ಕಾಯಕ ನಿಷ್ಠೆಯ ಅನುಪಮ ಶರಣ ಮೇದಾರ ಕೇತಯ್ಯನವರು | ಡಾ. ದಯಾನಂದ ನೂಲಿ, ಚಿಕ್ಕೋಡಿ.

ಕಾಯಕನಿಷ್ಠೆಯ ಶರಣ ಮೇದಾರ ಕೇತಯ್ಯನವರ ಸ್ಮರಣೋತ್ಸವ ನಿಮಿತ್ತ ಲೇಖನ.

ಮೇದಾರ ಕೇತಯ್ಯನವರು ಮಲೆನಾಡಿನ ಬೇಲೂರು ಎಂಬ ಊರಿನವರು. ಅವರ ಧರ್ಮಪತ್ನಿ ಸಾತವ್ವೆ. ಅವರು ಬಿದರಿನ ಕಾಯಕವನ್ನು ಕೈಗೊಂಡಿದ್ದರು. ಪ್ರತಿನಿತ್ಯವೂ ಬೆಟ್ಟಕ್ಕೆ ಹೋಗಿ ಬಿದಿರುಗಳನ್ನು ಕಡಿದುಕೊಂಡು ಬಂದು ಅವುಗಳಿಂದ ಬುಟ್ಟಿ, ಮೊರ ಮೊದಲಾದವನ್ನು ಹೆಣೆದು ಅವುಗಳನ್ನು ಮಾರಿ ಬಂದ ಹಣದಿಂದ ಜೀವನ ಸಾಗಿಸುವುದರ ಜೊತೆಗೆ ಜಂಗಮ ದಾಸೋಹ ಸೇವೆಯನ್ನು ಮಾಡುತ್ತಿದ್ದರು. ಶಿವಾನುಭವ ಮಂಟಪದಲ್ಲಿ ನಡೆಯುತ್ತಿದ್ದ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು.

ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಬಸವಣ್ಣ.
ಎನ್ನ ಬುದ್ಧಿಗೆ ಗುರುಲಿಂಗವಾದಾತ, ಬಸವಣ್ಣ.
ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ, ಬಸವಣ್ಣ.
ಎನ್ನ ಮನಕ್ಕೆ ಜಂಗಮಲಿಂಗವಾದಾತ, ಬಸವಣ್ಣ.
ಎನ್ನ ಜೀವಕ್ಕೆ ಪ್ರಸಾದಲಿಂಗವಾದಾತ, ಬಸವಣ್ಣ.
ಎನ್ನ ಅರುವಿಂಗೆ ಮಹಾಲಿಂಗವಾದಾತ, ಬಸವಣ್ಣ.
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ, ಬಸವಣ್ಣ.
ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ, ಬಸವಣ್ಣ.
ಎನ್ನ ಕಾರಣತನುವಿಂಗೆ ತೃಪ್ತಿಲಿಂಗವಾದಾತ, ಬಸವಣ್ಣ.
ಇಂತೆಂದರಿದೆನಾಗಿ, ಗವರೇಶ್ವರಲಿಂಗದಲ್ಲಿ
ಆನು ಸುಖಿಯಾಗಿರ್ದೆನಯ್ಯಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-526/ವಚನ ಸಂಖ್ಯೆ-1397)

ಎಂದು ಬಸವಣ್ಣನವರನ್ನು ತಮ್ಮ ಹೃದಯಮಂದಿರದಲ್ಲಿ ನೆಲೆಗೊಳಿಸಿದ್ದರು ಕೇತಯ್ಯನವರು! ಅವರ ಸತಿ ಸಾತವ್ವ, ಪತಿಗೆ ತಕ್ಕ ಸತಿ. ಪತಿಗೆ ಕಾಯಕ ಮಾಡಿ ಬೇಸರವಿಲ್ಲ, ಸತಿಗೆ ದಾಸೋಹ ಮಾಡಿ ಬೇಸರವಿಲ್ಲ. ಸಾವಿರಾರು ಜಂಗಮರು ಈ ದಾಸೋಹ ಕೈಂಕರ್ಯದಲ್ಲಿ ಮಿಂದು ತೃಪ್ತಿ ಪಡೆಯುತ್ತಿದ್ದರು. ಇವರ ಕೀರ್ತಿ ನಾಡೆಲ್ಲ ಹಬ್ಬಲು ಬಹಳ ಸಮಯ ಹಿಡಿಯಲಿಲ್ಲ.

ಒಮ್ಮೆ ಶಿವಲೀಲೆಯನ್ನಾಡಲು ಶಿವನು ಬಸವೇಶ್ವರವರ ವೇಷದಲ್ಲಿ ಮೇದಾರ ಕೇತಯ್ಯನವರು ಅಡವಿಗೆ ಬಿದಿರು ತರಲು ಹೋದಾಗ, ಅವರ ಮನೆಗೆ ಹೋದನು. ಅಣ್ಣನವರನ್ನು ಕಂಡ ಸಾತವ್ವ ಆನಂದಭರಿತಳಾಗಿ, ಅವರ ಅತಿಥಿಸತ್ಕಾರವನ್ನು ಮಾಡಿದಳು. ಎಲ್ಲವನ್ನೂ ಸ್ವೀಕರಿಸಿ ಬಸವವೇಷಧಾರಿ ಶಿವನು ಅಮ್ಮಾ ತಾವು ಕಡು ಬಡವರು, ಈ ಹೊನ್ನಿನ ವರಹದ ಚೀಲವನ್ನು ತೆಗೆದುಕೊಳ್ಳಬೇಕು, ಇದನ್ನೇ ನಿಮ್ಮ ನಿರಂತರ ದಾಸೋಹಕ್ಕೆ ಉಪಯೋಗಿಸಿಕೊಳ್ಳಿ. ಅದಕ್ಕೆ ಸಾತವ್ವೆ ಒಪ್ಪಲಿಲ್ಲ. ಪರಿಪರಿಯಾಗಿ ಬೇಡ ಎಂದು ಬೇಡಿಕೊಂಡರೂ, ಆ ಚೀಲವನ್ನು ಅಲ್ಲಿಯೇ ಬಿಟ್ಟು ಸರಸರನೇ ಹೊರಗೆ ಶಿವಬಸವನು ಹೋಗಿ ಬಿಟ್ಟನು. ಸಾಯಂಕಾಲ ಕೇತಯ್ಯನವರು ಮನೆಗೆ ಬಂದಾಗ ವಿಷಯವನ್ನು ತಿಳಿದು ಕೃದ್ಧರಾದರು. ತಕ್ಷಣ ಹಿತ್ತಲಲ್ಲಿರುವ ತಿಪ್ಪೆಯಲ್ಲಿ ಆ ಚಿನ್ನದ ವರಹಗಳ ಚೀಲವನ್ನು ಹೂತು ಹಾಕಿ, ಮೇಲೆ ಗೋಮಯದಿಂದ ಸಾರಿಸಿದರು. ಕಾಯಕದಿಂದಲ್ಲದೆ ಬಂದ ವರಮಾನವನ್ನು ಮುಟ್ಟಿದ್ದರಿಂದ, ಮೈಮನಸ್ಸು ಮೈಲಿಗೆಯಾಯಿತು ಎಂದು ದಂಪತಿಗಳಿಬ್ಬರೂ ಸ್ನಾನ ಮಾಡಿದರು.

ದಿನಗುಳರುಳಿದವು. ಒಂದು ದಿನ ಕೇತಯ್ಯನವರು ಕಾಡಿನಲ್ಲಿ ಬಿದಿರನ್ನು ಕಡಿಯುತ್ತಿರುವಾಗ ಅದರೊಳಗಿಂದ ಮುತ್ತು ರತ್ನಗಳು ಬಳಬಳನೆ ಸುರಿಯಲಾರಂಭಿಸಿದವು. ಸದಾ ಕಾಯಕ ಜೀವಿಯಾದ ಕೇತಯ್ಯನವರು ಅವುಗಳತ್ತ ಕಣ್ಣೆತ್ತಿ ಸಹ ನೋಡದೆ, ಈ ಬಿದಿರಿಗೆ ಹುಳ ಹತ್ತಿದೆ ಎಂದು ಬೇರೊಂದು ಬಿದಿರನ್ನು ಕೆತ್ತಲು ಹೋದರು. ಅಲ್ಲಿಯೂ ಹೀಗೆಯೇ ಅಮೂಲ್ಯ ಮಣಿಗಳ ರಾಶಿ ಬೀಳಲಾರಂಭಿಸಿದಾಗ, ಕೇತಯ್ಯನವರು ಆ ಪ್ರದೇಶವನ್ನೇ ಬಿಟ್ಟು ಬೇರೊಂದು ಪ್ರದೇಶದಲ್ಲಿ ಬಹಳ ವಿಶಾಲವಾಗಿ, ಎತ್ತರವಾಗಿ ಬೆಳೆದ ಬಿದಿರು ಗಿಡಗಳತ್ತ ಬಂದರು. ಅಲ್ಲಿದ್ದ ಎತ್ತರವಾದ ಬಿದಿರಿನ ಗಿಡದ ಮೇಲೆ ಹತ್ತಿ ಅದನ್ನು ಕಡಿಯತೊಡಗಿದರು. ಆಗ ಮತ್ತೇ ಶಿವಲೀಲೆಯ ಕಾರಣದಿಂದ ವೇಗವಾಗಿ ಬಿರುಗಾಳಿ ಬೀಸಿ, ಬಿದಿರಿನ ಮೇಳ ಅಲುಗಾಡಿ ಕಾಲು ಜಾರಿ ಕೇತಯ್ಯನವರು ಕೆಳಗೆ ಬಿದ್ದರು. ದುರದೃಷ್ಟವಶಾತ್ ಆಗ ಅಲ್ಲಿಯೇ ಇದ್ದ ಬಿದರಿನ ತುದಿಯೊಂದು ಅವರ ಎದೆಯಲ್ಲಿ ಚುಚ್ಚುಕೊಂಡಿತು. ಸಾಯಂಕಾಲದಲ್ಲಿ ಪಡುವಣದಲ್ಲಿ ಮುಳುಗುತ್ತಿರುವ ಸೂರ್ಯ ಆ ಶರಣರ ವೇದನೆ, ರಕ್ತಧಾರೆ ನೋಡುತ್ತ ಅಸ್ತಂಗತವಾಗುವುದನ್ನೇ ಮರೆತ! ಆಗ ಆ ಅಪಾರ ರಕ್ತಸ್ರಾವ, ನೋವಿನಲ್ಲಿಯೂ ಕೇತಯ್ಯನವರು, “ಪರಶಿವನೆ, ನನ್ನ ಇವತ್ತಿನ ಜಂಗಮ ದಾಸೋಹ ಮುಗಿಯುವವರೆಗೆ ನನ್ನ ಪ್ರಾಣಹರಣವಾದರೆ ನಿನಗೆ ನನ್ನ ಮೇಲಾಣೆ!, ಸೂರ್ಯದೇವನೆ ನೀನು ಇದಕ್ಕೆ ಸಾಕ್ಷಿಯಾಗಿರು, ದಾಸೋಹದ ನಂತರವೆ ನನ್ನ ಪ್ರಾಣ ಮತ್ತು ನೀನು ಇಬ್ಬರೂ ಅಸ್ತರಾಗಿರಿ ಎಂದು ಪಣತೊಟ್ಟು, ಕಾಯಕ ಮುಗಿಸಿ ಮನೆಗೆ ಬಂದರು.

ದಾಸೋಹದ ನಂತರ ಹಿರಿಯ ಜಂಗಮಮೂರ್ತಿಗೆ ತಮ್ಮ ಅಂತಿಮ ಪೂಜಾ ವಿಧಾನಗಳಿಗೆ ಸಿದ್ಧರಾಗಿರೆಂದು ಹೇಳಿ, ಸಾತವ್ವೆಯವರಿಗೆ ತನ್ನ ಎದೆಯಲ್ಲಿ ನೆಟ್ಟಿದ್ದ ಬಿದಿರಿನ ಸಿಬಿರನ್ನು ಕೀಳಲು ಆಜ್ಞಾಪಿಸಿದರು. ಅದರಂತೆ ಆ ಧೀರ ಸಾಧ್ವಿ ಬಿದಿರನ್ನು ಕೀಳಲಾಗಿ, ಕೇತಯ್ಯನವರ ಪ್ರಾಣಪಕ್ಷಿ ಹಾರಿಹೋಗಿತ್ತು. ಅತ್ತ ಪಶ್ಚಿಮ ದಿಗಂತದಲ್ಲಿ ರವಿಯೂ ಮುಳುಗಿದನು! ಮಹಾಶರಣೆ ಸಾತವ್ವೆಗೆ ತನ್ನ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ರಾತ್ರಿಯೆಲ್ಲ ಪತಿಯ ದೇಹದ ಮೇಲೆ ಬಿದ್ದು ರೋದಿಸುತ್ತಾಳೆ.

ಬೆಳಗಾಗುತ್ತಲೇ ಶಿವಶರಣರ ಮನೆಗಳಿಗೆ ಹೂಪತ್ರೆಗಳನ್ನು ಹಾಕುವ ಕಾಯಕವನ್ನು ಕೈಗೊಂಡಿದ್ದ ಹೂಗಾರ ಮಾದಣ್ಣನವರು ಕೇತಯ್ಯನವರ ಮನೆಗೆ ಬಂದಾಗ ಅಲ್ಲಿಯ ದೃಶ್ಯ ಕಂಡು ದಿಗ್ಭ್ರಾಂತರಾಗಿ ಓಡುತ್ತ ಹೋಗಿ ಪಡಿಹಾರಿ ಉತ್ತಣ್ಣವರಿಗೆ ಸುದ್ದಿಯನ್ನು ತಿಳಿಸಿದರು. ಇಬ್ಬರೂ ಜೊತೆಯಾಗಿ ವಿಷಯವನ್ನು ಮೊದಲು ಮಡಿವಾಳ ಮಾಚಿದೇವರಿಗೆ ಬಿನ್ನವಿಸಲು ಓಡೋಡಿ ಬಂದರು. ಆಶ್ಚರ್ಯವೆಂಬತೆ ಎಲ್ಲವನ್ನು ಕೇಳಿ ನಿಟ್ಟುಸಿರು ಬಿಟ್ಟು ಮಾಚಿದೇವರು, “ಬಸವಣ್ಣನವರೆಲ್ಲಿ?” ಎಂದು ಕೇಳಿದಾಗ, ಹೂಗಾರ ಮಾದಣ್ಣನವರು ಅವರನ್ನು ಬೆಳಿಗ್ಗೆ ಭೆಟ್ಟಿಯಾಗಿಯೇ ನಾನು ಕೇತಯ್ಯನವರ ಮನೆಗೆ ಹೋಗಿದ್ದೆ ಎಂದರು. ಆಗ ವೀರ ಮಡಿವಾಳ ಮಾಚಿದೇವರು,

ನನಗೆ ನಂಬಲಾಗುತ್ತಿಲ್ಲ. ಜಂಗಮಪ್ರಾಣಿಯೆನಿಸಿಕೊಡ ಬಸವಣ್ಣನವರ ಪ್ರಾಣವು, ಜಂಗಮಪುಗವರಾದ ಕೇತಯ್ಯನವರ ಪ್ರಾಣ ಹೋದರೂ ಅವರು ಇನ್ನೂ ಇರುವುದು ಆಶ್ಚರ್ಯಕರ, ಅಂತಹ ಸ್ಥಳಕ್ಕೆ ನಾನು ಬರಲಾರೆ

ಎಂದು ಹೇಳಿದಾಗ ಪಡಿಹಾರಿ ಉತ್ತಣ್ಣ ಮತ್ತು ಹೂಗಾರ ಮಾದಣ್ಣನವರು ಅಲ್ಲಿಂದ ನಿರ್ಗಮಿಸಿದರು. ನೇರವಾಗಿ ಮಹಾಮನೆಗೆ ಬಂದು ಸವಿಸ್ತಾರವಾಗಿ ಘಟನೆಯನ್ನು ಹೇಳಿ ಮಾಚಿದೇವರು ನುಡಿದ ಉಕ್ತಿಗಳನ್ನು ಬಸವಣ್ಣನವರಿಗೆ ಹೇಳಿದರು. ಬಸವಣ್ಣನವರಿಗೆ ನಿಂತ ನೆಲ ಕುಸಿದಂತಾಯಿತು.

ಉತ್ತಣ್ಣಾ, ಮಾಚಿದೇವ ತಂದೆ ನನ್ನನ್ನು ಎಚ್ಚರಿಸಿದ್ದಾನೆ! ನನ್ನ ಆರಾಧ್ಯ ದೈವ ಸಂಗಮನಾಥ ತನ್ನ ಬದುಕನ್ನು ತೊರೆದು, ನನಗೆ ಸಂದೇಶ ಕಳುಹಿಸಿ ಕೇತಯ್ಯನವರೊಂದಿಗೆ ನನ್ನನ್ನು ಬಿಟ್ಟು ಹೋಗಿ ಬಿಟ್ಟನು

ಎಂದು ಹೇಳು ಹೇಳುತ್ತಲೆ, ನೆಲಕ್ಕೊರೊಗಿ ಪ್ರಾಣ ತ್ಯಜಿಸಿದರು.

ಆಗ ಮಹಾಮನೆಯ ಮುಂದೆ ಕೋಲಾಹಲ ಉಂಟಾಗಿ ಜನಸಾಗರ ಸೇರಿತು. ಯಾರಿಗೂ ದಿಕ್ಕು ಕಾಣದಂತಾಯಿತು. ಎಲ್ಲರೂ ಮರುಳಶಂಕರದೇವರನ್ನು ಏನಾದರೂ ದಾರಿ ತೋರಿಸಿ ಎಂದು ಬೇಡಿಕೊಂಡರು. ಆಗ ಮರುಳಶಂಕರದೇವರು ಸಹ ಸಾವರಿಸಿಕೊಂಡು, ಎಲ್ಲರನ್ನು ಸಂತೈಸುತ್ತ, “ಬನ್ನಿ ಪ್ರಾರ್ಥನೆಯೊಂದನ್ನು ಬಿಟ್ಟರೆ, ಈಗ ಬೇರೆ ಮಾರ್ಗವಿಲ್ಲ, ಎಲ್ಲರೂ ನನ್ನೊಂದಿಗೆ ಸೇರಿರಿ ಎಂದು ಪ್ರಾರ್ಥಿಸಿದೆ.

ಬಸವಣ್ಣ ಚನಬಸವಣ್ಮ ಪ್ರಭುದೇವ ಮಡಿವಾಳ ಮಾಚಯ್ಯಾ
ಸಿದ್ಧರಾಮಯ್ಯ ಸೊಡ್ಡಳ ಬಾಚರಸರು ಹಡಪದಪ್ಪಣ್ಣ
ಪಡಿಹಾರಿ ಉತ್ತಣ್ಣ ಅವ್ವೆ ನಾಗಾಯಿ ಕೋಲಶಾಂತಯ್ಯ
ಡೋಹರ ಕಕ್ಕಯ್ಯ ಮೊಗವಾಡದ ಕೇಶಿರಾಜದೇವರು
ಖಂಡೆಯ ಬೊಮ್ಮಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳ
ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-419/ವಚನ ಸಂಖ್ಯೆ-1104)

ಎಂದು ಹೇಳಿ, ಪಡಿಹಾರಿ ಉತ್ತಣ್ಣವರಿಗೆ, “ಹೋಗಿ ಇದಕ್ಕೆ ಪರಿಹಾರ ಕೊಡುವ ಶಕ್ತಿ ಇರುವುದು ವೀರ ಗಣಾಚಾರಿ ಮಡಿವಾಳ ಮಾಚಯ್ಯನವರಿಗೆ ಮಾತ್ರ! ತ್ವರೆ ಮಾಡಿ, ಬೇಗನೆ ಹೋಗಿ ಅವರನ್ನು ಕರೆತನ್ನಿರಿ ಎಂದು ಆಗ್ರಹಿಸಿದರು. ಹೂಗಾರ ಮಾದಣ್ಣನವರಿಗೆ, “ನೀವು ಹೋಗಿ ಕೇತಯ್ಯನವರ ದೇಹವನ್ನು ಬೇಗನೆ ಇಲ್ಲಿಗೆ ತೆಗೆದುಕೊಂಡು ಬನ್ನಿರಿ ಎಂದು ಕಳಿಸಿದರು. ಚೆನ್ನಬಸವಣ್ಣನವರು, ಹಡಪದ ಅಪ್ಪಣ್ಣನವರು ಸ್ಥಳಕ್ಕೆ ಬಂದರು. ಚೆನ್ನಬಸವಣ್ಣನವರು ಇಬ್ಬರ ದೇಹವನ್ನು ನೋಡಿ ಮೂರ್ಛೆ ಹೋಗಿ ಕುಸಿದು ಕೆಳಗೆ ಬಿದ್ದರು.

ಆಗ ಮಾಚಯ್ಯನವರು, ತಮ್ಮ ವೀರ ಘಂಟೆಯನ್ನು ಬಾರಿಸುತ್ತ ಸ್ಥಳಕ್ಕಾಗಾಮಿಸಿದರು. ಅವರು ಪದ್ಮಾಸನದಲ್ಲಿ ಕುಳಿತು ಧ್ಯಾನಸ್ಥರಾಗಿ ನುಡಿದರು,

ಲಿಂಗದ ನಿಧಿಯೆ ಬಸವಾ,
ಜಂಗಮದ ವಾರಿಧಿಯೆ ಬಸವಾ,
ಪ್ರಸಾದದ ತವನಿಧಿಯೆ ಬಸವಾ,
ಅನುಭಾವದ ಮೇರುವೆ ಬಸವಾ,
ಮಹವನೊಡಗೂಡಿದಾತನು
ಬಸವಣ್ಣನೊ, ಕಲಿದೇವನೋ?
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-292/ವಚನ ಸಂಖ್ಯೆ-718)

ಮುಂದುವರಿದ ಮಾಚಯ್ಯನವರು,

ಜಂಗಮವೆ ಪ್ರಾಣವೆಂಬುದು
ನಿನಗೆ ಹುಸಿಯಾಯಿತ್ತಲ್ಲಾ ಸಂಗನಬಸವಣ್ಣ.
ನಿನಗೆ ಪ್ರಸಾದದ ಪ್ರಸನ್ನತೆಯೆಂಬುದು
ಸಂದೇಹವಾಯಿತ್ತಲ್ಲಾ ಚೆನ್ನಬಸವಣ್ಣ.
ನಿನಗೆ ಕಾಯವೆ ಬಸವಣ್ಣ, ಜೀವವೆ ಚೆನ್ನಬಸವಣ್ಣ,
ಕೇತಯ್ಯಗಳ ಅಳಿವು, ಕಲಿದೇವನ ಉಳಿವಾಯಿತ್ತು.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-247/ವಚನ ಸಂಖ್ಯೆ-602)

ಪರಶಿವನೇ ಭಕ್ತಿತತ್ಪರರೂ ಜಂಗಮಪ್ರಾಣಿಗಳೂ ಆದ ಇವರಿಬ್ಬರನ್ನೂ ನೀನು ಅಕಾಲದಲ್ಲಿ ನಿನ್ನಲ್ಲಿಗೆ ಬರಮಾಡಿಕೊಳ್ಳಲೇಕೆ? ಈ ಕೇತಯ್ಯನ ಪ್ರಾಣವನ್ನು ಜಾಗ್ರತೆಯಾಗಿ ಹಿಂದಿರುಗಿಸು. ಅದರೊಡನೆ ಬಸವೇಶ್ವರನ ಪ್ರಾಣವೂ ಬರುವುದು

ಎಂದು ಭಕ್ತಿಯ ಉದ್ರೇಕದಿಂದ, “ಬಸವ ಕೇತಯ್ಯಗಳನಿಬ್ಬರನ್ನೂ ಕಳುಹಿಸು, ನೀನು ಭಕ್ತಪ್ರಿಯನೆಂಬುದನ್ನು ಜಗಕೆ ತೋರಿಸು ಎಂದು ಹೇಳಿ ಮಾಚಯ್ಯನವರು ಜೋರಾಗಿ ತಮ್ಮ ಘಂಟೆಯನ್ನು ಬಾರಿಸಿದರು. ಆ ವಿಜಯಘಂಟೆಯ ನಾದಕ್ಕೆ ಬಸವಣ್ಣ ಮತ್ತು ಕೇತಯ್ಯನವರ ದೇಹದಲ್ಲಿ ಸಮಾಧಿಯಲ್ಲಿದ್ದ ಶಿವನಧ್ಯಾನಕ್ಕೆ ಭಂಗ ಬಂದು ಅವರಿಬ್ಬರೂ ಶಿವಯೋಗ ನಿದ್ರೆಯಿಂದ ಎಚ್ಚರಾದರು. ಚನ್ನಬಸವಣ್ಣನವರೂ ಎಚ್ಚತ್ತರು. ಆನಂದದಿದ ಶರಣ ಸಮೂಹ ಕುಣಿದು ಕುಪ್ಪಳಿಸಿತು.

ಮೇಲೆದ್ದ ಮೇದಾರ ಕೇತಯ್ಯನವರು ಮಡಿವಾಳ ಮಾಚಯ್ಯನವರಿಗೆ ನಮಿಸಿ, ಬಸವಣ್ಣನವರ ಪಾದಕ್ಕೆರಿಗಿ ನುಡಿದರು,

ಎನ್ನ ಕಾಯದ ಕಳವಳವ ನಿಲಿಸಿ, ಗುರುಲಿಂಗವ ತೋರಿದ,
ಎನ್ನ ಮನದ ವ್ಯಾಕುಳವ ನಿಲಿಸಿ, ಜಂಗಮಲಿಂಗವ ತೋರಿದ,
ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ,
ಎನ್ನ ಪಾವನವ ಮಾಡಿದ,
ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ,
ಸದ್ಯೋನ್ಮುಕ್ತಿಯ ತೋರಲೆಂದು ಮತ್ರ್ಯಕ್ಕೆ ಮರಳಿ ತಂದ
ಸಂಗನಬಸವಣ್ಣನೆ ಗುರುವೆನಗೆ, ಸಂಗನಬಸವಣ್ಣನೆ ಪರವೆನಗೆ.
ಸಂಗನಬಸವಣ್ಣನ ಕರುಣದಿಂದ, ಘನಕ್ಕೆ ಘನಮಹಿಮ ಅಲ್ಲಮಪ್ರಭುವಿನ
ಶ್ರೀಪಾದವ ಕಂಡು ಬದುಕಿದೆನು ಕಾಣಾ, ಗವರೇಶ್ವರಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-525/ವಚನ ಸಂಖ್ಯೆ-1395)

ಮರುದಿನ ತಮ್ಮ ಮರುಜನ್ಮದ ಸವಿನೆನಪಿಗಾಗಿ ಕೇತಯ್ಯನವರು ನಮಗೆಲ್ಲ ತಮ್ಮ ಮನೆಗೆ ದಾಸೋಹದೂಟಕ್ಕೆ ಕರೆದಾಗ, ಅವರ ಮನೆಯ ಪಡಸಾಲೆಯಲ್ಲಿ ಬಿದಿರನಲ್ಲಿ ಹೆಣೆದ ತೊಟ್ಟಿಲವೊಂದನ್ನು ಕಟ್ಟಿದ್ದರು. ಅದನ್ನು ನೋಡಿದ ನಮ್ಮೊಡನೆ ಆಗಮಿಸಿದ್ದ ಶ್ರೇಷ್ಠಶರಣರಾದ ಮಧುವಯ್ಯನವರು ನುಡಿದರು, ಶರಣರೇ ಕೇಳಿರಿಲ್ಲಿ

ಕಂಗಳ ಸೂತಕವ ಯೋನಿ ತಡೆದು,
ಬಾಯ ಬಸುರಾಗಿ, ಕೈ ಬೆಸನಾಯಿತ್ತು.
ಕೈಯ ಶಿಶುವ ಕಂಗಳ ತಾಯಿ ಎತ್ತಿ,
ಭಾವದ ದಾದಿಯ ಕೈಯಲ್ಲಿ ಕೊಟ್ಟು,
ಅರ್ಕೇಶ್ವರಲಿಂಗವು ತೊಟ್ಟಿಲಲ್ಲಿ ಬೆಳಗುತ್ತದೆ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-328/ವಚನ ಸಂಖ್ಯೆ-811)

ಮಧುವಯ್ಯನವರ ಈ ಬೆಡಗಿನ ವಚನದಲ್ಲಿ ಶಿವಸಾಧನೆಯಿಂದಾಗಿ, ಕಣ್ಣುಗಳಿಂದ ನಿಸರ್ಗದತ್ತ ಯೋನಿಯಿಂದ ಗರ್ಭಧಾರಣೆಯಾಗದೆ ಬಾಯಿಯಿಂದ ಗರ್ಭಧಾರಣೆಯಾಗಿ ಕೈಗಳಿಂದ ಮಗುವಿನ ಪ್ರಸವವಾಗಿತ್ತು. ಆ ಕೈಗಳ ಮಗುವನ್ನು ಕಣ್ಣುಗಳೆಂಬ ತಾಯಿಯು ಎತ್ತಿಕೊಂಡು ಭಾವವೆಂಬ ದಾಯಿಯ ಕೈಯ್ಯಲ್ಲಿತ್ತಾಗ ಅವಳು ಅದನ್ನು ತೊಟ್ಟಿಲಲ್ಲಿ ಹಾಕಿದಾಗ ಅಲ್ಲಿ ಆ ತೊಟ್ಟಿಲಲ್ಲಿ ಶಿವಲಿಂಗವು ಬೆಳಗುತ್ತಿತ್ತು. ಇಲ್ಲಿ ತೊಟ್ಟಿಲೆಂದರೆ ನಮ್ಮ ದೇಹ!

ಇದನ್ನೆಲ್ಲ ಅರ್ಥೈಸಿಕೊಂಡ ಮೇದಾರ ಕೇತಯ್ಯನವರಿಗೆ ಮಧುವಯ್ಯನವರು ಕೇಳಿದರು, “ಇದ್ಯಾಕೆ, ಇಲ್ಲಿ ಬಿದಿರಿನ ತೊಟ್ಟಿಲನ್ನು ಕಟ್ಟಿದ್ದೀರಿ?” ಎಂದು ಕೇಳಿದಾಗ, ಕೇತಯ್ಯನವರು ನುಡಿದರು..

ಒಂದು ಬಿದರಿಂಗೆ ಕವೆ ಮೂರು, ಆ ಕವೆಯ ಒಳಗೆ ಲಕ್ಕ ಸಿಬಿರು,
ಮೂರು ಕವೆಯ ಕೊಚ್ಚಿಸಿ, ಬಿಲ್ಲ ಸಿಕ್ಕ ಬಿಡಿಸಿ, ಸೀಳಿದ ಬಿದಿರ
ಹೊರೆಹೊರೆಯಲ್ಲಿ ನಯಿದೆ, ತೊಟ್ಟಿಲ ಸಂದ ಕಾಣದಂತೆ.
ನಾಲ್ಕು ಕಾಲನಿಕ್ಕಿ ಅಂದಅಂದವಾದ ತೊಟ್ಟಿಲ ದಂಡೆಯನಿಕ್ಕಿ,
ಕಟ್ಟುವದಕ್ಕೆ ಶ್ರುತ ದೃಷ್ಟವೆಂಬೆರೆಡು ದಾರದಲ್ಲಿ ತೊಟ್ಟಿಲ ಕಟ್ಟಿ,
ಗವರೇಶ್ವರಲಿಂಗಕ್ಕೆ ಹುಟ್ಟುಗೆಟ್ಟು ಹೋಗೋ
ಎಂದು ಜೋಗುಳವಾಡಿದೆ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-527/ವಚನ ಸಂಖ್ಯೆ-1400)

ದೇಹಕ್ಕೆ ಮಲತ್ರಯಗಳೆಂಬ ಕಣ್ಣೆಗಳು ಮೂರು. ಅದರೊಳಗೆ ಲಕ್ಷಾಂತರ ನರನಾಡಿಗಳು. ಆ ಮಲತ್ರಯಗಳನ್ನು ನೀಗೀ, ದೇಹವನ್ನು ಕಾಪಾಡಬೇಕು, ಎಲ್ಲಿಯೂ ತೊಟ್ಟಿಲ ಛಿದ್ರಗಳು ಕಾಣದಂತೆ, ಅಂದರೆ ದೇಹದ ನ್ಯೂನತೆಗಳು ಕಾಣದಂತೆ ಭದ್ರವಾಗಿ ಕಟ್ಟಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಕಾಲುಗಳನ್ನು ಆ ತೊಟ್ಟಿಲಿಗೆ ನಿಲ್ಲಿಸಿ, ಶ್ರುತಿ ಅಥವಾ ನಾದ ಮತ್ತು ನೋಟ ಅಥವಾ ದೃಷ್ಟಿ ಎಂಬ ಎರಡು ಹಗ್ಗಗಳನ್ನು ತೊಟ್ಟಿಲವನ್ನು ಸರಾಗವಾಗಿ ತೂಗಲು ಬರುವಂತೆ ಬಿಗಿಯಬೇಕು. ಆಗ ನಮ್ಮ ಆ ತೊಟ್ಟಿಲ ದೇಹದ ಆತ್ಮದಲ್ಲಿರುವ ಪ್ರಾಣಲಿಂಗಕ್ಕೆ ಜನ್ಮಬಂಧನದಿದ ಬಿಡುಗಡೆಯಾಗಿ ಸನ್ಮುಕ್ತಿ ಪ್ರಾಪ್ತವಾಗುತ್ತದೆ ಎಂದು ಕೇತಯ್ಯನವರು ತಿಳಿಸಿದಾಗಿ ಶರಣರು ಅವರ ಪಾದಕ್ಕೆರಗಿದರು.

ಡಾ. ದಯಾನಂದ ನೂಲಿ,
ಶಸ್ತ್ರ ಚಿಕಿತ್ಸಾ ತಜ್ಞರು,
ಕಮಲಾ ಆಸ್ಪತ್ರೆ,
ಬಸವೇಶ್ವರ ನಗರ,
ಚಿಕ್ಕೋಡಿ.
ಮೋಬೈಲ್‌ ಸಂ. 94481 33510

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply