲಿ ಬೆಳಗಿಸಿದ ರೀತಿ ಅನನ್ಯವೂ ವಿನೂತನವೂ ಆಗಿದೆ. ಸಾನೆಟ್‌ ಪಾಶ್ಚಾತ್ಯ ಸಾಹಿತ್ಯದ ಕಾವ್ಯ ರೂಪವಾಗಿದ್ದರೂ ಶ್ರೀ ಮಹಾಂತಪ್ಪ ನಂದೂರ ಅವರ ಪ್ರತಿಭಾ ಕುಲುಮೆಯಲ್ಲಿ ಕನ್ನಡದ ರೂಪ ಧರಿಸಿದ್ದು ಅನುಪಮವಾಗಿದೆ.

ಅಷ್ಟಷಟ್ಪದಿ ಅಥವಾ ಸುನೀತ ಎಂದು ಕರೆಯಲ್ಪಡುವ “ಸಾನೆಟ್” ಇಟಲಿಯ ಸಾಹಿತ್ಯದ ಒಂದು ಪ್ರಕಾರ. ಅದು ಇಂಗ್ಲೀಷ್‌ ಭಾಷೆಗೆ ಭಾವಗೀತೆಯ ರೂಪದಲ್ಲಿ ಸಾಗಿ ಬಂದಿತು. ಇಂಗ್ಲೀಷ್‌ ಸಾಹಿತ್ಯದಲ್ಲಿ ಇದನ್ನು 15 ನೇ ಶತಮಾನದಲ್ಲಿ ಸರ್‌ ಥಾಮಸ್‌ ವ್ಯಾಟ್‌ (1503-1542), ಹೆನ್ರಿ ಹಾವರ್ಡ್ (1516–1547) ಪ್ರಾರಂಭದಲ್ಲಿ ಬಳಸಿಕೊಂಡ ಪಾಶ್ಚಾತ್ಯ ಕವಿಗಳು. ಇದನ್ನು ಅತ್ಯಂತ ಜನಪ್ರಿಯಗೊಳಿಸಿದವನು ವಿಲಿಯಂ ಷೇಕ್ಸ್‌ಪಿಯರ್ (1564–1616). ಈತ ಸುಮಾರು 154 ಸಾನೆಟ್‌ ಗಳನ್ನು ರಚಿಸಿದ್ದಾನೆ.

ಕನ್ನಡದಲ್ಲಿ ಅಷ್ಟಷಟ್ಪದಿ ಎಂದು ಕರೆಸಿಕೊಳ್ಳುವ ಈ ಪ್ರಕಾರವು ಒಟ್ಟು ಹದಿನಾಲ್ಕು ಪಂಕ್ತಿಯ ಕವನ. ಪ್ರತೀ ಸಾಲಿನಲ್ಲಿಯೂ ಹತ್ತು ಅಕ್ಷರಗಳಿರುತ್ತವೆ. ಇಲ್ಲಿ ಮೊದಲು ಎಂಟು ಪಂಕ್ತಿ (ಸಾಲುಗಳು) ಒಂದು ಭಾಗವಾದರೆ ಉಳಿದ ಆರು ಪಂಕ್ತಿ (ಸಾಲುಗಳು) ಇನ್ನೊಂದು ಭಾಗವಾಗಿರುತ್ತದೆ. ಪ್ರಾರಂಭದ ಎಂಟು ಸಾಲುಗಳಲ್ಲಿ ಒಂದು, ನಾಲ್ಕು, ಐದು ಮತ್ತು ಎಂಟನೇಯ ಸಾಲುಗಳಿಗೆ ಪ್ರಾಸವಿರುತ್ತದೆ. ಎರಡು, ಮೂರು, ಆರು, ಏಳು ಸಾಲುಗಳಿಗೆ ಸಮಾನ ಪ್ರಾಸವಿರುತ್ತದೆ. ಉಳಿದ ಆರು ಸಾಲುಗಳಲ್ಲಿ ಪ್ರಾಸದಲ್ಲಿ ವ್ಯತ್ಯಾಸವಾಗಬಹುದು. ಎಂಟನೇಯ ಸಾಲಿನಿಂದ ಒಂಭತ್ತನೇಯ ಸಾಲಿಗೆ ಸಾಗುವಾಗ ಭಾವಾಭಿವ್ಯಕ್ತಿ ತಿರುವು ಪಡೆಯುತ್ತದೆ. ಹೀಗೆ ಅಷ್ಟಷಟ್ಪದಿಯಲ್ಲಿ ರಚನೆಯಾದ ಕಾವ್ಯವು ಭಾವ ಪ್ರಕಟಣೆಗೆ ಹೆಚ್ಚು ಒತ್ತು ನೀಡುತ್ತದೆ. ಮೊದಲ ನಾಲ್ಕು ಸಾಲುಗಳು ಒಂದು ಭಾವವನ್ನು ಹೇಳುತ್ತವೆ. ಇದನ್ನು ಕ್ರಮವಾಗಿ ಎರಡು ಮತ್ತು ಮೂರನೇಯ ಚೌಪದಿಗಳು ಮುಂದೆ ಕೊಂಡೊಯ್ಯುತ್ತಾ ಉತ್ಕಟ ಭಾವವನ್ನು ಪ್ರಕಟಗೊಳಿಸುತ್ತವೆ. ಕೊನೆಯ ದ್ವಿಪದಿ (ಎರಡು ಸಾಲುಗಳು) ಗಳು ಒಟ್ಟು ಭಾವವನ್ನು ಸಂಗ್ರಹಿಸಿ ಮನಸ್ಸಿಗೆ ಪರಿಣಾಮಕಾರಿ ಚಿತ್ರಣವನ್ನು ಮೂಡಿಸುತ್ತದೆ.

ಕನ್ನಡದಲ್ಲಿ ಸುನೀತ ಪ್ರಕಾರದಲ್ಲಿ ಮೊದಲು ಪ್ರಯೋಗ ಮಾಡಿದವರು ಗೋವಿಂದ ಪೈ ನಂತರ ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಕುವೆಂಪು, ದ. ರಾ. ಬೇಂದ್ರೆ, ತೀ. ನಂ. ಶ್ರೀಕಂಠಯ್ಯ, ಪು. ತಿ. ನರಸಿಂಹಾಚಾರ್, ವಿ. ಕೃ. ಗೋಕಾಕ್, ವೀ. ಸೀತಾರಾಮಯ್ಯ ಮುಂತಾದವರು. ಮಾಸ್ತಿಯವರ “ಮಲಾರ” ಕುವೆಂಪು ಅವರ “ಕೃತ್ತಿಕೆ” ಈ ಪ್ರಕಾರದ ಪ್ರಸಿದ್ಧ ಸಂಕಲನಗಳು. ಇಂಥ ವಿಶಿಷ್ಟ ಪ್ರಕಾರದಲ್ಲಿ ಶ್ರೀ ಮಹಾಂತಪ್ಪ ನಂದೂರ ಅವರು ಅರವತ್ಮೂರು ಶರಣರ ಸಚ್ಚಾರಿತ್ರವನ್ನು ಕಟ್ಟಿ ಕೊಟ್ಟಿದ್ದು ನಿಜಕ್ಕೂ ಸಾಹಸವೇ ಸರಿ.

ಶ್ರೀ ಮಹಾಂತಪ್ಪ ನಂದೂರ ಅವರ ಅಷ್ಟಷಟ್ಪದಿಯಲ್ಲಿರುವ ಒಂದು ಸುನೀತದ ಮಾದರಿಯ ಜೊತೆಗೆ ನಂದೂರ ಅವರ ಕಾವ್ಯ ಶಕ್ತಿ, ಭಾಷಾ ಕೌಶಲ್ಯ ಮತ್ತು ಅಭಿವ್ಯಕ್ತಿ ವಿಧಾನವನ್ನು ದರ್ಶಿಸೋಣ.

ಸುನೀತದ ನಿಯಮಕ್ಕೊಳಪಟ್ಟ ಈ ಕವನ ಶರಣ ಆಯ್ದಕ್ಕಿ ಮಾರಯ್ಯನವರ ಇಡೀ ಚರಿತ್ರೆಯನ್ನೇ ಹದಿನಾಲ್ಕು ಸಾಲುಗಳಲ್ಲಿ ದಾಖಲಾದ ಚಮತ್ಕೃತಿ ಇದು. ಎಂಟು ಸಾಲುಗಳು ಪ್ರತ್ಯೇಕ, ನಾಲ್ಕು ಸಾಲಿನ ಚೌಪದಿ, ಕೊನೆಗೆ ದ್ವಿಪದಿಗಳು. ಅಕ್ಕಿ ಆಯುವ ಮಾರಯ್ಯನಿಗೆ ಅಕ್ಕಿ ಆಯುವುದು ಅನ್ನದ ಪ್ರಾಮಾಣಿಕ ದಾರಿ. ಅನ್ನಪೂರ್ಣೆ ಅಕ್ಕಮ್ಮ (ಲಕ್ಕಮ್ಮ) ಸತಿಯಾಗಿ ಬಂದಳು. ಇವಳು ಒಲವ ಸತಿಯಾಗಿ ಗುರುವಾದಳು. ಮಾರಯ್ಯನವರ ಇಮ್ಮನದ ಆಸೆಗೆ ನಿಜ ನೆಲೆಯ ತೋರಿದ ಗುರುತಾಯಿ ಅವಳು, ಎಂದು ಸತಿ-ಪತಿಗಳ ಧರ್ಮಯುತ ದಾಂಪತ್ಯ ಚಿತ್ರಿಸುವ ಕವಿ ಆಯ್ದಕ್ಕಿ ಲಕ್ಕಮ್ಮಳ “ಅಸಂಗ್ರಹ ನೀತಿ” ಯನ್ನು ಪ್ರತಿಪಾದಿಸುವ ರೀತಿ ಅನನ್ಯವಾಗಿದೆ. ಶರಣೆ ಲಕ್ಕಮ್ಮಳ ಈ ತತ್ವ ಕಲ್ಯಾಣದ ಕಣದಲ್ಲಿ ಕಾಳು-ಬಾಳು ಹಾಳಾಗಬಾರದು ಎಂಬುದರತ್ತ ವಿಸ್ತರಿಸಿಕೊಳ್ಳುತ್ತದೆ. ಆಳು-ಅರಸ ಯಾರಾದರೂ ಸರಿ ಈ ತತ್ವದಡಿಯಲ್ಲಿ ಬದುಕಬೇಕೆಂಬುದು ನೀತಿಯ ಅಭಿವ್ಯಕ್ತಿ ಇಲ್ಲಿ ಅನುಪಮವಾಗಿದೆ. ಕೊನೆಯಲ್ಲಿ ದ್ವಿಪದಿಗಳು ಮಾರಯ್ಯನವರ ಕಾಯಕದ ಆದರ್ಶವನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತವೆ. ಶರಣರಾದ ಆಯ್ದಕ್ಕಿ ಮಾರಯ್ಯನವರ ವಚನವನ್ನು ಬಳಸಿಕೊಂಡು ಕವಿ ಈ ದ್ವಿಪದಿಗಳ ಮೂಲಕ ಉದಾತ್ತವಾದ ಭಾವವನ್ನು ಓದುಗರಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ.

ಶ್ರೀ ಮಹಾಂತಪ್ಪ ನಂದೂರ ಅವರ ಅರವತ್ಮೂರು ಶರಣರ ಸರಿ ಸುಮಾರು ಎಪ್ಪತೈದು ಸುನೀತಗಳು ತುಂಬಾ ಶ್ರದ್ಧೆ ನಿಷ್ಠೆಯಿಂದ ಮೂಡಿ ಬಂದಿವೆ. ಒಂದು ಶರಣ ಜೀವ ಶರಣರ ಜೀವನ ರಚಿಸುತ್ತಾ ಧನ್ಯತೆ ಪಡೆದುಕೊಳ್ಳುವುದನ್ನು ಈ ಕೃತಿ ಓದಿದಾಗಲೇ ತಿಳಿಯುವುದು.

ಹೆಂಡದ ಮಾರಯ್ಯ, ಆಯ್ದಕ್ಕಿ ಮಾರಯ್ಯ, ಆಯ್ದಕ್ಕಿ ಲಕ್ಕಮ್ಮ, ಮಡಿವಾಳ ಮಾಚಿದೇವರು, ಹಾವಿನಹಾಳ ಕಲ್ಲಯ್ಯ, ಒಕ್ಕಲಿಗ ಮುದ್ದಣ್ಣ, ಕನ್ನದ ಮಾರಿತಂದೆ, ಅದ್ವೈತಿ ಚಂದಿಮರಸ, ಅರಿವಿನ ಚೇತನ ಕಿನ್ನರಿ ಬ್ರಹ್ಮಯ್ಯ, ಮಹಾಪ್ರಸಾದಿ ಬಿಬ್ಬಿ ಬಾಚಯ್ಯ, ಹಡಪದ ಅಪ್ಪಣ್ಣ, ವೈದ್ಯ ಸಂಗಣ್ಣ, ಬೊಂತಾದೇವಿ, ಗೋರಕ್ಷ, ಮುಗ್ಧ ಪೆದ್ದಣ್ಣ ಉರಿಲಿಂಗಪೆದ್ದಿ, ಹರಳಯ್ಯ, ಮಧುವರಸ-ಮಧುವಯ್ಯ, ದುಗ್ಗಳೆ, ಮೇದಾರ ಕೇತಯ್ಯ, ಘಟ್ಟಿವಾಳಯ್ಯ, ಕೀಲಾರದ ಭೀಮಣ್ಣ ಹೀಗೆ ಒಟ್ಟು ಅರವತ್ಮೂರು ಶಿವ-ಶರಣರ ಕಥೆ ಓದುಗರ ಗಮನ ಸೆಳೆಯುತ್ತವೆ. ಅಕ್ಕಮಹಾದೇವಿಯವರ ಕುರಿತು ಎರಡು, ಅಲ್ಲಮ ಪ್ರಭುಗಳ ಕುರಿತು ಎರಡು, ಸಿದ್ಧರಾಮರ ಕುರಿತು ಎರಡು, ವಿಶ್ವಗುರು ಬಸವಣ್ಣನವರನ್ನು ಕುರಿತು ಐದು, ಕಲ್ಯಾಣ ಕ್ರಾಂತಿ-ಪರಿಣಾಮ ಕುರಿತು ಒಂದು ಸುನೀತಗಳು ವಿಶಿಷ್ಟವಾಗಿ ರಚಿತಗೊಂಡಿವೆ.

ಹನ್ನೆರಡನೇ ಶತಮಾನದ ಶಿವ-ಶರಣರ ಬದುಕಿನ ತಂಗಾಳಿ ಇಲ್ಲಿ ತೀಡಿದೆ. ಶರಣ ಮೌಲ್ಯವೆಂಬ ನದಿ ಜುಳು ಜುಳು ಸದ್ದಿಲ್ಲದೆ ಇಲ್ಲಿ ಹರಿದಿದೆ. ಕಾವ್ಯ ಭಾಷೆಯಂತೂ ಮನಸ್ಸಿಗೆ ಮುದವಾಗಿದ್ದು ಓದಿಸಿಕೊಂಡು ಹೋಗುತ್ತದೆ. ಶ್ರೀ ಮಹಾಂತಪ್ಪ ನಂದೂರ ಅವರು ಕಟ್ಟಿ ಕೊಡುವ ಕಾವ್ಯದ ಅನುಭೂತಿ ಕನ್ನಡ ಕಾವ್ಯ ಪರಂಪರೆಗೆ ವಿನೂತನವಾಗಿದೆ. ಶಿವ-ಶರಣರ ಬದುಕು ಇವರ ಶಬ್ದ ಚಿತ್ರದಲ್ಲಿ ಪ್ರತಿಮೇಯಾಗಿ ಕಣ್ಣೆದುರಿಗೆ ಕಂಗೊಳಿಸುವಂತಿದೆ.

• “ಕರಣ ನಾಲ್ಕು ಮದವೆಂಟು ವ್ಯಸನಗಳೇಳು ಅರಿಷಡ್ವರ್ಗ …
ಅರಿದುಕೊಂಡರೆ ಸುಧೆ; ಮರೆದುಕೊಂಡಲ್ಲಿ ಸುರೆ” – ಹೆಂಡದ ಮಾರಯ್ಯನವರ ತತ್ವವನ್ನು ಕಟ್ಟಿ ಕೊಡುವ ಕವಿ ಪ್ರತಿಭಾ ಶಕ್ತಿಯಿದು.
• “ಮಡಿವಾಳನೆನಬಹುದೆ ಆಚೆ ದಡ ದಾಟಿ ನಿಂದವರ? ಶಾಪ ವಿಮೋಚನೆಗೆ ವೀರಭದ್ರ ಬಟ್ಟೆ ತೊಳೆಯುವ ಕಾಯಕಕೆ ಧರೆಗಿಳಿದಂತೆ” – ಮಡಿವಾಳ ಮಾಚಿದೇವರ ಜೀವನ ವೃತ್ತಾಂತ ಕಟ್ಟಿ ನಿಲ್ಲಿಸುವ ಕವಿಯ ಶಕ್ತಿ.
• “ನಾಯಿಯಿಂದ ವೇದವನೋದಿಸುವುದು, ಸತ್ತ ಮಗಳನೆಬ್ಬಿಸುವುದು, ಪವಾಡದ ಪರಿ ಸತ್‌ ಪಥದಲ್ಲಿ” – ಹಾವಿಹಾಳ ಕಲ್ಲಯ್ಯ ಶರಣರ ಪವಾಡ ತಿಳಿಸುವ ಕವಿಯ ಕಾವ್ಯ ಶಕ್ತಿ.
• “ಮಣ್ಣಿಗೆ ಕಣ್ಣನಿತ್ತ ಅನ್ನದಾತ ಅಣ್ಣ; ಕಲ್ಯಾಣದ ಮಣಿಹಕ್ಕೆ ಹೆಗಲು ಮುದ್ದಣ್ಣ. ಅಂಗವೇ ಭೂಮಿಯಾಗಿ ಲಿಂಗವೇ ಬೆಳೆಯಾಗಿ ವಿಶ್ವಾಸವೆಂಬ ಭತ್ತ ಒಳಿದು ಉಂಡು ಸುಖಿ” – ಒಕ್ಕಲಿಗ ಮುದ್ದಣ್ಣನನ್ನು ಪರಿಚಯಿಸಿದ ಪರಿ.
• “ಅರಮೆನಯಲ್ಲಿಲ್ಲದ್ದು ಅರಿವಿನ ಮನೆಯಲುಂಟು! ಹೊರಟನರಮನೆ ಬಿಟ್ಟು ಹರನ ಮನೆಯೆಡೆಗೆ ಚಿಮ್ಮಲಗಿ ನಿಜಗುಣ ಗುರುವಿನೆಡೆಗೆ” – ಅರಮನೆ ತೊರೆದು ಅರಿವಿನ ಮನೆಗೆ ನಡೆದು ಶರಣನಾದ ಅರಸ ಚಂದಿಮರಸನ ಕಥೆಯನ್ನು ನಿರೂಪಿಸುವ ಪರಿ.
• “ಅನ್ನ-ಹಸಿವು ಹಳಸಬಾರದು ಜಗದೀಶನ ಸನ್ನಿಧಿಯಲ್ಲಿ, ಪ್ರಸಾದ ಪ್ರಸನ್ನತೆ ಬ್ರಹ್ಮ-ಆನಂದ, ಪ್ರಸಾದದಂತೆ ಪದಾರ್ಥ ಬದುಕು, ಅರ್ಥಕ್ಕೆಟುಕದ ಕಾಣ್ಕೆ” – ಮಹಾಪ್ರಸಾದಿ ಬಿಬ್ಬಿ ಬಾಚಯ್ಯ ಶರಣರ ತತ್ವ ನಿರೂಪಿಸಿದ ಪರಿ.
• “ಅಕ್ಕ ನಾಗಲಾಂಬೆಯ ಕಕ್ಕುಲತೆಯ ಕೈ ಕೂಸು, ಕೂಡಲ ಸಂಗನ ಮಹಾಮನೆಯ ಅಂಗಳದಲ್ಲಿ ಅರಳುವ ಚೆಲು ಕುಸುಮವೈ ಗಂಗಾ” – ಗಂಗಾಂಬಿಕೆಯ ಚಿತ್ರಣ.
• “ಮಹಾಮನೆಯ ಮಂದಾರದಲ್ಲಿ ಪರಮಗಂಗೆ ನೀಲಾಂಬೆ ಭಿನ್ನ ಭಿನ್ನವ ಬಸವಲಿಂಗ ಪತಿಯಾದಲ್ಲಿ” – ನೀಲಾಂಬಿಕೆಯ ಚಿತ್ರಣ.
• ಅಕ್ಕ ಬರುವಲ್ಲಿ ಕಲ್ಯಾಣದ ಅಂತಃಕರಣ ಅರಳಿ ಹೂವಾಗಿ ಹೊರಳಿ ನಿಂತಿತ್ತು” – ಅಕ್ಕಮಹಾದೇವಿಯವರ ಚಿತ್ರಣ.
• “ನಾನು ಬಂದ ಕಾರ್ಯಕ್ಕೆ ನೀವು ಬಂದಿರಿ … ಕಲ್ಯಾಣ ಪ್ರಣತಿ, ನಾನು ತೈಲ, ಚೆನ್ನಬಸವ ಬತ್ತಿ, ಬಸವಣ್ಣನೇ ಜ್ಯೋತಿಯಾದನು. ಪ್ರಣತಿ ಒಡೆಯಿತು, ತೈಲ ಹರಿಯಿತು ಜ್ಯೋತಿ …” – ಅಕ್ಕ ನಾಗಮ್ಮನವರ ಚಿತ್ರಣ.

ಇಂತಹ ಹೊಳೆಯುವ ಕಿರಣಗಳಂತಹ ಲಿಂಗನುಡಿಗಳಿಂದ ಶ್ರೀ ಮಹಾಂತಪ್ಪ ನಂದೂರ ಅವರುಬಕಲ್ಯಾಣದ ಪ್ರಣತಿಯಲ್ಲಿ ಜ್ಯೋತಿರ್ಲಿಂಗಗಳನ್ನೇ ಬೆಳಗಿಸಿದ್ದಾರೆ. ವಿಶ್ವಗುರು ಬಸವಣ್ಣನವರನ್ನು ಭಕ್ತ ಬಸವ, ಮಹೇಶ ಬಸವ, ಪ್ರಸಾದಿ ಬಸವ, ಪ್ರಾಣಲಿಂಗಿ ಬಸವ, ಶರಣ ಬಸವ, ಐಕ್ಯ ಬಸವನಾಗಿ ಷಟಸ್ಥಲೋಪಾದಿಯಲ್ಲಿ ಕಂಡರಸಿದ ಪರಿ. ಶ್ರೀ ಮಹಾಂತಪ್ಪ ನಂದೂರ ಅವರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಮಾಡಿದ ಚಿಂತನೆ ಇವರೊಬ್ಬ ಅಪ್ಪಟ ಶರಣ ಚಿಂತಕ, ಶರಣ ಜೀವಿ ಎಂಬುದನ್ನು ಸಾಕ್ಷೀಕರಿಸುತ್ತದೆ. “ಉತ್ತಮವಾದ ಜೀವನ ಚರಿತ್ರೆ ಬರೆಯುವುದೆಂದರೆ ಒಂದು ಕಠಿಣತಮ ಬದುಕನ್ನು ನಡೆಸಿದಷ್ಟೆ ಕಷ್ಟ” ಎಂಬ ಲಿಟ್ಟನ್ ಸ್ಟ್ರೇಚಿ ಅವರ ನುಡಿಯಂತೆ ಶ್ರೀ ಮಹಾಂತಪ್ಪ ನಂದೂರ ಅವರು ಶರಣರ ಜೀವನ ಬರೆಯುತ್ತಾ ಬರೆಯುತ್ತಾ ಶರಣರೇ ಆದದ್ದು ಕೃತಿಯುದ್ದಕ್ಕೂ ದರ್ಶನವಾಗುತ್ತದೆ.

“ಗಾಳಿ ಗುಟುರಿಗೆ ಕಿವಿಗೊಟ್ಟು ಕೆಟ್ಟ ಬಿಜ್ಜಳ; ಕೆಟ್ಟಿತ್ತು ಕಲ್ಯಾಣ. ಎಳೆ ಹೂಟೆಯೆಳೆಯುತ್ತಿತ್ತು ಮದಗಜ. ದಯದ ಊರು ಧಗಧಗನೆ ಉರಿಯುತ್ತಿತ್ತು” ಕೇವಲ ಎರಡೇ ಎರಡು ಸಾಲುಗಳಲ್ಲಿ‌ ಇಡೀ ಕಲ್ಯಾಣ ಕ್ರಾಂತಿಯನ್ನೇ ಕಣ್ಣೆದುರಿಗೆ ನಿಲ್ಲಿಸುವ ಅದ್ಭುತ ಕಾವ್ಯ ಶಕ್ತಿ ಶ್ರೀ ಮಹಾಂತಪ್ಪ ನಂದೂರ ಅವರಿಗೆ ಸಿದ್ಧಿಸಿದೆ.

ಹನ್ನೆರಡನೇ ಶತಮಾನವೆಂದರೆ ಕನ್ನಡ ಸಾಹಿತ್ಯ ಸಂದರ್ಭಕ್ಕೆ ಒಂದು ಮಹಾಪರ್ವ. ಶಿವ-ಶರಣರು ಬದುಕಿ ಬಾಳಿದ ಈ ನೆಲವೇ ಅನುಪಮವಾದದ್ದು. ನಡೆ-ನುಡಿ ಸಿದ್ಧಾಂತ, ಕಾಯಕ-ದಾಸೋಹ, ಸಮಾನತೆ, ಸಹಬಾಳ್ವೆ ಕಟ್ಟಿಕೊಟ್ಟ ಶರಣರ ಅರಿವಿನ ಬುತ್ತಿ ಬಯಲ ಬುತ್ತಿ. ಯಾರು ಬೇಕಾದರೂ ಆ ಅರಿವಿನ ಬುತ್ತಿಯನ್ನು ಬಿಚ್ಚಿ ತಮ್ಮ ನೆತ್ತಿಯನ್ನು ತುಂಬಿಸಿಕೊಳ್ಳಬಹುದು. ಶರಣರು ಗತಿಸಿ ಸುಮಾರು ಒಂಭೈನೂರು ವರ್ಷಗಳಾದರೂ ಅವರು ಕಟ್ಟಿಕೊಟ್ಟ ಬುತ್ತಿ ಹುಲುಸಾಗಿ ಬೆಳೆಯುತ್ತಿದೆ. ಸಹಜವಾಗಿ, ಸರಳವಾಗಿ, ಶಾಂತ ಸಮಚಿತ್ತದಿಂದ ಬದುಕಿದ ಶರಣರ ಬದುಕು ದುರಿತ ಕಾಲಘಟ್ಟಕ್ಕೆ ಉಪಶಮನ ನೀಡುವಂತಹದ್ದು. ಅವರ ವಿಚಾರ ಧಾರೆಗಳು ಮನುಕುಲಕ್ಕೆ ಚೇತೋಹಾರಿಯಾಗಿವೆ. ಅಂತಹ ನಿಜ ಶರಣರ ಬದುಕನ್ನು ಸುನೀತದಂತಹ ಕಾವ್ಯ ಪ್ರಕಾರದಲ್ಲಿ ಕಟ್ಟಿಕೊಟ್ಟ ಶರಣ ಶ್ರೀ ಮಹಾಂತಪ್ಪ ನಂದೂರ ಅವರ ಬರವಣಿಗೆಯ ಶ್ರಮ ನಿಜಕ್ಕೂ ಸಾರ್ಥಕವಾಗಿದೆ.

ಸಮತೆಯೆ ಭಕ್ತಿ, ಸತ್ಯವೆ ಲಿಂಗ
ಅಸತ್ಯವೆ ಅನ್ಯದೈವ, ರೋಷಳಿದುದೇ ಪೂಜೆ
ಆಸೆಯಿಲ್ಲಹುದೆ ಪ್ರಸಾದ.
ಇಷ್ಟಂಗದಲ್ಲಿ ನಿರತನಾಗಿದ್ದಡೆ
ಕಪಿಲಸಿದ್ಧಮಲ್ಲೇಶ್ವರ ದೇವರದೇವ!

ಶಿವಯೋಗಿ ಸಿದ್ಧರಾಮೇಶ್ವರರ ಈ ವಚನದಂತೆ ಶರಣ ಜೀವನ ನಡೆಸಿದ ನಿಜ ಶರಣರ ಜೀವನವು ಶ್ರೀ ಮಹಾಂತಪ್ಪ ನಂದೂರ ಅವರ ನಂದದಿರುವ ಜ್ಯೋತಿಯ ಬೆಳಕಾಗಿದೆ. ಕರಿಯನ್ನು ಕನ್ನಡಿಯಲ್ಲಿ ತೋರಿದಂತೆ ಅರವತ್ಮೂರು ಶರಣರ ಬದುಕು ಸುನೀತದಲ್ಲಿ ಒಪ್ಪಗೊಂಡಿದೆ. ಶ್ರೀ ಮಹಾಂತಪ್ಪ ನಂದೂರ ಅವರ ಈ ಪ್ರಯತ್ನಕ್ಕೆ ಅಭಿನಂದಿಸುತ್ತೇನೆ.

ಶರಣು ಶರಣಾರ್ಥಿಗಳು.

ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್‌. ಸಂ. 97407 38330

Loading

Leave a Reply