ಕಾಯಕವೇ ಪ್ರಾಣವಾದ ಶರಣ ಮೇದಾರ ಕೇತಯ್ಯನವರು | ಶ್ರೀ. ಗುರುಪ್ರಸಾದ ಕುಚ್ಚಂಗಿ, ಬೆಂಗಳೂರು.

ಪತ್ನಿ: ಸಾತವ್ವೆ.
ಕಾಯಕ: ಗವರಿಗೆ / ಬಿದಿರು ಹೆಣೆಯುವ ಕಾಯಕ
ಸ್ಥಳ: ಉಳವಿ ಬೆಟ್ಟ, ಬೇಲೂರು ತಾಲ್ಲೂಕು
ಜಯಂತಿ: ಬನದ ಹುಣ್ಣಿಮೆಯಂದು.
ಲಭ್ಯವಿರುವ ವಚನಗಳ ಸಂಖ್ಯೆ: 18
ಅಂಕಿತ: ಗವರೇಶ್ವರಲಿಂಗ.

ಬಸವಯುಗದ ಧೃವತಾರೆ ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕಾಯಕ ಜೀವಿ  ಬಸವಣ್ಣನವರ ಜೀವಪರ ಸಾಮಾಜಿಕ ಶೈಕ್ಷಣಿಕ ಹೋರಾಟಕ್ಕೆ ಮನಸೋತು ಬಂದ ಮೇರು ವ್ಯಕ್ತಿತ್ವವೇ ಶಿವಶರಣ ಮೇದಾರ ಕೇತಯ್ಯನವರು. ಇವರು ಬಸವಣ್ಣನವರಿಂದ ಪ್ರಭಾವಿತರಾಗಿ ಅತ್ಯಂತ ಉತ್ಸಾಹಿಗಳಾಗಿ ಶರಣರ ಚಳುವಳಿಯಲ್ಲಿ ಪಾಲ್ಗೊಂಡವರು ಕೇತಯ್ಯ ಶರಣರು. ಇವರು ಬಸವಣ್ಣನವರನ್ನು ಗುರುವಾಗಿ ಸ್ವೀಕರಿಸಿದವರು. ಬಸವಣ್ಣನವರ ಪ್ರಭಾವದಿಂದ ಗುರು-ಲಿಂಗ-ಜಂಗಮದಲ್ಲೇ ನಿಜಸುಖವನ್ನು ಕಂಡವರು. ಭಕ್ತರಾಗಿ, ಶರಣರಾಗಿ  ಕಾಯಕದಲ್ಲೇ ಕೈಲಾಸವನ್ನು ಕಂಡವರು. ಶರಣರ ತತ್ವಗಳಾದ ದಯೆ, ಕರುಣೆ, ಕಾಯಕ, ದಾಸೋಹ ತತ್ವಗಳನ್ನು  ಅನುಷ್ಠಾನದಲ್ಲಿ ತಂದವರು ಶರಣ ಮೇದಾರ ಕೇತಯ್ಯನವರು.

ಸತ್ಯಶುದ್ಧ ಕಾಯಕ ಜೀವಿಯಾಗಿ ಜಂಗಮ ಪ್ರೇಮಿಗಳಾಗಿ ವಚನಕಾರರಾಗಿ ಅನುಭವ ಮಂಟಪದ 770 ಅಮರಗಣಂಗಳಲ್ಲಿ ಇವರೂ ಒಬ್ಬರಾಗಿದ್ದರು. ಇವರ ಜೀವನವೇ ಒಂದು ಸತ್ಯಶುದ್ಧ ಕಾಯಕ ಸಂದೇಶವಾಗಿದೆ. ಇವರ ಜೀವನದ ಕುರಿತ ಜನ ಮಾನಸದಲ್ಲಿರುವ ಚರಿತ್ರೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುವೆ.

ಮೇದರ ಕೇತಯ್ಯ ಶರಣರು ಬೇಲೂರಿನಲ್ಲಿ ಬಿದಿರು ಕಾಯಕ ಮಾಡುತ್ತಾ, ಬಂದ ಹಣದಿಂದ ದಾಸೋಹ ಮಾಡಿಕೊಂಡು ಹೋಗುತ್ತಿದ್ದರು. ತದನಂತರ ಇವರು ಕಲ್ಯಾಣದ ಬಸವಣ್ಣನವರ ತತ್ವಗಳನ್ನು ಕೇಳಿ ತಾವೂ ಅಲ್ಲಿಗೆ ಹೋಗಬೇಕೆಂದು ಮನಸ್ಸು ಮಾಡಿ ಹೆಂಡತಿ ಜೊತೆ ಹೋಗಿ ಬಿದಿರು ಬುಟ್ಟಿ ಮಾಡುವ ಕಸುಬನ್ನು ಮಾಡಿಕೊಂಡು ಹೋಗುತ್ತಿದ್ದರು. ಕಾಯಕದಿಂದ ಬಂದದ್ದನ್ನು ದಾಸೋಹದಲ್ಲಿ ವಿನಿಯೋದಿಸಿ ಮಿಕ್ಕಿದನ್ನು ಪ್ರಸಾದವಾಗಿ ಸ್ವೀಕರಿಸುತಿದ್ದರು. ಹೀಗಿರುವಾಗ ಒಮ್ಮೆ ಶಿವನು ಇವರ ಮಹಿಮೆಯನ್ನು ಜಗತ್ತಿನಾದ್ಯಂತ ಪಸರಿಸಬೇಕೆಂದು ನಿರ್ಧರಿಸಿ ಶರಣ ಕೇತಯ್ಯನವರು ಬಿದಿರನ್ನು ಕತ್ತರಿಸಿದಾಗ ಅದರಿಂದ ಹೊನ್ನು ಸುರಿಸಿದನು, ಅದನ್ನು ನೋಡಿ ಅಚ್ಚರಿಯಾಯಿತು ಕೇತಯ್ಯನವರಿಗೆ. ಅದನ್ನು ಬಿಟ್ಟು ಮತ್ತೊಂದನ್ನು  ಕತ್ತರಿಸಿದರು, ಅದರಲ್ಲೂ ಕೂಡ ಹೊನ್ನು ಸುರಿಯಿತು, ಅದನ್ನು ಕಂಡು ಇದೇನು ಹುಳುಗಳು ಶಿವ ಶಿವಾ! ಎಂದು ಅದನ್ನು ಅಲ್ಲಿಯೇ ಎಸೆದು ಬಂದರು.

ಮತ್ತೆ ಬೇರೊಂದು ದೊಡ್ಡ ಬಿದಿರ ಗಿಡವನ್ನು ಏರಿ ಕಡಿದು ತಂದರು, ಅದರಿಂದಲೂ ಮುತ್ತುಗಳು ಸುರಿ ಸುರಿದು ಬೀಳತೊಡಗಿದವು. ನಂತರ ಮತ್ತೊಂದು ಬಿದರನ್ನು ರಭಸದಿಂದ ಕೀಳುವಾಗ ಬಿದಿರಿನ ಸಿಬಿರು ದೇಹಕ್ಕೆ ನಾಟಿ ತೀವ್ರ ರಕ್ತಸ್ರಾವದಿಂದ ಹೊರಳಾಡುತ್ತಿದ್ದರೂ, ಅವರಿಗೆ ತಮ್ಮ ಚಿಂತೆ ಇರಲಿಲ್ಲ. ದೇಹಕ್ಕಾದ ನೋವನ್ನು ಮರೆತು ದಾಸೋಹದ ಚಿಂತೆ ಮಾಡತೊಡಗಿದರು ಕೇತಯ್ಯ ಶರಣರು. ಆಗ ಸಮಯ ಓಡುತ್ತಿತ್ತು ವೇಳೆಯಾಗುತ್ತಿತ್ತು ಮುಳುಗುವ  ಸೂರ್ಯನನ್ನುದ್ದೇಶಿಸಿ ಎಲೈ ಸೂರ್ಯನೇ, ನಾನು ಹೇಳುವವರೆಗೆ ಮುಳುಗ ಬೇಡ. ಇದು ನನ್ನ ಸತ್ಯ ಶುದ್ಧ ಕಾಯಕದ ಮೇಲಾಣೆ” ಎಂದು ತಾಕಿತು ಮಾಡಿ ತಾವು ತಂದಿದ್ದ ಬಿದಿರನ್ನು ತೆಗೆದುಕೊಂಡು ತಮ್‌ ಧರ್ಮಪತ್ನಿ ಶರಣೆ ಸಾತವ್ವೆಯವರಿಗೆ “ಇದರಲ್ಲಿ ಮೊರ, ಬುಟ್ಟಿ ಮಾಡಿ ಮಾರಿ ಬಾ” ಎಂದರು. ಆಕೆ ಹಾಗೆಯೇ ಮಾಡಿ ಹಣ ತಂದಾಗ “ಅದರಿಂದ ಜಂಗಮ ದಾಸೋಹವನ್ನು ಮಾಡಿ ಮುಗಿಸು” ಎಂದರು ಕೇತಯ್ಯರು. ಆಕೆ ಆ ಕಾಯಕ ಮಾಡಿದರು. ಕೊನೆಗೆ ಶರಣ ಕೇತಯ್ಯನವರು “ನನ್ನ ಎದೆಯನ್ನು ಚುಚ್ಚಿರುವ ಬಿದಿರು ಸಿಬಿರನ್ನು ತೆಗೆ” ಎಂದಾಗ, ಆಕೆ ಅದನ್ನು ಕೀಳಿದಾಕ್ಷಣವೇ ಶರಣ ಕೇತಯ್ಯನವರು ಇಹಲೋಕವನ್ನು ತ್ಯಜಿಸಿದರು. ಆಗ ಸೂರ್ಯನೂ ಮುಳುಗಿದ, ಅಹೋರಾತ್ರಿ ಹೆಂಡತಿಯು ರೋದಿಸಿ ರೋದಿಸಿ ಸುಸ್ತಾಗಿದ್ದಳು, ಆಗ ಬೆಳಗಾಯಿತು. ಕಲ್ಯಾಣವೆಲ್ಲ ಸುತ್ತಾಡಿ ಹೂ ಮಾರುತ್ತಿದ್ದ ಹೂಗಾರ ಮಾದಣ್ಣನವರು ಬಂದು ನೋಡಿ ಈ ವಿಷಯವನ್ನು ಬಸವಣ್ಣನವರಿಗೆ ತಿಳಿಸಿದರು. ಬಸವಣ್ಣನವರು ಬಂದು ನೋಡಿ ಜಂಗಮ ಪ್ರೇಮಿಯಾದ ಬಸವಣ್ಣನವರು ತಮ್ಮ ಪ್ರಾಣವನ್ನೇ ಆ ಜಂಗಮನಲ್ಲಿ ಲೀನ ಮಾಡಿದರು.

ಅಷ್ಟರಲ್ಲಿ ಅಲ್ಲಿಗೆ ಮಡಿವಾಳ ಮಾಚಯ್ಯನವರು ಬರುತ್ತಾರೆ. ಆಗ ಮಡಿವಾಳ ಮಾಚಯ್ಯನವರು ಇಬ್ಬರನ್ನು ಹೊಗಳುತ್ತಾ ಘಂಟೆಯನ್ನು ಬಾರಿಸಲು ಕೇತಯ್ಯ-ಬಸವಣ್ಣ ಇಬ್ಬರೂ ಶಿವಯೋಗ ನಿದ್ರೆಯಿಂದ ಎಚ್ಚರಗೊಳುತ್ತಾರೆ. ಆಗ ಶರಣ ಕೇತಯ್ಯನವರು ಜಂಗಮಪ್ರೇಮಿ ಬಸವಣ್ಣನನ್ನು ಕೊಂಡಾಡುತ್ತಾರೆ.

ಎನ್ನ ಕಾಯದ ಕಳವಳವ ನಿಲಿಸಿ, ಗುರುಲಿಂಗವ ತೋರಿದ,
ಎನ್ನ ಮನದ ವ್ಯಾಕುಳವ ನಿಲಿಸಿ, ಜಂಗಮಲಿಂಗವ ತೋರಿದ,
ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ,
ಎನ್ನ ಪಾವನವ ಮಾಡಿದ,
ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ,
ಸದ್ಯೋನ್ಮುಕ್ತಿಯ ತೋರಲೆಂದು ಮತ್ರ್ಯಕ್ಕೆ ಮರಳಿ ತಂದ
ಸಂಗನಬಸವಣ್ಣನೆ ಗುರುವೆನಗೆ, ಸಂಗನಬಸವಣ್ಣನೆ ಪರವೆನಗೆ.
ಸಂಗನಬಸವಣ್ಣನ ಕರುಣದಿಂದ, ಘನಕ್ಕೆ ಘನಮಹಿಮ ಅಲ್ಲಮಪ್ರಭುವಿನ
ಶ್ರೀಪಾದವ ಕಂಡು ಬದುಕಿದೆನು ಕಾಣಾ, ಗವರೇಶ್ವರಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-525/ವಚನ ಸಂಖ್ಯೆ-1395)

ಎಂದು ತನ್ನ ತನು ಮನ ಧನ ಪ್ರಾಣವೂ ಬಸವಣ್ಣನವರೇ ಆಗಿದ್ದಾರೆಂದು ತಿಳಿದು ಗುರುಲಿಂಗ (ಅರಿವು ಆಚಾರದಿಂದ) ತಮ್ಮ ಕಾಯವನ್ನೇ ಕೈಲಾಸವಾಗಿಸಿಕೊಂಡು, ಮನಸ್ಸಿನ ಸ್ಥಿರತೆಯಲ್ಲಿ ಏಕೋದೇವ ನಿಷ್ಠರಾಗಿ ಲಿಂಗಾಚಾರ ಸಂಪನ್ನರಾಗಿ ಚೈತನ್ಯ ಭರಿತ ಜಂಗಮ ಲಿಂಗವಾದರು. ಇನ್ನು ಅಂತರಂಗ ಬಹಿರಂಗವನ್ನೂ ಮೀರಿ ಎಲ್ಲವೂ ರೋಮ ರೋಮವೆಲ್ಲವೂ ಬಸವಣ್ಣನವರೇ ಆಗಿ ಎನ್ನ ಪಾವನವ ಮಾಡಿದರು ಎನ್ನುತ್ತಾ, ಶಿವನೇ ಮುನಿದು ನನ್ನ ಕೈಲಾಸಕ್ಕೆ ಒಯ್ದಡೆ ಶರಣನಿಗೆ ಅಲ್ಲಿ ಸುಖವಿಲ್ಲ, ಕಾಯಕವೇ ಕೈಲಾಸವಾದ ಶರಣನಿಗೆ ಕಾಯಕದಿಂದಲೇ ಜೀವನ್ಮುಕ್ತಿಜಂಗಮ (ಜಗತ್) ಸೇವೆಯಲ್ಲೇ ಜೀವನ್ಮುಕ್ತಿಯೆಂದು  ತನ್ನ ಪ್ರಾಣಕ್ಕೆ ಪ್ರಾಣವನ್ನೇ ನೀಡಿ  ಮರಳಿ ನನ್ನ ಮರ್ತ್ಯಕ್ಕೆ ತಂದು, ಕಾಯಕ ದಾಸೋಹ ಸಮಾನತೆಗಳಿಂದ ಈ ಇಡೀ ಮರ್ತ್ಯವನ್ನೇ ಕೈಲಾಸ ಮಾಡಿದರು ಬಸವಣ್ಣನವರು. ಇಂತೀ ಸಂಗನ  ಬಸವಣ್ಣನೇ ಗುರುವಾಗಿ ಅನುಗ್ರಹಿಸಿದನಾಗಿ ನನಗೆ ದೇವರಿಗಿಂತ ಅಧಿಕವೂ ಬಸವಣ್ಣನೇ ಆಗಿರುವ. ಬಸವಣ್ಣನೇ ಘನಕ್ಕೆ ಘನಮಹಿಮ ಅಲ್ಲಮಪ್ರಭುದೇವರ ಅನುಪಮ ದಿವ್ಯ ಪಾದವನ್ನು ಕಂಡು ಪಾವನವಾದೆನೆಂದು ಹೇಳುತ್ತಾ ಕೈಲಾಸಕ್ಕಿಂತಲೂ ಕಾಯಕವೇ ಮೇಲೆಂದು, ಸಾರಿದವರು ಶರಣ ಮೇದಾರ ಕೇತಯ್ಯನವರು, ಕೈಲಾಸದಲ್ಲಿ ಶಿವನಿದ್ದಾನೆಂಬುದನ್ನು ವಿರೋಧಿಸಿ, ಮರ್ತ್ಯಲೋಕದ ಪ್ರತಿ ಜೀವಿಗಳಲ್ಲೂ ಶಿವನನ್ನೇ ಕಂಡು ಆ ಜೀವ ಚೈತನ್ಯವೆಂಬ ಜಂಗಮ ಲಿಂಗಕ್ಕೆ ದಾಸೋಹವ ಮಾಡಿ ಈ ಭೂಲೋಕವನ್ನೇ ಕಲ್ಯಾಣ ಕೈಲಾಸವಾಗಿಸಿದವರು “ಕಾಯಕನಿಷ್ಠ ಬಸವಾದಿ ಶರಣ ಮೇದಾರ ಕೇತಯ್ಯನವರು”.

ಶ್ರೀ. ಗುರುಪ್ರಸಾದ ಕುಚ್ಚಂಗಿ,
ಸಂಚಾಲಕರು.
ಶರಣ ಶಾಹಿತ್ಯ ಪರಿಷತ್ತು – ಬೆಂಗಳೂರು ಜಿಲ್ಲಾ ಘಟಕ,
ಬೆಂಗಳೂರು.
ಮೋಬೈಲ್.‌ ಸಂ. 98445 31248

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply