
ಶರಣೆ ಅಕ್ಕಮ್ಮನವರು ಯಾದಗಿರಿ ಜಿಲ್ಲೆಯ ಏಲೇರಿ ಗ್ರಾಮದವರೆಂಬುದು ವಿದ್ವಾಂಸರ ಒಮ್ಮತದ ಅಭಿಪ್ರಾಯವಾಗಿದೆ. ಇದೇ ಊರಿನ ಶರಣ ಏಲೇರಿ ಕೇತಯ್ಯನವರ ಪ್ರಭಾವ ಅಕ್ಕಮ್ಮನವರ ಮೇಲೆ ಆಗಿರಬಹುದು. “ಆಚಾರವೇ ಪ್ರಾಣವಾದ ರಾಮೇಶ್ವರಲಿಂಗ” ಅಂಕಿತದಿಂದ 154 ವಚನಗಳು ಪ್ರಕಟವಾಗಿವೆ. ಅಕ್ಕಮ್ಮನ ಜೀವನ ಚರಿತ್ರೆಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಅಕ್ಕಮ್ಮನವರ ವಚನಗ ಳನ್ನು ಓದಿದರೆ ಕೃಷಿ ಕಾಯಕದ ಶರಣೆ ಆಗಿರಬೇಕೆಂದು ಊಹಿಸಬಹುದು.
ಒಡೆಯರ ಕಟ್ಟಳೆಯ ಮಾಡಿಕೊಂಡು ಆಡುವ ತನಕ
ಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೇ?
ಒಡೆಯರಂತೆ, ಮನೆಗೊಡೆಯನಂತೆ,
ಗಡಿ ತಡಿಯಲ್ಲಿ ಕಾಯಲುಂಟೆ!
ಅದು ತುಡುಗುಣಿಕಾರರ ನೇಮ. ಒಡೆಯರತ್ತ ನಾವಿತ್ತ.
ಗಡಿಗೆಯ ತುಪ್ಪ, ಹೆಡಿಗೆಯ ಮೃಷ್ಟಾನ್ನ,
ತುಡುಗುಣಿಯಂತೆ ತಿಂಬವಂಗೆ
ಮತ್ತೊಡೆಯರ ಕಟ್ಟಳೆಯೆ?
ಇಂತೀ ಕೆಡುಕರ ಕಂಡು ಅಂಜಿದೆಯಲ್ಲಾ
ಆಚಾರವೇ ಪ್ರಾಣವಾದ ರಾಮೇಶ್ವರಲಿಂಗಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-167/ವಚನ ಸಂಖ್ಯೆ-460)
ಪರಶಿವನ ಸಾಮಿಪ್ಯದಲ್ಲಿ ನಿಷ್ಠೆ ಬಹು ಪ್ರಮುಖವಾದದ್ದು. ಸಮಾಜವೇ ಉಸಿರು ಸತ್ಯವೆಂದು ಭಾವಿಸಿಕೊಂಡ ಶರಣರಿಗೆ ತತ್ವ ವಿಚಾರಗಳ ಹಂಗೂ ಅವರಿಗಿಲ್ಲ. ಹೀಗಾಗಿ ಶರಣೆ ಅಕ್ಕಮ್ಮ ಒಡೆಯರ ಕಟ್ಟಳೆ ಎಂಬ ಪದವನ್ನು ರಾಜವಂಶದ ಕಾಲದಲ್ಲಿ ರೂಪಿಸಲ್ಪಟ್ಟ ನಿಯಮಾವಳಿಗಳೆಂದು ಅವರ ಕೈಕೆಳಗೆ ಕೆಲಸ ಮಾಡುವ ಅರ್ಥವೂ ಕಾಣಬಹುದು. ರಾಜ್ಯದಲ್ಲಿ ರಾಜನು ನ್ಯಾಯ ಪರಿಪಾಲನೆ ಮಾಡಬೇಕು. ಗುಡಿಗೂರಿ ಎಂಬ ಪದ ಸೇವಕತ್ವವನ್ನು ಹೊಂದಿದವನು ಎಂಬ ಅರ್ಥ ಬರುತ್ತದೆ. ಅಂದು ರಾಜರಲ್ಲಿ ಶ್ರೀಮಂತರಲ್ಲಿ ಸೇವೆ ಸಲ್ಲಿಸುವವನು ಯಜಮಾನನಿಗೆ ವಿಧೇಯನಾಗಿ ಕರ್ತವ್ಯ ನಿರತನಾಗಿರುತ್ತಿದ್ದ. ಎಲ್ಲಿಯ ತನಕ ಸೇವಕ ತನ್ನ ಒಡೆಯನಿಗೆ ಪ್ರಮಾಣ ಪೂರ್ವಕವಾಗಿ ಒಪ್ಪಿಕೊಂಡು ಸೇವೆಯನ್ನು ಸಲ್ಲಿಸುವನೋ ಅಲ್ಲಿಯ ತನಕ ಒಡೆಯನಿತ್ತ ಕಾಣಿಕೆಗೆ ಈತ ಹಕ್ಕುದಾರ. ಅದು ವಂಶ ಪಾರಂಪರ್ಯವಾಗಿ ಬಂದ ಕೆಲಸವಾಗಿತ್ತು. ರಾಜನ ಅಂತಃಕರಣ ಸಹಾನುಭೂತಿಯನ್ನು ಪಡೆದುಕೊಳ್ಳಲು ಒಡೆಯನ ಯೋಗಕ್ಷೇಮವನ್ನು ನೋಡಿಕೊಳ್ಳ ಬೇಕಾಗಿತ್ತು. ಆದರೆ ಶರಣರು ಸಮ ಸಮಾಜದ ಕಲ್ಪನೆಯ ಆಶಯ ಹೊಂದಿದ್ದ ಇವರು ಜಾತಿ ಕುಲ ವೃತ್ತಿಗಳನ್ನು ಗೌರವಿಸುತ್ತಾ ಎಲ್ಲರೂ ತಮ್ಮವರೆಂದು ಅಪ್ಪಿಕೊಂಡಿದ್ದರು.
ವೃತ್ತಿ ಗೌರವದ ದುಡಿಮೆಯನ್ನು ವಿಶಾಲ ಭಾಗಿಸಿದರು. ಅಂತೆಯೇ ಸೇವಕತ್ವ ಎಂಬ ವೃತ್ತಿಯನ್ನು ಗೌರವದಿಂದ ಕಂಡ ಶರಣಿ ಅಕ್ಕಮ್ಮ ಯಜಮಾನ ಮತ್ತು ಶ್ರೀಮಂತ ಎಂಬ ಅಸಮಾನತೆಯನ್ನು ಸಹಿಸದೆ ಯಜಮಾನನ ಅಂಗಳದ ಬಾಗಿಲಲ್ಲಿ ಗುಡಿಗೂರಿ ಎನಬಹುದೆ? ಎಂಬ ಪ್ರತಿಭಟನೆ ಅಕ್ಕಮ್ಮನವರದ್ದು. ಸಮಾಜದ ಈ ಸೇವಕ ಗುಡಿಗೂರನ ಕಸ ಗುಡಿಸುವ ಕೆಲಸದವನನ್ನು ನಿರ್ಲಕ್ಷವಾಗಿ ಕಂಡ ಸಂದರ್ಭವಿದಾಗಿತ್ತು. ಸೇವೆಗೆ ನಿಯುಕ್ತಿಯಾದ ವ್ಯಕ್ತಿಯ ವ್ಯಕ್ತಿತ್ವಕ್ಕೆ ಅವಮಾನ. ಸೇವಕತ್ವ ಎನ್ನುವುದು ಗೌರವದ ಕೆಲಸ. ಅದನ್ನು ಕನಿಷ್ಠವಾಗಿ ಕಾಣಲು ಸಾಧ್ಯವಿಲ್ಲ. ಸೇವಕನಾದವನು ಮನೆಯ ಯಜಮಾನನಾಗಲು ಸಾಧ್ಯವ? ಗಡಿ ಕಾಯುವ ವ್ಯಕ್ತಿಗೆ ಸಿಗುವ ಗೌರವ ಸಾಮಾನ್ಯ ಕಸ ಗುಡಿಸುವ ವ್ಯಕ್ತಿಗೇಕೆ ಸಾಧ್ಯವಿಲ್ಲ ಎಂಬ ಪ್ರತಿಭಟನೆ ಅಕ್ಕಮ್ಮನವರದಾಗಿತ್ತು. ಬಡವನಾದವನು ಹಂಗಿನಲ್ಲಿ ಕಳ್ಳನಂತೆ ಬದುಕನ್ನ ಕಟ್ಟಿಕೊಳ್ಳಬೇಕೆ? ಪ್ರಗತಿ ಪ್ರಜಾಪ್ರಭುತ್ವದ ಧ್ಯೆಯ.
ಸೇವಕನ ಆತ್ಮವಿಶ್ವಾಸವನ್ನು ಹೆಚ್ಚಿಸಿ ಅವನನ್ನು ಸಮಾಜ ಗೌರವಿಸಬೇಕು ಎಂಬ ಧೋರಣೆಯನ್ನು ಈ ವಚನದಲ್ಲಿ ಕಾಣಬಹುದು. ಬಡತನ ಸಾಮಾನ್ಯ ಜ್ಞಾನದ ಕೊರತೆ ಇರುವವರನ್ನು ಸಮಾಜ ನಿರ್ಲಕ್ಷಿಸಿದೆ. ಕನಿಷ್ಠ ಗೌರವ ಸಾಮಾನ್ಯ ಮನುಷ್ಯನಿಗೂ ಸಿಗಬೇಕು. ಆತ ಪಡೆಯುವ ಉದ್ಯೋಗ ಹಣದಿಂದಲ್ಲ. ಎಲ್ಲಾ ಕೆಲಸಗಳು ಪವಿತ್ರ. ಈ ಅಸಮಾನತೆ ಹೋಗಬೇಕು. ಸಮಾಜದಲ್ಲಿ ಕೆಟ್ಟ ಚಟುವಟಿಕೆಗಳು ಕಡಿಮೆಯಾಗಿ ಶರಣರ ಮಾನವೀಯ ಮೌಲ್ಯಗಳನ್ನು ವೃದ್ಧಿಸಬೇಕು.
ತುಡುಗುಣಿಕಾರನ ನೇಮ ತನ್ನ ವೃತ್ತಿಯ ಬಗ್ಗೆ ಇರುವ ಗೌರವ ಪ್ರಾಮಾಣಿಕತೆಯನ್ನು ಪೋಷಿಸಿಕೊಂಡು ಅಂದು ಬಂದಿದ್ದರು. ಶರಣ ಉರಿಲಿಂಗಪೆದ್ದಿಯು ವೃತ್ತಿಯಲ್ಲಿ ಕಳ್ಳನಾಗಿ ನಂತರ ಶರಣನಾದ ವಿಚಾರವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸಹಜವಾಗಿಯೇ ಬ್ರಾಹ್ಮಣರು ಭೋಜನಪ್ರಿಯರು. ರುಚಿಕರ ಪೌಷ್ಟಿಕ ಆಹಾರವನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂದು ದೇಶದಲ್ಲಿ ಬಡವರಿಗೆ ಕೆಲವೆ ಆಹಾರ. ಅಂದರೆ ಮುದ್ದೆ ಸೊಪ್ಪು ಸಾರು, ರೊಟ್ಟಿ, ಗಂಜಿ ಇಷ್ಟಕ್ಕೆ ಸೀಮಿತವಾಗಿತ್ತು. ಸಮಾಜ ಶುದ್ಧತೆಯ ಜೊತೆಗೆ ವ್ಯಕ್ತಿಯ ಮಾನಾಪಮಾನಗಳನ್ನು ಗೌರವಿಸ ಬೇಕಾಗಿತ್ತು.
ಶ್ರೀಮಂತರುಣ್ಣುವ ಗಡಿಗೆಯ ತುಪ್ಪ ಹೆಡಿಗೆಯ ಮೃಷ್ಟಾನ್ನ ತುಡುಗುಣಿಯಂತೆ ತಿಂಬವಂಗೆ ಮತ್ತೊಡೆಯರ ಕಟ್ಟಳೆಯೇ?
ಕುಂಬಾರರು ಗಡಿಗೆಯನ್ನು ತಯಾರಿಸುತ್ತಾರೆ. ಮೇದಾರ ಕಾಯಕದವರು ಪುಟ್ಟಿಯನ್ನು ಹೆಣೆಯುವವ. (ಹೆಡಿಗೆ ಅಂದರೆ ಅಗಲವಾಧ ಬಾಯಿಯುಳ್ಳ ಬಿದಿರು ಪುಟ್ಟಿ)
ಶ್ರಮ ಎನ್ನುವುದು ಕೆಳವರ್ಗದ ಕೆಲಸಗಾರರಿಗೆ ಒತ್ತಾಯದ ದುಡಿಮೆ. ಸಮಾಜಕ್ಕೆ ನಾನು ಪರಕೀಯ ಎಂಬ ತಾರತಮ್ಯವನ್ನು ನಿವಾರಿಸಲು ಅಕ್ಕಮ್ಮನವರು ಈ ವಚನದಲ್ಲಿ ಸ್ಪಷ್ಟತೆಯನ್ನು ನೀಡಿದ್ದಾರೆ. ಶ್ರಮ ಸಂಸ್ಕೃತಿಯ ಕುಂಬಾರು, ಮೇದಾರರು ಮುಂತಾದ ಆಯಗಾರರು ಕಾಯಕ ಜೀವಿಗಳು. ಅವರು ತಯಾರಿಸಿದ ವಸ್ತುಗಳಲ್ಲಿ ಮೃಷ್ಟಾನ್ನವನ್ನು ಕಳ್ಳರಂತೆ ಸವಿದು ತಿನ್ನುವವರಿಂದ ಬಡವರ ಮೇಲೆ ಕಾನೂನು ಕಟ್ಟಳೆಯೇ?
ಶರಣರು ತಮ್ಮ ನಡೆ-ನುಡಿ, ಆತ್ಮಶುದ್ಧಿಯ ಮೂಲಕ ಲಿಂಗ ಧರ್ಮದ ಜಂಗಮ ಸೇವೆಗೆ ಸಿದ್ದರಾದರು. ಲಿಂಗ ಸಮಾನತೆಯ ಮೂಲಕ ಆತ್ಮ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಒಟ್ಟಿಗೆ ಆಗಬೇಕೆಂಬ ಆಶಯ ಶರಣರದು. ವ್ಯಕ್ತಿ ಶುದ್ಧಿಯಾದರೆ ಶ್ರಮ ಕೆಲಸಗಾರರ ಅಂತರಂಗ ಅರಳಿದರೆ ಸಮಾಜ ಶುದ್ದಿ ಸಾಧ್ಯವೆಂದು ಸಾಮಾಜಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಪ್ರತಿಭಟಿಸಿದರು. ಗುರುಲಿಂಗ ಜಂಗಮದ ಪ್ರತಿಪಾದನೆಯ ಅರಿವೇ ಗುರು, ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗವೆಂದು ಪ್ರಾಣಲಿಂಗಸ್ಥಲದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಿದರು ಶರಣೆ ಅಕ್ಕಮ್ಮ.
ಡಾ. ಸರ್ವಮಂಗಳ ಸಕ್ರಿ,
ಕನ್ನಡ ಉಪನ್ಯಾಸಕರು (ನಿ),
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ,
ಮಹಿಳಾ ಘಟಕ-ರಾಯಚೂರು ಜಿಲ್ಲೆ.
ರಾಯಚೂರು.
ಮೋಬೈಲ್ ಸಂ. 94499 46839.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in and admin@vachanamandara.in
![]()




Total views : 55985