
ಶರಣರ ಸಾಂಸ್ಕೃತಿಕ ಬದುಕು ಕರ್ನಾಟಕದ ಇತಿಹಾಸಕ್ಕೆ ಕಳಶಪ್ರಾಯ. ಅವರ ಈ ಸಾಂಸ್ಕೃತಿಕ ಬದುಕನ್ನು ಅವರು ನಲೆ ನಿಂತು ಹೋಗಿರುವ ಪ್ರದೇಶ ಹಾಗು ಆ ಪ್ರದೇಶದ ಪರಿಸರದಲ್ಲಿ ಅಭಿವ್ಯಕ್ತಿಗೊಂಡಿರುವ ವಿಚಾರಧಾರೆಗಳಲ್ಲಿ ಕಾಣಬಹುದು. ಶರಣರ ಸ್ಮಾರಕಗಳನ್ನು “ಲೋಕಾಂತ ಚಿಂತಕರ ಏಕಾಂತ ನೆಲೆಗಳೆನ್ನಬಹುದು”. ಮೃತ್ಯುಲೋಕವನ್ನೆ ಕರ್ತಾರನ ಕಮ್ಮಟವಾಗಿಸಿದ ಶರಣರ ಸ್ಮಾರಕಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹರಡಿಕೊಂಡಿವೆ. ಪರಂಪರಾಗತವಾಗಿ ಶರಣರು ಜನಿಸಿದ, ಕಾಯಕ ಮಾಡಿದ, ಧ್ಯಾನ ಮಾಡಿದ, ಐಕ್ಯ ಸ್ಥಳಗಳಾಗಿ, ಲಿಂಗದೀಕ್ಷೆ ನೀಡಿದ, ಧರ್ಮಪ್ರಚಾರ ಮಾಡಿದ, ಪ್ರವಚನ ಗೋಷ್ಠಿಗಳನ್ನು ನಡೆಸಿದ ಸ್ಥಳಗಳಾಗಿ ಅವುಗಳನ್ನು ಗುರುತಿಸಲಾಗಿದೆ.
12 ನೇ ಶತಮಾನದ ವಚನ ಚಳುವಳಿ ಕನ್ನಡ ನಾಡಿನ ಚರಿತ್ರೆಯ ಮೇರುಪುಟ. ಲಿಂಗಾಯತ ಸಾಹಿತ್ಯ-ಸಂಸ್ಕೃತಿಯ ಬಗೆಗೆ ನಡೆದಷ್ಟು ಅಧ್ಯಯನಗಳು, ಅದರ ಭಾಗವಾಗಿರುವ ಶರಣರ ಸ್ಮಾರಕಗಳ ಬಗ್ಗೆ ಆಗಿಲ್ಲವೆಂದೇ ಹೇಳಬೇಕು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅವರೆಂದಿಗೂ ಚರಿತ್ರೆಗೆ ಮಹತ್ವ ಕೊಟ್ಟವರಲ್ಲ. ಶರಣರಿಗೆ ಚರಿತ್ರೆಗಿಂತ ಚಾರಿತ್ರ್ಯ ಮುಖ್ಯವಾಗಿತ್ತು. ಅಲ್ಲದೇ “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬ ಅವರ ಲೋಕಾರೂಢಿಯೂ ಸಹ ಇದಕ್ಕೆ ಕಾರಣವಾಗಿರಲೂಬಹುದು. ನಾಡಿನ ಉದ್ದಗಲಕ್ಕೂ ಸಿಗುವ ವಿವಿಧ ಶರಣರ ಹಲವಾರು ಸ್ಮಾರಕಗಳಲ್ಲಿ ತಿಳುವಳಿಕೆಯ ಸಮಾಜವಿರುವ ಕಡೆ ಅವು ಸುರಕ್ಷಿತವಾಗಿದ್ದು, ಉಳಿದ ಕಡೆ ಅವು ಅವಸಾನದ ಅಂಚಿಗೆ ತಲುಪಿವೆ. ಕಲ್ಯಾಣ ಕರ್ನಾಟಕದ ಸ್ಮಾರಕಗಳು ಕೂಡ ಇದಕ್ಕೆ ಹೊರತಾಗಿಲ್ಲ; ಬಹಳಷ್ಟು ಇನ್ನೂ ಅಜ್ಞಾತವಾಗಿಯೇ ಉಳಿದುಕೊಂಡಿವೆ.

ಒಬ್ಬನೆ ಶರಣನ ಹೆಸರಿನಲ್ಲಿ ಅನೇಕ ಕಡೆಗೆ ಸ್ಮಾರಕಗಳಿದ್ದು, ಅವುಗಳಲ್ಲಿ ಮೂಲ ಯಾವುದು ಎಂದು ಹೇಳುವುದು ಒಗಟಿನ ಮಾತಾಗಿದೆ. ಕೆಲವು ಸ್ಥಳಗಳಲ್ಲಿ ಸ್ಮಾರಕಗಳಿದ್ದು, ಜನಪದರ ಪವಾಡ ಕಥೆಗಳಲ್ಲಿ ಮಾತ್ರ ಉಳಿದುಕೊಂಡಿವೆ. ಬಹಳಷ್ಟು ಸಲ ಅವುಗಳ ಮಹತ್ವವನ್ನರಿಯದ ಆಡಳಿತ ವ್ಯವಸ್ಥೆ ಅಭಿವೃದ್ಧಿಯ ಹೆಸರಿನಲ್ಲಿ ಅವುಗಳನ್ನು ಮೂಲ ಸ್ಥಾನದಿಂದ ಬೇರೆಡೆಗೆ ಸ್ಥಳಾಂತರಿಸಿರುವ ಅಥವಾ ನಾಶಪಡಿಸಿರುವ ಉದಾಹರಣೆಗಳೂ ಇವೆ (ಬಸವಕಲ್ಯಾಣ ತಾಲೂಕು ಒಂದರಲ್ಲಿಯೇ ಅಂದಾಜು 50 ಕ್ಕೂ ಹೆಚ್ಚು ಸ್ಮಾರಕಗಳು ಹೀಗೆ ಹಾಳಾಗಿವೆ). ಅವುಗಳನ್ನು ಗುರುತಿಸಿ, ಪವಾಡಗಳಲ್ಲಿನ ಚರಿತ್ರೆಯ ಅಂಶಗಳನ್ನು ಹೆಕ್ಕಿ ತೆಗೆಯಬೇಕಾದ ಅನಿವಾರ್ಯತೆ ಇದೆ. ನೋವಿದ್ದ ಹಲ್ಲಿನ ಕಡೆಗೆ ನಾಲಿಗೆ ಪುನಃ ಪುನಃ ಹೊರಳುವಂತೆ ನಮ್ಮ ಸಮಾಜ ಮತ್ತು ನಾವುಗಳು ಶರಣ ಸ್ಮಾರಕಗಳ ಕಡೆಗೆ ಹೊರಳಿ ನೋಡಬೇಕಾದ ಅನಿವಾರ್ಯತೆ ಇದ್ದೆ ಇದೆ. ಕನ್ನಡ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಲೋಕವೊಂದು ಅವುಗಳ ಸುತ್ತ ಅಜ್ಞಾತವಾಗಿ ಉಳಿದುಕೊಂಡಿರುವುದನ್ನು ಆ ಮೂಲಕ ಬಯಲಿಗೆಳೆಯಬೇಕಾಗಿದೆ.
ಅಧ್ಯಯನದ ಸಮಸ್ಯೆಯ ಸ್ವರೂಪ:
12 ನೇ ಶತಮಾನದ ಭೌಗೋಳಿಕ ಸೀಮೆಗೂ ಈಗಿನ ಕಲ್ಯಾಣ ಕರ್ನಾಟಕದ ಶರಣರ ಸ್ಮಾರಕಗಳ ಸೀಮೆಗೂ ಶತಮಾನಗಳ ವ್ಯತ್ಯಾಸವಿದೆ. ರಾಜಕೀಯ ಎಲ್ಲೆಗಳನ್ನು ಮೀರಿ ಹರಡಿಕೊಳ್ಳುವ ಸಾಂಸ್ಕೃತಿಕ ಸಂಗತಿಗಳನ್ನು, ಈಗಿನ ಜಿಲ್ಲೆ, ಪ್ರದೇಶ, ರಾಜ್ಯಗಳ ಪರಿಕಲ್ಪನೆಯ ಒಳಗೆ ಹುದುಗಿಸಿ ನೋಡುವಾಗ ಚರಿತ್ರಾಕಾರನಿಗೆ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತವೆ. ಹೇಗೆ ನೋಡಿದರೂ ಶರಣರ ಬೇರುಗಳು ಅಫಘಾನಿಸ್ತಾನ, ಕಳಿಂಗ, ಕಾಶ್ಮೀರಗಳ ತನಕ ಅನ್ಯದೇಶ-ರಾಜ್ಯಗಳಿಗೆ ಹೋಗಿ ಬಿಡುತ್ತವೆ. ಶರಣ ಚಳುವಳಿ ಏಕಕಾಲಕ್ಕೆ ಜಾಗತಿಕವು ಪ್ರದೇಶಬದ್ಧವೂ ಆಗಿತ್ತು. ಈ ಎರಡು ಬಿಂದುಗಳ ನಡುವಿನ ನಿರಂತರ ಚರಿತ್ರೆಯನ್ನು ಕಟ್ಟುವುದು ಒಂದು ದೊಡ್ಡ ಸವಾಲೇ ಸರಿ. ಆದರೆ ಹೀಗೆ ಗ್ರಾಮ, ಜಿಲ್ಲೆ, ರಾಜ್ಯಗಳಾಚೆ ಹರಡಿಕೊಂಡಿರುವ ಈ ಸ್ಮಾರಕಗಳು, ವಚನ ಚಳುವಳಿಯ ಭೌಗೋಳಿಕ ಪ್ರಸಾರವನ್ನು ಹಾಗೂ ಅದರ ಭೌಗೋಳಿಕ ವಿಸ್ತಾರವನ್ನು ನಮಗೆ ಒದಗಿಸಬಲ್ಲವು. ಇದು ಶರಣ ಸ್ಮಾರಕಗಳ ಐತಿಹಾಸಿಕತೆಗೆ ಬಹಳ ಮುಖ್ಯವಾದ ಸಾಂಸ್ಕೃತಿಕ ಅಂಶವೆನಿಸುತ್ತದೆ. ಕೆಲವು ಶರಣರು ಎಲ್ಲೋ ಹುಟ್ಟಿ, ತಮ್ಮ ಜೀವಿತದ ಬಹುಕಾಲವನ್ನು ಇನ್ನೆಲ್ಲೋ ಕಳೆದು ಬಸವಕಲ್ಯಾಣಕ್ಕೆ ಬಂದು ನೆಲಸಿದವರಿದ್ದಾರೆ. ಆಂಧ್ರದ ಪಂಡಿತಾರಾಧ್ಯನ ಹಾಗೆ ಈಗಿನ ಕರ್ನಾಟಕದ ಆಚೆಗಿದ್ದು ಕರ್ನಾಟಕದೊಳಗಿನ ವಿದ್ಯಮಾನಗಳ ಮೇಲೆ ಪ್ರಭಾವ ಬೀರಿದವರಿದ್ದಾರೆ. ಹಾಗಾಗಿ ಈ ಸ್ಮಾರಕಗಳ ಮೂಲಕ ಸಾಂಸ್ಕೃತಿಕ ಅಧ್ಯಯನಕ್ಕಾಗಿ ರಾಜಕೀಯ ಗಡಿಗಳನ್ನು ಮೀರಿ ಪ್ರದೇಶವನ್ನು, ಭೌಗೋಳಿಕತೆಯನ್ನು ನಾವು ರೂಪಿಸಿಕೊಳ್ಳಬೇಕಾಗುತ್ತದೆ.
ಶರಣರ ಸ್ಮಾರಕಗಳು ಎಂಬ ಹೆಸರಿನಲ್ಲಿ ಮಾಡಲಾಗಿರುವ ಈವರೆಗಿನ ಅಧ್ಯಯನಗಳ ಸಾರ್ಥಕತೆ ಏನು? ಅಂತ ಯಾರಾದರೂ ನಮಗೆ ಕೇಳಿದರೆ, ಈ ಪ್ರಶ್ನೆಗೆ ಉತ್ತರವಾಗಿ:
“ಶರಣ ಸಂಸ್ಕೃತಿಯಲ್ಲಿ ಗೈರು ಹಾಜರಾಗಿರುವ ಚಿತ್ರವನ್ನು ಜೋಡಿಸುವ, ಸಮಕಾಲೀನ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಶರಣರ ಸಿದ್ಧಾಂತವನ್ನು ಪ್ರಸ್ತುತ ಪಡಿಸುವ ಹಾಗೂ ಶರಣರ ಚರಿತ್ರೆಯ ಸುತ್ತ ಮುತ್ತಿಕೊಂಡಿರುವ ನಂತರದ ಗೊಂದಲಗಳ ನಿವಾರಣೆಗಾಗಿ ಇವುಗಳನ್ನು ಆಕರವಾಗಿ ಎದುರಿಡಬಹುದು ಎಂದೆಲ್ಲಾ ಹೇಳಲು ನಮಗೆ ಸಾಧ್ಯವಿದೆ”.
ಶರಣರ ಸ್ಮಾರಕಗಳ ಚರಿತ್ರೆಯನ್ನು ಕಟ್ಟುವುದೆಂದರೆ, ಹುಟ್ಟಿಲ್ಲದ ದೋಣಿಯಲ್ಲಿ ಕುಳಿತು ಹರಿವ ನದಿಯಲ್ಲಿ ಪಯಣ ಹೊರಟಂತೆ, ಸೆಳವು ಬಂದ ಕಡೆಗೆ ಹೋಗುವ ಆಕರ್ಷಣೆಯೂ ಇದೆ. ಬೇಕಾದ ಕಡೆ ಹೋಗಲಾಗದ ಸಮಸ್ಯೆಯೂ ಇದೆ.

ಗ್ರಂಥ-ಶಾಸನಗಳಂತಹ ಸ್ಥಾವರ ದಾಖಲೆಗಳನ್ನು ನೆಚ್ಚಿ ಚರಿತ್ರೆಯನ್ನು ಕಟ್ಟುವ ಪ್ರಸಿದ್ಧ ವಿಧಾನವೊಂದು ನಮ್ಮ ನಡುವೆ ಇದೆಯಷ್ಟೆ. ಆದರೆ ಈ ವಿಧಾನವನ್ನು ಕಂಗೆಡಿಸುವ ಲೋಕ ಶರಣರದ್ದು. ವೇಷ ಮರೆಸಿಕೊಂಡು ಹಲವು ರೂಪಗಳಲ್ಲಿ ಸುಳಿದಾಡುವ ಚರಿತ್ರೆ ಇಲ್ಲಿ ದೈವವಿದ್ದಂತೆ. ಇದೆ ಎಂದರೆ ಇದೆ, ಇಲ್ಲವೆಂದರೆ ಇಲ್ಲ. ಚರಿತ್ರೆಯು ಇಲ್ಲಿ ಪುರಾಣವಾಗಿ ನಂಬಿಕೆಯಾಗಿ ಆಚರಣೆಯಾಗಿ ಹೋಗಿರುತ್ತದೆ. ಮತ್ತದು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಜನ-ಸಮುದಾಯಗಳು ತಮ್ಮ ಬಾಳಿನ ಒತ್ತಡಗಳಿಗೆ ತಕ್ಕಂತೆ, ತಮ್ಮ ಅನುಭವ ಲೋಕದಲ್ಲಿ ಇವುಗಳನ್ನು ನಿರ್ಮಿಸಿಕೊಂಡಿದ್ದಾರೆ. ಒಬ್ಬ ಶರಣನ ಸ್ಥಳ, ಕಾಲ, ಪಂಥಗಳ ಬಗ್ಗೆ ಕೇಳಿದರೆ ಸಿಗುವ ಉತ್ತರಗಳು, ಜನರ ಕಲ್ಪಿತ ಚರಿತ್ರೆಯನ್ನು ಹೇಳುತ್ತವೆ. ಗಡವಂತಿಯ ಮುಗ್ಧ ಸಂಗಯ್ಯ, ಅಷ್ಟೂರಿನ ಅಲ್ಲಮಪ್ರಭು, ನಾರಾಯಣಪುರದ ಸಕಳೇಶ ಮಾದರಸನ ಮಂಟಪ, ಮೃತ್ಯುಂಜಯಸ್ವಾಮಿ, ಗೋರ್ಟಾ(ಬಿ)ದ ಗೋರಕ್ಷನಾಥ ಮುಂತಾದವರ ಬಗೆಗೆ “ಇದಂ ಮಿತ್ಥಂ” ಎಂದು ಸಾಧಿಸಲು ಚರಿತ್ರಾಕಾರ ಬಹಳಷ್ಟು ಹೆಣಗಾಡಬೇಕಾಗುತ್ತದೆ.
ಜನ-ಸಮುದಾಯಗಳು ತಮ್ಮ ದೈವ ಯಾವಾಗಲಾದರೂ ಬದುಕಿರಬಹುದಾದ ಎಲ್ಲಾದರೂ ತಿರುಗಾಡಿರಬಹುದಾದ ರೀತಿಯಲ್ಲಿ ಕಥೆಗಳನ್ನು ಕಟ್ಟಿಕೊಂಡಿವೆ. ಇಂತಹ ವ್ಯಕ್ತಿದೈವಗಳಿಗೆ ಸಂಬಂಧಿಸಿದ ಸ್ಮಾರಕಗಳ ಅಧ್ಯಯನಕ್ಕೆ ಹೊರಟ ಸಂಶೋಧಕರಿಗೆ ಅವರು ಇದನ್ನೇ ಚರಿತ್ರೆಯಾಗಿ ಹೇಳುತ್ತಾರೆ. ನಾರಾಯಣಪುರ (ಬಸವಕಲ್ಯಾಣ ತಾಲೂಕು) ದವರೆಗೆ ಸಕಳೇಶ ಮಾದರಸನ ಮಂಟಪದ ಬಗ್ಗೆ ಅಷ್ಟಾಗಿ ಪರಿಚಯವೇ ಇಲ್ಲ. ಏಕೆಂದರೆ ಅಲ್ಲಿ ಈತ ಸಕಳೇಶ ಪೀರನಾಗಿ ಕರೆಸಿಕೊಳ್ಳುತ್ತಾನೆ. ಇಲ್ಲಿನ ಮೃತ್ಯುಂಜಯಸ್ವಾಮಿಯ ಕಥೆಯು ಇದಕ್ಕೆ ಹೊರತಾಗಿಲ್ಲ. ಆತ ಮೃತ್ಯುಂಜಯ್ಯ ಖಾದ್ರಿಯಾಗಿ ಪೂಜೆಗೊಳ್ಳುತ್ತಾನೆ. ಅಷ್ಟೂರಿನ ಅಹ್ಮದ್‌ಶಹಾವಲಿಯ ದರ್ಗಾವನ್ನು ಲಿಂಗಾಯತರು ಅಲ್ಲಮಪ್ರಭುವಿನ ಸ್ಥಳವಾಗಿ ಜಾತ್ರೆ ಮಾಡುತ್ತಾರೆ. ಮುಗ್ಧ ಸಂಗಯ್ಯ ಗಡವಂತಿಯಲ್ಲಿ ಮೊದಲಿದ್ದನೋ ನಾರಾಯಣಪುರದಲ್ಲಿ ಮೊದಲಿದ್ದನೋ ಸೂರ್ಯನಷ್ಟೇ ಅಗೋಚರ. ಮೋಡಗಳಂತೆ ಇವರ ಕುರಿತಾದ ಮೌಖಿಕ ಚರಿತ್ರೆ ಬದಲಾಗುತ್ತಲೇ ಇರುತ್ತದೆ. ಈ ಮಿಥ್ಗಳ ಮೂಲಕ ಅಧ್ಯಯನಕ್ಕೆ ಹೊರಡುವ ಚರಿತ್ರೆಕಾರರು ಪಡಬಾರದ ಪಾಡು ಪಡಬೇಕಾಗುತ್ತದೆ.
ಜನರ ಈ ಕ್ರಿಯಾಶೀಲತೆಯನ್ನು ಅರ್ಥ ಮಾಡಿಕೊಳ್ಳದ ಹೊರತು ಈ ವಿಭೂತಿ ಪುರುಷರ ಸ್ಮಾರಕಗಳ ಚರಿತ್ರೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗದು. ಹಾಗಾಗಿ ಇವುಗಳ ಕುರಿತಾದ ಅಧ್ಯಯನಗಳಲ್ಲಿ ಸೃಷ್ಟಿಯಾಗುವ ತೊಡಕಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಈ ಕಾರಣವಾಗಿ ನಮ್ಮಲ್ಲಿನ ಅನೇಕ ಅಧ್ಯಯನಗಳು, ವಚನಕಾರರಿಂದ ಹಿಡಿದು ಕಳೆದ ಶತಮಾನದ ವರೆಗಿನ 700 ವರ್ಷಗಳಲ್ಲಿ ಆಗಿಹೋದ ಅನುಭಾವಿಗಳನ್ನು ಒಂದೇ ಚೀಲದಲ್ಲಿ ತುಂಬುತ್ತಾರೆ. ಬೀದರ ಜಿಲ್ಲೆಯ ಬಸವಕಲ್ಯಾಣ ಕೇಂದ್ರಿತ ಶರಣ ಚಳುವಳಿಯ ಅನುಭಾವಿಗಳನ್ನು ಕರಕನಳ್ಳಿಯ ಬಕ್ಕಪ್ರಭು, ಹುಡಗಿಯ ಕರಿಬಸವೇಶ್ವರ, ನಾವದಗಿಯ ರೇವಪ್ಪಯ್ಯ, ಚಾಂಗಲೇರದ ವೀರಭದ್ರೇಶ್ವರ, ಮೈಲಾರದ ಮಲ್ಲಣ್ಣನವರ ಜೊತೆ ಸಮೀಕರಿಸಿ ಅಧ್ಯಯನ ಮಾಡಿದವರೂ ನಮ್ಮ ನಡುವೆ ಇದ್ದಾರೆ. ಹಾಗಾಗಿ ಈ ಬಗ್ಗೆ ಓದುಗರು ಎಚ್ಚರಿಕೆಯಂದಿರಬೇಕಾಗುತ್ತದೆ. ತಮ್ಮ-ತಮ್ಮ ಕಾಲದ ಇಕ್ಕಟ್ಟುಗಳಿಗಾಗಿ ಚರಿತ್ರೆಯನ್ನು ಮರುರಚನೆ ಮಾಡುವುದರ ಯಾವುತ್ತೂ ಫಲವಿದು. ಅವರೆಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಚರಿತ್ರೆಗೆ ಮಾಡುವ ಅಪಮಾನವಷ್ಟೇ ಅಲ್ಲ; ವರ್ತಮಾನದ ಸಮಾಜಕ್ಕೆ ಮಾಡುವ ಅನ್ಯಾಯವೂ ಕೂಡ ಹೌದು. ಹಾಗಾಗಿ ಶರಣರ ಸ್ಮಾರಕಗಳನ್ನು ಮತೀಯವಾದಿ, ಪ್ರಭುತ್ವವಾದಿ, ಧರ್ಮವಾದಿ ಕಣ್ಪಟ್ಟಿಗಳಿಂದ ಪಾರಾಗಿ ನೋಡಬೇಕಾದ ಅನಿವಾರ್ಯತೆ ಈಗಲೂ ಇದೆ. ಶರಣರ ಸ್ಮಾರಕಗಳನ್ನು ಸಂಭಾಳಿಸಿಕೊಂಡು ಬಂದಿರುವ ಅವುಗಳ ವಾರಸುದಾರರಿಗೆ ಸಾಂಸ್ಕೃತಿಕ ನೆನಪುಗಳು ಕಡಿಮೆ. ಶರಣ ಸ್ಮಾರಕಗಳನ್ನು ಕ್ಷೇತ್ರಗಳನ್ನಾಗಿಸುತ್ತಿರುವ ಸಮುದಾಯಗಳಲ್ಲಿ ಸೃಜನಶೀಲತೆಯಂತೂ ಇಲ್ಲವೇ ಇಲ್ಲವೆನ್ನಬಹುದು. ಅವು ಕ್ಷೇತ್ರಗಳಾಗಿ ರೂಪಗೊಂಡಷ್ಟು; ಶರಣರು ಮಾನವರೆನಿಸದೆ ದೈವರಾದಷ್ಟು; ಅವರು ನಮ್ಮೆಲ್ಲರಿಂದ ದೂರವಾಗವುದು ಕಟ್ಟುಸತ್ಯ. ಇಂತಹ ಅನೇಕ ಇಕ್ಕಟ್ಟು ಹಾಗೂ ಎಚ್ಚರಗಳಲ್ಲಿ ಶರಣ ಸ್ಮಾರಕಗಳ ಅಧ್ಯಯನಗಳು ನಡೆಯಬೇಕಿದೆ ಹಾಗೂ ಅವುಗಳನ್ನು ಶರಣರ ಮೂಲ ಆಶಯಗಳಿಗೆ ಬದ್ಧವಾಗಿ ಉಳಿಸಿಕೊಳ್ಳಬೇಕಿದೆ.

ಪ್ರತಿಯೊಬ್ಬ ಶರಣರ ಜನ್ಮಗ್ರಾಮ, ಜನನಮಿತಿ, ತಂದೆ-ತಾಯಿ, ದೀಕ್ಷಾಗುರು, ಜೀವಿತದ ಅವಧಿ, ಐಕ್ಯಸ್ಥಳ ಮೊದಲಾದವು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ. ಶರಣರ ಪ್ರಭಾವ ಈ ನೆಲದ ಮೇಲೆ ಜೀವಂತ ತೊರೆಯಾಗಿ ಹರಿದ ಕಾರಣ, ಅವರ ಚರಿತ್ರೆ ಪ್ರಾಂತಗಳಲ್ಲಿ ಪ್ರವಹಿಸಿ ಗ್ರಾಮಗಳಲ್ಲಿ ವ್ಯಾಪಿಸಿ, ವ್ಯಕ್ತಿ ವ್ಯಕ್ತಿಗಳ ಹೃದಯ ಹೊಲವನ್ನು ಹಸಿಗೊಳಿಸಿ ಮುನ್ನಡೆಯಿತು. ಹೀಗಾಗಿ ಒಂದೊಂದು ಪ್ರಾಂತ, ಗ್ರಾಮ, ವ್ಯಕ್ತಿಗಳು ತಮ-ತಮಗೆ ತೃಪ್ತಿಯಾಗುವ ರೀತಿಯಲ್ಲಿ ಶರಣರನ್ನು ಚಿತ್ರಿಸಿಕೊಂಡು ಸ್ಮಾರಕಗಳನ್ನು ನಿರ್ಮಿಸಿಕೊಂಡರು. ಇದರಿಂದಾಗಿ ಈ ಸ್ಮಾರಕಗಳ ಬಗೆಗಿನ ಚರಿತ್ರೆಯ ಬರವಣಿಗೆಯಲ್ಲಿ ನಾವು ಖಚಿತತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆ ಗೊಂದಲವನ್ನೇ ಮುಂದು ಮಾಡಿಕೊಂಡು ಅವು ನಿಜವಾಗಿಯೂ ಅವರಿಗೆ ಸಂಬಂಧಪಟ್ಟವಗಳೇ ಅಥವಾ ಇಲ್ಲವೇ ಎಂಬ ಅನುಮಾನಗಳನ್ನು ವ್ಯಕ್ತಪಡಿಸುವವರೂ ನಮ್ಮ ನಡುವೆ ಇದ್ದಾರೆ. ನಾವದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಅನೇಕ ಪ್ರಾಚೀನ ಕಾವ್ಯಗಳು ಶರಣರ ಶುದ್ಧ ಬದುಕನ್ನು ಚರಿತ್ರೆಯನ್ನೂ ವಿರೂಪಗೊಳಿಸಿವೆ. ಇನ್ನೂ ಲಿಂಗಾಯತ ಕವಿಗಳ ಸಾಹಿತ್ಯದಲ್ಲಿಯೂ ಪವಾಡಗಳು, ಐತಿಹ್ಯಗಳು ತುಂಬಿ ತುಳುಕಾಡುತ್ತಿವೆ. ಹೀಗಾಗಿ ಇತಿಹಾಸದ ಎಳೆಗಳ ಕೊರತೆಯಿಂದ ಕೂಡಿದ ಈ ದಾಖಲೆಗಳನ್ನು ಸ್ಮಾರಕಗಳೊಂದಿಗೆ ತಾಳೆ ಹಾಕಿ ಅನುಷಂಗಿಕ ಆಕರಗಳಾಗಿ ಇವುಗಳನ್ನು ಬಳಸಿಕೊಳ್ಳಲು ನಮಗೆ ಅವಕಾಶವಿದೆ.
ಅಧ್ಯಯನದ ಹಿಂದಿನ ತಾತ್ವಿಕತೆ:
ಯಾವುದೇ ಶರಣರ ಸ್ಮಾರಕಗಳ ಹುಡುಕಾಟ ಕೇವಲ ಅದು ಒಂದು ಭೌತಿಕ ಕಟ್ಟಡದ ಹುಡುಕಾಟವೇ ಮಾತ್ರ ಆಗಿರದೇ ಅದು ಅದರೊಟ್ಟಿಗೆ ಅವರವರ ಜೀವನ ಚರಿತ್ರೆಯ ಹುಡುಕಾಟವೂ ಆಗಿರುತ್ತದೆ ಎಂಬುದನ್ನು ನಾವು ಮರೆಯಬಾರದು. ಶರಣರು ಎಂದರೆ ಯಾರು? ಅವರ ವಿಚಾರ ಯಾವುದು? ಅವರ ಸಿದ್ಧಾಂತಗಳಾವುವು? ಎಂಬುದನ್ನು ವಸ್ತುನಿಷ್ಠವಾಗಿ ರೂಪಿಸುವಲ್ಲಿ ಚರಿತ್ರಾಕಾರನಿಗೆ ಇವುಗಳ ಸಹಕಾರ ಅಗತ್ಯವೆನಿಸಬಹುದು. ಹಾಗಾಗಿ ಅವುಗಳನ್ನು ಗುರುತಿಸಿ ಕಾಪಿಟ್ಟುಕೊಳ್ಳಬೇಕಾಗಿದೆ. ಇದರಿಂದಾಗಿ ನಮಗೆ ಶರಣರ ಚರಿತ್ರೆಯನ್ನು ಜನಚರಿತ್ರೆಯ ಭಾಗವಾಗಿ ನೋಡಲು ಸಾಧ್ಯವಿದೆ. ಸತ್ತು ಮಣ್ಣಾಗಿರುವ ಶರಣರನ್ನು ಜನಪದರೇ ಮರುಜನ್ಮ ಕೊಟ್ಟು ಈ ಸ್ಮಾರಕಗಳ ಮೂಲಕ ಬದುಕಿಸಿಕೊಂಡಿದ್ದಾರೆ. ಆದರೆ ಇಂದು ಎಲ್ಲಾ ಹಂತಗಳಲ್ಲಿಯು ಅಲ್ಲಿ ಅನ್ಯ ಸಂಸ್ಕೃತಿಯ ಪ್ರಭಾವ ದಟ್ಟವಾಗಿದೆ. ಈ ಸ್ಮಾರಕಗಳ ಉಸ್ತುವಾರಿ ಹೊತ್ತವರು ಕಲ್ಯಾಣದ ಫಲಗಳನ್ನು ಮರೆತವರಿದ್ದಾರೆ. ಹಾಗಾಗಬಾರದು. ಅಲ್ಲಿ ಕಲ್ಯಾಣದ ಆಶಯಗಳನ್ನು ದಟ್ಟವಾಗಿ ಮರುಸ್ಥಾಪಿಸುವ ಅಗತ್ಯವಿದೆ. ಆ ಮೂಲಕ ಶರಣ ಚಳುವಳಿಯ ತಾತ್ವಿಕತೆಯನ್ನು ನಾವು ಜನಮಾನಸಕ್ಕೆ ಮುಟ್ಟಿಸಬಹುದು.
ಶರಣರ ಹೆಸರಿನ ಬಹುತೇಕ ಸ್ಮಾರಕಗಳು ದೂರದ ಹಳ್ಳಿಗಾಡಿನಲ್ಲಿ ಜನರ ಜತೆ ಬೆರೆತು ಅವರ ಸಾಂಸ್ಕೃತಿಕ ಜೀವನದಲ್ಲಿ ಮಿಂದೆದ್ದು ಹೋಗಿವೆ. ಹಾಗಾಗಿ ಈ ಸ್ಮಾರಕಗಳ ಶರಣರನ್ನು ನಾವು “ಗ್ರಾಮೀಣ (Rustic)” ಶರಣರೆಂದು ಕರೆಯಲು ಸಾಧ್ಯವಿದೆ. ಹಾಗಾಗಿ ಶರಣರ ಸ್ಮಾರಕಗಳ ಕುರಿತು ಅಧ್ಯಯನಕ್ಕೆ ಹೊರಡುವ ಯಾವುದೇ ಸಂಶೋಧಕನಿಗೆ “ಜನಪದರೇ ಮೂಲ ಆಕರ”. ಹಾಗಂತ ನಾವು ಲಿಖಿತ ಆಕರಗಳನ್ನು ನಿರಾಕರಿಸುವಂತಿಲ್ಲ. ಹಬ್ಬಿ ಹರಡಿರುವ ಮರವನ್ನು ಕಾಣುವಾಗ ಬೇರುಗಳನ್ನು ಗಮನಿಸುವಂತೆ, ಚರಿತ್ರೆಯತ್ತ ಹೊರಳಿ ನೋಡುವ ಕೆಲಸ ಇದ್ದೇ ಇರುತ್ತದೆ. ಆದರೆ ಬಹಳ ಮುಖ್ಯವಾಗಿ ನಾವು ಗಮನಿಸಬೇಕಿರುವುದೇನೆಂದರೆ, ಕೇವಲ ಶಿಷ್ಟ ಸಾಹಿತ್ಯವನ್ನೇ ಆಧಾರವಾಗಿಟ್ಟುಕೊಂಡು ಶರಣರ ಸ್ಮಾರಕಗಳನ್ನು ಅರ್ಥಮಾಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಅದು ಹುಟ್ಟಿಲ್ಲದ ದೋಣಿಯ ಪಯಣ ಅಷ್ಟೇ ಆಗುತ್ತದೆ.

ವರ್ತಮಾನದಲ್ಲಿ ನಮಗೆ ಲಭ್ಯವಿರುವ ಶರಣ ಸ್ಮಾರಕಗಳನ್ನು ಭೌತಿಕವಾಗಿ ಮತ್ತು ಆಚರಣಾತ್ಮಕವಾಗಿ ಎರಡೂ ರೀತಿಯಲ್ಲಿ ಉಳಿಸಿಕೊಳ್ಳಬೇಕಿದೆ. ಶರಣರು ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಒತ್ತು ಕೊಟ್ಟವರು. ಅವರ ಆಶಯದಂತೆ ಆಚರಣಾತ್ಮಕವಾಗಿ ಅವುಗಳ ಅಂತರಂಗ ಶುದ್ಧಿ ಹಾಗೂ ಆಡಂಬರಗಳಿಲ್ಲದ ಭೌತಿಕ ರಚನೆಯ ಮೂಲಕ ಬಹಿರಂಗ ಶುದ್ಧಿಯನ್ನು ನಾವಿಲ್ಲಿ ಕಾಪಾಡಬೇಕಿದೆ. ಈವರೆಗೂ ಶರಣ ಚಳವಳಿಯನ್ನು ವಚನಗಳ ಮೂಲಕವೇ ಕಾಣಲಾಗಿದೆ; ಕಟ್ಟಲಾಗಿದೆ, ಈಗ ಅವರು ನೆಲೆನಿಂತ ಸ್ಮಾರಕಗಳಿಗೆ ಅದನ್ನು ನಾವೀಗ ಈ ಮೂಲಕ ಹೊರಳಿಸಲು ಅವಕಾಶವಿದೆ.
ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ,
ಉಪನಿರ್ದೇಶಕರು,
ವಿಭಾಗೀಯ ಪತ್ರಾಗಾರ ಕಛೇರಿ, ಕಲಬುರಗಿ.
ಮೋಬೈಲ್. ಸಂ. 98446 15020
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()





Total views : 51410