ಕೋಲ ತುದಿಯ ಕೋಡಗದಂತೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕೋಲ ತುದಿಯ ಕೋಡಗದಂತೆ,
ನೇಣ ತುದಿಯ ಬೊಂಬೆಯಂತೆ,
ಆಡಿದೆನಯ್ಯಾ ನೀನಾಡಿಸಿದಂತೆ,
ಆನು ನುಡಿದೆನಯ್ಯಾ ನೀ ನುಡಿಸಿದಂತೆ,
ಆನು ಇದ್ದೆನಯ್ಯಾ ನೀನು ಇರಿಸಿದಂತೆ,
ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-181)
ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ಯಂತ್ರವಾಹಕ: ಯಂತ್ರಗಳನ್ನು ನಡೆಸುವವ, ವಾಹನ ಚಾಲಕ.

ವೈರಾಗ್ಯನಿಧಿ ಅಕ್ಕಮಹಾದೇವಿಯವರು 12 ನೇ ಶತಮಾನದಲ್ಲಿ ಉದಯಿಸಿದ ಅನುಪಮ ಕವಿಯಿತ್ರಿ. ಅಂತರ್ಮುಖಿಯಾದ ಶರಣೆ ಅಕ್ಕಮಹಾದೇವಿಯವರಿಗೆ ಕಾವ್ಯ ಭಾಷೆ ಸಿದ್ಧಸಿತ್ತು. ಅವರ ಅಧ್ಯಯನಶೀಲತೆ, ಸ್ವತಂತ್ರ ವೈಚಾರಿಕತೆ, ಅವರು ಕಂಡಂಥ ಜೀವನಾನುಭವ, ಅಭಿವ್ಯಕ್ತಿಯ ವಿಶಿಷ್ಠ ಶೈಲಿ ಅವರನ್ನು ಅನುಪಮ ಕವಿಯಿತ್ರಿಯಾಗಿ ಗುರುತಿಸುವಲ್ಲಿ ಸಹಕರಿಸುವ ಅಂಶಗಳಾಗಿವೆ. ನಾವಿಂದು ಹೇಳುವ ಕವಿ ಕಲ್ಪನೆ, ಕವಿ ಸಮಯಗಳು ಕಾವ್ಯ ಮೀಮಾಂಸೆಯ ಅದ್ಭುತವಾದ ಪರಿಕಲ್ಪನೆಗಳು. ಭಾರತೀಯ ಮತ್ತು ಪಾಶ್ಚಾತ್ಯ ಹೀಗೆ ಕಾವ್ಯ ಮೀಮಾಂಸೆಯ ಎರಡು ಧಾರೆಗಳನ್ನು ನಾವು ಕಾಣಬಹುದು.

ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಯಾವ ಪ್ರತಿಭೆಯನ್ನು ಕಾವ್ಯದ ಹೆತ್ತ ತಾಯಿಯೆಂದು ಕರೆಯುತ್ತೇವೆಯೋ ಆ ಪ್ರತಿಭೆಯನ್ನೇ ಪಾಶ್ಚಿಮಾತ್ಯ ಕಾವ್ಯ ಮೀಮಾಂಸಕರು Imagination ಎಂದು ಕರೆದರು. ಈ ಕುರಿತು ದೀರ್ಘವಾಗಿ ಪರ್ಯಾಲೋಚಿಸಿ ಭಟ್ಟತೌತನು ಹೇಳುವುದು ಹೀಗಿದೆ:

ಪ್ರಜ್ಞಾ ನವನವೋನ್ಮೇಷಶಾಲಿನೀ | ಪ್ರತಿಭಾ ಮತಾ ||
ತದನು ಪ್ರಾಣಾನಾ | ಜೀವದ್ವರ್ಣನಾ ನಿಪುಣಃ ಕವಿಃ ||
ತಸ್ಯ ಕರ್ಮ ಸ್ಮೃತಂ | ಕಾವ್ಯಂ ||

ಹೊಸ ಹೊಸ ಭಾವಗಳನ್ನು ಸತತವಾಗಿ ಕಾಣುವ, ಕಟ್ಟುವ ಪ್ರಜ್ಞೆಯೇ ಪ್ರತಿಭೆ. ಈ ಪ್ರತಿಭೆಯ ಉಸುರಿನಿಂದ ಜೀವ ತುಂಬಿ ವರ್ಣಿಸಬಲ್ಲ ನಿಪುಣನೇ ಕವಿ. ಕವಿ ಕರ್ಮವೇ ಕಾವ್ಯ. ಪ್ರತಿಭೆ ಎಂದರೆ ಹೊಳಹು. ಅದು ರವಿಕಾಣದ್ದನ್ನೂ ಕವಿಗೆ ಕಾಣಿಸಬಲ್ಲುದು. ಅದು ಬುದ್ಧಿಯ ಕಣ್ಣಲ್ಲ; ಹೃದಯದ ಕಣ್ಣು ಎನ್ನುತ್ತಾರೆ ತೀ. ನಂ ಶ್ರೀಯವರು.

ಪ್ರಜ್ಞೆಯ ಬಲದಿಂದ ಬದುಕಿನ ಸಹಜತೆಗಳಲ್ಲಿ ಹೊಚ್ಚ ಹೊಸತನವನ್ನು ಹುಡುಕುವುದು ಒಂದು ಕಲೆಯಾದರೆ, ಕಂಡುಕೊಂಡ ಹೊಸತನಕ್ಕೆ ಪ್ರತಿಭೆಯ ಬಲದಿಂದ ಪ್ರಾಣ ತುಂಬಿ, ಜೀವ ತುಂಬಿ ವರ್ಣಿಸುವುದೂ ಕೂಡ ಒಂದು ಕಲೆಯಾಗಿದೆ. ಇಂತಹ ನಿಪುಣನೇ ಕವಿ. ಕವಿಯ ಕೆಲಸವೇ ಕಾವ್ಯ ರಚನೆ ಎಂಬಂತೆ ಪಾಶ್ಚಿಮಾತ್ಯರು ಅದನ್ನು “ಕಲ್ಪನೆ-Imagination” ಎಂದರು. ಇಂತಹ ಅದ್ಭುತವಾದ ಪ್ರತಿಭೆ ಶರಣೆ ಅಕ್ಕಮಹಾದೇವಿಯವರಿಗೆ ದೈವದತ್ತವಾಗಿತ್ತು. ಅದನ್ನು ಅವರು ತಮ್ಮ ಚಿಂತನಾ ಮತ್ತು ಅಧ್ಯಯನದ ಕುಲುಮೆಯಲ್ಲಿ ಕಾಯಿಸಿ ಬಡಿದು ಮತ್ತಷ್ಟು ಹೊಳಪು ನೀಡುತ್ತಾರೆ. ಆದ್ದರಿಂದ ಅಕ್ಕಮಹಾದೇವಿಯವರು ತಮ್ಮ ವಚನಗಳಲ್ಲಿ ಒಂದು ಬಗೆಯ ಅನನ್ಯ ಹೊಳಪು ಹಾಗೂ ಕಾಂತಿ ಇರುವುದನ್ನು ಕಾಣುತ್ತೇವೆ. ಅಕ್ಕಮಹಾದೇವಿಯವರು ತಮ್ಮ ವಚನಗಳಲ್ಲಿ ಬಳಸಿಕೊಳ್ಳುವ ಸಂಕೇತಗಳು, ಪ್ರತಿಮೆಗಳು, ರೂಪಕಗಳು, ದೃಷ್ಟಾಂತಗಳು, ಉಪಮೆ-ಉಪಮಾನಗಳು ಸಹಜ ಸಿದ್ಧತೆಯಿಂದ ಬಳಕೆಗೊಂಡು ಒಂದು ಧನ್ಯತಾ ಭಾವವನ್ನು ಸೃಷ್ಟಿಸುತ್ತವೆ.

ಪ್ರಸ್ತುತ ಈ ವಚನದಲ್ಲಿಯೂ ಕೂಡ ಅಕ್ಕಮಹಾದೇವಿಯವರ ಕಾವ್ಯ ಶಕ್ತಿಯು ಅವರು ಬಳಸಿಕೊಂಡ ಉಪಮೆಗಳ ಮೂಲಕ ಅದ್ಭುತವಾಗಿ ಮೂಡಿ ಬಂದಿದೆ. ಇದರ ಮೂಲಕ ಅಕ್ಕಮಹಾದೇವಿಯವರು ಒಬ್ಬ ಅದ್ಭುತ ಕವಿಯಿತ್ರಿಯೆಂದು ನಮಗೆ ಮನದಟ್ಟವಾಗುತ್ತದೆ.

ಈ ವಚನದಲ್ಲಿ ಅಕ್ಕಮಹಾದೇವಿಯವರು ಸಮಗ್ರ ಬದುಕಿನ ಸ್ಥರಗಳನ್ನು ದರ್ಶಿಸಿ ಬಂದ ಜೀವನಾನುಭವದ ದ್ರವ್ಯ ಅವರ ವಚನದ ಬಹುಮುಖ್ಯ ವಸ್ತುಗಳಾಗುತ್ತವೆ. ಅಂತಿಮದಲ್ಲಿ ಅದು ಆಧ್ಯಾತ್ಮದ ತುಟ್ಟ ತುದಿಗೇರುತ್ತದೆ. ಹೀಗೆ ಸ್ವತಃ ಅಕ್ಕಮಹಾದೇವಿಯವರೇ ಹೇಳುವಂತೆ ಅವರು ಕಂಡುಕೊಂಡ ಇಹ-ಪರದ ಗತಸುಖಗಳನ್ನು ಸಂಕೇತಿಸುತ್ತದೆ. ಅಕ್ಕಮಾಹಾದೇವಿಯವರು ನೀಡಿದ ಎರಡು ಉಪಮೆಗಳ ಬಳಕೆ ತುಂಬಾ ಸಹಜವಾಗಿ ಅಷ್ಟೇ ಸಶಕ್ತವಾಗಿ ಇಲ್ಲಿ ಕಾಣಿಸಿಕೊಂಡಿದೆ. ಒಂದು ಕೋಲತುದಿಯ ಕೋಡಗದಂತೆ ಹಾಗೂ ಇನ್ನೊಂದು ನೇಣತುದಿಯ ಬೊಂಬೆಯಂತೆ ಎನ್ನುವ ಉಪಮೆಗಳು. ನೇರವಾಗಿ ಹೇಳುವುದಾದರೆ, ಒಂದು ಕೋತಿಯನ್ನು ಆಡಿಸುವ ಆಟ ಮತ್ತು ಸೂತ್ರದ ಬೊಂಬೆಗಳು. ಇವೆರಡೂ ಜನಪದ ಕಲೆಗಳು.

ಯಾವ ಉಡುತಡಿಯಿಂದ ಕಲ್ಯಾಣದವರೆಗೆ ಸಾಗಿದ ಅಕ್ಕಮಹಾದೇವಿಯವರ ಸುದೀರ್ಘ ಪಯಣದಲ್ಲಿ ಇಂತಹ ಅದೆಷ್ಟು ಆಟಗಳನ್ನು ಕಂಡು ಬೆರಗಾಗಿದ್ದರೋ ಏನೋ? “ದೇಶ ಸುತ್ತು – ಕೋಶ ಓದು” ಎರಡೂ ಕೂಡ ಜ್ಞಾನದ ನೆಲೆಗಳೇ. ಲೋಕ ಸಂಚಾರವೂ ಅವರಲ್ಲಿ ಇಹದ ಪರಿಚಯ ಅಥವಾ ಅನುಭವ ನೀಡಿದೆ. ಜೀವನದ ಇಂತಹ ಅನುಭವಗಳೇ ಅವರ ಕಾವ್ಯದ ಶಕ್ತಿಯಾಗಿದೆ.

ಅವರು ಕಂಡುಕೊಂಡ ಕೋತಿಯಾಟದಲ್ಲಿನ ಕೋತಿಯನ್ನು, ಕೋತಿಯನ್ನು ಆಡಿಸುವವನನ್ನು ತಮ್ಮ ಆಧ್ಯಾತ್ಮ ಸಾಧನೆಗೆ ಬಳಸಿಕೊಂಡದ್ದು ಅನನ್ಯವಾಗಿದೆ. ಈ ಒಂದು ಜನಪದ ಕಲೆ ಅವರ ಸಾಧನಾ ಜೀವನಕ್ಕೆ ದಿಕ್ಸೂಚಿಯಾಗುವುದೇ ರೋಚಕ. ಚಂಚಲವಾದ ಮನಸ್ಸು ಕೋತಿಯಂತೆ ಕುಚೇಷ್ಟೆಗೆ ಎಳೆಯುತ್ತಿದೆ ಎಂದು ಹಳಹಳಿಸುತ್ತಾರೆ. ಆದರೆ ಚನ್ನಮಲ್ಲಿಕಾರ್ಜುನನೇ ಕೋತಿಯನ್ನು ನಿಯಂತ್ರಿಸುವವನಂತೆ ನನ್ನನ್ನು ನಿಯಂತ್ರಿಸುತ್ತಿದ್ದಾನೆ. ನಾನೊಂದು ಗೊಂಬೆ. ಆ ಗೊಂಬೆಯನ್ನು ಆಡಿಸುವ ಸೂತ್ರಧಾರನಂತೆ ನೀನು ನನ್ನನ್ನು ಆಡಿಸುತ್ತಿರುವೆ. ನಾನೀಗ ಸ್ವತಂತ್ರಳಲ್ಲ. ಸಂಪೂರ್ಣವಾಗಿ ನಿನ್ನ ಅಧೀನದಲ್ಲಿರುವವಳು ಎನ್ನುವದನ್ನು ಇಂತಹ ಉಪಮಾನಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಮುಂದುವರೆದು, “ಜಗದ ಯಂತ್ರವಾಹಕ” ಎಂದು ಚನ್ನಮಲ್ಲಿಕಾರ್ಜುನನಿಗೆ ಹೊಸ ನಾಮ ನೀಡುವುದು ಇನ್ನೂ ವಿಶೇಷವಾಗಿ ಕಾಣುತ್ತದೆ. ಈ ಶಬ್ದವೇ ವಿಶೇಷವಾಗಿದೆ. ಅಂದಿನ ಕಾಲದಲ್ಲಿ ಈ ಪದ ಬಳಕೆ ಅಕ್ಕಮಹಾದೇವಿಯವರ ಸೂಕ್ಷ್ಮಗ್ರಾಹ್ಯತೆಯ ಭಾಷಾ ಕೌಶಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಜಗವೇ ಒಂದು ಯಂತ್ರವಾದರೆ, ಅದನ್ನು ನಿಯಂತ್ರಿಸುವ ನಿರ್ವಾಹಕ ಚನ್ನಮಲ್ಲಿಕಾರ್ಜುನನಾಗಿದ್ದಾನೆ. ಆದ್ದರಿಂದ ನೀನು ಆಡಿಸಿದಂತೆ ಆಡುವೆನು. ನೀನು ನುಡಿಸಿದಂತೆ ನುಡಿವೆನು. ನೀನು ಇರಿಸಿದಂತೆ ಇರುವೆನು. ಇವೆಲ್ಲವೂ ನಿನ್ನ ಅಧೀನ. ನನ್ನ ಸಾಧಕ-ಬಾಧಕಗಳು, ಮಾನ-ಅಪಮಾನಗಳು ಎಲ್ಲವೂ ನಿನ್ನ ಇಚ್ಛೆಯಂತೆ ನಡೆದಿವೆ. ನಾನು ನಿನ್ನ ಅಧೀನೆ. ಇದು ಅಕ್ಕಮಹಾದೇವಿಯವರ ವಿನಯವೂ ಹೌದು, ಸ್ವಾಭಿಮಾನವೂ ಹೌದು ಮತ್ತು ಆತ್ಮಾಭಿಮಾನವೂ ಹೌದು. ಇದೇ ಅಕ್ಕಮಹಾದೇವಿಯವರ ವಚನ ರಚನೆಯ ಶಕ್ತಿ.

ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್‌. ಸಂ. 97407 38330

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply