
ವಚನಗಳು ಏಕಕಾಲಕ್ಕೆ ವ್ಯಕ್ತಿ ಮತ್ತು ವ್ಯವಸ್ಥೆ ಎರಡರ ಒಳಗಿರುವ ಕೊಳೆಗಳನ್ನು ಎತ್ತಿ ತೋರಿಸಿ, ಆ ಕೊಳೆಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಅನನ್ಯ ಮಾರ್ಗ ಸೂಚಿಸುವುದು ಒಂದು ವಿನೂತನ ಅಭಿವ್ಯಕ್ತಿ ಕ್ರಮ. ಒಂದೇ ನೋಟದಲ್ಲಿ ಎರಡು ದೃಶ್ಯಗಳನ್ನು ಕಾಣಿಸುವ ಈ ಕ್ರಮದಲ್ಲಿ ಎದ್ದು ಕಾಣುವುದು ಶರಣರ ಪ್ರತಿಭೆ ಮತ್ತು ಅವರ ಪ್ರಗತಿಪರ ಸಮಾಜಮುಖಿ ಚಿಂತನೆ. ಈ ಪರಿಪೇಕ್ಷದಲ್ಲಿ ಗಮನಿಸುವಾಗ ಬಹಳಷ್ಟು ವಚನಗಳು ಒಳಗೆ ಮತ್ತು ಹೊರಗೆ ಧ್ವನಿಸುವ ಎರಡೂ ಅರ್ಥಗಳಲ್ಲಿ ಒಂದು ಅನನ್ಯವಾದ ಆಂತರಿಕ ಸಂಬಂಧವಿರುವುದು ಸೂಕ್ಷ್ಮ ನೋಟಕ್ಕೆ ತಿಳಿಯುತ್ತದೆ. ಯಾರು ಯಾವ ಕಣ್ಣಿನಿಂದ ನೋಡುತ್ತಾರೋ, ಆ ಬಗೆಯಲ್ಲಿ ಅವು ತಮ್ಮ ಅರ್ಥವನ್ನು ಬಿಚ್ಚಿಕೊಡುವುದು ಒಂದು ಅನನ್ಯ ಅಭಿವ್ಯಕ್ತಿ ರೀತಿಯೆಂದೇ ಹೇಳಬೇಕು. ಈ ಕಾರಣಕ್ಕಾಗಿಯೇ ವಚನಗಳು ಸಾಮಾಜಿಕ ಹಾಗೂ ಸಾಹಿತ್ಯಕ ಎರಡೂ ನೆಲೆಗಳಲ್ಲೂ ಮುಖ್ಯವಾಗುತ್ತವೆ. ಇಂಥ ಕ್ರಮಕ್ಕೊಂದು ಮಾದರಿಯಾಗಿ ಶರಣ ಸುಂಕದ ಬಂಕಣ್ಣನವರ ಈ ವಚನ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ.
ಕ್ಷಯ ಕಾರಣವೆಂಬ ಪಟ್ಟಣಕ್ಕೆ
ಲಯಕಾರಣವೆಂಬ ಅರಸು.
ಪೋಲಿಕಾರ ಪ್ರಧಾನ,
ಮದೋನ್ಮತ್ತ ತಳವಾರ.
ಇಂತೀ ಪಟ್ಟಣದರಸು,
ಮರವೆಯ ಮಹಾರಾಜ್ಯವನು ಆಳುತ್ತಿರಲಾಗಿ,
ಆತನ ಅಡಿಗೆರಗಿ ಅಂಜುವರಿಲ್ಲ,
ಬಂಕೇಶ್ವರಲಿಂಗವ ಕಂಡರಿಯದ ಕಾರಣ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-662)
ಈ ವಚನ ನಮ್ಮ ಕಣ್ಣು ಮತ್ತು ಕಿವಿಗೆ ಬಿದ್ದ ಕೂಡಲೇ ಮೊದಲು ಗಮನ ಹರಿಯುವುದು ಯಾವುದೇ ಕಾಲದ ಹದಗೆಟ್ಟ ರಾಜಕೀಯ ವ್ಯವಸ್ಥೆಯ ಕಡೆಗೆ. (ಅದು ಇಂದಿನ ರಾಜಕೀಯವನ್ನೇ ಹುಬೇಹುಬಾಗಿ ವ್ಯಂಗಿಸುತ್ತಿದೆಯೆಂದು ಭಾವಿಸುವ ಕೆಟ್ಟ ರಾಜಕಾರಣಿಗಳು ಹಾಗೂ ಅಂಥವರ ಬಾಲಬಡುಕರಿದ್ದರೆ, ವಚನವು ಅವರವರ ಭಾವಕ್ಕೆ ತಕ್ಕಂತೆಯೇ ಅರ್ಥವಾಗುತ್ತದೆ. ‘ಕುಂಬಳ ಕಾಯಿ ಕಳ್ಳ ಎಂದ್ರೆ….’ ಎಂಬ ಗಾದೆ ಮಾತು ಇಲ್ಲಿ ನೆನಪಾಗುತ್ತದೆ) ಏಕೆಂದರೆ, ಇಂದು ರಾಜಕೀಯ ಎಂಬ ಶಬ್ದವೇ ಭ್ರಷ್ಟ, ಸ್ವಾರ್ಥ, ಸ್ವಜನ ಪಕ್ಷಪಾತ, ಅಹಂಕಾರ, ಅಧಿಕಾರ ದಾಹ, ದುರಾಚಾರ-ಇವೇ ಮೊದಲಾದ ಕೆಟ್ಟ ನಡತೆಗಳಿಗೆ ಸಂವಾದಿಯೆಂಬಂತೆಯೇ ಇರುವುದು. ಈ ಕಾರಣಕ್ಕಾಗಿ ಶರಣ ಸುಂಕದ ಬಂಕಣ್ಣನವರ ಪ್ರಸ್ತುತ ವಚನ ಮೇಲ್ನೋಟಕ್ಕೆ ಅಂಥ ರಾಜಕಾರಣಿಗಳನ್ನು ಹಾಗೂ ಆ ಬಗೆಯ ಅರಾಜಕ ಸ್ಥಿತಿಯನ್ನು ಕುರಿತೇ ಮಾತಾಡುತ್ತಿದೆಯೇನೋ ಎಂಬಂತೆ ಭಾಸವಾಗುವುದು ಸಹಜ. ಆದರೆ, ವಚನದ ಅರ್ಥವ್ಯಾಪ್ತಿ ಅಷ್ಟಕ್ಕೇ ಸೀಮಿತವಾಗಿಲ್ಲ ಅಥವಾ ಅದೊಂದನ್ನೇ ಕಟ್ಟಿಕೊಡುವುದು ಅದರ ಉದ್ದೇಶವೂ ಆಗಿಲ್ಲ. ಹೊರನೋಟಕ್ಕೆ ಹೀಗೆ ತೋರುವ ವಚನವು, ಒಳನೋಟದಲ್ಲಿ ಪ್ರಧಾನವಾಗಿ, ಹದಗೆಟ್ಟು ಹೋಗಿರುವ ಮನುಷ್ಯನ ಅಂತರಂಗದ ಅರಾಜಕ ಸ್ಥಿತಿಯ ಬಗ್ಗೆ ಮಾತಾಡುವುದು ಅತ್ಯಂತ ಸ್ಪಷ್ಟ. ವ್ಯಕ್ತಿಯ ಅಂತರಂಗದ ಅರಾಜಕ ಸ್ಥಿತಿಯೇ ಇರಲಿ, ರಾಜಕಾರಣದ ಅರಾಜಕ ಸ್ಥಿತಿಯೇ ಇರಲಿ, ಯಾವುದೇ ಒಂದು ಕ್ಷೇತ್ರ ಸಂಪೂರ್ಣ ದಾರಿ ಬಿಟ್ಟು ಹೊರಟಾಗ ಅಲ್ಲಿ ಆಗಬಹುದಾದ ಪರಿಣಾಮ ಮತ್ತು ಅನಾಹುತಗಳ ಬಗ್ಗೆ ಅದು ಎಚ್ಚರಿಕೆಯನ್ನು ಕೊಡುತ್ತದೆ. ಈ ಎಚ್ಚರಿಕೆಯೇ ಪ್ರಸ್ತುತ ವಚನದ ಬಹುಮುಖ್ಯ ಧ್ವನಿಯಾಗಿದ್ದು, ಅದು ಎರಡೂ ವಲಯಗಳಿಗೂ ಸಮನಾಗಿಯೇ ಅನ್ವಯಿಸುತ್ತದೆ.
ಶರಣ ಸುಂಕದ ಬಂಕಣ್ಣನವರ ಹೆಸರೇ ಸೂಚಿಸುವಂತೆ ಅವರು ಒಬ್ಬ ಸುಂಕದ ಅಧಿಕಾರಿಯಾಗಿದ್ದವರು. ಅಂತೆಯೇ ಅವರಿಗೆ ರಾಜಕಾರಣದ ಒಳ-ಸುಳಿಗಳೆಲ್ಲವೂ ಗೊತ್ತಿವೆ. ಯಾವ ಕಾಲದ ರಾಜಕೀಯವಾದರೂ ಮರೆವು ಮತ್ತು ಅಹಂಕಾರದ ಮತ್ತೊಂದು ರೂಪವೇ ಆಗಿರುವುದನ್ನು ಅರಿತಿದ್ದ ಶರಣ ಸುಂಕದ ಬಂಕಣ್ಣನವರು ಅಂಥ ರಾಜಕೀಯದ ಸ್ಥಿತಿಯನ್ನೇ ಮನುಷ್ಯನ ಶರೀರ ಮತ್ತು ಆತ್ಮದ ರಾಜಕಾರಣಕ್ಕೂ ಸಮೀಕರಿಸಿ ಮಾತಾಡುತ್ತಾರೆ. ನಮ್ಮ ಶರೀರವೆಂಬುದೇ ಒಂದು ಪಟ್ಟಣವೆಂದು ಭಾವಿಸಿದರೆ, ಆ ಪಟ್ಟಣದ ಅರಸನಾದ ಆತ್ಮನು ಸದಾ ಎಚ್ಚರಿಕೆಯಲ್ಲಿ ಇದ್ದು, ಆ ಇಡೀ ಪಟ್ಟಣದ ಒಳ-ಹೊರಗನ್ನು ಅರಿವಿನ ಬೆಳಕಲ್ಲಿ ನಿರ್ವಹಿಸಬೇಕಾದದ್ದು ಅಗತ್ಯ. ಆದರೆ ಆ ಪಟ್ಟಣದರಸನೇ (ಆತ್ಮನೇ) ಅರಿವಿನ ಮಾರ್ಗ ಬಿಟ್ಟು ಮರೆವಿನ ದಾರಿಯಲ್ಲಿ ಹೊರಟರೆ ಆಗಬಹುದಾದ ಅನಾಹುತಗಳಿಗೆ ಲೆಕ್ಕವಿಲ್ಲ. ಇಂಥ ಪಟ್ಟಣವನ್ನು ‘ಕ್ಷಯಕಾರಣ’ ಎಂಬ ಹೆಸರಿನಿಂದ ಕರೆಯುತ್ತಾರೆ ಶರಣ ಸುಂಕದ ಬಂಕಣ್ಣನವರು. ಈ ರೀತಿ ಕ್ಷಯಕ್ಕೆ ತುತ್ತಾಗಿ, ಅಂದರೆ ರೋಗ ಹತ್ತಿ ನಿಧಾನವಾಗಿ ನಶಿಸಿ ಹೋಗುತ್ತಿರುವ ಪಟ್ಟಣಕ್ಕೆ ‘ಲಯಕಾರಣ’ ನು ಅರಸನಾದರೆ, ಆತ ಎಲ್ಲವನ್ನೂ ಒಂದೊಂದಾಗಿ ಲಯ (ಹಾಳು) ಮಾಡಿಬಿಡುವುದೇನೂ ಸುಳ್ಳಲ್ಲ. ಇಷ್ಟಕ್ಕೆ ಮುಗಿಯದೆ, ಆ ಪಟ್ಟಣಕ್ಕೆ ‘ಪೋಲಿಕಾರ’ ಅಂದರೆ ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳದ ಪೋಲಿ-ಪೋಕರಿಯು ಪ್ರಧಾನನಾದರೆ, ಮತ್ತು ಪಟ್ಟಣವನ್ನು ಕಾಯಬೇಕಾದ ‘ತಳವಾರ’ ನೇ ಮತ್ತೇರಿಸಿಕೊಂಡು ಮಲಗಿದರೆ, ಆ ಇಡೀ ಪಟ್ಟಣ ಮರವೆಗೆ ಜಾರಿದೆಯೆಂದೇ ಅರ್ಥ. ಇಂಥ ಪಟ್ಟಣವನ್ನು ಆಳುವ ‘ಲಯಕಾರಣ’ ನೆಂಬ ಅರಸನು ಸಂಪೂರ್ಣ ಮರವೆಗೆ ಜಾರಿ, ಆ ಮರವೆಯಲ್ಲೇ ರಾಜ್ಯವನ್ನು ಆಳುತ್ತಿದ್ದರೆ ಅಂಥ ರಾಜನ ಮಾತನ್ನು ಯಾರಾದರೂ ಕೇಳುತ್ತಾರೆ? ಅರಿವುಗೆಟ್ಟ ಹುಚ್ಚನಾಳುವ ರಾಜ್ಯ ಅದಾಗುವ ಕಾರಣ ಅಲ್ಲಿ ರಾಜನಿಗೆ ಯಾರೂ ಅಂಜಲಾರರು ಮತ್ತು ಗೌರವವನ್ನೂ ಕೊಡಲಾರರು. ಹೀಗೆ ಅಂತರಂಗದ ಆಡಳಿತವು ನಿರ್ವಹಿಸುವ ಒಂದೊಂದು ಗುಣವನ್ನೂ ವ್ಯಕ್ತೀಕರಣಗೊಳಿಸಿ, ಆ ಎಲ್ಲ ವ್ಯಕ್ತಿಗಳೂ ತಮ್ಮ ನಿಜ ಪ್ರವೃತ್ತಿಗಳನ್ನು ತೊರೆದು, ಅಡ್ಡದಾರಿಯಲ್ಲಿ ಹೊರಟರೆ ಅನುಭಾವದ ಸಾಧನೆ ಹೇಗೆ ಸಾಧ್ಯವಾದೀತು? ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ ಸುಂಕದ ಬಂಕಣ್ಣನವರು ಇಲ್ಲಿ.
ಒಮ್ಮೆಲೇ ಹೊರನೋಟಕ್ಕೆ ಕಾಣುವ ರಾಜಕೀಯ ಅರ್ಥವನ್ನು ಬದಿಗಿಟ್ಟು, ಒಂದಿಷ್ಟು ವಚನದ ಆಳಕ್ಕೆ ಇಳಿದರೆ ಅಲ್ಲಿ ಗೋಚರಿಸುವುದು, ಅರಿವುಗೆಟ್ಟ ಮತ್ತು ಮರವೆಯ ಪ್ರಪಾತಕ್ಕೆ ತಳ್ಳಲ್ಪಟ್ಟ ಆತ್ಮನ ಅರಾಜಕ ಸ್ಥಿತಿ. ಇಂಥ ಮರವುಗೇಡಿ ಆತ್ಮನು ನಡೆಸುವ ಆಡಳಿತವು ಆತನ ಅಂತರಂಗ ಮತ್ತು ಬಹಿರಂಗ ಎರಡನ್ನೂ ಒಳಗೊಂಡಂತೆ ಇಡೀ ವ್ಯಕ್ತಿತ್ವವನ್ನೇ ಅಧಃಪಾತಕ್ಕೆ ತಳ್ಳುತ್ತದೆ. ಆ ಬಗೆಯ ವ್ಯಕ್ತಿತ್ವಕ್ಕೆ ಗೌರವವೇ ಇರುವುದಿಲ್ಲ. ಅನುಭಾವದ ಸಾಧನೆಗೆ ಅತೀ ಮುಖ್ಯವಾದದ್ದು ಅರಿವಿನ ಪಥ. ಅದೇ ಇಲ್ಲದೇ ಹೋದರೆ ಆಗುವುದೆಲ್ಲವೂ ಅನಾಹುತವೆ. ಆತ್ಮದ ಅಥವಾ ಅರಿವಿನ ಸಂಕೇತವಾದ ಲಿಂಗಜ್ಞಾನ ಪ್ರಾಪ್ತವಾಗಬೇಕಾದರೆ, ಅಂಥ ಮರೆವಿನಿಂದ ಹೊರಬರಬೇಕೇಂಬುದೇ ಇಲ್ಲಿರುವ ಮುಖ್ಯ ಅರ್ಥ. ಇಡೀ ವಚನ ಪ್ರಧಾನವಾಗಿ ಮಾತಾಡುತ್ತಿರುವುದು ಇಂಥ ಅರಿವಿನ ಬೆಳಕಲ್ಲೇ ಸಾಗಬೇಕಾಗಿರುವ ಅನುಭಾವದ ಬಗ್ಗೆ. ಶರಣ ಸುಂಕದ ಬಂಕಣ್ಣನವರು ಇದನ್ನು ಕಟ್ಟಿಕೊಟ್ಟಿರುವುದು ಮಾತ್ರ ರಾಜಕೀಯ ಪರಿಭಾಷೆಯಲ್ಲಿ.
ಇನ್ನು ವಚನವು ಮೇಲ್ನೋಟದಲ್ಲಿ ಕಾಣಿಸುವ ಅರ್ಥದ ಛಾಯೆಯಲ್ಲೇ ಗಮನಿಸುವುದಾದರೆ, ಅದು ಎಲ್ಲ ಕಾಲದ ಅರಿವುಗೇಡಿ ಮತ್ತು ಬುದ್ಧಿಹೀನ ಆಡಳಿತಗಾರರ ಮೇಲೆ ಕ್ಷ-ಕಿರಣ ಬೀರುತ್ತದೆ. ತಮ್ಮ ರಾಜ್ಯದ ಮತ್ತು ಜನಹಿತದ ಕರ್ತವ್ಯಗಳನ್ನೇ ಮರೆತು ಇಡೀ ಆಡಳಿತ ವ್ಯವಸ್ಥೆಯಯನ್ನು ಕ್ಷಯಗ್ರಸ್ಥ ಮಾಡಿ, ನಿಧಾನವಾಗಿ ಅಷ್ಟಷ್ಟೇ ಹಾಳು ಮಾಡುವ ಮತ್ತು ಮದೋನ್ಮತ್ತರಾಗಿ ಮೆರೆಯುವ ರಾಜಕಾರಣಿಗಳು ಮತ್ತು ಆಡಳಿತಗಾರರು ತಮ್ಮ ಪ್ರಜೆಗಳಿಂದ ತಿರಸ್ಕಾರಕ್ಕೆ ಒಳಗಾಗುವುದನ್ನು ಅದು ಸೂಚಿಸುತ್ತದೆ. ಇಂಥ ರಾಜಕಾರಣಿಗಳನ್ನು ಯಾವ ಪ್ರಜೆಯೂ ಗೌರವಿಸಲಾರ. ಅರಿವನ್ನು ಸಂಪೂರ್ಣ ಮಾರಿಕೊಂಡ ಇಂಥವರು ಇಡೀ ರಾಜ್ಯವನ್ನೇ ಹಾಳುಮಾಡಿ, ಅರಾಜಕ ಸ್ಥಿತಿಗೆ ತಳ್ಳುತ್ತಾರೆ. ಏಕೆಂದರೆ, ರಾಜ್ಯಾಡಳಿತದ ಮೂಲ ಸೂತ್ರಗಳನ್ನೇ ಅವರು ಮರೆತಿರುತ್ತಾರೆ. ಅಂಥವರದು ಮರವೆಯ ರಾಜ್ಯ. ಹೀಗಿರುವ ಸ್ಥಿತಿ ರಾಜ್ಯವೊಂದರ ಅವನತಿಗೆ ಕಾರಣವಾಗುವುದರಲ್ಲಿ ಸಂದೇಹವೇ ಇಲ್ಲ. ವರ್ತಮಾನದ ಜಗತ್ತಿನ ರಾಜಕೀಯವು ಹೆಚ್ಚಾಗಿ ಈ ಬಗೆಯದೇ ಅಲ್ಲವೆ? ಹೀಗಾಗಿ ಈ ವಚನವು ಇಂದಿನ ರಾಜಕಾರಣಕ್ಕೇ ಹೆಚ್ಚು ಅನ್ವಯವಾಗುವಂತಿದೆ.
ಮನುಷ್ಯನ ಅಂತರಂಗದ ಅನುಭಾವದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ರಾಜಕಾರಣದ ರಾಜಕೀಯ ಎರಡೂ ಅರಿವಿನ ಬೆಳಕಿನಲ್ಲಿ ಸಾಗಬೇಕೆಂಬುದೇ ಪ್ರಸ್ತುತ ವಚನದ ಮುಖ್ಯ ಧ್ವನಿ. ಇಂಥ ಅರಿವೆಂಬುದೇ ಮರವೆಗೆ ತಿರುಗಿದರೆ, ಅನುಭಾವದ ಸಾಧನೆಯೂ ಹಾಳು, ರಾಜ್ಯಾಡಳಿತವೂ ಹಾಳು. ಅನ್ಯಾರ್ಥ ಮತ್ತು ಧ್ವನ್ಯಾರ್ಥ ಎರಡರ ಮೂಲಕವೂ ಶರಣ ಸುಂಕದ ಬಂಕಣ್ಣನವರು ಇಲ್ಲಿ ಹೇಳುವುದು ಎರಡೂ ಕ್ಷೇತ್ರಗಳ ಶುದ್ಧೀಕರಣದ ಬಗ್ಗೆ. ಅರಾಜಕ ಕಾರಣಗಳಿಂದಾಗಿ ಅನುಭಾವ ಮತ್ತು ಆಡಳಿತ ಎರಡೂ ಹಾಳಾಗಿ ಹೋಗಬಾರದೆಂಬುದೇ ಅವರ ಇಲ್ಲಿನ ಮುಖ್ಯ ಆಶಯ ಮತ್ತು ಅಪೇಕ್ಷೆ. ಅದನ್ನೇ ಅವರು ಇಲ್ಲಿ ಎರಡನ್ನೂ ಸಮೀಕರಿಸಿ ಹೇಳುತ್ತಾರೆ. ಅನುಭಾವದ ಸಾಧಕರಿಗೂ, ರಾಜಕೀಯ ನಾಯಕರಿಗೂ ಏಕಕಾಲದಲ್ಲಿ ಬೆಳಕು ಬೀರುವ ಅರ್ಥಪೂರ್ಣ ವಚನವಿದು.
ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
303, ಎಸ್. ಎಲ್. ವಿ. ತೇಜಸ್, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್ ಸಂ. +91 98869 85847
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in
ವಚನದ ವಿಶ್ಲೇಷಣೆ ಮನೋಜ್ಞವಾಗಿದೆ. ಈ ವಚನದ ಮೂಲಕ ಸಮಜಾಲೀನ ರಾಜಕೀಯ ಭ್ರಷ್ಟಾಚಾರದ ಕುರಿತು ಆಡಿದ ಮಾತುಗಳ ಬಗ್ಗೆ ತಕರಾರು ಇಲ್ಲ. ಆದರೆ ರಾಜಕಾರಣವಷ್ಟೇ ಭ್ರಷ್ಟಗೊಂಡಿಲ್ಲ. ಇಡೀ ವ್ಯವಸ್ಥೆ ಹದೆಗೆಟ್ಟಿದೆ. ಸಾಹಿತಿಗಳು, ಶಿಕ್ಷಣ ತಜ್ಞರು ಶುದ್ಧರಿರುವರೆ? ಸಾರ್ವಜನಿಕರು ಮುಗ್ಧರೆ? ಕೇವಲ ರಾಜಕೀಯ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಸಾಲದು. ಹಾಗೆಂದು ಇಡೀ ರಾಜಕಾರಣ ಭ್ರಷ್ಟಗೊಂಡಿದೆ ಎಂದೇನಿಲ್ಲ. ನಾಡು ನುಡಿಗಾಗಿ, ದೇಶದ ಭದ್ರತೆ, ಸುರಕ್ಷತೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ರಾಜಕಾರಣಿಗಳೂ ಇದ್ದಾರೆ. ಹಾಗೆಯೇ ಶಕ್ತಿ ರಾಜಕಾರಣಿಗಳು, ನುರಿತ ರಾಜಕಾರಣಿಗಳು ಆಶ್ಚರ್ಯ ಪಡುವಂಥ ಘಾತುಕ ರಾಜಕಾರಣ ಮಾಡುವ ಸಾಹಿತಿಗಳೂ, ಶಿಕ್ಷಣ ತಜ್ಞರೂ ಸ್ವಾಮಿಗಳೂ ಇದ್ದಾರೆ.
ವಚನವನ್ನು ಬಹಳ ಸಾದ್ಯಂತಿಕವಾಗಿ ವಿಶ್ಲೇಷಣೆ ಮಾಡಿರುವಿರಿ. ಅನೇಕ ಒಳನೋಟ ನೀಡಿರುವಿರಿ. ನಿಮಗೆ ಧನ್ಯವಾದಗಳು.