ಚಿನ್ಮಯಜ್ಞಾನಿ ಚನ್ನಬಸವಣ್ಣನವರು./ಡಾ. ವಿಜಯಕುಮಾರ ಕಮ್ಮಾರ.

ಕಂಗಳ ನೋಟ ಹೃದಯದ ಜ್ಞಾನ,
ಮನದೊಳಗೆ ಮಾತನಾಡುತಿರ್ದೆನಯ್ಯಾ!
ಜೇನ ಮಳೆಗಳು ಕರೆದವು,
ಅಮೃತದ ಬಿಂದುಗಳು ಸುರಿದವು.
ಕೂಡಲಚೆನ್ನಸಂಗನೆಂಬ
ರಸಸಾಗರದೊಳಗೋಲಾಡುತಿರ್ದೆನಯ್ಯಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-507/ವಚನ ಸಂಖ್ಯೆ-1111)

12 ನೇಯ ಶತಮಾನದಲ್ಲಿ ಅದ್ಭುತವಾದ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಕ್ರಾಂತಿಯೊಂದು ನಡೆಯಿತು. ಈ ಕ್ರಾಂತಿಯನ್ನು ಹುಟ್ಟುಹಾಕಿದವರು ಬಸವಣ್ಣನವರು. ಬಸವಣ್ಣನವರು ನಡೆ-ನುಡಿ ಸಿದ್ಧಾಂತಕ್ಕೆ ಶಕ್ತಿಯಾದರೆ, ಅಲ್ಲಮಪ್ರಭುದೇವರು ಜ್ಞಾನ ವೈರಾಗ್ಯಕ್ಕೆ ಶಕ್ತಿಯಾದರು. ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನವರು ಅರಿವಿನ ಜ್ಞಾನಕ್ಕೆ ಭಾಷ್ಯವಾಗಿ ಜೀವಿಸಿದರು. ಬಸವಣ್ಣ, ಚನ್ನಬಸವಣ್ಣ, ಅಲ್ಲಮ ಪ್ರಭುಗಳು ಶರಣ ಸಂಸ್ಕೃತಿಯ ಮೂರು ಮುಖ್ಯ ಅಂಗಗಳಾಗಿ ಕೈಂಕರ್ಯಗೊಳ್ಳುತ್ತಾರೆ. ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಒತ್ತುಕೊಟ್ಟರೆ, ಅಲ್ಲಮರು ಆಧ್ಯಾತ್ಮಿಕ ಚಿಂತನೆಗೆ ಒತ್ತುಕೊಟ್ಟರು. ಚನ್ನಬಸವಣ್ಣನವರು ಲಿಂಗಾಯತ ಧಾರ್ಮ ಸಂಹಿತೆಯನ್ನು ಕಟ್ಟಿಕೊಟ್ಟರು. ಈ ಧಾರ್ಮಿಕ ಸಂಹಿತೆಯ ಹರಿಕಾರರಾದ ಚನ್ನಬಸವಣ್ಣನವರನ್ನು ಷಟ್ಸ್ಥಲ ಚಕ್ರವರ್ತಿ ಎಂದು ಶರಣ ಸಂಕುಲದಲ್ಲಿ ಮಾನ್ಯ ಮಾಡಿರುವುದು ಅತ್ಯಂತ ಗೌರವಪೂರ್ಣವಾಗಿದೆ. ಚನ್ನಬಸವಣ್ಣನವರು ರಚಿಸಿದ ಸರಿ ಸುಮಾರು 1776 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ಕಲ್ಯಾಣ ಕ್ರಾಂತಿಯ ನಂತರದಲ್ಲಿ ವಚನ ಕಟ್ಟುಗಳನ್ನು ಸಂರಕ್ಷಿಸಿ ಉಳುವಿಯವೆರೆಗೆ ಸಾಗಿಸಿದಂತಹ ಧೀರ ಶರಣರು.

ಬಸವಣ್ಣನವರ ಸಾರಥ್ಯದಲ್ಲಿ ಕಲ್ಯಾಣದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ನಿತ್ಯ ಜಂಗಮಕ್ಕೆ ಕಾಯಕ ಮತ್ತು ದಾಸೋಹದ ಬದುಕನ್ನು ಸಮೀಕರಿಸಿದರು. ಬಸವಣ್ಣನವರು, ಜ್ಞಾನ ವೈರಾಗ್ಯನಿಧಿ ಅಲ್ಲಮ ಪ್ರಭುಗಳು, ವೈರಾಗ್ಯನಿಧಿ ಅಕ್ಕಮಹಾದೇವಿಯವರು, ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯನವರು, ವೀರಗಂಟಿ ಶರಣ ಮಡಿವಾಳ ಮಾಚಯ್ಯನವರು, ಅಜಗಣ್ಣ ಮತ್ತು ಮುಕ್ತಾಯಕ್ಕನವರು, ನುಲಿಯ ಚಂದಯ್ಯನವರು, ಜೇಡರ ದಾಸಿಮಯ್ಯನವರು ಮುಂತಾದ 770 ಗಣಂಗಳ ವಿಚಾರಧಾರೆ 12 ನೇಯ ಶತಮಾನದಲ್ಲಿಯ ಅನುಭವ ಮಂಟಪವು ಅನುಭಾವದಿಂದ ಇಡೀ ಶರಣರ ಬದುಕು ನಮಗೆಲ್ಲಾ ಮಾದರಿಯಾಗಿದೆ. ಇಂಥ 770 ಅಮರ ಗಣಂಗಳಲ್ಲಿ ಮಿನುಗು ತಾರೆಯಾಗಿ ಗೋಚರವಾಗುವುದು ಇಂದಿನ ಉಪನ್ಯಾಸದ ಕೇಂದ್ರಬಿಂದು ಚಿನ್ಮಯಜ್ಞಾನಿ ಚನ್ನಬಸವಣ್ಣನವರು.

ಚಿನ್ಮಯಜ್ಞಾನಿ ಚನ್ನಬಸವಣ್ಣನವರೆಂಬ ಹೆಸರು ಕಿವಿಗೆ ಬಿದ್ದ ತಕ್ಷಣ ನಮ್ಮಲ್ಲಿ ಒಂದಷ್ಟು ಕುತೂಹಲ, ಒಂದಷ್ಟು ವಿಸ್ಮಯಗಳ ಜೊತೆಗೆ ಮೈಯಲ್ಲಿ ಮಿಂಚಿನ ಸಂಚಾರ ಆಗುವದಂತೂ ಖಂಡಿತ. ಕೇವಲ ಎರಡೂವರೆ ದಶಕದ ಜೀವಿತಾವಧಿಯಲ್ಲಿ ನಿಃಷ್ಕಲ ಆಧ್ಯಾತ್ಮಿಕ, ಶ್ರೇಷ್ಠ ಸಾಹಿತ್ಯಿಕ ಮತ್ತು ಅಪ್ರತಿಮ ಆಡಳಿತಾತ್ಮಕ ಶಿಖರವನ್ನೇರಿದ ಷಟಸ್ಥಲ ಚಕ್ರವರ್ತಿ ಚನ್ನಬಸವಣ್ಣನವರು ಮಾನವ ಸಂಕುಲದ ಎಲ್ಲರಿಗೂ ಮಾದರಿಯಾಗುವಂಥ ವ್ಯಕ್ತಿತ್ವ. ಅದರ ಆಳ ಅಗಲಗಳನ್ನು ತಿಳಿಯುವುದಕ್ಕೆ ಬಹುಶಃ ನಮಗೆಲ್ಲ ಅಸಾಧ್ಯ ಅಂತ ನನ್ನ ಭಾವನೆ.

ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಖಡ್ಗ ಹಿಡಿದು ವಚನ ಸಾಹಿತ್ಯವನ್ನು ರಕ್ಷಣೆಯನ್ನೂ ಕೂಡ ಮಾಡಿದ ಆ 21 ವರ್ಷ ಹರೆಯದ ಯುವಕ ಷಟಸ್ಥಲ ಜ್ಞಾನಿ ಚನ್ನಬಸವಣ್ಣನವರು. ಶರಣರ ದೃಷ್ಟಿಯಲ್ಲಿ ಚನ್ನಬಸವಣ್ಣನವರ ಉಲ್ಲೇಖಗಳು ಅದ್ಭುತ ಚಿತ್ರಣವನ್ನು ನೀಡುತ್ತವೆ.

ಅಲ್ಲಮ ಪ್ರಭುದೇವರ ದೃಷ್ಠಿಯಲ್ಲಿ ಅವಿರಳ ಜ್ಞಾನಿ:
ಸದ್ಯೋಜಾತ ಬದ್ಧಜ್ಞಾನಿ, ವಾಮದೇವ ಆತುರಜ್ಞಾನಿ,
ಅಘೋರ ಕೋಪಜ್ಞಾನಿ, ತತ್ಪುರುಷ ಕ್ಷಣಿಕಜ್ಞಾನಿ,
ಈಶಾನ್ಯ ಅತೀತಜ್ಞಾನಿ_[ಇದು] ಪರಿಯಲ್ಲ ನೋಡಾ.
ಗುಹೇಶ್ವರಲಿಂಗದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣನ
ಶ್ರೀಪಾದಕ್ಕೆ ನಮೋನಮೋ ಎಂಬೆನು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-590/ವಚನ ಸಂಖ್ಯೆ-1547)

ಅಕ್ಕಮಹಾದೇವಿಯವರ ದೃಷ್ಠಿಯಲ್ಲಿ ಸಮ್ಯಕ್ ಜ್ಞಾನಿ:
ಮರ್ತ್ಯಲೋಕದ ಭಕ್ತರ ಮನವ
ಬೆಳಗಲೆಂದು ಇಳಿತಂದನಯ್ಯಾ ಶಿವನು.
ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ.
ಚಿತ್ತದ ಪ್ರಕೃತಿಯ ಹಿಂಗಿಸಿ,
ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ,
ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ.
ಭಾವವೆಲ್ಲ ಮಹಾಘನದ ಬೆಳಗು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಸಮ್ಯಕ್ ಜ್ಞಾನಿ ಚೆನ್ನಬಸವಣ್ಣನ
ಶ್ರೀಪಾದಕ್ಕೆ ಶರಣೆಂದು
ಎನ್ನ ಭವಂ ನಾಸ್ತಿಯಾಯಿತ್ತಯ್ಯಾ ಪ್ರಭುವೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-328)

ಶರಣ ಉರಿಲಿಂಗಪೆದ್ದಿಗಳ ದೃಷ್ಠಿಯಲ್ಲಿ ಷಟಸ್ಥಲ ಜ್ಞಾನಿ:
ಭಕ್ತಸ್ಥಲ ಸಾಧ್ಯವಾಯಿತ್ತು ಸಂಗನಬಸವರಾಜದೇವರಿಗೆ.
ಮಾಹೇಶ್ವರಸ್ಥಲ ಸಾಧ್ಯವಾಯಿತ್ತು ಮಡಿವಾಳಮಾಚಿತಂದೆಗಳಿಗೆ.
ಪ್ರಸಾದಿಸ್ಥಲ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಗಳಿಗೆ.
ಪ್ರಾಣಲಿಂಗಿಸ್ಥಲ ಸಾಧ್ಯವಾಯಿತ್ತು ಅನುಮಿಷದೇವರಿಗೆ.
ಶರಣಸ್ಥಲ ಸಾಧ್ಯವಾಯಿತ್ತು ಅಲ್ಲಮಪ್ರಭುದೇವರಿಗೆ.
ಐಕ್ಯಸ್ಥಲ ಸಾಧ್ಯವಾಯಿತ್ತು ಅಜಗಣ್ಣಗಳಿಗೆ.
ಸರ್ವಾಚಾರಸ್ಥಲ ಸಾಧ್ಯವಾಯಿತ್ತು, ಚೆನ್ನಬಸವಯ್ಯಗಳಿಗೆ.
ಎನಗೆ ಷಟಸ್ಥಲಸರ್ವಾಚಾರವೆ ಸಾಧ್ಯವಾಗಿ
ಇಂತಿವರ ನೆನೆದು ಶುದ್ಧನಾದೆನು ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-608/ವಚನ ಸಂಖ್ಯೆ-1466)

ಶಿವಯೋಗಿ ಸಿದ್ಧರಾಮೇಶ್ವರ ದೃಷ್ಟಿಯಲ್ಲಿ ಕ್ರಿಯಾಜ್ಞಾನಿಗಳು:
ಅಲ್ಲಮನ ಲಕ್ಷ್ಯ ವೈರಾಗ್ಯದಲ್ಲಿ;
ಚೆನ್ನಬಸವಣ್ಣನ ಲಕ್ಷ್ಯ ಕ್ರಿಯಾಜ್ಞಾನದಲ್ಲಿ;
ಬಸವಣ್ಣನ ಲಕ್ಷ್ಯ ಭಕ್ತಿಯಲ್ಲಿ;
ಮಡಿವಾಳನ ಲಕ್ಷ್ಯ ಅಹಂಕಾರನಾಶದಲ್ಲಿ;
ಸಕಳೇಶಯ್ಯನ ಲಕ್ಷ್ಯ ಸಮತೆಯಲ್ಲಿ;
ಶಿವಯೋಗ ಸಿದ್ಧರಾಮನೆಂಬ ಬಾಲಕನ ಲಕ್ಷ್ಯ ಲಿಂಗಪೂಜೆಯಲ್ಲಿ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುಲಿಂಗವೆ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-542/ವಚನ ಸಂಖ್ಯೆ-1746)

ಶಿವಯೋಗಿ ಸಿದ್ಧರಾಮೇಶ್ವರ ದೃಷ್ಟಿಯಲ್ಲಿ ಸಹಜ ಜ್ಞಾನಿಗಳು:
ಭಕ್ತಿಯ ಬೆಳಸಿ ಹೇಳಿದೆನಲ್ಲದೆ,
ಭಕ್ತಿಯ ಮಾಡಿ ಬೆಳೆಯಲಿಲ್ಲ ನಾನು.
ಭಕ್ತಿಯ ಶಕ್ತಿ ಬಸವಣ್ಣಂಗಾಯಿತ್ತು.
ಜ್ಞಾನದ ಶಕ್ತಿ ಚೆನ್ನಬಸವಣ್ಣಂಗಾಯಿತ್ತು.
ಯೋಗದ ಸಿದ್ಧಿ ಸಿದ್ಧರಾಮಂಗಾಯಿತ್ತು,
ನಿಮ್ಮರಮನೆಯಲ್ಲಿ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-384/ವಚನ ಸಂಖ್ಯೆ-1231)

ಇಂಥ ಚನ್ನಬಸವಣ್ಣನವರನ್ನು ಕುರಿತು ಅಲ್ಲಮ ಪ್ರಭುಗಳು ಮತ್ತೊಂದು ಮೌಲಿಕ ವಚನವನ್ನು ಬರೆದಿದ್ದಾರೆ.
ಕಿರಿಯರಾದಡೇನು? ಹಿರಿಯರಾದಡೇನು?
ಅರಿವಿಂಗೆ ಹಿರಿದು ಕಿರಿದುಂಟೆ?
ಆದಿ ಅನಾದಿ ಇಲ್ಲದಂದು,
ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು
ಗುಹೇಶ್ವರಲಿಂಗದಲ್ಲಿ ನೀನೊಬ್ಬನೇ ಮಹಾಜ್ಞಾನಿಯೆಂಬುದು
ಕಾಣ ಬಂದಿತ್ತು ಕಾಣಾ, ಚನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-415/ವಚನ ಸಂಖ್ಯೆ-1114)

ಇದು ಚನ್ನಬಸವಣ್ಣನವರ ದಿವ್ಯ ವ್ಯಕ್ತಿತ್ವವನ್ನು ನಿರೂಪಣೆ ಮಾಡುತ್ತದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅಮೋಘ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದ ಚನ್ನಬಸವಣ್ಣನವರನ್ನು “ನೀನೊಬ್ಬನೇ ಮಹಾಜ್ಞಾನಿ” ಯೆಂಬುದು ಹೊಗಳಿಕೆಯ ವಿಷಯವಾದರೂ ಕೂಡ ಚನ್ನಬಸವಣ್ಣನವರ ಪ್ರತಿಭೆಯನ್ನು ಕಂಡು ಅಲ್ಲಮ ಪ್ರಭುಗಳು ಈ ರೀತಿ ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಚನ್ನಬಸವಣ್ಣನವರ ಜೀವನದ ಮುಖ್ಯ ಸಂದೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ, 12 ನೇ ಶತಮಾನದಲ್ಲಿದ್ದ ಧಾರ್ಮಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ತಿಳಿಯಬೇಕಾಗುತ್ತದೆ. ಆ ಕಾಲಘಟ್ಟದ ಧಾರ್ಮಿಕ ಪರಿಸ್ಥಿತಿ ಎಷ್ಟು ಅಯೋಮಯವಾಗಿತ್ತು ಎನ್ನುವುದನ್ನು ಚನ್ನಬಸವಣ್ಣನವರೇ ತಮ್ಮ ಒಂದು ವಚನದಲ್ಲಿ ಸ್ಪಷ್ಟವಾಗಿ ದಾಖಲಿಸುತ್ತಾರೆ.

ಶೈವ ಸೈವೆರಗಾದ, ಪಾಶುಪತಿ ಪಥವನರಿಯ,
ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ,
ಸನ್ಯಾಸಿ ಸಂಸಾರಿಯಾದ, [ಜೋಗಿ] ಮರುಳಾಗಿ ತಿರುಗಿದ.
ಈ [ಆರು] ವನಲ್ಲೆಂದು ಕಳೆದು, ಕೂಡಲ ಚೆನ್ನಸಂಗನ ಶರಣರು
ಆರ ಮೀರಿ ಬೇರೆನಿಂದನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-248/ವಚನ ಸಂಖ್ಯೆ-616)

12 ನೇ ಶತಮಾನದಲ್ಲಿ ಶೈವರು, ಪಾಶುಪತರು, ಕಾಳಾಮುಖರು, ಮಹಾವ್ರತಿಗಳು, ಸನ್ಯಾಸಿ, ಜೋಗಿಗಳು ಧಾರ್ಮಿಕ ವಲಯದಲ್ಲಿ ಒಂದು ರೀತಿಯ ಗೊಂದಲವನ್ನುಂಟು ಮಾಡಿದ್ದರು. ಇವರನ್ನು ಚನ್ನಬಸವಣ್ಣನವರು ಟೀಕಿಸುತ್ತಾರೆ. ಇವರು ಯಾರೂ ಭಕ್ತಿಪಥಕ್ಕೆ ಸಲ್ಲರು ಎನ್ನುತ್ತಾರೆ. ಶೈವ ಧರ್ಮವು ಅತ್ಯಂತ ಪ್ರಾಚೀನ ಧರ್ಮ. ವೈದಿಕ ಧರ್ಮಕ್ಕಿಂತ ಮೊದಲು ಹುಟ್ಟಿದ ಧರ್ಮ. ಹೀಗಿದ್ದೂ 12 ನೇ ಶತಮಾನದ ಹೊತ್ತಿಗೆ ಶೈವ ಧರ್ಮವು ತನ್ನ ಚಲನಶೀಲತೆಯನ್ನು ಕಳೆದುಕೊಂಡು ಮೌಢ್ಯ ತುಂಬಿದ ಸಂಪ್ರದಾಯಗಳ, ಮೂಢನಂಬಿಕೆಗಳ ಆಗರವಾಗಿ ಬಿಟ್ಟಿತ್ತು. ಕಾಳಾಮುಖರಂತೂ ವಾಮಪಂಥಿಯ ಆಚರಣೆಗಳ ಮೂಲಕ ಜನರಲ್ಲಿ ಭಯವನ್ನುಂಟು ಮಾಡಿದ್ದರು. ಒಟ್ಟಾರೆ ಸ್ಥಾವರ ವ್ಯವಸ್ಥೆ ನಿರ್ಮಾಣವಾಗಿತ್ತು. ಈ ಸಾಮಾಜಿಕ ಅವ್ಯವಸ್ಥೆಯನ್ನು ಜಂಗಮಗೊಳಿಸಲು ಬಸವಾದಿ ಶರಣರು ಶ್ರಮವಹಿಸಿದರು.

ಈ ಉಪನ್ಯಾಸವನ್ನು 4 ಭಾಗಗಳ ಸೀಮಿತ ಪರಿಧಿಯಲ್ಲಿ ನೋಡೋಣ:

  1. ಚನ್ನಬಸವಣ್ಣನವರ ಜನನ ವೃತ್ತಾಂತ.
  2. ಗುರುಕಾರುಣ್ಯ ಅಥವಾ ಗುರುವಿನ ಅನುಗ್ರಹ.
  3. ಅನುಭವ ಮಂಟಪದಲ್ಲಿ ಚನ್ನಬಸವಣ್ಣನವರ ಪಾತ್ರ.
  4. ಕಲ್ಯಾಣ ಕ್ರಾಂತಿಯಲ್ಲಿ ಚನ್ನಬಸವಣ್ಣನವರ ಪಾತ್ರ.

ಚನ್ನಬಸವಣ್ಣನವರ ಜನನ ವೃತ್ತಾಂತ:
ಬಹಳಷ್ಟು ಕುತೂಹಲ ಮೂಡಿಸುವಂಥಾದ್ದು ಚನ್ನಬಸವಣ್ಣನವರ ಜನನ ವೃತ್ತಾಂತ. ಯಾಕಂದರೆ ಅವರ ಹುಟ್ಟಿನ ಕುರಿತು ಬಹಳಷ್ಟು ವಿವಾದಾತ್ಮಕ ಸಂಗತಿಗಳು ಜೋಡಣೆಯಾಗಿದ್ದು. ಬಸವಣ್ಣನವರ ಸಹೋದರಿ ಅನುಭಾವಿ ಶರಣೆ ಅಕ್ಕ ನಾಗಲಾಂಬಿಕೆ ಮತ್ತು ಶರಣ ಶಿವಸ್ವಾಮಿಯವರ ಪುತ್ರರು ಚನ್ನಬಸವಣ್ಣನವರು. ಬಸವಣ್ಣನವರ ಸೋದರಳಿಯ. ಹಲವು ಗ್ರಂಥಗಳಲ್ಲಿ ಈ ಕುರಿತು ನಮಗೆ ಮಾಹಿತಿ ಸಿಗುತ್ತದೆ.

1.ಭೀಮಕವಿಯ ಬಸವ ಪುರಾಣ (ಕ್ರಿ. ಶ. 1369): 7 ನೇ ಸಂಧಿ:
ತರುಣಿ ನಾಗಾಂಬೆಯ ಸುಗರ್ಭದಿ
ನಿರುಪಮ ಜ್ಞಾನ ಸ್ವರೂಪಂ
ಪರಮ ಕಾರಣ ಚನ್ನಬಸವಂ ಉದ್ಭವಂ ಗೈದಂ.

2. ಚಾಮರಸನ ಪ್ರಭುಲಿಂಗಲೀಲೆ (ಕ್ರಿ. ಶ. 1430): 9 ನೇ ಗತಿ:
ಮಿಕ್ಕು ಭಕ್ತಿಯಲೊಂದು ದಿವಸದ
ಲಕ್ಕ ನಾಗಾಯಿಗಳು ಬಸವನ
ಒಕ್ಕು  ಮಿಕ್ಕ ಮಹಾಪ್ರಸಾದವನುಣಲು ಕ್ಷಣದೊಳಗೆ
ತಕ್ಕ ಶಿವತತ್ವ ಸ್ವರೂಪವೆ
ಸಿಕ್ಕಿ ಬೆಳೆದುದಯಿಸಲುಕಾಣುತ
ಲಕ್ಕನಾ ಬಸವೇಶ್ವರನ ಹೆಸರಿಟ್ಟಳಾ ಶಿಶುವಿಗೆ

3. ವಿರೂಪಾಕ್ಷಪಂಡಿತನ ಚನ್ನಬಸವ ಪುರಾಣ (ಕ್ರಿ. ಶ. 1584): 4 ನೇ ಸಂಧಿ:
ನಮ್ಮೀ ಚಿತ್ಕಳಾಮೃತ ಪ್ರಸಾದಮಿದರಿಂ ನಿನ್ನ ಗರ್ಭದೊಳಗೆ
ತೊಳಗುವೆಮ್ಮೀ ಷಣ್ಮುಖ ಸ್ಥಿತ ಪ್ರಣವನಿ
ರ್ಮಳ ರೂಪನಾ ಷಟಸ್ಥಲಬ್ರಹ್ಮಿ ಸಕಲ ಭೂ
ತಳವಂದ್ಯನಗಣಿತ ಪವಾಡಪುರುಷಂ ಜನಿಪನೆಂದೀಶ್ವರಂ ನುಡಿದನು.

ಇದಲ್ಲದೇ

  • ಲಕ್ಕಣ್ಣ ದಂಡೇಶನ “ಶಿವತತ್ವ ಚಿಂತಾಮಣಿ” (ಕ್ರಿ. ಶ. 1425)
  • ಹಲಗೆ ಆರ್ಯನ “ಶೂನ್ಯ ಸಂಪಾದೆನೆ (ಕ್ರಿ. ಶ. 1530)
  • ಸಿದ್ಧನಂಜೇಶನ “ಗುರುರಾಜ ಚಾರಿತ್ರ್ಯ” (ಕ್ರಿ. ಶ. 1672)
  • ಶಾಂತಲಿಂಗ ದೇಶಿಕನ “ಭೈರವೇಶ್ವರನ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ” (ಕ್ರಿ. ಶ. 1680)
  • ಅದೃಶ್ಯ ಕವಿಯ “ಪ್ರೌಢದೇವರಾಯನ ಕಾವ್ಯ” (ಕ್ರಿ. ಶ. 1680)
  • ಚನ್ನಪ್ಪ ಕವಿಯ “ಶರಣ ಲೀಲಾಮೃತ” (ಕ್ರಿ. ಶ. 1700)
  • ಪಾಲ್ಕುರಿಕೆ ಸೋಮನಾಥನ “ಚನ್ನಬಸವ ಸ್ತೋತ್ರ” (ಕ್ರಿ ಶ. 1195)
  • ಸಿಂಗಿರಾಜನ “ಸಿಂಗಿರಾಜ ಪುರಾಣ” (ಕ್ರಿ. ಶ. 1500)

ಈ ಎಲ್ಲ ಕವಿಗಳೂ ಚನ್ನಬಸವಣ್ಣನವರು ಅಕ್ಕ ನಾಗಲಾಂಬಿಕೆಯವರ ಮಗನಾಗಿ ಜನಿಸಿದರೆಂದು ನಿರೂಪಣೆ ಮಾಡಿದ್ದಾರೆ. ಚನ್ನಬಸವಣ್ಣನವರ ತಂದೆ ಶಿವದೇವ ಎನ್ನುವುದನ್ನು ಸಿಂಗಿರಾಜ ಮಾತ್ರ ತನ್ನ “ಸಿಂಗಿರಾಜ ಪುರಾಣ” ದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾನೆ.

ಏತಕಾ ಮಾತಿನ್ನು ನೋಡಿ ಸುಖವಿಹುದು ಪರ
ಮಾರ್ಥ ಕಾಮ್ಯಾರ್ಥಕಾಗದುಸಹಜ ಮೇಲೆ ದು
ರ್ನೀತದಘ್ರಾರಕಾಂ ಬಹುದಿಲ್ಲ ಬಂದಡೇಂ ನಿಮಗೆ ಸುಖವಿಲ್ಲವಿದರ
ಭ್ರಾಂತ ಬಿಡಿಯೆಂದು ಬೀಳ್ಕೊಡಲವರು‌ ಸಂಸಾರ
ಭ್ರಾಂತಳಿಯದಳಿಯ ಶಿವದೇವ ಮಗಳ್ನಾಗಾಯ
ನಾತಂಗೆ ಸೇವೆಗೋಸುಗಮಿತ್ತು ತಕ್ಕುದಂ ಕೊಟ್ಟು ಬಂದರು ಇತ್ತಲು.

ಅನೇಕ ಶರಣರು ತಮ್ಮ ವಚನಗಳಲ್ಲಿ ಬಸವಣ್ಣನವರ ಅಳಿಯ ಚನ್ನಬಸವಣ್ಣನೆಂದು ತಿಳಿಸಿದ್ದಾರೆ. ಅದರಲ್ಲಿ ಉಗ್ಘಡಿಸುವ ಗಬ್ಬಿದೇವಯ್ಯನವರ ಒಂದು ವಚನ ಮಹತ್ವವನ್ನು ಪಡೆಯುತ್ತದೆ.

ಭಕ್ತಿಸ್ಥಲಕ್ಕೆ ಒಬ್ಬ, ಮಾಹೇಶ್ವರಸ್ಥಲಕ್ಕೆ ಇಬ್ಬರು,
ಪ್ರಸಾದಿಸ್ಥಲಕ್ಕೆ ಆತನಳಿಯನಲ್ಲದಿಲ್ಲ,
ಪ್ರಾಣಲಿಂಗಿಸ್ಥಲಕ್ಕೆ ಮೂವರು, ಶರಣಸ್ಥಲಕ್ಕೆ ನಾಲ್ವರು,
ಐಕ್ಯಸ್ಥಲಕ್ಕೆ ಅಕ್ಕನ ತಮ್ಮನಲ್ಲದಿಲ್ಲ.
ಇಂತೀ ಕುರುಹಿನ ಬೆಂಬಳಿಯನರಿದು,
ಬಿಡುವರ ಬಿಟ್ಟು, ತಡೆವರ ತಡೆವುತ್ತಿದ್ದೇನೆ,
ಕೂಡಲಸಂಗಮದೇವರಲ್ಲಿ ಬಸವಣ್ಣನರಿಕೆಯಾಗಿ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-445/ವಚನ ಸಂಖ್ಯೆ-1198)

“ಆತನಳಿಯ” ಎನ್ನುವುದು ಇಲ್ಲಿ ಬಸವಣ್ಣನವರ ಅಳಿಯ ಚನ್ನಬಸವಣ್ಣನವರು. ಚನ್ನಬಸವಣ್ಣನವರು ವಚನದಲ್ಲಿ ನಾಗಲಾಂಬಿಕೆಯವರನ್ನು “ಅವ್ವೆ” ಎನ್ನುತ್ತಾರೆ.

ಹನ್ನೆರಡು ಗಾವುದ ವಿಸ್ತೀರ್ಣದ ಮಹಾಪಟ್ಟಣಕ್ಕೆ
ಕಲ್ಯಾಣವೆಂಬ ಪ್ರಣತೆ, ಮಹತ್ತೆಂಬ ಎಣ್ಣೆ,
ಬಸವನೆಂಬ ಸ್ವಯಂಜ್ಯೋತಿ.
ಅಲ್ಲಿ ಕಾಳಯ್ಯ ಚವುಡಯ್ಯ ಕೋಲ ಸಾತಯ್ಯ,
ಮುಖವಾಡದ ಕೇಶಿರಾಜ ಖಂಡನೆಯ ಬೊಮ್ಮಣ್ಣ,
ಮಿಂಡ ಮಲ್ಲಿನಾಥ ಹಡಪದ ಅಪ್ಪಣ್ಣ
ಮಡಿವಾಳ ಮಾಚಯ್ಯ,
ಅವ್ವೆ ನಾಗವ್ವೆ ಸಹಿತ ಇವರೆಲ್ಲರೂ
ಸಂಗನಬಸವಣ್ಣನ ಬಯಲ ಕೂಡಿದರು.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಇವರ ಪ್ರಸಾದದ ಬಯಲೆನಗಾಯಿತ್ತು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-326/ವಚನ ಸಂಖ್ಯೆ-831)

ಘಟ್ಟಿವಾಳಯ್ಯನವರ ಒಂದು ವಚನ ಅಕ್ಕನಾಗಲಾಂಬಿಕೆಯವರ ಪುತ್ರ ಚನ್ನಬಸವಣ್ಣನವರು ಎಂದು ನಿರೂಪಣೆ ಮಾಡತದೆ.

ಕರವೂರ ನಿರಹಂಕಾರ-ಸುಜ್ಞಾನಿದೇವಿಯರ
ಬಸುರಲ್ಲಿ ಬಂದರೆನ್ನಬಹುದೆ ಪ್ರಭುದೇವರ?
ಮಂಡಗೆಯ ಮಾದಿರಾಜ- ಮಾದಲಾಂಬಿಕೆಯಮ್ಮನವರ
ಬಸುರಲ್ಲಿ ಬಂದರೆನ್ನಬಹುದೆ ಬಸವೇಶ್ವರನ?
ಅಕ್ಕನಾಗಲಾಂಬಿಕೆಯಮ್ಮನ ಬಸುರಲ್ಲಿ
ಬಂದರೆನ್ನಬಹುದೆ ಚೆನ್ನಬಸವೇಶ್ವರನ?
ಮೊರಡಿಯ ಮುದ್ದುಗೌಡ-ಸುಗ್ಗವ್ವೆಯ [ರ]
ಬಸುರಲ್ಲಿ ಬಂದೆರೆನ್ನಬಹುದೆ ಸಿದ್ಧರಾಮೇಶ್ವರನ?
ಇವರು ಒಬ್ಬರಿಂದಾದವರಲ್ಲ, ತಮ್ಮಿಂದ ತಾವಾದರು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ [ನಿಲ್ಲು] ಮಾಣು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-176/ವಚನ ಸಂಖ್ಯೆ-449)

ಈ ಮೇಲಿನ ಎಲ್ಲ ವಿವರಣೆಯಿಂದ ಶಿವದೇವರು ಅಕ್ಕ ನಾಗಲಾಂಬಿಕೆಯ ಪತಿಯೆಂದು ವ್ಯಕ್ತವಾಗುತ್ತದೆ. ಸಮಕಾಲೀನ ಶರಣರು ಶಿವದೇವರನ್ನು ಉಲ್ಲೇಖಿಸಿರುವದು ಕಂಡು ಬರುವುದಿಲ್ಲ. ಸಿಂಗಿರಾಜ ಪುರಾಣದಲ್ಲಿ “ಸಂಸಾರ ಭ್ರಾಂತಳಿಯದಳಿಯ” ಹೇಳುವಲ್ಲಿ ಶಿವದೇವನಿಗೆ “ಸಂಸಾರದ ಭ್ರಾಂತಿ ಅಳಿಯದ ಅಳಿಯ” ಎಂದು ಶರಣರು ಇವರ ಉಲ್ಲೇಖವನ್ನು ಮಾಡಿರಲಿಕ್ಕಿಲ್ಲ ಎನ್ನಬಹುದು. ಶರಣೆ ನಾಗಲಾಂಬಿಕೆಯವರು ಷಟಸ್ಥಲಮಾರ್ಗವನ್ನು ಅನುಸರಿಸಿದರೆ ಶಿವದೇವರು ಸಂಸಾರ ವಿಷಯದಲ್ಲಿ ಮುನ್ನಡೆದಿರಬಹುದು. ಚನ್ನಬಸವಣ್ಣನವರ ದಿವ್ಯಪ್ರಭೆ ಇಡೀ ಶರಣ ಗಣಂಗಳನ್ನು ಆವರಿಸಿದ್ದರಿಂದಲೂ ಕೂಡ ಶಿವದೇವರ ಉಲ್ಲೇಖ ಇರಲಿಕ್ಕಿಲ್ಲ. ಒಟ್ಟಾರೆ ಅಂದರೆ In the nut shell ಚನ್ನಬಸವಣ್ಣನವರು ಬಸವಣ್ಣನವರ ಸೋದರಳಿಯನಾಗಿ ಹಾಗೂ ನಾಗಲಾಂಬಿಕೆ-ಶಿವದೇವರ ಪುತ್ರರಾಗಿ ಜನಿಸಿದ್ದರು ಎನ್ನುವುದಂತೂ ಧೃಢವಾದ ಸಂಗತಿ. ಇದಿಷ್ಟು ಚನ್ನಬಸವಣ್ಣನವರ ಜನನ ವೃತ್ತಾಂತ.

ಗುರುಕಾರುಣ್ಯ ಅಥವಾ ಗುರುವಿನ ಅನುಗ್ರಹ:
ಚನ್ನಬಸವಣ್ಣನವರಿಗೆ ಗುರುಕಾರುಣ್ಯವನ್ನು ನೀಡಿದವರು ಬಸವಣ್ಣನವರು. ಬಸವಣ್ಣನವರ ಕರ ಕಮಲ ಸಂಜಾತರಾಗಿ ಬೆಳೆದವರು ಚನ್ನಬಸವಣ್ಣನವರು. ಇದನ್ನು ಸ್ವತಃ ಚನ್ನಬಸಣ್ಣನವರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ.

ಎನ್ನ ಸರ್ವಾಂಗವೆಲ್ಲವೂ ಲಿಂಗವಾದ
ಪರಿಕ್ರಮವೆಂತೆಂದಡೆ,
ಶ್ರೀ ಗುರುಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ
ಸರ್ವಾಂಗದಲ್ಲಿ ಭಿನ್ನನಾಮಂಗಳಿಂದ ಪ್ರಕಾಶಿಸುತ್ತಿಹುದು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-483/ವಚನ ಸಂಖ್ಯೆ-1087)

ಎನ್ನ ಕರಸ್ಥಲದಲ್ಲಿ ಲಿಂಗವ ಸಾಹಿತ್ಯವ ಮಾಡಿದ.
ಎನ್ನ ಮನಸ್ಥಲದಲ್ಲಿ ಜಂಗಮವ ಸಾಹಿತ್ಯವ ಮಾಡಿದ.
ಎನ್ನ ತನುಸ್ಥಲದಲ್ಲಿ ಆಚಾರವ ಸಾಹಿತ್ಯವ ಮಾಡಿದ.
ಇಂತೀ ತನು ಮನ ಪ್ರಾಣವನೇಕವ ಮಾಡಿ
ಕೂಡಲಚೆನ್ನಸಂಗಮದೇವಾ ನಿಮ್ಮನೆನ್ನ ವಶವ ಮಾಡಿದ
ಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-474/ವಚನ ಸಂಖ್ಯೆ-1071)

ಧರೆಯಾಕಾಶವಿಲ್ಲದಂದು,
ಅನಲ ಪವನ ಜಲ ಕೂರ್ಮರಿಲ್ಲದಂದು,
ಚಂದ್ರಸೂರ್ಯರೆಂಬವರು ಕಳೆದೋರದಂದು,
ಆತ್ಮಸ್ಥಲ ಅನುಭಾವಕ್ಕೆ ಬಾರದಂದು,
ನಿತ್ಯನಿಜಲಿಂಗವ ಬಲ್ಲರಾರಯ್ಯ ನೀವಲ್ಲದೆ?
ಮಹಾಘನಕ್ಕೆ ಘನವಾಹನವಾಗಿ,
ಅಗಮ್ಯಸ್ಥಾನದಲ್ಲಿ ನಿಂದು
ಭರಿತರಾಗಿರಬಲ್ಲರಾರಯ್ಯಾ ನೀವಲ್ಲದೆ?
ನಿಮ್ಮ ಒಕ್ಕು ಮಿಕ್ಕ ಶೇಷಪ್ರಸಾದದ
ಕಾರುಣ್ಯದ ಶಿಶುವಾಗಿ ಒಡಲೊಳಗೆ ಇದ್ದಲ್ಲಿ
ವಿಭೂತಿ ಪಟ್ಟವ ಕಟ್ಟಿ, ಹಸ್ತಮಸ್ತಕಸಂಯೋಗವ ಮಾಡಿ
ಎನ್ನನುಳುಹಿದರಾರಯ್ಯ ನೀವಲ್ಲದೆ?
ಕೂಡಲಚೆನ್ನಸಂಗಮದೇವರ ಸಾಕ್ಷಿಯಾಗಿ
ನಾನು ನಿಮ್ಮ ಕರುಣದ ಕಂದನೆಂಬುದ
ಮೂರುಲೋಕ ಬಲ್ಲುದು ಕಾಣಾ ಸಂಗನಬಸವಣ್ಣ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-625/ವಚನ ಸಂಖ್ಯೆ-1318)

ಜ್ಞಾನಶಕ್ತಿಯು ಚನ್ನಬಸವಣ್ಣನವರಿಗೆ ಜನ್ಮತಃ ಸಾಧಿಸಿತ್ತು ಎನ್ನುವದನ್ನು ಬಸವಣ್ಣನವರ ಈ ವಚನ ನಿರೂಪಣೆ ಮಾಡುತ್ತದೆ.

ಶಿಶುವೆನ್ನಬಹುದೆ, ನಂಬಿಯಣ್ಣನ?
ಸೂಕ್ಷ್ಮನೆನಬಹುದೆ ರವಿಯನು? ಜಗವ ಬೆಳಗುವ.
ದೃಷ್ಟಿ ಕಿರಿದೆನ್ನಬಹುದೆ? ಸೃಷ್ಟಿಯನು ಕಾಣ್ವ.
ಭಾವ ಕಿರಿದೆನ್ನಬಹುದೆ? ಬಳ್ಳ ಲಿಂಗವಾದುದನು.
ಕೂಡಲಸಂಗಮದೇವಯ್ಯಾ,
ಯುಗಜುಗವೆಲ್ಲವನೂ ಮೀರಿದ ಶರಣನ
ಕಿರಿದೆನಬಹುದೆ, ಚೆನ್ನಬಸವಣ್ಣನ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-409/ವಚನ ಸಂಖ್ಯೆ-1362)

ಇಂತಹ ಪ್ರಮಥ ಗುರು ಬಸವಣ್ಣನವರಿಂದ ಮಾಯೆಗಳು ಕಳಚಿ ಸದ್ಗುರುವುವಿನ ಹಸ್ತಮಸ್ತಕ ಸಂಯೋಗದಿಂದ ಕೃತಾರ್ಥನಾದೆನು ಎಂದು ಚನ್ನಬಸವಣ್ಣನವರು ಇಲ್ಲಿ ಪ್ರತಿಪಾದನೆ ಮಾಡಿದ್ದಾರೆ. ಬಸವಣ್ಣನವರ ಭಾವಹಸ್ತ ಮುಟ್ಟಿದ ಕಾರಣ ಬಸವಣ್ಣನವರ ಅನುಗ್ರಹಕ್ಕೆ ಪಾತ್ರನಾದೆನು ಎನ್ನುತ್ತಾರೆ. ಹಾಗಾಗಿ ಬಸವಣ್ಣನವರು ಚನ್ನಬಸವಣ್ಣನವರ ಬದುಕಿನಲ್ಲಿ ಶಿವನ ಪ್ರಕಾಶವನ್ನು ಬೆಳಗಿಸಿದರು ಎನ್ನುವುದು ನಿರ್ವಿವಾದ.

ಅನುಭವ ಮಂಟಪದಲ್ಲಿ ಚನ್ನಬಸವಣ್ಣನವರ ಪಾತ್ರ:
ಅನುಭವ ಮಂಟಪವು ಸಾಮಾಜಿಕ ಸಮಾನತೆಯ ಪರಿಕಲ್ಪನೆಯ ಒಂದು ಪ್ರಯೋಗ ಶಾಲೆ. ಅರಿವಿನ ಸಂಪಾದನೆ, ನಡೆ-ನುಡಿ ಸಿದ್ಧಾಂತದ ಪ್ರತಿಪಾದನೆ, ಜಾತಿ, ವರ್ಣ, ಕಾಯಕ ಭೇದವಿಲ್ಲದ ಅನುಪಮ ಅನುಭವ ಮಂಟಪ. ಒಂದು ಮಹಾ ಪರಿವರ್ತನೆಯ ತಂಗಾಳಿಯ ಸಿಂಚನವಾಗಿದ್ದು ಅನುಭವ ಮಂಟಪದ ಮೂಲಕವೇ. ಹಾಗಾಗಿ ಇಂಥ ಸಾಮಾಜಿಕ ಪರಿವರ್ತನೆಯಲ್ಲಿ ಮೂಂಚೂಣಿಯಲ್ಲಿದ್ದವರು ಚನ್ನಬಸವಣ್ಣನವರು. ಚನ್ನಬಸವಣ್ಣನವರ ಆಧ್ಯಾತ್ಮಿಕ ಬದುಕಿನಲ್ಲಿ ಕಲ್ಯಾಣದ ಮಹಾಮನೆ ಮತ್ತು ಅನುಭವ ಮಂಟಪ ಅತ್ಯಂತ ಶ್ರೇಷ್ಠ ಕೊಡುಗೆಯನ್ನು ನೀಡಿದೆ. ಅನುಭವ ಮಂಟಪದ ಅಸ್ತಿತ್ವದ ಉಲ್ಲೇಖವಿರುವ ಶರಣೆ ನೀಲಾಂಬಿಕೆಯವರ ಒಂದು ವಚನ ಅತ್ಯಂತ ಸ್ಪಷ್ಟ ನಿರೂಪಣೆ ಮಾಡುತ್ತದೆ.

ಬಸವಣ್ಣನವರ ವಿಚಾರಪತ್ನಿಯಾದ ಶರಣೆ ನೀಲಾಂಬಿಕೆಯವರು ಅನುಭವ ಮಂಟಪವನ್ನು ಸ್ಥಾಪಿಸಿದ್ದರು ಮತ್ತು ಅಲ್ಲಿ 770 ಅಮರ ಗಣಂಗಳು ಅನುಭಾವಿಗಳಾಗಿ ನೆಲೆ ನಿಂತಿದ್ದರು ಎಂದು ಈ ವಚನದಲ್ಲಿ ನಿರೂಪಣೆ ಮಾಡಿದ್ದಾರೆ.

ಅನುಭವ ಮಂಟಪದ ಎಲ್ಲ ಪ್ರಮುಖ ಹಾಗೂ ಮಹತ್ವದ ಸನ್ನಿವೇಶಗಳಲ್ಲಿ ಚನ್ನಬಸವಣ್ಣನವರ ಉಲ್ಲೇಖ ಬರುತ್ತದೆ. ಅನುಭವ ಮಂಟಪದ ನಿಯಂತ್ರಕ ಶಕ್ತಿಯಾಗಿ ಚನ್ನಬಸವಣ್ಣವರು ಕೆಲಸ ಮಾಡುತ್ತಾರೆ. ಇದು ಅವರ ಬೌದ್ಧಿಕ ಪ್ರಖರತೆ, ವೈಚಾರಿಕ ನಿಲುವು, ಆಧ್ಯಾತ್ಮ ಶಕ್ತಿಗೆ ಸಾಕ್ಷೀಭೂತವಾಗಿ ನಿಲ್ಲುತ್ತದೆ. ವಯಸ್ಸಿನಲ್ಲಿ ಕಿರಿಯರಾದರೂ ಶಾಸ್ತ್ರಜ್ಞಾನದಲ್ಲಿ ಎಲ್ಲರಿಗಿಂತ ಮುಂದಿದ್ದರು ಎನ್ನುವುದನ್ನು ಹಲವಾರು ಶರಣರು ತಮ್ಮ ವಚನಗಳಲ್ಲಿ ನಿರೂಪಣೆ ಮಾಡಿದ್ದಾರೆ, ಬಸವಣ್ಣನವರು ಮತ್ತು ಅಲ್ಲಮ ಪ್ರಭುಗಳಿಗಿಂತ ಹೆಚ್ಚು ಅನುಭವ ಮಂಟಪದಲ್ಲಿ ಕಾಲ ಕಳೆದಿದ್ದರು. ಒಂದು ಕಡೆ ಬಸವಣ್ಣನವರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರೆ ಇನ್ನೊಂದಡೆ ಅಲ್ಲಮ ಪ್ರಭುಗಳ 12 ವರ್ಷಗಳ ಅನುಪಸ್ಥಿತಿಯಿಂದಾಗಿ ಸರಿ ಸುಮಾರು 12 ವರ್ಷಗಳ ಕಾಲ ಅನುಭವ ಮಂಟಪವನ್ನು ಮುನ್ನಡೆಸಿದ್ದರು.

ಅನುಭವ ಮಂಟಪದಲ್ಲಿ ಶಾಸ್ತ್ರ, ಶಿವಾಚಾರಗಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಿದ್ದರು. ಷಟಸ್ಥಲ, ಪಂಚಾಚಾರ, ಅಷ್ಟಾವರಣಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಕಟ್ಟುನಿಟ್ಟಾಗಿ ಆದೇಶ ನೀಡುತ್ತಿದ್ದರು. ಅಲ್ಲಮ ಪ್ರಭುಗಳು ಸಿದ್ಧರಾಮೇಶ್ವರರ ಇಷ್ಟಲಿಂಗ ಧಾರಣೆಯಾಗದಿದ್ದರೂ ಮಾನಸಿಕವಾಗಿ ಲಿಂಗಾಂಗಿ ಎಂದು ಪ್ರಕಟ ಮಾಡುತ್ತಾರೆ.

ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?
ಬೇಟದ ಮರುಳಗೆ ಲಜ್ಜೆ ಮುನ್ನುಂಟೆ?
ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ?
ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ?
ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-138/ವಚನ ಸಂಖ್ಯೆ-425)

ಇದನ್ನು ಪ್ರಶ್ನೆ ಮಾಡತಾರೆ ಚನ್ನಬಸವಣ್ಣನವರು

ಆಕಾಶದಲ್ಲಾಡುವ ಪಟಕ್ಕಾದಡೆಯೂ
ಮೂಲಸೂತ್ರವಿರಬೇಕು.
ಕಲಿಯಾದಡೆಯೂ ಕಜ್ಜವಿಲ್ಲದೆ ಆಗದು.
ಭೂಮಿಯಿಲ್ಲದೆ ಬಂಡಿ ನಡೆವುದೆ?
ಅಂಗಕ್ಕೆ ಲಿಂಗವಿಲ್ಲದೆ ನಿಸ್ಸಂಗವಾಗಬಾರದು.
ಕೂಡಲಚೆನ್ನಸಂಗಮದೇವರಲ್ಲಿ ಸಂಗವಿಲ್ಲದೆ
ನಿಸ್ಸಂಗಿಯೆಂದು ನುಡಿಯಬಹುದೆ ಪ್ರಭುವೆ?
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-419/ವಚನ ಸಂಖ್ಯೆ-990)

ಲಿಂಗತತ್ವದ ಮಹಿಮೆಯನ್ನು ಈ ಮೂಲಕ ಅಲ್ಲಮ ಪ್ರಭುಗಳಿಗೂ ಮನವರಿಕೆ ಮಾಡಿಕೊಡುತ್ತಾರೆ ಚನ್ನಬಸವಣ್ಣನವರು. ಇದಕ್ಕೆ ಸಮ್ಮತಿಸುವಂತೆ ಸಿದ್ಧರಾಮೇಶ್ವರರ ಈ ವಚನ ಸುಂದರವಾಗಿ ಮೂಡಿಬಂದಿದೆ.

ಶುದ್ಧವನರಿದೆ ಚನ್ನಬಸವಣ್ಣಾ ನಿಮ್ಮಿಂದೆ;
ಸಿದ್ಧವನರಿದೆ ಚನ್ನಬಸವಣ್ಣಾ ನಿಮ್ಮಿಂದೆ;
ಪ್ರಸಿದ್ಧವನರಿದೆ ಚನ್ನಬಸವಣ್ಣಾ ನಿಮ್ಮಂದೆ;
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಚೆನ್ನಬಸವಣ್ಣ ಗುರುವಾಗಿ ಬಂದು,
ಎನ್ನ ಜನ್ಮಕರ್ಮವ ನಿವೃತ್ತಿ ಮಾಡಿದನಯ್ಯಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-399/ವಚನ ಸಂಖ್ಯೆ-1275)

ಅನುಭವ ಮಂಟಪದಲ್ಲಿ ವೈರಾಗ್ಯನಿಧಿ ಅಕ್ಕಮಹಾದೇವಿಯವರ ಹಾಗೂ ಅಲ್ಲಮ ಪ್ರಭುಗಳ ನಡುವೆ ನಡೆದ ಸಂವಾದ ವಚನ ಸಾಹಿತ್ಯದಲ್ಲಿ ಕಂಡುಬರುವ ಅತ್ಯಂತ ಶ್ರೇಷ್ಠ ಸಂವಾದ. ಇದನ್ನು ಅರಿತಂಥ ಚನ್ನಬಸವಣ್ಣನವರು ಅಕ್ಕಮಹಾದೇವಿಯರ ವ್ಯಕ್ತಿತ್ವವನ್ನು ಗುರುತಿಸಿದ್ದಾರೆ. ಅವರು ರಚಿಸಿದ ವಚನಗಳು ಅತ್ಯಂತ ಶ್ರೇಷ್ಠಮಟ್ಟದ್ದವು ಎನ್ನುವುದನ್ನು ಚೆನ್ನಬಸವಣ್ಣನವರ ಈ ವಚನ ನಿರೂಪಿಸುತ್ತದೆ.

ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ,
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ,
ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಅಯ್ದು ವಚನ,
ಅಜಗಣ್ಣನ ಅಯ್ದು ವಚನಕ್ಕೆ ಕೂಡಲಚೆನ್ನಸಂಗಮದೇವಾ
ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-91/ವಚನ ಸಂಖ್ಯೆ-225)

ಅವಿರಳಜ್ಞಾನಿ ಚೆನ್ನಬಸವಣ್ಣನವರ ಈ ವಚನ ಅಕ್ಕಮಹಾದೇವಿಯವರ ಬೌದ್ಧಿಕ ಪ್ರಭುದ್ಧತೆಗೆ ಹಿಡಿದ ಕನ್ನಡಿ ಎನ್ನಬಹುದು. ಅದ್ಭುತ ಹಾಗು ಶ್ರೇಷ್ಠ ಮಟ್ಟದ ವಚನಗಳನ್ನು ಅಕ್ಕಮಹಾದೇವಿಯವರು ನಮಗೆ ನೀಡಿದ್ದಾರೆ.  ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಪ್ರಖರ ಜ್ಞಾನ ಸಂಪಾದನೆ ಮತ್ತು ಆದ್ಯಾತ್ಮ ಲೋಕದಲ್ಲಿ ಉನ್ನತ ಸಾಧನೆ ಮಾಡಿದ್ದವರು ಅಕ್ಕಮಹಾದೇವಿ. ಚನ್ನಬಸವಣ್ಣನವರ ಇನ್ನೊಂದು ವಚನ ಅಕ್ಕಮಹಾದೇವಿಯವರ ಶ್ರೇಷ್ಠತೆ ಮತ್ತು ಜ್ಯೇಷ್ಠತೆಯನ್ನು ತಿಳಿಸುತ್ತದೆ.

ಅಜಕೋಟಿ ಕಲ್ಪ ವರುಷದವರೆಲ್ಲರು ಹಿರಿಯರೆ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರು ಹಿರಿಯರೆ?
ನಡುಮುರಿದು ಗುಡುಗೂರಿ ತಲೆ ನಡುಗಿ
ನೆರೆತೆರೆ ಹೆಚ್ಚಿ ಮತಿಗೆಟ್ಟು
ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರು ಹಿರಿಯರೆ?
ಅನುವನರಿದು, ಘನವ ಬೆರಸಿ ಹಿರಿದು
ಕಿರಿದೆಂಬ ಭೇದವ ಮರೆದು,
ಕೂಡಲಚೆನ್ನಸಂಗಯ್ಯನಲ್ಲಿ ಬೆರಸಿ
ಬೇರಿಲ್ಲದಿಪ್ಪ ಹಿರಿಯತನ
ನಮ್ಮ ಮಹಾದೇವಿಯಕ್ಕಂಗಾಯಿತ್ತು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-372/ವಚನ ಸಂಖ್ಯೆ-921)

ಅಕ್ಕಮಹಾದೇವಿಯವರ ಭಕ್ತಿ, ಸಾಧನೆ ಮತ್ತು ಅವರ ವಚನಗಳಲ್ಲಿರುವ ಸತ್ವಗಳನ್ನು ನೆನೆನು ಕೊಂಡಾಡಿದ್ದಾರೆ. ಈ ರೀತಿಯಾಗಿ ಅನುಭವ ಮಂಟಪದಲ್ಲಿ ಚನ್ನಬಸವಣ್ಣನವರು ಒಂದು ಒರೆಗಲ್ಲಾಗಿ ಕಾರ್ಯನಿರ್ವಹಿಸಿದ್ದನ್ನು ನಾವು ಗಮನಿಸಬೇಕು.

ಇಷ್ಟೆಲ್ಲಾ ಇದ್ದರೂ ಕೂಡ ಬಸವಣ್ಣನವರನ್ನು ಪಡೆದದ್ದು ನನ್ನ ಬದುಕಿನ ಅತ್ಯಂತ ಶ್ರೇಷ್ಠ ಸಂಗತಿ ಎನ್ನುವುದನ್ನು ಚನ್ನಬಸವಣ್ಣನವರು ತಮ್ಮ ಈ ವಚನದಲ್ಲಿ ನಿರೂಪಣೆ ಮಾಡುತ್ತಾರೆ.

ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ನಿಧಾನ ದೊರಕಿತ್ತೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ಪರುಷ ದೊರಕಿತ್ತೆನಗೆ.
ಚೆನ್ನಸಂಗಾ ನಿಮ್ಮಲ್ಲಿ ಬಯಸಿ ಬೇಡುವಡೆ
ಬಸವನಂತಪ್ಪ ಕಾಮಧೇನು ದೊರೆಯಿತ್ತೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ಸುರತರು ದೊರಕಿತ್ತೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ತ್ರಿವಿಧ ತ್ರಿವಿಧ[ದ] ಮೊದಲನೆ ತೋರಿದ ಬಸವಣ್ಣನೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವಣ್ಣನಿಂದ ನೀವಾದಿರಾಗಿ,
ಕೂಡಲಚೆನ್ನಸಂಗಯ್ಯನಲ್ಲಿ
ಪ್ರಸಾದಿಯ ಪ್ರಸಾದಿಯಾದೆನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-573/ವಚನ ಸಂಖ್ಯೆ-1238)

ನಾನು ಬಸವಣ್ಣನವರ ಕರುಣದ ಶಿಶುವೆಂದು, ಸಾಂಪ್ರದಾಯಿಕ ಕಂದನೆಂದೂ ಚನ್ನಬಸವಣ್ಣನವರು ನೆನೆಯುತ್ತಾರೆ. ತಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸುವ ಚಿತ್ರಣವನ್ನೂ ಕೂಡ ತಮ್ಮ ವಚನದಲ್ಲಿ ನಿರೂಪಣೆ ಮಾಡುತ್ತಾರೆ.

ಅಜ್ಞಾನವೆಂಬ ಕಾಳಿಕೆವಿಡಿದ
ಮನದ ಮೋಹವ ಪರಿಹರಿಸಿದ ಪರಿಯ ನೋಡಿರೆ!
ಒಮ್ಮೆ ಕಾಸಿ ಒಮ್ಮೆ ಕರಗಿಸಿ ಒಮ್ಮೆ ಬಣ್ಣವಿಟ್ಟು
ಎನ್ನ ಮನದ ಮೋಹವ ಕಳೆದೆನಯ್ಯಾ,
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಬಸವಣ್ಣನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-374/ವಚನ ಸಂಖ್ಯೆ-923)

ಹೀಗೆ ಬಸವಾದಿ ಪ್ರಮಥರ ಕಾರುಣ್ಯದ ಶಿಶುವಾಗಿ ಬೆಳೆದ ಚನ್ನಬಸವಣ್ಣನವರು ತಮ್ಮ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಂಡರು. ಪರಿಪೂರ್ಣತ್ವವನ್ನು ಸಾಧಿಸಿ ನಿರವಲಯ ನಿಲುವಿನಲ್ಲಿ ನಿಂದರು. ಒಡಲುಗೊಂಡೂ ಒಡಲುವಿಡಿಯದೇ ನಿಜದೊಡಲು ಬೆರೆಸಿದರು. ಹೀಗೆ ಗುರುಕಾರುಣ್ಯವನ್ನು ಪಡೆದ ಚನ್ನಬಸವಣ್ಣನವರನ್ನು ಭಕ್ತಿ ಭಾವದಿಂದ ಹಲವಾರು ಶರಣರು ಸ್ಮರಣೆ ಮಾಡಿದ್ದಾರೆ.

ಶಿವಯೋಗಿ ಸಿದ್ಧರಾಮೇಶ್ವರ;
ಕ್ರಿಯೆಯದು ಚೆನ್ನಬಸವಣ್ಣ ಎಡಪಾದ,
ಜ್ಞಾನವದು ಚೆನ್ನಬಸವಣ್ಣನ ಬಲಪಾದ,
ನಾನವರ ಚಮ್ಮಾವುಗೆ,
ನೀನವರ ಮನೆದಾಸ, ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-512/ವಚನ ಸಂಖ್ಯೆ-1654)

ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಬಂದ ಗುರು ಚೆನ್ನಬಸವಣ್ಣ.
ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಬಂದ ಗುರು ಚೆನ್ನಬಸವಣ್ಣ.
ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಬಂದ ಗುರು ಚೆನ್ನಬಸವಣ್ಣ.
ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಬಂದ ಗುರು ಚೆನ್ನಬಸವಣ್ಣ.
ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಬಂದ ಗುರು ಚೆನ್ನಬಸವಣ್ಣ.
ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಬಂದ ಗುರು ಚೆನ್ನಬಸವಣ್ಣ.
ಎನ್ನ ಸ್ಥೂಲದೇಹದಲ್ಲಿ ಇಷ್ಟಲಿಂಗವಾಗಿ ಬಂದ ಗುರು ಚೆನ್ನಬಸವಣ್ಣ.
ಎನ್ನ ಸೂಕ್ಷ್ಮದೇಹದಲ್ಲಿ ಪ್ರಾಣಲಿಂಗವಾಗಿ ಬಂದ ಗುರು ಚೆನ್ನಬಸವಣ್ಣ.
ಎನ್ನ ಕಾರಣದೇಹದಲ್ಲಿ ಭಾವಲಿಂಗವಾಗಿ ಬಂದ ಗುರು
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-567/ವಚನ ಸಂಖ್ಯೆ-1818)

ಬಸವಣ್ಣನವರು ಚನ್ನಬಸವಣ್ಣನವರನ್ನು ಅಪಾರ ಗೌರವದಿಂದ ಕಂಡವರು.
ಬೆಳಗಿನೊಳಗಣ ಬೆಳಗು ಮಹಾಬೆಳಗೆಂಬ
ಪ್ರಸಾದದಲ್ಲಿ ಒದಗಿದ ಪ್ರಸಾದಿಯ ಪರಿಣಾಮದ
ಪರಮಾನಂದವನೇನೆಂದುಪಮಿಸುವೆನಯ್ಯಾ
ಪರಮಾಶ್ರಯವೇ ತಾನಾಗಿ,
ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣನೆಂಬ ಮಹಾಪ್ರಸಾದಿ
ಎನ್ನ ವಾಙ್ನನಕ್ಕಗೋಚರನಾ[ಗೆ], ನಾನೇನೆಂಬೆನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-270/ವಚನ ಸಂಖ್ಯೆ-945)

ಮಡಿವಾಳ ಮಾಚಿದೇವರ ವಚನ ಚನ್ನಬಸವಣ್ಣನವರ ದಿವ್ಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎನ್ನಬಹುದು.
ಅಹುದಹುದು ಇಂತಿರಬೇಡವೆ ನಿರಹಂಕಾರ.
ಮಹಾಜ್ಞಾನಕ್ಕೆ ನಿರಹಂಕಾರವೆ ಶೃಂಗಾರ.
ನಿರಹಂಕಾರಕ್ಕೆ ಭಕ್ತಿಯೆ ಶೃಂಗಾರ.
ಭಕ್ತಿಗೆ ಬಸವಣ್ಣನೆ ಶೃಂಗಾರ.
ಬಸವಣ್ಣಂಗೆ ಚೆನ್ನಬಸವಣ್ಣನೆ ಶೃಂಗಾರ.
ಕಲಿದೇವರದೇವಾ,
ಎನಗೆಯೂ ನಿನಗೆಯೂ ಚೆನ್ನಬಸವಣ್ಣನೆ ಶೃಂಗಾರ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-201/ವಚನ ಸಂಖ್ಯೆ-486)

ಅಲ್ಲಮ ಪ್ರಭುಗಳು:
ಬೆಳಗುವ ಜ್ಯೋತಿಯ ತಿರುಳಿನಂತೆ ಹೊಳೆವ ಕಂಗಳ ಕಾಂತಿ,
ಒಳಹೊರಗೆನ್ನದೆ ಅಳವಟ್ಟ ಶಿವಯೋಗಿಯ ಕಂಡೆ ನೋಡಾ!
ನಿಜ ಉಂಡ ನಿರ್ಮಲದ ಘನವ ಕಂಡು ಬೆರಗಾದೆ ನಾನು,
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನಿಂದ ಆನು ಬದುಕಿದೆನು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-523/ವಚನ ಸಂಖ್ಯೆ-1384)

ಕಲ್ಯಾಣ ಕ್ರಾಂತಿಯಲ್ಲಿ ಚನ್ನಬಸವಣ್ಣನವರ ಪಾತ್ರ:
12 ನೇಯ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಸಾಮಾಜಿಕ ಸಮಾನತೆಯ ಕ್ರಾಂತಿ ಮನುಕುಲದ ಇತಿಹಾಸದಲ್ಲಿಯೇ ವಿಶಿಷ್ಠವಾದ ಕ್ರಾಂತಿ. ಈ ಸಂದರ್ಭ ನೆನಪ ಆದ ಕೂಡಲೇ ಮತ್ತೆ ಮತ್ತೆ ನನಗೆ ನೆನಪಾಗೋದು ಗಿರೀಶ ಕಾರ್ನಾಡ್‌ ಅವರ ಒಂದು ಮಾತು. ತುಂಬಾ ಜನಜನಿತವಾದ ಮಾತು. ಬಹಳ ಜನ ಹೇಳತಾರೆ. ನಾನಂತೂ ಅದನ್ನು ಮತ್ತೆ ಮತ್ತೆ ಹೇಳತೇನೆ. ಯಾಕಂದರೆ ಆ ಮಾತಿಗೆ ಸಾರ್ವಕಾಲಿಕ ಪ್ರಸ್ತುತತೆ ಇದೆ ಅನ್ನುವ ಅರ್ಥದಲ್ಲಿ. ಅವರು ತಮ್ಮ ತಲೆದಂಡ ನಾಟಕದ ಲೇಖಕರ ನುಡಿಯಲ್ಲಿ ಹೇಳತಾರೆ.

“ನೋಯುವ ಹಲ್ಲಿಗೆ ನಾಲಗೆ ಮತ್ತೆ ಮತ್ತೆ ಹೊರಳುವಂತೆ ಪ್ರತಿಯೊಬ್ಬ ಕನ್ನಡಿಗ ಮತ್ತೆ ಮತ್ತೆ 12 ನೇ ಶತಮಾನದ ಬೆರಗುಗೊಳಿಸುವ ಪ್ರತಿಭೆಗೆ, ಆ ಉತ್ಸಾಹಕ್ಕೆ, ಮೌಲಿಕ ಪ್ರಶ್ನೆಗಳನ್ನು ಕೇಳುವೆದೆಗಾರಿಕೆಗೆ, ಗೆಲುವಿಗೆ, ನೋವಿಗೆ ಮರಳುವದು ಮತ್ತು ಅದನ್ನು ಹೊಸ ಸಂದರ್ಭದಲ್ಲಿ ಅರ್ಥೈಸಲು ಯತ್ನಿಸುವುದು ಅನಿವಾರ್ಯ”. 

ಯಾವಾಗ್ಯಾವಾಗ ನಮ್ಮ ಮನಸ್ಸಿಗೆ ನೋವಾಗತದೆಯೋ, ಇಲ್ಲಿ ಹಲ್ಲನ್ನು ಪ್ರಾತಿನಿಧಿಕವಾಗಿ ಹೇಳತಾರೆ ಒಂದು ರೂಪಕದ ಅರ್ಥದಲ್ಲಿ. ಈ ಹಲ್ಲು ನೋವಾಗತಿದ್ದಂಗೆ ನಮಗೆ ಗೊತ್ತಿಲ್ಲದಂಗೆ ಅಪ್ರಜ್ಞಾಪೂರ್ವಕವಾಗಿ ನಮ್ಮ ನಾಲಿಗೆ ಹಲ್ಲಿನ ಹತ್ತಿರ ಹೋಗಿ ಅಪ್ಪ ನಾನಿದ್ದೀನಿ ನಿನ್ನ ಜೊತೆಗೆ ನಾನು ನಿನ್ನ ನೋವನ್ನು ಮಾಯಿಸತೇನೆ ಅಂತ ಹೇಳಿ ಅದರ ಹತ್ತಿರ ಹೋಗಿ ಒಂದಿಷ್ಟು ಸಾಂತ್ವನ ಹೇಳತದಲ್ಲಾ ಹಾಗೆ ವಚನ ಸಾಹಿತ್ಯ, ವಚನ ಕ್ರಾಂತಿ ಅನ್ನೋದು, ಶರಣರ ಮಾತುಗಳೆಲ್ಲವೂ ಯಾವ ಸಂದರ್ಭದಲ್ಲಿ ನಮ್ಮ ಮನಸ್ಸುಗಳಿಗೆ, ನಮ್ಮ ಸಮಾಜಕ್ಕೆ ನೋವಾಗತದೆ ಅಂಥ ಸಂದರ್ಭದಲ್ಲಿ ಆ ವಚನಗಳು ಒಂದು ರೀತಿಯ ಮುಲಾಮಿನ ರೀತಿಯಲ್ಲಿ ಕೆಲಸ ಮಾಡತಾವೆ. ಮಾರ್ಗ ತೋರಿಸತಾವೆ. ಮಾಯಿಸಲಿಕ್ಕೆ ಅಷ್ಟೇ ಅಲ್ಲಾ ಮುಂದಿನ ಮುಂಗಾಣಿಕೆಯನ್ನೂ ಕೊಡಲಿಕ್ಕೆ ಅನ್ನೋ ಅರ್ಥದಲ್ಲಿ ಈ ಮಾತನ್ನು ಗಮನಿಸಬೇಕು.

12 ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಕ್ರಾಂತಿ ಇದೆಯಲ್ಲಾ ಅದಕ್ಕೆ ಸಾರ್ವಕಾಲಿಕ ಮಹತ್ವ ಇದೆ ಅನ್ನೋದನ್ನ ಈ ಹಿನ್ನೆಲೆಯಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು. ಇಷ್ಟು ಅನಿವಾರ್ಯತೆ ಇದೆಯಲ್ಲಾ ಬಸವಣ್ಣನ ವಚನಗಳಲ್ಲಿ ಅಥವಾ ಬಸವಣ್ಣನವರ ಜೊತೆಗಿದ್ದಂಥಾ ಇತರ ವಚನಕಾರರ ಎಲ್ಲ ವಚನಗಳಿಗೂ ಸಾರ್ವಕಾಲಿಕ ಮಹತ್ವ ಇರೋದೇ ಆ ಹಿನ್ನೆಲೆಯಲ್ಲಿ. ನಮಗೆ ನೋವಾದಾಗ ಅಂಥಾ ವಚನಗಳು ನಮಗೆ ಆ ನೋವನ್ನು ಮಾಯಿಸುವಂಥ ಶಕ್ತಿ ಪಡೆದಿದಾವೆ.

ಇದೆಲ್ಲ ನಡೆದದ್ದು ಕೇವಲ 12 ವರ್ಷಗಳ ಅಲ್ಪಾವಧಿಯಲ್ಲಿ. ಅಷ್ಟರಲ್ಲಿ ಪುರೋಹಿತಶಾಹಿ ವರ್ಗದ ಕುತಂತ್ರದಿಂದ ಶರಣರ ವಿರುದ್ಧ ರಾಜನಲ್ಲಿಗೆ ದೂರು ಹೋಯಿತು. ಶರಣರು ನ್ಯಾಯ ನಿಷ್ಠುರಿಗಳು. ಯಾರಿಗೂ ಅಂಜದ ಧೀರರು. ಹೀಗಾಗಿ ಪ್ರಭುತ್ವವನ್ನು ಎದುರು ಹಾಕಿಕೊಳ್ಳುವ ಪ್ರಸಂಗ ಬಂದಿತು. ಇದರಿಂದ ಶರಣರಿಗೆ ಹಿಂಸೆ ಕೊಡಲು ಪ್ರಾರಂಭಿಸಿದರು. ಸಿಕ್ಕ ಸಿಕ್ಕ ಶರಣರ ಮೇಲೆ ಹಲ್ಲೆ ಮಾಡಲಾಯಿತು. ವಚನ ಕಟ್ಟುಗಳನ್ನು ಸುಡಲಾಯಿತು. ಪುರೋಹಿತಶಾಹಿ ವರ್ಗ ಮತ್ತು ರಾಜ ಪ್ರಭುತ್ವ ಕೂಡಿ ಶರಣ ಸಂಸ್ಕೃತಿಯನ್ನೇ ನಿರ್ನಾಮ ಮಾಡಬೇಕೆಂದು ಪ್ರಯತ್ನಿಸಿದವು. ಆಗ ಉಳಿದ ಶರಣರು ಅನೇಕ ತಂಡಗಳನ್ನು ಮಾಡಿಕೊಂಡು, ವಚನ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ತಮಗೆ ತಿಳಿದಲ್ಲಿಗೆ ಹೋದರು. ಈ ವಿಷಯವನ್ನು ತುರಗಾಹಿ ರಾಮಣ್ಣ ಎಂಬ ವಚನಕಾರ ಸ್ಪಷ್ಟವಾಗಿ ಹೇಳುತ್ತಾನೆ. ಆತನು ಬಸವಣ್ಣನವರ ಸಮಕಾಲೀನನು. ಕಲ್ಯಾಣದ ನರಹತ್ಯೆಯನ್ನು ಕಣ್ಣಾರೆ ಕಂಡವನು ಅಂತ ಈ ವಚನದ ಮೂಲಕ ನಾವು ಕಂಡುಕೊಳ್ಳಬಹುದು. ಐತಿಹಾಸಿಕವಾಗಿ ಈ ವಚನ ಪ್ರಮುಖವಾದದ್ದು. ಕಲ್ಯಾಣದ ಕ್ರಾಂತಿಯ ನಂತರ ಯಾರು ಯಾರು ಯಾವ ಯಾವ ಕಡೆಗೆ ಹೋದರು ಎಂಬುದು ತಿಳಿದು ಬರುತ್ತದೆ.

ಬಂದಿತ್ತು ದಿನ ಬಸವಣ್ಣ ಕಲ್ಲಿಗೆ
ಚೆನ್ನ ಬಸವಣ್ಣ ಉಳುವೆಯಲ್ಲಿಗೆ
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ
ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ
ಅಡಗಿಹರೆಲ್ಲರು ಅಡಗಿದುದ ಕೇಳಿ ನಾ
ಗೋಪತಿನಾಥ ವಿಶ್ವೇಶ್ವರ ಲಿಂಗದಲ್ಲಿಯೆ ಉಡುಗುವೆನು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-349/ವಚನ ಸಂಖ್ಯೆ-1026)

ಬಹಳ ಪ್ರಮುಖವಾಗಿ ಗಮನಿಸಬೇಕಾದದ್ದು ತುರಗಾಹಿ ರಾಮಣ್ಣನವರು “ಬಸವಣ್ಣ ಕಲ್ಲಿಗ” ಅಂತ ಹೇಳತಾನೆ. ಅಂದರೆ ಕಲ್ಲು ಮತ್ತು ಪಡಿ ಸೇರಿ ಕಪ್ಪಡಿ ಆಯತೆಂದು ಕಪ್ಪಡಿಗೆ ಹೋಗಿರಬೇಕು ಎನ್ನುವುದು ನಮ್ಮೆಲ್ಲರ ಸಾಮಾನ್ಯ ತಿಳುವಳಿಕೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ. ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷಕ್ಕೆ ಅಂದರೆ ಎಲ್ಲೆಲ್ಲಿಯೋ ಹೋದರು ಅನ್ನುವ ಅರ್ಥದಲ್ಲಿ ನಾವು ಈ ಸಾಲನ್ನು ಪರಿಭಾವಿಸಬೇಕಾಗಿದೆ.

ಇನ್ನು ಮೋಳಿಗೆ ಮಾರಯ್ಯನವರೂ ಕೂಡ ಶರಣರು ಚದುರಿ ಹೋದದ್ದನ್ನು ತಮ್ಮ ಒಂದು ವಚನದಲ್ಲಿ ನಿರೂಪಣೆ ಮಾಡಿದ್ದಾರೆ.

ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ.
ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ,
ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ
ತಮ್ಮ ತಮ್ಮ ಲಕ್ಷಭಾವಕ್ಕೆ ಮುಕ್ತಿಯನೆಯ್ದಿಹರು.
ನನಗೊಂದು ಬಟ್ಟೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-580/ವಚನ ಸಂಖ್ಯೆ-1569)

ಚೆನ್ನಬಸವಣ್ಣ ಮತ್ತು ಅಕ್ಕನಾಗಮ್ಮನವರ ನೇತೃತ್ವದಲ್ಲಿ ಕಲ್ಯಾಣದಿಂದ ಉಳವಿಗೆ ಬಂದ ಒಂದು ಶರಣರ ತಂಡ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಹಾದು ಹೋದ ಹೆಜ್ಜೆ ಗುರುತುಗಳನ್ನು ಇಂದಿಗೂ ಗುರುತಿಸಬಹುದು. ಕಲ್ಯಾಣದಿಂದ ಉಳವಿಗೆ ಹೋದ ದಾರಿಯನ್ನು ಡಾ. ಆರ್. ಸಿ. ಹಿರೇಮಠ, ಡಾ. ಎಚ್. ತಿಪ್ಪೇರುದ್ರಸ್ವಾಮಿ ಮೊದಲಾದವರು ಗುರುತಿಸಿದ್ದಾರೆ. ಸೋದೆಯ ಸದಾಶಿವರಾಯರು ಬರೆದ “ಉಳವಿ ಮಹಾತ್ಮೆ” ಎಂಬ ಕೃತಿಯು ಈ ಹೆಜ್ಜೆ ಗುರುತುಗಳನ್ನು ಸ್ಪಷ್ಟಪಡಿಸುತ್ತದೆ.

ಕಲಬುರ್ಗಿಯ ಡಾ. ವೀರಣ್ಣ ದಂಡೆ ಅವರು “12 ನೇ ಶತಮಾನದ ಶರಣ ಸ್ಮಾರಕಗಳು” ಎಂಬ ಸಂಶೋಧನಾತ್ಮಕ ಕೃತಿಯನ್ನು ಬಸವ ಸಮೀತಿಯ ಮೂಲಕ ಪ್ರಕಟಿಸಿದರು. ನಂತರ ಡಾ. ಬಸವರಾಜ ಮಲಶೆಟ್ಟಿ ಅವರು ಕ್ಷೇತ್ರ ಕಾರ್ಯ ಮಾಡಲು ಆಲೋಚಿಸಿ ದಿನಾಂಕ 16.03.2015 ರಂದು ಬೆಳಗಾವಿ ಜಿಲ್ಲೆಯ ಶರಣ ಕ್ಷೇತ್ರಗಳ ಕ್ಷೇತ್ರ ಕಾರ್ಯ ಸಂಶೋಧನೆಗೆ ಪ್ರಾರಂಭ ಮಾಡಿದರು. ಇದರ ಫಲವಾಗಿ “12 ನೆಯ ಶತಮಾನದ ಶರಣ ಕ್ಷೇತ್ರಗಳು” ಎಂಬ ಪುಸ್ತಕವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಇವರ ಮೂಲಕ ಪ್ರಕಟಿಸಿದರು. 

ಪ್ರಮುಖವಾಗಿ ಬೆಳಗಾವಿ ಜಿಲ್ಲೆಯಲ್ಲಿ ಚನ್ನಬಸವಣ್ಣನವರ ನೇತೃತ್ವದಲ್ಲಿ ಶಿವಶರಣರು ಹಾದು ಹೋದ ಉಲ್ಲೇಖ ನಮಗೆ ಸಿಗುತ್ತದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ಚನ್ನಬಸವಣ್ಣನವರು ಶರಣ ರೇಚಣ್ಣನವರಿಗೆ ಇಲ್ಲಿಯೇ ಉಳಿದುಕೊಳ್ಳಲು ಸೂಚಿಸಿದರು. ಚನ್ನಬಸವಣ್ಣನವರ ಆಶಯದಂತೆ ರೇಚಣ್ಣ ಶರಣರು ಅಂಕಲಗಿಯನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು ಎಂದು ತಿಳಿದು ಬರುತ್ತದೆ.

ರಾಮದುರ್ಗ ತಾಲೂಕಿನ ಗೊಡಚಿಯಲ್ಲಿ ವೀರಭದ್ರನೆಂಬ ಮೂರ್ತಿ ನಿಸ್ಸಂದೇಹವಾಗಿ ಶರಣ ಮಡಿವಾಳ ಮಾಚಿದೇವರದೆಂದು ಡಾ. ಆರ್. ಸಿ. ಹಿರೇಮಠ ಅವರು ಸಂಶೋಧನೆಯ ಮೂಲಕ ಪ್ರಮಾಣೀಕರಿಸುತ್ತಾರೆ. ಗೊಡಚಿ ಸಮೀಪದ ತೊರಗಲ್ಲಿನಲ್ಲಿ ಶರಣರು ತಂಗಿದ್ದರು ಎಂಬುದಕ್ಕೆ ಎರಡು ಚಿಕ್ಕ ಮಂಟಪಗಳು ಸಾಕ್ಷಿ ಒದಗಿಸುತ್ತವೆ.

ಶರಣರು ಉಳವಿಯತ್ತ ಸಾಗುವಾಗ ಮುರುಗೋಡ ಗ್ರಾಮದಲ್ಲಿ ತಂಗಿದ್ದರು. ಶರಣರ ಯುದ್ಧ ಇಲ್ಲಿಯೇ ಮುಕ್ತಾಯವಾದ ಸಂಕೇತ ಈ ಮುರುಗೋಡ ಗ್ರಾಮ. ಶರಣರ ಯುದ್ಧ ಮುರುಗಡೆಯಾದದ್ದೇ ಮುರುಗೋಡ ಎಂಬ ಸ್ಥಳನಾಮ ಬಂದ ಐತಿಹ್ಯವಿದೆ. ಶರಣರು ಉಳವಿಯ ಮಾರ್ಗದತ್ತ ಸಾಗಿದಾಗ ಮುರುಗೋಡು ಉಳವಿಯ ಹೆಬ್ಬಾಗಿಲು ಎಂದು ಭಾವಿಸಿದ ಒಂದು ಸ್ಮಾರಕ ಅಲ್ಲಿದೆ.

ಉಳವಿಯ ಹೆಬ್ಬಾಗಿಲು, ಶರಣರು ಇದ್ದ ಗವಿಗಳು, ಶರಣ ಕೂಗಿನ ಮಾರಿತಂದೆ ಸ್ಮಾರಕವಾಗಿರುವ ಮೂಲ ಕೂಗು ಬಸವನ ಶಿಲ್ಪ ಮತ್ತು ಸಮಾಧಿ, ಮಡಿವಾಳ ಮಾಚಿದೇವರ ಗದ್ದುಗೆ, ಬೊಮ್ಮಯ್ಯನ ಗದ್ದುಗೆ, ಸಿದ್ಧನಗವಿ, ಬಯಲ ಬಸವ ಹಾಗು ಹುಚ್ಚಯ್ಯ ಶರಣನ ಗುಡಿ, ಜಂಭುಲಿಂಗೇಶ್ವರ ಗುಡಿ, ಮಡಿವಾಳೇಶ್ವರ ಗುಡಿ, ಸಿದ್ಧಲಿಂಗೇಶ್ವರ ದೇವಾಲಯ ಮುಂತಾದ ಶರಣರ ಸ್ಮಾರಕಗಳು ಇಲ್ಲಿವೆ. ಗ್ರಾಮದ ಹೊರವಲಯದಲ್ಲಿ ಚನ್ನಬಸವಣ್ಣನವರ ದೇವಸ್ಥಾನವಿದೆ. ಅದರ ಬಯಲಿನಲ್ಲಿಯೇ ಯುದ್ಧವಾಯಿತೆಂದು ಜನ ಹೇಳುತ್ತಾರೆ. ಯುದ್ಧಮುಗಿದ ನಂತರ ತಮ್ಮ ಖಡ್ಗಗಳನ್ನು ಸಮೀಪದ ಕೆರೆಯಲ್ಲಿ ತೊಳೆದುಕೊಂಡರು. ಖಡ್ಗದ ರಕ್ತ ನೀರಿನಲ್ಲಿ ಕೂಡಿ ಇಡೀ ಕೆರೆ ಕೆಂಪಾಗಿ ಕಂಡಿತು. ರಕ್ತದಿಂದ ಕೆಂಪಾದ ಕೆರೆಯನ್ನು “ಕೆಂಗೆರಿ” ಎಂದು ಗುರುತಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾರೀಮನಿ ಗ್ರಾಮದಲ್ಲಿ ಮಡಿವಾಳ ಮಾಚಿದೇವರ ಗದ್ದುಗೆ ಇದೆ. ಮಾಚಿದೇವರು ಮುರುಗೋಡ ಯುದ್ಧದಲ್ಲಿ ಗಾಯಗೊಂಡು, ಇಲ್ಲಿ ಬಂದು ರಕ್ತವನ್ನು ಕಾರಿಕೊಂಡ ಕಾರಣಕ್ಕಾಗಿ “ಕಾರೀಮನಿ” ಎಂಬ ಎಂಬ ಸ್ಥಳನಾಮ ಬಂದಿತೆಂದು ಈ ಗ್ರಾಮದ ಜನರು ಹೇಳುತ್ತಾರೆ.

ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಚೆನ್ನಬಸವಣ್ಣನವರ ದೇವಸ್ಥಾನವಿದೆ. ಆ ದೇವಸ್ಥಾನದ ಪಕ್ಕದಲ್ಲಿ ದಾನಮ್ಮ ಎಂಬ ಸ್ಥಳೀಯ ಶರಣೆಯೊಬ್ಬಳ ಗದ್ದುಗೆ ಇದೆ. ಚನ್ನಬಸವಣ್ಣನವರು ಇಲ್ಲಿ ಉಳಿದುಕೊಂಡು ಲಿಂಗಪೂಜೆ ಮಾಡಿಕೊಂಡರೆಂದು ಪ್ರತೀತಿಯಿದೆ.

ತಿಗಡಿ ಗ್ರಾಮದಲ್ಲಿ ಚೆನ್ನಬಸವೇಶ್ವರ ದೇವಸ್ಥಾನ ಮತ್ತು ಕಲ್ಯಾಣಮ್ಮನ ದೇವಸ್ಥಾನಗಳಿವೆ. ಹರಳಯ್ಯನವರ ಪತ್ನಿ ಕಲ್ಯಾಣಮ್ಮನವರು ಇಲ್ಲಿಯೇ ಲಿಂಗೈಕ್ಯಳಾದರೆಂದು ಇಲ್ಲಿನ ಜನ ಹೇಳುತ್ತಾರೆ.

ಚನ್ನಮ್ಮನ ಕಿತ್ತೂರ ತಾಲೂಕಿನ ಮರಡಿ ನಾಗಲಾಪುರದಲ್ಲಿ ಚೆನ್ನಬಸವಣ್ಣನವರ ತಾಯಿ ಅಕ್ಕನಾಗಮ್ಮನವರ ದೇವಸ್ಥಾನವಿದೆ. ನಾಗಮ್ಮನ ಹೆಸರಿನ ಕಾರಣವಾಗಿಯೇ ಈ ಗ್ರಾಮಕ್ಕೆ “ನಾಗಲಾಪುರ” ಎಂಬ ಹೆಸರು ಬಂದಿದೆ.

ರಾಷ್ಟ್ರೀಯ ಹೆದ್ದಾರಿಗೆ ಹತ್ತಿಕೊಂಡಿರುವ ಬೆಳಗಾವಿ ಜಿಲ್ಲೆಯ ಎಂ. ಕೆ. ಹುಬ್ಬಳ್ಳಿಯ ಹೊರವಲಯದ ಮಲಪ್ರಭಾ ನದಿಯಲ್ಲಿ ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕೆಯವರ ಸಮಾಧಿ ಇದೆ. ಕಾದರವಳ್ಳಿಯಲ್ಲಿ ಯುದ್ಧ ನಡೆದ ಸಂದರ್ಭದಲ್ಲಿ ಗಾಯಗೊಂಡ ಗಂಗಾಂಬಿಕೆಯವರು ಇಲ್ಲಿ ಲಿಂಗೈಕ್ಯರಾದರೆಂಬ ಪ್ರತೀತಿ ಇದೆ.

ಎಂ. ಕೆ. ಹುಬ್ಬಳ್ಳಿಯಿಂದ 6 ಕಿ.ಮಿ. ಅಂತರದಲ್ಲಿರುವ ಕಾದರವಳ್ಳಿ ಗ್ರಾಮದಲ್ಲಿ ಶರಣರು ಯುದ್ಧಮಾಡಿದರು ಎಂದು ಹೇಳಲಾಗುತ್ತಿದೆ. ಶಾಂತಿ ಪ್ರಿಯರಾದ ಶರಣರು ಯುದ್ಧದ ಆಕಾಂಕ್ಷಿಗಳಾಗಿರಲಿಲ್ಲ. ಆದರೆ ಬಿಜ್ಜಳನ ಸೈನಿಕರಿಗೂ, ಗೋವೆಯ ಕದಂಬ ರಾಜ್ಯದ ಸೈನಿಕರಿಗೂ ಇಲ್ಲಿ ಕಾದಾಟ ಆಗಿರಬಹುದು. ಕಾದಾಡಿದ ಹಳ್ಳಿ ಎನ್ನುವ ಕಾರಣಕ್ಕಾಗಿ ಈ ಗ್ರಾಮಕ್ಕೆ “ಕಾದರವಳ್ಳಿ” ಎಂಬ ಹೆಸರು ಬಂದಿದೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಇಲ್ಲಿಯ ಹೊಲವೊಂದರಲ್ಲಿ ಯುದ್ಧವಾಯಿತೆಂದು ಜನರು ಎಂಟು ಎಕರೆ ವಿಸ್ತಾರದ ಒಂದು ಹೊಲವನ್ನು ತೋರಿಸುತ್ತಾರೆ.

ಕಾದರವಳ್ಳಿಯಿಂದ 3 ಕಿಲೋಮೀಟರ ಅಂತರದಲ್ಲಿರುವ ಹುಣಸಿಕಟ್ಟಿ ಗ್ರಾಮದಲ್ಲಿ ರೇವಣಸಿದ್ಧನ ಮಗನಾದ ರುದ್ರಮುನಿಯ ದೇವಸ್ಥಾನವಿದೆ. ದೇವಸ್ಥಾನದ ಶಿಲ್ಪವನ್ನು ಗಮನಿಸಿದರೆ ಹನ್ನೆರಡನೆಯ ಶತಮಾನದ ರುದ್ರಮನಿಯ ಸ್ಮಾರಕವೆಂದು ತೋರುತ್ತದೆ.

ಖಾನಾಪೂರ ತಾಲೂಕಿನ ಕಕ್ಕೇರಿಯಲ್ಲಿ ಡೋಹರ ಕಕ್ಕಯ್ಯನವರ ಸಮಾಧಿಯಿದೆ. ಕಕ್ಕಯ್ಯನವರ ಪತ್ನಿ ಭಿಷ್ಟಾದೇವಿಯವರ ದೇವಸ್ಥಾನವೂ ಇದೆ.

ಹೀಗೆ ಬೆಳಗಾವಿ ಜಿಲ್ಲೆ ದಾಟಿ ಜಂಗಮಟ್ಟಿ, ಜಗಳಬೆಟ್ಟ, ಸಾಂಬ್ರಾಣಿ ಯಲ್ಲಾಪುರ ಮಾರ್ಗವಾಗಿ ಚನ್ನಬಸವಣ್ಣನವರ ನೇತೃತ್ವದಲ್ಲಿ ಉಳವಿಯನ್ನು ಶರಣರು ತಲುಪಿದರು ಎಂದು ವಿದ್ವಾಂಸರು ಹೇಳುತ್ತಾರೆ. ಇನ್ನೊಂದು ತಂಡ ಧಾರವಾಡ, ಹಾವೇರಿ ರಾಣೇಬೆನ್ನೂರ ತನಕ ಹೋಗಿ ಅಲ್ಲಿಂದ ಸತ್ತೂರು ಮಾರ್ಗವಾಗಿ ಉಳವಿ ತಲುಪಿತೆಂದು ಕೆಲವರು ಹೇಳುತ್ತಾರೆ. ಹುಬ್ಬಳ್ಳಿಯ ಸಮೀಪವಿರುವ ಭೈರೀದೇವರಕೊಪ್ಪ ಎನ್ನುವುದು ಬಹುರೂಪಿ ಚೌಡಯ್ಯನವರ ಐಕ್ಯಸ್ಥಳ ಅಂತ ಗುರುತಿಸುತ್ತಾರೆ.  

ಉಳವಿ ತಲುಪಿದ ನಂತರ ಅಲ್ಲಿನ ತಂಪು ನೀರಿನ ಕಾರಣವಾಗಿ ಚೆನ್ನಬಸವಣ್ಣನವರು ಕೆಲವೇ ದಿನಗಳಲ್ಲಿ ವಿಷಮಶೀತ ಜ್ವರದಿಂದ ಬಳಲಿ ಲಿಂಗೈಕ್ಯರಾದರು. ಇಲ್ಲಿಗೆ ಶರಣರ ಹೋರಾಟ ಒಂದು ಅಂತಿಮ ಘಟ್ಟ ತಲುಪಿತು. ಇದು ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಬದುಕಿನ ಒಂದು ಸಂಕ್ಷಿಪ್ತ ವಿವರಣೆ.

ಕೇವಲ ಎರಡೂವರೆ ದಶಕಗಳ ಕಾಲ ಬದುಕಿದ್ದ ಚನ್ನಬಸವಣ್ಣನವರು ಶರಣ ಸಂಕುಲದ ಧೃವತಾರೆ ಎಂದು ಹೇಳುತ್ತಾ ಚನ್ನಬಸವಣ್ಣನವರ ಒಂದು ವಚನದ ಮೂಲಕ ಈ ಉಪನ್ಯಾಸಕ್ಕೆ ಅಲ್ಪ ವಿರಾಮ ಹೇಳುತ್ತೇನೆ ಯಾಕಂದರೆ ಬಸವಾದಿ ಶರಣರ ತತ್ವ ಸಿದ್ಧಾಂತಗಳಿಗೆ ಮತ್ತು ಅವರ ನಡೆ-ನುಡಿ ಸಿದ್ಧಾಂತಗಳನ್ನು ಮಾತಾಡೋದಕ್ಕೆ ಯಾವತ್ತೂ ಪೂರ್ಣ ವಿರಾಮ ಇರೋದಿಲ್ಲ.   

ಭಕ್ತಿಗೆ ಅನುಭಾವವೆ ಬೀಜ ಕಾಣಿರೆ,
ಭಕ್ತಿಗೆ ಅನುಭಾವವೆ ಆಚಾರ ಕಾಣಿರೆ,
ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತು.
ಅನುಭಾವವ ಮಾಡುವಲ್ಲಿ ವಿನಯದಿಂದ ಕೇಳದಿದ್ದಡೆ
ಕೂಡಲಚೆನ್ನಸಂಗಮದೇವರು ಅಘೋರನರಕದಲ್ಲಿಕ್ಕುವ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-705/ವಚನ ಸಂಖ್ಯೆ-1461)

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ.
“ಸವಿಚರಣ” ಸುಮತಿ ಇಂಗ್ಲೀಷ್‌ ಶಾಲೆಯ ಹತ್ತಿರ,
ಸುಭಾಷ್‌ ನಗರ, ಕ್ಯಾತ್ಸಂದ್ರ,
ತುಮಕೂರು – 572 104.
ಮೋಬೈಲ್. ನಂ: +91 9741 357 132.
ಈ-ಮೇಲ್‌: vijikammar@gmail.com

ಸಹಾಯಕ ಗ್ರಂಥಗಳು :

  • ಶರಣ ಚರಿತಾಮೃತ               : ಡಾ. ಸಿದ್ಧಯ್ಯ ಪುರಾಣಿಕ.
  • ಶಾಸನಗಳಲ್ಲಿ ಶಿವಶರಣರು          : ಡಾ. ಎಮ್.‌ ಎಮ್.‌ ಕಲಬುರ್ಗಿ.
  • ಹರಿಹರನ ಶರಣ ರಗಳೆಗಳು        : ಅನುವಾದ-ಡಾ. ಸದಾನಂದ ಪಾಟೀಲ.
  • ಕನ್ನಡ ಸಾಹಿತ್ಯದಲ್ಲಿ ಅಲ್ಲಮಪ್ರಭುದೇವ : ಡಾ. ಎಸ್.‌ ಎಮ್.‌ ವೃಷಭೇಂದ್ರಸ್ವಾಮಿ.
  • ಷಟ್‌ ಸ್ಥಲ ಪ್ರಭೆ                  : ಡಾ. ಆರ್.‌ ಸಿ. ಹಿರೇಮಠ.
  • ಸಮಗ್ರ ವಚನ ಸಂಪುಟಗಳು       : ಸಂ. ಡಾ. ಎಮ್.‌ ಎಮ್.‌ ಕಲಬುರ್ಗಿ.
  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply