ಚಿಙ್ಮಯಜ್ಞಾನಿ ಚೆನ್ನಬಸವಣ್ಣನವರ ವಚನ – ನಿರ್ವಚನ | ಶ್ರೀಮತಿ. ಲಲಿತಾ ಇಬ್ರಾಹಿಂಪೂರ, ಕಲಬುರಗಿ.

ಆಕಾಶದಲ್ಲಾಡುವ ಪಟಕ್ಕಾದಡೆಯೂ
ಮೂಲಸೂತ್ರವಿರಬೇಕು.
ಕಲಿಯಾದಡೆಯೂ ಕಜ್ಜವಿಲ್ಲದೆ ಆಗದು.
ಭೂಮಿಯಿಲ್ಲದೆ ಬಂಡಿ ನಡೆವುದೆ?
ಅಂಗಕ್ಕೆ ಲಿಂಗವಿಲ್ಲದೆ ನಿಸ್ಸಂಗವಾಗಬಾರದು.
ಕೂಡಲಚೆನ್ನಸಂಗಮದೇವರಲ್ಲಿ ಸಂಗವಿಲ್ಲದೆ
ನಿಸ್ಸಂಗಿಯೆಂದು ನುಡಿಯಬಹುದೆ ಪ್ರಭುವೆ?
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-419/ವಚನ ಸಂಖ್ಯೆ-990)

ಷಟ್‌ಸ್ಥಲ ಚಕ್ರವರ್ತಿಯೆಂದೇ ಪ್ರಸಿದ್ಧರಾಗಿರುವ ಮಹಾಜ್ಞಾನಿ ಚೆನ್ನಬಸವಣ್ಣನವರ ವಚನವಿದು. ಇವರು ಶರಣೆ ಅಕ್ಕನಾಗಮ್ಮನವರ ಮತ್ತು ಶರಣ ಶಿವಸ್ವಾಮಿಯವರ ಸುಪುತ್ರರು. ಬಸವಣ್ನನವರ ಸೋದರಳಿಯ. ಕೂಡಲಸಂಗಮದಲ್ಲಿ ಜನಿಸಿದ ಇವರು ಕಲ್ಯಾಣದಲ್ಲಿ ಅನುಭವ ಮಂಟಪದ ಜವಾಬ್ದಾರಿಯನ್ನು ಹೊತ್ತಿದ್ದವರು. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯದ ಉಳುವಿಗಾಗಿ ಹೋರಾಟ ಮಾಡಿದವರು. ಉಳುವಿಯಲ್ಲಿ ಲೀಂಗೈಕ್ಯರಾದವರು. ಕೂಡಲ ಚೆನ್ನಸಂಗಮದೇವಾ ಎನ್ನುವ ವಚನಾಂಕಿತದಿಂದ ವಚನಗಳನ್ನು ಬರೆದಿದ್ದಾರೆ. ಇಲ್ಲಿಯವರೆಗೆ 1792 ವಚನಗಳು ಲಭ್ಯವಾಗಿವೆ.  

ನಿರ್ವಚನ:
ಅಲ್ಲಮ ಪ್ರಭುಗಳು ಸಿದ್ಧರಾಮರೊಂದಿಗೆ ಕಲ್ಯಾಣಕ್ಕೆ ಬಂದಾಗ ಸಿದ್ಧರಾಮರ ಎದೆಯ ಮೇಲೆ ಲಿಂಗವಿರಲಿಲ್ಲ. ಆಗ ಚೆನ್ನಬಸವಣ್ಣನವರು ಅಲ್ಲಮ ಪ್ರಭುದೇವರಿಗೆ ಹೇಳಿದ ವಚನವಿದು.

ಪಟ ಅಥವಾ ಪತಂಗ ಎಷ್ಟೇ ಎತ್ತರದಲ್ಲಿದ್ದರೂ ಅದರ ಮೂಲ ಸೂತ್ರ ಕೆಳಗೆ ನಿಂತವನ ಕೈಯೊಳಗೆ ಇದ್ದು ಆತ ಆ ದಾರ ಬಿಟ್ಟರೆ ಪಟ ಹರಿದು ಹೋಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಆಡಿಸುವವನೊಬ್ಬ ಕೆಳಗೆ ಇರುವನೆಂದೆ ಆಕಾಶದೆತ್ತರಕ್ಕೆ ಅದು ಹಾರುವದೆನ್ನುತ್ತಾರೆ ಚೆನ್ನಬಸವಣ್ಣನವರು ಈ ವಚನದಲ್ಲಿ. ಮುಂದುವರೆದು ಇನ್ನೊಂದು ಮಾರ್ಮಿಕವಾದ ವಿವರಣೆ ಕೊಡುವರು ಹೀಗೆ. ವೀರನೆನಿಸಿಕೊಳ್ಳುವದು ಮಾಡುವ ಕಾರ್ಯದಿಂದ, ಕಾರ್ಯದೊಳಗೆ ನಿರತನಾಗಿ ತನ್ನ ಸಾಮರ್ಥ್ಯ ತೋರಿಸಿದವನು ಮಾತ್ರ ವೀರನೇ ಹೊರತು ಕೇವಲ ಬಾಯಿಮಾತಿನಿಂದ ಯಾರೂ ವೀರನಾಗುವುದಿಲ್ಲವೆಂದು ಹೇಳುತ್ತಾರೆ.

ಭುಮಿಗೂ ಬಂಡಿಗೂ ನಿಕಟ ಸಂಬಂಧವಿದೆ. ಬಂಡಿ ನಡೆಯಲು ಭೂಮಿ ಆಧಾರವಾಗಿರುತ್ತದೆನ್ನುತ್ತಾರೆ ಅವರು. ಇಂತಹ ವಾಸ್ತವಿಕ ಉದಾಹರಣೆಗಳ ಮುಖಾಂತರ ಚೆನ್ನಬಸವಣ್ಣನವರು ಅಂಗಕ್ಕೆ ಲಿಂಗ ಬೇಕು ಎಂಬ ತತ್ವ ತಿಳಿಸುತ್ತಾರೆ. ಎಂತಹ ವಿರಕ್ತನಾದರೂ, ಶರಣನಾದರೂ ಆತನಿಗೆ ಇಷ್ಟಲಿಂಗ ಬೇಕೇ ಬೇಕು. ಲಿಂಗವಿಲ್ಲದೆ ಏನಿದ್ದರೂ ಇಲ್ಲದಂತೆ ಎನ್ನುತ್ತಾರೆ. ಇಷ್ಟಲಿಂಗದ ಪಾರಮ್ಯ ಗುರುತಿಸುತ್ತಾರೆ ಚೆನ್ನಬಸವಣ್ಣನವರು ಈ ವಚನದಲ್ಲಿ. ಇದು ಸಾಧಕನಿಗೆ ಮೂಲಸೂತ್ರದಂತೆ, ಭೂಮಿಯಂತೆ. ಈ ಪರಾತ್ಪರ ವಸ್ತು ಎದೆಯ ಮೇಲೆ ಇಲ್ಲದಿದ್ದರೆ ಎಂತಹ ವಿರಕ್ತನಾದರೂ ಆತ ಸಾಧನೆಗೈಯಲು ಸಾಧ್ಯವಿಲ್ಲ.

 ಇಷ್ಟಲಿಂಗದ ಮಹಿಮೆಯನ್ನು ಚೆನ್ನಬಸವಣ್ಣನವರು ತಾತ್ವಿಕ ತತ್ವದೊಂದಿಗೆ ಅದರ ಮಹಿಮೆಯನ್ನು ಅನೇಕ ವಚನಗಳಲ್ಲಿ ತಿಳಿಸಿಕೊಟ್ಟು ಷಟ್‌ಸ್ಥಲ ಚಕ್ರವರ್ತಿ ಎನಿಸಿಕೊಂಡಿದ್ದಾರೆ.

ಶ್ರೀಮತಿ. ಲಲಿತಾ ಇಬ್ರಾಹಿಂಪೂರ,
ಗೋದೂತಾಯ ನಗರ,
ಕಲಬುರಗಿ.
ಮೋಬೈಲ್‌ ಸಂ. 99729 99311.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply