
ವಚನಾಂಕಿತ: ಚಂದೇಶ್ವರಲಿಂಗ.
ಜನ್ಮಸ್ಥಳ: ಶಿವಣಗಿ, ಸಿಂಧಗಿ ತಾಲೂಕ, ವಿಜಯಪುರ ಜಿಲ್ಲೆ.
ಕಾಯಕ: ಹಗ್ಗ ಮಾಡಿ ಮಾರುವುದು.
ಐಕ್ಯಸ್ಥಳ: ನುಲೇನೂರು (ಪದ್ಮಾವತಿ), ಹೊಳಲ್ಕೆರೆ ತಾಲೂಕ, ಚಿತ್ರದುರ್ಗ ಜಿಲ್ಲೆ.
ಆವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ
ಗುರುಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ,
ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದು
ಅದೇತರ ಪೂಜೆ?
ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ,
ಮಾಡಿವಾಳಯ್ಯಾ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-450 / ವಚನ ಸಂಖ್ಯೆ-1225)
ಇಡೀ ಭಾರತವೇ “One India One Constitution” “ಒಂದೇ ದೇಶ ಒಂದೇ ಸಂವಿಧಾನ” ಎನ್ನುವ ಮಂತ್ರವನ್ನು ಪಠಿಸುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಭಾರತದ ಸಂಕ್ರಮಣ ಕಾಲಘಟ್ಟದಲ್ಲಿ 12 ನೇ ಶತಮಾನದ ಬಸವಾದಿ ಶರಣರನ್ನು ಇಂದು ನೆನೆಯಲೇಬೇಕಾದ ಸಂದರ್ಭ. ಕಾರಣ ಜಾತಿ ಮತಗಳನ್ನು ಮೀರಿರುವಂಥ ಸ್ತ್ರೀ-ಪುರುಷ ಎಂಬ “Gender Sector” ನ್ನೂ ಮೀರಿದ, ದೇಶ ಭಾಷೆಯೆಂಬ ಗಡಿಯನ್ನೂ ಮೀರಿದ ಸಾಮಾಜಿಕ ವ್ಯವಸ್ಥೆಯನ್ನು ಬಸವಾದಿ ಶರಣರು ನೀಡಿದ್ದರಿಂದಲೇ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ. ಇಂದಿನ ಆಧುನಿಕ ಭಾರತದ ಸಂವಿಧಾನದಲ್ಲಿ ಏನೇನಿದೆಯೋ ಅದೆಲ್ಲವೂ ಮತ್ತು ಅದಕ್ಕೂ ಹೆಚ್ಚಿನ ವಿಚಾರಗಳನ್ನು ಬಸವಾದಿ ಶರಣರ ವಚನ ಸಂವಿಧಾನ ಒಳಗೊಂಡಿದೆ. ಅದಕ್ಕೇನೇ ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಭೀಮರಾವ್ ಅಂಬೇಡ್ಕರ್ ಹೇಳತಾರೆ:
“ನನಗೆ ಬಸವಣ್ಣನವರ ವಿಚಾರಧಾರೆಗಳು ಮೊದಲೇ ಗೊತ್ತಿದ್ದಿದ್ದರೆ ಸಂವಿಧಾನದ ಸ್ವರೂಪ ಇನ್ನೂ ಉತ್ಕೃಷ್ಠ ಮಟ್ಟಕ್ಕೇರುತ್ತಿತ್ತು”
ವಚನಕಾರರ ಅಥವಾ ಬಸವಾದಿ ಶರಣರ ವಿಚಾರಧಾರೆಯ ಇನ್ನೊಂದು ಮಗ್ಗುಲನ್ನು ನೋಡುವುದಾದರೆ, ಈ ಭೂಮಿ ರಚನೆಯಾಗಿದ್ದು “Big Bang Theory” ಯಿಂದ ಅಂತ ಭೌಗೋಳಿಕ ಮತ್ತು ಖಗೋಳ ಭೌತಶಾಸ್ತ್ರಜ್ಞದ ಎಲ್ಲ ವಿಜ್ಞಾನಿಗಳೂ ಖಚಿತವಾಗಿ ನಿರ್ಧಾರ ಮಾಡಿದ್ದಾರೆ.
- Jean-Pierre Luminet: Theory and Observations.
- Simon Singh: Big Bang.
- Stephen Hawking: The Big Bang and Black Holes.
- Joao Steiner: The Origin of the Universe.
- Steven Ball: The Big Bang Theory.
ಹೀಗೆ ಇನ್ನೂ ಸಹಸ್ರಾರು ಪುಸ್ತಕಗಳಲ್ಲಿ ವಿಜ್ಞಾನಿಗಳು ಈ ವಿಜ್ಞಾನವನ್ನು ಪುಷ್ಠೀಕರಿಸಿದ್ದಾರೆ. ಮಹಾಸ್ಫೋಟ ಆದಾಗ ಬೂದಿಯಂತಹ ಕಣಗಳು ಕ್ರೋಢೀಕರಣವಾಗಿ ಭೂಮಿಯಲ್ಲಿ ಹಳ್ಳ, ಕೊಳ್ಳ, ನದಿಗಳು, ಸಮುದ್ರ ಮುಂತಾದ ಚರಾಚರ ವಸ್ತುಗಳ ರಚನೆಯಾದವು. ಇದರ ಜೊತೆ ಜೊತೆಗೆ ಮನುಷ್ಯನಲ್ಲಿ ಭೇದ ಭಾವಗಳು ಹುಟ್ಟಿದವು. ಗಂಡು-ಹೆಣ್ಣು, ಬಡವ-ಶ್ರೀಮಂತ, ರಾಜ-ಪ್ರಜೆ, ಆ ಭಾಷೆ-ಈ ಭಾಷೆ, ಆ ದೇಶ–ಈ ದೇಶ ಹೀಗೆ ಪರಸ್ಪರ ವಿರೋಧಾಭಾಸಗಳು ವೈರುಧ್ಯಗಳು ಹುಟ್ಟಿಕೊಂಡವು.
ಇಂಥದ್ದೇ ಒಂದು ಮಹಾಸ್ಫೋಟ 12 ನೇ ಶತಮಾನದಲ್ಲಿ ಆಯಿತು. “Big Bang” ಆಯಿತು, ಅದು ಅತ್ಯಂತ ಸೂಕ್ಷ್ಮವಾದ ಹಾಗೂ ಅತ್ಯಂತ ಮೌನವಾದ ಸ್ಫೋಟ. ಚರಾಚರ ವಸ್ತುವಿನ. ಕಣ್ಣಿಗೆ ಕಾಣುವಂಥ ಭೌತಿಕ ವಸ್ತುಗಳನ್ನು ಹುಟ್ಟಿಸಿದಂಥ ಮಹಾಸ್ಫೋಟ ಅಲ್ಲಾ, ಅದು ಅಂತರಂಗದ ಅರಿವಿನ ಮಹಾಸ್ಫೋಟ. ಜ್ಞಾನದ ಮಹಾಸ್ಫೋಟ. ಮನುಷ್ಯ ಮನುಷ್ಯನನ್ನಾಗಿ ಕಾಣುವ ಮಹಾಸ್ಫೋಟ. ಆದ್ದರಿಂದಲೇ ನಾವು ಇನ್ನೂ ಆ ಮಹಾಸ್ಫೋಟವನ್ನು ನೆನಪಿಸಿಕೊಳ್ಳುತ್ತಾ ಇದ್ದೇವೆ. ಅದರ ಬಗ್ಗೆ ವಿಚಾರ ಮಾಡುತ್ತಿದ್ದೇವೆ. ಅದುವೇ ಬಸವ ತತ್ವ, ಶರಣ ಸಿದ್ಧಾಂತ, ಕಾಯಕ-ದಾಸೋಹ, ಸಮಾನತೆ ಹಾಗೂ ನಡೆ-ನುಡಿ ಸಿದ್ಧಾಂತದ ಮಹಾಸ್ಫೋಟ.
12 ನೇ ಶತಮಾನದಲ್ಲಿದ್ದ ಚಂದಯ್ಯ ಹೆಸರಿನ ಇನ್ನೂ ಮೂವರ ಪ್ರಸ್ತಾಪ ಬರುತ್ತದೆ.
- ಅಣಬೆ ಚಂದಯ್ಯ.
- ಚಿಮ್ಮಲಿಗೆ ಚಂದಯ್ಯ.
- ಸೀಗೂರು ಚಂದಯ್ಯ.
ಆದರೆ ಈ ಮೂವರು ಬರೆದ ಯಾವುದೇ ವಚನಗಳು ಇಂದಿಗೂ ಲಭ್ಯವಾಗಿಲ್ಲ. ನುಲಿಯ ಚಂದಯ್ಯನವರ ಪ್ರಸ್ತಾಪ ಬಸವ ಪುರಾಣ, ಶೂನ್ಯ ಸಂಪಾದನೆಗಳು, ರಾಘವಾಂಕ ಚಾರಿತ್ರ್ಯ, ಶಿವತತ್ವ ಚಿಂತಾಮಣಿ, ಚೆನ್ನಬಸವ ಪುರಾಣ, ಗುರುರಾಜ ಚಾರಿತ್ರ್ಯ ಮತ್ತು ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರ ಮುಂತಾದ ಇನ್ನೂ ಹಲವು ಗ್ರಂಥಗಳಲ್ಲಿ ಪ್ರಸ್ತಾಪವಾಗಿದೆ. ಹೆಂಡದ ಮಾರಯ್ಯನವರು ತಮ್ಮ ಎರಡು ವಚನಗಳಲ್ಲಿ ಬಹಳ ಅಭಿಮಾನ ಮತ್ತು ಆತ್ಮೀಯತೆಯಿಂದ “ನುಲಿಯೊಡೆಯರೆ” ಎಂದು ಬರೆದಿದ್ದಾರೆ.
ನುಲಿಯೊಡೆಯರೆ ನಿಮ್ಮಾಳ್ದರ ಕೊಳ್ಳಿರೆ.
ಆಳ್ದರೆಂದವರಾರು?
ಅವರು ನಿಮ್ಮ ಕೈಯಲ್ಲಿದ್ದಂಥವರೂ, ಅವರಾಳ್ದರಲ್ಲ.
ಅವರೇನು? ಅವರು ನಿಮ್ಮ ಇಷ್ಟರುದ್ರರಾಗರೆ?
ಜಂಗಮವಾಗಿದ್ದಹರು ಇವರು ಬೇಡವೆ?
ಇಹರೆ ಬೇಡೆನ್ನೆ, ಹೋಹರೆ ನಿಲಿಸ ಶಕ್ತನಲ್ಲ.
ನಾವು ಇರಲು ಬಲ್ಲಲ್ಲಿ ಇರಿ, ಕೈಯಲ್ಲಿ ಕೊಳ್ಳಿರೆ.
ಮುನ್ನವೆ ಕೊಂಡಿದ್ದೆನು, ಎನ್ನನೇಕೆ ಒಲ್ಲೆಯಯ್ಯಾ,
ನೀನು ಮುನಿದಿದ್ದೆಯಾಗಿ, ಇನ್ನು ಮುನಿವುದಿಲ್ಲ ನಾನು.
ನಿಮ್ಮ ನಂಬುವದಿಲ್ಲ. ಹೊಣೆಯ ಕೊಟ್ಟೆಹೆನು.
ಅದ ಕಂಡು, ಮಾಚಿದೇವ
ಮಹಾಪ್ರಸಾದಿ ಹೊಣೆಯಾಗಯ್ಯಾ.
ನಂಬೆನು ಜೀಯಾ, ನಿಮ್ಮಾಣೆ.
ಪತ್ರವಾದರೆ ಕೊಟ್ಟೆಹೆನು, ಇರಲಿಕೆ ಠಾವೆಲ್ಲಿ?
ಕರದಲ್ಲಿಯೆ ಅಲ್ಲ, ಉರದಲ್ಲಿಯೆ ಅಹುದು.
ನಂಬಿದೆನು, ಸುಖದಲ್ಲಿಹ ಧರ್ಮೇಶ್ವರ[ಲಿಂಗಾ].
(ಸಮಗ್ರ ವಚನ ಸಂಪುಟ: ಒಂಭತ್ತು-2021 / ಪುಟ ಸಂಖ್ಯೆ-511 / ವಚನ ಸಂಖ್ಯೆ-1208)
ನುಲಿಯೊಡೆಯರೆ ನಿಮ್ಮಾಳ್ದರೇನಾದರು?
ಆಳ್ದರು ಜಂಗಮದ ಪಾದದ ಕೆಳಗೈದಾರೆ.
ಪಾದ ಲಿಂಗವಪ್ಪುದೆ?
ಪಾದಕ್ಕೆಯೂ ಲಿಂಗಕ್ಕೆಯೂ ಭೇದವುಂಟೆ?
ನಾವರಿದುದಿಲ್ಲ, ಸುಮ್ಮನಿರಿ ನೀವು. ಇದಕ್ಕಿನ್ನೇನು ಪ್ರಾಯಶ್ಚಿತ?
ಶಿವಶರಣರ ಚರಣೋದಕವ ಕರುಣಿಸಬೇಕು, ಕೊಡಬಾರದು.
ಅದೇನು ಕಾರಣ? ನೀವು ಲಿಂಗವ ಕೇಳಿದಿರಾಗಿ,
ಶರಣಂಗೆ ಲಿಂಗವಿಲ್ಲ, ನಾವು ಪೂಜಕರಲ್ಲ.
ಭಕ್ತಿಯೆಂಬುದಾವುದು? ಅರ್ಧಶರೀರ ಶಿವನಾರು?
ದಕ್ಷಿಣಂಗೆ ಮಹೇಶ್ವರನಾರು? ಭೃಂಗೀಶ್ವರನೊಬ್ಬನೆ?
ಮತ್ತೆ ಕಂಡುದಿಲ್ಲ, ಧರ್ಮೇಶ್ವರ[ಲಿಂಗಾ].
(ಸಮಗ್ರ ವಚನ ಸಂಪುಟ: ಒಂಭತ್ತು-2021 / ಪುಟ ಸಂಖ್ಯೆ-511 / ವಚನ ಸಂಖ್ಯೆ-1209)
ಬಸವಣ್ಣನವರ ಹಿರಿಯ ಸಮಕಾಲೀನರಾದ ನುಲಿಯ ಚಂದಯ್ಯನವರು ಕ್ರಿ. ಶ. 1107 ರಲ್ಲಿ ಈಗಿನ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ “ಶಿವಣಗಿ” ಎನ್ನುವ ಗ್ರಾಮದಲ್ಲಿ ಜನಿಸಿದರು. ವಿಜಯಪುರದಿಂದ ಕಲಬುರ್ಗಿಗೆ ಹೋಗುವ ಮಾರ್ಗದಲ್ಲಿ ಈ ಶಿವಣಗಿ ಗ್ರಾಮವಿದ್ದು ಅಲ್ಲಿ ನುಲಿಯ ಚಂದಯ್ಯನವರ ಹೆಸರಿನ ಒಂದು ದೇವಸ್ಥಾನವೂ ಇದೆ.
ನುಲಿಯ ಚಂದಯ್ಯನವರು “ಕುಳುವ” ಎಂಬ ಭಾಷೆಯನ್ನು ಮಾತನಾಡುವ “ಕೊರವ” ಸಮಾಜಕ್ಕೆ ಸೇರಿದವರು. ಅಂದರೆ ಹಗ್ಗ ಹೊಸೆಯುವ ಕಾಯಕ ಮಾಡುವ ಜನಾಂಗಕ್ಕೆ ಸಂಬಂಧಪಟ್ಟವರು. ನುಲಿ ಅಂದರೆ “ಹುಲ್ಲು” ಅಥವಾ “ಹಗ್ಗ”. ಹಗ್ಗವನ್ನು ಬೇರೆ ಬೇರೆ ವಸ್ತುಗಳಾದ ಪುಂಡಿ ಕಟ್ಟಿಗೆ, ಗಾದಾಳೆ, ಮೆದೆಹುಲ್ಲು ಮತ್ತಿತರ ನಾರಿನಿಂದ ತಯಾರಿಸುತ್ತಾರೆ. “ಚಂದೇಶ್ವರಲಿಂಗ” ಎನ್ನುವ ವಚನಾಂಕಿತದಿಂದ ನುಲಿಯ ಚಂದಯ್ಯನವರು ಬರೆದ 48 ವಚನಗಳು ಸಿಕ್ಕಿವೆ. ಹುಲ್ಲಿನ ಬಗ್ಗೆ ಚಂದಯ್ಯನವರು ಒಂದು ವಚನದಲ್ಲಿ ನಿರೂಪಿಸಿದ್ದಾರೆ.
ಸಂಸಾರವೆಂಬ ಸಾಗರದ ಮಧ್ಯದೊಳಗೆ
ಬೆಳೆದ ಹೊಡಕೆಯ ಹುಲ್ಲ ಕೊಯ್ದು
ಮತ್ತಮಾ ಕಣ್ಣ ತೆಗೆದು, ಕಣ್ಣಿಯ ಮಾಡಿ
ಇಹಪರವೆಂಬ ಉಭಯದ ಗಂಟನಿಕ್ಕಿ
ತುದಿಯಲ್ಲಿ ಮಾಟಕೂಟವೆಂಬ ಮನದ ಕುಣಿಕೆಯಲ್ಲಿ
ಕಾಯಕವಾಯಿತ್ತು.
ಇದು ಕಾರಣ ಚಂದೇಶ್ವರಲಿಂಗವೆಂಬ ಭಾವವೆನಗಿಲ್ಲ
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-461 / ವಚನ ಸಂಖ್ಯೆ-1326)
ಕಾಯಕ ಮತ್ತು ದಾಸೋಹದ ಹರಿಕಾರರಾದ 12 ನೇ ಶತಮಾನದ ಶರಣರು ಕಾಯಕ ತತ್ವವನ್ನು ಬಲವಾಗಿ ಪ್ರತಿಪಾದಿಸಿದ್ದರು. ಚೈನಾ ದೇಶದ ಒಂದು ಗಾದೆ ಮಾತು ನೆನಪಿಗೆ ಬರುತ್ತದೆ. “He who does not work, shall he eat?” ದುಡಿಯದೆ ಊಟ ಮಾಡುವ ಹಕ್ಕು ಯಾರಿಗೂ ಇಲ್ಲ ಅಂತ. ಇದನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತಂದವರು ನಮ್ಮ ಬಸವಾದಿ ಶರಣರು. ನುಲಿಯ ಚಂದಯ್ಯನವರ ಒಂದು ವಚನ ಈ ಕಾಯಕ ತತ್ವವನ್ನು ನಿರೂಪಿಸುತ್ತದೆ.
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೇ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರ ಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು.
ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-455 / ವಚನ ಸಂಖ್ಯೆ-1304)
ಈ ವಚನ ಕಾಯಕದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಗುರು, ಲಿಂಗ, ಜಂಗಮ ಯಾರಾದರೂ ಸರಿ ಕಾಯಕ ಸೇವೆಯನ್ನು ಕಡ್ಡಾಯವಾಗಿ ಮಾಡಲೇಬೇಕು ಎಂಬ ಸಂಗತಿಯನ್ನು ಸಾರುತ್ತವೆ. ಭಾವಶುದ್ಧವಾಗಿ ಮಾಡುವುದೇ ನಿಜವಾದ ಕಾಯಕ. ಕಾಯಕದಿಂದ ಬಂದುದು ಮಾತ್ರ ಲಿಂಗಾರ್ಪಿತವಾಗುತ್ತದೆ ಎಂಬಂಥ ಕಾಯಕನಿಷ್ಠೆಯ ಮಾತುಗಳಲ್ಲಿ ಶರಣ ನುಲಿಯ ಚಂದಯ್ಯನವರ ಕಾಯಕದ ಪರಿಕಲ್ಪನೆ ಸ್ಪಷ್ಟವಾಗಿ ನಿರೂಪಿತವಾಗಿದೆ.
ಬಸವ ಪುರಾಣ ಮತ್ತು ಶೂನ್ಯ ಸಂಪಾದನೆಗಳಲ್ಲಿ “ಕಳಚಿ ಬಿದ್ದ ಇಷ್ಟಲಿಂಗದ ಕೈಯಿಂದಲೇ ಹಗ್ಗ ಮಾರುವ ಕಾಯಕ ಮಾಡಿಸಿದ ಗಟ್ಟಿಗ” ಶರಣ ನುಲಿಯ ಚಂದಯ್ಯ ಎಂಬ ಕಲ್ಪನಾತೀತ ವರ್ಣನೆ ಬಂದಿದೆ. ಈ ಪ್ರಕರಣ ನಡೆದಿದೆ ಅಥವಾ ನಡೆದಿಲ್ಲಾ ಎನ್ನುವ ಬಗ್ಗೆ ಬಸವ ತತ್ವದ ವಿವೇಚನೆ ಇದ್ದರೂ ನುಲಿಯ ಚಂದಯ್ಯನವರ ಕಾಯಕ ನಿಷ್ಠೆ ಉಪಮಾತೀತ.
ಬಸವಣ್ಣನವರ ಹಿರಿಯ ಸಮಾಕಾಲೀನರಾದ ನುಲಿಯ ಚಂದಯ್ಯನವರು ಬಸವಣ್ಣನವರ ಬಗ್ಗೆ ಅಪಾರವಾದ ಭಕ್ತಿ ಮತ್ತು ಗೌರವ ಇಟ್ಟುಕೊಂಡಿದ್ದಂಥವರು. ಬಸವಣ್ಣನವರ ಬಗ್ಗೆ ತಮ್ಮ ಮೂರು ವಚನಗಳಲ್ಲಿ ಪ್ರಸ್ತಾಪ ಮಾಡುತ್ತಾರೆ.
ಗುರುವ ಕುರಿತು ಮಾಡುವಲ್ಲಿ
ಬ್ರಹ್ಮನ ಭಜನೆಯ ಹರಿಯಬೇಕು,
ಲಿಂಗವ ಕುರಿತು ಮಾಡುವಲ್ಲಿ
ವಿಷ್ಣುವಿನ ಸಂತೋಷಕ್ಕೆ ಸಿಕ್ಕದಿರಬೇಕು.
ಜಂಗಮವ ಕುರಿತು ಮಾಡುವಲ್ಲಿ
ರುದ್ರನ ಪಾಶವ ಹೊದ್ದದಿರಬೇಕು.
ಒಂದನರಿದು ಒಂದ ಮರೆದು
ಸಂದಿಲ್ಲದ ಸುಖ ಜಂಗಮ ದಾಸೋಹದಲ್ಲಿ
ಸಂಗನಬಸವಣ್ಣ ನಿತ್ಯ ಚಂದೇಶ್ವರಲಿಂಗಕ್ಕೆ ತಲುಪಿ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-454 / ವಚನ ಸಂಖ್ಯೆ-1298)
ಗುರುವಿನ ವಿಸ್ತಾರವನ್ನು ಅರಿಯಬೇಕಾದರೆ ಅನ್ಯ ದೇವರ ಅಂದರೆ ಬ್ರಹ್ಮನ ವಿಚಾರವನ್ನು ಮನಃಪಟಲದಿಂದ ದೂರ ಸರಿಸಬೇಕು. ಲಿಂಗದ ಸೇವೆಯನ್ನು ಅಂದರೆ ಅಂತರಂಗದ ಅರಿವು ಮತ್ತು ಬಹಿರಂಗದ ನಿಲುವನ್ನು ಸಾಕಾರಗೊಳಿಸಲು ವಿಷ್ಣುವಿನ ಸಂತೋಷ ಅಂದರೆ ಅರಿಷಡ್ವರ್ಗಗಳ ಪರಿಣಾಮಕ್ಕೆ ಒಳಗಾಗಬಾರದು. ಜಂಗಮ ಅಂದರೆ ಸಮಷ್ಠೀ ಪ್ರಜ್ಞೆಯ ಅರಿವು ಮೂಡಿಸುವಾಗ ರುದ್ರನ ಪಾಶ ಅಂದರೆ ಈ ಜನ್ಮ ಇಲ್ಲಿಯೇ ಮುಗಿಯುವುದು ಎನ್ನುವ ಭಾವದಿಂದ ಸೇವೆ ಮಾಡಬೇಕು. ಲಿಂಗಾಂಗ ಸಾಮರಸ್ಯದ ಕುರುಹಿನ ಮೂರ್ತಿಯಾದ ಬಸವಣ್ಣನವರನ್ನು ದಾಸೋಹಂ ಭಾವದಿಂದ ನೋಡ ಬಯಸುತ್ತಾರೆ ನುಲಿಯ ಚಂದಯ್ಯನವರು. ಈ ಮೂಲಕ ಬಸವಣ್ಣನವರ ವ್ಯಕ್ತಿತ್ವದಲ್ಲಿ ದಾಸೋಹ ಭಾವ ಎಂತಹದ್ದು ಎನ್ನುವುದಕ್ಕೆ ಬಸವಣ್ಣನವರಲ್ಲಿ ನಿರಾಕಾರ ಚಂದೇಶ್ವರಲಿಂಗವನ್ನು ಕಾಣುತ್ತಾರೆ ನುಲಿಯ ಚಂದಯ್ಯನವರು. ಗುರು, ಲಿಂಗ, ಜಂಗಮವನ್ನು ಮೀರಿ ತನ್ಮಯರಾದ ಬಸವಣ್ಣನವರು ಇಡೀ ವ್ಯಷ್ಠಿ ಮತ್ತು ಸಮಷ್ಠಿಯ ಸಮಗ್ರ ಅನುಪಮ ಸೇವೆಯನ್ನು ಮಾಡಿದ್ದಾರೆ ಎನ್ನುವ ಪರಿಕಲ್ಪನೆಯನ್ನು ನಮಗೆ ಈ ವಚನದ ಮೂಲಕ ಪ್ರಸ್ತುತ ಪಡಿಸಿದ್ದಾರೆ.
ಎನ್ನಂಗದ ಸತ್ಕ್ರೀ ಸಂಗನ ಬಸವಣ್ಣನು
ಎನ್ನ ಲಿಂಗದ ಸತ್ಕ್ರೀ ಚೆನ್ನಬಸವಣ್ಣನು.
ಎನ್ನ ಅರುಹಿನ ಸತ್ಕ್ರೀ ಪ್ರಭುವೇ ನೀವು ನೋಡಾ!
ಎನ್ನ ದಾಸೋಹದ ನೈಷ್ಠೆಯೇ ಮಡಿವಾಳಯ್ಯನು!
ಇಂತೀ ಅಂಗ ಲಿಂಗ ಜ್ಞಾನ ದಾಸೋಹ
ಇವು ಮುಂತಾದವೆಲ್ಲವೂ ನಿಮ್ಮ ಪುರಾತನರಾದ ಕಾರಣ
ಚಂದೇಶ್ವರಲಿಂಗದಲ್ಲಿ ಚೆನ್ನಬಸವಣ್ಣನ ಕೃಪೆಯಿಂದ
ನಿಮ್ಮ ಶ್ರೀಪಾದವ ಬೆರೆಸಿದೆನಯ್ಯಾ ಪ್ರಭುವೇ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-451 / ವಚನ ಸಂಖ್ಯೆ-1289)
ಎನ್ನ ಸತ್ಕ್ರೀ ಸಂಗನಬಸವಣ್ಣ
ಎನ್ನ ಸುಜ್ಞಾನವೇ ಚೆನ್ನಬಸವಣ್ಣ
ಈ ಎರಡರ ಏಕೀಭಾವವೇ ಪ್ರಭುವೇ ನೀವು ನೋಡಾ!
ನಿಮ್ಮೆಲ್ಲರ ನೈಷ್ಠೆಯೇ ಮಡಿವಾಳಯ್ಯನು!
ಇಂತೀ ಚತುರ್ವಿಧವೆನಗೆ ಬೇಕಾದ ಕಾರಣ
ಇಷ್ಟಲಿಂಗದ ಸೇವೆ ಚರಲಿಂಗದ ದಾಸೋಹವೆಂಬುದನು
ಬಸವಣ್ಣಪ್ರಿಯ ಚಂದೇಶ್ವರಲಿಂಗದಲ್ಲಿ
ಚೆನ್ನಬಸವಣ್ಣನ ಕೈಯಲ್ಲಿ ಎನಗೆ ತಿಳುಹಿಕೊಡಾ ಪ್ರಭುವೇ!
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-451 / ವಚನ ಸಂಖ್ಯೆ-1290)
ನುಲಿಯ ಚಂದಯ್ಯನವರ ಮೇಲಿನ ಈ ಎರಡೂ ವಚನಗಳಲ್ಲಿ ಪುರಾತನರು ಅಂದರೆ ಪೂರ್ವಜರು ಮತ್ತು ಪಂಚಭೂತಗಳನ್ನು ಹಾಗೂ ಪಂಚತತ್ವಗಳನ್ನೊಳಗೊಂಡಂತೆ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ ಪ್ರಭುಗಳು ಮತ್ತು ಮಡಿವಾಳ ಮಾಚಿದೇವರನ್ನು ನೆನೆಯುತ್ತಾರೆ. “ಎನ್ನಂಗದ ಸತ್ಕ್ರೀ” ಎನ್ನುವಲ್ಲಿ ನಮ್ಮಿಂದ ಅಗುವ ಎಲ್ಲ ಸತ್ಯನಿಷ್ಠ ಕರ್ಮ ಕಾಯಕಗಳಿಗೆ ಬಸವಣ್ಣನವರಿಗೆ, ಸತ್ಯನಿಷ್ಠ ಆಚಾರ ವಿಚಾರಗಳನ್ನು ಚೆನ್ನಬಸವಣ್ಣನವರಿಗೆ, ಎಲ್ಲ ಅಂತರಂಗದ ನಿಜದ ಅರಿವನ್ನು ಅಲ್ಲಮ ಪ್ರಭುಗಳಿಗೆ ಮತ್ತು ದಾಸೋಹದ ಪರಿಕಲ್ಪನೆಯ ಸದ್ಗುಣಗಳನ್ನು ವೀರಗಣಾಚಾರಿ ಮಡಿವಾಳ ಮಾಚಿದೇವರಿಗೆ ಅರ್ಪಿಸುತ್ತಾರೆ. ಶರಣ ಭಾವದ ಸದ್ಗುಣಗಳೆಲ್ಲವೂ ಈ ನಾಲ್ಕೂ ಜನರಿಂದ ಮತ್ತು ಸಕಲ ಹಿರಿಯರಿಂದ ಪಡೆದೆನು ಎನ್ನುವಲ್ಲಿ ಸದ್ಗುಣಗಳ ಅರಿವನ್ನು ಪಡೆಯುವ ಹಂಬಲಕ್ಕೆ ಹೊಸ ಭಾಷ್ಯವನ್ನು ಬರೀತಾರೆ ಶರಣ ನುಲಿಯ ಚಂದಯ್ಯನವರು.
ಕಲ್ಯಾಣ ಕ್ರಾಂತಿಯ ವಿಷಯ ತಿಳಿದು ಉಳುವಿಗೆ ಧಾವಿಸುತ್ತಾರೆ. ಅಷ್ಟರಲ್ಲಿ ಸಹಸ್ರಾರು ಶರಣರು ಲಿಂಗೈಕ್ಯರಾಗಿರುತ್ತಾರೆ. ನುಲಿಯ ಚಂದಯ್ಯನವರು ಉಳಿದ ಶರಣರಾದ ಚೆನ್ನಬಸವಣ್ಣ, ಹಡಪದ ರೇಚಣ್ಣ ಮುಂತಾದವರನ್ನು ಉಳಿವಿಯಲ್ಲಿಯೇ ಬಿಟ್ಟು ಅಕ್ಕ ನಾಗಲಾಂಬಿಕೆಯವರನ್ನು ಜೊತೆಗೆ ಕರೆದುಕೊಂಡು ಈಗಿನ ಶಿವಮೊಗ್ಗ ಜಿಲ್ಲೆಯ ತುಂಗಾ ನದಿಯ ಪ್ರದೇಶಕ್ಕೆ ಹೋಗುತ್ತಾರೆ. ಅಕ್ಕ ನಾಗಲಾಂಬಿಕೆಯವರನ್ನು ತರೀಕೆರೆ ಸಮೀಪದ “ಎಣ್ಣೆಹೊಳೆ” ಎನ್ನುವ ಗ್ರಾಮದಲ್ಲಿ ನೆಲೆ ನಿಲ್ಲಲು ಸಹಾಯ ಮಾಡುತ್ತಾರೆ. ಆ ಗ್ರಾಮದ ಸಿದ್ಧವೀರಸ್ವಾಮಿ ಎನ್ನುವವರು ಅಕ್ಕ ನಾಗಲಾಂಬಿಕೆಯವರಿಗೆ ಒಂದು ಮಠವನ್ನು ಕಟ್ಟಿಸಿ ಕೊಡುತ್ತಾರೆ.

ತರೀಕೆರೆ ತಾಲೂಕಿನ ಎಣ್ಣೆಹೊಳೆಯಲ್ಲಿರುವ ಅಕ್ಕ ನಾಗಲಾಂಬಿಕೆಯವರ ಗದ್ದುಗೆ
ನಂತರ ನುಲಿಯ ಚಂದಯ್ಯನವರು ಪದ್ಮಾವತಿ (ಈಗಿನ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಮೀಪವಿರುವ “ಆರ್. ನುಲೇನೂರು” ಎನ್ನುವ ಗ್ರಾಮ) ಎನ್ನುವ ಗ್ರಾಮಕ್ಕೆ ಬರುತ್ತಾರೆ. ದುಮ್ಮಿರಾಯನ ಪತ್ನಿಯಾದ ಪದ್ಮಾವತಿಯವರು ಚಂದಯ್ಯನವರಿಂದ ಧರ್ಮೋಪದೇಶ ಪಡೆದು ಒಂದು ಕೆರೆಯನ್ನು ಕಟ್ಟಿಸುತ್ತಾರೆ. ಆ ಕೆರೆಯ ದಂಡೆಯ ಮೇಲೆ ಒಂದು ಮಠವನ್ನು ಕಟ್ಟಿಸಿದಾಗ ಚಂದಯ್ಯನವರು ತಮ್ಮ ಜೀವನದ ಕೊನೇಯವರೆಗೂ ಅಲ್ಲಿ ಅನುಭಾವ ಗೋಷ್ಠಿಯನ್ನು ನಡೆಸುತ್ತಿದ್ದರೆಂದು ತಿಳಿದು ಬರುತ್ತದೆ. ಕ್ರಿ. ಶ. 1177 ರಲ್ಲಿ ಚಂದಯ್ಯನವರು ಲಿಂಗೈಕ್ಯರಾಗಲು ಅವರ ಕ್ರಿಯಾ ಸಮಾಧಿಯನ್ನು ಅದೇ ಮಠದಲ್ಲಿ ಮಾಡಲಾಯಿತು. ನುಲಿಯ ಚಂದಯ್ಯನವರ ಜ್ಞಾಪಕಾರ್ಥವಾಗಿ ಪಾದ್ಮಾವತಿ ಎಂಬ ಊರನ್ನು “ನುಲೇನೂರು” ಎಂದು ಕರೆಯಲಾರಂಭಿಸಿದರು.
ಶರಣ ನುಲಿಯ ಚಂದಯ್ಯನವರಿಗೆ ಸಂಬಂಧಿಸಿದಂತೆ ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿನ ಕಲ್ಲು ಮಂಟಪ (ಗಗ್ಗರಿ ಮಂಟಪ) ದಲ್ಲಿ ಹಲವಾರು ಶರಣರ ಜೊತೆಗೆ ನುಲಿಯ ಚಂದಯ್ಯನವರ ಮೂರ್ತಿಯೂ ಸಹ ವಚನಾಂಕಿತದೊಂದಿಗೆ ಕೆತ್ತಲಾಗಿದೆ. ಇದು ನುಲಿಯ ಚಂದಯ್ಯನವರ ಬಗ್ಗೆ ಶರಣ ಸಂಸ್ಕೃತಿಯ ಮಹತ್ವವನ್ನು ತಿಳಿಸುತ್ತದೆ.
ಸಂಗ್ರಹ ಮತ್ತು ಲೇಖನ :
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋಬೈಲ್ ನಂ: 9741 357 132
ಈ-ಮೇಲ್: vijikammar@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in