
ಕರ್ನಾಟಕದ ಲಿಂಗವಂತ ಸಂಪ್ರದಾಯದ ನಾಲ್ವರು ಪ್ರಭಾವಶಾಲಿ ಅದ್ಭುತ ವ್ಯಕ್ತಿಗಳು ಕೊಂಡಗುಳಿ ಕೇಶಿರಾಜ, ಕೆಂಭಾವಿ ಭೋಗಣ್ಣ, ಬಸವಣ್ಣ ಮತ್ತು ಹರಿಹರ. ಇವರನ್ನು ಸಮಾನ ಮನಸ್ಕರೆಂದು ಗುರುತಿಸಿದರೆ ಇತಿಹಾಸ ಪುನರಾವರ್ತಿಸುತ್ತದೆ ಎಂಬ ಮಾತು ನಿಜವಾಗುತ್ತದೆ. 11 ನೇ ಶತಮಾನದ ಕೇಶಿರಾಜ, 6 ನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿ ದಂಡನಾಯಕನೂ ಕವಿಯೂ ಆಗಿದ್ದರೆ ಈ ಅವಧಿಯಲ್ಲಿ ಬರುವ ಕೆಂಭಾವಿ ಭೋಗಣ್ಣ ಹಂಡೆ ಚಂದಿಮರಸನ ಊರಲ್ಲಿ ಸಾಮಾನ್ಯ ಭಕ್ತನೂ ವಚನಕಾರನೂ ಆಗಿದ್ದ. ಇನ್ನು 12 ನೇ ಶತಮಾನದದ ಬಸವಣ್ಣ ಬಿಜ್ಜಳ ಅರಸನಲ್ಲಿ ದಂಡನಾಯಕನೂ ಭಂಡಾರಿಯೂ ವಚನಕಾರನೂ ಆಗಿದ್ದ. 13 ನೇ ಶತಮಾನದ ಹರಿಹರ ನರಸಿಂಹ ಬಲ್ಲಾಳನ ಆಸ್ಥಾನದಲ್ಲಿ ಕರಣಿಕನೂ ಕವಿಯೂ ಆಗಿದ್ದನು. ಇತಿಹಾಸದಲ್ಲಿ ಇವರ ಬದುಕಿನ ಘಟನೆಗಳು ಅತ್ಯಂತ ಸಾಮ್ಯತೆಯನ್ನು ಪಡೆದಿರುವುದನ್ನು ಮನಗಾಣಬಹುದಾಗಿದೆ.
ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯ, ಚಾಲುಕ್ಯ ವಂಶದ ದೊರೆ ಹಂಡೆಚಂದಿಮರಸ, ಕಳಚುರಿ ಚಕ್ರವರ್ತಿ ಬಿಜ್ಜಳ, ಹೊಯ್ಸಳ ಚಕ್ರವರ್ತಿ ನೃಸಿಂಹ ಬಲ್ಲಾಳ ಇವರುಗಳ ನಿರಂಕುಶ ರಾಜ್ಯಾಧಿಕಾರಕ್ಕೆ ತಮ್ಮ ನಡೆಯಿಂದ ಆಘಾತವುಂಟು ಮಾಡಿ ಪ್ರಜಾಶಕ್ತಿಯನ್ನು ಸ್ಪೋಟಗೊಳಿಸಿದ ಧೀರರವರು. ಆ ನಾಲ್ವರು ತಮ್ಮ ಆಶ್ರಯದಾತ ದೊರೆಗಳನ್ನು ತೊರೆದು ಸ್ವಾತಂತ್ರ್ಯ ಪ್ರೇಮವನ್ನು ವ್ಯಕ್ತಪಡಿಸಿದವರು. ಅವರ ಪ್ರಜಾಸತ್ತೆಯ ನಿಲುವಿಗೆ ನಾಲ್ಕೂ ಅರಸರೂ ತಲೆಬಾಗಿದ್ದರು. ಇವರಲ್ಲಿ ಮೂವರು ಆಳ್ದರಾಗಿ ಉಳಿದುಕೊಂಡರೆ ಚಂದಿಮರಸ ಮಾತ್ರ ತನ್ನ ಪೂರ್ವಾಶ್ರಮ ತೊರೆದು ಲಿಂಗಭಕ್ತನಾಗಿ ಪರಿವರ್ತಿತನಾಗುತ್ತಾನೆ ಮತ್ತು ವಚನಗಳನ್ನು ರಚನೆ ಮಾಡುವ ಮೂಲಕ ವಚನಕಾರನೂ ಆಗುತ್ತಾನೆ.
ಪ್ರಸ್ತುತ ಚಂದಿಮರಸನ ಇತಿವೃತ್ತವನ್ನು ಮೂರು ರೀತಿಯಿಂದ ತಿಳಿಯಬೇಕು.
- ಶಾಸನಸ್ಥ ಚಂದಿಮರಸ: ಘನವಂತಿಕೆ ಮತ್ತು ದಾನವಂತಿಕೆಯ ಮೂಲ ಪುರುಷ.
- ಸಾಹಿತ್ಯದಲ್ಲಿ ಚಂದಿಮರಸ: ಪೂರ್ವಾಶ್ರಮದ ತಮೋದರ್ಶನ ಮತ್ತು ಪೂರ್ವಾಶ್ರಮದ ನಿರಸನದ ಸಾತ್ವಿಕ ದರ್ಶನ.
- ಸಾಹಿತಿಯಾಗಿ ಚಂದಿಮರಸ: ಕ್ರಾಂತಿಕಾರಕನಲ್ಲದ ವಚನಕಾರ ಆದರೆ ಕ್ರಾಮತಿಕಾರಕ ವಚನಕಾರ.
1. ಶಾಸನಸ್ಥ ಚಂದಿಮರಸ:
ಚಂದಿಮರಸನ ಕುರಿತಾದ ಹೆಮ್ಮಡಿಗೆಯ ಶಾಸನ: ಶಾಸನದ ಕಾಲ ಕ್ರಿ. ಶ. 1182. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೆಮ್ಮಡಗಿ ಶಾಸನವಿದು. ಕರಿಕಲ್ಲಿನಲ್ಲಿ ಕೆತ್ತಿರುವ ಈ ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ, ಸೂರ್ಯ-ಚಂದ್ರ, ಆಕಳು-ಕರು, ಖಡ್ಗಗಳ ಚಿತ್ರಗಳಿದ್ದು ಅಕ್ಷರಗಳು ದುಂಡಗಿವೆ. ಈ ಶಾಸನದ ಅನ್ವಯ ಚಂದಿಮರಸ ಹೆಮ್ಮಡಿಗೆಯ ಅಥವಾ ಹೆಮ್ಮವಾಡಿಗೆಯ ರಾಜನಾಗಿದ್ದ. ಈ ಶಾಸನ ಬರೆಯಿಸಿದವನು ಚಂದಿಮರಸನ ವಂಶಸ್ಥನಾದ ಎಮ್ಮವಾಡಿಗೆಯ ಪ್ರಭು ಸೌದೊರೆ ಭಾವರಸರು.
ಹರಿಹರ ಕವಿಯ ಭೋಗಣ್ಣನ ರಗಳೆಯಲ್ಲಿ ಚಂದಿಮರಸನು ಕೆಂಬಾವಿಯ ಅರಸನಾಗಿದ್ದನೆಂದು ತಿಳಿದು ಬರುತ್ತದೆ. ಸನಿಹದಲ್ಲಿಯೇ ಹೆಮ್ಮಡಿಗೆ ಇರುವುದರಿಂದ ಕವಿ ಹಾಗೆ ಹೇಳಿರಬಹುದು. ಏನಿದ್ದರೂ ಭೋಗಣ್ಣ ಚಂದಿಮರಸನ ರಾಜ್ಯದ ಪ್ರಜೆಯಾಗಿದ್ದ. ಸಾಹಿತ್ಯಿಕವಾಗಿ ಈ ರಾಜ-ಪ್ರಜೆಯ ಸಂಘರ್ಷ ಇನ್ನೊಂದು ಮಹತ್ವದ ಅಂಶವಾಗಿದೆ.
ಸುಪ್ರಸಿದ್ಧ ಚಾಲುಕ್ಯ ವಂಶದ ಈ ಹಂಡೆ ಚಂದಿಮರಸ ಎಂಬುದನ್ನು ಈ ಹೆಮ್ಮಡಿಗೆಯ ಶಾಸನ ತಿಳಿಸುತ್ತದೆ. ಇದೇ ಇದರ ಪ್ರಾಮುಖ್ಯತೆ. ಚಾಲುಕ್ಯ ವಂಶದ ವರ್ಣನೆಯ ಜೊತೆ ಜೊತೆಗೆ ಹಂಡೆ ಚಂದಿಮರಸನನ್ನು ವರ್ಣಿಸುತ್ತ ಸುಪ್ರಸಿದ್ದ ಭಾವರಸನವರೆಗೆ ಬರುತ್ತದೆ. ಶಾಸನ ಹೇಳುವ ವಂಶಾವಳಿ ಈ ಕೆಳಗಿನಂತಿದೆ.
ಚಂದಿ(ಮ)ಅರಸ+ಚಾಮಿಕಬ್ಬೆ
ಚಮೂಪತಿ ನಾಗವರ್ಮ+ದೇಕಬ್ಬೆ
ಮಲ್ಲಿದೇವ+ಬಾಚಿಕಬ್ಬೆ
ದೇವರಸ ಬಮ್ಮರಾಜ ಭಾವರಸ + ಚಂದಲದೇವಿ
ಮಲ್ಲಿದೇವ ಪಂದಿರಾಜ(ಹಂದಿಯರಸ)+ಕಾಮಲದೇವಿ
ಭಾವರಾಜ+1) ಜಕ್ಕಣಕ್ಕ 2) ಚಾಮಲದೇವಿ
ಈ ವಂಶಾವಳಿಯಲ್ಲಿ ಬರುವ ಬಮ್ಮರಾಜ (ಬೊಮ್ಮರಸ) ಪರಮಮಹೇಶ್ವರನಾದುದರ ಪ್ರಯುಕ್ತ ಈ ಶಾಸನವನ್ನು ಬರೆಯಿಸಲಾಗಿದೆ. ಈ ಬಮ್ಮರಾಜ ವಿಭುಪಂದಿರಾಜನ ತಂದೆಯ ಸೋದರರಲ್ಲಿ ಒಬ್ಬನಾಗಿದ್ದಾನೆ. ವಿಭುಪಂದಿರಾಜ ಮತ್ತು ಬಮ್ಮರಾಜ ಇಬ್ಬರೂ ಪರಮಮಹೇಶ್ವರರಾದ ಉಲ್ಲೇಖವಿದೆ. ಸೌದೊರೆಭಾವರಸ ತನ್ನ ತಂದೆ ಪಂದಿರಾಜ ಕಟ್ಟಿಸಿದ ಪಂದೇಶ್ವರ ದೇವಸ್ಥಾನಕ್ಕೆ ಕಳಸಾರೋಹಣ ಮಾಡಿ ತಂದೆಯ ಹೆಸರು ಜಗತ್ಪ್ರಸಿದ್ಧವಾಗುವಂತೆ ಈ ಶಾಸನವನ್ನು ಬರೆಸಿದ್ದಾನೆ. ಇದರಿಂದ ಚಂದಿಮರಸನು ವಿಭುಪಂದಿರಾಜನ ಮೂರು ತಲೆಮಾರುಗಳಷ್ಟು ಹಿಂದಿನವನೆಂದು ಸ್ಪಷ್ಟವಾಗುತ್ತದೆ.
ಹೆಮ್ಮಡಿಗೆ ಶಾಸನ ಹೊರತು ಪಡಿಸಿದರೆ ಇಂಡಿ ತಾಲೂಕಿನ ಕ್ರಿ. ಶ. 1134 ರ ನಾದ ಗ್ರಾಮದ ಶಾಸನದಲ್ಲಿ ಚಂಡಿಮರಸನ ಪ್ರಸ್ತಾಪವಿದೆ. ದೇವರಿಗಾಗಿ ದಾನ ನೀಡಿದ ಉಲ್ಲೇಖ ಈ ಶಾಸನದಲ್ಲಿದೆ. ಇನ್ನುಳಿದಂತೆ ಈ ಕಾಲಾವಧಿಯ ಸುಮಾರಿಗೆ ಈ ಭಾಗದಲ್ಲಿ ಹಂಡೆ ಅರಸರ ಉಲ್ಲೇಖವಿರುವ ಶಾಸನಗಳಿವೆ. ಆದರೆ ಅವು ಚಂದಿಮರಸನನ್ನು ಕುರಿತು ಹೇಳಲಾರವು. ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದ ಕ್ರಿ. ಶ. 1128 ರ ಶಾಸನದಲ್ಲಿ ಮಹಾಮಂಡಳೇಶ್ವರ ವೀರಹಂಡೆ ಅರಸರ ಪ್ರಸ್ತಾಪವಿದೆ. ಕ್ರಿ. ಶ. 1129 ರ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ ಶಾಸನದಲ್ಲಿ ಮಹಾಸಾಮಂತ ಹಂಡೆಯ ನಾಯಕ ಅರಸರ ವಿಸ್ತೃತ ವಿವರವಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬೇಲೂರು ಗ್ರಾಮದ ಕ್ರಿ. ಶ. 1145 ರ ಶಾಸನದಲ್ಲಿ ಹಂಡೆ ನಾಯಕನು ಹಗರಟ್ಟಿಗೆ 300 ನ್ನು ಆಳುತ್ತಿದ್ದ ವಿವರವಿದೆ. ಇಲ್ಲೆಲ್ಲ ದಾನ ನೀಡಿದ ವಿವರಗಳೇ ಶಾಸನಗಳಲ್ಲಿವೆ.
ಹೀಗೆ ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ಹಂಡೆ ಅರಸರ ಪ್ರಸ್ತಾಪ ಕಂಡುಬರುತ್ತದೆ. ಹೆಮ್ಮಡಗಿ, ಕೆಂಬಾವಿ, ಮುದನೂರು ಈ ಮೂರು ಗ್ರಾಮಗಳು ಒಂದಕ್ಕೊಂದು ಸನಿಹದಲ್ಲಿದ್ದು ಇವುಗಳನ್ನು ಆಳಿದವರು ಒಂದೇ ಮನೆತನಕ್ಕೆ ಸೇರಿದ ಪಂದೆ(ಹಂದೆ) ಅಥವಾ ಹಂಡೆ ಅರಸರಾಗಿದ್ದಾರೆ. ಅಧಿಕೃತವಾಗಿ ಒಂದೆರೆಡು ಶಾಸನಗಳು ಮಾತ್ರ ಸದರೀ ಹಂಡೆ ಚಂದಿಮರಸನಿಗೆ ಸಂಬಂಧಿಸಿವೆ. ಇನ್ನುಳಿದಂತೆ ಆ ಶಾಸನಗಳು ಬಹಳಷ್ಟು ಅಧ್ಯಯನವನ್ನು ನಿರೀಕ್ಷಿಸುತ್ತವೆ.
ಇಲ್ಲಿ ಒಂದು ಮಾತನ್ನು ಹೇಳಬೇಕು. ಈ ಹಂದೆ ಅಥವಾ ಹಂಡೆ ಕುರಿತು ಪೂಜ್ಯರಾದ ಡಾ. ಎಂ. ಎಂ. ಕಲಬುರ್ಗಿಯವರು, ಡಾ. ಎಸ್. ಸಿ. ಪಾಟೀಲರವರ ಅಭಿಪ್ರಾಯವನ್ನು ಅನುಮೋದಿಸುತ್ತ:
“ಇವರ ಮೂಲ ಪುರುಷ ಪಳ್ದಿಗನಾಗಿದ್ದು ಇದೇ ಮುಂದೆ ಪಂದಿಗ>ಹಂದಿಗ, ಪಂಡಿಗ>ಹಂಡಿಗ, ಪಂಡೆ>ಹಂಡೆ ರೂಪ ತಾಳುತ್ತ ಬಂದಿದೆಯೆಂದು ತೀರ್ಮಾನಿಸಿದ್ದು ನ್ಯಾಯಯುತವೆಂದೇ ಹೇಳಬೇಕು”
ಎಂದಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ತಮ್ಮ ಮೂಲದ ಬಾದಾಮಿ ಚಾಲುಕ್ಯರ ರಾಜಲಾಂಛನ ವರಾಹವನ್ನು ಚಿರಸ್ಥಾಯಿಗೊಳಿಸಲು ವರಾಹಕ್ಕೆ ಪ್ರತಿಯಾಗಿ ಇಟ್ಟುಕೊಂಡ ಕನ್ನಡದ ನಾಮವಿದು ಎಂಬ ಅಭಿಪ್ರಾಯ ನನ್ನದು. ಕಾಲಗತಿಯಲ್ಲಿ ಲಿಂಗಾಯತ ಅರಸರಾಗಿ ಹಂದಿ ಪದಕ್ಕೆ ಬದಲು ಹಂಡೆ ಪದವನ್ನು ಗಟ್ಟಿ ಹಿಡಿದುಕೊಂಡು ಹಂಡೆ ಅರಸುಮನೆತನದವರಾಗಿದ್ದಾರೆ ಮತ್ತು ಲಿಂಗಾಯತ ಹಂಡೆ ಸಮಾಜದವರಾಗಿದ್ದಾರೆ.
ಪ್ರಧಾನ ಸಂಸ್ಕೃತಿಯೆದುರು ಉಳಿದುವೆಲ್ಲ ಪಕ್ಕಕ್ಕೆ ಜರುಗುತ್ತವೆ, ಇಲ್ಲಾ ಇದ್ದೂ ಇಲ್ಲದಂತಹ ಅಲಕ್ಷ್ಯಕ್ಕೆ ಒಳಗಾಗುತ್ತವೆ. ಈ ರೀತಿಯ ಉಪೇಕ್ಷಿತ ಕ್ಷೇತ್ರವನ್ನು ಆಯ್ದುಕೊಂಡು ಅಲ್ಲಲ್ಲೇ ಚದುರಿದ ಚಿತ್ರಗಳನ್ನು ಒಟ್ಟುಗೂಡಿಸಲು ಅನೇಕ ಹಿರಿಯರು ಯತ್ನಿಸಿದ್ದಾರೆ. ಈ ದಿಶೆಯಲ್ಲಿ ಡಾ. ಎಸ್. ಸಿ. ಪಾಟೀಲ ಹಾಗು ಅವರ ಸಹಚರರು ಜಂಟಿಯಾಗಿ ಹಂಡೆ ಸಮಾಜದ ಒಟ್ಟು ಇತಿಹಾಸ ನೀಡಲು ದೊಡ್ಡ ಪ್ರಯತ್ನ ನಡೆಸಿದ್ದಾರೆ. ಈ ಲೇಖನಕ್ಕೆ ಅವರ ಶೋಧಿತ ಬರಹಗಳೇ ಸಹಾಯ ಕಲ್ಪಿಸಿವೆ. ಅವರಿಗೆ ನನ್ನ ಕೃತಜ್ಞತೆಗಳು.
2. ಸಾಹಿತ್ಯದಲ್ಲಿ ಚಂದಿಮರಸ: ಕಾಲ ಕ್ರಿ. ಶ. 1100 – 1160.
ಸಾಹಿತ್ಯದ ಮೂಲಕ ಚಂದಿಮರಸನನ್ನು ಅಮರನನ್ನಾಗಿಸಿದವನು ಕವಿ ಹರಿಹರ. ಪ್ರತಿಭಟನಾ ಕಾವ್ಯಗಳು ಪ್ರತಿಭಟಿಸುವ ಕವಿಗಳಿಂದಲೇ ಹುಟ್ಟುತ್ತವೆ. ಹಾಗಾಗಿ ಒಂದಿಷ್ಟು ಅವಮಾನಗಳನ್ನು, ಬರೆದವರೂ ಬರೆಸಿಕೊಂಡ ಪಾತ್ರಗಳೂ ಅನುಭವಿಸುತ್ತವೆ. ಮೊದಲೇ ಹೇಳಿದಂತೆ ಹೊಯ್ಸಳ ಬಲ್ಲಾಳ ಅರಸನು ಕವಿ ಹರಿಹರನನ್ನು ಅವಮಾನಿಸಿಯೇ ಹೊರದೂಡಿದ್ದಾನೆ. ಪೆರ್ಮಾಡಿರಾಯನಿಂದ ಕೊಂಡಗುಳಿ ಕೇಶಿರಾಜ ಅನುಭವಿಸಿದ ಅವಮಾನದಂತಹುದನ್ನೇ ನಿರಂಕುಶ ರಾಜ ಚಂದಿಮರಸನಿಂದ ಪ್ರಸಾದವಾದಿ ಭೋಗಣ್ಣ ಅನುಭವಿಸುತ್ತಾನೆ. ಮೈಲಿಗೆಯಾಗುವುದೆಂದು ಕಲಚುರಿ ಬಿಜ್ಜಳ ಬಸವಣ್ಣನಿಗೆ ಬಯಲು ಓಲಗದಲ್ಲಿ ವಿಚಾರಣೆ ನಡೆಸುತ್ತಾನೆ. ಇವೆಲ್ಲ ಸಾಮಾನ್ಯ ಅವಮಾನಗಳಲ್ಲ. ಸ್ಥಾವರಗೊಂಡ ನಿಲುವುಗಳನ್ನು ಒಡೆದಾಗ ಆಗುವುದು ಹೀಗೆ. ಇವನ್ನು ದಾಖಲಿಸಿ ಪ್ರತಿಭಟನಾ ಸಾಹಿತ್ಯದ ರೂವಾರಿಯಾಗಿದ್ದಾನೆ ಹರಿಹರ.
ಪ್ರಸ್ತುತ ಯಾರು ಈ ಚಂದಿಮರಸ? ಯಾರು ಈ ಭೋಗಣ್ಣ? ಏನು ಸಂಘರ್ಷ ನಡೆಯಿತು?
ಚಾಲುಕ್ಯರ ಕಾಲದಲ್ಲಿ ಅಗ್ರಹಾರವಾಗಿದ್ದ ಕೆಂಬಾವಿಯನ್ನಾಳುವ ಅರಸ ಈ ಚಂದಿಮರಸ. ಈ ಊರಲ್ಲಿ ಶಿವಭಕ್ತನೂ ವಚನಕಾರನೂ ಆಗಿದ್ದವ ಭೋಗಣ್ಣ. ಚಂದಿಮರಸನು ಶಿವಧರ್ಮಿಯಾಗಲು ಇದೇ ಭೊಗಣ್ಣ ಪ್ರೇರಣೆಯಾದನೆಂಬ ಅಂಶವನ್ನು “ಭೈರವೇಶ್ವರ ಕಥಾಮಣಿ ಸೂತ್ರ ರತ್ನಾಕರ” ತಿಳಿಸುತ್ತದೆ. ಭೋಗಣ್ಣನ ಕಾಲಾವಧಿ ಕ್ರಿ. ಶ. 1120 – 1165 ಇದ್ದುದರಿಂದ ಅದೇ ಶಾಸನಸ್ಥ ಚಂದಿಮರಸ ಈ ಭೋಗಣ್ಣನ ಕಥಾನಕದಲ್ಲಿ ಬರುವ ಚಂದಿಮರಸನಾಗಿದ್ದಾನೆ.
ಕೆಂಬಾವಿ ಭೋಗಣ್ಣ ಭಕ್ತ, ಲಿಂಗವಂತ, ಶಿವಲಿಂಗ ಸಂಸಾರ ಲೋಲುಪ್ತ, ಶರಣಧರ್ಮನಿಷ್ಠ, ಜಂಗಮಪ್ರೇಮಿಯಗಿದ್ದ. ಶಿವಭಕ್ತರ ಗುಣಾವಗುಣ, ರೂಪ, ಕುರೂಪಗಳನ್ನು ನೋಡದ ದಾಸೋಹಿ-ಪ್ರಸಾದವಾದಿಯಾಗಿದ್ದನೆಂದರೆ ತಪ್ಪಾಗದು. ಒಂದು ದಿನ ವಿಭೂತಿ ರುದ್ರಾಕ್ಷಿ ಧರಿಸಿದ ಶ್ವಪಚನೋರ್ವನನ್ನು ಮನೆಗೆ ಕರೆದೊಯ್ದು ಲಿಂಗಾರ್ಚನೆ ಮಾಡಿಸಿ ಉಣ್ಣಿಸಿ ಕಳಿಸುತ್ತಾನೆ ಭೋಗಣ್ಣ. ಊರಲ್ಲಿರುವ ವಿಪ್ರರು ಇದನ್ನೊಂದು ದೊಡ್ಡ ರಾದ್ಧಾಂತಕ್ಕೆಡೆಯಾಗುವಂತೆ ವರ್ತಿಸುತ್ತಾರೆ. ಅವರ ಪ್ರಕಾರ ಹೆಸರೇ ಇಲ್ಲದ ಅನಾಮಿಕ ಅಂತ್ಯಜನನ್ನು ಮನೆಯೊಳಗೆ ಕರೆದೊಯ್ದದ್ದು, ಪೂಜೆ ಮಾಡಿಸಿದ್ದು, ಆರೋಗಣೆ ಮಾಡಿಸಿದ್ದು ಇವೆಲ್ಲ ಸಂಪ್ರದಾಯಕ್ಕೆ ನೀಡಿದ ಪೆಟ್ಟಾಗಿದ್ದವು. ಹೊಲೆಯನೊಡನುಂಡು ಕುಲವು ಕೆಟ್ಟ ಕೇಡನ್ನು ಊರ ದೊರೆ ಚಂದಿಮರಸನ ಮನಸೊಪ್ಪುವಂತೆ ತೀಡುತ್ತಾರೆ. ಕಿವಿ ಕಚ್ಚಿದವರನ್ನು ಆತ್ಮೀಯರೆಂದೆ ಭಾವಿಸುವ ಆಳುವ ಮನಸ್ಸು ಕೂಡಲೆ ಭೋಗಣ್ಣನನ್ನು ಕರೆಯಿಸಿ ವಿಚಾರಣೆ ಮಾಡಿಸುತ್ತದೆ. ಆಗ “ಹೊಲೆಯ ಶಿವಭಕ್ತನಾದರೆ ಅವನೇ ಕುಲಜ. ನಾನೇನು ಈ ವಿಪ್ರರೆಂಬವರನ್ನು ಕರೆದೊಯ್ದು ಆರೋಗಣೆ ಮಾಡಿಸಿದೆನೆ?’ ಎಂದು ಭೋಗಣ್ಣ ವಾದಿಸುತ್ತಾನೆ. ಇದರಿಂದ ಕೋಪಗೊಂಡ ಚಂದಿಮರಸ ವಿಪ್ರರು ಹೊಲೆಯರಿಗಿಂತಲೂ ಕೀಳೆ ಎಂದು ಬೈದು ನಿಮ್ಮಂತಹವರು ನಮ್ಮೂರಲ್ಲಿರಬಾರದು ಎಂದು ಊರು ಬಿಟ್ಟು ಹೋಗಲು ಆದೇಶಿಸುತ್ತಾನೆ. ಇದಕ್ಕೇನೂ ಹೇಳದೆ ಭೋಗಣ್ಣ ಕೆಂಬಾವಿ ಬಿಟ್ಟು ಹೊರಟು ಹೋಗುತ್ತಾನೆ. ಇವೇ ನಿರಂಕುಶ ಪ್ರಭುತ್ವ ಮಾಡುವಂತಹ ಅವಮಾನಗಳು. ಯಾವಾಗ ಭೋಗಣ್ಣ ಹೊರಟನೋ ಆಗ ಊರಲ್ಲಿರುವ ಲಿಂಗಗಳು ಭೋಗಣ್ಣನ ಹಿಂದೆಯೇ ಹೊರಟು ಹೋದ ವಿಸ್ಮಯ ನಡೆಯುತ್ತದೆ. ವಿಪ್ರ ಸಮುದಾಯಕ್ಕೆ ಇದು ಅಚ್ಚರಿ. ಯಾವ ದೇವಾಲಯದಲ್ಲಿಯೂ ಲಿಂಗವಿಲ್ಲ, ಪೀಠ ಮಾತ್ರ ಉಳಿದಿವೆ. ಕೊನೆಗೆ ಅದೇ ವಿಪ್ರರು ಭೋಗಣ್ಣನಿಂದಾಗಿ ಈ ಪ್ರಮಾದ ನಡೆದಿದೆ. ತಾವು ಆ ಮಹಾನುಭಾವನನ್ನು ಮರಳಿ ಕರೆಯಸಿ ಎಂದು ಅರಸನಿಗೆ ಕೇಳಿಕೊಂಡು ಆ ಪ್ರಕಾರ ಪಕ್ಕದ ಬೇಲೂರಿನಲ್ಲಿದ್ದ ಭೋಗಣ್ಣನನ್ನು ಕರೆತರಲು ವಾದ್ಯ ವೈಭವದೊಂದಿಗೆ ಅರಸು ಸಮೇತ ಹೋಗಿ ಆತನನ್ನು ಕರೆಯತ್ತಾರೆ. ಕೃಪೆದೋರಿ ಭೋಗಣ್ಣ ಕೆಂಬಾವಿ ಕಡೆಗೆ ಮರಳುತ್ತಿದ್ದಂತೆ ಅವನಿಗಿಂತ ಮುಂಚೆ ಲಿಂಗಗಳು ತಾಮುಂದು ನಾಮುಂದು ಎಂದು ನಡೆದು ಬರುವ ಭರದಲ್ಲಿ ತಮ್ಮ ನಿಜ ಸ್ಥಾನವನ್ನು ಮರೆತು ಸ್ಥಾನ ಪಲ್ಲಟವಾಗಿ ಕಿರಿ ಪೀಠದಲ್ಲಿ ಹಿರಿಯ ಲಿಂಗ ಹಿರಿ ಪೀಠದದಲ್ಲಿ ಕಿರಿಯ ಲಿಂಗ ಕುಳಿತುಕೊಳ್ಳುತ್ತವೆ. ಇದು ಮೇಲು ನೋಟಕ್ಕೆ ಪವಾಡದಂತೆ ಕಾಣುತ್ತದೆ. ತುಸು ಯೋಚಿಸಿದರೆ ಭೋಗಣ್ಣ ಹೊರಟಾಗ ಆ ಲಿಂಗಗಳನ್ನು ಕಿತ್ತೆಸೆದಿದ್ದು ಲಿಂಗಭಕ್ತರ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಚಂದಿಮರಸ ಮಣಿದು ಭೋಗಣ್ಣನನ್ನು ಮರಳಿ ಕರೆತರಿಸಿದ್ದಾನೆ. ಅದೇ ಸಂದರ್ಭಕ್ಕೆ ಘಾತುಕತನ ಮೆರೆದು ಲಿಂಗ ಕಿತ್ತವರು ಅವಸರವಸರದಲ್ಲಿ ಯಾವು ಯಾವುದೋ ಪೀಠದಲ್ಲಿ ಲಿಂಗ ಪ್ರತಿಷ್ಠೆ ಮಾಡಿದ್ದಾರೆ.
ಈಗಲೂ ಕೆಂಬಾವಿಯಲ್ಲಿ ಸ್ಥಾನ ಪಲ್ಲಟಗೊಂಡ ಲಿಂಗಗಳನ್ನು ನೋಡಬಹುದು ಎನ್ನುತ್ತಾರೆ ಡಾ. ವೀರಣ್ಣ ರಾಜೂರ ಗುರುಗಳು. (ನೂರೊಂದು ಬರಹ ಪುಟ 28 ರಲ್ಲಿ.) ಇದು ಉಡುಪಿಯ ಕನಕನ ಕಿಂಡಿಯ ಕತೆಯಂತೆ ಭಾಸವಾಗುತ್ತದೆ. ಯಾರ ಮನಸ್ಸಿಗೂ ಕಿರಿಕಿರಿಯಾಗಬಾರದೆಂದು ಭೋಗಣ್ಣನ ಭಕ್ತಿ ಪರೀಕ್ಷೆಗೆ ಶಿವ, ಶ್ವಪಚನಾಗಿ ಬಂದು ಈ ಪವಾಡ ನಡೆಯಿತೆಂದು ಹರಿಹರ ಕತೆ ಹೆಣೆದಿದ್ದಾನೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಪವಾಡವನ್ನು ಹೊರಗೆಳೆದು ಹಣಿಕಿದರೆ ಭೋಗಣ್ಣನ ಹಾಗೂ ಶಿವಭಕ್ತರ ಪ್ರಜಾಸತ್ತಾತ್ಮಕ ಮನಸ್ಸು ಹೋರಾಡಿದ್ದರ ಚಿತ್ರಣ ಕಂಡುಬರುತ್ತದೆ.
ಜಾತಿಭೇದ, ಅಸ್ಪೃಶ್ಯತೆ ನಿವಾರಣೆಗೆ, ಸಹಭೋಜನಕ್ಕೆ ಇದೇ ಭೋಗಣ್ಣ ಬಸವಾದಿಗಳಿಗೆ ದೊಡ್ಡ ಪ್ರೇರಣೆಯಾಗಿದ್ದಾನೆ. ಪ್ರಜಾ ಮೌಲ್ಯವನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಚಂದಿಮರಸು ಕೂಡಾ ಅಷ್ಟೇ ಮಹತ್ವದವನಾಗಿ ಕಾಣಿಸಿಕೊಳ್ಳುತ್ತಾನೆ. ಸಾಲದ್ದಕ್ಕೆ ಚಂದಿಮರಸ ಭೋಗಣ್ಣನಿಂದಲೇ ಪ್ರಭಾವಿತನಾಗಿ ಲಿಂಗಾಯತನಾಗಿರುವ ಸಾಧ್ಯತೆ ಇದೆ. ಗುರು ನಿಜಗುಣ ಎಂಬವರಿಂದ ಲಿಂಗದೀಕ್ಷೆ ಪಡೆಯುತ್ತಾನೆ. ಈ ಮೂಲಕ ಆಳುವ ವರ್ಗದ ಪೈಕಿ ಈತ ಮೊದಲ ಲಿಂಗಾಯತ ಅರಸನಾಗಿದ್ದಾನೆ, ಚಾಲುಕ್ಯ ಹಂಡೆ ಅರಸನಾಗಿದ್ದಾನೆ.
ಮುಂದೆ ರಾಜತ್ವವೇ ಬೇಸರವಾಗಿ ಸಂಸಾರ ಜಂಜಾಟಗಳಿಗೆ ದೂರನಾಗಿ, ಕೆಂಬಾವಿ ತೊರೆದು ಕೃಷ್ಣಾನದಿ ತಟದಲ್ಲಿರುವ ಚಿಮ್ಮಲಿಗೆಗೆ ಬಂದುಳಿಯುತ್ತಾನೆ. ಅಲ್ಲಿ 159 ವಚನಗಳು ಚಂದಿಮರಸನಿಂದ ರಚಿಸಲ್ಪಟ್ಟಿವೆ. “ಸಿಮ್ಮಲಿಗೆಯ ಚೆನ್ನರಾಮ” ಅಂಕಿತವಿಟ್ಟುಕೊಂಡು ಬರೆಯುವ ಮೂಲಕ ಆತ ವಚನಕಾರನಾಗಿದ್ದಾನೆ.
ಡಾ. ಎಸ್. ಸಿ. ಪಾಟೀಲ ಅವರು ಚಂದಿಮರಸನ ಕುರಿತು ಅಪರೂಪದ ಸಂಗತಿಗಳನ್ನು ಕಲೆ ಹಾಕಿದ್ದಾರೆ. ಅವು ಈ ಕೆಳಗಿನಂತಿವೆ.
ಚಿಮ್ಮಲಿಗೆಯಲ್ಲಿ ಚಂದಯ್ಯ ಹೆಸರಿನ ದೇವಲಯವಿದ್ದು ಅದು ಚಂದಿಮರಸರದೆಂದು ರಾವಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರು, ಶ್ರೀ. ತ. ಸು. ಶಾಮರಾಯರು, ಡಾ. ನಾಗಭೂಷಣ ಮತ್ತು ಡಾ. ವಿದ್ಯಾಶಂಕರ ಅವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಈ ದೇವಾಲಯ ಚಂದಿಮರಸನದಲ್ಲಾ, ಅವರ ಗುರು ನಿಜಗುಣರದೆಂಬುದು ಕಾರ್ಯಕ್ಷೇತ್ರಕ್ಕೆ ಹೋದಾಗ ತಿಳಿದುಬಂದಿದೆ. ಈಗಿನ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮಸಾಗರದ ಹತ್ತಿರವಿರುವ ಬಿಳಗಿ ಗ್ರಾಮದ ಬೆಟ್ಟದ ಮೇಲಿನ ನಿಸರ್ಗರಮಣೀಯ ಪ್ರಶಾಂತ ವಾತಾವರಣದಲ್ಲಿ ಶ್ರೀ ಚಂದಾಲಿಂಗೇಶ್ವರ ದೇವಸ್ಥಾನವಿದೆ. ಈ ಸ್ಥಳ ಚಂದಿಮರಸನ ಐಕ್ಯಸ್ಥಳವಾಗಿದೆ.
ಆಧಾರಗಳು:
ಈ ದೇವಾಲಯದಲ್ಲಿ ಹಾಡಲ್ಪಡುವ ಮಂಗಳಾರತಿ ಪದಗಳು, ಇಲ್ಲಿನ ಜನರ ಭಜನೆ ಹಾಡುಗಳು, ಹೆಣ್ಣುಮಕ್ಕಳ ಜೋಗುಳ ಹಾಡುಗಳಲ್ಲಿ ಚಂದಿಮರಸನ ವಿವರಗಳೇ ಇವೆ.
ಐತಿಹ್ಯ:
12 ನೇ ಶತಮಾನದ ಒಬ್ಬ ವೀರರಾಜ ಚಂದರಸ. ಈತನ ಪೂರ್ವದ ಊರು ಚಿಮ್ಮಲಿಗೆ ಸಮೀಪವಿರುವ ಚಿಕ್ಕಸಂಗಮ. ಈತ ಅನೇಕ ಯುದ್ಧಗಳನ್ನು ಗೆದ್ದು ಕೊನೆಗೆ ರಾಜ್ಯ ತ್ಯಜಿಸಿ ಅಧ್ಯಾತ್ಮದ ಕಡೆಗೆ ಒಲಿದು ಅನೇಕ ಕಡೆ ಸುತ್ತಾಡಿ ಅಂತಿಮವಾಗಿ ಈ ಸ್ಥಳದಲ್ಲಿ ಬಂದು ನೆಲೆನಿಂತನೆಂದು ಐತಿಹ್ಯಗಳು ತಿಳಿಸುತ್ತವೆ.
ಇದರಿಂದ ಚಂದಿಮರಸನ ಐಕ್ಯಸ್ಥಳ ಚಿಮ್ಮಲಿಗೆಯಾಗಿರದೆ ಬೀಳಗಿ ಗ್ರಾಮದ ಬೆಟ್ಟದ ಮೇಲಿನ ಚಂದಾಲಿಂಗೇಶ್ವರ ದೇವಸ್ಥಾನವಾಗಿದೆ. ಮೇಲ್ನೋಟಕ್ಕೂ ಇದು ಸ್ಪಷ್ಠವಾಗಿ ತೋರುತ್ತದೆ. ಇನ್ನೊಂದು ವಿಶೇಷವೆಂದರೆ ಚಿಕ್ಕಸಂಗಮದ ಹತ್ತಿರವಿರುವ ಜಡರಾಮಕುಂಟೆ ನಾಡಗೌಡರು ಚಂದಿಮರಸರ ಪರಂಪರೆಯ ನಾಡಗೌಡಿಕೆ ಮನೆತನದವರಿದ್ದು ಇವರು ತಮ್ಮ ಪೂರ್ವಜರು 12 ನೇ ಶತಮಾನದಿಂದ ಇದ್ದರೆಂದು ಹೆಳವರು ಹೇಳುವ ವಿಚಾರವನ್ನು ವ್ಯಕ್ತಪಡಿಸುತ್ತಾರೆ. ಮತ್ತು ಈ ಗೌಡರು ಈ ಚಂದಾಲಿಂಗೇಶ್ವರ ತಮ್ಮ ಮನೆಯ ದೇವರೆಂದು ಆರಾಧಿಸುತ್ತಾರೆ. ಹಾಗೆಯೇ ಚಿಮ್ಮಲಿಗೆಯ ನಿಜಗುಣರ ದೇವಸ್ಥಾನಕ್ಕೂ ನಡೆದುಕೊಳ್ಳುತ್ತಾರೆ. ಇದರಿಂದ ಚಂದಿಮರಸನ ಊರು ಬಾಗಲಕೋಟಿ ತಾಲೂಕಿನ ಚಿಕ್ಕಸಂಗಮದ ಹತ್ತಿರವಿರುವ ಜಡರಾಮಕುಂಟೆ ಮತ್ತು ಚಿಮ್ಮಲಿಗೆಯ ನಿಜಗುಣರು ಚಂದಿಮರಸರ ಗುರುಗಳೆಂಬುದು ಸ್ಪಷ್ಟವಾಗುತ್ತದೆ.
3. ಸಾಹಿತಿಯಾಗಿ ಚಂದಿಮರಸ:
ದೊರೆ ಚಂದಿಮರಸ ಯುದ್ದೋತ್ಸಾಹಿಯಾಗಿದ್ದನೆನಿಸುತ್ತದೆ. ಅವರಿವರ ಮಾತಿಗೆ ಕಿವಿಗೊಟ್ಟು ಪ್ರಮಾದಗಳನ್ನು ಮಾಡಿದ್ದನೆನಿಸುತ್ತದೆ. ಇದರಿಂದಲೇ ಆತನಿಗೆ ತಮೋಗುಣದ ರಾಜತ್ವ ಬೇಡವಾಯ್ತೇನೋ ಎನಿಸುತ್ತದೆ. ಹಾಗಾಗಿ ವಚನ ಸಾಹಿತ್ಯ ರಚನೆಗೆ ಮನಸು ಮಾಡಿದ.
ಈತ ಬರೆದಿರುವ ಸಧ್ಯ ದೊರೆತಿರುವ ವಚನಗಳು 159. ಇವುಗಳ ಹೆಗ್ಗಳಿಕೆಯೆಂದರೆ ಬಸವಣ್ಣನವರ ಹಿರಿಯ ಸಮಕಾಲೀನರಲ್ಲಿ ಹೆಚ್ಚು ವಚನ ರಚಿಸಿದ ದಾಖಲೆ ಚಂದಿಮರಸರದು ಎಂಬುವುದಾಗಿದೆ ಮತ್ತು ಸಂಖ್ಯಾ ದೃಷ್ಟಿಯಿಂದ ಕೂಡ ಮಹತ್ವದ ಸಂಗತಿ.
ಶಿವಗಣಂಗಳ ಬರವ ಕಂಡು
ಕೈಮುಗಿದು ಅಂಜಲೇಬೇಕು.
ಶರಣೆನ್ನಲೊಲ್ಲದೀ ಮನವು;
ಆಗಿನ ಭಕ್ತಿಯನರಿಯದು,
ಬಾಗಿ ಶರಣೆನ್ನಲೊಲ್ಲದೀ ಮನವು.
ಆಳ್ದನೆಂದು ನಂಬಿಯೂ ನಂಬದಾಗಿ,
ಸಿಮ್ಮಲಿಗೆಯ ಚೆನ್ನರಾಮನೆನ್ನ ಕೇಡ ನೋಡಿ
ನಗುತೈದಾನೆ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-250/ವಚನ ಸಂಖ್ಯೆ-681)
ಚಂದಿಮರಸನ ಈ ವಚನದಲ್ಲಿ ತಾನು ಅರಸ. ಅಹಂಕಾರ ತುಂಬಿದ ಪದಾರ್ಥವಾದಿ. ಶಿವಶರಣರು ಎದುರಿಗೆ ಬಂದರೆ ಶರಣೆನ್ನಬೇಕು. ಆಗದಲ್ಲಾ ತನ್ನಿಂದ. ದೇವನೇ ನಗುತ್ತಿದ್ದಾನೆ ನನ್ನ ಈ ಸ್ಥಿತಿ ನೋಡಿ ಎಂದು ಬರೆಯುತ್ತಾನೆ. ಇಲ್ಲಿ ಅಹಂಕಾರ ನಿರಸನದತ್ತ ಸಾಗಿರುವ ಚಂದಿಮರಸನ ಮಾಗಿದ ವ್ಯಕ್ತಿತ್ವವನ್ನು ಗಮನಿಸಬೇಕು. ಈತನ ವಚನಗಳ ಮಹತ್ವ ಇರುವುದೇ ಈ ಬಗೆಯ ನಿರೂಪಣೆಯಲ್ಲಿ.
ಯೌವ್ವನಾವಸ್ಥೆಯಲ್ಲಿರುವ ಬಸವಣ್ಣ, ಪ್ರಭು, ಸಿದ್ಧರಾಮರ ಸಾನಿದ್ಯ ತುಸು ವಯಸ್ಸಾಗಿರುವ ಚಂದಿಮರಸರಿಗೆ ದೊರೆತಿದೆ ಎನಿಸುತ್ತದೆ. ಈ ನಡುವಯಸ್ಸು ದಾಟಿದ ಕಾರಣದಿಂದ ಕಾಂತಿಕಾರಕ ಬರಹ ಬಂತೇ ಹೊರತು ಕ್ರಾಂತಿಕಾರಕ ವಚನ ರಚನೆ ಅವರಿಂದ ಆಗಿಲ್ಲವೆನಿಸುತ್ತದೆ.
ವಚನಕಾರ ಚಂದಿಮರಸ ಸಂಸಾರನಿರಸನದೊಂದಿಗೆ ಯೋಗ-ಧ್ಯಾನ ಸಾಧಕನಾಗಿದ್ದ ಎನ್ನುವ ಅಂಶ, ಕುಂಡಲಿನಿ ಸಾಧಕನಾಗಿದ್ದನೆಂಬ ಅಂಶ ಮತ್ತು ತಾನು ನಿಜಗುಣರ ಅನುಗ್ರಹದಿಂದ ಪ್ರಸಾದಿಯಾದ ಬಗೆಯನ್ನು ಒಂದು ವಚನದಲ್ಲಿ ಸೊಗಸಾಗಿ ನಿರೂಪಿಸಿದ್ದಾನೆ. ಅನುಭವದ ಬದುಕು ಅನುಭಾವದ ಸಾಹಿತ್ಯ ರಚನೆಗೆ ದೊಡ್ಡ ಪ್ರೇರಣೆ ನೀಡಿದೆ. ಆಗಾಗ ಚೂರು ಚೂರು ವ್ಯಂಗ್ಯದ ಭೂಮಿಕೆಗಳು ವಚನದಲ್ಲಿ ಕಾಣಿಸಿವೆ.
ಕಿಚ್ಚು ದೈವವೆಂದು ಹವಿಯ ಬೇಳುವರು.
ಕಿಚ್ಚು ಹಾರುವರ ಮನೆಯ ಸುಡುವಾಗ
ಬಚ್ಚಲ ಕೆಸರ ಬೀದಿಯ ಧೂಳ ಚೆಲ್ಲಿ
ಬೊಬ್ಬಿರಿದೆಲ್ಲರ ಕರೆವರು.
ಸಿಮ್ಮಲಿಗೆಯ ಚೆನ್ನರಾಮನ ಮಂತ್ರ ತಪ್ಪಿದ ಬಳಿಕ
ವಂದಿಸುವುದ ಬಿಟ್ಟು ನಂದಿಸುತ್ತಿದ್ದರು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-220/ವಚನ ಸಂಖ್ಯೆ-586)
ಹೀಗೆ ಗೇಲಿ ಮಾಡಿ ದೇವರಾಗಿದ್ದ ಅಗ್ನಿಯನ್ನು ಸಿಕ್ಕ ಸಿಕ್ಕ ಕಸದಿಂದ, ಧೂಳಿನಿಂದ, ಬಚ್ಚಲ ನೀರಿನಿಂದ ನಂದಿಸುವ ರೀತಿ ನಗೆ ಹುಟ್ಟಿಸುತ್ತದೆ. ಚಂದಿಮರಸು ಎಷ್ಟು ಸರಳವಾಗಿ ಈ ಅಜ್ಞಾನವನ್ನು ವಿಡಂಬಿಸಿದ್ದಾನೆ.
ಯಾವ ಸಂಸಾರಿಕ ಜೀವನವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಅದಕ್ಕಾಗಿ ಒಂದು ಧರ್ಮವನ್ನೇ ಸೃಷ್ಟಿಸಿ ಬದುಕನ್ನು ಸಹ್ಯವಾಗಿಸಲು, ನಿರಾಶೆ, ಹತಾಶೆ ದೂರಗೊಳಿಸಲು, ಬಸವ ಮತ್ತು ಅವನ ಸಂಗಡಿಗರು ಯತ್ನಿಸಿದ್ದರೋ ಬಹುಶಃ ಇದಕ್ಕೆ ಚಂದಿಮರಸ ಮುಂತಾದವರು ಬರೆದಿರುವ ಸಂಸಾರದ ನೀರಸತೆ ಹೇಯತೆ ತಾವೇ ಅಂದುಕೊಳ್ಳುವ ಹೇಸಿಕೆ-ಇವೆಲ್ಲ ಕಾರಣವಾಗಿದೆಯೆಂದರೆ ತಪ್ಪಲ್ಲ.
ಎಲುವು ತೊಗಲು ನರ ಮಾಂಸ ಪುರೀಷ,
ಶ್ಲೇಷ್ಮ ರಕ್ತ ಶುಕ್ಲ ಕ್ರಿಮಿ ಕೊಕ್ಕರೆ
ಜರೆ ಮರಣ ಜಂತು
ಹಲವು ರೋಗಂಗಳ ತವರ್ಮನೆ
ನೋಡುವಡೆ ಪಾಪದ ಪುಂಜ
ಇಂತೀ ಹೇಸಿಕೆಯೊಳಗೆ ಏತರ ಸುಖವನರಸುವೆ?
ಈ ಸುಖದಾಸೆಯ ವಿಚಾರಿಸಿ ನೋಡಿದಡೆ
ಸಕಲ ದುಃಖದಾಗರ, ನರಕದ ಪಾಕುಳ.
ಅಂಗನೆಯರಿಂತೆಂದು ತಿಳಿದು
ವಿರಕ್ತನಾದ ಪರಮ ಸೌಖ್ಯಾಂಗ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-215/ವಚನ ಸಂಖ್ಯೆ-572)
“ಮಾನುಷ ದೇಹ ಎಲುವು ತೊಗಲು ನರಮಾಂಸ ಪುರೀಷ ಶ್ಲೇಷ್ಮ ರಕ್ತ ಶುಕ್ಲ ಕ್ರಿಮಿ ಕೊಕ್ಕರೆ ಜರೆ ಮರಣ ಜಂತು ಹಲವು ರೋಗಂಗಳ ತವರ್ಮನೆ ನೋಡುವಡೆ ಪಾಪದ ಪುಂಜ ಇಂತೀ ಹೇಸಿಕೆಯೊಳಗೆ ಏತರ ಸುಖವನರಸುವೆ? ಹೀಗೆಂದು ವಾಚಿಸುತ್ತ ವಾಸನಾರಹಿತನಾಗಿ ಬಾಳುವುದಕ್ಕೆ ಹೆಚ್ಚು ಒತ್ತುಕೊಟ್ಟು ವಿಷಯ ಪ್ರತಿಪಾದಿಸುತ್ತಾನೆ ಚಂದಿಮರಸ. ಅಲ್ಲದೆ ಒಮ್ಮೊಮ್ಮೆ ಲಲಾಟ ಲಿಖಿತ, ಹಣೆಬರಹ ಎಂಬ ತಿರಸ್ಕೃತ ವಚನ ಸಿದ್ದಾಂತವನ್ನು ಪ್ರತಿಪಾದಿಸುವಂತಹ ವಚನಗಳು ಚಂದಿಮರಸನಿಂದ ಬಂದಿವೆ.
ಆವ ಕಾಲದೊಳಾದಡೂ ಆವ ದೇಶದೊಳಾದಡೂ
ತನ್ನ ಲಲಾಟಲಿಖಿತ ಪ್ರಾರಂಬ್ಧಕರ್ಮ ಉಂಡಲ್ಲದೆ ತೀರದು;
ದೈವತಾಪ್ರಾರಬ್ಧ ಭೋಗಿಸಿದಲ್ಲದೆ ಕ್ಷಯವಾಗದು;
ದೇವ ದಾನವ ಮಾನವರಿಗಾದಡೂ ನಿವಾರಿಸಬಾರದು.
ತನು ತಾನಲ್ಲ, ತನ್ನದಲ್ಲ.
ಇದು ಮಾಯೆಯೆಂದರಿದು ಸುಖಿಯಾದಾತ ನೀನೆ,
ಸಿಮ್ಮಲಿಗೆಯ ಚೆನ್ನರಾಮಾ!
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-211/ವಚನ ಸಂಖ್ಯೆ-559)
ತುಂಬಾ ಘಾಡವಾಗಿ ಬಸವಾದಿ ವಚನಕಾರರ ಪ್ರಭಾವ ಈತನ ಮೇಲೆ ಆಗಲಿಲ್ಲವೆಂಬ ಅಭಿಪ್ರಾಯ ಇಲ್ಲಿ ಅನಿವಾರ್ಯವೆನಿಸುತ್ತದೆ. ಆದರೆ ಬಹಳಷ್ಟು ವಚನಗಳು ಅನುಭಾವಕ್ಕೆ ಸಂಬಂಧಿಸಿ ಅವನಿಗೆ ಅವನೇ ಸಾಟಿ ಎಂಬಂತೆ ರಚನೆಗೊಂಡಿವೆ. ಓದಿದಾಗ ಮನಸು ಮುದಗೊಳ್ಳುತ್ತದೆ.
ಬೆಳಗಿನ ಬೀಜ ಮಹಾಬೆಳಗು
ಕತ್ತಲೆಯನೊಳಕೊಂಡು ಕಣ್ಣಿರೆವ ಪರಿಯ ನೋಡಾ!
ತಿಳಿವಡೆ ಬೆಳಗಲ್ಲ, ಒಳಗೊಳಗೆ ಹೊಳೆವ ಕಳೆ ಇದೇನೊ!
ಇದೆಲ್ಲಿಂದ ಹುಟ್ಟಿ, ಇದೆಲ್ಲಿಂದ ತೋರಿತ್ತು!
ಅಲ್ಲಿಯೆ ಆಗಾಗಿ ಅಲ್ಲಿಯೇ ಬೆಳೆಯಿತ್ತು.
ಸಿಮ್ಮಲಿಗೆಯ ಚೆನ್ನರಾಮನೆಂಬ
ಮಹಾಘನಲಿಂಗದಲ್ಲಿಯೆ ಕಾಲೂರಿ ನಿಂದ
ಪರಿಯನೇನೆಂಬೆ!
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-242/ವಚನ ಸಂಖ್ಯೆ-656)
ಈ ವಚನದಲ್ಲಿ ಅಂತರಂಗದ ಬೆಳಗು ಹುಟ್ಟಿ ಬೆಳೆವುದರ ವಿವರ ಕೊಟ್ಟಂತೆ, ಖಗೋಲದಲ್ಲಿ ಹುಟ್ಟಿ ಬೆಳೆವ ಬೆಳಗು ಅದೇ ಮಹಾಘನಲಿಂಗ; ಸಕಲಕ್ಕೂ ಕಾರಣವಾದ-ಅದೇ ಬಸವೇಶ ಹೇಳುವ:
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744)
ಆಕಾಶದಿಂದತ್ತತ್ತ ಲಿಂಗಮುಕುಟ, ಪಾತಾಳದಿಂದತ್ತತ್ತ ಲಿಂಗ ಪಾದವೆಂಬ ಲಿಂಗಾಯತರ ವಿಶ್ವದೇವ ಕಲ್ಪನೆಗೆ ಉದಾಹರಣೆಯಂತಿದೆ. ಇಂತಹ ಅನುಭವ ಅನುಭಾವಗಳ ಕಣಜವಾಗಿದ್ದ ಚಂದಿಮರಸು ಪ್ರಾಚೀನ ಲಿಂಗಾಯತರ ಮುಕುಟಮಣಿಯಾಗಿದ್ದಾನೆ.
ಈತನ ಎಲ್ಲ ವಚನಗಳ ಸರಳ ಕನ್ನಡ ಅನುವಾದವನ್ನು ಪ್ರೊ. ಚೌಧರಿ ಮತ್ತು ಡಾ. ಎಸ್. ಸಿ. ಪಾಟೀಲ ಅವರು “ಹಂಡಿ ಚಂದಿಮರಸನ ವಚನಗಳ ಭಾವಾನುವಾದ” ಶೀರ್ಷಿಕೆಯಲ್ಲಿ ಪುಸ್ತಕ ಪ್ರಕಟಿಸಿದ್ದಾರೆ.ನನ್ನ ಈ ಲೇಖನಕ್ಕೆ ಈ ಪುಸ್ತಕದ ನೆರವು ಪಡೆದಿದ್ದೇನೆ.
ಕೊನೆಯದಾಗಿ ಇಷ್ಟು ವಿವರಗಳು ಶಾಸನಸ್ಥ, ಸಾಹಿತ್ಯ, ಸಾಹಿತಿ ರೂಪದಲ್ಲಿ ಚಂದಿಮರಸ ನನಗೆ ನಿಲುಕಿದ್ದಾನೆ. ಈ ನಾಡು ಇದರ ಇತಿಹಾಸವೆಂದರೆ ನಮ್ಮ ಮನಸ್ಸಿನ ಇತಿಹಾಸ. ಮನಸ್ಸಿನ ಆನಂದ, ಶೌರ್ಯ, ಕ್ರೌರ್ಯಗಳೇ ನಮ್ಮ ಇತಿಹಾಸ. ಏನು ಬಿತ್ತಿದ್ದೇವೆ ಅದನ್ನು ಬೆಳೆದುಕೊಂಡು ಬಂದಿದ್ದೇವೆ. ಬಿತ್ತಿ ಬೆಳೆದ ನೆಲ ಬಹಳ ಇದೆ. ಬಿತ್ತನ್ನು ಬಿತ್ತುವ-ಬೆಳೆವ, ಕನ್ಯೆ ನೆಲ ದೃಷ್ಟಿ ತೂರಿದಷ್ಟಿದೆ. ಮುಂದಿನ ಪೀಳಿಗೆ ಈ ಕೈಂಕರ್ಯಕ್ಕೆ ಅಣಿಯಾಗಬೇಕು.
ಈ ಲೇಖನದ ಭಾಷಣದ YouTube Link ಲಗತ್ತಿಸಲಾಗಿದೆ.
ಡಾ. ಸದಾನಂದ ಪಾಟೀಲ,
ಇನಾಂ ವೀರಾಪುರ
ಅಂಚೆ: ಬೆಳಗಲಿ – 580 024
ಹುಬ್ಬಳ್ಳಿ ತಾಲೂಕ,
ಧಾರವಾಡ ಜಿಲ್ಲೆ.
ಮೋಬೈಲ್ ಸಂ. 98865 94874
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in