
ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.
ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.
ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.
ಇಂತಿವನೆಲ್ಲವನರಿವ ಚಿತ್ತ ದೇವರಲ್ಲ.
ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.
ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ:
ಕಂಡವರೊಳಗೆ ಕೈಕೊಂಡಾಡದೆ,
ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,
ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ,
ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ,
ವೀರಬೀರೇಶ್ವರಲಿಂಗದೊಳಗಾದ ಶರಣ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-88)
ಅನುಭವ ಮಂಟಪದ ಮೇರು ಅನುಭಾವಿ ಶರಣರು ಗೋಲ್ಲಾಳೇಶ್ವರರು. ಇವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೋಲಗೇರಿ ಎಂಬ ಗ್ರಾಮ. ತಂದೆ ಬಲ್ಲುಗ ತಾಯಿ ದುಗ್ಗಳೆ. ಇವರ ಕಾಯಕ ಕುರಿ ಕಾಯುವದು. “ವೀರ ಬೀರೇಶ್ವರ” ಅಂಕಿತನಾಮದಲ್ಲಿ ಇವರ ಹತ್ತು ವಚನಗಳು ಲಭ್ಯವಾಗಿವೆ.
ನಿರ್ವಚನ:
ಕುರಿ ಹಿಕ್ಕೆಯನ್ನೆ ಲಿಂಗವೆಂದು ಪೂಜಿಸಿ ಸಾಧನೆ ಮಾಡಿದ ಸಾಧಕರು ಗೋಲ್ಲಾಳೇಶ್ವರರು. ಮುಂದೆ ಕಲ್ಯಾಣಕ್ಕೆ ಬಂದು ಬಸವಾದಿ ಪ್ರಮಥರೊಳು ಒಬ್ಬರಾಗಿ ಸಾಧಿಸಿದ ಸಾಧನೆಗೆ ನಿದರ್ಶನ ಈ ಮೇಲಿನ ವಚನ. ಏಕದೇವೋಪಾಸಕರಾದ ಶರಣರು ಇಷ್ಟಲಿಂಗದ ಮುಖಾಂತರ ಷಟ್‌ಸ್ಥಲ ಸಾಧನೆಗೈದವರು. ಐಕ್ಯಸ್ಥಲದ ನಿಲುವಿಗೆ ಬಂದ ಶರಣರಿಗೆ ಕರದೊಳಗಿನ ಲಿಂಗವು ಸಹ ತಾನೇ ಎಂದು ಭಾವಿಸಿ ಆ ಲಿಂಗವನ್ನು ಅಂಗದೊಳು, ಅಂಗವನ್ನು ಲಿಂಗದೊಳು ಒಂದು ಮಾಡಿದವರು.
ಲಿಂಗವು ಪರಮಾತ್ಮನನ್ನು ಅರಿಯುವ ಕುರುಹು, ಅದೇ ದೇವರಲ್ಲ ಎನ್ನುತ್ತಾರೆ ಈ ಶರಣರು. ಅದಕ್ಕಾಗಿ ಕಲ್ಲು, ಮಣ್ಣು, ಮರಗಳಲ್ಲಿ ಮಾಡಿದ ದೇವರುಗಳು ದೇವರಲ್ಲ ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ. ಏಕೆಂದರೆ ಅವು ಹಾಳಾಗಿ ಹೋಗುವವು.
ಕಲ್ಲಿಗೆ ಉಳಿಯ ಮೊನೆ ಹತ್ತಿದರೆ ಒಡೆದು ಹೋಗುವದು. ಮರದ ದೇವರು ಬೆಂಕಿಯಲ್ಲಿ ಭಸ್ಮವಾಯಿತು, ಮಣ್ಣಿನಿಂದ ಮಾಡಿದ್ದು ನೀರಿನೊಳು ನೆನೆಯುತ್ತದೆ ಎಂಬ ವಾಸ್ತವಿಕ ವಿಷಯ ಬಿಚ್ಚಿಟ್ಟಿರುವರು. ದೇವರ ಅಸ್ತಿತ್ವ ಹೀಗಲ್ಲ. ಪಂಚಭೂತಗಳ ಒಡೆಯನಾದ ಆತನ ಸ್ಥಿತಿಯೆ ಹೀಗಾದರೆ ಹೇಗೆ? ಎಂಬ ಪ್ರಶ್ನೆ ಅವರಲ್ಲುಂಟು. ಇಂತಹ ಪೂಜೆಗಳಿಂದ ಮನಸ್ಸು ದುರ್ಬಲಗೊಂಡು ಅದು ಬಾಹ್ಯ ಪೂಜೆಗೆ ಸೀಮೀತವಾಗುತ್ತದೆಯೆ ಹೊರತು ಪರಾತ್ಪರ ನಿಲುವು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪೂಜೆಗೆ ಅಂತರಂಗ ಶುದ್ಧಿ ಬೇಕೆನ್ನುತ್ತಾರೆ.
ಅಚಲವಾದ ವಿಶ್ವಾಸ ಸಾಧಕನಲ್ಲಿ ಮೊದಲಿಗಿರಬೇಕು. ಈ ವಿಶ್ವಾಸ ಕಳೆದು ಹೋದರೆ ಅಂಗ–ಲಿಂಗ ಸಾಮರಸ್ಯ ಸಾಧ್ಯವೇ ಇಲ್ಲ. ವಿಶ್ವಾಸ ಎಂಬುವುದೇ ನಿಜಲಿಂಗವಾಗಿದೆ. ಅದಕ್ಕಾಗಿ ಆ ನಿಜಲಿಂಗದೊಳಗೆ ವಿಶ್ವಾಸವಿಟ್ಟು ನಡೆಯಬೇಕು. ಸಿಕ್ಕ ಸಿಕ್ಕ ಕಡೆ ಮನಸ್ಸು ಬಿಡದೆ, ಅತ್ತಲಿತ್ತ ಕೈ ಆಡಿಸದೇ ಹಿಡಿದ ವೃತವನ್ನ ವಿಶ್ವಾಸದಿಂದ ಮುನ್ನಡೆಸಬೇಕು. ಅಂದರೆ ವಿಶ್ವಾಸವೇ ನಿಜವಾದ ಸತ್ಯದ ಮಾರ್ಗವೆಂಬುವುದು ಈ ಶರಣರ ಅನುಭವದ ನಿಲುವಾಗಿದೆ.
ತನ್ನ ಜೀವನದ ಘಟನೆಯೆ ಶರಣರಿಗೆ ಹೀಗೆ ಬರೆಯಲು ಸಾಧ್ಯವಾಯಿತೇನೋ ಎಂದೆನಿಸುವದು. ಕುರಿಯ ಹಿಕ್ಕೆಯೊಳಗೆ ವಿಶ್ವಾಸವೆಂಬ ಲಿಂಗವಿಟ್ಟು ಪೂಜಿಸಿದವರಲ್ಲವೆ ಗೋಲ್ಲಾಳೇಶ್ವರರು. ಅಂತೆಯೆ ಶರಣಿ ಸತ್ಯಕ್ಕ “ವಿಶ್ವಾಸದಿಂದ ನಂಬಿದರಯ್ಯಾ ಗೊಲ್ಲಾಳರಾಯರು” ಎಂದು ಬರೆದರೆ ಗಣದಾಸಿ ವೀರಣ್ಣ ಶರಣರು “ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆಯ ದೃಢದಿಂದ ಪೂಜಿಸಿ” ಎಂದು ಉದ್ಗಾರ ತೆಗೆಯುವರು. ಹೀಗಾಗಿ ವಿಶ್ವಾಸವೆಂಬುದನ್ನಿರಿಸಿಕೊಂಡು ಪೂಜೆ ಮಾಡಿ ಅಂಗ–ಲಿಂಗ ಸಮರಸಗೊಳಿಸಬೇಕೆಂಬುದು ಗೋಲ್ಲಾಳೇಶ್ವರ ಶರಣರ ವಚನದ ತಾತ್ಪರ್ಯವಾಗಿದೆ.
ಶ್ರೀಮತಿ ರೇಣುಕಾ ಮೈಸಲಿಗೆ,
ಶರಣ ತತ್ವ ಚಿಂತಕರು,
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್ ನಂ. 80505 49560
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()





Total views : 55993