
ಗಿರಿಯಲ್ಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ ನವಿಲು?
ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ?
ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ?
ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ
ಅನ್ಯಕ್ಕೆಳಸುವುದೆ ಎನ್ನ ಮನ?
ಪೇಳಿರೆ, ಕೆಳದಿಯರಿರಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-67/ವಚನ ಸಂಖ್ಯೆ-189)
ವೈರಾಗ್ಯನಿಧಿ ಅಕ್ಕಮಹಾದೇವಿಯವರು ವಚನಕಾರ್ತಿಯರ ಸಾಲಿನಲ್ಲಿ ಅಷ್ಟೆ ಅಲ್ಲದೆ ಒಟ್ಟಾರೆ ವಚನ ಸಾಹಿತ್ಯ ಪರಂಪರೆಯಲ್ಲೇ ಅತ್ಯಂತ ಶ್ರೇಷ್ಠ ವಚನಕಾರ್ತಿಯಾಗಿದ್ದಾರೆ. ಅದಕ್ಕೆಂದೇ ಅಕ್ಕಮಹಾದೇವಿಯರ ವಚನಗಳ ಶ್ರೇಷ್ಠತೆಯನ್ನು ಅವಿರಳಜ್ಞಾನಿ ವನ್ನಬಸವಣ್ಣನವರು ತಮ್ಮದೊಂದು ವಚನದಲ್ಲಿ ನಿರೂಪಿಸುವುದನ್ನು ನಾವು ನೆನಪಿಸಿಕೊಳ್ಳುವುದು.
ಆದ್ಯರ ಅರವತ್ತು ವಚನಕ್ಕೆ
ದಣ್ಣಾಯಕರ ಇಪ್ಪತ್ತು ವಚನ,
ದಣ್ಣಾಯಕರ ಇಪ್ಪತ್ತು ವಚನಕ್ಕೆ
ಪ್ರಭುದೇವರ ಹತ್ತುವಚನ,
ಪ್ರಭುದೇವರ ಹತ್ತು ವಚನಕ್ಕೆ
ಅಜಗಣ್ಣನ ಅಯ್ದು ವಚನ,
ಅಜಗಣ್ಣನ ಅಯ್ದು ವಚನಕ್ಕೆ
ಕೂಡಲಚೆನ್ನಸಂಗಮದೇವಾ,
ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-91/ವಚನ ಸಂಖ್ಯೆ-225)
ವಚನ ಸಾಹಿತ್ಯದ ಶ್ರೇಷ್ಠತೆಯೊಂದಿಗೆ ಮಹಿಳಾ ಸಾಹಿತ್ಯದ ಹರಿಕಾರಿಣಿಯಾಗಿ ಕನ್ನಡದ ಮೊದಲ ಅನುಭಾವಿ ಕವಿಯಿತ್ರಿಯಾಗಿ ಹೊರಹೊಮ್ಮಿದ ಅಕ್ಕಮಹಾದೇವಿಯವರು ಆಧ್ಯಾತ್ಮ ಲೋಕದ ಧೃವತಾರೆಯಂತೆ ಕಂಗೊಳಿಸಿದವರು. ಕಿರಿಯ ವಯೋಮಾನದ ಹಿರಿಯ ವ್ಯಕ್ತಿತ್ವ ಇವರದು.
ಅಜಕೋಟಿ ಕಲ್ಪ ವರುಷದವರೆಲ್ಲರು ಹಿರಿಯರೆ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರು ಹಿರಿಯರೆ?
ನಡುಬಾಗಿ ಗುಡುಗೂರಿ ತಲೆ ನಡುಗಿ
ನೆರೆತೆರೆ ಹೆಚ್ಚಿ ಮತಿಗೆಟ್ಟು
ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರು ಹಿರಿಯರೆ?
ಅನುವನರಿದು, ಘನವ ಬೆರಸಿ ಹಿರಿದು
ಕಿರಿದೆಂಬ ಭೇದವ ಮರೆದು,
ಕೂಡಲಚೆನ್ನಸಂಗಯ್ಯನಲ್ಲಿ ಬೆರಸಿ
ಬೇರಿಲ್ಲದಿಪ್ಪ ಹಿರಿಯತನ
ನಮ್ಮ ಮಹಾದೇವಿಯಕ್ಕಂಗಾಯಿತ್ತು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-372/ವಚನ ಸಂಖ್ಯೆ-921)
“ಘನವ ಬೆರಸಿ ಹಿರಿದು ಕಿರಿದೆಂಬ ಭೇದವ ಮೆರೆದು, ಕೂಡಲಚೆನ್ನ ಸಂಗಯ್ಯನಲ್ಲಿ ಬೆರಸಿ ಬೇರಿಲ್ಲದಿಪ್ಪ ಹಿರಿತನ” ಅಕ್ಕಮಹಾದೇವಿಯವರದು.
ಮಲೆನಾಡಿನ ಅನುಪಮ ಪ್ರಕೃತಿಯ ಸುಂದರ ತಾಣವಾದ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ತಾಲೂಕಿನ ಉಡುತಡಿಯಲ್ಲಿ “ಓಂಕಾರ ಶೆಟ್ಟಿ (ನಿರ್ಮಲಶೆಟ್ಟಿ) ಮತ್ತು ಲಿಂಗಮ್ಮ (ಸುಮತಿ)” ದಂಪತಿಗಳ ಉದರದಲ್ಲಿ ಮೂಡಿ ಧರೆಗಿಳಿದ ಅಕ್ಕಮಹಾದೇವಿಯವರು ದವನದ ಹುಣ್ಣಿಮೆಯೆಂದು ಬೆಳದಿಂಗಳೇ ಮೂರ್ತಿವೆತ್ತಂತೆ ದವನದ ಹುಣ್ಣಿಮೆಯಂದು ಜನಿಸಿದರು. ಅನೇಕ ಕೃತಿಗಳಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಶಿವಲಿಂಗದೇವರನ್ನು ಕರಸ್ಥಲಕ್ಕೆ ನೀಡಿದ ಗುರುದೇವ “ಗುರುಲಿಂಗದೇವಯ್ಯ” ಎಂದು ತಮ್ಮ ವಚನಗಳ ಮೂಲಕ ಸಾಕ್ಷೀಕರಣಗೊಳಿಸುವ ಅಕ್ಕಮಹಾದೇವಿಯವರ ಮಾತಿನಂತೆ ಇವರ ಗುರುಗಳು “ಗುರುಲಿಂಗದೇವರು” ಎಂಬುದು ಸಾಬೀತಾಗುತ್ತದೆ. ಮಹಿಳಾ ಶಿಕ್ಷಣವೇ ದುರ್ಲಭವಾದ ಕಾಲಘಟ್ಟದಲ್ಲಿ ಅಕ್ಕಮಹಾದೇವಿಯವರು ಗುರುಲಿಂಗದೇವರಿಂದ ಆಧ್ಯಾತ್ಮದ ಆತ್ಮ ವಿದ್ಯೆಯನ್ನೂ, ಲೌಕಿಕವಾದ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಾರೆ. ಈ ಕಾರಣದಿಂದಲೇ ಅವರು ಆ ಕಾಲಘಟ್ಟದಲ್ಲಿ ಶ್ರೇಷ್ಠ ಅನುಭಾವಿ ಕವಿಯಿತ್ರಿಯಾಗಿ ಹೊರಬರಲು ಸಾಧ್ಯವಾಯಿತು.
ಪದ ಪದವು ಧ್ವನಿಪೂರ್ಣವಾಗುವ, ಸಂಕ್ಷಿಪ್ತತೆಯಲ್ಲೂ ಸವಿಸ್ತಾರವಾದ ಅನುಭಾವ ದರ್ಶನ ನೀಡುವ, ಸರಳತೆಯಲ್ಲೇ ಸಾಕಾರವಾಗಿ ನಿಲ್ಲುವ, ಭಾವಪೂರ್ಣವಾದ, ಅಸಾಧಾರಣ ಅರ್ಥ ಸಾಮರ್ಥ್ಯವುಳ್ಳ, ಕನ್ನಡ ಭಾಷೆಗೆ ಕಸುವು ತುಂಬಿದ ವಿಶಿಷ್ಟವಾದ ಸಾಹಿತ್ಯವೇ ವಚನಸಾಹಿತ್ಯ. ಗದ್ಯದ ಸತ್ವವನ್ನು ಪದ್ಯದ ಗತಿಯನ್ನು ಪಡೆದುಕೊಂಡು ಓದಿಸಿಕೊಳ್ಳುವ, ಹಾಡಿಸಿಕೊಳ್ಳುವ ಶಕ್ತಿ ಇರುವ ವಿಶೇಷ ಸಾಹಿತ್ಯ ಪ್ರಾಕಾರವಿದು. ಈ ಎಲ್ಲಾ ಸಾಧ್ಯತೆಗಳನ್ನೂ ಅಕ್ಕಮಹಾದೇವಿಯವರ ವಚನಗಳು ಸಾಧಿಸಿಕೊಂಡಿವೆ.
ಅಕ್ಕಮಹಾದೇವಿಯವರ ಯಾವ ವಚನವನ್ನು ತೆಗೆದುಕೊಂಡರೂ ಐಹಿಕ ಬದುಕಿನಿಂದ ಕಳಚಿಕೊಳ್ಳುವ, ತನ್ನ ಆರಾಧ್ಯ ದೇವರಾದ ಚನ್ನಮಲ್ಲಿಕಾರ್ಜುನನಲ್ಲಿ ಬೆರೆಯುವ ಭಾವವು ಒಮ್ಮೊಮ್ಮೆ ಬೆಡಗು-ಬಿನ್ನಾಣವಾಗಿ, ಮತ್ತೊಮ್ಮೆ ಆತ್ಮ ನಿವೇದನೆಯಾಗಿ, ಮಗದೊಮ್ಮೆ ಆರ್ತನಾದವಾಗಿ, ಒಮ್ಮೊಮ್ಮೆ ಚೆನ್ನಮಲ್ಲಿಕಾರ್ಜುನನಿಗೂ ಕೂಡ ಸವಾಲಾಗಿ ನಿಲ್ಲುತ್ತದೆ. ಚನ್ನಮಲ್ಲಿಕಾರ್ಜುನನ ಸುತ್ತ ಸುತ್ತುವ ಅವರ ಭಾವಗಳಲ್ಲಿ ಅಪ್ರತಿಮವಾದ ತಾರ್ಕಿಕ ನೋಟಗಳು ಭಾಷಾ ವಿಶಿಷ್ಟತೆಯೊಂದಿಗೆ ನಿಗಿ-ನಿಗಿಸುತ್ತವೆ. ಹೀಗಾಗಿ ಒಮ್ಮೊಮ್ಮೆ ಅನಿಸುತ್ತದೆ ಇವರ ವಚನಗಳು ಹೂವು ಎಂದು ಮುಟ್ಟಲು ಹೋದರೆ ನಿಗಿ ನಿಗಿ ಕೆಂಡದಂತೆ ಸುಡುತ್ತವೆ ಎಂದು. ಅಷ್ಟೊಂದು ಭಾವ ತೀವ್ರತೆ ಅವುಗಳಲ್ಲಿದೆ. ಅಂತಹದ್ದೇ ಒಂದು ವಚನ ಈ ಪ್ರಸ್ತುತ ವಚನ.
ಪ್ರಕೃತಿಯೊಂದಿಗೆ ಸ್ನೇಹಭಾವ ಹೊಂದಿದ್ದ ಅಕ್ಕಮಹಾದೇವಿಯವರು, ಪ್ರಕೃತಿಯನ್ನು ಶೋಧಿಸಿ ಮಾತನಾಡಿಸಿದ ಅದ್ಭುತ ಸಂಶೋಧಕರು. “ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ” ಎನ್ನುವ ಕುವೆಂಪುರವರು ಹಾಗೂ Nature is Teacher ಎನ್ನುವ William Wordsworth ಇಬ್ಬರೂ ಕೂಡ ಪ್ರಕೃತಿಗೆ ಬೆರಗಾದವರು. 12 ನೇ ಶತಮಾನದಲ್ಲೇ ಪ್ರಕೃತಿಯ ವಿಸ್ಮಯತೆಯೊಂದಿಗೆ ಸಹಜವಾಗಿ ಬೆರೆಯುವ ಅಕ್ಕಮಹಾದೇವಿಯವರು ಸಕಲ ಚರಾಚರಗಳಲ್ಲಿ ದೈವತ್ವ ದರ್ಶಿಸಿದವರು. ಪ್ರಕೃತಿಯು ಅವರಿಗೆ ಗುರುವೂ ಹೌದು, ಪರಮಾತ್ಮನ ಸ್ವರೂಪವೂ ಹೌದು. ಇಲ್ಲಿ ತನ್ನ ಅಂತರಂಗವನ್ನು ಸ್ವಚ್ಛಂದವಾಗಿ ತೆರೆದಿಡುತ್ತಾ, ಪ್ರಕೃತಿಯೊಂದಿಗೆ ಮುಕ್ತವಾಗಿ ಮಾತನಾಡುತ್ತಾ ತನ್ನ ಏಕಾಂಗಿತನವನ್ನು ಕಳೆದುಕೊಂಡು ಇಡೀ ಪರಿಸರದ ಗಿಡ, ಮರ, ಬಳ್ಳಿ, ಹೂ, ಭ್ರಮರ, ಪ್ರಾಣಿ, ಪಕ್ಷಿಗಳನ್ನೆಲ್ಲಾ ತನ್ನ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ ಅಕ್ಕಮಹಾದೇವಿಯವರು. ಅಂತೆಯೇ ಈ ವಚನದಲ್ಲಿ ಗಿರಿ-ನವಿಲು, ಕೊಳ-ಹಂಸ, ಮಾಮರ-ಕೋಗಿಲೆ, ಪರಿಮಳ-ಭ್ರಮರ ಇವುಗಳನ್ನು ಬಳಸಿಕೊಂಡು ಆಧ್ಯಾತ್ಮದ ನೆಲೆಗೇರುವ ಪ್ರತಿಮಾತ್ಮಕತೆ ಅಕ್ಕಮಹಾದೇವಿಯವರ ಭಾವ, ಭಾಷಾ ಶಕ್ತಿಗೆ ನಿದರ್ಶನವಾಗಿದೆ. ಇಲ್ಲಿಯ ಉಪಮಾನಗಳು ಒಂದಕ್ಕಿಂತ ಒಂದು ಅನನ್ಯವಾಗಿದೆ.
ಮೇಲ್ನೋಟಕ್ಕೆ ಕಾಣುವ ವಚನದ ಅರ್ಥ ಹೀಗಿದೆ. ನವಿಲು ಕರಿಮೋಡ ಕಂಡು ಗಿರಿ (ಬೆಟ್ಟ) ಯ ಮೇಲೆ ಸಂತೋಷವಾಗಿ ನರ್ತಿಸುವುದಲ್ಲದೇ ಯಾವುದಾದರೂ ಹುಲ್ಲು ಮೊರಡಿಯಲ್ಲಿ ನರ್ತಿಸುವುದೇ? ಇಲ್ಲ. ಹಾಗೆಯೇ ವಿಶಾಲವಾದ ಕೊಳವನ್ನು ಬಿಟ್ಟು ಸಣ್ಣ ಹಳ್ಳದಲ್ಲಿ ಹಂಸವು ವಿಹರಿಸುವುದೇ? ಇಲ್ಲ. ಮಾಮರವು ಚಿಗುರಿದಾಗ ಅದರ ರಸವನ್ನು ಕುಡಿದಾಗ ಕೋಗಿಲೆಗೆ ಹಾಡಲು ಸಾಧ್ಯವಾವುದು. ಯಾವ ಹೂವಿನ ಪರಮಳ ಗಾಢವಾಗಿರುವುದೋ ಅಲ್ಲಿ ಭ್ರಮರ (ದುಂಬಿ) ಆಕರ್ಷಿತವಾಗುವುದು. ಅಂತೆಯೇ ಚನ್ನಮಲ್ಲಿಕಾರ್ಜುನನಿಗಲ್ಲದೇ ನನ್ನ ಮನಸ್ಸು ಅನ್ಯವಿಷಯಕ್ಕೆ ಗಮನವೀಯದು ಎಂಬಲ್ಲಿ ಗಿರಿಗೂ ನವಿಲಿಗೂ; ಕೊಳಕ್ಕೂ ಹಂಸಕ್ಕೂ; ಮಾಮರದ ಚಿಗುರಿಗೂ ಕೋಗಿಲೆಗೂ, ಹೂವಿನ ಪರಿಮಳಕ್ಕೂ, ಭ್ರಮರಕ್ಕೂ; ಒಂದು ಅವಿನಾಭಾವ ಸಂಬಂಧ ಇರುವಂತೆ ನನಗೂ ಚನ್ನಮಲ್ಲಿಕಾರ್ಜುನನಿಗೂ ಅವಿನಾಭಾವ ಸಂಬಂಧವಿದೆ ಎಂದು ತಿಳಿದುಕೊಳ್ಳಲು ಸಾಧ್ಯತೆ ಇವೆ. ಇದು ಲೌಕಿಕವಾದ ವಿಚಾರ.
ಆದರೆ ಆಧ್ಯಾತ್ಮಿಕವಾಗಿ ಈ ವಚನದ ಅರ್ಥ ವೈಶಾಲ್ಯತೆ ವ್ಯಾಪಕವಾಗಿದೆ. “ಗಿರಿ” ಎಂದರೆ ಎತ್ತರದ ಸ್ಥಳ ಇದನ್ನು ಜ್ಞಾನಕ್ಕೆ ಹೋಲಿಕೆ ಮಾಡಬಹುದಾದರೆ, ಯಾವಾಗ ಮನಸ್ಸು ಲೌಕಿಕ ವಿಷಯಾಸಕ್ತಿಯಿಂದ ದೂರವಾಗುವುದೋ ಆಗ ಆ ಮನಸ್ಸು ಬಹು ಎತ್ತರವಾಗುವುದು. ಗುರುವಿನಿಂದ ದೊರೆತ ಉಪದೇಶ ಮನಸ್ಸನ್ನು ಅವರಿಸಿ ಜ್ಞಾನ ಪಕ್ವವಾಗಿ, ಜ್ಞಾನವೆಂಬ ನವಿಲು ಆಗ ಸಂತೋಷದಿಂದ ಗರಿ ಬಿಚ್ಚಿ ಕುಣಿಯುತ್ತದೆ. ಎತ್ತರವಾದ ಮನವೆಂಬ ಗಿರಿಯ ಮೇಲೆ ಜ್ಞಾನವೆಂಬ ನವಿಲು ನರ್ತಿಸುತ್ತದೆ. ಹಾಗೆಯೇ “ಕೊಳ” ಎಂದರೆ ನಿರ್ಮಲವಾದದ್ದು ಅಥವಾ ನಿರ್ಮಲವಾದ ಭಾವ ಎಂದರ್ಥ. ಭಾವ ನಿರ್ಮಲವಾದಾಗ ಮಾತ್ರ ಜ್ಞಾನದ ಹಂಸ ವಿಹರಿಸಲು ಸಾಧ್ಯ. ಪಕ್ವವಾದ ಜ್ಞಾನ ನಿರ್ಮಲವಾದ ಭಾವದಲ್ಲಿ ಇರುವುದೇ ವಿನಃ ಕೊಳಕು ಸ್ಥಳಕ್ಕೆ ಅಂದರೆ ಕೀಳು ಜಾಗದಲ್ಲಿ ಇರುವುದಿಲ್ಲ. “ಮಾಮರದ ಚಿಗುರು” ಎಂಬುದು ಕೋಗಿಲೆಯ ದೆನಿಗೆ “ಜೀವರಸ” ಎಂದರೆ ಜೀವಕಾರುಣ್ಯ. ಈ ಜೀವಕಾರುಣ್ಯವು ಎತ್ತರವಾದ ಮನಸ್ಸು, ನಿರ್ಮಲ ಭಾವದೊಂದಿಗೆ ಹೊಮ್ಮುವ ಭಕ್ತಿರಸ. ಜ್ಞಾನ-ಭಾವ-ಭಕ್ತಿಗಳ ಸಮ್ಮಿಲನ ಭಕ್ತಿರಸವಾಗಿ ಸಾಧಕ-ಭಕ್ತನಾಗುವ ಹಂತವಿದು. ಜ್ಞಾನವು-ಭಕ್ತಿಮಾರ್ಗಕ್ಕೆ ಕೊಂಡೊಯ್ದು ನಂತರ ಜಂಗಮವಾಗುವ ಹಂತ. ಇದರ ಸಂಕೇತವೇ “ಹೂವಿನ ಪರಿಮಳ”. ಪರಿಮಳ ನಿಂತಲ್ಲಿ ನಿಲ್ಲುವುದಿಲ್ಲ. ಅದು ಗಾಳಿಯೊಂದಿಗೆ ಪಸರಿಸುತ್ತದೆ. ಭ್ರಮರ ಆ ಪರಿಮಳವನ್ನು ಅರಸುತ್ತಾ ಎಲ್ಲೆಲ್ಲಿ ಆ ಪರಿಮಳ ಸಿಗುವುದೋ ಅಲ್ಲಲ್ಲಿ ಹೋಗಿ ಮಕರಂದವನ್ನು ಸಂಗ್ರಹಿಸುತ್ತದೆ. ಇಲ್ಲಿ ಹೂವಿನ ಪರಿಮಳ ಪಸರಿಸುವಿಕೆಯನ್ನು ಸಾಂಕೇತಿಸಿದರೆ, ಭ್ರಮರ ಸಂಗ್ರಹ ಶಕ್ತಿಯ ದ್ಯೋತಕ, ಜ್ಞಾನ ಸಂಗ್ರಹಿಸಿ ಪಸರಿಸುವ ಹಂತವೇ ಜಂಗಮತ್ವದ ಲಕ್ಷಣಗಳು.
ಎತ್ತರ ಎತ್ತರಕ್ಕೆ ಹೋಗುವ ಮನಸ್ಸು ಜ್ಞಾನದ ನವಿಲಿಗೆ ಆವಾಸ್ಥಾನವಾಗುವಂತೆ, ನಿರ್ಮಲವಾದ ಭಾವ ಅರಿವಿಗೆ ಆವಾಸ್ಥಾನವಾಗುವಂತೆ, ಜೀವಕಾರುಣ್ಯ ಭಕ್ತಿರಸಕ್ಕೆ ಆವಾಸ್ಥಾನವಾಗುವಂತೆ, ಗಾಳಿಯೊಂದಿಗೆ ಬೆರೆತು ಹೋಗುವ ಪರಿಮಳದಂತೆ ಎಲ್ಲರೊಳಗೆ ಒಂದಗುವ ಜಂಗಮತ್ವವು ಲಿಂಗಾಂಗ ಸಾಮರಸ್ಯಕ್ಕೆ ಆವಾಸ್ಥಾನವಾಗುವಂತೆ ನನ್ನ ಮನಸ್ಸು ಸದಾ ಚನ್ನಮಲ್ಲಿಕಾರ್ಜುನನ ಆವಾಸ್ಥಾನವಾಗಿದೆ. ಇಲ್ಲಿ ಅನ್ಯ ವಿಷಯಕ್ಕೆ ಆಸ್ಪದವೇ ಇಲ್ಲ ಎಂದು ಹಲವು ರೂಪಕ, ದೃಷ್ಟಾಂತಗಳ ಮೂಲಕ ಐಹಿಕ ಅಥವಾ ಸಂಸಾರ ಬಂಧನಗಳಿಂದ ಅಲಿಪ್ತವಾಗುತ್ತಿರುವ ತನ್ನ ಮನಸ್ಥಿತಿಯನ್ನು ನಿವೇದಿಸಿಕೊಳ್ಳುವ ಒಂದು ಅರ್ಥ ಗರ್ಭಿತವಾದ ವಚನವಿದು. ಭಕ್ತಸ್ಥಲದಲ್ಲಿ ನೆಲೆನಿಂತ ಅಕ್ಕಮಹಾದೇವಿಯವರು ಮುಂದೆ ಒಂದೊಂದೇ ಸ್ಥಲವನ್ನು ಏರುವ ಹಂತಗಳಲ್ಲಿ ಈ ವಚನ ಧ್ವನಿಸುತ್ತದೆ.
ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in