ಕಾಯಕಯೋಗಿ ಶಿವಶರಣ ಮೇದಾರ ಕೇತಯ್ಯನವರು | ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಸಾವಿರಾರು ವರ್ಷಗಳಿಂದ ಬೇರೂರಿದ ವರ್ಣಾಶ್ರಮ, ಅಂಧಶೃಧ್ಧೆ, ಶೋಷಣೆ ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ ಸಾಮಾಜಿಕ ಕ್ರಾಂತಿಯನ್ನು ಮಾಡಿದವರು ಯುಗಪ್ರವರ್ತಕ ಬಸವಣ್ಣನವರು. ಈ ಕ್ರಾಂತಿಯಲ್ಲಿ ಬಸವಣ್ಣನವರ ಜೊತೆಗೆ ಕೈ ಜೋಡಿಸಿದವರು ಅನೇಕ ಶತಮಾನಗಳಿಂದ ಸಮಾಜದ ಅಲಕ್ಷ್ಯಕ್ಕೆ ಒಳಗಾದ ಕೆಳ ವರ್ಗದವರು, ದೀನದಲಿತರು. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ನುಲಿಯ ಚಂದಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಮುಂತಾದವರು. ಅಂತಹ ಅಗ್ರಗಣ್ಯ ಶರಣರಲ್ಲಿ ಮೇದರ ಕೇತಯ್ಯನವರೂ ಕೂಡ ಒಬ್ಬರು.

ಬಸವಣ್ಣನವರಿಂದ ಪ್ರಭಾವಿತರಾಗಿ ಅವರನ್ನು ಗುರುವಾಗಿ ಸ್ವೀಕರಿಸಿ ತನು-ಮನ-ಧನಗಳನ್ನು ಗುರು-ಲಿಂಗ-ಜಂಗಮರಲ್ಲಿ ಅರ್ಪಿಸಿ ನಿಜಸುಖವನ್ನ ಕಂಡವರು ಶರಣ ಮೇದಾರ ಕೇತಯ್ಯನವರು. ಶುದ್ಧ ಅನುಭಾವಿ, ಕಾಯಕಜೀವಿ, ನಿತ್ಯ-ದಾಸೋಹಿ, ಸರ್ವಾಂಗಲಿಂಗಿ, ಐಕ್ಯಸ್ಥಲವನ್ನ ಸಾಧಿಸಿದ ಶ್ರೇಷ್ಠ ಶಿವಾನುಭವಿಗಳು ಶರಣ ಮೇದಾರ ಕೇತಯ್ಯನವರು.

ಕೇತಯ್ಯನವರು 12 ನೇ ಶತಮಾನದ ಶ್ರೇಷ್ಠ ವಚನಕಾರರು. ಬಿದಿರಿನಿಂದ ಬುಟ್ಟಿ, ಮೊರ ಮೊದಲಾದ ಪರಿಕರಗಳನ್ನು ಮಾಡಿ ಮಾರಿ ಬಂದ ಹಣದಿಂದ ದಾಸೋಹ ನಡೆಸಿ ಶರಣ ಸಿದ್ದಾಂತಗಳನ್ನ ವಚನಗಳ ಮೂಲಕ ಪಸರಿಸಿದ ಮಹಾನ್ ಶರಣರು. “ಗವರೇಶ್ವರಲಿಂಗ” ಎಂಬ ಅಂಕಿತದಿಂದ ಬರೆದ ಇವರ 11 ವಚನಗಳು ನಮಗೆ ಸಿಕ್ಕಿವೆ. ಪ್ರೊ. ಎಸ್. ಎಸ್. ಭೂಸರೆಡ್ಡಿ ಅವರು ಮತ್ತು ಶ್ರೀಮತಿ. ಎಸ್. ಎಸ್. ಮಟ್ಟಿ ಅವರು ಈ ವಚನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಶರಣ ಮೇದಾರ ಕೇತಯ್ಯನವರು ಬಸವಣ್ಣನವರ ಸಮಕಾಲೀನರು. ಇವರಿಗೆ ಕೇತ, ಕೇತಿದೇವ, ಕೇತಿತಂದೆ, ಕೇತಯ್ಯ, ಕೇತಿದೇವಯ್ಯ ಮುಂತಾದ ಹೆಸರುಗಳಿವೆ. ಶರಣ ಮೇದಾರ ಕೇತಯ್ಯನವರ ವಚನಗಳೆಲ್ಲ ಶರಣ ಸಿದ್ದಾಂತ ಮತ್ತು ತತ್ವಗಳ ಸಾರ ಸಂಗ್ರಹಗಳಾಗಿವೆ. ಸರಿ ಸಮಾನತೆಯ ಸಮಾಜ ನಿರ್ಮಿಸುವಲ್ಲಿ ಬಸವಣ್ಣನವರ ಜೊತೆಗೆ ಕೈಜೋಡಿಸಿದ ಧೀಮಂತ ಶರಣರು ಕೇತಯ್ಯನವರು.

ಶರಣ ಮೇದಾರ ಕೇತಯ್ಯನವರ ಜೀವನ ಚರಿತ್ರೆ ತಿಳಿಯಲು ಹೆಚ್ಚಿನ ಮಾಹಿತಿ ತಿಳಿಯದಿದ್ದರೂ ಶಿಷ್ಟ ಜನಪದ ಸಾಹಿತ್ಯದಲ್ಲಿ ಅವರ ಬಗ್ಗೆ ಉಲ್ಲೇಖ ಸಿಗುತ್ತದೆ. ಅವರ ವಚನಗಳಿಂದ ಅವರ ಬಗೆಗೆ ಹೆಚ್ಚಿಗೆ ತಿಳಿಯಲಾಗದಿದ್ದರೂ ಅವರ ವ್ಯಕ್ತಿತ್ವ ಮನೋಭಾವಗಳ ಬಗೆಗೆ ಸ್ವಲ್ಪ ತಿಳಿದುಕೊಳ್ಳಬಹುದು. ಮೇದಾರ ಕೇತಯ್ಯನವರು ಬೇಲೂರಿನವರು. ಅವರ ಧರ್ಮಪತ್ನಿ ಸಾತವ್ವೆ. ಜನಪದ ಸಾಹಿತ್ಯದಲ್ಲಿ ಮಲೆನಾಡಿನ ಉಳುಮೆ ಬೆಟ್ಟದ ಕೆಳಗಿನ ಬೇಲೂರು ಎಂದು ಬರುತ್ತದೆ. ಇದರಿಂದಾಗಿ ಇವರು ಉಳಿವೆ ಹತ್ತಿರವಿರುವ ಬೇಲೂರು ಸರಿಯಾದುದು ಎಂದು ಭಾವಿಸಬಹುದು.

ಮಲೆನಾಡ ಗುಡಿಯೊಳಗೆ ಉಳುಮೆ ಬೆಟ್ಟದ ಕೆಳಗೆ
ಬೇಲೂರಕೇತ ಮೇದಾರ ಕಾಡೊಳಗೆ,
ಬೆಳದಾಡಿ ಕಲೆತ ಶಿವ ಮತವ
ಕೇತಯ್ಯನ ಮಡದಿ ಸಾತಾವ್ವೆ ಎಂಬಳು
ಜಾತಿ ಮೇದರದ ಕಸುಬಿನಲಿ ನಾಡೊಳಗೆ
ನೀತಿ ಶಿವಮತದ ಒರೆಗಲ್ಲು

ಹೀಗೆ ಹೆಂಡತಿ ಸಾತವ್ವೆಯೊಡನೆ ಜೀವನ ಸಾಗಿಸುತ್ತಿದ್ದಾಗ ಬಸವಣ್ಣನವರ ಹೊಸ ಮತ ಕೈಬೀಸಿ ಕರೆಯುತ್ತದೆ. ದಂಪತಿಗಳು ಕಲ್ಯಾಣಕ್ಕೆ ಬರುತ್ತಾರೆ.

ಬಸವ ಸಾರಿದೆನೆಂದು ಕುಶಲದಲಿ ವಚನಗಳ
ಮುಸುಕಿರುಳು ಹರಿದು ನಸುಕಾತು ಜಗದೊಳಗೆ
ಹೊಸಮತದ ಸೂರ್ಯನು ಉದಿಸಿದನು

ಎಂದು ಜನಪದ ಸಾಹಿತ್ಯದಲ್ಲಿ ಬರುತ್ತದೆ.

ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಬಸವಣ್ಣ.
ಎನ್ನ ಬುದ್ಧಿಗೆ ಗುರುಲಿಂಗವಾದಾತ, ಬಸವಣ್ಣ.
ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ, ಬಸವಣ್ಣ.
ಎನ್ನ ಮನಕ್ಕೆ ಜಂಗಮಲಿಂಗವಾದಾತ, ಬಸವಣ್ಣ.
ಎನ್ನ ಜೀವಕ್ಕೆ ಪ್ರಸಾದಲಿಂಗವಾದಾತ, ಬಸವಣ್ಣ.
ಎನ್ನ ಅರುವಿಂಗೆ ಮಹಾಲಿಂಗವಾದಾತ, ಬಸವಣ್ಣ.
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ, ಬಸವಣ್ಣ.
ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ, ಬಸವಣ್ಣ.
ಎನ್ನ ಕಾರಣತನುವಿಂಗೆ ತೃಪ್ತಿಲಿಂಗವಾದಾತ, ಬಸವಣ್ಣ.
ಇಂತೆಂದರಿದೆನಾಗಿ, ಗವರೇಶ್ವರಲಿಂಗದಲ್ಲಿ
ಆನು ಸುಖಿಯಾಗಿರ್ದೆನಯ್ಯಾ.

ಎಂದು ಕಲ್ಯಾಣದಲ್ಲಿ ಬಸವಣ್ಣನವರ ಆಪ್ತರಲ್ಲಿ ಒಬ್ಬರಾಗಿ ಗುರುತಿಸಿಕೊಂಡು ಧನ್ಯತೆಯ ಭಾವವನ್ನು ಹೊಂದುತ್ತಾರೆ. ಕಾಡಿನೊಳಗಿಂದ ಬಿದಿರು ತರುವುದು ಬುಟ್ಟಿ, ಮರ ಹೆಣಿಯೋದು, ಅದನ್ನು ಮಾರಿ ಬಂದ ಹಣದಲ್ಲಿ ದಾಸೋಹ ನಡೆಸುವುದು. ಪತಿಗೆ ಕಾಯಕ ಮಾಡಿ ಬೇಸರವಿಲ್ಲ, ತಿಗೆ ದಾಸೋಹ ಮಾಡಿ ಬೇಸರವಿಲ್ಲ. ಹೀಗೆ ಶರಣ ದಂಪತಿಗಳ ಕೀರ್ತಿ ಕಲ್ಯಾಣದ ತುಂಬೆಲ್ಲ ಹರಡುತ್ತದೆ.

ಶರಣ ಮಾದಾರ ಕೇತಯ್ಯನವರ ಬಗ್ಗೆ “ಬಸವತತ್ವ ರತ್ನಾಕರ” ದಲ್ಲಿ ಒಂದು ಪವಾಡ ಕಥೆ ಬರುತ್ತದೆ. ಒಂದು ದಿನ ಕೇತಯ್ಯನವರು ಕಾಡಿನಲ್ಲಿ ಯಾವ ಬಿದಿರಿನ ಗಿಡ ಕಡೆದರೂ ಅದರೊಳಗಿಂದ ಹೊನ್ನು ಸುರಿಯತೊಡಗುತ್ತದೆ. ಕಾಯಕದಿಂದ ಬರದ ಯಾವ ವಸ್ತುವು ತಮ್ಮದಲ್ಲಾ ಎಂದು ಭಾವಿಸಿದ್ದ ಕೇತಯ್ಯನವರು ಆ ಹೊನ್ನನ್ನೆಲ್ಲ ಅಯೋಗ್ಯವಾದವುಗಳು ಎಂದು ಬಗೆದು ಅವನ್ನ ಬಿಟ್ಟುಬಿಡುತ್ತಾರೆ. ಯಾವ ಬಿದಿರು ಕೊಯ್ದರು ಹೊನ್ನೆ ಕಂಡಾಗ, ಕಾಯಕ ಮತ್ತು ಅದರೊಡನೆ ದಾಸೋಹ ತಪ್ಪುವುದಲ್ಲ ಎಂದು ಕೊರಗುತ್ತಾರೆ. ಕೊನೆಗೆ ಒಂದು ಬಿದರನ್ನ ಮೇಲೆ ಹತ್ತಿ ಕಡೆಯುವಾಗ ಕಾಲು ಜಾರಿ ಬಿದ್ದಾಗ ಬಿದಿರಿನ ಮಳೆ ಎದೆಗೆ ಚುಚ್ಚಿ ಧಾರಾಕಾರವಾಗಿ ರಕ್ತ ಹರಿಯತೊಡಗುತ್ತದೆ‌. ಅಂತಹ ಸ್ಥಿತಿಯಲ್ಲಿಯೂ ಬಿದರನ್ನ ಹೊತ್ತು ಮನೆಗೆ ತಂದು ಬಿದಿರು ಬುಟ್ಟಿಯನ್ನ ಹೆಣೆದು, ಪತ್ನಿಯ ಕೈಯಲ್ಲಿ ಮಾರಲು ಕಳಿಸುತ್ತಾರೆ. ಸಾತವ್ವೆ ಪತಿಗೆ ಎದುರಾಡದೆ ಬುಟ್ಟಿಯನ್ನ ಮಾರಿ ದಾಸೋಹವನ್ನ ನಡೆಸುತ್ತಾರೆ. ಇದು ಕಥೆ ಎನಿಸಿದರು ಕೇತಯ್ಯನವರ ಕಾಯಕ ಮತ್ತು ದಾಸೋಹದ ಬಗೆಗಿನ ನಿಷ್ಠೆಯನ್ನು ತೋರಿಸುತ್ತದೆ. ಕಾಯಕದ ಮತ್ತು ದಾಸೋಹದ ಮೇರುತತ್ವವನ್ನು ಆಕಾಶದೆತ್ತರಕ್ಕೆ ಮುಟ್ಟಿಸಿದ ಕೇತಯ್ಯನವರು ಶಿವನಿಗಿಂತಲೂ ಶರಣರು ಶ್ರೇಷ್ಠ ಎಂಬುದನ್ನು ತೋರಿಸುತ್ತಾರೆ. ಕೇತಯ್ಯನವರ ಈ ಕಾಯಕ ನಿಷ್ಠೆಗೆ ಸಾಕ್ಷಾತ್ ಶಿವನೇ ಮಾರು ಹೋದ ಎಂದು ಈ ಜನಪದದ ಹಾಡಿನಲ್ಲಿ ಬರುತ್ತದೆ.

ಶರಣ ಶಿವ ಕಾಯುವ ಒರೆಗೆ ಹಚ್ಚಿದವರಾರು?
ಹರನೂ ಸಹಿತ ಸೋತು, ಬದುಕಿಸಿದ ಮೇದಾರ
ವರಕೇತ ನಿನಗೆ ಸರಿ ಯಾರು?

ಶರಣರು ನುಡಿದಂತೆ ನಡೆದರು ಎಂಬುದಕ್ಕೆ ಶರಣ ಮೇದಾರ ಕೇತಯ್ಯನವರ ಜೀವನವೇ ಸಾಕ್ಷಿ. ಕೇತಯ್ಯನವರದು ಕರುಣೆ, ದಯೆ, ದಾನ, ಧರ್ಮಗಳಲ್ಲಿ ಎತ್ತಿದ ಕೈ. ತಾವು ಮಾಡುವ ಕಾಯಕದ ರೀತಿ, ಅದರ ಮಹತ್ವ ಮತ್ತು ಕಾಯಕದ ಮೂಲಕ ಪಡೆದ ಲಿಂಗಾಂಗ ಸಾಮರಸ್ಯಗಳನ್ನ ಕೇತಯ್ಯನವರು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ.

ಎನ್ನ ಕಾಯದ ಕಳವಳವ ನಿಲಿಸಿ, ಗುರುಲಿಂಗವ ತೋರಿದ,
ಎನ್ನ ಮನದ ವ್ಯಾಕುಳವ ನಿಲಿಸಿ, ಜಂಗಮಲಿಂಗವ ತೋರಿದ,
ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ,
ಎನ್ನ ಪಾವನವ ಮಾಡಿದ,
ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ,
ಸದ್ಯೋನ್ಮುಕ್ತಿಯ ತೋರಲೆಂದು ಮರ್ತ್ಯಕ್ಕೆ ಮರಳಿ ತಂದ
ಸಂಗನಬಸವಣ್ಣನೆ ಗುರುವೆನಗೆ, ಸಂಗನಬಸವಣ್ಣನೆ ಪರವೆನಗೆ.
ಸಂಗನಬಸವಣ್ಣನ ಕರುಣದಿಂದ, ಘನಕ್ಕೆ ಘನಮಹಿಮ ಅಲ್ಲಮಪ್ರಭುವಿನ
ಶ್ರೀಪಾದವ ಕಂಡು ಬದುಕಿದೆನು ಕಾಣಾ, ಗವರೇಶ್ವರಾ.

ತಮ್ಮ ಕಾಯಕದ ಮೂಲಕ ಮತ್ತು ಅನುಭಾವಿಗಳ ಮಾರ್ಗದರ್ಶನದಿಂದ ದೇಹದ ಬಂಧನಗಳಿಂದ ಮುಕ್ತಿ ಪಡೆದು ಗುರು-ಲಿಂಗ-ಜಂಗಮದ ಮೂಲಕ ಆತ್ಮಜ್ಞಾನ ಪಡೆದ ಅನುಭವವನ್ನು ಈ ವಚನದಲ್ಲಿ ವಿವರಿಸುತ್ತಾರೆ. ಈ ವಚನ ಭಕ್ತಿಯ ಉತ್ತುಂಗ ಸ್ಥಿತಿಯಲ್ಲಿ ಭಕ್ತನು ತನ್ನ ಶರೀರದ ಪ್ರತಿ ಅಂಗದಲ್ಲೂ ದೇವರನ್ನೇ ಕಾಣುತ್ತಾನೆ. ಬಸವಣ್ಣನವರನ್ನು ಆಚಾರಲಿಂಗವಾಗಿ ಕಂಡರೆ, ಜಿಹ್ವೆಯಲ್ಲಿ ಗುರುಲಿಂಗವಾಗಿ, ನೇತ್ರದಲ್ಲಿ ಶಿವಲಿಂಗವಾಗಿ ಕಾಣುತ್ತಾರೆ. ಹೀಗೆ ಎಲ್ಲಾ ಇಂದ್ರಿಯಗಳಲ್ಲೂ ದೈವತ್ವವನ್ನು ಕಾಣುವ ಆಳವಾದ ಭಕ್ತಿಯನ್ನು ಈ ವಚನದಲ್ಲಿ ಪ್ರತಿಪಾದಿಸಲಾಗಿದೆ.

ಇಂದ್ರಿಯಂಗಳ ಕೊಂದೆಹೆನೆಂದಡೆ, ಅವು ಕಂದರ್ಪನ ಹಂಗು.
ಕಂದರ್ಪನ ಕೊಂದೆಹೆನೆಂದಡೆ, ಅವು ಕಂಗಳ ಲಾಭ.
ಕಂಗಳು ಮುಚ್ಚಿಯಲ್ಲದೆ ಲಿಂಗವ ಕಾಣಬಾರದು.
ಅದು ನಿರಂಗಂಗಲ್ಲದೆ, ಜಗದ ಹಂಗಿನವರಿಗಿಲ್ಲಾ ಎಂದೆ,
ಗವರೇಶ್ವರಾ.

ಜಗದ ಹಂಗು ಹರಿದು ಅನಂಗವನ್ನಳಿದು ನಿರಂಗವಾಗುವ ರೀತಿಯನ್ನ ಕೇತಯ್ಯನವರು ಈ ವಚನದಲ್ಲಿ ತಿಳಿಸಿದ್ದಾರೆ.

ಈ ರೀತಿ‌ ಕಾಯಕವನ್ನ ಮತ್ತು ದಾಸೋಹವನ್ನ ತಮ್ಮ ಪ್ರಾಣವಾಗಿಸಿಕೊಂಡ ಕೇತಯ್ಯನವರ ಜಯಂತಿ 03.01.2026 ರಂದು ಇದೆ. ಅವರ ಸ್ಮರಣಾರ್ಥ ಈ ಪುಟ್ಟ ಲೇಖನ.

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply