ಕಾಯಕ ನಿಷ್ಠೆಯಿಂದ ಅಂತರಂಗದ ಚೈತನ್ಯವನ್ನರಳಿಸಿದ ಶರಣ ಹೂಗಾರ ಮಾದಯ್ಯ ಮತ್ತು ಶರಣೆ ಮಾದೇವಿಯವರು | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ವಚನಾಂಕಿತ : ವಚನಗಳು ಲಭ್ಯವಾಗಿಲ್ಲ.
ಜನ್ಮಸ್ಥಳ    : ತಿಳಿದು ಬಂದಿಲ್ಲ.
ಕಾಯಕ    : ಹೂಗಾರ (ಶರಣರ ಮನೆಗಳಿಗೆ ಹೂ-ಪತ್ರೆಗಳನ್ನು ನೀಡುವುದು).
ಐಕ್ಯಸ್ಥಳ    : ಬಸವ ಕಲ್ಯಾಣ, ಬೀದರ ಜಿಲ್ಲೆ.

ಶರಣರ ನೆನೆದಾರ | ಸರಗೀಯ ಇಟ್ಟಾಂಗ ||
ಅರಳು ಮಲ್ಲಿಗೆ | ಮುಡಿದ್ಹಾಂಗ ||
ಕಲ್ಯಾಣ ಶರಣರ | ನೆನೆಯೋ ನನ ಮನವೇ ||

ನಮ್ಮ ಜನಪದರು ಎಷ್ಟು ಸೊಗಸಾಗಿ ಶರಣರನ್ನು ನೆನಪಿಸಿಕೊಂಡು ಹಾಡಿದ್ದಾರೆ. ಮುಗ್ಧ ಜನಪದರಿಗೆ ಶರಣರನ್ನು ಕುರಿತು ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಅನುಭಾವದ ಹಿನ್ನೆಲೆಯಲ್ಲಿ ಮುಗ್ಧ ಶರಣರ ಕುರಿತು ರಚಿಸಿದ ಹಾಡು ಯಾವುದೇ ವಿಚಾರದಲ್ಲಿ ಶಿವನ ಪ್ರಕಾಶದಂತೆ ಗೋಚರಿಸುತ್ತದೆ. ಶರಣರ ನೆನಪು ಸರಗಿಯನ್ನಿಟ್ಟಂತೆ, ಅರಳು ಮಲ್ಲಿಗೆ ಮುಡಿದಂತೆ, ಆ ನೆನಪು ಮೈಮನಗಳಿಗೆ ಬೆಳದಿಂಗಳಂತೆ ಉಲ್ಲಾಸ ತರುತ್ತದೆ. ಗೆಲುವು ಒಲವುಗಳಿಗೆ ಚೈತನ್ಯ ಎಂಬ ಪರಿಕಲ್ಪನೆಯೇ ತ್ಸಾಹದ ಕಾರಂಜಿ.

ಕಾಯಕವೇ ಶಿವ ಭಕ್ತಿ | ಕಾಯಕವೇ ಶಿವ ಭಜನೆ ||
ಕಾಯಕವೇ ಲಿಂಗಪೂಜೆ | ಶಿವಪೂಜೆ ಶಿವಯೋಗ ||
ಕಾಯಕವೇ ಆಯಿತ್ತು | ಕೈಲಾಸ ||

ಶರಣರಿಗೆ ಕಾಯಕವೇ ಕೈಲಾಸ. ಜಗತ್ತಿಗೆ ಲಿಂಗಾಯತ ಧರ್ಮ ಕೊಟ್ಟ ಪರಿಣಾಮಕಾರಿ ಮತ್ತು ಶ್ರೇಷ್ಠ ಸೂತ್ರ ಈ ಕಾಯಕ ತತ್ವ. ಸರಿ ಸುಮಾರು 100 ಕಾಯಕಗಳನ್ನು ಗುರುತಿಸಿದ್ದಾರೆ. ಸಮಾಜದಲ್ಲಿ ಇಂಥ ಅಭೂತಪೂರ್ವ ಕಾಯಕಗಳಲ್ಲಿ ಹೂವುಗಳನ್ನು ಮನೆ ಮನೆಗೆ ತಲುಪಿಸುವ ಕಾಯಕವೂ ಒಂದು. ಇಂಥ ಕಾಯಕ ತತ್ವದಲ್ಲಿ ನಿಷ್ಠೆಯುಳ್ಳ ಶರಣ ದಂಪತಿಗಳಲ್ಲಿ ಹೂಗಾರ ಮಾದಯ್ಯ ಮತ್ತು ಮಾದೇವಿ ದಂಪತಿಗಳು ಅಗ್ರಗಣ್ಯರು. ಕಲ್ಯಾಣದಲ್ಲಿ ಹೂವುಗಳನ್ನು ಹಾಗೂ ಪತ್ರಿಗಳನ್ನು ಸಂಗ್ರಹಿಸಿ ಶರಣರ ಮನೆಗಳಿಗೆ ಇಷ್ಟಲಿಂಗ ಪೂಜೆಗೆ ತಲುಪಿಸುವ ಕಾಯಕವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದರು.

ಹೂಗಾರ ಮಾದಣ್ಣ | ಬೇಗುದಯ ಹರಿಯುವುದಕೆ ||
ಹೋಗಿ ಹೂ-ಪತ್ರಿ | ಬನದೊಳಗೆ ಎತ್ತರಲು ||
ಜೋಗಿ ಜಂಗಮರ | ಶಿವಪೂಜೆ ||

ಬನದ ಹೂ ಪತ್ರಿಗಳ | ಮನದಿ ಜೋಳಿಗೆ ತುಂಬಿ ||
ಬನದೊಳಗೆ ಮಾದ | ಬರುತಿರಲು ||
ಶಿವಮೆಚ್ಚಿ ಕೆಣಕುದಕ್ಕೆ | ಬಂದ ಜಂಗಮನ ||

ಜಾನಪದರು ಹೇಳುವಂತೆ ಶರಣ ಹೂಗಾರ ಮಾದಯ್ಯನವರು ಹೂವು ಪತ್ರಿಗಳನ್ನು ತರಲು ತೋಟಕ್ಕೆ ಹೋದಾಗ ಅಲ್ಲಿರುವ ಹೂವುಗಳು ತನ್ನಷ್ಟಕ್ಕೆ ತಾವೇ ಅರಳುತ್ತಿದ್ದವು ಎಂದು ಮಾದಯ್ಯನವರ ಕಾಯಕ ನಿಷ್ಠೆಯನ್ನು ತೋರುತ್ತದೆ. ಈ ಕಾಯಕವನ್ನು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಮಾಡುತ್ತಿದ್ದರು ಎನ್ನುವುದನ್ನ ಈ ಜಾನಪದ ತ್ರಿಪದಿ ಕಟ್ಟಿಕೊಡುತ್ತದೆ.

ಹೂಗಾರ ಮಾದಣ್ಣ | ತೂಗಿದನು ಕಾಯಕವ ||
ಸಾಗಿ ಶಿವ ಬಂದು | ಗಣಪದವ ಕೇಳೆನಲು ||
ಬಾಗಿ ಕೈಲಾಸ | ಕೆಳಗಾಯಿತು ||

ಈ ಪತ್ರಿವನವನ್ನೂ ನಾವೂ ಈಗಲೂ ಬಸವ ಕಲ್ಯಾಣದಲ್ಲಿ ಕಾಣಬಹುದು.

ಶರಣ ಹೂಗಾರ ಮಾದಯ್ಯನವರ ಬಗ್ಗೆ ಬಹಳಷ್ಟು ಮಾಹಿತಿಗಳು ನಮಗೆ ದೊರೆಯುವುದಿಲ್ಲ. ಇವರ ಪತ್ನಿಯ ಹೆಸರು ಮಹಾದೇವಿ. ಜನಪದರ ಆಡುಭಾಷೆಯಲ್ಲಿ ಇದು ಮಾದೇವಿ ಆಗಿದೆ. ಈ ದಂಪತಿಗಳಿಗೆ ಲಿಂಗಣ್ಣ ಎಂಬ ಹೆಸರಿನ ಮಗನಿದ್ದನೆಂದು ತಿಳಿದು ಬರುತ್ತದೆ. 

ಕೃಷಿ ನಮ್ಮ ಭಾರತದ ಬೆನ್ನೆಲುಬು ಹಾಗೂ ಕೃಷಿಗೆ ಅತ್ಯಂತ ಶ್ರೇಷ್ಠ ಸ್ಥಾನವನ್ನು ನೀಡಿದ್ದೇವೆ. ಕಣವನ್ನು ಮಾಡುವಾಗ ಅದಕ್ಕೆ ಬೇಕಾಗುವ ಹೂವುಗಳನ್ನು ಶರಣ ಮಾದಯ್ಯನವರು ತಲುಪಿಸುತ್ತದ್ದರು. ಇದನ್ನು ಜಾನಪದ ಹಾಡು ನಿರೂಪಣೆ ಮಾಡುತ್ತದೆ,

ನನೆದಂಡೆ ಒಕ್ಕಲಿಗ | ಹೆಣೆದು ಹಂತಿಯ ಕಟ್ಟಿ ||
ತೆನೆರಾಶಿ ಹಾಡು | ಶಿವಶರಣ ಮಾದಯ್ಯ ||
ಕಣಕೆತ್ತಿ ತರುವ ಬನ್ನಿ ಎನ್ನಿರೆ ||

ಉತ್ತರ ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿ ಹೂಗಾರ ಮನೆತನದವರು ಸಿಗುತ್ತಾರೆ. ಹೂವಿನ ಮಾಲೆಯನ್ನು ಕಟ್ಟುವ ಕಾಯಕದಿಂದ ಇವರಿಗೆ ಹೂಗಾರರು ಎನ್ನುವ ಹೆಸರು ಬಂದಿದೆ. ಹೂವಿನ, ಮಾಲೆಗಾರ, ಸರವಂದಿಗ, ಪೂವಾಡಿಗ, ಫೂಲಮಾಲಿ, ಫುಲಾರಿ, ತಾಂಬೋಳಿ, ಪುಷ್ಪದತ್ತ, ಮಾಳಿ, ಮದ್ಲಿಕರ, ಸಮಾಳದ, ವೀಣೇಕಾರ, ಗವಾಯಿ ಎಂಬ ಹೆಸರುಗಳು ಚಾಲ್ತಿಯಲ್ಲಿದ್ದವು. ಗೌರವ ವಾಚಕಗಳಾದ ಜೀರ, ಗೊರವ, ಗುರವ, ಎನ್ನುವ ಹೆಸರುಗಳೂ ಬಳಕೆಯಲ್ಲಿವೆ.

ಕಲ್ಯಾಣದಲ್ಲಿ ಅನುಭವ ಮಂಟಪದ ಹತ್ತಿರ ಬಿಲ್ವಪತ್ರಿ ವನವನ್ನು ನಿರ್ಮಾಣ ಮಾಡಿದ್ದರು. ಜಾನಪದರು ಹೇಳುವಂತೆ “ಶಿವಪೂಜೆ ಮಾಡೂದಕ ಮೂಗಂಡ ಹೂಬೇಕ ಬೇಲಪತ್ರಿ ಬೇಕ ನಿತ್ಯದಲಿ” ಬೆಳಗಿನ ಜಾವದಲ್ಲಿ ಕಲ್ಯಾಣದಲ್ಲಿ ಶರಣರ ಮನೆ ಮನೆಗಳಿಗೆ ಸುತ್ತಾಡಿ ಹೂಪತ್ರೆಗಳನ್ನು ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದರು. ಪ್ರತಿ ದಿನ ಹೂಮಾಲೆಗಳನ್ನು ಕಟ್ಟುವಾಗ ವಚನಗಳನ್ನು ಓದುವ ಹವ್ಯಾಸವನ್ನಿಟ್ಟುಕೊಂಡಿದ್ದರು. ಕಾಯಾ, ವಾಚಾ, ಮನಸ್ಸಿನಿಂದ ಹೂ ಮಾಲೆಯನ್ನು ಕಟ್ಟಿ, ಬಿಲ್ವ ಪತ್ರೆಗಳ ಜೊತೆಗೆ ಶರಣರ ಮನೆಗೆ ತಲುಪಿಸುವ ಕಾಯಕವನ್ನು ಮಾಡುತ್ತಿದ್ದುದು ಇವರ ಶ್ರೇಷ್ಠತೆಗೆ ಮತ್ತು ಮಾಡುವ ಕಸುಬಿನ ಬಗ್ಗೆ ಆತ್ಮ ವಿಶ್ವಾಸ ತುಂಬಿಕೊಂಡಂಥವರು.

ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೂಗಾರ (ಮಾಲೇಗಾರ) ರ ಆರಾಧ್ಯ ದೈವ ಮತ್ತು ಇಷ್ಟದೇವನಾದ ಬಾವಿಯ ಬೊಮ್ಮನನ್ನು ಉಲ್ಲೇಖ ಮಾಡಿದ್ದಾರೆ.

ಬಡಹಾರುವನೇಸು ಭಕ್ತನಾದಡೆಯೂ
ನೇಣಿನ ಹಂಗ ಬಿಡ!
ಮಾಲೆಗಾರನೇಸು ಭಕ್ತನಾದಡೆಯೂ
ಬಾವಿಯ ಬೊಮ್ಮನ ಹಂಗು ಬಿಡ!
ಬಣಜಿಗನೇಸು ಭಕ್ತನಾದಡೆಯೂ
ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ
ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ,
ನಿಮ್ಮ ಶರಣರ ಹಂಗಿನವನಯ್ಯಾ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-118/ವಚನ ಸಂಖ್ಯೆ-451)

ಜನನದಿಂದ ಮರಣದವರೆಗೂ ಹೂಗಾರರು ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಮದುವೆಗೆ ದಂಡೆ, ಬಾಸಿಂಗಗಳನ್ನೂ ಮಾಡುತ್ತಾರೆ. ರೈತರಿಗೂ ಹೂಗಾರರಿಗೂ ಅವಿನಾಭಾವ ಸಂಬಂಧ. ಬಿತ್ತುವ ಸಮಯದಲ್ಲಿ ಕೂರಿಗೆಗೆ ಮತ್ತು ಎತ್ತುಗಳಿಗೆ ಅಲಂಕಾರ ಮಾಡುವ ಹೂಗಾರರು ಸುಗ್ಗಿಯ ವೇಳೆಯಲ್ಲಿ ಕಣಕ್ಕೆ ಹೂವಿನಿಂದ ಅಲಂಕಾರ ಮಾಡುತ್ತಾರೆ. ಹೂಗಾರರು ತಮ್ಮ ವೃತಿಯಾದ ಹೂವು ಕಟ್ಟುವುದರ ಜೊತೆಗೆ ಸಾಂಸ್ಕೃತಿಕವಾಗಿ ಹಲವಾರಿ ಕಾರ್ಯಕ್ರಮಗಳಲ್ಲಿ ವಿವಿಧ ರೀತಯ ಕಾಯಕವನ್ನು ಮಾಡುತ್ತದ್ದರು.

  1. ಪೂಜೆ ಮಾಡುವ ಕಾಯಕ: ವಿವಿಧ ದೇವಸ್ಥಾನಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಹನುಮಂತದೇವರ ಪೂಜೆಯನ್ನು ಮಾಡುತ್ತಾರೆ.
  2. ಕಣಕ್ಕೆ ಹೋಗಿ ಹೂಗಳಿಂದ ಅಲಂಕಾರ ಮಾಡುವುದು: ರಾಶಿ ಮಾಡಿ ಕಣವನ್ನು ಸಿಂಗರಿಸಲು ಹೂಗಾರರೇ ಹೋಗುತ್ತಿದ್ದುದು ಸರ್ವೇ ಸಾಮಾನ್ಯ ಕಾಯಕವಾಗಿತ್ತು.
  3. ಬಾಸಿಂಗ ಕಟ್ಟುವುದು: ಮದುವೆ-ಮುಂಜಿವೆಗಳಲ್ಲಿ ವಧು-ವರರಿಗೆ ಬಾಸಿಂಗ ತಾಯರು ಮಾಡಿಕೊಡುವುದು ವಿಶೇಷ ಕಾಯಕ.
  4. ಎಲೆ ಪೂಜೆ ಕಟ್ಟುವುದು: ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಹನುಮಂತನ ಮೂರ್ತಿಗೆ ಈ ಎಲೆ ಕಟ್ಟುವ ಪದ್ಧತಿಯನ್ನು ಹೂಗಾರರೇ ಮಾಡುತ್ತಾರೆ.
  5. ಸಂಬಾಳ ಬಾರಿಸುವುದು: ಇದು ಹೂಗಾರರಿಗೆ ಒಲಿದು ಬಂದ ಕಲೆ. ಸಂಬಾಳವನ್ನು ಮದುವೆ, ಜಾತ್ರೆ, ಉತ್ಸವ ಮುಂತಾದ ಕಾರ್ಯಕ್ರಮದಲ್ಲಿ ಬಾರಿಸಲಾಗುತ್ತದೆ. ಇದು ಹೂಗಾರರ ಮತ್ತೊಂದು ಕಾಯಕ.
  6. ಡಂಗೂರ ಸಾರುವುದು: ಹಿಂದಿನ ಕಾಲದಿಂದಲೂ ಊರಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಡಂಗೂರದ ಮೂಲಕ ಸಾರುತ್ತಾ ಎಲ್ಲರಿಗೂ ವಿಷಯವನ್ನು ಮುಟ್ಟಿಸುವ ಕಾಯಕವು ಹೂಗಾರ ಪ್ರಮುಖ ಕಾಯಕದಲ್ಲೊಂದಾಗಿತ್ತು.  

ಶರಣ ಹೂಗಾರ ಮಾದಯ್ಯನವರು ಶರಣ ಸಕಳೇಶ ಮಾದರಸರನ್ನು ತಮ್ಮ ಗುರುಗಳೆಂದು ಭಾವಿಸಿ ಗೌರವಿಸುತ್ತಿದ್ದರು. ಶರಣ ಸಕಳೇಶ ಮಾದಯ್ಯನವರು ಶರಣ ಮಾದಯ್ಯನವರನ್ನು ಮಂಟಪಕ್ಕೆ ಮೂಗುತಿ ಎಂದು ಕರೆದದ್ದನ್ನು ಜಾನಪದ ತ್ರಿಪದಿಯೊಂದು ಸಾರುತ್ತದೆ.

ಸಕಳೇಶ ಮಾದರಸು | ಭಕುತ ಮಾದಯ್ಯನಿಗೆ ||
ನಿಕಟ ಗುರು ಲಿಂಗ ಜಂಗಮ | ಕಾಯಕದ ||
ನಿಕಟ ಮಂಟಪಕ್ಕೆ | ಮೂಗುತಿಯ ||

ಮುಗ್ಧ ಶರಣರ | ಹಾಡು ಸಿದ್ಧಿ ಮಂತ್ರವು ||
ನೋಡು ಸಿದ್ಧಾಗು | ಹಾಡು ಹಾಡುದಕೆ ||
ಎಲೆ ಜೀವ ಶುದ್ಧಾಗಿ | ಹೊಂದು ಶಿವ ಸದವ ||

ಹೂಗಾರ ಮಾದಯ್ಯನವರ ಧರ್ಮಪತ್ನಿ ಮಾದೇವಿಯವರೂ ಕೂಡ ಶರಣೆಯಾಗಿದ್ದರು. ಕಾಯಕದಲ್ಲಿ ನಿರತರಾಗಿರುತ್ತಿದ್ದರೆನ್ನುವುದನ್ನು ಜಾನಪದ ಹಾಡುಗಳ ಮೂಲಕ ಕಾಣುತ್ತೇವೆ.

ಶರಣ ಹೂಗಾರ ಮಾದಯ್ಯನವರು ಲಿಂಗೈಕ್ಯರಾದಾಗ ಮಡದಿ ದೇವಿಯವರು ಬಹಳಷ್ಟು ಶೋಕತಪ್ಪರಾಗುತ್ತಾರೆ.

ಕಡೆಗಾಲ ಮಾದನಿಗೆ | ಜಡವಾಗಿ ಬಂತೊಮ್ಮೆ ||
ನಡುರಾತ್ರಿ ಮೀರಿ | ಸದ್ದಿರಲು ||
ಮಾದೇವಿ ಕಡುದುಃಖ | ಮರೆತ ಶಿವನೆಂದು ||

ಶರಣೆ ಮಾದೇವಿ ಶೋಕತಪ್ಯರಾದರೂ ಕೂಡ ಅಂತ್ಯಕ್ರಿಯೆಗಳಂಥ ಜವಾಬ್ದಾರಿಗಳನ್ನೂ ಕೂಡ ತಾವೇ ಹೊರುತ್ತಾರೆ.

ನೆರೆಮನೆಯ ನೆರಬೇಡ | ಕಿರಿಯಸ್ತ ಶರಣನಿಗೆ ||
ಕಿರಿಯ ಸಮಾಧಿಯ | ನಾನಗಿವೆ ||
ಗಂಡನಿಗೆ ಹರುಷದಲಿ | ಮಡದಿ ಮಾದೇವಿ ||

ಶರಣ ಹೂಗಾರ ಮಾದಯ್ಯ ಮತ್ತು ಶರಣೆ ಮಾದೇವಿಯವರು ಕಲ್ಯಾಣದಲ್ಲಿ ಲಿಂಗೈಕ್ಯರಾಗುತ್ತಾರೆ.

ಶರಣರು ಲಿಂಗಾಯತರ ಜೀವೋನ್ಮುಖ ತತ್ವಗಳಾದ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಗುರುಲಿಂಗಜಂಗಮ ಸೇವೆಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ನುಡಿದಂತೆ ನಡೆದವರು. ಇಂಥ ಮಾನವೀಯ ಮೌಲ್ಯಗಳನ್ನು ಅವರು ಕೋಣೆಗಳ ನಡುವೆ ಕುಳಿತುಕೊಂಡು ಕಲಿತದ್ದಲ್ಲ. ಬೆಳ್ಳಿ ಬಂಗಾರದ ಕೀರೀಟವನ್ನಿಟ್ಟುಕೊಂಡು ಅಡ್ಡ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೋಗಿ ಜಪಿಸಿದ ಮಂತ್ರದಿಂದಲ್ಲ. ಕಾಯಕ ಯೋಗಿಗಳಾಗಿ ದಾಸೋಹಿಗಳಾಗಿ ಗಳಿಸಿದ ಅನುಭಾವ. ಇಂಥ ಕಾಯವನ್ನೇ ಉಸಿರಾಗಿಸಿಕೊಂಡು ಜೀವಿಸಿದ ಹೂಗಾರ ಮಾದಯ್ಯ ಮತ್ತು ಮಾದೇವಿಯವರು ನಮಗೆಲ್ಲರಿಗೂ ಆದರ್ಶವಾಗಬೇಕು.

ಬಸವ ಕಲ್ಯಾಣದಲ್ಲಿಯೇ ಈ ಶರಣ ದಂಪತಿಗಳು ಐಕ್ಯರಾಗಿದ್ದಾರೆ. ಅನಂತ ಹುಣ್ಣಿಮೆಯಂದು ಇವರ ಜಯಂತಿಯನ್ನು ಆಚರಿಸಲಾಗುತ್ತದೆ.

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಸ್ಕೂಲ್‌ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್‌ ನಂ: 97413 57132
ಈ-ಮೇಲ್‌: vijikammar@gmail.com

Loading

Leave a Reply