
ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು.
ಎನ್ನ ನೋಟಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.
ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.
ಎನ್ನ ಹೃದಯಕ್ಕೆ ಮಂತ್ರವಾದನಯ್ಯಾ ಮಡಿವಾಳಯ್ಯನು.
ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು
ಬದುಕಿದೆನಯ್ಯಾ ಅಜಗಣ್ಣತಂದೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-396 / ವಚನ ಸಂಖ್ಯೆ-1104)
ಶ್ರೇಣೀಕೃತ ವರ್ಗಭೇದ ಮತ್ತು ಲಿಂಗ ಅಸಮಾನತೆ ತಾಂಡವವಾಡುತ್ತಿದ್ದ 12 ನೇ ಶತಮಾನದ ಕಾಲಘಟ್ಟದಲ್ಲಿ ವಚನ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿದವರಲ್ಲಿ ಬಸವಾದಿ ಶರಣರು ಪ್ರಮುಖರು. “ಶಬ್ದೋ ಕೋ ಊಂಚಾಯಿ ದೋ … ಆವಾಜ ಕೋ ನಹಿ” ಎನ್ನುವಂತೆ ಇಡೀ ಪ್ರಪಂಚಕ್ಕೆ ತಮ್ಮ ಅಕ್ಷರಗಳ ಅನುಪಮ ಜೋಡಣೆಯೊಂದಿಗೆ ತಮ್ಮ ನಡೆ-ನುಡಿ ಸಿದ್ಧಾಂತಕ್ಕೆ Immaculate ಅಥವಾ without any mistakes ಅಥವಾ perfect ಎನ್ನುವ ಹಾಗೆ ಸದ್ದು ಗದ್ದಲವಿಲ್ಲದೇ ಚಿತ್ರಣವನ್ನು ನೀಡಿದವರು ಬಸವಾದಿ ಶರಣ-ಶರಣೆಯರು. ಮಹಿಳೆಯರು ಮನೆಬಿಟ್ಟು ಹೊರಗೆ ಬರಲಾರದಂಥ ಕಾಲಘಟ್ಟದಲ್ಲಿ ಮಹಿಳೆಯರಿಗೂ ಆತ್ಮಗೌರವ ನೀಡಿ, ಅಕ್ಷರಲೋಕಕ್ಕೆ ಪರಿಚಯಿಸಿದ ಕಾಲಘಟ್ಟ.
ವಚನ ಸಾಹಿತ್ಯದಲ್ಲಿ ಸರಿ ಸುಮಾರು 250 ಕ್ಕೂ ಹೆಚ್ಚು ಶರಣೆಯರ ಉಲ್ಲೇಖ ಬರುತ್ತದೆ (ಡಾ. ವೀರಣ್ಣ ದಂಡೆಯವರ “ಕಲ್ಯಾಣದ ಶರಣರು” ಪುಸ್ತಕವನ್ನು Refer ಮಾಡಬಹುದು). ಹೆಸರುಗಳು ಒಂದಕ್ಕೊಂದು ಸೇರಿರಬಹುದು. ಮಹಾದೇವಿ ಅಂತಾನೇ ಸುಮಾರು 8/9 ಶರಣೆಯರ ಹೆಸರುಗಳಿವೆ. ಗುಡ್ಡವ್ವೆ ಅಂತಾನೇ 3 ಹೆಸರುಗಳಿವೆ. ಒಟ್ಟಾರೆ ವಚನ ಸಾಹಿತ್ಯದಲ್ಲಿ If we delete the cross-reference names, ನಮಗೆ ಸುಮಾರು 235 ಶರಣೆಯರ ಉಲ್ಲೇಖ ಸಿಗುತ್ತದೆ.
ಅದರಲ್ಲಿ ಪ್ರಮುಖವಾಗಿ 39 ಶರಣೆಯರು ವಚನಗಳನ್ನು ಬರದಿರುವ ಉಲ್ಲೇಖ ಇದೆ. ಕೆಲವರು ಒಂದೊಂದೇ ವಚನಗಳನ್ನು ಬರೆದಿದ್ದಾರೆ. ವಚನ ಸಾಹಿತ್ಯದ ಬೆಳಕಿನಲ್ಲಿ ಈ ಶರಣೆಯರು ಸುಮಾರು 1350 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಸಂಸ್ಕೃತ ಭಾಷೆಯ ವೇದ-ಉಪನಿಷತ್ತುಗಳ ಆರ್ಯ ಸಂಸ್ಕೃತಿ ಸಾಹಿತ್ಯದ ಆಲದ ಮರದ ನೆರಳಿನಲ್ಲಿ ಕನ್ನಡದಲ್ಲಿಯೇ ವಚನಗಳನ್ನು ರಚಿಸಿದ್ದು ಅಪರೂಪದಲ್ಲಿ ಅಪರೂಪ ಮತ್ತು ಅನುಪಮ ಸಂಗತಿ. ಕನ್ನಡ ಸಾಹಿತ್ಯ ಲೋಕದಲ್ಲಿ ಇದನ್ನು ವಚನ ಸಾಹಿತ್ಯ ಕ್ರಾಂತಿಯೆಂದೇ ಕರೆಯಲಾಗುತ್ತದೆ. ಆಧ್ಯಾತ್ಮಿಕ ಅನುಬಾವದ ಅಭಿವ್ಯಕ್ತಿಯ ದೃಷ್ಟಿಯಿಂದ ನೋಡಿದರೆ ವಚನಕಾರ್ತಿಯರು ಯಾರಿಗೂ ಕಡಿಮೆಯಿಲ್ಲದಂತೆ ವಿಪುಲವಾದ ಸಾಹಿತ್ಯವನ್ನು ಸೃಷ್ಟಿ ಮಾಡಿದ್ದಾರೆ.
ತಮ್ಮ ಭಾವನೆಗಳನ್ನು, ಅನುಭವಗಳನ್ನು ಮತ್ತು ಅನುಭಾವಗಳನ್ನು ಅದ್ಭುತವಾಗಿ ತಮ್ಮ ವಚನಗಳಲ್ಲಿ ಹಿಡಿದಿಟ್ಟಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಮೂರ್ತಿರೂಪ ಅಕ್ಕಮಹಾದೇವಿ, ಕಾಯಕನಿಷ್ಠೆಯ ಆಯ್ದಕ್ಕಿ ಲಕ್ಕಮ್ಮ, ಸದುವಿನಯದ ಸತ್ಯಕ್ಕ, ಅಕ್ಕ ನಾಗಲಾಂಬಿಕೆ, ಅಕ್ಕ ಗಂಗಾಂಬಿಕೆ, ಅಕ್ಕ ನೀಲಾಂಬಿಕೆ, ಗೊಗ್ಗವ್ವೆ, ಕದಿರೆ ರೆಮ್ಮವ್ವೆ, ಮೋಳಿಗೆ ಮಹಾದೇವಿ, ಬೊಂತಾದೇವಿ, ಅಕ್ಕಮ್ಮ, ಆಮುಗೆ ರಾಯಮ್ಮನವರಂಥ ಪ್ರಬುದ್ಧ ವಚನಕಾರ್ತಿಯರು ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. 900 ವರ್ಷಗಳ ಹಿಂದೆ, ಕೇವಲ ಎರಡೇ ಎರಡು ದಶಕಗಳಲ್ಲಿ ಒಂದು ಸಮಸಮಾಜವನ್ನು ಕಟ್ಟುವಲ್ಲಿ ಮತ್ತು ಅದ್ಭುತ ಭಕ್ತಿಯಾಧಾರಿತ ವಚನ ಚಳುವಳಿ ರೂಪಿತವಾದ್ದು, ಚೈತನ್ಯ ಮತ್ತು ಶಕ್ತಿಯನ್ನು ಹುಟ್ಟು ಹಾಕಿದ್ದು ಇಡೀ ಪ್ರಪಂಚದಲ್ಲಿಯೇ ಒಂದು ಅದ್ಭುತ ನಿದರ್ಶನ.
Mystic Messiah, ವ್ಯೋಮಮೂರ್ತಿ ಅಲ್ಲಮಪ್ರಭುಗಳಿಗೆ ಸರಿ ಸಮನಾಗಿ ನಿಂತುಕೊಂಡು ಆಧ್ಯಾತ್ಮಿಕ ಸಂವಾದ ಚಿಂತನ ಮತ್ತು ಚರ್ಚೆಗಳನ್ನು ಮಹಿಳಾ ವಚನಕಾರ್ತಿಯರು ಮಾಡಿದವರು. ಅಷ್ಟೇ ಅಲ್ಲಾ “ನೀವು ಮಾಡತಾ ಇರೋದು ಸರೀನಾ ಅಥವಾ ಸತ್ಯಾನಾ? ಅಂತಾ ಅಲ್ಲಮ ಪ್ರಭುಗಳನ್ನೇ ಪ್ರಶ್ನೆ ಮಾಡಿದ ಮಹಿಳೆಯರು ಜ್ಞಾನನಿಧಿ ಮುಕ್ತಾಯಕ್ಕ ಮತ್ತು ವೈರಾಗ್ಯನಿಧಿ ಅಕ್ಕಮಹಾದೇವಿಯವರು. ಅಲ್ಲಮಪ್ರಭುಗಳು ಮನಸಾರೆ ಮೆಚ್ಚಿಕೊಂಡು ಅಭಿಮಾನ ಪಟ್ಟಿದ್ದು ಒಬ್ಬರು ಶರಣೆ ಅಕ್ಕ ಮಹಾದೇವಿ ಇನ್ನೊಬ್ಬರು ಶರಣೆ ಮುಕ್ತಾಯಕ್ಕ. ಈ ಲೇಖನದ ಮೂಲಕ ಅಜಗಣ್ಣ ಮತ್ತು ಮುಕ್ತಾಯಕ್ಕರವರ ಕಥಾನಕವನ್ನು ಪ್ರಸ್ತುತ ಪಡಿಸುವ ಈ ಸದಾವಕಾಶ ನನಗೆ ಕೂಡಲಸಂಗಮದೇವರ ಪ್ರಸಾದ ಮತ್ತು ಬಸವಣ್ಣನವರ ಆಶೀರ್ವಾದ.
12 ನೇ ಶತಮಾನದಲ್ಲಿದ್ದ ಅಜಗಣ್ಣ ಮತ್ತು ಮುಕ್ತಾಯಕ್ಕನವರು ಈಗಿನ ಗದಗ ಜಿಲ್ಲೆಯ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದವರು. ವ್ಯವಸಾಯವನ್ನು ತಮ್ಮ ಕಾಯಕವನ್ನಾಗಿಸಿಕೊಂಡಿದ್ದ ಸದಾಚಾರ ಸಂಪನ್ನರ ಮನೆತನದಲ್ಲಿ ಅಣ್ಣ-ತಂಗಿಯರಾಗಿ ಜನಿಸುತ್ತಾರೆ. ಅಜಗಣ್ಣನವರು ಮುಕ್ತಾಯಕ್ಕನವರಿಗೆ ಅಣ್ಣನಲ್ಲದೇ ಆಧ್ಯಾತ್ಮಿಕ ಗುರುವಾಗಿದ್ದರು. ಅಣ್ಣ-ತಂಗಿಯರು ಅನ್ಯೋನ್ಯತೆಗೆ ಸಾಕ್ಷಿಯಾಗಿದ್ದರು. ಬಹುಶಃ ನನಗೆ ತಿಳಿದ ಮಟ್ಟಿಗೆ ಪ್ರಪಂಚದಲ್ಲಿ ಅಣ್ಣ-ತಂಗಿಯರ ಸಂಬಂಧ ಇಷ್ಟು ಪ್ರೀತಿ ಇಷ್ಟು ವಿಶ್ವಾಸ ದಾಖಲೆಯಾಗಿ ಉಳಿಯುವಂಥದ್ದು. ಅದು ದೇಹ ಮತ್ತು ಮನಸ್ಸನ್ನು ಮೀರಿದ ಏಕೋದರರ ಪ್ರೀತಿ. ಅಣ್ಣ-ತಂಗಿಯರ ಈ ಪ್ರೀತಿ ಅನುಭೂತಿ ಚರಿತ್ರೆಯಲ್ಲಿ ಅಸಾಮಾನ್ಯ ಮಾದರಿ.
ಅಜಗಣ್ಣನವರು, ಹೆಚ್ಚು ಪ್ರಚಾರ ಬಯಸದ ಮತ್ತು ತಮ್ಮ ಗುಪ್ತ ಭಕ್ತಿಯಿಂದ ಆಧ್ಯಾತ್ಮಿಕ ಲೋಕದಲ್ಲಿ ಅಸಾಮಾನ್ಯ ಎತ್ತರಕ್ಕೆ ಏರಿದಂಥಾ ಶರಣರು. “ಅಜ” ಎಂದರೆ ಬ್ರಹ್ಮ. ತಮಿಳಿನಲ್ಲಿ ಅಯ್ಯ, ತೆಲುಗಿನಲ್ಲಿ ಗಾರು ಅನ್ನೋ ಹಾಗೆ “ಅಣ್ಣ” ಎನ್ನುವುದು ಗೌರವದ ಸಂಕೇತ. ಅದಕ್ಕಾಗಿ ಬ್ರಹ್ಮತ್ವವನ್ನು ಏರಿದವನು “ಅಜಗಣ್ಣ” ಅಂತಾ ತಿಳಿಯಬಹುದು.
ಓರಗೆಯ ಗೆಳೆಯರೊಡನೆ ಆಟವಾಡುವಾಗ ಅವನ ಗೆಳೆಯರು ಲಿಂಗವನ್ನು ಕಸಿದುಕೊಳ್ಳಲು ಹೋದಾದ “ಓಂ ನಮಃ ಶಿವಾಯ” ಅಂತಂದು ನುಂಗಿಬಿಟ್ಟನು. ಅದು ಅವನ ಅಮಳೋಕ್ಯ (ಅಮಳೋಕ್ಯ ಅಂದರೆ ದವಡೆ ಮತ್ತು ಗಂಟಲ ಮಧ್ಯೆ ಇರುವ ಸ್ಥಳ) ದಲ್ಲಿ ನಿಂತಿಬಿಟ್ಟಿತು. ಶಿವಭಕ್ತರ ಮನೆಯಲ್ಲಿ ಹುಟ್ಟಿ ಲಿಂಗವನ್ನು ಅಂತರಂಗದಲ್ಲಿ ಮುಚ್ಚಿಟ್ಟುಕೊಂಡು, ಮನೆಗೆ ಬಂದಾಗ ಕೊರಳಲ್ಲಿ ಇಷ್ಟಲಿಂಗವು ಕಾಣದಾದಾಗ ಅವನನ್ನು ಮನೆಯಿಂದ ಹೊರಗೆ ಹಾಕಿದರು. ಅಜಗಣ್ಣನವರ ಜೊತೆಗೆ ತಂಗಿ ಮುಕ್ತಾಯಕ್ಕನವರೂ ಹೊರಟರು.
ಅಣ್ಣ-ತಂಗಿಯರಿಬ್ಬರೂ “ಅಡಕ” ಎನ್ನುವ ಗ್ರಾಮದಲ್ಲಿದ್ದ ಸೋದರ ಮಾವನ ಮನೆಗೆ ಬರುತ್ತಾರೆ. ಸೋದರ ಮಾವ ಅವರನ್ನು ಪ್ರೀತಿಯಿಂದ ಸಾಕಿದ್ದಲ್ಲದೇ ತನ್ನ ಮಗಳನ್ನು ಅಜಗಣ್ಣನಿಗೆ ಕೊಟ್ಟು ಮದುವೆ ಮಾಡುತ್ತಾರೆ. ಅತ್ಯಂತ ಸೂಕ್ಷ್ಮ ಸ್ವಭಾವದವರಾದ ಅಜಗಣ್ಣನವರು ಕಡಿಮೆ ಮಾತನಾಡುತ್ತಿದ್ದರು. ಇದಕ್ಕಾಗಿ ಅವರ ಹೆಂಡತಿ ಉದಾಸೀನ ಮಾಡತಿದ್ದಳು. ಅಷ್ಟೇನೂ ಸುಮಧುರ ದಾಂಪತ್ಯ ಇರಲಿಲ್ಲ ಅಂತ ಹಲಗೆ ಆರ್ಯರು ತಮ್ಮ ಶೂನ್ಯಸಂಪಾದನೆಯಲ್ಲಿ ವಿಚಾರ ವ್ಯಕ್ತಪಡಿಸುತ್ತಾರೆ. ಮುಂದೆ ಮುಕ್ತಾಯಕ್ಕನವರಿಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಸಳಿಕಲ್ಲು ಎನ್ನುವ ಗ್ರಾಮದ ವರನೊಂದಿಗೆ ಮದುವೆ ಆಗುತ್ತದೆ. ಮುಕ್ತಾಯಕ್ಕನವರ ಜೊತೆಗೆ ಅಜಗಣ್ಣನವರೂ ಕೂಡ ಮಸಳಿಕಲ್ಲು ಗ್ರಾಮಕ್ಕೆ ಬಂದರು ಎನ್ನುವುದು ಶೂನ್ಯಸಂಪಾದನೆಯಲ್ಲಿ ವ್ಯಕ್ತವಾದ ವಿವರ.
ಕರ್ನಾಟಕದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗ್ರಾಮ ಮಸಳಿಕಲ್ಲು. ಕಲ್ಮಲ ಮತ್ತು ದೇವದುರ್ಗದ ಹೆದ್ದಾರಿಯಲ್ಲಿ ಬರುವಂಥ ಒಂದು ಗ್ರಾಮ. ಹರಿದಾಸ ಸಂಪ್ರದಾಯದ ದಾಸಚತುಷ್ಟಯ (ಪುರಂಧರದಾಸರು, ವಿಜಯದಾಸರು, ಗೋಪಾಲದಾಸರು ಮತ್ತು ಜಗನ್ನಾಥದಾಸರು) ರಲ್ಲಿ ಒಬ್ಬರಾದ ಶ್ರೀ ಗೋಪಾಲದಾಸರ ಜನ್ಮಸ್ಥಳ ಮಸಳಿಕಲ್ಲು. ಇದಕ್ಕೆ ಮಸರಿಕಲ್ಲು, ಮೊಸರುಕಲ್ಲು ಎಂದೂ ಕೂಡ ಕರೆಯಲಾಗುತ್ತದೆ. ಶ್ರೀ ಗೋಪಾಲದಾಸರು 18 ನೇ ಶತಮಾನದ ಕಾಲಘಟ್ಟದಲ್ಲಿದ್ದಂಥ ದಾಸವರೇಣ್ಯರು.
ಹಲವಾರು ಪುರಾಣಗಳು, ಶೂನ್ಯ ಸಂಪಾದನೆ, ರಗಳೆಗಳು ಕೃತಿಗಳು ಬೇರೆ ಬೇರೆ ಕಾಲದಲ್ಲಿ ರಚನೆಯಾಗಿವೆ. ವಚನ ಸಂಕಲನ-ಸಂಪಾದನೆಗಳ ಮೂಲಕ ಭಕ್ತಿ ತತ್ವದ ಅನುಭಾವವನ್ನು ಚಿತ್ರಿಸುವ ಅನೇಕ ಕೃತಿಗಳಲ್ಲಿ “ಶೂನ್ಯ ಸಂಪಾದನೆ” ಯೂ ಒಂದು. ಅಲ್ಲಮ ಪ್ರಭುದೇವರು ಅದರ ಹೃದಯ ಮತ್ತು ಬಸವಾದಿ ಶರಣರು ಅದರ ಅಂಗಾಂಗಗಳು.
ಈ ಎಲ್ಲ ಗ್ರಂಥಗಳಲ್ಲಿ ಅಜಗಣ್ಣ ಮತ್ತು ಮುಕ್ತಾಯಕ್ಕನವರ ಜೀವನವನ್ನು ಅತ್ಯಂತ ಮಾರ್ಮಿಕವಾಗಿ ನಿರೂಪಣೆಯಾಗಿದೆ. ಅಜಗಣ್ಣನವರು ಅಮಳೋಕ್ಯದಲ್ಲಿ ಲಿಂಗವನ್ನು ಧರಿಸಿದ್ದರು ಎನ್ನುವುದನ್ನು ಶೂನ್ಯ ಸಂಪಾದನೆಗಳಲ್ಲಿ ವಿವರಿಸಿದ್ದಾರೆ.
ಶಿವಗಣಪ್ರಸಾದಿ ಮಹದೇವಯ್ಯನವರ ಶೂನ್ಯ ಸಂಪಾದನೆಯನ್ನು ಹಲಗೆ ಆರ್ಯರವರು ಕ್ರಿ. ಶ. 1495 ರಲ್ಲಿ ಪರಿಷ್ಕರಣೆ ಮಾಡತಾರೆ. ಅದರಲ್ಲಿನ ಕಥಾನಕದಂತೆ ಅಜಗಣ್ಣನವರು ಓರಗೆಯ ಗೆಳೆಯರೊಡನೆ ಆಟವಾಡುವಾಗ ಗೆಳೆಯರು ಇಷ್ಟಲಿಂಗವನ್ನು ಕಸಿದುಕೊಳ್ಳಲು ಹೋದಾದ “ಓಂ ನಮಃ ಶಿವಾಯ” ಎನ್ನುತ್ತಾ ನುಂಗಿಬಿಟ್ಟರು. ಅದು ಅವರ ಅಮಳೋಕ್ಯದಲ್ಲಿ ನಿಂತಿಬಿಟ್ಟಿತು ಅಂತಾ ಪ್ರಸ್ತಾಪ ಮಾಡುತ್ತಾರೆ.
ಕ್ರಿ. ಶ. 1650 ರಲ್ಲಿ ʼಸಿದ್ಧನಂಜೇಶʼ ಬರೆದ “ಗುರುರಾಜ ಚಾರಿತ್ರ್ಯ” ಮತ್ತು ಕ್ರಿ. ಶ. 1672 ರಲ್ಲಿ ʼಶಾಂತಲಿಂಗ ದೇಶಿಕʼ ಬರೆದಂಥ “ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ” ಎನ್ನುವ ಕೃತಿಗಳಲ್ಲಿ ಅಜಗಣ್ಣನವರ ಇಷ್ಟಲಿಂಗ ವೃತ್ತಾಂತವನ್ನು ತಿಳಿಸಿದ್ದಾರೆ. ಮುಕ್ತಾಯಕ್ಕನವರು ಮದುವೆ ಆಗಿ ಮಸಳಿಕಲ್ಲು ಗ್ರಾಮಕ್ಕೆ ಹೋದಾಗ ಅವರ ಜೊತೆ ಅಜಗಣ್ಣವರು ಬಂದು ಅಲ್ಲಿಯೇ ಬೇಸಾಯ ಮಾಡಿಕೊಂಡಿರುತ್ತಾರೆ. ಒಂದು ರಾತ್ರಿ ಕಡಲೆ ಬೆಳೆದ ಹೊಲಕ್ಕೆ ಕಾಯಲು ಹೋಗಿರುತ್ತಾರೆ. ಅಲ್ಲಿ ಹಾವು ತನ್ನ ಹೆಡೆಯ ಮೇಲೆ ರತ್ವನ್ನು ಇಟ್ಟುಕೊಂಡು ಅದರ ಬೆಳಕಿನಲ್ಲಿ ಆಹಾರವನ್ನು ಹುಡುಕುತ್ತಾ ಹೋಗುವುದನ್ನು ಕಾಣುತ್ತಾರೆ. ಇವರು ಬಂದ ಶಬ್ದವನ್ನು ಕೇಳಿ ಆ ರತ್ನವನ್ನು ತನ್ನ ಬಾಯಲ್ಲಿಟ್ಟುಕೊಂಡು ಹುತ್ತದಲ್ಲಿ ಹೋಗುತ್ತದೆ. ಇದನ್ನು ಕಂಡ ಅಜಗಣ್ಣನವರು ತಮ್ಮ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾರೆ.
ಹಾವು ತನ್ನ ಹೆಡೆಯ ಮೇಲಿರುವ ರತ್ನದ ಪ್ರಕಾಶದ ಮೂಲಕ ಆಹಾರವನ್ನು ಹೇಗೆ ಹುಡುಕಿಕೊಳ್ಳುತ್ತದೆಯೋ ಹಾಗೆಯೇ ಇಷ್ಟಲಿಂಗದ ಬೆಳಕಿನಲ್ಲಿ ಜ್ಞಾನವನ್ನು ಸಂಪಾದಿಸಬೇಕೆಂದು ಅಂದುಕೊಂಡು ಇಷ್ಟಲಿಂಗವನ್ನು ಯಾರಿಗೂ ಕಾಣದ ಹಾಗೆ ಅಮಳೋಕ್ಯದಲ್ಲಿ ಮುಚ್ಚಿಟ್ಟುಕೊಂಡರು.
“ಪಿಂಡವಂ ಧರಿಸಿರ್ದವಂಗೆ ಶಿವಾಚಾರವೆಂಬ ಶಿವ ಮಂತ್ರವಂ ಗೌಪ್ಯದಲ್ಲಿ ಬಳಸಬೇಕು”. ಅಂಡಜ ಪ್ರಾಣಿಯಾದ ಹಾವು ಅಮೂಲ್ಯ ಪ್ರಕಾಶಮಯವಾದ ರತ್ನವನ್ನು ಗುಪ್ತವಾಗಿರಿಸಿಕೊಂಡಂತೆ ಸ್ವಪ್ರಕಾಶಮಯವಾದ ಮಹಾಲಿಂಗವನ್ನು ಅಂತರಂಗದಲ್ಲಿ ಇರಿಸಿಕೊಂಡು ಗುಪ್ತ ಭಕ್ತಿ ಮಾಡಲು ಪಿಂಡಜರಾದ ಮಾನವರಿಗೇಕೆ ಸಾಧ್ಯವಿಲ್ಲ?
ಅಂತ ಈ ಪ್ರಸಂಗವನ್ನು ತಮ್ಮ ಗ್ರಂಥಗಳಲ್ಲಿ ಉಲ್ಲೇಖ ಮಾಡಿದ್ದಾರೆ. ಬಹಿರಂಗದ ಪೂಜೆಗಿಂತ ಅಂತರಂಗದ ಆರಾಧನೆಯೇ ಶ್ರೇಷ್ಠ ಅಂದುಕೊಂಡು ಅಂತರಂಗದಲ್ಲಿ ಇಷ್ಟಲಿಂಗವನ್ನು ಆರಾಧಿಸಲು ಪ್ರಾರಂಭಿಸಿದರು. ಅಂಡಜ ಪ್ರಾಣಿಯಾದ ಹಾವೇ ಹಾಗೆ ಮಾಡಬೇಕಾದರೆ ಪಿಂಡಜರಾದ ನಾವು ಏಕೆ ಅಂತರಂಗದಲ್ಲಿ ಇಷ್ಟಲಿಂಗವನ್ನು ಪೂಜಿಸಬಾರದು ಅಂದುಕೊಂಡು ಬಹಿರಂಗದ ಆಡಂಬರವನ್ನು ಬಿಟ್ಟು ಅಂತರ್ಮುಖಿಯಾಗಿ ಪರಿಪೂರ್ಣ ನಿಃಶಬ್ದದ ನಿರುಪಾದಿಕ ಸ್ಥಿತಿಯಲ್ಲಿ ಇದ್ದುಬಿಟ್ಟರು ಅಜಗಣ್ಣನವರು ಅಂತ ಈ ಎಲ್ಲ ಗ್ರಂಥಗಳಲ್ಲಿ ಬಂದಂಥ ನಿರೂಪಣೆ.
ಲಿಂಗಪೂಜೆಯನ್ನು ಪಾಪಿ, ಕೋಪಿ, ಮತಿಭ್ರಷ್ಠ, ಜಾರ-ಚೋರರು, ಹುಸಿಕ ಶಿವ ನಿಂದಕರು ಇಂತಿವರ ನೋಡಲಾಗದು. ಮಂತ್ರೋಚ್ಛಾರಣೆಯನ್ನು ಅನ್ಯಾತ್ಮರು ಕೇಳಲಾಗದು ಎಂದುಕೊಂಡು ಅಜಗಣ್ಣನು ಗುಪ್ತದಿಂ ಲಿಂಗಪೂಜೆಯಂ ಮಾಳ್ಪೆ, ಮಂತ್ರವಂ ಮನದಲ್ಲಿ ಸ್ಮರಿಸುವೆ ಎಂದು ಇಷ್ಟಲಿಂಗವನ್ನು ಅಮಳೋಕ್ಯದಲ್ಲಿ ಧರಿಸಿದರು ಅಂತ ಶಾಂತಲಿಂಗ ದೇಶಿಕ ಬರಿತಾರೆ.
ಅಂದಿನಿಂದ ಅಜಗಣ್ಣನವರಿಗೆ:
ಪ್ರಾಣಲಿಂಗಕ್ಕೆ ಅಂತರಂಗದ ನಿರ್ಗುಣವೇ ಅಷ್ಟವಿಧಾರ್ಚನೆಯಾಯಿತು.
ಆನಂದ ಜಲವೇ ಮಜ್ಜನವಾಯಿತು.
ಸುಬುದ್ಧಿಯೇ ಗಂಧವಾಯಿತು.
ನಿತ್ಯತ್ವವೇ ಅಕ್ಷತೆಯಾಯಿತು.
ಹೃದಯ ಕಮಲವೇ ಪುಷ್ಪವಾಯಿತು.
ಸ್ವಾನುಭವವೇ ಧೂಪವಾಯಿತು.
ಸಮ್ಯಕ್ ಜ್ಞಾನವೇ ಆರತಿಯಾಯಿತು.
ನಿಜಭಕ್ತಿ ರಾಜ ರಸತೆ ತಾಂಬೂಲವಾಯಿತು.
ಹೀಗೆ “ಇಷ್ಟಲಿಂಗವೇ ಪ್ರಾಣಲಿಂಗವಾಗಿ ಅಂತರಂಗದಲ್ಲಿ ಅರ್ಚಿಸಿ ಮನದಲ್ಲಿ ಮಂತ್ರವ ನೆನೆಯುತ್ತಿದ್ದ” ಅಂತ ಶಾಂತಲಿಂಗ ದೇಶಿಕ ಬರೆಯುತ್ತಾರೆ. ಹೀಗೆ ಶಿವಭಕ್ತರ ಮನೆಯಲ್ಲಿ ಜನಿಸಿ ಅಂಗದ ಮೇಲೆ ಲಿಂಗವಿಲ್ಲದ, ಲಿಂಗಪೂಜೆಯನ್ನು ಮಾಡಿಕೊಳ್ಳದೆ ಇರುವ, ಬಾಯಲ್ಲಿ ಮಂತ್ರೋಚ್ಛಾರಣೆಯನ್ನು ಮಾಡದ ಅಜಗಣ್ಣನವರನ್ನು ಕಂಡು ನೆರೆಹೊರೆಯವರು ಆಡಿಕೊಳ್ಳಲು ಮತ್ತು ಪ್ರಶ್ನಿಸಲು ಪ್ರಾರಂಭ ಮಾಡುತ್ತಾರೆ. ಏನೇ ಅಂದರೂ, ಆಡಿಕೊಂಡರೂ ಎಲ್ಲದಕ್ಕೂ ಮೌನವಾಗಿದ್ದ ಅಜಗಣ್ಣನವರನ್ನು ಜನರು ಹುಚ್ಚನೆಂದು ತೀರ್ಮಾನ ಮಾಡಿದ್ದರು ಅಂತ ಶೂನ್ಯ ಸಂಪಾದನೆ ಕೃತಿಗಳಲ್ಲಿ ಬರೆಯಲಾಗಿದೆ. ಮುಕ್ತಾಯಕ್ಕನವರೂ ಸಹ ಅಣ್ಣ ಹೀಗೇಕಾದ ಅಂತ ಚಿಂತಿಸಿರಬಹುದು.
ಶೂನ್ಯ ಸಂಪಾದನೆಗಳಲ್ಲಿ ಬರುವ ಮತ್ತೊಂದು ಕಥೆ ಅಂದರೆ ಮುಕ್ತಾಯಕ್ಕನವರು ಗಂಡನ ಮನೆಗೆ ಹೋಗುವಾಗ ಅವರ ನಡುವೆ ಆದ ಸಂಭಾಷಣೆಯ ವಿವರ. ನಿನ್ನ ಸಾವಿನ ಸುದ್ದಿ ನನಗೆ ಹೇಗೆ ತಿಳಿಯಬೇಕು ಅಂತ ಮುಕ್ತಾಯಕ್ಕ ಅಣ್ಣನನ್ನ ಕೇಳತಾರೆ.
“ತಂಗಿ ನಿನ್ನ ಮನಿಯ ಹಿತ್ತಲದೊಳಗ ಒಂದು ಮಲ್ಲಿಗೆಯ ಗಿಡವನ್ನು ಹಚ್ಚು. ಯಾವಾಗ ಆ ಗಿಡ ಒಣಗತದೆ ಆವಾಗ ನನ್ನ ಅವಸಾನ ಅಂತ ತಿಳಿದುಕೋ”
ಅಂತ ಅಜಗಣ್ಣನವರು ಹೇಳತಾರೆ. ಇದು ಹಲಗೆ ಆರ್ಯನವರ ಶೂನ್ಯ ಸಂಪಾದನೆಯಲ್ಲಿ ನಿರೂಪಣೆಯಾಗಿದೆ.
ಸಿದ್ಧನಂಜೇಶನ ಗುರುರಾಜ ಚಾರಿತ್ರ್ಯದಲ್ಲಿಯೂ ಕೂಡ ಮುಕ್ತಾಯಕ್ಕನವರು “ನಿನ್ನ ಅವಸಾನದ ಕುರುಹು ಏನು?” ಅಂತ ಕೇಳತಾರೆ.
“ನೀನುಟ್ಟ ಸೀರೆಯ ನಿರಿಗೆ ಕಳಚಿದಾಗ, ತೋರಮುಡಿ ಕಳಚಿದಾಗ, ಕಡೆಯುವ ಮೊಸರು ಕಲ್ಲು ಆದಾಗ ನನ್ನ ಅವಸಾನವಾಯಿತೆಂದು ತಿಳಿ”
ಅಂತ ಅಜಗಣ್ಣ ಉತ್ತರಿಸಿದ ಎಂದು ಗುರುರಾಜ ಚಾರಿತ್ರ್ಯದಲ್ಲಿ ವಿವರಿಸಲಾಗಿದೆ.
ಅಜಗಣ್ಣ ಮತ್ತು ಮುಕ್ತಾಯಕ್ಕನವರ ಜೀವನ ಕಥೆಗಳು ಶೂನ್ಯ ಸಂಪಾದನೆಯ ವಿವಿಧ ಕೃತಿಗಳಲ್ಲಿ ಕಾಲ ಕಾಲಕ್ಕೆ ಮಾರ್ಪಾಡಾದರೂ ಕೆಲವು ಸಂಗತಿಗಳು ಮತ್ತು ಸಂಕೇತಗಳು ಪ್ರಮುಖವಾಗಿ ಉಳಿದುಕೊಂಡವು. ಷೋಡಶೋಪಚಾರಗಳಿಲ್ಲದೇ ಬಹಿರಂಗದ ಆರಾಧನೆಗಿಂತ ಅಂತರಂಗದ ಅರಿವು ಆಚಾರ ಪೂಜೆಗಳು ಶ್ರೇಷ್ಠವೆಂದು ನಂಬಿದ್ದರು ಅಜಗಣ್ಣ. ಇದನ್ನೇ ತಮ್ಮ ಒಂದು ವಚನದಲ್ಲಿ ನಿರೂಪಣೆ ಮಾಡಿದ್ದಾರೆ.
ಅಂತರಂಗದಲ್ಲಿ ಆಯತವನರಿದವಂಗೆ,
ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯಾ.
ಅಂತರಂಗದಲ್ಲಿ ಅನಿಮಿಷನಾಗಿ
ನಿರಂತರ ಲಿಂಗಸುಖಿ ನೋಡಯ್ಯಾ.
ಸರ್ವೇಂದ್ರಿಯ ಸಮ್ಮತವಾಯಿತ್ತು
ಮಹಾಘನ ಸೋಮೇಶ್ವರ ಮುಂತಾಗಿ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-115 / ವಚನ ಸಂಖ್ಯೆ-298)
ತಮ್ಮ ಬದುಕಿನುದ್ದಕ್ಕೂ ಅಂತರಂಗದ ಪೂಜೆಯನ್ನು ಕೈಗೊಂಡು ಅರಿವಿನ ಜ್ಞಾನ ಪ್ರಕಾಶವನ್ನು ಕಂಡಿದ್ದ ಅಜಗಣ್ಣನವರು ಐಕ್ಯಸ್ಥಲವನ್ನು ಮುಟ್ಟಿ ಬಿಟ್ಟದ್ದರು ಅನ್ನೋದು ಬಹಳ ಜನರಿಗೆ ಅರ್ಥವಾಗಲೇ ಇಲ್ಲ ಅನ್ನೋದನ್ನು ಗುರುರಾಜ ಚಾರಿತ್ರ್ಯದಲ್ಲಿ ತಿಳಿಸಲಾಗಿದೆ.
12 ನೇ ಶತಮಾನದ ಪ್ರಬುದ್ಧ ವಚನಕಾರರಲ್ಲಿ ಅಜಗಣ್ಣನವರೂ ಒಬ್ಬರು. ಲಕ್ಕುಂಡಿಯಲ್ಲಿ ಈಗಲೂ ಇರುವ ಸೋಮೇಶ್ವರ ದೇವಾಲಯದ ಇಷ್ಟದೈವ ಸೋಮೇಶ್ವರನಲ್ಲಿ ಬಹಳ ಭಕ್ತಿಯಿತ್ತು ಅಜಗಣ್ಣನವರಿಗೆ. ಹಾಗಾಗಿ “ಮಹಾಘನ ಸೋಮೇಶ್ವರಲಿಂಗ” ಎನ್ನುವ ವಚನಾಂಕಿತದಿಂದ ಬರೆದ 10 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ಸಂಖ್ಯೆಯಲ್ಲಿ ಕೇವಲ 10 ವಚನಗಳನ್ನು ಬರೆದಿದ್ದರೂ ಆಧ್ಯಾತ್ಮಿಕ ಅನುಭಾವದಲ್ಲಿ ಅತ್ಯಂತ ಶ್ರೇಷ್ಠಮಟ್ಟದ ವಚನಗಳು. ಇದನ್ನರಿತ ಚೆನ್ನಬಸವಣ್ಣನವರು ತಮ್ಮ ವಚನದಲ್ಲಿ ಅಜಗಣ್ಣನವರ ವಚನಗಳ ಗುಣಮಟ್ಟದ ಶ್ರೇಷ್ಠತೆಯನ್ನು ನಿರೂಪಿಸಿದ್ದಾರೆ.
ಆದ್ಯರ ಅರವತ್ತು ವಚನಕ್ಕೆ
ದಣ್ಣಾಯಕರ ಇಪ್ಪತ್ತು ವಚನ.
ದಣ್ಣಾಯಕರ ಇಪ್ಪತ್ತು ವಚನಕ್ಕೆ
ಪ್ರಭುದೇವರ ಹತ್ತು ವಚನ.
ಪ್ರಭುದೇವರ ಹತ್ತು ವಚನಕ್ಕೆ
ಅಜಗಣ್ಣನ ಅಯ್ದು ವಚನ.
ಅಜಗಣ್ಣನ ಅಯ್ದು ವಚನಕ್ಕೆ
ಕೂಡಲಚೆನ್ನಸಂಗಮದೇವಾ
ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ.
(ಸಮಗ್ರ ವಚನ ಸಂಪುಟ: ಮೂರು-2021 / ಪುಟ ಸಂಖ್ಯೆ-91 / ವಚನ ಸಂಖ್ಯೆ-225)
12 ನೇ ಶತಮಾನದ ಮೇರು ಅನುಭಾವಿಗಳನ್ನೂ ಮೀರಿದ ಅನುಭಾವ ಅಜಗಣ್ಣನವರದು ಎನ್ನುತ್ತದೆ ಚೆನ್ನಬಸವಣ್ಣನವರ ಈ ವಚನ.
ಮುಕ್ತಾಯಕ್ಕನವರು ಬರೆದ ಶ್ರೇಷ್ಠತೆಯಲ್ಲಿ ಉತ್ತಮವಾದಂಥ ವಚನಗಳು 37. ಅಕ್ಕ ಮಹಾದೇವಿಯವರು ಭಕ್ತಿ ಜ್ಞಾನ ಮಾರ್ಗದ ಪ್ರತಿಪಾದಕರಾದರೆ ಮುಕ್ತಾಯಕ್ಕ ವೈಚಾರಿಕ ದಿಟ್ಟ ನಿಲುವಿನ ಜ್ಞಾನ ಮಾರ್ಗದ ಪ್ರತಿಪಾದಕರು. “ಅಜಗಣ್ಣ” ಅಥವಾ “ಅಜಗಣ್ಣ ತಂದೆ” ಎಂಬ ವಚನಾಂಕಿತದಿಂದ ವಚನಗಳನ್ನು ರಚಿಸಿದ್ದಾರೆ. ಮುಕ್ತಾಯಕ್ಕನವರು ಮುಟ್ಟಿದಂಥಾ ಆಧ್ಯಾತ್ಮಿಕ ಎತ್ತರ ಮತ್ತು ಆಧ್ಯಾತ್ಮಿಕ ನೆಲೆ ಅತ್ಯಂತ ದೊಡ್ಡದು.
ಒಂದು ದಿನ ಅಜಗಣ್ಣನವರು ಹೊಲದಿಂದ ಕೆಲಸ ಮುಗಿಸಿಕೊಂಡು ಬರುವಾಗ ಭಾರವಾದ ಗೋದಿ ಚೀಲವನ್ನು ಹೊತ್ತು ತಂದಿದ್ದರು. ತರುವ ಭರದಲ್ಲಿ ಮನೆಯ ಬಾಗಿಲಿನ ಚೌಕಟ್ಟು ತಲೆಗೆ ಬಡಿಯುತ್ತದೆ. ಅಕಸ್ಮಾತ್ ಚೌಕಟ್ಟು ತಲೆಗೆ ಜೋರಾಗಿ ಬಡಿದಿದ್ದರಿಂದ ಘಾಬರಿಯಾದ ಅಜಗಣ್ಣನವರು “ಓಂ ನಮಃ ಶಿವಾಯ” ಅಂದು ಬಿಡುತ್ತಾರೆ.
ತನ್ನ ಭಕ್ತಿ ತಾನು ಕೈಹಿಡದ ಪತ್ನಿಗೂ ತಿಳಿಯಬಾರದೆನ್ನುವ ಇಚ್ಛೆಯಿತ್ತು ಅಜಗಣ್ಣನವರಿಗೆ. ಇದಕ್ಕಾಗಿ ಏನೆಲ್ಲ ಅವಜ್ಞೆಗಳಿಗೆ ತಿರಸ್ಕಾರಗಳಿಗೆ ಒಳಪಟ್ಟರೂ ನಿರಾಡಂಬರದ ಸಾತ್ವಿಕ ಬದುಕನ್ನು ಸಾಧಿಸಿದವರು ಅಜಗಣ್ಣನವರು. “ಓಂ ನಮಃ ಶಿವಾಯ” ಎನ್ನುವ ಶಬ್ದಪುಂಜ ಅಜಗಣ್ಣನವರ ಬಾಯಿಯಿಂದ ಹೊರಟಾಗ ನನ್ನ ಗಂಡ ವಾಸ್ತವದಲ್ಲಿ ಶಿವಭಕ್ತನಿದ್ದರೂ ಅದನ್ನು ಬಹಿರಂಗದಲ್ಲಿ ತೋರ್ಪಡಿಸಲಿಲ್ಲ ಎಂದು ಅವರ ಪತ್ನಿ ಅಂದುಕೊಳ್ಳುತ್ತಾಳೆ.
ಆದರೆ ಅಜಗಣ್ಣನವರಿಗೆ ತನ್ನ ಗುಪ್ತಭಕ್ತಿ ಪ್ರಕಟವಾಯಿತಲ್ಲಾ ಅಂತ ದುಃಖಪಡುತ್ತಾರೆ. ಬಾಗಿಲ ಚೌಕಟ್ಟು ಬಡಿದಾಗ ಆದ ನೋವಿನಲ್ಲಿ “ಓಂ ನಮಃ ಶಿವಾಯ” ಅಂತ ಮಂತ್ರೋಚ್ಛಾರಣೆ ಮಾಡಿದಾಗ ಅಮಳೋಕ್ಯದಲ್ಲಿದ್ದಂಥ ಇಷ್ಟಲಿಂಗ ಅವರ ಕೈಗೆ ಬಂದಿತ್ತು. ಅಂಗದ ಮೇಲೆ ಲಿಂಗ ಸ್ವಾಯತವಾದಾಗ ಲಿಂಗಾಂಗ ಸಾಮರಸ್ಯವನ್ನು ಕಂಡಂಥ ಜನರು ಅವರ ಶಿವಸಮಾಧಿಯನ್ನು ಜರುಗಿಸಿದರು ಅಂತ ಗುರುರಾಜ ಚಾರಿತ್ರ್ಯದಲ್ಲಿ ಬರೆಯಲಾಗಿದೆ.
ಅಜಗಣ್ಣನವರು ಲಿಂಗೈಕ್ಯರಾದಾಗ ಮುಕ್ತಾಯಕ್ಕನವರ ಮನೆಯ ಹಿತ್ತಲದಲ್ಲಿದ್ದ ಮಲ್ಲಿಗೆ ಗಿಡಗಳು ಒಣಗಿದವು. ಹಾಗಾಗಿ ಮುಕ್ತಾಯಕ್ಕ ಆತಂಕದಿಂದ ದುಃಖತಪ್ತಳಾಗಿ ಮುಕ್ತಕೇಶಿಯಾಗಿ ಲಕ್ಕುಂಡಿಗೆ ಧಾವಿಸಿ ಬರುತ್ತಾರೆ. ಮಹಾಜ್ಞಾನಿಯಾದ ಅಣ್ಣ ಲಿಂಗೈಕ್ಯನಾದನಲ್ಲಾ ಅಂತ ದುಃಖ ಪಡುತ್ತಿರುವಾಗ ಅಲ್ಲಮಪ್ರಭುಗಳು ಅಲ್ಲಿಗೆ ಬಂದರು ಅಂತ ಹಲಗೆ ಆರ್ಯ ತನ್ನ ಶೂನ್ಯ ಸಂಪಾದನೆಯಲ್ಲಿ ಬರೆದಿದ್ದಾರೆ. ಈ ಸಂದರ್ಭವನ್ನು ಹಲಗೆ ಆರ್ಯ ಅತ್ಯಂತ ಪ್ರಬುದ್ಧವಾಗಿ ಚಿತ್ರಿಸಿದ್ದಾನೆ.
ತನ್ನ ಜೀವನದ ಆಧ್ಯಾತ್ಮಿಕ ಭ್ರಾತೃವಾತ್ಸಲ್ಯದ ಸಾಕಾರವು ನಿರಾಕಾರವಾದದ್ದರಿಂದ ಮನೆ ಅಷ್ಟೇ ಅಲ್ಲಾ ಇಡೀ ಲೋಕವೇ ಬರಿದಾಗಿ ಕಂಡಂಥ ಮುಕ್ತಾಯಕ್ಕ ದಿಕ್ಕುಗೆಟ್ಟು ಅವಲಂಬನೆಗೆಟ್ಟು ಶೋಕಸಂತಪ್ತಳಾದಳು.
ನಾವುಗಳು ಆನಂದವನ್ನು ವರ್ಣಿಸುವ ಒಂದು ಸಾಲನ್ನೇ ಬರೀಬೇಕಾದರೆ ಒದ್ದಾಡಿ ಹೋಗತೀವಿ. ಆದರೆ ದುಃಖತಪ್ತ ಸನ್ನಿವೇಶವನ್ನೂ ಕೂಡ ಎಷ್ಟ ಚಂದಾಗಿ ವರ್ಣಿಸಿದ್ದಾನೆ ಕವಿ. ಇಷ್ಟು ದಿನ ಸಾಕಾರ ರೂಪದಲ್ಲಿದ್ದ ಅಣ್ಣ ನಿರಾಕಾರನಾಗಿ ಬಿಟ್ಟನಲ್ಲಾ ಮುಂದೆ ನನ್ನ ಗತಿ ಏನು ಅಂತ ದುಃಖ ಪಡತಾ ಇದ್ದಳು. ಅಣ್ಣನ ಅನಿರೀಕ್ಷಿತ ಸಾವಿನಿಂದ ದುಃಖ ಪಡುತ್ತಿರುವ ಸನ್ನಿವೇಶದಲ್ಲಿ ಅವಳನ್ನು ಸಂತೈಸಲು ಅಲ್ಲಮಪ್ರಭುಗಳ ಆಗಮನವಾಗುತ್ತದೆ ಅಂತ ಹಲಗೆ ಆರ್ಯ ಬರೀತಾನೆ.
12 ನೇ ಶತಮಾನದ ಭಕ್ತಿ ಚಳುವಳಿಯಲ್ಲಿ ಅಲ್ಲಮಪ್ರಭುಗಳ ಈ ಸುತ್ತಾಟ ಅತ್ಯಂತ ಮಹತ್ವವಾದದ್ದು. ಶರಣ ಸಿದ್ಧರಾಮೇಶ್ವರ, ಶರಣ ಗೋರಕ್ಷ, ಶರಣ ಮರುಳ ಶಂಕರದೇವ ಮುಂತಾದವರನ್ನು ಶರಣ ಸಂಕುಲಕ್ಕೆ ಪರಿಚಯಿಸಿದವರು ಅಲ್ಲಮಪ್ರಭುಗಳು. ಸಾಮಾನ್ಯವಾಗಿ ಶಿಷ್ಯರು ಗುರುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಅಲ್ಲಮಪ್ರಭುಗಳು ಶಿಷ್ಯರನ್ನು ಹುಡುಕಿ ಅವರಿಗೆ ಜ್ಞಾನ ಪ್ರಕಾಶವನ್ನು ನೀಡಿ ಕಲ್ಯಾಣಕ್ಕೆ ಕರೆ ತರುತ್ತಾರೆ. ಅದಕ್ಕೆ ಶಿವಗಣಪ್ರಸಾದಿ ಮಹದೇವಯ್ಯನವರು ತಮ್ಮ ಶೂನ್ಯಸಂಪಾದನೆಯಲ್ಲಿ ಈ ವಿಷಯಕ್ಕೆ ಬಹಳ ಮಹತ್ವ ನೀಡಿದ್ದಾರೆ.
ಇಂತಪ್ಪ | ಜಂಗಮಸ್ಥಲವನಿಂಬುಗೊಂಡು ||
ಸಕಲ ಪುರಾತನ | ಗಣಂಗಳ ಕೃತಾರ್ಥಂ ||
ಮಾಡಲೋಸುಗ | ಸುಳಿದಾಡುತಿರ್ದಂ ||
ಅಲ್ಲಮಪ್ರಭುಗಳು ಯಾಕೆ ಪ್ರಯಾಣ ಮಾಡಿತಿದ್ದರೆಂದರೆ ಜ್ಞಾನಸ್ಥಲವಾದ ಜಂಗಮರಿಗೆ ಎರಡು ಜವಾಬ್ದಾರಿಯುತ ಕೆಲಸಗಳು. ಒಂದು “ಜ್ಞಾನ ಪ್ರಸಾರ”. ಎರಡನೇಯದ್ದು ಅತೀ ಮಹತ್ವದ ವಿಚಾರ ಅದು “ಜ್ಞಾನ ಸೃಷ್ಟಿ”. ಜ್ಞಾನ ಒಂದು ಕಡೆ ಇರಬಾರದು. ಎಲ್ಲಿ ಜ್ಞಾನದ ಅವಶ್ಯಕತೆ ಇದೆಯೋ ಅಲ್ಲಿಗೆ ಹೋಗಬೇಕಾಗುವುದು ಅನಿವಾರ್ಯ. ಜಂಗಮ ಓಡಾಡುವುದು ತನಗಾಗಿ ಅಲ್ಲಾ. “ಸಕಲ ಪುರಾತನ ಗಣಂಗಳ ಕೃತಾರ್ಥಂ ಮಾಡಲೋಸುಗ ಸುಳಿದಾಡುತಿರ್ದಂ” ಎಂದು ಶಿವಗಣ ಪ್ರಸಾದಿ ಮಹದೇವಯ್ಯನವರು ನಿರೂಪಿಸಿದ್ದಾರೆ. ಅಲ್ಲಮಪ್ರಭುಗಳ ಈ ಓಡಾಟವನ್ನು ಕಲ್ಯಾಣದ ಇಡೀ ಭಕ್ತಿ ಚಳುವಳಿಯಲ್ಲಿ ನಾವು ಕಾಣಬಹುದು.
ಅಲ್ಲಮಪ್ರಭುಗಳು ಮುಕ್ತಾಯಕ್ಕನವರನ್ನು ಸಂತೈಸಲು ಬಂದ ಈ ಸನ್ನಿವೇಶವನ್ನು ಶೂನ್ಯ ಸಂಪಾದನೆಯಲ್ಲಿ “ಮುಕ್ತಾಯಕ್ಕನ ಸಂಪಾದನೆಗಳು” ಅಂತ ಹೆಸರಿಸಲಾಗಿದೆ. ಅಲ್ಲಮಪ್ರಭುಗಳು ಏನಾಯ್ತು ತಾಯಿ ಅಂತ ಮಾತಿಗೆ ಎಳೆಯಲೆಂದೇ ಮುಕ್ತಾಯಕ್ಕನವರನ್ನು ಕೇಳುತ್ತಾರೆ. ಇದಕ್ಕೆ ದುಃಖದಿಂದಲೇ ಮುಕ್ತಾಯಕ್ಕನವರು ತಮ್ಮ ಒಂದು ವಚನದ ಮೂಲಕ ಹೇಳುತ್ತಾರೆ.
ಅರಿವನಣಲೊಳಗಿಕ್ಕಿ ಅಗಿವುತ್ತಿದೆ ಮರ್ತ್ಯಲೋಕವೆಲ್ಲವು.
ಅರಿವು ಉಳಿಯಲರಿಯದೆ ಕೆಟ್ಟಿತ್ತು ಲೋಕವೆಲ್ಲವು.
ನಾನೆಂತು ಬದುಕುವೆನಣ್ಣಾ?
ಕತ್ತಲೆ ಬೆಳಗ ಕಾಂಬ ಸಂದೇಹಿ ನಾನೊಬ್ಬಳು.
ಎನ್ನ ಕಣ್ಣ ಕಟ್ಟಿ ಕನ್ನಡಿಯ ತೋರಿತ್ತೊ
ಅಜಗಣ್ಣ ನಿನ್ನ ಯೋಗ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-393 / ವಚನ ಸಂಖ್ಯೆ-1097)
ನಿಜವಾದ ಅಂತರಂಗದ ಅರಿವನ್ನು ಹಂಚುವುದರಲ್ಲಿ ಸೋತು ಹೋಗಿದೆ ಈ ಲೋಕ. ಬರೀ ಮಾತಿನ ಈ ಲೌಕಿಕ ಜಗತ್ತಿನಲ್ಲಿ ಅಣ್ಣ ನನ್ನನ್ನು ಒಬ್ಬಳನ್ನೇ ಬಿಟ್ಟು ಹೋದರೆ ನಾನು ಹೇಗೆ ಇರಲಿ? ಕತ್ತಲೆ ಬೆಳಕು ಅನ್ನುವ ಅರಿವು ಜ್ಞಾನ ನನಗಿಲ್ಲ. ಅಜಗಣ್ಣನು ಅರಿವಿನ ಯೋಗದ ಕನ್ನಡಿಯನ್ನು ನನ್ನೆದುರಿಗೆ ಇಟ್ಟು ಕಣ್ಣು ಕಟ್ಟಿ ಬಿಟ್ಟನು. ಈಗ ನನಗಾರು ದಿಕ್ಕು? ಅಂತಾ ಅಲ್ಲಮ ಪ್ರಭುಗಳಿಗೆ ಅಳುತ್ತಾ ದುಃಖದಿಂದ ನಿವೇದನೆ ಮಾಡುತ್ತಾಳೆ.
ಮುಂದುವರೆದು ಅಣ್ಣ ಅಜಗಣ್ಣನ ಉಪದೇಶ ಹೇಗಿತ್ತು ಎಂದು ಮುಕ್ತಾಯಕ್ಕ ನಿರೂಪಣೆ ಮಾಡತಾಳೆ.
ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು.
ಮೂಗನ ಕೈಯಲ್ಲಿ ಕಾವ್ಯವ ಕೇಳಿದಂತಿರಬೇಕು.
ದರ್ಪಣದೊಳಗೆ ಪ್ರತಿಬಿಂಬದಂತೆ
ಹಿಡಿವರಿಗಳವಲ್ಲದಿರಬೇಕು ಅಣ್ಣಾ,
ಕೂರ್ಮನ ಶಿಶುವಿನ ಸ್ನೇಹದಂತೆ ಇರಲೊಲ್ಲದೆ
ಆರೂಢಗೆಟ್ಟೆಯೊ ಅಜಗಣ್ಣಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-396 / ವಚನ ಸಂಖ್ಯೆ-1095)
ಅಜಗಣ್ಣನೆಂದೂ ಮುಕ್ತಾಯಕ್ಕನಿಗೆ ಅವಳ ಮುಂದೆ ಕುಳಿತುಕೊಂಡು ಹೇಳಿ ಕೊಡಲಿಲ್ಲ. ಕಿವಿಗಳಿಂದ ಅಜಗಣ್ಣನ ಮಾತುಗಳನ್ನು ಕೇಳಿಸಿಕೊಂಡು ಕಲಿಯಲಿಲ್ಲ. ಎಲ್ಲಿ ಹೋಗಬೇಕು, ಹೇಗೆ ಹೋಗಬೇಕು ಅನ್ನೋದು ಗೊತ್ತಿಲ್ಲದೇ ಇರುವ ಒಬ್ಬ ಕುರುಡ ಇನ್ನೊಬ್ಬ ಕುರುಡನ ಕೈ ಹಿಡಿದು ಮುನ್ನಡೆಸುವಂತೆ ನನಗೆ ಮಾರ್ಗದರ್ಶನ ನೀಡಿದ. ಅಜಗಣ್ಣನು ಹೇಳಿದ ಉಪದೇಶ ಮೂಗನ ಕಾವ್ಯದಂತಿತ್ತು. ಅವನ ಅಂತರಂಗದ ಧ್ವನಿಯಾಗಿತ್ತು. ಕನ್ನಡಿಯೊಳಗೆ ಮೂಡಿದ ಪ್ರತಿಬಿಂಬವು ಕನ್ನಡಿಯೊಳಗೆ ಸಮಾವಿಷ್ಠವಾಗುವಂತೆ ನನಗೆ ಉಪದೇಶಿಸಿದ. ಇಂಥ ಅಸಾದೃಷ್ಯ ಅಜಗಣ್ಣನ ಪ್ರತಿಬಿಂಬ ನನ್ನ ಅಂತರಂಗದ ಅರಿವಿಗೆ ಬಂದು ತಲುಪಿತು. ಆಮೆಯು ತನ್ನ ಮರಿಗೆ ಕೇವಲ ದೃಷ್ಟಿ ಮಾತ್ರದಿಂದಲೇ ಹಸಿವನ್ನು ನೀಗಿಸುವಂತೆ ನನ್ನ ಆಧ್ಯಾತ್ಮಿಕ ತಿಳುವಳಿಕೆಯ ಹಸಿವನ್ನು ಕೇವಲ ನೋಟ ಮಾತ್ರದಿಂದಲೇ ನೀಗಿಸಿದನು. ಹೀಗೆ ಮುಂದುವರೆಸದೆ ತಲೆ ಒಡೆದು ಹೋಗಿಬಿಟ್ಟೆಯಲ್ಲಾ ಅಜಗಣ್ಣ ತಂದೆ ಅಂತಾ ಕಳವಳ ಪಡುತ್ತಾಳೆ.
ಇದಕ್ಕೆ ಅಲ್ಲಮ ಪ್ರಭುಗಳು ಸಂತೈಸುವ ಅಂತಃಕರಣದ ಸಂವಾದದಲ್ಲಿ ಆತ್ಮೀಯವಾಗಿ ಪ್ರಶ್ನೆಯನ್ನು ಕೇಳತಾರೆ.
ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು
ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ?
ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ
ಹಂಬಲಿಸುವ ಪರಿತಾಪವೇನು ಹೇಳಾ?
ಒಂದೆಂಬೆನೆ ಎರಡಾಗಿದೆ ಎರಡೆಂಬೆನೆ ಒಂದಾಗಿದೆ
ಅರಿವಿನೊಳಗಣ ಮರಹಿದೇನು ಹೇಳಾ?
ದುಃಖವಿಲ್ಲದ ಅಕ್ಕೆ ಅಕ್ಕೆಯಿಲ್ಲದ ಅನುತಾಪ.
ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ,
ನೀನಾರೆಂದು ಹೇಳೆ ಎಲೆ ಅವ್ವಾ?
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-227 / ವಚನ ಸಂಖ್ಯೆ-724)
ಆರಳ್ದ ತಲೆ ಅಂದರ ಜ್ಞಾನ ಮತ್ತು ಚೈತನ್ಯದಿಂದ ತುಂಬಿದ ಲಿಂಗ ಸ್ವರೂಪಿ ಶರೀರ. ಎರಡಂತ ತಿಳಕೊಂಡಿದ್ದ ನಮ್ಮ ದೇಹ ಅಂದರೆ ಆತ್ಮ ಬೇರೆ ಅಲ್ಲಾ ಪರಮಾತ್ಮ ಬೇರೆ ಅಲ್ಲಾ ಎರಡೂ ಒಂದಕ್ಕೊಂದು ಪೂರಕವಾಗಿದ್ದವು, ಈಗ ಎರಡೂ ಸಮ್ಮಿಳಿತವಾಗಿವೆ. ಜೀವದಲ್ಲಿ ಆತ್ಮ ಒಂದಾದ ಜೀವಾತ್ಮ, ಶಿವನಲ್ಲಿ ಒಂದಾದ ಶಿವಜೀವ ದೇಹ. ಅದಕ್ಕೆ ಸಾವಿಲ್ಲ. ಪಂಚಭೂತಗಳಲ್ಲಿ ಲೀನವಾದ ಶರೀರ ಅಂದರ ಸೂಕ್ಷ್ಮ ಶರೀರ ನಮ್ಮ ಸುತ್ತ ಮುತ್ತಲೂ ಇರತದ. ಆದರ ಅನುಭೂತಿಯಾಗಬೇಕಾದರ ಆ ವ್ಯಕ್ತಿಯ ತತ್ವ ಸಿದ್ಧಾಂತಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಅವರನ್ನು ಜೀವಂತವಾಗಿಡುವತ್ತ ನಮ್ಮ ಮನಸ್ಸು ಹೊರಳಬೇಕು. ಇಂಥ ಚೈತನ್ಯವಿರುವ ಶರೀರವನ್ನು ಅಂಗೈಲ್ಲಿ ಹಿಡಿದುಕೊಂಡು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದ ಅಜಗಣ್ಣನ ಪಾರ್ಥೀವ ಶರೀರವನ್ನು ಕಂಡು ಕರುಳು ಕಿತ್ತು ಬರುವಂತೆ ರೋಧಿಸುತ್ತಿದ್ದ ಮುಕ್ತಾಯಕ್ಕನನ್ನು ಕುರಿತು ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳು ಅಂತ ಕೇಳುತ್ತಾರೆ.
ಅರಳಿದ ಸಂಪಿಗೆಯ ಸುತ್ತ ಸುತ್ತುತ್ತಾ ಮಧುವನ್ನು ದುಂಬಿಗಳು ಹುಡುಕುವ ಹಾಗೆ ನೀನ್ಯಾಕೆ ಶರೀರದ ಮುಂದೆ ಕುಳಿತು ಅಳುತ್ತೀಯಾ ಅದು ಶರಣರಿಗೆ ಶೋಭಿಸುವುದಿಲ್ಲ. ಇಡೀ ಜೀವನದಲ್ಲಿ ಆಧ್ಯಾತ್ಮಿಕ ಅನುಭಾವದ ಮಧುವನ್ನು ಹೀರಿ ಪರಿಪೂರ್ಣ ಲಿಂಗಸ್ಥಿತಿಯನ್ನು ಸಾಧಿಸಿದ ಅಣ್ಣನ ಸಾಧನೆಯನ್ನು ತಿಳಿದುಕೊಳ್ಳುವಲ್ಲಿ ವಿಫಲವಾಗಿದ್ದೀಯಾ ಎನ್ನುವ ಸೂಕ್ಷ್ಮತೆಯನ್ನು ಅಲ್ಲಮ ಪ್ರಭುಗಳು ಮುಕ್ತಾಯಕ್ಕನಿಗೆ ಹೇಳುವ ಪರಿ ಇದು. ನಿನಗೆ ಅಂತರಂಗದಲ್ಲಿರುವ ಅರಿವಿನ ಮಹತ್ವವೇ ಗೊತ್ತಿಲ್ಲ. ಅರಿವು ಇರುವುದನ್ನೇ ಮರೆತಿದ್ದೀಯಾ. ದುಃಖ, ದುಗುಡ, ದುಮ್ಮಾನ ಇವೆಲ್ಲಾ ಬಾಹ್ಯಕ್ಕೆ ತೋರುವ ಸ್ವರೂಪಗಳೇ ಹೊರತು, ಅಜಗಣ್ಣನನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಈ ರೀತಿ ಅಳುವ ಕಾರಣವಿಲ್ಲ ಎನ್ನುವದು ಗೋಚರವಾಗತಾ ಇದೆ. ಇದು ಗೊತ್ತಾದರೆ ನೀನಾರು ಎನ್ನುವುದನ್ನು ಹೇಳು ತಾಯೆ ಅಂತ ಅಲ್ಲಮ ಪ್ರಭುಗಳು ಮುಕ್ತಾಯಕ್ಕನವರ ಅಂತರಂಗದ ಅರಿವನ್ನು ಮೂಡಿಸುವ ಪ್ರಯತ್ನದಲ್ಲಿ ಮುಂದಿನ ಹೆಜ್ಜೆ ಇಡತಾರೆ. ಹುಟ್ಟು ಸಾವಿನ ಭೇದವನ್ನರಿತೂ ಅಳುವುದು ಸರಿಯಲ್ಲ ಅಂತ ಹೇಳತಾರೆ.
ಅಲ್ಲಮ ಪ್ರಭುಗಳ ಅದ್ವಿತೀಯ ದೂರದೃಷ್ಟಿಯ ಸಂಕೇತ ಇದು. ಅಣ್ಣನಿಂದ ಪಡೆಯಬೇಕಾದದ್ದು ಬಹಳಷ್ಟು ಇತ್ತು ಆದರೆ ಸಾಧ್ಯವಾಗಲಿಲ್ಲ ಎನ್ನುವ ದುಃಖ ಒಂದು ಕಡೆಯಾದರೆ, ಅಣ್ಣನಿಲ್ಲಾ ಅನ್ನುವ ಮನಸ್ಸಿಗೆ ಘಾಸಿಯಾದ ಸ್ಥಿತಿ ಇನ್ನೊಂದು ಕಡೆ ಕಾಣುತ್ತಿದೆ. ಹಾಗಾಗಿ ನೀನು ಅಸಾಮಾನ್ಯ ಮತ್ತು ಅಸಾಧಾರಣ ಪ್ರತಿಭೆಯುಳ್ಳವಳು. ಅದಕ್ಕಾಗಿ ನೀನಾರೆಂದು ಹೇಳೇ ಅವ್ವಾ ಎಂದು ಕಕ್ಕುಲತೆಯಿಂದ ಕೇಳುತ್ತಾರೆ.
ಈ ವಚನದ ಒಟ್ಟಾರೆ ಮೂಲ ಆಶಯ ಅಂದರೆ ಮುಕ್ತಾಯಕ್ಕನಿಗೆ ಅಜಗಣ್ಣ ಆಧ್ಯಾತ್ಮದಲ್ಲಿ ಏರಿರುವ ಎತ್ತರದ ಸೂಕ್ಷ್ಮತೆ ಮತ್ತು ಲಿಂಗೈಕ್ಯ ದೇಹದಲ್ಲಿ ನಿರಾಕಾರ ಚೈತನ್ಯದ ಬಗ್ಗೆ ತಿಳಿಸುವದು ಮತ್ತು ಆ ಚೈತನ್ಯ ನಮ್ಮೆಲ್ಲರ ನಡುವೆ ಇರುವ ಕುರುಹನ್ನು ತಿಳಿಸುವುದು. ನೀನ್ಯಾರು ಅಂತ ಪ್ರಶ್ನಿಸಿದ ಅಲ್ಲಮ ಪ್ರಭುಗಳಿಗೆ ಎಷ್ಟ ಛಂದ ಉತ್ತರಾ ಕೊಡತಾರೆ ಮುಕ್ತಾಯಕ್ಕನವರು. ಅವರು ಆಧ್ಯಾತ್ಮದಲ್ಲಿ ಏರಿದ ಎತ್ತರವನ್ನು ಈ ವಚನದಲ್ಲಿ ನಾವು ಗಮನಿಸಬಹುದು.
ಆರೆಂದು ಕುರುಹ ಬೆಸಗೊಳಲು
ಏನೆಂದು ಹೇಳುವೆನಯ್ಯಾ?
ಕಾಯದೊಳಗೆ ಮಾಯವಿಲ್ಲ;
ಭಾವದೊಳಗೆ ಭ್ರಮೆಯಿಲ್ಲ.
ಕರೆದು ಬೆಸಗೊಂಬಡೆ ಕುರುಹಿಲ್ಲ.
ಒಬ್ಬರಿಗೂ ಹುಟ್ಟದೆ, ಅಯೋನಿಯಲ್ಲಿ ಬಂದು
ನಿರ್ಬುದ್ಧಿಯಾದವಳನೇನೆಂಬೆನಣ್ಣಾ?
ತಲೆಯಳಿದು ನೆಲೆಗೆಟ್ಟು ಬೆಳಗುವ ಜ್ಯೋತಿ
ಎನ್ನ ಅಜಗಣ್ಣತಂದೆಯ ಬೆನ್ನ ಬಳಿಯವಳಾನಯ್ಯಾ
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-395 / ವಚನ ಸಂಖ್ಯೆ-1102)
ನಾನು ಅಜಗಣ್ಣನ ಸಹೋದರಿ ಅನ್ನುವುದನ್ನ ಅತ್ಯಂತ ಮಾರ್ಮಿಕವಾಗಿ ಹೇಳತಾರೆ ಮುಕ್ತಾಯಕ್ಕನವರು. ಯಾಕಂದರೆ ಅವರು ತನ್ನನ್ನು ಗುರುತಿಸಿಕೊಂಡಿದ್ದೆ ಅಜಗಣ್ಣನ ತಂಗಿ ಎಂದು. ಸ್ವಂತ Identity ಇಲ್ಲ ಅನ್ನುವುದು ಅವರ ಅನಿಸಿಕೆ. ಹಾಗಾಗಿ ನಾನ್ಯಾರು ಅನ್ನುವುದಕ್ಕೆ ಅವರ ಹತ್ತಿರ ಉತ್ತರ ಇಲ್ಲ. “ಆರೆಂದು ಕುರುಹ ಬೆಸಗೊಳಲು” ಅಂತ ಹೇಳುತ್ತಾರೆ ಮುಕ್ತಾಯಕ್ಕ. ಈ ದೇಹಕ್ಕೆ ನಾನೆಂಬ ಮಾಯೆಯಿಲ್ಲ. ನಾನು ಏನೆಲ್ಲಾ ಸಾಧನೆ ಮಾಡಿದ್ದೇನೆ ಎನ್ನುವ ಭಾವ ಭ್ರಮೆಯೆಂಬ ಮರೀಚಿಕೆ ಇಲ್ಲ. “ಒಬ್ಬರಿಗೂ ಹುಟ್ಟದೆ ಅಯೋನಿಯಲ್ಲಿ ಬಂದು” ಈ ಪದ ಪುಂಜವು ಆಧ್ಯಾತ್ಮದಲ್ಲಿ ಅತ್ಯಂತ ಶ್ರೇಷ್ಠ ಪದ ಜೋಡಣೆ. ಅಂತರಂಗದ ಅರಿವು ಅವರಿವರಿಂದ ಪಡೆದ ಜ್ಞಾನ ಪ್ರಕಾಶ ಅಲ್ಲ. ಅಂತರಂಗದ ಅರಿವು ಆಗಬೇಕಾದರೆ ತನ್ನನ್ನು ತಾನು ಅರಿತಾಗ ಮಾತ್ರ ಸಾಧ್ಯ.
ತನ್ನನ್ನು ತಾನು ಅರಿತಾಗ ಬಹಿರಂಗದ ಆಡಂಬರ ಬೇಕಿಲ್ಲ. ಅದರ ಪರಿಚಯ ನಿನಗೆ ಹೇಗೆ ಮಾಡಿ ಕೊಡಲಿ ಅನ್ನೋದು ನನಗೆ ತಿಳಿದಿಲ್ಲ. ಬುದ್ಧಿಯಿಲ್ಲದ ತಂಗಿಗೆ ಈ ಎಲ್ಲ ಅರಿವನ್ನೂ ಬೆಳಗಿಸಿದ ಅರಿವಿನ ಕುರುಹಾದ ಅಜಗಣ್ಣ ಜ್ಞಾನ ಪ್ರಕಾಶ ಬೆಳಗಿದ ಜ್ಯೋತಿಯಾಗುತ್ತಾನೆ. ಇಂಥ ಅಜಗಣ್ಣನ ತಂಗಿ ನಾನು ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮುಕ್ತಾಯಕ್ಕನವರು.
ಅಜಗಣ್ಣನ ಗುಪ್ತ ಭಕ್ತಿಯ ಬಗ್ಗೆ ಅಲ್ಲಮಪ್ರಭುಗಳು ಮೊದಲೇ ತಿಳಿದಿದ್ದರು ಎನ್ನುವುದಕ್ಕೆ ಈ ವಚನ ಸಾಕ್ಷಿಯಾಗುತ್ತದೆ.
ಕಾಣದುದ ಕಂ[ಡ] ಕೇಳದುದ ಕೇಳಿ[ದ]
ಮುಟ್ಟಬಾರದುದ ಮುಟ್ಟಿದ ಅಸಾಧ್ಯವ ಸಾಧಿಸಿದ
ತಲೆಗೆಟ್ಟುದ ತಲೆವಿಡಿದ ನೆಲೆಗೆಟ್ಟುದ ನಿರ್ಧರಿಸಿದ
ಗುಹೇಶ್ವರಾ ನಿಮ್ಮ ಶರಣ ಅಜಗಣ್ಣಂಗೆ
ಶರಣೆಂದು ಶುದ್ಧನಾದೆನು.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-397 / ವಚನ ಸಂಖ್ಯೆ-1063)
ಲೌಕಿಕರು ಕಾಣಲಾಗದ ನಿರಾಕಾರ ಪರಮಾತ್ಮನನ್ನು ಕಂಡಿದ್ದವರು ಅಜಗಣ್ಣ. ಕೇಳಲಾರದ ಆಂತರಂಗದ ಅರಿವಿನ ಮಂತ್ರವನ್ನು ಕೇಳಿದ್ದವರು ಅಜಗಣ್ಣ. ಅಸಾಮಾನ್ಯ ಮನುಷ್ಯರೂ ಕೂಡ ಮುಟ್ಟಲಾಗದ ಅಸಾಧ್ಯವಾದ ಐಕ್ಯಸ್ಥಲವನ್ನು ಅಜಗಣ್ಣ ತಲುಪಿಬಿಟ್ಟಿದ್ದರು. ಇಂಥ ಅಸಾಧ್ಯವನ್ನು ಸಾಧಿಸಿದ ಅಜಗಣ್ಣನಿಗೆ ಶರಣು ಅಂತಾರೆ ಅಲ್ಲಮ ಪ್ರಭುಗಳು. ಇದು ಅಜಗಣ್ಣ ಐಕ್ಯಸ್ಥಲವನ್ನು ತಲುಪಿಬಿಟ್ಟಿದ್ದಾ ಅನ್ನುವುದರ ಸಂಕೇತ.
ಅಣ್ಣ ಯಾರು ಅಂತ ಕುರುಹನ್ನರುಹಿದ ಈ ಜಂಗಮ ಸಾಮಾನ್ಯನಲ್ಲ. ಈ ಮಹಾನುಭಾವ ನನ್ನ ಅಣ್ಣ ಅಜಗಣ್ಣನವರ ಬಗ್ಗೆ ಇಷ್ಟೆಲ್ಲಾ ಹೇಳತಾರೆ ಅಂತ ಆಶ್ಚರ್ಯ ಚಕಿತಳಾಗುತ್ತಾಳೆ. ಅದಕ್ಕೆ ತಕ್ಷಣ ಮುಕ್ತಾಯಕ್ಕ ಅಲ್ಲಮ ಪ್ರಭುಗಳನ್ನು ಕೇಳತಾಳೆ.
ಸಚ್ಚಿದಾನಂದಸ್ವರೂಪವಾದ, ವಾಙ್ಮನಕ್ಕಗೋಚರವಾದ,
ಜ್ಞಾನಕ್ರೀಯನೊಳಕೊಂಡು ನಿಂದ ಜಂಗಮವೆ
ಅಂಗ ಪ್ರಾಣವಾದ,
ಶರಣರನೊಳಕೊಂಡು ಚಿದ್ಘನದೊಳಗೆ ಅವಿರಳೈಕ್ಯವಾದ
ಎನ್ನ ಅಜಗಣ್ಣತಂದೆಯನರಿದು ಶರಣೆಂಬಾತ
ನೀನಾರು ಹೇಳಯ್ಯಾ?
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-403 / ವಚನ ಸಂಖ್ಯೆ-1125)
ಎಂಥ ಅದ್ಭುತ ಪದಗಳನ್ನು ಬಳಸಿದ್ದಾರೆ ಮುಕ್ತಾಯಕ್ಕನವರು ಈ ವಚನದಲ್ಲಿ. ಸತ್, ಚಿತ್, ಆನಂದ ಸ್ವರೂಪನಾದವನು. ಅಂತರಂಗದ ಅರಿವಿಗೆ ಅತೀತನಾದವನು. ಜ್ಞಾನಕ್ರಿಯೆಗಳಿಂದ ಒಡಗೂಡಿದವನು. ಲೌಕಿಕ ಬದುಕಿನ ಮಾಯೆಯ ಆಲಿಂಗನಕ್ಕೊಳಗಾಗದೇ ಲಿಂಗಾಗ ಸ್ವರೂಪಿಯಾದ ಶರಣ. ಘನದಲ್ಲಿ ಐಕ್ಯನಾದ ಶರಣ. ಇಂಥ ಜ್ಞಾನರೂಪಿ ಮತ್ತು ದೊಡ್ಡವನು ಅಂತ ನಿಮಗೆ ಹೇಗೆ ಗೊತ್ತು ಮತ್ತು ನೀವು ಯಾರು ಅಂತ ಮುಕ್ತಾಯಕ್ಕನವರು ಅಲ್ಲಮ ಪ್ರಭುಗಳನ್ನು ಕೇಳುತ್ತಾರೆ. ಆಗ ಅಲ್ಲಮ ಪ್ರಭುಗಳು ಕೊಟ್ಟ ಉತ್ತರ ಅನುಭಾವ ಚರಿತ್ರೆಯಲ್ಲಿ ಅಜರಾಮರವಾಗಿ ನಿಲ್ಲುವಂಥ ವಚನವಿದು.
ಶರಣು ಶರಣಾರ್ಥಿ ಎಲೆ ತಾಯೆ,
ಧರೆಯಾಕಾಶ ಮನೆಗಟ್ಟದಂದು
ಹರಿವ ಅನಿಲ ಅಗ್ನಿ ಜಲ
ಮೊಳೆದೋರದಂದು ಹುಟ್ಟಿದಳೆಮ್ಮವ್ವೆ!
ಅದಕ್ಕೆ ಮುನ್ನವೆ ಹುಟ್ಟದೆ ಬೆಳೆದನೆಮ್ಮಯ್ಯ.
ಈ ಇಬ್ಬರ ಬಸಿರಲ್ಲಿ ಬಂದೆ ನಾನು!
ಎನ್ನ ತಂಗಿಯರೈವರು ಮೊರೆಗೆಟ್ಟು ಹೆಂಡಿರಾದರೆನಗೆ!
ಕಾಮಬಾಣ ತಾಗದೆ ಅವರ ಸಂಗವ ಮಾಡಿದೆನು.
ನಾ ನಿಮ್ಮ ಭಾವ ಅಲ್ಲಯ್ಯನು, ನೀನೆನಗೆ ನಗೆವೆಣ್ಣು
ನಮ್ಮ ಗುಹೇಶ್ವರನ ಕೈವಿಡಿದು, ಪರಮಸುಖಿಯಾಗಿ,
ಕಳವಳದ ಕಂದರವೆಯೇನು ಹೇಳಾ?
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-500 / ವಚನ ಸಂಖ್ಯೆ-1517)
ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದದ ಅರ್ಥ:
ನಗೆವೆಣ್ಣು: ನಾದಿನಿ, ಸಹೋದರನ ಹೆಂಡತಿ.
ಕಂದರವೆ: ಪ್ರಶ್ನೆ, ದುಗುಡ.
ಒಂದು ಸಣ್ಣ ಸಾಧನೆ ಮಾಡಿದರೆ ಅದರ ಅಹಂಕಾರ ನಮ್ಮ ತಲೆಗೇರುತ್ತದೆ. ಆದರೆ ಆಧ್ಯಾತ್ಮದ ಮೇರು ಶಿಖರವಾದ ವ್ಯೋಮಮೂರ್ತಿ ಅಲ್ಲಮ ಪ್ರಭುಗಳು ಎಷ್ಟು ತಾತ್ವಿಕವಾಗಿ ಅಷ್ಟೇ ವಿನಮ್ರತೆಯಿಂದ ತಾನಾರೆಂದು ಹೇಳುವ ಈ ವಚನದ ಆಶಯ ಅದ್ಭುತ. “ಶರಣು ಶರಣಾರ್ಥಿ ಎಲೆ ತಾಯೆ” ಎಂದು ಅತ್ಯಂತ ವಿನಯದಿಂದ ಹೇಳುವದರಿಂದ ಈ ವಚನ ಪ್ರಾಂಭವಾಗುತ್ತದೆ.
ಧರೆ ಅಂದರೆ ಆಕಾಶ, ವಾಯು, ಅಗ್ನಿ, ನೀರು ಮತ್ತು ಪೃಥ್ವಿ ಪಂಚಭೂತಗಳಿಂದ ಉಂಟಾದ ವಿಶ್ವ. ಈ ಪಂಚಭೂತಗಳು ಇರುವುದಕ್ಕಿಂತ ಮುಂಚೆಯೇ ನನ್ನ ತಾಯಿ ಚಿತ್‌ಶಕ್ತಿಯ ರೂಪದಲ್ಲಿ ಜನಿಸಿದ್ದಳು. ನಿರಾಕಾರ ಸ್ವರೂಪಿಯಾದ ಶಿವನು ಚಿತ್‌ಶಕ್ತಿಯ ದೈವತ್ವದೊಡಗೂಡಿದಾಗ ಲಿಂಗಾಂಗ ಸ್ವರೂಪಿಗಳ ಉದರದಲ್ಲಿ ನಾನು ಜನಿಸಿದೆ. ಶಿವಶಕ್ತಿ ಸ್ವರೂಪವನ್ನು ಅಲ್ಲಮ ಪ್ರಭುಗಳ ಒಂದು ವಚನದಲ್ಲಿ ನಿರೂಪಿತವಾಗಿದೆ.
ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ;
ಶಿವನೆ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು.
ಇಂತು, ಚೈತನ್ಯಾತ್ಮಕನೆ ಚಿತ್‌ಸ್ವರೂಪನೆಂದರಿಯ ಬಲ್ಲಡೆ
ಆತನೆ ಶರಣ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-182 / ವಚನ ಸಂಖ್ಯೆ-589)
ಹಾಗೆಯೇ ಪಂಚ ಶಕ್ತಿರೂಪಗಳಾದ ಆದಿಶಕ್ತಿ, ಪರಾಶಕ್ತಿ, ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ನನ್ನ ಜೊತೆಯಲ್ಲಿ ಜನಿಸಿದರು. ನನ್ನ ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಯಲ್ಲಿ ಈ ಐವರೂ ನನ್ನ ಜೊತೆಗೆ ಸಹಕರಿಸಿದರು. ಇಂಥ ಪಂಚಶಕ್ತಿಗಳ ಸಹಾಯದಿಂದ ಪಂಚೇಂದ್ರಿಯಗಳಾದ ಶ್ರೋತೃ(ಕಿವಿ), ತ್ವಕ್(ಚರ್ಮ), ಚಕ್ಷು(ಕಣ್ಣು), ಜಿಹ್ವಾ(ನಾಲಿಗೆ) ಮತ್ತು ಘ್ರಾಣ(ಮೂಗು) ಎನ್ನುವ ಸಮಷ್ಠಿಗಳಿಂದ ಹುಟ್ಟಿದ ಮಾಯಾ ಗುಣಗಳು ನನ್ನಲ್ಲಿ ಇದ್ದರೂ ಕೂಡ ಕಾಮವಾಸನೆಯೆಂಬ ಮಾಯೆಯ ಪ್ರಭಾವ ಬೀರಲಿಲ್ಲ.
ಏನೂ ಅಲ್ಲದ, ಯಾವ ಕುರುಹು, ಹೆಸರು ಇಲ್ಲದ ಅಲ್ಲಯ್ಯ ನಾನು. ನನ್ನ ಅಂತರಂಗದ ಅರಿವಾದ ಗುಹೇಶ್ವರನನ್ನು ಮದುವೆಯಾದವಳು ನೀನು. ನನಗೆ ನಾದಿನಿಯಾಗಬೇಕು. ಗುಹೇಶ್ವರನ ಕೈಹಿಡಿದು ಆನಂದಿಂದ ಇರಬೇಕಾದ ನಿನಗೆ ಏನು ತೊಂದರೆ ಮತ್ತು ದುಃಖ ಅಂತ ಮರು ಪ್ರಶ್ನೆ ಮಾಡುತ್ತಾರೆ ಅಲ್ಲಮ ಪ್ರಭುಗಳು. ಅಲ್ಲಮ ಪ್ರಭುಗಳಲ್ಲಿ ಲಿಂಗ ಸ್ವರೂಪಿಯಾದ ಸಾಕ್ಷಾತ್ ಶಿವನ ಸಾಕಾರ ರೂಪವನ್ನು ಕಂಡ ಮತ್ತು ಅವರು ಆಡಿದ ಸಾಂತ್ವನದ ನುಡಿಗಳು ಕಿವಿಗೆ ಬಿದ್ದಾಗ ಮುಕ್ತಾಯಕ್ಕ ತನ್ನ ದುಃಖದಿಂದ ಹೊರ ಬರುವ ಪ್ರಯತ್ನ ಮಾಡುತ್ತಾಳೆ.
ದೇವ ದೇವ ಶರಣು ಶರಣಾರ್ಥಿ, ಅವಧರಿಸಯ್ಯಾ.
ಕೇಳಿದ ಸುಖ ಕಿವಿಗೆ ಬೇಟವಾಯಿತ್ತು.
ಕಿವಿಗಳ ಬೇಟ ಕಂಗಳಮುಂದೆ ಮೂರ್ತಿಗೊಂಡಿತ್ತು.
ಕಂಗಳ ಮುಂದೆ ಕಂಡ ಸುಖವು ಮನಕ್ಕೆ ವೇದ್ಯವಾಯಿತ್ತು.
ಶಿವಶರಣರ ದರುಶನದ ಸುಖವೇನೇನೆಂದೆನಬಹುದು?
ಮದವಳಿದು ಮಹವನೊಡಗೂಡಿದ
ಎನ್ನ ಅಜಗಣ್ಣನಗಲಿದ ದುಃಖ
ನಿಮ್ಮ ಸಂಗದಲ್ಲಿ ಸಯವಾಯಿತ್ತು ಕಾಣಾ ಪ್ರಭುವೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-401 / ವಚನ ಸಂಖ್ಯೆ-1117)
ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದದ ಅರ್ಥ:
ಬೇಟ: ಒಲವು, ಸುಖ, ಪ್ರೀತಿ.
ಅಲ್ಲಮ ಪ್ರಭುಗಳನ್ನು ಬನ್ನಿರಿ ದೇವ ದೇವ ಅಂತ ಗೌರವದಿಂದ ಮಾತನಾಡಿಸುತ್ತಾರೆ ಮುಕ್ತಾಯಕ್ಕನವರು. ನಿನ್ನ ದುಃಖ ಏನು ಅಂತ ಕೇಳಿದಿರಲ್ಲಾ ಆ ಧ್ವನಿಯನ್ನು ಕೇಳಿದ ಕಿವಿಗಳು ಮತ್ತು ಕಣ್ಣುಗಳು ನೋಡಿದ ಸಾಕಾರ ಮೂರ್ತಿಯಿಂದ ಮನಸ್ಸು ತಂಪಾಯಿತು. ಇಂಥ ಸಾಂತ್ವನದ ನುಡಿಗಳಿಗೆ ಕಾಯುತ್ತಿದ್ದ ಕಿವಿಗಳಿಗೆ ಈಗ ಹಿತವಾಯಿತು. ಈ ಹಿತಾನುಭವದಿಂದ ನಿಮ್ಮ ಸಾಕಾರಮೂರ್ತಿಯ ದರ್ಶನವಾಯಿತು. ಇದೇ ಶಿವ ಶರಣರ ದರ್ಶನದ ಭಾಗ್ಯ. ಎಲ್ಲ ಮೋಹಗಳನ್ನೂ ತ್ಯಜಿಸಿ ಲಿಂಗೈಕ್ಯನಾದ ಅಣ್ಣ ಅಜಗಣ್ಣ ಅಗಲಿದ ದುಃಖ ನಿಮ್ಮ ದರ್ಶನ ಭಾಗ್ಯದಿಂದ ಕಡಿಮೆಯಾಯಿತು ಅಂತ ಸಾಂತ್ವನವನ್ನು ಹೇಳಿಕೊಳ್ಳುತ್ತಾಳೆ ಮುಕ್ತಾಯಕ್ಕ.
ಅಜಗಣ್ಣನು ಅಗಲಿದ ಎನ್ನುವುದನ್ನು ಯಾಕೆ ಹೇಳಬಾರದು ಅಂತ ಮುಕ್ತಾಯಕ್ಕನವರಿಗೆ ಈ ವಚನದ ಮೂಲಕ ತಿಳಿಸುತ್ತಾರೆ ಅಲ್ಲಮ ಪ್ರಭುಗಳು.
ಅರಿವರತು ಮರಹುಗೆಟ್ಟು ತನ್ನಲ್ಲಿ ತಾನು ಸನ್ನಹಿತನಾದವಂಗೆ
ದುಃಖಿಸುವರೆ ಹೇಳಾ? ಶೋಕಿಸುವರೆ ಹೇಳಾ?
ಒಡಲಿಲ್ಲದಾತಂಗೆ ಎಡೆಯಲೊಂದು ಅಳಿವುಂಟೆಂದು
ನುಡಿದು ಹೇಳುವ ಮಾತು ಭ್ರಾಂತು ನೋಡಾ!
ಎರಡಿಲ್ಲದ ಐಕ್ಯಂಗೆ ಒಳಹೊರಗಿಲ್ಲ ನೋಡಾ,
ಗುಹೇಶ್ವರನ ಶರಣ ಅಜಗಣ್ಣಂಗೆ!
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-298 / ವಚನ ಸಂಖ್ಯೆ-831)
ನಿರಾಕಾರ ಪರಮಾತ್ಮನ ಸ್ವರೂಪವಾದ ಅಂತರಂಗದ ಅರಿವನ್ನು ಪಡೆದು ಶರಣಸತಿ ಲಿಂಗಪತಿಯೆಂಬುದನ್ನು ಕಂಡುಕೊಂಡ ಅಜಗಣ್ಣನು ತನ್ನಲ್ಲಿ ತಾನೇ ಲೀನವಾಗಿದ್ದಾನೆ. ಬೆಳಗಿನೊಳಗಿನ ಮಹಾಬೆಳಗನ್ನು ಸೇರಿಕೊಂಡಿದ್ದಾನೆ. ತನ್ನನ್ನು ತಾನು ಅರ್ಥ ಮಾಡಿಕೊಂಡು ಐಕ್ಯಸ್ಥಿತಿಯನ್ನು ತಲುಪಿದವನಿಗೆ ಶರೀರವೇ ಇಲ್ಲ. ಜ್ಞಾನ ಪ್ರಕಾಶದ ಜ್ಯೋತಿಗೆ ಯಾವುದು ಶರೀರ ತಾಯೆ? ಒಡಲು ಬೇರೆ ಮನಸ್ಸು ಬೇರೆ ಅಂತ ಯಾವುದೂ ಇಲ್ಲ. ಎಲ್ಲವೂ ಲಿಂಗ ಸ್ವರೂಪವೇ. ಬೇರೆ ಬೇರೆ ಎನ್ನುವುವದು ನಮ್ಮ ಭ್ರಾಂತಿ. ಶರಣರಾದವರಿಗೆ ಅಂತರಂಗ ಬಹಿರಂಗ ಎನ್ನುವ ಎರಡು ಮಾತಿಲ್ಲ. ಅದಕ್ಕಾಗಿ ಶೋಕಿಸುವ ಅಗತ್ಯವಿಲ್ಲ. ಇದಕ್ಕಾಗಿ ದುಃಖಪಡಬಾರದು ಅಂತ ಅಲ್ಲಮ ಪ್ರಭುಗಳು ಸಾಂತ್ವನ ಹೇಳುತ್ತಾರೆ.
ಅಲ್ಲಮ ಪ್ರಭುಗಳ ಈ ಮಾತುಗಳಿಂದ ಮುಕ್ತಾಯಕ್ಕನಿಗೆ ಅಜಗಣ್ಣನ ನಿಜರೂಪ ಕಣ್ಣ ಮುಂದೆ ಬರುತ್ತದೆ. ಹೌದು ಪ್ರಭುಗಳೆ, ನೀವು ಹೇಳತಾ ಇರೋದು ಸತ್ಯ. ಅಣ್ಣ ಅಜಗಣ್ಣನನ್ನು ನಾನು ಯಾಕೆ ಇಷ್ಟೊಂದು ಹಚ್ಚಿಕೊಂಡಿದ್ದೇನೆ ಎನ್ನುವುದನ್ನು ಸ್ವಲ್ಪ ಕೇಳಿ ಅಂತಾ ಬಿನ್ನವಿಸಿಕೊಳ್ಳುತ್ತಾಳೆ.
ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ,
ಬಯಲಬೊಂಬೆಯ ಕೈಯಲ್ಲಿ ಕೊಟ್ಟು
ಮುದ್ದಾಡಿಸುತ್ತಿರ್ದನಯ್ಯಾ.
ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ,
ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ,
ಎನ್ನ ಅಜಗಣ್ಣನ ಯೋಗಕ್ಕೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-402 / ವಚನ ಸಂಖ್ಯೆ-119)
ನೀರು ಒಂದು ಕಡೆ ನಿಲ್ಲೋದಿಲ್ಲ. ಅದಕ್ಕೆ ಹರಿಯುವಂಥಾ ಗುಣವಿದೆ. ತನ್ನತನವನ್ನು ಬಿಡದದ್ದರೂ ಕೂಡ ಯಾವಾಗಲೂ ಸ್ಥಾನವನ್ನು ಪಲ್ಲಟ ಮಾಡತಾ ಇರತದೆ. ಅಂಥ ನೀರ ಗೊಂಬೆ ನಾನು. ಬಯಲು ರೂಪ ಅಂದರೆ ಎಲ್ಲವನ್ನೂ ಒಳಗೊಂಡಂಥ ತತ್ವ. ಅದಕ್ಕೇನೆ ಅಲ್ಲಮ ಪ್ರಭುಗಳು ಬಯಲು ಎನ್ನುವ ಶಬ್ದಕ್ಕೆ ವಿಶಿಷ್ಠ ಸ್ಥಾನವನ್ನು ನೀಡಿದ್ದಾರೆ. ಇಂಥ ಚಂಚಲತೆಯ ಪ್ರತೀಕವಾದ ನನಗೆ ಎಲ್ಲ ತತ್ವ ವಿಚಾರ ಧಾರೆಗಳನ್ನೂ ಎರೆದು ಒಂದು ಮುದ್ದಾದ ಗೊಂಬೆಯನ್ನು ಮಾಡಿದ್ದಾನೆ.
ಮುಂದಿನ ಸಾಲುಗಳಲ್ಲಿ ಒಂದು Twist ಕೊಡತಾರೆ ಮುಕ್ತಾಯಕ್ಕನವರು. ಸಾಮಾನ್ಯವಾಗಿ ಅಗ್ನಿಯ ಸ್ಪರ್ಷದಿಂದ ಕರ್ಪೂರ ಆವಿಯಾಗಿ ಸಮಷ್ಠಿಯನ್ನು ಕೂಡಿಕೊಳ್ಳುತ್ತದೆ. ಆದರೆ ಇಲ್ಲಿ ಅಗ್ನಿಯ ಸಿಂಹಾಸನದಲ್ಲಿ ಕುಳಿತ ಕರ್ಪೂರದ ಗೊಂಬೆಗೆ ಏನೂ ಆಗಿಲ್ಲ. ಆದರೆ ಅಗ್ನಿಯ ಸಿಂಹಾಸನ ಕರಗಿ ಕರ್ಪೂರ ಹಾಗೆಯೇ ಉಳಿದಿದೆ. ಜ್ಞಾನವೆಂಬ ಅಗ್ನಿಯಾದ ಅಜಗಣ್ಣನು ಹೊರಟು ಹೋಗಿದ್ದಾನೆ. ಕರ್ಪೂರದ ಪುತ್ಥಳಿಯಾದ ನಾನು ಇನ್ನೂ ಉಳಿದುಕೊಂಡಿದ್ದೇನೆ. ಇದು ಅಜಗಣ್ಣನ ಯೋಗದ ಪ್ರತಿಫಲ ಅಂತ ಅಲ್ಲಮ ಪ್ರಭುಗಳಿಗೆ ತಿಳಿಸುತ್ತಾರೆ. ಇದಕ್ಕೆ ಸಮಾಧಾನ ಹೇಳುವಂತೆ ಅಲ್ಲಮ ಪ್ರಭುಗಳು ಈ ವಚನದಲ್ಲಿ ನಿರೂಪಣೆ ಮಾಡಿದ್ದಾರೆ.
ಅಳಿವನಲ್ಲ ಉಳಿವನಲ್ಲ, ಘನಕ್ಕೆ ಗಮನನಲ್ಲ,
ಮನಕ್ಕೆ ಸಾಧ್ಯನಲ್ಲ,
ತನ್ನ ತಪ್ಪಿಸಿ ಇದಿರನೊಪ್ಪಿಸಿಹೆನೆಂಬ ಭಿನ್ನಭಾವಿಯಲ್ಲ,
ಗುಹೇಶ್ವರನ ಶರಣ
ಅಜಗಣ್ಣನ ಅಂತಿಂತೆನಬಾರದು ಕೇಳಾ ತಾಯೆ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-306 / ವಚನ ಸಂಖ್ಯೆ-854)
ಇನ್ನೂ ಅಣ್ಣನ ಸಾವಿನ ಮಾಯೆಯಿಂದ ಹೊರ ಬರಲಾರದ ಮುಕ್ತಾಯಕ್ಕನವರನ್ನು ಕುರಿತು, ನಿನ್ನ ಅಣ್ಣನ ಸಾವು ನಿಜಕ್ಕೂ ನೀನು ತಿಳಿದ ಹಾಗಿಲ್ಲ. ಅದು ನಿನ್ನ ಭ್ರಮೆ. ಕತ್ತಲೆಂಬ ಮಾಯೆ ನಿನ್ನ ಕಣ್ಣುಗಳನ್ನು ಮುಚ್ಚಿದೆ. ಅಳಿದವನಲ್ಲ, ಉಳಿದವನಲ್ಲ, ಪರಿಪೂರ್ಣ ನಿರಾಕಾರ ಸತ್ವ. ಮಹಾಘನನಾದ ಅಜಗಣ್ಣನು ನಿಷ್ಕಲ, ನಿರಾಲಂಬ, ಸರ್ವ ವೃತ್ತಿರಹಿತನಾಗಿ ತನ್ಮಯನಾಗಿದ್ದಾನೆ. ಹಾಗಾಗಿ ಅಜಗಣ್ಣ ಇನ್ನು ನಿನ್ನನ್ನು ಬಿಟ್ಟುಹೋಗಿದ್ದಾನೆ ಎನ್ನುವುದು ತಪ್ಪು ಆತ ಗುಹೇಶ್ವರನ ಶರಣ ಎಂದು ಹೇಳುತ್ತಾರೆ ಅಲ್ಲಮ ಪ್ರಭುಗಳು.
ಆದರೆ ಅಣ್ಣ ಅಜಗಣ್ಣನವರ ಲಿಂಗೈಕ್ಯವನ್ನು ಸಹಿಸಿಕೊಳ್ಳಲಾರದ ಮುಕ್ತಾಯಕ್ಕನವರು ಮರಳಿ ಪ್ರಶ್ನೆಯನ್ನು ಮಾಡುತ್ತಾರೆ.
ಅಂಬರದಲಾಡುವ ತುಂಬಿಯ ಬಿಂಬದ
ಕಂಬನಿಯೊಳಗಣ ರತ್ನದ
ಬಯಕೆಯಾದ್ಯಂತವನೇನೆಂಬೆನಯ್ಯಾ?
ವೇದ ಶಾಸ್ತ್ರ ಶೃತಿ ಸ್ಮೃತಿಗಳು ಸ್ತುತಿಸಲರಿಯವು.
ನಾದವಲ್ಲ, ಸುನಾದದ ನಿಲವಲ್ಲ
ಭೇದಿಸುವಡೆ ಅಗಮ್ಯ ನೋಡಾ!
ಸೋಲಿಲ್ಲದ ಸೊಮ್ಮಿಲ್ಲದ ಘನವನೇನೆಂಬೆನು?
ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯನು?
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-396 / ವಚನ ಸಂಖ್ಯೆ-1096)
ಎಂತು ಮೆರೆವೆನಯ್ಯ ಎನ್ನ ಅಜಗಣ್ಣ ತಂದೆಯನು ಎನ್ನುತ್ತಾ ನನಗೆ ಅಜಗಣ್ಣನನ್ನು ಮರೆಯುವದಕ್ಕಾಗುವುದಿಲ್ಲ ಅಂತಾರೆ ಮುಕ್ತಾಯಕ್ಕ. ಅದರ ಜೊತೆಗೆ ಎಂಥ ಅನುಪಮ ಹೋಲಿಕೆಯನ್ನು ನೀಡತಾರೆ ಮುಕ್ತಾಯಕ್ಕನವರು. “ಅಂಬರದಲ್ಲಾಡುವ ದುಂಬಿ” ದುಂಬಿಯ ಹಾರಾಟವೇ ಚಂಚಲತೆಯ ಪ್ರತೀಕ. ರೆಕ್ಕೆಗಳ ಬಡಿತ ಕಣ್ಣಿಗೆ ಕಾಣಲಾರದಷ್ಟು ವೇಗ. ಅದರೆ ಆ ದುಂಬಿಯ ಕಣ್ಣಲ್ಲಿರುವ ಬೆಳಕಿನ ಪ್ರಕಾಶವನ್ನು ಹುಡುಕಿಕೊಂಡು ಹೋಗುವ ಪರಿ ವಿಸ್ಮಯ. ಅಂಥ ದುಂಬಿಯ ಬಯಕೆಯ ಹಾಗೆ ನನ್ನ ಅಜಗಣ್ಣನ ನೆನಪು ನನಗೆ. ವೇದ ಶಾಸ್ತ್ರ ಶೃತಿ ಸ್ಮೃತಿಗಳಿಗೂ ಮೀರಿದ ನಾದ ಸುನಾದ ನಮ್ಮ ಅಜಗಣ್ಣನವರದು. ಅದು ಆಕಾಶದಷ್ಟು ಅಗಮ್ಯ ಅಗೋಚರ. ಇಂಥ ಅಸಾಧಾರಣ ವ್ಯಕ್ತಿ ನನ್ನ ಅಣ್ಣ ಅಜಗಣ್ಣ ಅಂತ ಹೇಳಿಕೊಳ್ಳೋದಿಕ್ಕೆ ನನಗೆ ಹೆಮ್ಮೆ. ಅಂಥ ವ್ಯಕ್ತಿಯನ್ನು ನಾ ಹೇಗೆ ಮರೆಯಲಿ ಗುರುಗಳೇ ಅಂತ ಅಲ್ಲಮ ಪ್ರಭುಗಳಿಗೆ ಉತ್ತರಿಸುತ್ತಾಳೆ.
ಕಂಡೆನೆಂಬುದು ಕಂಗಳ ಮರವೆ,
ಕಾಣೆನೆಂಬುದು ಮನದ ಮರವೆ,
ಕೂಡಿದೆನೆಂಬುದು ಅರುಹಿನ ಮರವೆ,
ಅಗಲಿದೆನೆಂಬುದು ಮರಹಿನ ಮರವೆ,
ಇಂತು, ಕಂಡೆ-ಕಾಣೆ, ಕೂಡಿದೆ-ಅಗಲಿದೆ ಎಂಬ,
ಭ್ರಾಂತಿಸೂತಕವಳಿದು ನೋಡಲು
ಗುಹೇಶ್ವರಲಿಂಗವನಗಲಲೆಡೆಯಿಲ್ಲಾ ಕೇಳಾ,
ಎಲೆ ತಾಯೆ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-387 / ವಚನ ಸಂಖ್ಯೆ-1032)
ಕಂಡೆ, ಕಾಣೆ, ಕೂಡಿದೆ, ಅಗಲಿದೆ ಎನ್ನುವುದು ನಮ್ಮೊಳಗಿರುವ ಭ್ರಮೆ. ಕಂಡಿದ್ದು ಸ್ವಲ್ಪ ಹೊತ್ತು ಕಳೆದ ಮೇಲೆ ಮರೆತು ಹೋಗಬಹುದು. ಮನಃಪಟಲದ ಮೇಲೆ ಮೂಡಿದ ಚಿತ್ರ ಸ್ವಲ್ಪ ಹೊತ್ತಿನ ನಂತರ ಮರೆತು ಹೋಗಬಹುದು. ಕೂಡಿ ಮಾತನಾಡಿದವರು ಚಿರಕಾಲ ನೆನಪಿನಲ್ಲಿ ಉಳಿಯದೇ ಇರಬಹುದು. ಅಗಲಿ ಹೋದ ವ್ಯಕ್ತಿಯ ನೆನಪು ಶಾಶ್ವತವಾಗಿ ಮರೆತು ಹೋಗಬಹುದು. ಹಾಗಾಗಿ ಈ ಎಲ್ಲ ಲೌಕಿಕ ಅನುಭವಗಳು ಶಾಶ್ವತವಲ್ಲ. ಇವೆಲ್ಲವನ್ನೂ ಮರೆತರೂ ಎಲ್ಲವೂ ನಿರಾಕಾರ ಬ್ರಹ್ಮಸ್ವರೂಪನಾದ ಲಿಂಗವನ್ನು ಕೂಡಿಕೊಳ್ಳುತ್ತವೆ ಎನ್ನುವುದನ್ನು ಮರೆಯಲಾಗದು. ಗುಹೇಶ್ವರಲಿಂಗವನ್ನು ಬಿಟ್ಟು ಎಲ್ಲಿಗೆ ಹೋಗುತ್ತೀಯೆ ತಾಯೆ ನೀನು ಅವನ ಜೊತೆಗೇ ಇದ್ದೀಯಾ ಎಂದು ಸಾಂತ್ವನ ಹೇಳುತ್ತಾರೆ ಅಲ್ಲಮ ಪ್ರಭುಗಳು. ಇದಕ್ಕೆ ಮುಕ್ತಾಯಕ್ಕನವರು ಕೊಡುವ ಉತ್ತರದ ಭಾಷೆ ಎಷ್ಟು ಸೊಗಸಾಗಿದೆ. ಅಲ್ಲಮ ಪ್ರಭುಗಳಿಗೂ ಆಶ್ಚರ್ಯ ತಂದಿರುವಂತೆ ಕಾಣುತ್ತದೆ.
ಕಣ್ಣ ಮೊದಲಲ್ಲಿ ಕುಳ್ಳಿರ್ದು
ಬಣ್ಣದೋರುವ ಪರಿಯ ನೋಡು ಅವ್ವಾ.
ಬಣ್ಣವಿಲ್ಲದ ಬಣ್ಣವನುಟ್ಟು ಸುಳಿದನು.
ಈ ಅಜಗಣ್ಣನ ಯೋಗಕ್ಕೆ ಬೆರಗಾದೆನವ್ವಾ.
ಈ ಅರಿವೆಂತುಟೆಲ್ಲವನೊಳಗಿಟ್ಟುಕೊಂಡನು,
ಶಿವಗಣಸಂಚ ಶಿವಯೋಗಿ ಅಜಗಣ್ಣದೇವನು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-397 / ವಚನ ಸಂಖ್ಯೆ-1106)
ಬಣ್ಣವಿಲ್ಲದ ಬಣ್ಣವನುಟ್ಟು ಸುಳಿದನು. ಎಂಥ ಅದ್ಭುತ ಶಬ್ದಪ್ರಯೋಗ. ಬಣ್ಣವಿಲ್ಲದ ಅಂದರೆ ಆಧ್ಯಾತ್ಮದಲ್ಲಿ ನಿರಾಕಾರ, ನಿರಹಂಕಾರ ಮತ್ತು ನಿರ್ಲಿಪ್ತ ತತ್ವ. ಕಣ್ಣಿಗೆ ಕಾಣಲಾರದ ಅರಿವನ್ನು ಬಣ್ಣದಂತೆ ತೊಟ್ಟು ಬದುಕಿ ಮಿಂಚಿ ಮರೆಯಾಗಿದ್ದಾನೆ. ಇದು ಅತ್ಯಂತ ಆಶ್ಚರ್ಯ ನನಗೆ ಅಂತ ಮುಕ್ತಾಯಕ್ತನವರು ಅಜಗಣ್ಣನ ನೆನಪು ಮಾಡಿಕೊಳ್ಳುತ್ತಾರೆ. ಇಂಥ ಅಪರಿಮಿತ ಅನುಪಮ ಶಕ್ತಿಯನ್ನೆಲ್ಲವನ್ನು ತನ್ನೊಳಗೆ ಇಟ್ಟುಕೊಂಡು ಮರೆಯಾಗಿದ್ದಾನೆ ಶಿವ ಶರಣ ಅಜಗಣ್ಣ ಎನ್ನುತ್ತಾರೆ. ಜೊತೆಗೆ ಮುಕ್ತಾಯಕ್ಕ ಅಲ್ಲಮ ಪ್ರಭುಗಳಿಗೆ ಮತ್ತೊಂದು ಪ್ರಶ್ನೆ ಮಾಡುತ್ತಾರೆ.
ತನುವಿಡಿದೆನಾಗಿ ಅನುವರಿಯದೆ ಕೆಟ್ಟೆನು.
ಮನವಿಡಿದೆನಾಗಿ ಅರಿವು ಉಳಿಯದೆ ಕೆಟ್ಟೆನು.
ಭಾವದ ಬಯಕೆ ಹಿಂಗದಾಗಿ ವಿಯೋಗಿಯಾಗಿ ಕೆಟ್ಟೆನು.
ಅರಿವ ನುಡಿದು ಮರಹಿಗೊಳಗಾದೆನು.
ಎನ್ನ ಕಾಣದೆ ಭಿನ್ನಜ್ಞಾನಿಯಾದೆನು.
ಅಜಗಣ್ಣನೆಂಬ ಮಹಿಮನು ಘನವೇದ್ಯನಾಗಿ
ಎನ್ನ ಮತಿಗೆ ಮರವೆಯ ಮಾಡಿ ಹೋದನು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-400 / ವಚನ ಸಂಖ್ಯೆ-1114)
ಮುಕ್ತಾಯಕ್ಕನವರಿಗೆ ಅಣ್ಣನೇ ಪ್ರಪಂಚವಾಗಿರುವಾಗ ಅಷ್ಟು ಸುಲಭವಾಗಿ ಅಣ್ಣನ ಸಾವನ್ನು ಸ್ವೀಕರಿಸಲು ತಯಾರಿಲ್ಲ ಅವರು. ಅವನ ತಂಗಿಯಾದರೂ ಸಹ ಅವನಲ್ಲಿದ್ದ ಅರಿವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲಿಲ್ಲ. ಅವನ ಮನಸ್ಸನ್ನು ಅರಿತಿದ್ದರೂ ಆ ಮನಸ್ಸನ್ನು ಹಿಡಿದಿಟ್ಟುಕೊಳ್ಳಲಾಗಲಿಲ್ಲ. ಅತನನ್ನು ಮರೆಯಲಾಗದೇ ವಿಯೋಗಿಯಾದಳು. ಅಣ್ಣ ಹೇಳಿದ್ದನ್ನು ನೆನಪಿಟ್ಟಿಕೊಳ್ಳಲು ಮರೆತಳು. ಅಣ್ಣನನ್ನು ಅರ್ಥ ಮಾಡಿಕೊಳ್ಳಲಾಗದೆ ಅಜ್ಞಾನಿಯಾದಳು. ನನ್ನ ಬುದ್ಧಿಗೆ ಮಂಕುಮಾಡಿ ಅಣ್ಣ ಹೋಗಿಬಿಟ್ಟ. ಕತ್ತಲೆಯಿಂದ ಬೆಳಕಿನೆಡೆಗೆ ನಾನು ಹೇಗೆ ಹೋಗಲಿ ಅಂತಾ ಅಲವತ್ತುಕೊಳ್ಳುತ್ತಾಳೆ. ಇದಕ್ಕೆ ಪ್ರತ್ಯುತ್ತರ ನೀಡುತ್ತಾ ಮುಕ್ತಾಯಕ್ಕಳನ್ನು ಸಂತೈಸುವ ಅಲ್ಲಮ ಪ್ರಭುಗಳ ಪರಿ ನಿಜಕ್ಕೂ ಅದ್ಭುತ.
ತನು ಉಂಟೆಂದಡೆ ಪಾಶಬದ್ಧ.
ಮನ ಉಂಟೆಂದಡೆ ಭವಕ್ಕೆ ಬೀಜ.
ಅರಿವ ನುಡಿದು ಕೆಟ್ಟೆನೆಂದರೆ ಅದೇ ಅಜ್ಞಾನ.
ಭಾವದಲ್ಲಿ ಸಿಲುಕಿದೆನೆಂಬ ಮಾತು ಬಯಲ ಭ್ರಮೆ ನೋಡಾ.
ಒಮ್ಮೆ ಕಂಡೆ-ಒಮ್ಮೆ ಕಾಣೆ, ಒಮ್ಮೆ ಕೂಡಿದೆ-ಒಮ್ಮೆ ಅಗಲಿದೆ
ಎಂದಡೆ ಕರ್ಮ ಬೆಂಬತ್ತಿ ಬಿಡದು.
ನಿನ್ನೊಳಗೆ ನೀ ತಿಳಿದು ನೋಡಲು ಭಿನ್ನವುಂಟೆ?
ಗುಹೇಶ್ವರಲಿಂಗವನರಿವಡೆ
ನೀನೆಂದೇ ತಿಳಿದು ನೋಡಾ ಮರುಳೆ?
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-451 / ವಚನ ಸಂಖ್ಯೆ-1211)
ನಿನ್ನೊಳಗೆ ನೀನೆ ಇರುವ ಮತ್ತು ನೀನೇ ಗುಹೇಶ್ವರಲಿಂಗದಲ್ಲಿರುವ ತತ್ವ ಎಂದು ತಿಳಿದಾಗ ದುಃಖಪಡುವ ಅವಶ್ಯಕತೆ ಇರುವುದಿಲ್ಲ ತಾಯೆ ಅಂತ ಸಂತೈಸುತ್ತಾರೆ ಅಲ್ಲಮ ಪ್ರಭುಗಳು. ಈ ಬಹಿರಂಗ ದೇಹ ಇದೆ ಅಂತ ಬಾಲ್ಯ, ಯೌವನ, ಹರೆಯ, ವೃದ್ಧಾಪ್ಯಗಳನ್ನು ಅರಿವಿಗೆ ತಂದುಕೊಳ್ಳುವುದೇ ಬಂಧನ. ಭವಿಯಾದವನಿಗೆ ಮನಸ್ಸೆನ್ನುವುದೇ ಮಾಯಾಂಕುರ. ಎಲ್ಲವನ್ನೂ ತಿಳಿದಿದ್ದೇನೆ ಎನ್ನುವುದೇ ಅಜ್ಞಾನ. ಎಲ್ಲ ಭಾವನೆಗಳಿಗೂ ಪ್ರತಿಕ್ರಿಯೆ ನೀಡುವುದು ಲೌಕಿಕದ ಭ್ರಮೆಯಲ್ಲಿ ನಿಂದ ನಿಲುವು. ಶರಣನಾದವನಿಗೆ ಭಯವಿಲ್ಲ. ಆದರೆ ಕಂಡೆ ಕಾಣೆ ಕೂಡಿದೆ ಅಗಲಿದೆ ಎನ್ನುವ ಲೌಕಿಕ ಅನುಭವಗಳೇ ಕರ್ಮದ ಸಂಕೋಲೆಗಳು. ಹಾಗಾಗಿ ನಿನ್ನನ್ನು ನೀನು ತಿಳಿದು ಅಂತರಂಗದ ಅರಿವಿನ ಬೆಳಕಿನ ಸಾಕ್ಷಾತ್ಕಾರವಾದಾಗ, ಪರತತ್ವ ಬೇರೆ ಇಲ್ಲ ಎನ್ನುವುದರ ಅರಿವು ಉಂಟಾದಾಗ ಅಜಗಣ್ಣ ಯಾರು ಎನ್ನುವುದರ ಅರಿವು ನಿನಗೆ ಬರುತ್ತದೆ ಎಂದು ಪ್ರತಿಕ್ರಯಿಸುತ್ತಾರೆ ಅಲ್ಲಮ ಪ್ರಭುಗಳು.
ಮುಕ್ತಾಯಕ್ಕನವರು ಅಲ್ಲಮ ಪ್ರಭುಗಳಿಗೆ ನೀಡುವ ಪ್ರತಿಕ್ರಿಯೆ ಅನುಭವ, ಅನುಭಾವ ಮತ್ತು ಅನುಭೂತಿ ಚರಿತ್ರೆಯಲ್ಲಿ ಸಿಗುವ ಉಪಮೆಯಗಳ ಅದ್ಭುತ ಲೋಕ. ಉಪಮೆಗಳಿಗೆ ಉಪಮಾತೀತರು 12 ನೇ ಶತಮಾನದ ವಚನಕಾರರು ಅಂತ ನನಗನಿಸುತ್ತದೆ. ಅನುಭಾವದೆತ್ತರಕ್ಕೇರಿದವರಿಗೆ ಮಾತ್ರ ಇಂಥ ಮಾತುಗಳನ್ನು ಹೇಳಲು ಸಾಧ್ಯ ಅಂತ ಅನಿಸುತ್ತದೆ.
ಅದ್ವೈತವ ನೆಲೆಗೊಳಿಸಿ ಎರಡಳಿದೆನೆಂಬವರು
ಶಿಶುಕಂಡ ಕನಸಿನಂತಿರಬೇಕಲ್ಲದೆ,
ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳಾ?
ಅರಿವರತು ಮರಹು ನಷ್ಟವಾಗಿ ಗುರುವ ತೋರಿದೆನೆಂಬರು,
ಇದಿರಿಂಗೆ ಕರುಳಕಲೆಯನರುಹುವ ಪರಿಯೆಂತು ಹೇಳಾ?
ಮನದ ಕೊನೆಯ ಮೊನೆಯ ಮೇಲಣ,
ಅರಿವಿನ ಕಣ್ಣಮುಂದೆ
ಸ್ವಯಂಪ್ರಕಾಶ ತೋರುತ್ತಿದ್ದಡೆ ತಾನಾಗಬಲ್ಲನೆ?
ನೆರೆಯರಿತು ಮರೆಯಬಲ್ಲಡೆ
ಎನ್ನ ಅಜಗಣ್ಣನಂತೆ ಶಬ್ದಮುಗ್ಧನಾಗಿರಬೇಕಲ್ಲದೆ,
ಶಬ್ದಸಂದಣಿಯ ಮಾತು ಸಯವಲ್ಲ ನೋಡಯ್ಯಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-394 / ವಚನ ಸಂಖ್ಯೆ-1100)
ಅಲ್ಲಮ ಪ್ರಭುಗಳನ್ನು ಪರೀಕ್ಷಿಸುತ್ತಿದ್ದಾಳೆ ಎನ್ನುವ ತರ್ಕ ನಮಗೆ ಮುಕ್ತಾಯಕ್ಕನವರ ಈ ವಚನದಿಂದ ಉಂಟಾಗುತ್ತದೆ. “ಶಿಶು ಕಂಡ ಕನಸಿನಂತೆ” ಮಗು ಕಣ್ಣು ಮುಚ್ಚಿ ನಿದ್ದೆ ಮಾಡತಾ ಮುಗ್ಧ ನಗು ಚೆಲ್ಲುವ ದೃಶ್ಯ ನಮ್ಮ ಕಣ್ಣ ಮುಂದೆ ಬರಬೇಕು. ಆವಾಗ ಮುಕ್ತಾಯಕ್ಕ ಹೇಳುವ ಈ Phrase ಥಟ್ಟಂತ ಅರ್ಥ ಆಗಿಬಿಡುತ್ತೆ. ಕಂಡ ಕನಸನ್ನು ತನ್ನ ನಗುವಿನಲ್ಲೇ ವ್ಯಕ್ತ ಪಡಿಸುವ ಮಗುವಿನಂತೆ ಅದ್ವೈತದ ಲಿಂಗಾಂಗ ಸಾಮರಸ್ಯದ ತತ್ವವನ್ನು ಹೇಳಬೇಕು. ಬಾಯಲ್ಲಿ ಹೇಳಿದರೆ ದ್ವೈತವನು ನುಡಿದ ಹಾಗಲ್ಲವೆ? ಅದು ಏನು ಪ್ರಯೋಜನ ಪೂಜ್ಯರೆ ಅಂತ ಅಲ್ಲಮ ಪ್ರಭುಗಳಿಗೆ ಪ್ರಶ್ನೆ ಮಾಡತಾರೆ ಮುಕ್ತಾಯಕ್ಕನವರು. ಇಂಥ ಮಗು ನನ್ನ ಅಜಗಣ್ಣ. ತನ್ನ ನಗುವಿನಲ್ಲೇ ಎಲ್ಲವನ್ನೂ ತಿಳಿಸಬಲ್ಲಂಥ ಜ್ಞಾನಿಯಾಗಿದ್ದ.
ತಾವು ನುಡಿದು ಹೇಳುತ್ತಿರುವ ಅದ್ವೈತದ ಅನುಭಾವ ನನಗೇಕೋ ಪರಿಪೂರ್ಣ ಅನಿಸುತ್ತಿಲ್ಲ. ಕರುಳು ಅರಿಯುವ ಹಾಗೆ ತಿಳಿಸಿ ಹೇಳುವ ದಾರಿ ಯಾವುದು ಅಂತ ಪ್ರಶ್ನೆಯನ್ನು ಮಾಡತಾರೆ ಮುಕ್ತಾಯಕ್ಕ. ಮನಸ್ಸಿನ ತುತ್ತ ತುದಿಯಲ್ಲಿ ಅಥವಾ ಅಂತರಂಗದ ಆಳದಲ್ಲಿ ನಿಮಗೆ ಸ್ವಯಂಪ್ರಕಾಶ ಕಂಡಿರಬಹುದು. ಆದರೆ ಆ ಪ್ರಕಾಶ ನನ್ನ ಕಣ್ಣಿನ ಅರಿವಿಗೆ ಬರುವುದು ಹೇಗೆ ಎನ್ನುವುದನ್ನು ಅಜಗಣ್ಣ ತಿಳಿಸಿ ಹೇಳಿದ್ದಾನೆ. ಅಂಥ ಅರಿವಿನ ದಾರಿಯನ್ನು ನೀವು ತೋರಬಲ್ಲಿರಾ? ಅಂತ ಮುಕ್ತಾಯಕ್ಕನವರು ಅಲ್ಲಮ ಪ್ರಭುಗಳನ್ನು ಪ್ರಶ್ನಿಸುತ್ತಾರೆ.
ನಿಮ್ಮ ಮಾತುಗಳು ಶಬ್ದವನ್ನು ಮಾಡುತ್ತಿದ್ದಾವೆಯೇ ಹೊರತು ನನ್ನ ಅಂತರಂಗದ ಅರಿವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಆದರೆ ಮುಗ್ಧ ಶರಣ ಅಜಗಣ್ಣ ಶಬ್ದ ಮುಗ್ಧನಾಗಿ, ನಿಃಶಬ್ದ ಗಂಭೀರನಾಗಿ ತನ್ನಲ್ಲಿರುವ ಅಂತರಂಗದ ಅರಿವನ್ನೆಲ್ಲ ಧಾರೆಯೆರೆದಿದ್ದಾನೆ. ಇಂಥ ಶಬ್ದ ಮುಗ್ಧತೆ ನಿಮಗೆ ಸಾಧ್ಯವೇ ಎಂದು ಪ್ರಶ್ನಾರ್ಥಕವಾಗಿ ಅಲ್ಲಮ ಪ್ರಭುಗಳಿಗೆ ಕೇಳುತ್ತಾಳೆ. ಅದಕ್ಕೆ ನಾನು ಮೊದಲಿಗೆ ಹೇಳಿದ್ದು. ಆಧ್ಯಾತ್ಮಿಕತೆಯ ಎತ್ತರದಲ್ಲಿ ಅಲ್ಲಮ ಪ್ರಭುಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲಂಥವಳು ಮುಕ್ತಾಯಕ್ಕ ಅಂತ. ತಾವು ಆಡಿದ ಮಾತಿಗೆ ತಾವೇ ಸಾಕ್ಷಿಯನ್ನು ನೀಡುವ ಪ್ರಸಂಗ ಎದುರಾದ ಅಪರೂಪದ ಸಂವಾದ.
“ಸಾಗರಂ ಸಾಗರೋಪಮೇಯಂ” ಅನ್ನುವ ಹಾಗೆ ಅಲ್ಲಮ ಪ್ರಭುಗಳಿಗೆ ಅಲ್ಲಮ ಪ್ರಭುಗಳೇ ಸಾಟಿ, ಬೇರೆ ಕಲ್ಪನೆ ಮಾಡಿಕೊಳ್ಳುದಕ್ಕೂ ನಮಗೆ ಸಾಧ್ಯವಿಲ್ಲ. ನಿಃಶಬ್ದನಾಗಿ ಅರಿವನ್ನು ನೀಡಬೇಕೆನ್ನುವುದಕ್ಕೆ ಅವರ ಉತ್ತರ ಎಷ್ಟು ತರ್ಕಬದ್ಧ ಮತ್ತು ಶಬ್ದಾತೀತ ಅನ್ನವುದಕ್ಕೆ ಈ ವಚನವೇ ಸಾಕ್ಷಿ.
ಮಾತೆಂಬುದು ಜ್ಯೋತಿರ್ಲಿಂಗ,
ಸ್ವರವೆಂಬುದು ಪರತತ್ವ.
ತಾಳೋಷ್ಟ್ರಸಂಪುಟವೆಂಬುದು
ನಾದಬಿಂದುಕಳಾತೀತ.
ಗುಹೇಶ್ವರನ ಶರಣರು ನುಡಿದು
ಸೂತಕಿಗಳಲ್ಲಾ ಕೇಳಾ ಮರುಳೆ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-548 / ವಚನ ಸಂಖ್ಯೆ-1443)
ಪರಿಪೂರ್ಣ ಜ್ಞಾನವಿರುವ ಭಕ್ತನ ಮುಖದಲ್ಲಿ ಲಿಂಗವೆಂಬ ಜ್ಯೋತಿಯನ್ನು ಕಾಣಬಹುದು. ಅಂಥ ಭಕ್ತನು ಸರ್ವಾಂಗಲಿಂಗಮಯನಾಗಿರುತ್ತಾನೆ. ಈ ಶರೀರದಿಂದ ಬಂದಂಥ ನುಡಿಗಳು ವಿಶ್ವವ್ಯಾಪಿಯಾಗಿರುವಂಥ ನಿಃಶಬ್ದದ ಅಲೆಯಿಂದ ಉತ್ಪತ್ತಿಯಾದಂಥ ನುಡಿಗಳು. ಲಿಂಗಾನುಭಾವದ ಹಿನ್ನೆಲೆಯಲ್ಲಿ ಅವರು ನುಡಿದ ವಚನಗಳೆಲ್ಲಾ ಜ್ಞಾನಪ್ರಕಾಶಗಳು ಎನ್ನುವುದನ್ನು ತಿಳಿ ತಾಯೆ. ಶಬ್ದದ ತರಂಗಗಳನ್ನು ಹೊರಡಿಸುವ ತನುವಿನ ಅಂಗಗಳಿಂದ ಬಂದ ನುಡಿಗಳು ನಾದ ಬಿಂದುಗಳಿಗೆ ನಿಲುಕದ ತತ್ವ. ಇಂಥ ನಿಲುಕದ ಎತ್ತರವನ್ನೇರಿ ನುಡಿವ ಶರಣರು ಸೂತಕಿಗಳಲ್ಲ ತಾಯೆ. ಶರಣರು ಮಾತನಾಡುವುದು ಸೂತಕವಲ್ಲ ಅಂತ ಅವಳಿಗೆ ತಿಳಿ ಹೇಳುತ್ತಾರೆ.
ಇದಕ್ಕೆ ಮುಕ್ತಾಯಕ್ಕನವರು ಮರುಪ್ರಶ್ನೆ ಮಾಡುತ್ತಾರೆ. ಮುಕ್ತಾಯಕ್ಕ ಏರಿರುವ ಆಧ್ಯಾತ್ಮದ ಎತ್ತರ ನಮಗೆ ಮನವರಿಕೆಯಾಗುವಂತಿದೆ ಈ ಪ್ರಶ್ನೆ.
ತನುವಿನೊಳಗೆ ತನುವಾಗಿ,
ಮನದೊಳಗೆ ಮನವಾಗಿ,
ಪ್ರಾಣದೊಳಗೆ ಪ್ರಾಣವಾಗಿಪ್ಪುದೆಂದಡೆ
ಕೆಲಬರಿಗೆ ಅರಿಯಬಪ್ಪುದೆ?
ಅಂತರಂಗದೊಳಗೆ ಅದೆ ಎಂದಡೇನು?
ಮನ ಮುಟ್ಟುವನ್ನಕ್ಕರ ಕಾಣಬಾರದು.
ಬಹಿರಂಗದಲ್ಲಿ ಅದೆ ಅಂದಡೇನು?
ಪೂಜಿಸುವನ್ನಕ್ಕರ ಕಾಣಬಾರದು.
ಸಾಕಾರವಲ್ಲದ ನಿರಾಕಾರ ಲಿಂಗವು
ವ್ಯಾಕುಲವುಳ್ಳನ್ನಕ್ಕರ ಸಾಧ್ಯವಾಗದು.
ಎನ್ನ ಮನದೊಳಗೆ ಘನವನನುಗೊಳಿಸಿ
ತೋರುವರಿಲ್ಲದ ಕಾರಣ
ಎನ್ನ ಅಜಗಣ್ಣನಿಕ್ಕಿದ ದಸರಿದೊಡಕಿಂಗೆ
ಬೆರಗಾದೆ ಕಾಣಾ ಪ್ರಭುವೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-400 / ವಚನ ಸಂಖ್ಯೆ-1115)
ಆಧ್ಯಾತ್ಮಿಕ ಅನುಭೂತಿ ಚರಿತ್ರೆಯಲ್ಲಿ ಶಾಶ್ವತವಾಗಿ ನಿಲ್ಲಬಲ್ಲಂಥ ಅದ್ಭುತ ವಚನವಿದು. ಸಾಮಾನ್ಯರಾದಂಥ ನಮಗೆ ನಿರಾಕಾರ ಶಿವನನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲ. ನಮಗೆ ಒಂದು ಆಕಾರ ಬೇಕು ಅಂತ ಅನಿಸುತ್ತೆ. ಹಾಗಾಗಿ ನಮಗೆ ತನುವಿನೊಳಗೆ ತನು, ಮನದೊಳಗೆ ಮನ ಮತ್ತು ಪ್ರಾಣದಲ್ಲಿ ಪ್ರಾಣ ಎನ್ನುವುದರ ಅರಿವು ಬಹಳ ಕಡಿಮೆ. ಇಲ್ಲ ಅಂತಲ್ಲಾ ಆದರೆ ಅದರ ಅನುಭಾವ ಕಡಿಮೆ. ದೇವರ ಗುಡಿಗೆ ಹೋಗಿ ಸಾಕಾರ ದೇವರಿಗೆ ಕೈ ಮುಗಿತೀವಿ. ಆದರೆ ಕಣ್ಣುಮುಚ್ಚಿ ನಿರಾಕಾರ ಶಿವನನ್ನು ಬೇಡಿಕೊಳ್ಳುತ್ತೇವೆ. ಅಂದರೆ ನಮಗೆ ನಿರಾಕಾರ ದೇವರನ್ನು ಪೂಜಿಸಲು ಸಾಕಾರ ರೂಪ ಬೇಕು. ಇಂಥ ದೃಷ್ಟಾಂತಕ್ಕೆ ಮುಕ್ತಾಯಕ್ಕನವರು ಒಂದು ಅದ್ಭುತ ಸಂದೇಶವನ್ನು ನೀಡತಾರೆ ಈ ವಚನದ ಮೂಲಕ.
ಸಾಕಾರವಲ್ಲದ ನಿರಾಕಾರ ಲಿಂಗದ ಅರಿವು ಅಥವಾ ಸಾಕಾರತೆಯು ವ್ಯಾಕುಲವುಳ್ಳವರಿಗೆ ಸಾಧ್ಯವಾಗಲಾರದು. ಮನಸ್ಸು ಚಂಚಲವಿದ್ದವರಿಗೆ ಅಥವಾ ದುಃಖದಲ್ಲಿದ್ದಾಗ ಈ ನಿರಾಕಾರ ಸತ್ವ ಅರ್ಥ ಆಗೋದಿಲ್ಲ. ಅಂತರಂಗದಲ್ಲಿದೆ ಬಹಿರಂಗದಲ್ಲಿದೆ ಅನ್ನುವ ತತ್ವವೇ ಈ ದುಃಖದ ಅಥವಾ ಚಂಚಲತೆಯ ಸನ್ನಿವೇಶದಲ್ಲಿ ಅರ್ಥ ಆಗೋದಿಲ್ಲ. ಹಾಗಾಗಿ ಅಂತರಂಗ ಮತ್ತು ಬಹಿರಂಗದಲ್ಲಿ ಇದೆ ಎಂದರೇನು ಅಂತಾ ಅಲ್ಲಮ ಪ್ರಭುಗಳಿಗೆ ಪ್ರಶ್ನೆ ಮಾಡತಾರೆ ಮುಕ್ತಾಯಕ್ಕನವರು. ಇಂಥ ಅಂತರಂಗ ಮತ್ತು ಬಹಿರಂಗದ ಅರಿವಿನ ವಿಸ್ತಾರವನ್ನು ತಿಳಿಸಲು ನನ್ನ ಅಣ್ಣ ಅಜಣ್ಣನವರಿಲ್ಲದೇ ನನ್ನ ಮನಸ್ಸು ರೇಷ್ಮೆ ದಾರದ ತೊಡಕಾದಂತಾಗಿದೆ ಎಂದು ವ್ಯಾಕುಲತೆಯಿಂದ ಹೇಳತಾರೆ ಮುಕ್ತಾಯಕ್ಕ. ಇದಕ್ಕೆ ಅಷ್ಟೇ ಸಮಾಧಾನದಿಂದ ಅಲ್ಲಮ ಪ್ರಭುಗಳು ಉತ್ತರಿಸುತ್ತಾರೆ.
ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ,
ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು.
ಇಲ್ಲದ ತನುವ ಉಂಟೆಂಬನ್ನಕ್ಕರ,
ಅದೇ ಮಾಯೆಯಾಗಿ ಕಾಡುತ್ತಿಪ್ಪುದು.
ನಿಃಕ್ರಿಯಾಲಿಂಗಕ್ಕೆ ಕ್ರಿಯಾಂತಲ್ಲದೆ ಆಗದೆಂಬವರ
ಸಂದು ಸಂಶಯ ಮುಂದುಗೆಡಿಸುತ್ತಿಪ್ಪುದು ಕೇಳಾ,
ಮನವ ಮನೆಯ ಮಾಡಿಕೊಂಡಿಪ್ಪ
ಲಿಂಗದ ಅನುವನರಿಯಬಲ್ಲಡೆ,
ಗುಹೇಶ್ವರಲಿಂಗ ದೂರವಿಲ್ಲ ಕೇಳಾ ಮುರುಳೆ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-348 / ವಚನ ಸಂಖ್ಯೆ-935)
ಸಮಸ್ಯೆ ಇದೆ ಎಂದರೆ ಅದನ್ನು ಪರಿಹರಿಸುವ ಮಾರ್ಗ ಕಂಡುಕೊಳ್ಳಬೇಕೆಯೇ ಹೊರತು ನಾನಾ ಕಲ್ಪನೆಯನ್ನು ಕಲ್ಪಿಸಿಕೊಂಡರೆ ಅದು ನಮ್ಮನ್ನು ನಿಜವಾಗಿಯೂ ಹೆದರಿಸುತ್ತದೆ. ಅದೇ ಸತ್ಯವೆನ್ನುವ ಭಾವನೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಇಲ್ಲದ ಶಂಕೆ ಇದೆ ಎಂದರಿತರೆ ಅದೆ ರೂಪವಾಗಿ ಕಾಣುತ್ತದೆ. ಲಿಂಗದೊಳಗೆ ಐಕ್ಯವಾದ ದೇಹವು ಇದೇ ಎಂದರೆ ಅದುವೆ ಮಾಯೆಯಾಗಿ ಕಾಡುವುದು. ಹೀಗೆ ಎಲ್ಲವೂ ಇದ್ದು ಇಲ್ಲವಾಗಿದೆ ಮತ್ತು ಎಲ್ಲವೂ ಇಲ್ಲದೆಯೂ ಎಲ್ಲವೂ ಇದೆ ಎನ್ನುವ ಉಭಯ ಸಂಶಯವನ್ನಳಿಯದ ಹೊರತು ಲಿಂಗದ ಅರಿವು ಉಂಟಾಗುವುದಿಲ್ಲ. ನಿಜವಾಗಿಯೂ ಗುಹೇಶ್ವರಲಿಂಗ ಅರ್ಥ ಆದರೆ ನಿನ್ನಿಂದ ಯಾರೂ ದೂರ ಇಲ್ಲ. “ಮನವ ಮನೆಯ ಮಾಡಿಕೊಂಡಿಪ್ಪ ಲಿಂಗದ ಅನುವನರಿಯ ಬಲ್ಲರೆ ಗುಹೇಶ್ವರ ಲಿಂಗ ದೂರ ಇಲ್ಲ” ತಾಯೆ. ನೀನು ಆ ಜ್ಞಾನ ಪ್ರಕಾಶವನ್ನು ದೂರವಿಟ್ಟು ಅಜ್ಞಾನವೆಂಬ ಕತ್ತಲೆಯನ್ನು ನೋಡುತ್ತಿದ್ದೀಯಾ ಅಂತ ಅಲ್ಲಮ ಪ್ರಭುಗಳು ತಿಳಿಸುತ್ತಾರೆ.
ಅಂತರಂಗದ ಅರಿವಿನ ವಿಚಾರ ಕೇಳುತ್ತಲೆ ಮುಕ್ತಾಯಕ್ಕ ತಿರುಗಿ ಅಲ್ಲಮ ಪ್ರಭುಗಳನ್ನು ಪ್ರಶ್ನೆಯನ್ನು ಮಾಡುತ್ತಾಳೆ.
ಗುರುವಚನದಿಂದಲ್ಲದೆ ಲಿಂಗವನರಿಯಬಾರದು.
ಗುರುವಚನದಿಂದಲ್ಲದೆ ಜಂಗಮವನರಿಯಬಾರದು.
ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು.
ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು.
ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ
ಇಂದು ಜ್ಞಾನೋದಯವಾದಡೆ
ಗುರುವಿಲ್ಲದ ಮುನ್ನ ಆಯಿತ್ತೆನ್ನಬಹುದೆ?
ತನ್ನಲ್ಲಿ ತಾನು ಸನ್ನಿಹಿತನಾದೆಹೆನೆಂದಡೆ
ಗುರುವಿಲ್ಲದೆ ಆಗದು ಕೇಳಾ,
ಎನ್ನ ಅಜಗಣ್ಣನೆಂಬ ಗುರುವಿಲ್ಲದೆ
ಆರೂಢಿಯ ಕೂಟ ಸಮನಿಸದು ಕೇಳಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-398 / ವಚನ ಸಂಖ್ಯೆ-1109)
ಮುಕ್ತಾಯಕ್ಕಳಿಗೆ ಸಾಕಾರ ನಿರಾಕಾರದ ಅರಿವು ಇದ್ದರೂ ಅಣ್ಣನ ಅಗಲಿಕೆಯ ನೋವಿನಿಂದ ಅದರ ಆಳ-ಅಂತ್ಯ ಅವಳಿಗೆ ಸಧ್ಯಕ್ಕೆ ಗಮನಕ್ಕೆ ಬರತಾ ಇಲ್ಲ. ಅಷ್ಟಾವರಣಗಳನ್ನು ತಿಳಿದುಕೊಂಡಿದ್ದರೂ ಅಜಗಣ್ಣನೆಂಬ ಗುರು ಇಲ್ಲದೆ ಕೊರಗುತ್ತಿದ್ದಾಳೆ. ಗುರು ಇಲ್ಲದೆ ಲಿಂಗ-ಜಂಗಮ-ಪ್ರಸಾದದ ಅರಿವು ಹೇಗಾಗುತ್ತದೆ? ನನ್ನ ಅರಿವು ನನಗೆ ಹೇಗಾಗುತ್ತದೆ? ಹಿಂದಿನ ಸಂಸ್ಕಾರಗಳು ಈಗ ಬಂದು ಜ್ಞಾನೋದಯವಾದರೆ ಅದಕ್ಕೆ ಗುರು ಕಾರಣನಲ್ಲ. ನನ್ನಲ್ಲಿರುವ ಅಲ್ಪ ಸಂಸ್ಕಾರಗಳು ಮಾತ್ರ. ಲಿಂಗವೆಂಬ ಕುರುಹನ್ನು ಹಿಡಿದುಕೊಂಡು ಲಿಂಗಾಂಗ ಸಮರಸವನ್ನು ತಿಳಿ ಹೇಳಲು ಗುರುವೆನ್ನುವ ಜ್ಞಾನಜ್ಯೋತಿ ಬೇಕು. ತನ್ನಲ್ಲಿ ಅಂತರಂಗದ ಅರಿವು ಪ್ರಕಾಶಿಸಬೇಕಾದರೆ ನನಗೆ ಅಜಗಣ್ಣನ ಗುರುಕಾರುಣ್ಯ ಬೇಕೆ ಬೇಕು. ಹೀಗೆ ಗುರುವಿಲ್ಲದೆ ತನ್ನಿಂದ ತಾನು ತಾನಾಗುವದಿಲ್ಲ ಎಂದು ಮುಕ್ತಾಯಕ್ಕ ಅಲ್ಲಮ ಪ್ರಭುಗಳಿಗೆ ನಿರೂಪಿಸುತ್ತಾರೆ.
ಅಲ್ಲಮ ಪ್ರಭುಗಳ ವಿದ್ವತ್ತಿನ ಸಲಹೆ ಎಷ್ಟು ಅಪ್ಯಾಯಮಾನವಾಗಿದೆ. ಸಾಕಾರಕ್ಕೂ ನಿರಾಕಾರಕ್ಕೂ ಅವರು ನೀಡುವ ಸಮಂಜಸ ಉತ್ತರ ನಿಬ್ಬೆರಗಾಗಿಸುತ್ತದೆ.
ಗುರುವಿಂಗೂ ಶಿಷ್ಯಂಗೂ–
ಆವುದು ದೂರ? ಆವುದು ಸಾರೆ
ಎಂಬುದನು ಆರುಬಲ್ಲರು?
ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ.
ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ.
ಕರ್ಮವೆಂಬ ಕೌಟಿಲ್ಯ ಎಡೆವೊಕ್ಕ ಕಾರಣ,
ಭಿನ್ನವಾಗಿ ಇದ್ದಿತ್ತೆಂದಡೆ,
ಅದು ನಿಶ್ಚಯವಹುದೆ?
ಆದಿ ಅನಾದಿಯಿಂದತ್ತತ್ತ ಮುನ್ನಲಾದ
ಪರತತ್ವಮಂ ತಿಳಿದು ನೋಡಲು,
ನೀನೆ ಸ್ವಯಂ ಜ್ಯೋತಿಪ್ರಕಾಶನೆಂದರಿಯಲು,
ನಿನಗೆ ನೀನೆ ಗುರುವಲ್ಲದೆ ನಿನ್ನಿಂದಧಿಕವಪ್ಪ ಗುರುವುಂಟೆ?
ಇದು ಕಾರಣ, ಗುಹೇಶ್ವರಲಿಂಗವು ತಾನೆ ಎಂಬುದನು
ತನ್ನಿಂದ ತಾನೆ ಅರಿಯಬೇಕು ನೋಡಾ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-429 / ವಚನ ಸಂಖ್ಯೆ-1156)
ಅಲ್ಲಮ ಪ್ರಭುಗಳ ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ಚಿಂತನೆ ಇದು. ಯಾರು ಗುರು? ಯಾರು ಶಿಷ್ಯ? ಗುರು ಶಿಷ್ಯ ಸಂಬಂಧವೇನು? ಗುರು ಶಿಷ್ಯ ಎಷ್ಟು ದೂರದಲ್ಲಿದ್ದಾರೆ? ಎಷ್ಟು ಸಮೀಪದಲ್ಲಿದ್ದಾರೆ? ಯಾರು ತಿಳಿದಿದ್ದಾರೆ? ಅಂತ ಅಲ್ಲಮ ಪ್ರಭುಗಳು ಅತ್ಯಂತ ತಾಳ್ಮೆಯಿಂದ ಪ್ರಶ್ನೆ ಮಾಡತಾರೆ. ಅದ್ವೈತ ಸಿದ್ಧಾಂತದಲ್ಲಿ ನೆಲೆ ನಿಂತವನಿಗೆ ಗುರು-ಶಿಷ್ಯರಲ್ಲಿ ಭೇದ ಕಾಣಿಸುವುದಿಲ್ಲ. ತಾನೇ ಗುರು ಮತ್ತು ಆತನೇ ಶಿಷ್ಯ. ಗುರು ರೂಪದಲ್ಲಿರುವ ಬಹಿರಂಗ ಜ್ಞಾನ ಪ್ರಕಾಶ ಮತ್ತು ಅಂತರಂಗದಲ್ಲಿ ಅಡಗಿರುವ ಅರಿವಿನ ಜ್ಯೋತಿ ಎರಡೂ ಒಂದಾದಾಗ ಮಾತ್ರ ಜ್ಞಾನಪ್ರಕಾಶ ಬೆಳಗಲು ಸಾಧ್ಯ. ನಿನಗೆ ನೀನೇ ಗುರುವಾದಾಗ ಮಾತ್ರ ಇದನ್ನು ಸಾಧಿಸಲು ಸಾಧ್ಯ. ಇದನ್ನೇ ಚಿಙ್ಮಯಜ್ಞಾನಿ ಚೆನ್ನಬಸವಣ್ಣನವರು ತಮ್ಮ ವಚನದಲ್ಲಿ ನಿರೂಪಿಸಿದ್ದಾರೆ.
ಗುರುಶಿಷ್ಯ ಸಂಬಂಧವನೇನೆಂದುಪಮಿಸುವೆ?
ಜ್ಯೋತಿಯಲೊದೊದಗಿದ ಜ್ಯೋತಿಯಂತಿರಬೇಕು,
ದರ್ಪಣದೊಳಗಡಗಿದ ಪ್ರತಿಬಿಂಬದಂತಿರಬೇಕು,
ಸ್ಫಟಿಕದೊಳಗಿರಿಸಿ ರತ್ನದಂತಿರಬೇಕು,
ರೂಪಿನ ನೆಳಲಿನ ಅಂತರಂಗದಂತಿರಬೇಕು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ದರ್ಪಣವ ದರ್ಪಣಕ್ಕೆ ತೋರಿದಂತಿರಬೇಕು.
(ಸಮಗ್ರ ವಚನ ಸಂಪುಟ: ಮೂರು-2021 / ಪುಟ ಸಂಖ್ಯೆ-568 / ವಚನ ಸಂಖ್ಯೆ-1226)
ಜ್ಯೋತಿ, ದರ್ಪಣ, ಸ್ಫಟಿಕ, ರೂಪಿನ ನೆರಳುಗಳ ಉಪಮೆಗಳ ಮೂಲಕ ಗುರು-ಶಿಷ್ಯ ಸಂಬಂಧವನ್ನು ಅವಿರಳಜ್ಞಾನಿ ಚೆನ್ನಬಸವಣ್ಣನವರು ವಿವರಿಸಿದ್ದಾರೆ. ಜ್ಯೋತಿಯಿಂದ ಮತ್ತೊಂದು ಜ್ಯೋತಿಯನ್ನು ಬೆಳಗಿಸುವ ಹಾಗೆ ಜ್ಯೋತಿಯೊಳಗೆ ಇರುವ ಜ್ಯೋತಿಯಂತಿರಬೇಕು. ಕನ್ನಡಿಯಲ್ಲಿರುವ ಬಿಂಬ ಕನ್ನಡಿಯನ್ನೇನೂ ಅಪ್ಪಿಕೊಳ್ಳುವುದಿಲ್ಲ. ಆದರೆ ಬಿಂಬವನ್ನು ಪ್ರತಿಫಲಿಸುವ ಶಕ್ತಿಯನ್ನು ಹೋಂದಿದೆ. ಹಾಗೆಯೆ ಅರಿವನ್ನು ಪ್ರತಿಫಲಿಸುವ ಶಕ್ತಿಯನ್ನು ಹೊಂದಬೇಕು. ಸ್ಫಟಿಕದೊಳಗಿರುವ ರತ್ನವು ಬೆಳಕನ್ನು ವೃದ್ಧಿಯನ್ನು ಮಾಡುವ ಹಾಗೆ ಅಂತರಂಗದ ಅರಿವಿನ ಬೆಳಕನ್ನು ವೃದ್ಧಿ ಮಾಡಿ ತೋರುವಂತಿರಬೇಕು. ನೆರಳು ನಮ್ಮನ್ನು ಹಿಂಬಾಲಿಸುವ ಹಾಗೆ ನಮ್ಮಲ್ಲಿರುವ ಜ್ಞಾನ ನಮ್ಮನ್ನು ಸದಾಕಾಲ ಹಿಂಬಾಲಿಸುತ್ತಿರಬೇಕು. ಹೀಗೆ ನಮ್ಮಲ್ಲಿರುವ ಅಂತರಂಗದ ಅರಿವು ಕನ್ನಡಿಗೇನೆ ಕನ್ನಡಿಯನ್ನು ತೋರುವಂತಿರಬೇಕು.
ತಾಯಿ ಮುಕ್ತಾಯಕ್ಕ ಕೇಳು ಅನಾದಿಯಲ್ಲಿ ನಿನಗೆ ನೀನೇ ಪರಶಿವನಾಗಿದ್ದಲ್ಲಿ ನಿನಗೆ ಯಾವ ಗುರುಗಳೂ ಬೇಕಿಲ್ಲ. ಕಾರಣ ನೀನೇ ಪರಮ ಸತ್ಯದ ತತ್ವ. ಗುರುವನ್ನು ಹುಡಕಬೇಡಾ. ನಿನಗೆ ನೀನೇ ಗುರು. ನಿನ್ನ ಶಕ್ತಿ ನಿನಗೆ ಅರಿವಾದರೆ ಮತ್ತು ನೀನ್ಯಾರು ಅಂತ ಅರಿವಾದರೆ ನೀನೇ ಗುರು ನೀನೇ ಶಿಷ್ಯ. ಇಷ್ಟೆಲ್ಲಾ ಆದರೂ ದ್ವೈತದ ಅನುಭವ ನಿನಗೆ ಆಗತದ ಅಂದರ ಅದು ಮಾಡಿದ ಕರ್ಮದ ಫಲ ಮಾತ್ರ ಅಂತ ಇನ್ನಂದು ಮಾತನ್ನು ಅಲ್ಲಮ ಪ್ರಭುಗಳು ಸೇರಿಸುತ್ತಾರೆ.
ಅಷ್ಟು ಬೇಗ ಒಪ್ಪಿಕೊಳ್ಳೋದಿಲ್ಲ ಮುಕ್ತಾಯಕ್ಕನವರು. ಎಷ್ಟಾದರೂ ಭೌದ್ಧಿಕ ಪ್ರಖರತೆಯ ಮೇರಿಶಿಖರ ಮುಕ್ತಾಯಕ್ಕ. ಅವಳ ಉತ್ತರವನ್ನು ಕೇಳಿ ಅಲ್ಲಮ ಪ್ರಭುಗಳು ಒಂದು ಕ್ಷಣ ತಬ್ಬಿಬ್ಬಾಗಿರಬೇಕು.
ತನ್ನ ತಾನರಿದವಂಗೆ ಅರಿವೆ ಗುರು.
ಅರಿವರತು ಮರಹು ನಷ್ಟವಾದಲ್ಲಿ, ದೃಷ್ಟನಷ್ಟವೆ ಗುರು.
ದೃಷ್ಟನಷ್ಟವೆ ಗುರು ತಾನಾದಲ್ಲಿ,
ಮುಟ್ಟಿ ತೋರಿದವರಿಲ್ಲದಡೇನು?
ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೆ ಗುರು ನೋಡಾ.
ಗುರು ತಾನಾದಡೂ ಗುರುವಿಡಿದಿರಬೇಕು
ಎನ್ನ ಅಜಗಣ್ಣನಂತೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-399 / ವಚನ ಸಂಖ್ಯೆ-1113)
ದೃಷ್ಟನಷ್ಟವೇ ಗುರು ಎಂದು ಲಿಂಗಾಂಗ ಸಮರಸದ ಅನುಭವ ಬರಬೇಕಾದರ ಗುರು ಎನ್ನುವ ತತ್ವ ಬೇಕೆ ಬೇಕೆನ್ನುವುದು ಮುಕ್ತಾಯಕ್ಕನವರ ಅಚಲವಾದ ವಿಶ್ವಾಸ. ಅಲ್ಲಮ ಪ್ರಭುಗಳ ಅದ್ವೈತ ಸಿದ್ಧಾಂತದ ಹಿನ್ನೆಲೆಯಲ್ಲಿ ಗುರು_ಶಿಷ್ಯರ ಸಾಮರಸ್ಯವನ್ನು ಒಪ್ಪಿಕೊಂಡರೂ ಅಜಗಣ್ಣನಂತ ಗುರು ಬೇಕು ಎನ್ನುವುದು ಅವಳ ವಾದ. ಕಣ್ಣಿಗೆ ಬಟ್ಟೆ ಕಟ್ಟಿ ಜೋತಿಯನ್ನು ನೋಡು ಅಂದರೆ ಹೇಗೆ ಕಾಣುತ್ತದೆ. ಸಮರ್ಥ ಗುರು ಕಣ್ಣಿಗೆ ಕಟ್ಟಿದ ಅಜ್ಞಾನವೆಂಬ ಬಟ್ಟೆಯನ್ನು ಕಳಚಿದರೆ ಮಾತ್ರ ಜ್ಞಾನ ಪ್ರಕಾಶ ಗೋಚರಿಸುತ್ತದೆ. ನಾನೇ ಗುರುವಾಗಿದ್ದರೂ ಕೂಡ ನನ್ನ ಅಂತರಂಗದಲ್ಲಿ ಸಮರಸವಾಗಿರುವ ಶಿಷ್ಯನ ಅನುಭಾವದ ಎಚ್ಚರ ನನ್ನಲ್ಲಿ ಇರಬೇಕು. ನನ್ನ ಅರಿವನ್ನು ತನ್ನ ಅರಿವಿನೊಂದಿಗೆ ಸೇರಿಸಿದ ಅಂತರಂಗದ ಮತ್ತು ಬಹಿರಂಗದ ಗುರು ಅಜಗಣ್ಣನು ನನ್ನ ಅರಿವನ್ನು ಸಾಕಾರಗೊಳಿಸಲು ಸಾಧ್ಯ ಗುರುಗಳೆ ಅಂತ ಅಲ್ಲಮ ಪ್ರಭುಗಳಿಗೆ ಉತ್ತರಿಸುತ್ತಾರೆ ಮುಕ್ತಾಯಕ್ಕನವರು.
ಅಲ್ಲಮ ಪ್ರಭುಗಳ ಶಾಂತಚಿತ್ತ ಮತ್ತು ಅರಿವಿನ ಅಂಬರದೊಳಗಿನ ವಿಶಾಲ ವಿದ್ವತ್ತಿನ ಪರಿಚಯ ನಮಗಾಗುತ್ತದೆ ಈ ವಚನದಿಂದ.
ತೆರಹಿಲ್ಲ ಘನ ಕುರುಹಿಂಗೆ ಬಾರದ ಮುನ್ನ
ತೋರಿದವರಾರು ಹೇಳಾ ಮಹಾ ಘನ ಲಿಂಗೈಕ್ಯವನು?
ಆರೂಢದ ಕೂಟದಲ್ಲಿ ನಾನಾರುವ ಸಾಕ್ಷಿಯ ಕಾಣೆನು.
ಬೇರೆ ಮಾಡಿ ನುಡಿಯಬಹುದೆ ಪ್ರಾಣಲಿಂಗವನು?
ಅರಿವು ಸ್ವಯವಾಗಿ ಮರಹು ನಷ್ಟವಾದಲ್ಲಿ
ಗುಹೇಶ್ವರಾ, ನಿಮ್ಮ ಶರಣನುಪಮಾತೀತನು.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-211 / ವಚನ ಸಂಖ್ಯೆ-682)
ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದದ ಅರ್ಥ:
ತೆರಹು: ಏನೂ ಇಲ್ಲದ, ಖಾಲಿ, ಶೂನ್ಯ.
ಎಲ್ಲವನ್ನೂ ಒಳಗೊಂಡಂಥ ಅಗಮ್ಯ, ಅಗೋಚರ ಪರಿಪೂರ್ಣ ಸ್ಥಿತಿಯೇ ಮಹಾಘನ. ಲಿಂಗಾಂಗ ಸಾಮರಸ್ಯವನ್ನು ಕಂಡಂಥ ಶರಣನಿಗೆ ಮಹಾಘನದಲ್ಲಿ ತನ್ನ ಸ್ವರೂಪವನ್ನೇ ಕಾಣುವುದರಿಂದ ಅದರೊಳಗೆ ಒಂದಾಗಿ ನಿಲ್ಲುತ್ತಾನೆ. ದೇಹ ಮತ್ತು ಮನಸ್ಸನ್ನು ಬೇರೆ ಮಾಡಲು ಹೇಗೆ ಸಾಧ್ಯ ತಾಯೆ ಎಂದು ಮುಕ್ತಾಯಕ್ಕರನ್ನು ಪ್ರಶ್ನಿಸುತ್ತಾರೆ ಅಲ್ಲಮ ಪ್ರಭುಗಳು. ತನ್ನೊಳಗೆ ಸಮಷ್ಠಿಯನ್ನು ತುಂಬಿಕೊಂಡಿರುವ ಆರೂಢ ಕೂಟವನ್ನು ದ್ವೈತ ದೃಷ್ಟಿಯಿಂದ ನೋಡುವವರಿಗೆ ಘನವು ಕಾಣುವುದಿಲ್ಲ. ಶರಣಸತಿ-ಲಿಂಗಪತಿ ಎನ್ನುವ ಭಾವವನ್ನು ಹೊಂದಿದ ಶರಣರಲ್ಲಿ ಪ್ರಾಣಲಿಂಗ-ಇಷ್ಟಲಿಂಗಗಳು ಒಂದು ಎನ್ನುವ ಭಾವವಿರುತ್ತದೆ. ಅದನ್ನು ಬೇರೆ ಬೇರೆ ಎಂದು ಹೇಳಲಾಗದು. ಲಿಂಗಾಂಗ ಸಾಮರಸ್ಯದಿಂದ ತನ್ನ ಅಂತರಂಗದಲ್ಲಿ ಅರಿವನ್ನು ಪ್ರತಿಷ್ಠಾಪಿಸಿಕೊಂಡ ಶರಣರು ಅನುಪಮ ಜ್ಞಾನಿಗಳು. ಅವರಿಗೆ ಯಾವ ಹೋಲಿಕೆಯೂ ಇಲ್ಲ. ಹೋಲಿಸಲೂ ಆಗುವುದಿಲ್ಲ ಎನ್ನುವುದನ್ನು ಅಲ್ಲಮ ಪ್ರಭುಗಳು ಮುಕ್ತಾಯಕ್ಕನವರಿಗೆ ತಿಳಿಸಿ ಹೇಳುತ್ತಾರೆ.
ಈ ಮಾತಿಗೆ ಮುಕ್ತಾಯಕ್ಕನವರು ಕೊಟ್ಟ ಉತ್ತರ ಬಹುಶಃ ಆಧ್ಯಾತ್ಮಿಕ ನೆಲೆಯಲ್ಲಿ ಅತ್ಯಂತ ಎತ್ತರದಲ್ಲಿ ನಿಲ್ಲುವಂಥಾದ್ದು. ಅಲ್ಲಮ ಪ್ರಭುಗಳ “ಆರೂಢದ ಕೂಟದಲ್ಲಿ ನಾನಾರುವ ಸಾಕ್ಷಿಯ ಕಾಣೆನು” ಎನ್ನುವ ಶಬ್ದಪುಂಜವನ್ನು ಒರೆಗೆ ಹಚ್ಚಿ ನೋಡುವಂತೆ ಕಾಣುತ್ತದೆ. ಅಂತೂ ಅಲ್ಲಮ ಪ್ರಭುಗಳನ್ನೇ ಪರೀಕ್ಷೆ ಮತ್ತು ಪ್ರಶ್ನಿಸುವ ಮಟ್ಟಕ್ಕೆ ಮುಕ್ತಾಯಕ್ಕನವರು ಇದ್ದರು ಎನ್ನುವುದನ್ನು ನಾವು ಮನಗಾಣಬೇಕಾಗುತ್ತದೆ. ಅಂಥ ಒಂದು ಬೌದ್ಧಿಕ ಪ್ರಖರತೆ 12 ನೇ ಶತಮಾನದಲ್ಲಿ ಬೆಳಕಿಗೆ ಬಂದದ್ದು ಸಾಹಿತ್ಯಲೋಕದ ಅನುಪಮ ವಿಷಯ.
ನಡೆದು ನಡೆದು ನಡೆಯ ಕಂಡವರು,
ನುಡಿದು ನುಡಿದು ಹೇಳುತ್ತಿಹರೆ?
ನುಡಿದು ನುಡಿದು ಹೇಳುವನ್ನಕ್ಕರ,
ನಡೆದುದೆಲ್ಲಾ ಹುಸಿಯೆಂಬೆನು.
ಮಾತಿನ ಮಥನದಿಂದಾದ ಅರಿವು,
ಕರಣಮಥನದಿಂದಾದುದಲ್ಲದೆ,
ಅನುಪಮ ಸ್ವರಭೇದವಾದ ಪರಿ ಎಂತು ಹೇಳಾ?
ಇದಿರ ಗೆಲಬೇಕೆಂದು ನುಡಿದುಕೊಂಡಡೇನು,
ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ?
ಎನ್ನ ಅಜಗಣ್ಣತಂದೆ ಶಬುದಕ್ಕೆ ಹೇಸಿ ಮುಗುದನಾದನು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-401 / ವಚನ ಸಂಖ್ಯೆ-1118)
ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದದ ಅರ್ಥ:
ನೀಃಪತಿ: ಒಡೆಯ.
ಗುರುಗಳೆ ನಿಮ್ಮ ಮಾತು ನಿಮ್ಮ ನಡೆ ಬೇರೆ ಬೇರೆ ಅಂತ ಅನಿಸತಾ ಇದೆ ನನಗೆ ಅಂತ ಮುಕ್ತಾಯಕ್ಕನವರು ಸಂಶಯವನ್ನು ವ್ಯಕ್ತಪಡಿಸುತ್ತಾರೆ. ನಮ್ಮ ಮನದಲ್ಲಿರುವ ಕತ್ತಲೆಯನ್ನು ತಾವು ಕಳೆದು ನಿಜಮಾರ್ಗವನ್ನು ತೋರಬೇಕು. ನಿಜ ಮಾರ್ಗದ ಅನ್ವೇಷಣೆಯಲ್ಲಿ ಉಪದೇಶಿಸುವದು ಶಬ್ದರೂಪದಲ್ಲಿ ಎನ್ನುವುದು ನನ್ನ ಮನಕ್ಕೆ ತಟ್ಟುತ್ತಿಲ್ಲ. ಯಾಕಂದರ ನನ್ನ ಅಣ್ಣ ಅಜಗಣ್ಣ ಶಬ್ದವಿಲ್ಲದೇ ಅರಿವಿನ ಅಂತರಂಗವನ್ನು ತೆರೆಸಿದವನು. ಅದು ಲೋಕವನ್ನೂ ಮೀರಿದ ಅಲೌಕಿಕ ತತ್ವ. ಮುಕ್ತಾಯಕ್ಕನವರಿಗೆ ಎಲ್ಲರೂ ತನ್ನ ಅಣ್ಣ ಅಜಗಣ್ಣನಂತೆ ಇರಬೇಕೆನ್ನುವ ಆಸೆ ಇದ್ದಂತೆ ಕಾಣುತ್ತದೆ. ತಾವುಗಳು ಹೇಳುತ್ತಿರುವ ಅನುಭಾವದ ನುಡಿಗಳು ಅಂತೂ ಇಂತೂ ಗೆಲ್ಲಲೇಬೇಕೆಂದು ನುಡಿದ ಮಾತುಗಳು ಅಂತ ನನಗೆ ಅನಿಸ್ತಾ ಇದೆ. ಅಲ್ಲಮ ಪ್ರಭುಗಳ ಅಂತರಂಗವನ್ನು ತಟ್ಟಿದ ಮಾತುಗಳಂತೆ ತೋರುತ್ತಿವೆ. ಆದರೆ ಅಲ್ಲಮ ಪ್ರಭುಗಳು ಮುಕ್ತಾಯಕ್ಕನವರ ಕಣ್ಣನ್ನು ತೆರೆಸಿ ಅವರ ಅನುಭಾವದ ನಿಲುವನ್ನು ಲೋಕಕ್ಕೆ ತೋರಿಸಬೇಕೆಂದು ಬಂದವರು. ಹಾಗಾಗಿ ಅವಳ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡುತ್ತಾ ಬರುತ್ತಾರೆ.
ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ!
ತನ್ನ ತಾ ಮರೆದಡೆ ನುಡಿಯೆಲ್ಲಾ ಮಾಯೆ ನೋಡಾ!
ಅರಿದು ಮರೆದ ಶಿವಯೋಗಿಯ ಶಬ್ದವೆಲ್ಲವು
ಉಪದೇಶವಲ್ಲದೆ ಭಿನ್ನವುಂಟೆ?
ನಿನ್ನ ಮನದ ಕಳವಳವ ತಿಳುಹಲೆಂದು
ಮಾತನಾಡಿಸಿ ನೋಡಿದಡೆ,
ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ!
ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ
ಬಾಯ್ದೆಗೆದೆನಲ್ಲದೆ ಭಿನ್ನವುಂಟೆ ಹೇಳಾ ಮರುಳೆ?
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-450 / ವಚನ ಸಂಖ್ಯೆ-1207)
ಸ್ವಲ್ಪ ಮಟ್ಟಿಗೆ ವಿಚಲಿತರಾದಂತೆ ಕಂಡುಬಂದರೂ ಕೂಡ ಅಲ್ಲಮ ಪ್ರಭುಗಳು ಅಣ್ಣನನ್ನು ಕಳೆದುಕೊಂಡು ದುಃಖದಲ್ಲಿರುವ ಮುಕ್ತಾಯಕ್ಕನವರಿಗೆ ಸಂತೈಸುವಂತೆ ಉತ್ತರ ನೀಡತಾರೆ.
ಲಿಂಗಾಂಗ ಸಾಮರಸ್ಯವಿಲ್ಲದಿದ್ದರೆ ಶರಣನಾಗಲು ಅವಕಾಶವಿಲ್ಲ. ಅಂತರಂಗದ ಅರಿವಿನ ಮೂಲಕ ತನ್ನನ್ನು ತಾನು ಅರಿತ ಶರಣನು ನುಡಿಯುವ ಮಾತುಗಳೆಲ್ಲ ತತ್ವಗಳು. ಅಂತರಂಗದ ಅರಿವಿಲ್ಲದ ಮತ್ತು ಸಾಧಕನಲ್ಲದಿದ್ದರೆ ಅವನು ನುಡಿಯುವ ಮಾತುಗಳೆಲ್ಲಾ ಮಾಯೆಯೆಂಬ ಸಂಕೋಲೆಯಿಂದ ಬಂಧಿತವಾಗಿರುತ್ತವೆ. ಅರಿವಿನ ಅನುಭಾವದಿಂದ ನುಡಿಯುವ ನನ್ನ ಶಬ್ದಗಳೆಲ್ಲವೂ ಉಪದೇಶಗಳೇ ಹೊರತು ಪರವಶದಿಂದ ಬಂದ ನುಡಿಗಳಲ್ಲ. ಅದರಲ್ಲಿ ಸಂಶಯ ಬೇಡಾ ತಾಯಿ. ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿದ್ದೀಯಾ. ನೀನು ನಮ್ಮ ಗುಹೇಶ್ವರನ ಕರುಣದ ಶಿಶು. ಹಾಗಾಗಿ ನಿನ್ನ ಮನಸ್ಸಿನಲ್ಲಿದ್ದ ಕಳವಳವನ್ನು ಹೋಗಲಾಡಿಸಲೆಂದು ಬಂದ ನನ್ನ ಮನದಲ್ಲಿ ಯಾವ ಕುಂದು ಕಲೆಗಳೂ ಇಲ್ಲಾ. ಹಾಗೆ ಭಾವಿಸುವುದು ಸರಿಯಲ್ಲಾ ತಾಯಿ ಅಂತ ಹೇಳತಾ ಅಲ್ಲಮ ಪ್ರಭುಗಳು ಮುಕ್ತಾಯಕ್ಕನವರನ್ನು ಸಂತೈಸುತ್ತಾರೆ.
ಅಲ್ಲಮ ಪ್ರಭುಗಳಿಗೆ ಮುಕ್ತಾಯಕ್ಕ ಕೇಳುವ ಮುಂದಿನ ಪ್ರಶ್ನೆ very interesting. ಅದು ಸವಾಲಿನ ಹಾಗೂ ಆಧ್ಯಾತ್ಮಿಕತೆ ಹಿನ್ನೆಲೆಯನ್ನು ಪರಿಚಯಿಸುವ ಪ್ರಶ್ನೆ ಎನ್ನಬಹುದು. ಮುಕ್ತಾಯಕ್ಕನವರ ಅನುಭಾವದ ಹಿನ್ನೆಲೆಯಲ್ಲಿ ಈ ಪ್ರಶ್ನೆ 12 ನೇ ಶತಮಾನದ ಶರಣ-ಶರಣೆಯರ ಬೌದ್ಧಿಕ ನೆಲೆಯ ಎತ್ತರವನ್ನೂ ಸಹ ತಿಳಿಸುತ್ತದೆ.
ನುಡಿಯ ಹಂಗಿನ್ನೂ ನಿಮಗೆ ಹಿಂಗದು,
ನಡೆಯನೆಂತು ಪರರಿಗೆ ಹೇಳುವಿರಿ?
ಒಡಲ ಹಂಗಿನ ಸುಳುಹು ಬಿಡದು,
ಎನ್ನೊಡನೆ ಮತ್ತೇತರ ಅನುಭವವಣ್ಣಾ?
ತಾನಾದಲ್ಲದೆ ಇದಿರಿಂಗೆ ಹೇಳಬಹುದೆ?
ಅರಿವ ತೋರಬಲ್ಲಡೆ ತನ್ನನರುಹದೆ ಅರಿವನು
ಕಾಣಾ ಎನ್ನ ಅಜಗಣ್ಣತಂದೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-402 / ವಚನ ಸಂಖ್ಯೆ-1121)
ನಿಮಗೆ ಮಾತಿನ ಹುಚ್ಚು ಇನ್ನೂ ಹೋದಂಗಿಲ್ಲ. ಸಹಜವಲ್ಲದ ನಮಗೆ ನಡೆಯನ್ನು ಹೇಗೆ ಕಲಿಸುತ್ತೀರಿ? ನನಗೆ ಅನುಭಾವವನ್ನು ಹೇಗೆ ತಿಳಿಸುತ್ತೀರಿ? ಅಂತ ಅಲ್ಲಮ ಪ್ರಭುಗಳನ್ನು ಕೇಳತಾರೆ ಮುಕ್ತಾಯಕ್ಕ. ನಿಮ್ಮ ನುಡಿಯಲ್ಲಿ ಶಬ್ದಗಳ ಹಂಗು ಇದೆ. ಹಾಗಾಗಿ ಶಬ್ದಾಡಂಬರದ ಮಾತುಗಳಲ್ಲಿ ಅನುಭವದ ಕೊರತೆ ಕಾಣಿಸತಾ ಇದೆ ಅಂತ ಹೇಳತಾರೆ ಮುಕ್ತಾಯಕ್ಕನವರು. ನನ್ನ ಅಣ್ಣ ಅಜಗಣ್ಣ ಶಬ್ದಾಡಂಬರವಿಲ್ಲದೆ ಅನುಭಾವದ ನಿಜ ಅರಿವನ್ನು ತೋರಿದ್ದು ಅಲೌಕಿಕ. ಎದುರಿಗೆ ಇರದಿದ್ದರೂ “ಅರಿವ ತೋರಬಲ್ಲಡೆ ತನ್ನನರುಹದೆ ಅರಿವನು” ಎಂದು ಅರಿವನ್ನು ತೋರಬಲ್ಲವನಾಗಿದ್ದ ಅಜಗಣ್ಣ.
ಅಲ್ಲಮ ಪ್ರಭುಗಳ ವ್ಯಕ್ತಿತ್ವವೇ ನಿರಾಳ ಮತ್ತು ಪ್ರಶಾಂತ. ಮುಕ್ತಾಯಕ್ಕ ಅಣ್ಣನನ್ನು ಕಳೆದುಕೊಂಡು ದುಃಖದಲ್ಲಿದ್ದಾಳೆ ಅಂತ ಅಲ್ಲಮ ಪ್ರಭುಗಳಿಗೆ ಗೊತ್ತಿದೆ, ಬಹಳ ಮಾತನಾಡುವೆ ಎನ್ನುವ ಪ್ರಶ್ನೆಗೆ ಶಾಂತವಾಗಿ ಮತ್ತು ಅಷ್ಟೇ ಪ್ರಬುದ್ಧವಾಗಿ ಉತ್ತರ ನೀಡುತ್ತಾರೆ.
ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ,
ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ.
ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ,
ಶಬ್ದ ಸಂದಣಿಗೆ ಹಂಗಿಲ್ಲ ನೋಡಾ.
ಶರಣ ನಡೆದಡೆ ನಿರ್ಗಮನಿ, ನುಡಿದಡೆ ನಿಃಶಬ್ದಿ!
ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-218 / ವಚನ ಸಂಖ್ಯೆ-700)
ಲಿಂಗಾಂಗ ಸಾಮರಸ್ಯ ಹೊಂದಿದ ಶರಣನ ತನುವಿನ ಕಳೆ ಅಂದರೆ ಮೋಹ ವ್ಯಾಮೋಹಗಳೆಲ್ಲವೂ ಕರಗಿ ಲಿಂಗದಲ್ಲಿ ಲೀನವಾಗಿ ಆತನ ತನು ಶುದ್ಧವಾಗಿರುತ್ತದೆ. ಅಂಗವನ್ನು ಅಂತರಂಗದ ಅರಿವೆಂಬ ಬಿಸಿಲಿಗೆ ತೆರೆದಿಟ್ಟಾಗ ಅದರಲ್ಲಿರುವ ಲಿಂಗದ ತೇವವು ಅಂದರೆ ಮಾಯೆಗಳೆಲ್ಲಾ ಒಣಗಿ ಹೋಗಿದೆ. ಒಣಗಿದ ಅಂದರೆ ಮಾಗಿದ ಅಂಗವು ಲಿಂಗ ಗಮನಿ ಹಾಗೆಯೇ ನಿರ್ಗಮನಿಯೂ ಕೂಡ. ಅದುವೇ ಲಿಂಗಾಂಗ ಸಾಮರಸ್ಯ. ಈ ತತ್ವ ಸಿದ್ಧಾಂತವನ್ನು ಅರಿತ ಶರಣರ ಹೆಜ್ಜೆ ಗುರುತಿನ ಕುರುಹುಗಳು ಅಗೋಚರ.
ಜೀವಾತ್ಮನ ಮಾಯೆಗಳೆಂಬ ತೇವಗಳೆಲ್ಲ ಸುಟ್ಟು ಹೋದ ಬಳಿಕ ಪ್ರಾಣಲಿಂಗದ ಅನುಭಾವವಾಗುತ್ತದೆ. ಈ ಸುಟ್ಟು ಹೋದ ಬಳಿಕ ಶಬ್ದಾಡಂಬರಗಳು ಇಲ್ಲ. ಪ್ರಾಣ ಸುಟ್ಟು ಪ್ರಾಣಲಿಂಗವಾದ ಮೇಲೆ ಅದರಿಂದ ಬರುವ ನುಡಿಗಳು ಲಿಂಗನುಡಿಗಳು. ಹಾಗಾಗಿ ಶರಣರ ನುಡಿಗಳು ನಿಃಶಬ್ದ. ಅಂತರಂಗದ ಅರಿವನ್ನು ಪಡೆದ ಶರಣನಿಗೆ ಇಷ್ಟಲಿಂಗ ಪ್ರಾಣಲಿಂಗ ಎರಡೂ ಒಂದೇ. ಆದ್ದರಿಂದ ಶಬ್ದದ ಆಡಂಬರಕ್ಕೆ ಬಹುದೂರ ಶರಣನು. ಕೇಳು ತಾಯಿ, ಶರಣನು ನಡೆದರೆ ಹೊರಟು ಹೋದಂತೆ, ಮಾತನಾಡಿದರೆ ನಿಃಶಬ್ದದ ವಾತಾವರಣ ನಿರ್ಮಾಣವಾದಂತೆ. ಹಾಗಾಗಿ ಗುಹೇಶ್ವರಲಿಂಗವನ್ನು ಅಪ್ಪಿಕೊಂಡ ಶರಣನಿಗೆ ಯಾವ ಆಕಾರ ಕುರುಹುಗಳೂ ಇಲ್ಲ.
ಇಷ್ಟಕ್ಕೆ ಸುಮ್ಮನಾಗುವುದಿಲ್ಲ ಮುಕ್ತಾಯಕ್ಕ. ಈಗ ಸ್ವಲ್ಪ ಏರಿದ ಧ್ವನಿಯಲ್ಲಿಯೇ ಅಲ್ಲಮ ಪ್ರಭುಗಳನ್ನು ಪ್ರಶ್ನೆ ಮಾಡತಾರೆ. ಇಲ್ಲಿ ನಡೆಯುವ ಸಂಭಾಷಣೆ ಅತ್ಯಂತ ಕುತೂಹಲಕ್ಕೆಡೆ ಮಾಡಿಕೊಡುತ್ತದೆ. ಸಂಘರ್ಷದ ರೂಪದಲ್ಲಿದೆ ಅಂತ ನಮಗೆ ಅನಿಸಬಹುದು. ಆದರೆ ಅರಿವಿನ ಆಧ್ಯಾತ್ಮದಲ್ಲಿ ಎತ್ತರಕ್ಕೆ ಏರಿದವರಿಗೆ ಮೇಲು ಕೀಳೆಂಬ ಭಾವನೆ ಇರುವುದಿಲ್ಲ ಮೇಲಾಗಿ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರುತ್ತಾರೆ. ಎದುರಿಗೆ ಇದ್ದವರ ಖ್ಯಾತಿ ಪ್ರಖ್ಯಾತಿ ಏನೇ ಇದ್ದರೂ ಕೂಡ ತಪ್ಪು ಅಂತ ಹೇಳುವ ಎದೆಗಾರಿಕೆ ಇರುತ್ತದೆ. ಇಲ್ಲಿಯೂ ಅಷ್ಟೇ ಮುಕ್ತಾಯಕ್ಕನವರ ಪ್ರಶ್ನೆಗಳು ಎಷ್ಟೇ ಕಠಿಣ ಇದ್ದರೂ ಅಲ್ಲಮ ಪ್ರಭುಗಳ ಉತ್ತರಗಳು ಅಷ್ಟೇ ನಿರಾಳವಾದ ಪ್ರತಿಮೆಯನ್ನು ಕಟ್ಟಿ ಕೊಡುವಲ್ಲಿ ಯಶಸ್ವಿಯಾಗುತ್ತವೆ.
ಕೈಯದು ಕುರುಹು, ಬಾಯದು ಬೊಬ್ಬೆ.
ಉಲಿಯದಿರೊ ಭಾವಾ, ಉಲಿಯದಿರೊ ಭಾವಾ!
ವಾರಿಕಲ್ಲ ಕೊಡನಲ್ಲಿ ಮುತ್ತು ಮಾಣಿಕವ ತುಂಬಿ,
ಎತ್ತುವರಿಲ್ಲದೆ ಸಖಿಯನರಸುತಿಪ್ಪೆ,
ಮನದ ತನುವಿನಲ್ಲಿ, ಆ ತನುವಿನ ಮನದಲ್ಲಿ
ತನಗೆ ತಾನೆತ್ತಿಕೊಂಡಡೆ,
ಮನ ಮೇರೆದಪ್ಪಿ ಕರಗಿ ಉಕ್ಕಿತ್ತು
ನಮ್ಮ ಅಜಗಣ್ಣನ ಯೋಗ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-397 / ವಚನ ಸಂಖ್ಯೆ-1107)
ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದದ ಅರ್ಥ:
ವಾರಿಕಲ್ಲು: ಆನೆಕಲ್ಲು, ಮಂಜಿನಕಲ್ಲು.
ಅಯ್ಯಾ ಅರಿವನ್ನು ಶಬ್ದದಲ್ಲಿ ಹೇಳುವ ಸಾಹಸ ಮಾಡಬೇಡ. ಅಯ್ಯಾ ಮಾತನಾಡಬೇಡ. ನಿನ್ನ ಕೈ ಮತ್ತು ಬಾಯಿಯ ಮೇಲೆ ನಿನಗೆ ನಿಯಂತ್ರಣವಿಲ್ಲ. ನಿನ್ನ ಶರೀರದಲ್ಲಿರುವ ಜ್ಞಾನಭಂಡಾರವು ಮಂಜಿನ ಕೊಡದಲ್ಲಿ ತುಂಬಿದ ಮುತ್ತು, ರತ್ನ, ಮಾಣಿಕ್ಯಗಳಂತಿದೆ. ಯಾವಾಗ ಕರಗಿ ಹೋಗುವುದೋ ಗೊತ್ತಿಲ್ಲ. ನೀನು ಅದನ್ನು ಎತ್ತುವುದಕ್ಕಾಗಿ ಸ್ತ್ರೀಯರ ಸಹಾಯ ಕೇಳುತ್ತಿದ್ದೀಯಾ. ಆದರೆ ನನ್ನ ಅಣ್ಣ ಅಜಗಣ್ಣ ತನ್ನ ತನುವಿನಲ್ಲಿ ಮತ್ತು ತನುವಿನಲ್ಲಿರುವ ಮನದಲ್ಲಿನ ಅರಿವು ಆಚಾರಗಳಲ್ಲಿ ಶ್ರೇಷ್ಠತೆಯನ್ನು ಹೊಂದಿದ್ದನು. ದುಃಖತಪ್ತಳಾಗಿದ್ದ ಮುಕ್ತಾಯಕ್ಕಳ ಈ ಪ್ರಶ್ನೆಗೆ ಉತ್ತರ ನೀಡುತ್ತಾರೆ ಅಲ್ಲಮ ಪ್ರಭುಗಳು.
ಅರಿವುಗೆಟ್ಟು ಕುರುಹಳಿದು,
ಭಾವಭ್ರಾಂತು ನಿಭ್ರಾಂತವಾದವರ ಕೈಯಲ್ಲಿ
ಕುರುಹನರಸುವರೆ ಹೇಳಾ?
ತಾನಳಿದು ತಾನುಳಿದು ತಾನುತಾನಾದ ನಿಜಶರಣಂಗೆ
ಅಂತರಂಗದಲ್ಲಿ ಒಂದು ಅರಿವುಂಟೆ?
ಬಹಿರಂಗದಲ್ಲಿ ಒಂದು ಕ್ರಿಯೆಯುಂಟೆ?
ಒಳಹೊರಗೊಂದಾಗಿ ನಿಂದ
ಗುಹೇಶ್ವರನ ಶರಣರ ನಿಲವು
ಕಾಯಗೊಂಡವರ ಕಣ್ಣಿಂಗೆ ಸಂದೇಹವಾಗಿಪ್ಪುದು,
ನಿಸ್ಸಂದೇಹಿಗಳಿಗೆ ನಿಜವಾಗಿಪ್ಪುದು ನೋಡಾ ಮುಕ್ತಾಯಿ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-300 / ವಚನ ಸಂಖ್ಯೆ-838)
ಅರಿವು ಕೆಟ್ಟು ನಷ್ಟವಾಗಿರುವವರ, ತನ್ನ ತಾನು ಅರಿಯದವರ, ಅನುಭಾವದ ಕಾಂತಿ ಕರಗಿ ಹೋದವರಲ್ಲಿ ಯಾವುದರ ಕುರುಹನ್ನು ತಿಳಿಯಬಹುದು ತಾಯಿ? ತಾನು ಎಂಬ ಭಾವವಳಿದು ಲಿಂಗಾಂಗ ಸಾಮರಸ್ಯ ಹೊಂದಿದ ಶರಣನಿಗೆ ತನು ಅಥವಾ ಮನವೆಂಬ ಒಂದೇ ಭಾವವಿಲ್ಲ. ಅವನು ಶರಣಸತಿ-ಲಿಂಗಪತಿಯೆಂಬ ಏಕೋಭಾವದ ನಿಜಶರಣ. ಕೇವಲ ಬಹಿರಂಗದ ತನುವನ್ನು ನೋಡಿ ನಿರ್ಣಯಕ್ಕೆ ಬರುವವರು ಅಂತರಂಗದ ಅರಿವನ್ನು ಕಾಣಲಾರದ ಸಂದೇಹಿಗಳು. ನಿಸ್ಸಂದೇಹಿಗಳು ಲಿಂಗಾಂಗ ಸಾಮರಸ್ಯದ ನಿಜ ಕಾಯಕವನ್ನು ಕಾಣುತ್ತಾರೆ ಎಂದು ಮುಕ್ತಾಯಕ್ಕನವರಿಗೆ ಹೇಳುತ್ತಾರೆ.
ಅದಕ್ಕೆ ಮುಕ್ತಾಯಕ್ಕನವರ ದಿಟ್ಟತನದ ಮರುಪ್ರಶ್ನೆ ಎಂಥವರನ್ನೂ ಒಂದು ಕ್ಷಣ ಸ್ಥಂಭೀಭೂತರನ್ನಾಗಿ ಮಾಡಿ ಆಶ್ಚರ್ಯ ಚಕಿತರನ್ನಾಗಿ ಮಾಡುತ್ತದೆ.
ನುಡಿಯೆನೆಂಬಲ್ಲಿಯೆ ನುಡಿ ಅದೆ.
ನಡೆಯೆನೆಂಬಲ್ಲಿಯೆ ನಡೆ ಅದೆ.
ಭಾವಿಸೆನೆಂಬಲ್ಲಿಯೆ ಭಾವ ಅದೆ.
ಅರಿದು ಮರೆದೆನೆಂಬಲ್ಲಿಯೆ ಅರಿವು ಮರವೆ ಅದೆ.
ಅಂಗದಲ್ಲಿ ಲಿಂಗ ಲೀಯವಾಯಿತ್ತೆಂದಡೆ ಅಲ್ಲಿಯೆ ಅಂಗ ಅದೆ.
ಅನಂಗಸಂಗಿಯಾದೆನೆಂಬಲ್ಲಿಯೆ ವಿಷಯ ಸೂತಕ ಅದೆ.
ನಾನೆ ನಾನಾದೆನೆಂಬಲ್ಲಿಯೆ ನೀನೆಂಬುದು ಅದೆ.
ಅರಿದು ಮರೆದ ಪರಿ ಎಂತು ಹೇಳಾ?
ಅರಿವು ನಷ್ಟವಾಗಿ ಮರಹು ಲಯವಾಗಿಪ್ಪಡೆ
ಎನ್ನ ಅಜಗಣ್ಣತಂದೆಯಲ್ಲದೆ ಮಾತ್ತಾರನೂ ಕಾಣೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-402 / ವಚನ ಸಂಖ್ಯೆ-1122)
ಚತುರತೆಯಿಂದ ಕೂಡಿದ ಶಬ್ದ ಜೋಡಣೆಗಳ ವಿಸ್ತಾರವನ್ನು ಈ ವಚನದಲ್ಲಿ ಕಾಣಬಹುದು. ಅಜಗಣ್ಣ ಏಕೆ ನಿಃಶಬ್ದನಾಗಿದ್ದ ಎನ್ನುವ ಮೂಲತತ್ವದ ವ್ಯಾಖ್ಯಾನವನ್ನು ನೀಡುವಂತಿದೆ ಈ ವಚನ. ಅಂಗದಲ್ಲಿ ಲೀನವಾಗುವ ಲಿಂಗ, ಲಿಂಗಾಂಗ ಸಾಮರಸ್ಯವನ್ನು ಸಾರುವಲ್ಲಿ ಅಂಗವೂ ಇದೆ. ಅದರಿಂದ ಶಬ್ದಗಳೂ ಹೊರಡುತ್ತವೆ. ಅಂಗ ಸಂಗವಾದರೂ ಇರಲಿ, ಅನಂಗಸಂಗವಾದರೂ ಇರಲಿ ಅಲ್ಲಿ ವಿಷಯ ವಾಸನೆಗಳು ಕಾಣತಾ ಇದೆ. ನಾನು, ನೀನು, ಆನು, ತಾನು ಎನ್ನುವದರಲ್ಲಿಯೇ ನಾನು ಎನ್ನುವ ಅಹಂಕಾರದ ಬೀಜ ಮೊಳಕೆಯೊಡೆದಿರುವುದು ಕಾಣುತ್ತದೆ. ಇಂಥ ನಾನು ನೀನೆಂಬ ಹಿನ್ನೆಲೆಯಲ್ಲಿ ನಾನಿಲ್ಲ ನೀನಿಲ್ಲ ನಾನಿದ್ದೆ ನೀನಿದ್ದೆ ಎನ್ನುವ ಅರಿವಿನ ಮರೆಯ ತತ್ವವೇನು ಹೇಳು ಪ್ರಭುಗಳೆ ಅಂತ ಕೇಳುತ್ತಾರೆ ಮುಕ್ತಾಯಕ್ಕನವರು.
ಕಠಿಣಾತಿ ಕಠಿಣ ಸಂವಾದದ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಿದ್ದ ಅಲ್ಲಮ ಪ್ರಭುಗಳು ಇದಕ್ಕೆ ಸಮರ್ಥವಾಗಿ ಉತ್ತರಿಸಿದ್ದಾರೆ.
ಅಂಗ ಅನಂಗವೆಂಬೆರಡೂ ಅಳಿದು ನಿಜದಲ್ಲಿ ನಿಂದ ಲಿಂಗೈಕ್ಯನ
ಅಂಗದಲುಳ್ಳ ಕ್ರೀಗಳೆಲ್ಲವೂ ಲಿಂಗಕ್ರೀಗಳು ನೋಡಾ
ಮನೋಲಯವಾಗಿಪ್ಪ ಲಿಂಗೈಕ್ಯನ ಅನುಭಾವವೆಲ್ಲವೂ
ಜ್ಞಾನನಷ್ಟ ಶಬ್ದ ನೋಡಾ.
ತನ್ನಲ್ಲಿ ತಾನು ತದ್ಗತವಾಗಿಪ್ಪ ಶಿವಯೋಗಿಗೆ
ಭಿನ್ನವಿಲ್ಲ ನೋಡಾ ಗುಹೇಶ್ವರ ಸಾಕ್ಷಿಯಾಗಿ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-217 / ವಚನ ಸಂಖ್ಯೆ-696)
ಅಲ್ಲಮ ಪ್ರಭುಗಳ ಆಧ್ಯಾತ್ಮಿಕ ಅನುಭವ ಮತ್ತು ಅನುಭಾವದಿಂದ ಮಂಡಿಸುವ ವಿಚಾರಗಳ ವಿಸ್ತಾರ ಮತ್ತು ವಿವರಣೆ ಅಭೂತಪೂರ್ವ. ಪಂಚಭೂತಗಳಿಂದ ನಿರ್ಮಾಣವಾದ ಸಮಷ್ಠಿಯಲ್ಲಿ ಪಂಚತತ್ವಗಳಿಂದೊಡಗೂಡಿ ಜನ್ಮ ತಳೆದದ್ದು ತನು. ಪಂಚತತ್ವಗಳು, ಅರಿಷಡ್ವರ್ಗಗಳು, ಸಪ್ತವ್ಯಸನಗಳು ಮತ್ತು ಅಷ್ಟಮದಗಳೆಂಬ ಮಾಯೆಗಳನ್ನು ತೊಡೆದು ಹಾಕಿ ಲಿಂಗಾಂಗ ಸಾಮರಸ್ಯವನ್ನು ಸಾಧಿಸಿ ಐಕ್ಯಸ್ಥಲದಲ್ಲಿ ನಿಂದವನು ನಿಜ ಶರಣ. ಶರಣನು ತನು ಮನಗಳಲ್ಲಿ ಲಿಂಗಾಂಗ ಸುಖವನ್ನು ಅನುಭವಿಸುತ್ತಾನೆ. ಹೀಗೆ ಐಕ್ಯಸ್ಥಲದಲ್ಲಿ ನಿಂತ ಶರಣನ ಕ್ರಿಯೆಗಳೆಲ್ಲವೂ ಲಿಂಗಕ್ರಿಯೆಗಳು. ತನುಭಾವ ಮನಭಾವವೆರಡೂ ವಿಲೀನವಾಗಿ ಲಿಂಗಾಂಗ ಸಾಮರಸ್ಯ ಕಂಡುಕೊಂಡ ಶರಣನ ಅನುಭಾವವೆಲ್ಲವುಗಳೂ ಲಿಂಗಾನುಭಾವಗಳು. ಇಂಥ ಅನುಭಾವದಿಂದ ಹೊರಬರುವ ಜ್ಞಾನಪೂರ್ಣ ಶಬ್ದಗಳು ನಿಃಶಬ್ದಗಳು ತಾಯಿ ಅಂತಾ ಹೇಳಿದ್ದಾರೆ ಅಲ್ಲಮ ಪ್ರಭುಗಳು. ಇದರಾಚೆ ಇರುವ ಶಿವಯೋಗಿಗೆ ಹೊರಗೊಳಗೆಂಬ ಭಿನ್ನ ಭಾವವಿರುವುದಿಲ್ಲವೆಂಬುದು ಗುಹೇಶ್ವರನ ಸಾಕ್ಷಿಯಾಗಿ ಸತ್ಯ ಎಂದು ತಿಳಿ ಹೇಳುತ್ತಾರೆ.
ಅಯ್ಯಾ ಮತ್ತೆ ಮತ್ತೆ ಮಾತುಗಳಿಂದ ನನ್ನನ್ನು ಕಟ್ಟಿ ಹಾಕುವ ಪ್ರಯತ್ನ ಮಾಡತಾ ಇದ್ದೀರಿ. ಇದಕ್ಕೆ ಪರಿಹಾರವೇನು? ಬರಿದಾದ ಭಾವಿಗೆ ಮೆಟ್ಟಿಲನ್ನು ಕಟ್ಟುವ ಪ್ರಯತ್ನವೇಕೆ ಎಂಬುದನ್ನು ಪ್ರಶ್ನೆಯ ಮೂಲಕ ಕೇಳುತ್ತಾರೆ ಮುಕ್ತಾಯಕ್ಕನವರು.
ಸಿಡಿಲುಹೊಯ್ದ ಬಾವಿಗೆ ಸೋಪಾನವೇಕೋ?
ನೆರೆಯರಿದ ಬಳಿಕ ಮತ್ತೆ ಮತಿ ಹುಟ್ಟಲುಂಟೆ?
ಸೊಡರುಳ್ಳ ಮನೆಗೆ ಮತ್ತೆ ತಮಂಧವೆಂಬುದೇನೋ?
ತನ್ನಲ್ಲಿ ತಾನು ತದ್ಗತವಾದ ಬಳಿಕ
ಬೊಮ್ಮ ಪರಬೊಮ್ಮವಾದೆನೆಂಬುದಿಲ್ಲ ನೋಡಾ
ಎನ್ನ ಅಜಗಣ್ಣತಂದೆಗೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-404 / ವಚನ ಸಂಖ್ಯೆ-1128)
ಸಿಡಿಲು ಬಡಿದು ಭಾವಿಯಲ್ಲಿರುವ ನೀರು ಬತ್ತಿ ಹೋದ ಭಾವಿಗೆ ಮೆಟ್ಟಿಲು ಕಟ್ಟುವ ಸಾಹಸವನ್ನೇಕೆ ಮಾಡುತ್ತಿರುವಿರಿ? ಬದುಕಿನ ಮುಕ್ತಾಯದ ಹಂತದಲ್ಲಿರುವವರಿಗೆ ಮತ್ತೆ ಮತಿ ಹುಟ್ಟಿದರೆ ಏನು ಪ್ರಯೋಜನ? ಬೆಳಕಿನಲ್ಲಿ ಪ್ರಕಾಶಮಾನಗಿ ಬೆಳಗುತ್ತಿರುವ ಮನೆಗೆ ಮತ್ತೆ ಪ್ರಕಾಶ ಬೇಕೇ? ತನ್ನಲ್ಲಿ ತಾನು ಲೀನವಾದ ಪರಿಪೂರ್ಣ ಶರಣನಿಗೆ ತತ್ವ ಪರತತ್ವ ಎನ್ನುವ ಬುದ್ಧಿಯ ಅವಶ್ಯಕತೆ ಇದೆಯೇ? ಅರಿವಿನ ಪ್ರಜ್ಞೆಯಲ್ಲಿ ಸಂಪೂರ್ಣವಾಗಿ ಮಿಂದೆದ್ದ ಶರಣ ಅಜಗಣ್ಣನಿಗೆ ಇಹ ಪರವೆಂಬ ಸ್ಥಲವಿಲ್ಲ ಪ್ರಭುವೇ ಅಂತ ಉಪಮೆಗಳ ಮೂಲಕ ಮುಕ್ತಾಯಕ್ಕನವರು ಉತ್ತರ ನೀಡುತ್ತಾರೆ.
ಅಲ್ಲಮ ಪ್ರಭುಗಳು ಅಷ್ಟೇ ಶಾಂತಚಿತ್ತದಿಂದ ಹೌದು ತಾಯಿ ನೀನು ಹೇಳುವುದೆಲ್ಲ ಸತ್ಯ. ನುಡಿ ಮತ್ತು ನಡೆಯಿಂದಷ್ಟೇ ಅದ್ವೈತ ಅನುಭಾವವನ್ನು ಹಿಡಿಯುವುದು ಕಷ್ಟ.
ನುಡಿಯಿಂದ ನಡೆಗೆಟ್ಟಿತ್ತು,
ನಡೆಯಿಂದ ನುಡಿಗೆಟ್ಟತ್ತು.
ಭಾವದ ಗುಸುಟು ಅದು ತಾನೆ ನಾಚಿ ನಿಂದಿತ್ತು.
ಗುಹೇಶ್ವರನೆಂಬ ಅರಿವು ಸಿನೆ ಬಂಜೆಯಾಯಿತ್ತು.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-213 / ವಚನ ಸಂಖ್ಯೆ-691)
ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದದ ಅರ್ಥ:
ಸಿನೆ: ಶೂನ್ಯ, ಹಾಳಾದ, ನೀಚ.
ಗುಸುಟು: ಕೆಟ್ಟ ವಾಸನೆ.
ಲಿಂಗಾಂಗ ಸಾಮರಸ್ಯವನ್ನು ತಲುಪಿದ ಶರಣನಿಗೆ ಮೌನವೇ ಮಾತು. ಶರಣನ ಶುದ್ಧ ನಡೆ ನುಡಿಗಳಿಂದ ಉಂಟಾಗುವ ಎಲ್ಲವನ್ನೂ ಅರಿದವನೆಂಬ ಅಹಂಕಾರ ಆಳಿಯುತ್ತದೆ. ಅಹಂಕಾರ ಭಾವದಿಂದ ಹೊರಬರುವ ಕೆಟ್ಟ ವಾಸನೆಯೂ ಕೂಡ ನಾಚಿ ನೀರಾಗಿ ಶುದ್ಧ ಪರಿಮಳವನ್ನು ಸೂಸುತ್ತದೆ. ಸಂಪೂರ್ಣ ಅರಿವನ್ನು ಪಡೆದ ಶರಣನ ಮಾತುಗಳು ಮೌನವಾಗುತ್ತವೆ. ಅಹಂಕಾರವೆಂಬ ಭಾವವು ಮದುಡಿ ಹೋಗುತ್ತದೆ. ಶ್ರದ್ಧೆಯ ಒಂದೊಂದೇ ಮೆಟ್ಟಿಲನ್ನು ಹತ್ತುವ ಶರಣ ಹಂತ ಹಂತವಾಗಿ ಎಲ್ಲವನ್ನೂ ಒಳಗೊಂಡಿರುವ ಶೂನ್ಯವೆಂಬ ಬಯಲು ಎನ್ನುವ ನಿರಾಳ ನಿರ್ಗುಣ ಸ್ಥಲವನ್ನು ತಲುಪುತ್ತಾನೆ.
ಅಣ್ಣ ಅಜಗಣ್ಣನ ಅಗಲುವಿಕೆಯಿಂದ ಮುಕ್ತಾಯಕ್ಕನವರು ಅಂಗ ಮತ್ತು ಲಿಂಗದ ದ್ವೈತದ ಸುಳಿಯಿಂದ ಹೊರಬರಲಾರದೆ ಒದ್ದಾಡುತ್ತಿದ್ದರು. ಅದಕ್ಕೆಂದೆ ಇಷ್ಟೆಲ್ಲಾ ಸಂವಾದಗಳ ಮೂಲಕ ಅವರ ಸಂದೇಹಗಳನ್ನು ಪರಿಹರಿಸುತ್ತಾರೆ. ಕೊನೆಗೆ ಅಲ್ಲಮ ಪ್ರಭುಗಳು ಈ ವಚನದಿಂದ ಮುಕ್ತಾಯಕ್ಕನವರ ಮನಸ್ಸನ್ನು ಹಗುರು ಮಾಡುತ್ತಾರೆ.
ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ.
ಮಾಡಿದಡೇನಹುದೋ?
ಮಾಡದಿರ್ದಡೇನಹುದೋ?
ಗುಹೇಶ್ವರನೆಂಬ ಅರುಹಿನ ಕುರುಹು ಮುಂದಿಲ್ಲ, ಇಲ್ಲ.
ಮಾಡಿದಡೇನಹುದೋ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-196 / ವಚನ ಸಂಖ್ಯೆ-636)
ಅರಿವೇ ಗುರುವಾದಾಗ ಅರಿವಿನ ದೃಷ್ಟಿಗಿಂತ ಮತ್ತೊಂದು ದೃಷ್ಟಿಯಿಲ್ಲ. ಅಂಥ ಅರಿವಿನ ಕುರುಹಾದ ಲಿಂಗವನ್ನು ಅಂತರಂಗದಲ್ಲಿಯೇ ಕಂಡುಕೊಂಡು ಅದರ ಸತ್ಯ ಸ್ವರೂಪದ ಅನುಭಾವವನ್ನು ಪಡೆದ ಶರಣ ಸಾಕ್ಷಾತ್ ಲಿಂಗ ಸ್ವರೂಪಿಯಾಗುತ್ತಾನೆ. ಅರ್ಪಿತ ಅನರ್ಪಿತ ಎನ್ನುವ ದ್ವಂದ್ವಗಳಿಲ್ಲದೆ ಸಿದ್ಧ ಪುರುಷನಾದ ಶರಣನಿಗೆ ಉಪಚಾರ ಅರ್ಚನೆಗಳೆಲ್ಲವೂ ಎಲ್ಲವೂ ಸಹಜ ಪ್ರಕ್ರಿಯೆಗಳು. ಅರಿವೆಂಬ ಜ್ಞಾನ ಪ್ರಕಾಶವನ್ನು ಕಂಡಿರುವ ಮತ್ತು ಅದೇ ಜ್ಞಾನ ಪ್ರಕಾಶದಲ್ಲಿ ತಾನೇ ಅರಿವೆಂಬ ಜ್ಯೋತಿ ಪ್ರಕಾಶವಾಗಿ ನಿಂತ ಶರಣನಿಗೆ ಮತ್ತೆ ಕುರುಹು ಎನ್ನುವುದು ಇಲ್ಲ. ಅವನ ದೃಷ್ಟಿಯಲ್ಲಿ ಕುರುಹು ಮತ್ತು ಕ್ರಿಯೆಗಳೆಲ್ಲವೂ ಅಂತರಂಗದ ಅರಿವು.
ಅಧ್ಯಾತ್ಮ ಲೋಕದ ಅನುಪಮ ಸಾಧಕಿ ಮುಕ್ತಾಯಕ್ಕನವರ ಮನದಲ್ಲಿದ್ದ ದ್ವಂದ್ವಗಳನ್ನು ಪರಿಹರಿಸಲು ಅಲ್ಲಮ ಪ್ರಭುಗಳ ಮಾಡಿದ ಪ್ರಯತ್ನ ಫಲ ನೀಡಿತ್ತು. ಅಣ್ಣ ಅಜಗಣ್ಣ ಐಕ್ಯಸ್ಥಲವನ್ನು ತಲುಪಿದ್ದ ನಿಃಶಬ್ದ ಶರಣನೆಂದು ಸಂಪೂರ್ಣ ಮನವರಿಕೆಯಾಯಿತು ಮುಕ್ತಾಯಕ್ಕನವರಿಗೆ. ಮನದ ಸಂದೇಹಗಳೆಲ್ಲವೂ ನಿವಾರಣೆಯಾದವು. ಅಜಗಣ್ಣನ ನಿಜ ನಿಲುವನ್ನು ಅರಿತು ಮುಕ್ತಾಯಕ್ಕನವರ ಮತ್ತು ಅಲ್ಲಮ ಪ್ರಭುಗಳ ನಡುವಿನ ಸಂವಾದವು ಮುಕ್ತಾಯವಾಗಿ ಸಂತಸಗೊಂಡರು.
ಅಹುದಹುದು ಶಿವಶರಣರ ಮಹಿಮೆ
ಆರಿಗೆಯೂ ಕಾಣಬಾರದು.
ಕಬ್ಬುನ ಉಂಡ ನೀರಿನಂತೆ,
ಕಬ್ಬಿಸಿಲುಂಡ ಅರಸಿನದಂತೆ,
ಉರಿಯೊಳಡಗಿದ ಕರ್ಪುರದಂತೆ,
ಬಯಲನಪ್ಪಿದ ವಾಯುವಿನಂತೆ,
ಇಪ್ಪ ನಿಲವ ನುಡಿದು ಹೇಳಿಹೆನೆಂಬ
ಮಾತಿಂಗೆ ಅಳವಡುವುದೆ?
ಅರಿವಡೆ ಮತಿಯಿಲ್ಲ, ನೆನೆವಡೆ ಮನವಿಲ್ಲ
ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ
ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-394 / ವಚನ ಸಂಖ್ಯೆ-1099)
ಕಾಯ್ದ ಕಬ್ಬಿಣದ ಮೇಲೆ ನೀರು ಬಿದ್ದರೆ ಕ್ಷಣದಲ್ಲಿ ಕುರುಹು ಕಾಣದಂತೆ ಆವಿಯಾಗಿ ಹೋಗುತ್ತದೆ. ಅರಿಷಿನವನ್ನು ಕರಿ ನೆರಳಲ್ಲಿ ಒಣಗಿ ಹಾಕಿದರೆ ತನ್ನ ಬಣ್ಣದ ಕುರುಹನ್ನು ಕಳೆದುಕೊಳ್ಳುತ್ತದೆ. ಉರಿಯುವ ಬೆಂಕಿಯಲ್ಲಿ ಕರ್ಪೂರವನ್ನು ಹಾಕಿದರೆ ಕ್ಷಣ ಮಾತ್ರದಲ್ಲಿ ಕಣ್ಮರೆಯಾಗುತ್ತದೆ. ಬಯಲೊಳಗೆ ನಿಂದಿರುವ ಗಾಳಿಗೆ ಮೈಯೆಲ್ಲಾ ಕಾಲು. ಆದರ ಹೆಜ್ಜೆ ಗುರುತುಗಳು ಎಲ್ಲಿ ಹೇಗೆ ಹೊರಟು ಹೋಗುತ್ತವೆ ಎನ್ನುವ ಕುರುಹು ಗೊತ್ತಾಗುವುದಿಲ್ಲ. ಹಾಗೆ ತನ್ನ ತಾನರಿತ ಶರಣನ ಮಹಿಮೆ ಯಾರಿಗೂ ಕಾಣುವುದಿಲ್ಲ. ಅದು ಕುರುಹಿಲ್ಲದ ಘನತತ್ವ. ಇಂಥ ಮಹಾಮಹಿಮ ತತ್ವಗಳನ್ನು ಅರಿಯದೆ ತಮ್ಮೊಡನೆ ವಾದ ಮಾಡಿದೆ. ನಿಮ್ಮ ಮಹಿಮೆ ಮತ್ತು ನಮ್ಮಣ್ಣ ಮಹಿಮೆ ಎರಡೂ ಒಂದೇ. ತಮ್ಮದು “ಸ್ವತಂತ್ರ ಮಹಿಮೆ” ಅಣ್ಣಾ. ಅಜಗಣ್ಣನಂತೆ ಮಹಿಮೆ ಹೊಂದಿರುವ ಮತ್ತು ಮಹತ್ವವನ್ನು ತಿಳಿಸಿದ ತಮಗೆ ನಮೋ ನಮೋ ಎನ್ನುವೆ ಅಂತ ಮುಕ್ತಾಯಕ್ಕನವರು ಹೇಳುತ್ತಾರೆ.
ಇಂಥ ಸಮಾಧಾನದ ನುಡಿಗಳಿಗಾಗಿ ಕಾಯುತ್ತಿದ್ದ ಅಲ್ಲಮ ಪ್ರಭುಗಳು ಇನ್ನೂ ಮುಂದೆ ಹೋಗಿ ಅವಳಿಗೆ ಸಮಾಧಾನ ಹೇಳುತ್ತಾರೆ.
ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿ
ಅರಿವಿಂಗೆ ಅರಿವಾಗಿಪ್ಪ ಭೇದ ಕಾಣಬಂದಿತ್ತು ನೋಡಾ!
ಅರಿವರಿತು ಮರಹು ನಷ್ಟವಾಗಿಪ್ಪುದು ನಿನ್ನಲ್ಲಿ ಸನ್ನಹಿತವಾಗಿತ್ತು.
ಗುಹೇಶ್ವರನ ಶರಣ ಅಜಗಣ್ಣನ ನಿಲವು
ಬಯಲ ಬೆರಸಿದ ಮರೀಚಿಕೆಯಂತಾಯಿತ್ತು,
ಬೆರಸಿ ನೋಡಾ ಬೇರಿಲ್ಲದ!
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-549 / ವಚನ ಸಂಖ್ಯೆ-1447)
ಅಜಗಣ್ಣನ ಮಹಿಮೆ ನಿನಗೆ ಮೊದಲೇ ತಿಳಿದಿತ್ತು. ಆದರೆ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ಈ ಮಹಿಮೆಯನ್ನು ಅರಿಯುವಲ್ಲಿ ಸ್ವಲ್ಪ ವಿಳಂಬವಾಯಿತು. “ನಿನ್ನಲ್ಲಿ ಸನ್ನಹಿತವಾಗಿಪ್ಪುದು” ನಿನ್ನ ಅಂತರಂಗದಲ್ಲಿ ಇಳಿದು ನಿನ್ನನ್ನೇ ವಿಮರ್ಶಿಸಿ ನೋಡು. ಅಲ್ಲಯೇ ನಿನ್ನ ಅಜಗಣ್ಣನ ನಿಜಸ್ವರೂಪದ ಸಾಕರವಾಗುತ್ತದೆ. ನೀನು ಬೇರೆ ಅಣ್ಣ ಬೇರೆ ಅಂತ ತಿಳಿಯದೇ ಒಂದೇ ಎನ್ನುವ ಅರಿವು ನಿನಗಾಗುತ್ತದೆ ಅಂತ ಮುಕ್ತಾಯಕ್ಕಳನ್ನು ಅಲ್ಲಮ ಪ್ರಭುಗಳು ಸಮಾದಾನ ಪಡಿಸುತ್ತಾರೆ.
ಈ ರೀತಿ ಮಹಾಘನ ಲಿಂಗೈಕ್ಯದ ಭೇದವನ್ನು ಬಿಡಿಸಿ ಹೇಳಿದಾಗ ಮುಕ್ತಾಯಕ್ಕನವರು ಸಮಾಧಾನ ಹೊಂದಿದರು ಎನ್ನುವುದನ್ನು ಈ ವಚನದ ಮೂಲಕ ನಮಗೆ ಅರಿವಾಗುತ್ತದೆ.
ಘನಮಹಿಮ ಶರಣರ ಸಂಗದಿಂದ
ಘನಕ್ಕೆ ಘನ ವೇದ್ಯವಾದ ಬಳಿಕ
ಅರಿಯಲಿಲ್ಲ, ಮರೆಯಲಿಲ್ಲ; ಕೂಡಲಿಲ್ಲ, ಅಗಲಲಿಲ್ಲ.
ಮನ ಮೇರೆದಪ್ಪಿ ನಿರವಯಲಾದ ಸುಖವ
ಶೂನ್ಯ ನಿಶೂನ್ಯವೆಂದು ನುಡಿಯಲುಂಟೆ?
ಶಬ್ದಮುಗ್ಧವಾಗಿ ಎನ್ನ ಅಜಗಣ್ಣತಂದೆಯ ಬೆರಸಿದ ಬಳಿಕ
ಉರಿಯುಂಡ ಕರ್ಪೂರದಂತಾದೆನಯ್ಯಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-399 / ವಚನ ಸಂಖ್ಯೆ-1110)
ಕರ್ಪೂರದಂತೆ ಕರಗಿ ಹೋದೆನು ಅಂತ ಮುಕ್ತಾಯಕ್ಕನವರು ಅಲ್ಲಮ ಪ್ರಭುಗಳಿಗೆ ಗೌರವದಿಂದ ಹೇಳುತ್ತಾರೆ. ನಿಮ್ಮ ಸಂಗದಿಂದ ನನಗೆ ಘನವೇನೆಂದು ಅರಿವಾಯಿತು. ಮಹಾಘನಲಿಂಗದಲ್ಲಿ ಲಿಂಗಕ್ಕೆ ಅಂಗವಾದ ತಾನು ಎಂಬುದು ಅರ್ಪಿತವಾಯಿತು. ನಾನು ಕಂಡು ಹೇಳಿದ ಯೋಗ ನನ್ನಲ್ಲಿಯೇ ಕಂಡು ಬಂತು ಪ್ರಭುಗಳೆ.
ಕೊನೆಯದಾಗಿ ಅಲ್ಲಮ ಪ್ರಭುಗಳು ಹೇಳುವುದು ಅತ್ಯಂತ ವೈಶಿಷ್ಟ್ಯಪೂರ್ಣ.
ಜ್ಯೋತಿಯೊಳಗಣ ಕರ್ಪುರಕ್ಕೆ,
ಅಪ್ಪುವಿನ ಕೈಯಲಿಪ್ಪ ಉಪ್ಪಿಂಗೆ,
ಶ್ರೀಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ-ಈ ಮೂರಕ್ಕೆಯೂ
ಬೇರೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ?
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-24 / ವಚನ ಸಂಖ್ಯೆ-62)
ಉರಿಯೊಳಗೆ ಹಾಕಿದ ಕರ್ಪೂರ ಒಂದು ಕ್ಷಣದಲ್ಲಿ ಆವಿಯಾಗಿ ಹೋಗತದ. ಸಮುದ್ರದಲ್ಲಿ ಒಂದು ಚಮಚ ಉಪ್ಪು ಹಾಕಿದರ ಅದು ಸಮುದ್ರದಲ್ಲಿ ಲೀನವಾಗಿ ಬಿಡತದ. ಗುರುವು ಪೂರ್ಣನು, ಕರುಣಾಸಾಗರನು. ಗುರುವೇ ಜ್ಞಾನ ನೀಡುವ ಇಚ್ಛೆಯುಳ್ಳವನು. ಸಮರ್ಪಣಾಭಾವಿಯಾದ ಶಿಷ್ಯ ಗುರುವಿಗೆ ಸರ್ವಸ್ವವನ್ನೂ ಅರ್ಪಿಸಿದಾಗ ಗುರುವಿನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ಒಬ್ಬ ಸಮರ್ಥ ಗುರುವಿನ ಕೈಯಲ್ಲಿರುವ ಶಿಷ್ಯ ಗುರುವೇ ಆಗಿ ಹೋಗತಾನ ಎನ್ನುತ್ತದೆ ಈ ವಚನ. ಮುಕ್ತಾಯಕ್ಕನ ಸಂಪಾದನೆಗಳು ಎಂಬ ವ್ಯಾಖ್ಯಾನಕ್ಕೆ ಈ ವಚನ ಸಾಕ್ಷೀಭೂತವಾಗಿದೆ.
ಹೀಗೆ ಅಲ್ಲಮ ಪ್ರಭುಗಳು ಮತ್ತು ಮುಕ್ತಾಯಕ್ಕನವರ ನಡುವೆ ಆಧ್ಯಾತ್ಮಿಕ ಮತ್ತು ತಾತ್ವಿಕ ಸಂವಾದ ನಡೆಯುತ್ತದೆ. ನಿತ್ಯ ಬದುಕಿನ ಮೂಲಭೂತ ಪ್ರಶ್ನೆಗಳಿಗೆ ಅನುಭಾವಿಗಳ ಮಧ್ಯೆ ನಡುವೆ ನಡೆಯುವ ಚರ್ಚೆಗಳಲ್ಲಿ ವಾಸ್ತವಿಕ ಉತ್ತರಗಳು ಸಿಗುತ್ತವೆ. ಬೌದ್ಧಿಕ ಪ್ರಖರತೆಯ ಮುಕ್ತಾಯಕ್ಕನವರು ಅಲ್ಲಮ ಪ್ರಭುಗಳಿಗೆ ಪ್ರಶ್ನೆಗಳ ಸುರಿಮಳೆಗೈದು ಆಧ್ಯಾತ್ಮಿಕವಾಗಿ ಅತ್ಯಂತ ಶ್ರೇಷ್ಠ ಉತ್ತರಗಳನ್ನು ಪಡೆಯುತ್ತಾರೆ. ಮುಕ್ತಾಯಕ್ಕನವರು ಅತ್ಯಂತ ದಿಟ್ಟತನದಿಂದ ವ್ಯೋಮಕಾಯರಾದಂಥ ಅಲ್ಲಮ ಪ್ರಭುಗಳನ್ನೇ ಕಟಕಟೆಯಲ್ಲಿ ನಿಲ್ಲಿಸಿ ನ್ಯಾಯಾಧೀಶರಂತೆ ಪ್ರಶ್ನಿಸುವ ಮಟ್ಟಕ್ಕೆ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದವರು. ಇಂಥ ತಾತ್ವಿಕ ಜಿಜ್ಞಾಸೆ ನಡೆಸಿ ಕೌತುಕ ಮೂಡಿಸಿದ ಉದಾಹರಣೆ ಬಹುಶಃ ಅಪರೂಪದಲ್ಲಿ ಅಪರೂಪ.
12 ನೇ ಶತಮಾನದ ವಚನ ಸಾಹಿತ್ಯ ಮತ್ತು ಭಕ್ತಿ ಚಳುವಳಿಯ ಉತ್ಥಾನ ಕಾಲಘಟ್ಟದಲ್ಲಿ ಅದ್ಭುತ ಸಾಧನೆ ಮಾಡಿ ಐಕ್ಯಸ್ಥಲವನ್ನು ತಲುಪಿದ ಅಜಗಣ್ಣನವರು ತಮ್ಮ ಹುಟ್ಟೂರಾದ ಲಕ್ಕುಂಡಿಯಲ್ಲಿಯೇ ಲಿಂಗೈಕ್ಯರಾದರು. ಅವರ ಸಾಮಾಧಿಯನ್ನು ಇತ್ತೀಚೆಗೆ ಪತ್ತೆ ಹಚ್ಚಿ ಅಭಿವೃದ್ಧಿಪಡಿಸುವದಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ರಾಯಚೂರು ಜಿಲ್ಲೆಯ ಮಸಳಿಕಲ್ಲು ಗ್ರಾಮದ ಬಳಿಯಿರುವ ಬೆಟ್ಟದ ಮೇಲೆ ಮುಕ್ತಾಯಕ್ಕನವರ ಸಮಾಧಿ ಇದೆ. ಈಗ ಅದರ ಮೇಲೆ ದೇವಸ್ಥಾನವನ್ನು ಕಟ್ಟಲಾಗಿದೆ. ಅದರ ಪಕ್ಕದಲ್ಲಿ ಅಜಗಣ್ಣನವರು ತಪಸ್ಸು ಮಾಡಿದ ಗುಹೆಯಿದೆ. ಈಗಲೂ ಅದನ್ನು ಅಜಗಣ್ಣನ ಬೆಟ್ಟ ಅಂತಲೇ ಕರೆಯಲಾಗುತ್ತದೆ.

ಈ ಚರ್ಚೆ ಅಥವಾ ಸಂವಾದ ಒಂದು ಅಪರೂಪದ ಅನುಪಮ ಘಟನೆ. ಅಣ್ಣ ಇನ್ನಿಲ್ಲ ಎಂದು ತಂಗಿಯಾದ ಮುಕ್ತಾಯಕ್ಕನವರು ಶೋಕತಪ್ತಳಾಗಿದ್ದಾರೆ. ಕಾರಣ ಒಂದು ಭೌತಿಕ ಶರೀರ ಮರೆಯಾಯಿತು ಇನ್ನೊಂದು ಜ್ಞಾನಮಾರ್ಗ ತೋರಿಸಬೇಕಾದ ಗುರುವಿನಂತಿದ್ದ ಅಣ್ಣ ಇನ್ನಿಲ್ಲ ಅಂತಾ. ಜ್ಞಾನ ಪ್ರಕಾಶ ಕಾಣುವ ಅವಕಾಶ ತಪ್ಪಿತಲ್ಲಾ ಅಂತಾ ಅಳತಾ ಇರತಾರೆ. ಅಲ್ಲಿಗೆ ಬಂದ ಅಲ್ಲಮ ಪ್ರಭುಗಳು ಅವರಿಗೆ ತತ್ವ ಬೋಧನೆಯನ್ನು ಮಾಡಿ ಸಂತೈಸುತ್ತಾರೆ. ಅಲ್ಲಮ ಪ್ರಭುಗಳ ಬೌದ್ಧಿಕ ಎತ್ತರಕ್ಕೆ ಮಾರು ಹೋಗಿ ಶರಣಾಗಿ ಲಿಂಗಾಂಗ ಸಾಮರಸ್ಯವನ್ನು ಹೊಂದಿ ಕೃತಾರ್ಥಳಾದಳು ಎನ್ನುವ ಕಥಾನಕ.
ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ,
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ,
ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-35 / ವಚನ ಸಂಖ್ಯೆ-91)
ಪಂಚತತ್ವಗಳ ಮಾಯೆಯ ಪ್ರಭಾವದಲ್ಲಿ ಸಿಲುಕಿದ ಮಾನವನಿಗೆ ಹಲವಾರು ಬಯಕೆಗಳು. ಅವುಗಳನ್ನು ಪಡೆಯಲು ಬದುಕನ್ನೇ ಮೀಸಲಿಡುವವರು ಕೋಟಿ ಕೋಟಿ ಜನ. ಇಂದ್ರಿಯ ಸುಖವನ್ನು ನೀಡುವ ಬಹಿರಂಗದ ಉಪಾದಿಗಳಿಗೆ ಅಥವಾ ವಸ್ತುಗಳನ್ನು ಪಡೆಯಲು ಹವಣಿಸುವವರು ಕೋಟಿ ಕೋಟಿ ಜನ. ಮೋಹ, ಆಕರ್ಷಣೆ ಮತ್ತು ಆಸಕ್ತಿಗಳು ಮಾಯೆಯ ಮೂರು ಮಾಯಾಜಾಲಗಳು. ಹೆಣ್ಣು ಹೊನ್ನು ಮಣ್ಣನ್ನು ಪಡೆಯಯಲು ಇಡೀ ಜೀವನವನ್ನೇ ಮುಡುಪಾಗಿಟ್ಟವರು ಕೋಟಿ ಕೋಟಿ ಜನ. ಮನದ ಕಾಮನೆಗಳನ್ನು ನಿಯಂತ್ರಿಸಿಕೊಂಡು ಇಹ-ಪರದ ಇಚ್ಛಾ-ವಾಂಛೆಗಳನ್ನು ನೀಗಿ ನಡೆದವರು ಬಹಳ ಕಡಿಮೆ. ಅಲ್ಲಮ ಪ್ರಭುಗಳ ದೃಷ್ಟಿಯಲ್ಲಿ ಯಾರೂ ಇಲ್ಲ. ಮನುಷ್ಯನ ರೂಪಕ್ಕೆ ಸಾವಿದೆ. ಗುಣಕ್ಕೆ ಸಾವಿಲ್ಲ.
Ordinary people created extra ordinary society in 12th Century. ಇದು ಕೇವಲ Statement ಅಲ್ಲ. ಶರಣರು ವಚನಾಮೃತದ ಅಕ್ಕರೆಯ ಬೀಜಗಳನ್ನು ಸಮಾಜದಲ್ಲಿ ಬಿತ್ತಿದರು. ಸಾಮಾನ್ಯರಂತೆ ಬದುಕಿ ಅಸಾಮಾನ್ಯ ತತ್ವಗಳನ್ನು ಜಗತ್ತಿಗೇ ನೀಡಿ ಬೆಳಕನ್ನಿತ್ತ ಶರಣರ ಬದುಕು ಇಂದಿಗೂ ಆದರ್ಶಮಯ. ಇಂಥ ಆದರ್ಶಗಳನ್ನು ಮೌಲ್ಯಗಳನ್ನು ತಿಳಿದುಕೊಳ್ಳುವ, ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಹಾಗಾಗಿ ಒಂದು ಆತ್ಮಾವಲೋಕನದಿಂದ ಶರಣರನ್ನು ಅರಿಯೋಣ ಅಂತ ಹೇಳತಾ ಈ ಲೇಖನಕ್ಕೆ ವಿರಾಮವನ್ನು ಹೇಳುತ್ತೇನೆ.
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ,
“ಸವಿಚರಣ” ಸುಮತಿ ಶಾಲೆಯ ಹತ್ತಿರ,
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್ ನಂ: 9741 357 132 / 9741 889 684
ಇ-ಮೇಲ್: vijikammar@gmail.com
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
ಸಹಾಯಕ ಗ್ರಂಥಗಳು :
• ಶರಣ ಚರಿತಾಮೃತ : ಡಾ. ಸಿದ್ಧಯ್ಯ ಪುರಾಣಿಕ
• ಶಾಸನಗಳಲ್ಲಿ ಶಿವಶರಣರು : ಡಾ. ಎಮ್. ಎಮ್. ಕಲಬುರ್ಗಿ
• ಅಲ್ಲಮ ಪ್ರಭುದೇವರ ವಚನ ನಿರ್ವಚನ : ಶ್ರೀ ಸಿದ್ಧೇಶ್ವರ ಸ್ವಾಮಿಗಳು
• ಬಸವಯುಗದ ವಚನ ಮಹಾಸಂಪುಟ : ಡಾ. ಎಮ್. ಎಮ್. ಕಲಬುರ್ಗಿ
• ಶೂನ್ಯಸಂಪಾದನೆಯ ಪರಾಮರ್ಶೆ : ಪ್ರೊ ಸಂ ಶಿ ಭೂಸನೂರಮಠ
• ಕನ್ನಡ ಸಾಹಿತ್ಯದಲ್ಲಿ ಅಲ್ಲಮಪ್ರಭುದೇವ : ಡಾ. ಎಸ್. ಎಮ್. ವೃಷಭೇಂದ್ರಸ್ವಾಮಿ
• Shunyasampadane : Dr. M S Sunkapur, Prof. Armando Menezes
• Women Saints of Karnataka : Dr.Ujwala S. Hiremath