ಜಂಗಮ ಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮ ದ್ರೋಹ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಜಂಗಮ ಎಂಬ ಪದವು ಸಂಸ್ಕೃತ ಮೂಲದ್ದಾಗಿದೆ. ಕನ್ನಡದಲ್ಲಿ ಸಂಚಾರಿ, ಚಲನಶೀಲ ಎನ್ನಲಾಗುತ್ತಿದೆ. ಶಿವ ಅಥವಾ ಚಲನಶೀಲ ಶಕ್ತಿಯೇ ಜಂಗಮ. ಜಂಗಮರು ಎಂದರೆ ಶಿವ ಭಕ್ತರಾಗಿ ಲಿಂಗಾಯತ ತತ್ವ ಆಚರಿಸುತ್ತಾರೆ. ಅವರು ತಾವು ಧರಿಸುವ ಇಷ್ಟಲಿಂಗದಲ್ಲೇ ಶಿವನ ಸಾಕ್ಷಾತ್ಕಾರ ಹೊಂದುತ್ತಾರೆ. ಜಂಗಮನು ಸಜೀವ ಶಿವನ ಪ್ರತೀಕ. ಜಂಗ್ ಎಂದರೆ ಗೆಜ್ಜೆಯ ಸದ್ದು. ಹಾಗೂ ಗಮ ಎಂದರೆ ಸಂಚಾರ, ಚಲನೆ ಎಂದರ್ಥ. ಜಂಗಮ, ಇದು ಸ್ಥಿರವಲ್ಲದ, ಅಲೆದಾಡುವ, ಇಷ್ಟಲಿಂಗದಲ್ಲೇ ಶಿವನನ್ನು ದರ್ಶಿಸುವಂತೆ ಸಂಚರಿಸಿ ಉಪದೇಶಿಸುವ ಕಾಯಕ. ಶಿವನ ಲುಮೆಗಾಗಿ ಮಠ, ಮಂದಿರಗಳಿಗೆ ಮೊರೆ ಹೋದರೆ ದೇವರು ಕಾಣಲಾರ. ಅವೆಲ್ಲವೂ ಸ್ಥಾವರ. ಯಾವುದೋ ಪ್ರತಿಷ್ಠೆಗಾಗಿ ಪ್ರತಿಷ್ಠಾಪಿಸಲ್ಪಟ್ಟ ವೈಭವದ ಶಿಲಾ ಮೂರ್ತಿಗಳು. ಅದಕ್ಕೆಂದೇ ಬಸವಾದಿ ಶರಣರು ವಾಸ್ತವಿಕವಾಗಿ ತ್ರಿವಿಧ ಲಿಂಗಗಳನ್ನು ಪ್ರತಿಪಾಧಿಸಿದ್ದಾರೆ. ಅವುಗಳೆಂದರೆ:

  1. ಇಷ್ಟಲಿಂಗ: ಶಿವ ಭಕ್ತನ ಹೃದಯದಲ್ಲಿ ಧ್ಯಾನಿಸುವ ದೈವಿ ರೂಪದ ಇಷ್ಟಲಿಂಗ.
  2. ಪ್ರಾಣಲಿಂಗ: ಶರೀರ ಕಾಯದ ಶ್ವಾಸ ಹಾಗೂ ಜೀವ ಶಕ್ತಿಯೇ ಪ್ರಾಣಲಿಂಗ.
  3. ಜಂಗಮಲಿಂಗ: ಭಕ್ತಿಯ ಕಾರ್ಯದಲ್ಲಿ ನಿರತ, ಶಿವನ ಕುರುಹು ಸಾರುವ ಜಂಗಮ ಲಿಂಗ.

ಜಂಗಮನು ಇಷ್ಟ ಲಿಂಗಧಾರಿಯಾಗಿ ಸಮಾಜ ಸೇವಕರಂತೆ ಸೃಷ್ಠಿಕರ್ತನ ಕುರುಹುವಿನ ಕಾರ್ಯದಲ್ಲಿ ತೊಡಗಬೇಕು. ಶಿವನ ಕುರಿತ ಬೋಧನೆ, ಲಿಂಗಾಚರಣೆಯ ಪ್ರಚಾರಗೈಯುತ್ತ ದಾನ, ಭಿಕ್ಷೆ ಸ್ವೀಕರಿಬೇಕು. ಬಸವಾದಿ ಶರಣರು ಜಂಗಮ ಪದಕ್ಕೆ ಆಧ್ಯಾತ್ಮಿಕ ಮತ್ತು ತಾತ್ವಿಕ ಪರಿಕಲ್ಪನೆ ನೀಡಿದ್ದಾರೆ. ಜಂಗಮವು ಸ್ಥಾವರವಲ್ಲ, ಜಡವಲ್ಲ. ಜ್ಞಾನದಿಂದ ಜೀವಂತವಾಗಿರುವ ಶಿವನ ಸ್ವರೂಪ. ಇಷ್ಟಲಿಂಗವನ್ನು ಆರಾಧಿಸುತ್ತ, ತನ್ನ ಜೀವನವನ್ನು ಶಿವಭಕ್ತಿಗೆ ಮೀಸಲಿಟ್ಟ ಶರಣನೆ ಜಂಗಮ. ಅವನೆ ನಿಗರ್ವದ, ತ್ಯಾಗ, ವೈರಾಗ್ಯ ಹೊಂದಿದ, ಸನ್ನಡತೆಯಿಂದ ಶಿವ ಭಕ್ತರ ಸೇವೆಗೆ ತೊಡಗಿದ ಶರಣ. ಆತ ಸಮಾಜದಲ್ಲಿ ಸಂಚರಿಸಿ ಧರ್ಮ ಉಪದೇಶ ಮಾಡುವ ಚಲನಶೀಲ ವ್ಯಕ್ತಿ. ಅದಕ್ಕೆಂದು ವಿಶ್ವಗುರು ಬಸವಣ್ಣನವರು ದೇವರು ಭವ್ಯವಾದ ಮಂದಿರ, ಆಡಂಭರದ ಗರ್ಭ ಗುಡಿಗಳಲ್ಲಿ, ಯಜ್ಞ ಯಾಗಗಳಲ್ಲಿ, ರುದ್ರಾಭಿಷೇಕ, ಬಲಿಗೈಯ್ಯುವ ಕೃತ್ಯಗಳಲ್ಲಿ ಇರದೆ, ಶುದ್ಧ ಕಾಯಕದ ಚಲನಶೀಲ ಶರಣನಲ್ಲಿ ದೈವತ್ವ ಇದೆ ಎಂದರು.

ಸ್ಥಾವರ ದೈವವಲ್ಲ, ಜಂಗಮವೇ ದೈವ
ಸ್ಥಾವರ ಪೂಜಿಸಿ ಪಾಪ ಹರುವುದೇ?
ಜಂಗಮ ಸೇವಿಸಿ ಪಾವನರಾಗುವುದೇ?
ಕೂಡಲಸಂಗಮದೇವ.
(ಶರಣ ಚಳವಳಿ ಮತ್ತು ವಚನ ಸಾಹಿತ್ಯ \ ಡಾ. ಎಂ. ಎಂ. ಕಲ್ಬುರ್ಗಿ)

ಇದಕ್ಕೆ ಪೂರಕವಾಗಿ ವಚನಭಾರತ ಎಂಬ ವಚನ ಸಂಕಲನದಲ್ಲಿ ಸ್ಥಾವರ ಮತ್ತು ಜಂಗಮ ತತ್ವವನ್ನು ನಿರಾಕರಿಸಿ ಜಂಗಮ ಸೇವೆಯ ಮಹತ್ವವನ್ನು ಪ್ರತಿಪಾಧಿಸುವ ಅನೇಕ ವಚನಗಳಿವೆ. ಅಲ್ಲದೆ ಪೂರಕವಾಗಿ:

ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ!
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ!
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಬ್ಬನೆ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-151/ವಚನ ಸಂಖ್ಯೆ-562)

ಎನಿಸು ಕಾಲ ಕಲ್ಲು ನೀರೊಳಗಿದ್ದಡೇನು,
ನೆನೆದು ಮೃದುವಾಗಬಲ್ಲುದೆ?
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ,
ಮನದಲ್ಲಿ ದೃಡವಿಲ್ಲದನ್ನಕ್ಕ?
ನಿಧಾನವ ಕಾಯ್ದಿರ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-30/ವಚನ ಸಂಖ್ಯೆ-99)

ಬೆಟ್ಟದ ಕಲ್ಲು ಸೋರೆಯ ಕೂಡೆ ಆಡಿದಂತಾಯಿತ್ತಯ್ಯ,
ಜಾತಿಯಲ್ಲದ ಜಾತಿಯ ಕೂಡಿ, ಅದರ ಪರಿಯಂತೆ,
ಸಂಗವಲ್ಲದ ಸಂಗವ ಮಾಡಿದಡೆ ಭಂಗತಪ್ಪದು,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-384/ವಚನ ಸಂಖ್ಯೆ-1284)

ಮೊರನ ಗೋಟಿಲಿ ಬಪ್ಪ ಕಿರುಕುಳ ದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.
ಕುರಿ ಸತ್ತು ಕಾವುದೆ ಹರ ಮುಳಿದವರ?
ಕುರಿ ಬೇಡ, ಮರಿ ಬೇಡ,
ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು
ನಮ್ಮ ಕೂಡಲಸಂಗಮದೇವನ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-52/ವಚನ ಸಂಖ್ಯೆ-560)

“ಕಲ್ಲು ದೇವರು ದೇವರಲ್ಲಯ್ಯ, ಕಲ್ಲಿನೊಳಗಿರುವುದನ್ನು ತಿಳಿಯದವನು ಅಜ್ಞಾನಿ. ಜಂಗಮವೇ ದೇವನು ಎಂಬಿತ್ಯಾದಿ ಬಸವಣ್ಣನವರ ವಚನಗಳಲ್ಲಿ ಉಲ್ಲೇಖವಾಗಿದೆ.

ಬಸವಣ್ಣನವರು ಸ್ಥಾವರ (ಸ್ಥಿರವಾದದ್ದು) ಮತ್ತು ಜಂಗಮ (ಚಲಿಸುವ) ಎಂಬೆರಡು ಪದಗಳನ್ನು ಹೋಲಿಸಿ, ಶರಣ ಧರ್ಮದ ಅಂತರಂಗದ ತತ್ವವನ್ನು ನಿರೂಪಿಸಿದ್ದಾರೆ. ಶಿವನನ್ನು ಕಲ್ಲಿನಲ್ಲಿ, ವಿವಿಧ ಆಕಾರದ ಮೂರ್ತಿಗಳಲ್ಲಿ, ಮಂದಿರಗಳಲ್ಲಿ ಹುಡುಕುವುದು, ಅವುಗಳಿಗಾಗಿ ಅಲೆದಾಡುವಂತೆ ಉಪದೇಶಿಸುವುದು ನಿಷ್ಪ್ರಯೋಜಕ. ಭಕ್ತಿ ಶ್ರದ್ಧೆಯಿಂದ ನಿಜಾಚರಣೆಯ ಇಷ್ಟಲಿವನ್ನು ಪೂಜಿಸುವವನೆ ದೇವರು. ಅವನ ಸತ್ಸಂಗ, ಸೇವೆ ಮತ್ತು ಉಪದೇಶವೇ ನಿಜವಾದ ದೇವರ ಪೂಜೆ. ಸ್ಥಾವರ ಪೂಜಿಸಿ ಪಾಪ ಹರುವುದೇ? ಅಂದರೆ, ಕಲ್ಲಿನ ಮೂರ್ತಿಗೆ ಪೂಜೆ ಮಾಡುವುದು ಪಾಪ ಪರಿಹಾರಕ್ಕೆ ಕಾರಣವಾಗದೆ, ಮತ್ತಷ್ಟು ಅದೇ ಪಾಪವಾಗಿ ಹರುವುದಾಗಿದೆ. ಜಂಗಮ ಸೇವಿಸಿ ಪಾವನರಾಗುವುದೇ ಜಂಗಮನ ಸೇವೆ. ಅಂದರೆ ಸಜೀವ ಶಿವಜ್ಞಾನಿಯ ಜೊತೆಗಿನ ಶ್ರದ್ಧಾ ಭಕ್ತಿಯೇ ಪವಿತ್ರತೆ ನೀಡುತ್ತದೆ. ಹಾಗೂ ಆತ್ಮ ಶುದ್ಧಿಗೆ ಮಾರ್ಗ ಒದಗಿಸುತ್ತದೆ.

ಜಂಗಮ ಜಾತಿವಾಚಕವೇ?
ಬಸವ ಯುಗದ ಪೂರ್ವದಲ್ಲಿ ಜಂಗಮ ಎಂಬ ಪದವು ಆಧ್ಯಾತ್ಮಿಕ ಸ್ಥಿತಿಯನ್ನು ಸೂಚಿಸುವ ತಾತ್ವಿಕ ಪದವಾಗಿತ್ತು. ಅದು ಜಾತಿವಾಚಕ ಶಬ್ಧವಾಗಿರಲಿಲ್ಲ. ಕಾಲ ಕ್ರಮೇಣ ಕೆಲವು ವಂಶಗಳು, ಮಠ-ಮಂದಿರಗಳಿಗೆ ಹಾಗೂ ಧರ್ಮ ಸೇವೆಗೆ ನಿರತರಾದರು. ಆ ಸೇವೆಗೈದವರ ಕುಟುಂಬಿಕರನ್ನು ಜಂಗಮ ಎಂದು ಪರಂಪರಾಗತವಾಗಿ ಗುರುತಿಸಲು ಪ್ರಾರಂಭವಾಯಿತು. ಅದೇ ಕಾರಣದಿಂದ ಕೆಲವರನ್ನು ಜಾತಿಯಿಂದ ಜಂಗಮ ಎಂದು ಪರಿಗಣಿಸುವ ಪದ್ಧತಿ ಬೆಳವಣಿಗೆಯಾಗಿದೆ. ಈಗ ಅದನ್ನು ಸರಿಪಡಿಸಬೇಕಿದೆ. ಬಸವಾದಿ ಶರಣರ ದೃಷ್ಠಿಯಲ್ಲಿ ಜಾತಿ ರಹಿತವಾಗಿ, ಭೇದವಿಲ್ಲದೆ ಶುದ್ಧ ಭಕ್ತಿ ಆಚರಿಸುವವನೆ ಜಂಗಮ. ಅಂದರೆ ಶಿವನ ದೂತ. ಸರ್ವರಿಗೂ ಸಮಾನ. ಆದರೆ ವಂಶಾವಳಿಯಿಂದ ಅಥವಾ ಗುರುದೀಕ್ಷೆ ಪಡೆದು ಇಲ್ಲವೆ ಗುರುಮುಖೇನ ಜ್ಞಾನಾರ್ಜನೆಗೈದ ವ್ಯಕ್ತಿ ಜಂಗಮವಲ್ಲ. ಅದು ಅವರ ಜಾತಿವಾಚಕವೂ ಅಲ್ಲ. ಜಂಗಮವು ವೈಯಕ್ತಿಕ ಅರ್ಹತೆಯ ಪದವಾಗಿದೆ. ಜಂಗಮತ್ವವೂ ವ್ಯಕ್ತಿಯ ಔಪಚಾರಿಕ ಜಾತಿಯಿಂದ ಬರುವುದಲ್ಲ. ಅವನು ನರಜಾತಿಯನಾಗಿಯೂ, ಸ್ಥಿರ ಭಾವದಿಂದ ಲಿಂಗಧಾರಿಯಾಗಿ ಆತ್ಮ ಶುದ್ಧನಾಗಿ ಪಾರಮಾರ್ಥಿಕ ಸಾಧಿಸಿದರೆ ಜಂಗಮನಾಗಲು ಅರ್ಹ. ಹೀಗಾಗಿ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಅಕ್ಕ ಮಹಾದೇವಿ, ಚನ್ನಬಸವಣ್ಣ, ಮಡಿವಾಳ ಮಾಚಿದೇವ, ಬಸವಣ್ಣ ಸೇರಿದಂತೆ ಎಲ್ಲರೂ ಶರಣರು, ಬೇರೆ ಬೇರೆ ಜಾತಿಗಳಿಂದ ಬಂದಿದ್ದರೂ ಜಂಗಮತ್ವಕ್ಕೆ ಅರ್ಹರಾದರು. ಅವರಿಗೆ ಜಂಗಮ ಎಂದು ಕರೆಯಲು ಅವರ ಶರಣ ಜೀವನ, ಆತ್ಮ ಸಾಧನೆಯ ನಿಜ ಭಕ್ತಿ ಹಾಗೂ ನಿಷ್ಠೆಯ ಏಕದೇವೋಪಾಸನೆ, ಹೊರತು ಜಾತಿಯಿಂದಲ್ಲ.

ಬರಿಯ ಬೋಳುಗಳೆಲ್ಲಾ ಜಂಗಮವೆ?
ಜಡ ಜೀವಿಗಳೆಲ್ಲಾ ಜಂಗಮವೆ?
ವೇಷಧಾರಿಗಳೆಲ್ಲಾ ಜಂಗಮವೆ?
ಇನ್ನಾವುದು ಜಂಗಮವೆಂದಡೆ;
ನಿಸ್ಸೀಮನೆ ಜಂಗಮ,
ನಿಜೈಕ್ಯನೆ ಜಂಗಮ,
ಇಂಥ ಜಂಗಮದ ಸುಳುಹ ಕಾಣದೆ,
ಕೂಡಲ ಚನ್ನಸಂಗಮದೇವ ತಾನೆ ಜಂಗಮನಾದ.
(ಚನ್ನಬಸವಣ್ಣನ ವಚನಗಳು/ವಚನ ಸಂಪುಟ-ಸಂಪಾದಕರು: ಡಾ. ಎಂ. ಎಂ. ಕಲ್ಬುರ್ಗಿ/ಕನ್ನಡ ವಿಶ್ವವಿದ್ಯಾಲಯ, ಹಂಪಿ)

ಐತಿಹಾಸಿಕ ಹಿನ್ನೆಲೆ:
ಆಂಧ್ರಪ್ರದೇಶದಲ್ಲಿ ಮಲ್ಲಕಾರ್ಜುನ ಪಂಡಿತರಾಧ್ಯ ಎಂಬ ಶೈವ ಪಂಥದ ಪ್ರತಿಪಾದಕರಿದ್ದರು. ಕಲ್ಯಾಣದ ವಚನ ಚಳುವಳಿ ಮತ್ತು ಶರಣ ತತ್ವದ ಬೆಳವಣಿಗೆ ಗಮನಿಸಿ, ಬೆರಗಾಗಿ ತಮ್ಮ ಶೈವತತ್ವ ತೊರೆದು, ಲಿಂಗಾಯತ ಜಂಗಮರಾದರು. ಅದೇ ಸಂದರ್ಭದಲ್ಲಿ ಕಲ್ಯಾಣದಿಂದ ತೆಲುಗು ಭಾಷೆಯ ಪ್ರದೇಶದ ಕಡೆಗೆ ಶರಣತತ್ವ ಪ್ರಚಾರ ಮತ್ತು ಲಿಂಗಾಯತ ಧರ್ಮ ಪ್ರಸಾರಕ್ಕಾಗಿ ಸ್ವತಃ ಬಸವಣ್ಣನವರೇ ಕೆಲವು ಸಾದಕರನ್ನು ನೇಮಿಸಿದ್ದರು. ಅವರ ಕಾಲಿಗೆ ಜಂಗ್ (ಗೆಜ್ಜೆ) ಕಟ್ಟುತ್ತಿದ್ದರು. ಸದ್ದು ಮಾಡುತ್ತ ಮನೆಯಿಂದ ಮನೆಗೆ ಸಂಚರಿಸಿ ಭಕ್ತರು ಭಸ್ಮಧಾರಣೆ ಮತ್ತು ಲಿಂಗಧಾರಣೆ ಮಾಡಿದ್ದನ್ನು ಪರಿಕ್ಷೀಸುವುದು ಅವರ ಕಾಯಕವಾಗಿತ್ತು. ಅವರನ್ನೇ ಸಾರುವ ಐನಾರು, ಕಂಬಿ ಐನಾರು, ಜಂಗಿನ ಐನಾರು ಎಂದು ಕರೆಯಲಾಯ್ತು. ಕ್ರಮೇಣ ಅಂತಹ ಮನೆತನದವರನ್ನು ಓದಿಸೋಮಠ, ಭಿಕ್ಷಾಮಠ, ಸಾಲಿಮಠ, ಹಿರೇಮಠ ಎಂದೆಲ್ಲಾ ಪರಿವರ್ತಿಸಲಾಯಿತು. ಅವರುಗಳ ಮನೆಯಲ್ಲಿ ಬಸಯ್ಯ, ಮಡಿವಾಳಯ್ಯ, ಚನ್ನಯ್ಯ, ಶರಣಯ್ಯ, ಪ್ರಭಯ್ಯ, ಪ್ರಭುಸ್ವಾಮಿ, ಚನ್ನಬಸವಯ್ಯ, ಸಿದ್ದಯ್ಯ, ಸಿದ್ದಲಿಂಗಯ್ಯ, ಸಿದ್ರಾಮಯ್ಯ ಮುಂತಾದ ಹೆಸರುಗಳ ನಾಮಕರಣದ ಸಂಸ್ಕೃತಿ ಬೆಳೆಯಿತು. ಇಂದಿಗೂ ಬಹುತೇಕ ಜಂಗಮ ಕುಟುಂಬಗಳ ಮನೆ ದೇವರು (ಕುಲದೇವರು) ಉಳುವಿ, ಎಡೆಯೂರು, ಗುಡ್ಡಾಪುರ, ಸೊನ್ನಲಗಿ, ಮಲೈ ಮಹದೇಶ್ವರ ಎಂಬ ಪುಣ್ಯ ಕ್ಷೇತ್ರಗಳಾಗಿವೆ. ಅಂದರೆ ಕಲ್ಯಾಣ ಕ್ರಾಂತಿಯ ಬಳಿಕ ಬಹುತೇಕ ಜಂಗಮರು ಬಸವಾದಿ ಶರಣರನ್ನು ತಮ್ಮ ಕುಲದ ಗುರುಗಳನ್ನಾಗಿ ಸ್ವೀಕರಿಸಿ ಆರಾಧಿಸ ತೊಡಗಿದರು.

ಅವರಲ್ಲಿ ಪ್ರಮುಖರೆಂದರೆ ಕಲಬುರಗಿ ಶರಣ ಬಸವೇಶ್ವರರು, ನಾಲತ್ವಾಡದ ವಿರೇಶ ಶರಣರು, ಅಥಣಿ ಶಿವಯೋಗಿಗಳು, ಧಾರವಾಡದ ಮೃತ್ಯಂಜಯ ಅಪ್ಪಗಳು, ಚಿತ್ತರಗಿ ವಿಜಯ ಮಹಾಂತೇಶ್ವರರು, ಕೊಲ್ಹಾಪುರದ ಕಾಡಸಿದ್ದೇಶ್ವರರು, ಗದಗ ತೋಂಟದಾರ್ಯರು, ಹುಬ್ಬಳ್ಳಿ ಮೂರುಸಾವಿರಮಠದ ಗುರು ಪರಂಪರೆಯವರು ಸೇರಿದಂತೆ ಬಹುತೇಕರು ಮೂಲತಃ ಜಂಗಮರಾಗಿದ್ದರೂ ಬಸವಾದಿ ಶರಣರ ತತ್ವವನ್ನು ಆರಾಧಿಸಿ, ಭಕ್ತರ ಭಾವ ಮತ್ತು ಬದುಕನ್ನು ಪಾವನ ಗೊಳಿಸಿದರು.

ಜಂಗಮ ಹೆಸರಿನಿಂದ ಕಂದಾಚಾರ:
ನಕಲಿ ಜಂಗಮರ ಕಂದಾಚಾರದ ಕುರಿತು ಬಸವಾದಿ ಶರಣರು ಎಚ್ಚರಿಕೆ ನೀಡಿದ್ದಾರೆ. ತಮ್ಮ ವಚನಗಳ ಮೂಲಕ ಶರಣ ಧರ್ಮ ಪಾಲಿಸುವುದೇ ನಿಜವಾದ ಜಂಗಮತ್ವ ಎಂದು ಪ್ರತಿಪಾದಿಸಿದ್ದಾರೆ. ಅದಕ್ಕೆ ಬಸವಣ್ಣನವರು, “ಜಂಗಮವೆಂಬ ಪಲಾಶ ಹೊಂದಿದ ಬಡವ, ಜಾತಿಯನು ಮರೆಯದೆ, ಪಾಡಿನಲ್ಲಿ ಉರುಳಿದನು. ಅವನನ್ನು ಭಕ್ತನೆಂಬುದು ದೋಷ” ಎಂದಿದ್ದಾರೆ. ಕೆಲವರು ಹೊರಗೆ ಜಂಗಮದ ವೇಷ ಹಾಕಿ ಒಳಗೆ ಜಾತಿಯ ಅಹಂಕಾರ, ಕಾಮ, ಲೋಭ, ಮೋಹ, ಮತ್ಸರ ಇತ್ಯಾದಿ ಒಳ ಉಡುಪು ತೊಟ್ಟುಕೊಂಡರೆ ಅಂತಹವರು ಕಂದಾಚಾರ ಆಚಣೆಯಿಂದ ಅಧರ್ಮಿಗಳಿದ್ದಂತೆ. ಹೀಗಾಗಿ ಅವರಿಗೆ ಜಂಗಮ ಪದ ತಕ್ಕುದಲ್ಲ ಹಾಗೂ ಜಂಗಮ ಅವರ ಹಕ್ಕಲ್ಲ. ಕಂದಾಚಾರದಲ್ಲಿ ತೊಡಗಿರುವ ಜಂಗಮರು ಭಾವವಿಲ್ಲದ ಲಿಂಗಪೂಜೆ, ಹಣಕ್ಕೆ ಧರ್ಮ ಮಾರಾಟ, ಸ್ವಾರ್ಥ ದಾಹಕ್ಕಾಗಿ ಜಂಗಮತ್ವದ ದುರ್ಬಳಕೆ, ದುರಾಚಾರ ಇವೆಲ್ಲ ಶರಣ ಧರ್ಮದಲ್ಲಿ ಘೋರ ಅಪರಾಧ ಎಂದು ಪರಿಗಣಿಸಲಾಗಿದೆ. ಅವರು ಶರಣ ಪರಂಪರೆಯ ವಿರೋಧಿಯಾಗಿದ್ದು, ಅಂತಹವರಿಂದ ದೂರ ಇರುವುದೇ ಜಂಗಮತ್ವದ ಪರಿಪಾಲನೆಯಾಗಿದೆ. ಜಂಗಮರ ಹೆಸರಿನಲ್ಲಿ ಹಣ ಸಂಪಾದಿಸುವುದು, ಮುಗ್ಧ ಶಿವಭಕ್ತರನ್ನು ಶೋಷಿಸುವುದು ಕಂಡು ಬರುತ್ತಿವೆ. ನಿಜವಾಗಿಯೂ ಅವರು ಲಿಂಗಾಯತ ದರ್ಮದ ಹಾಗೂ ಶರಣ ತತ್ವದ ದ್ರೋಹಿಗಳೇ ಆಗಿರುತ್ತಾರೆ. ಜಂಗಮ ಎಂಬ ಪವಿತ್ರ ಪದವನ್ನು ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿ, ಕಂದಾಚಾರದಲ್ಲಿ ಹಾಗೂ ಅಪರಾಧಗಳಲ್ಲಿ ತೊಡಗಿದವರು ಕಪಟ ಜಂಗಮರು. ದರ್ಪದಿಂದ ಗೌರವ ಸಂಪಾದಿಸುವುದು, ಹಣ ಅಂತಸ್ತು ಹೊಂದುವುದು, ಕುಟುಂಬ ವ್ಯಾಮೋಹಿಗಳಾಗಿ, ಪಾದಪೂಜೆಗೆ ಒತ್ತಾಯಿಸುವುದು, ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ಲೋಭಿಗಳಾಗುವುದು, ಅಡ್ಡ ಪಲ್ಲಕ್ಕಿಯಲ್ಲಿ ಮೆರೆಯುವುದು ನಿಜವಾದ ಜಂಗಮರ ಗುಣಸ್ವಭಾವಗಳಲ್ಲ. ಅದಕ್ಕಂದೇ ಬಸವಾದಿ ಶರಣರು ಜಂಗಮರಲ್ಲಿ ಜಾತಿ ಪ್ರತಿಷ್ಠೆ, ಬಾಹ್ಯಾಚಾರ, ಮೂರ್ತಿ ಪೂಜೆ, ಪಾದ ಪೂಜೆ, ಹಣ ವಸೂಲಿ, ಎಲ್ಲವನ್ನೂ ತಿರಸ್ಕರಿಸಿದ್ದಾರೆ.

ಡಾ. ಸತೀಶ ಕೆ. ಇಟಗಿ,
ಪತ್ರಿಕೋದ್ಯಮ ಉಪನ್ಯಾಸಕ,
ಅಂಚೆ: ಕೋಳೂರ – 586 129
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್:‌ satshitagi10@gmail.com

ಆಧಾರ ಗ್ರಂಥಗಳು:

  1. ಚನ್ನಬಸವಣ್ಣನ ವಚನಗಳು (ವಚನ ಸಂಪುಟ), ಡಾ.ಎಂ.ಎಂ.ಕಲ್ಬುರ್ಗಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ (1990)
  2. ಶರಣ ಚಳವಳಿ ಮತ್ತು ವಚನ ಸಾಹಿತ್ಯ, ಡಾ. ಎಂ.ಎಂ.ಕಲ್ಬುರ್ಗಿ. (1980-1990)
  3. The Flaming Feet and other Essays: The Dalit Movement in India, D. R. Nagaraj, New Delhi, (2010)
  4. Basava (12th Century), Vachanas, (Vanchana samputa), M M Kalaburgi, Kannada University, Hampi.
  5. Channabasavanna (12th Century) Vachanas, (Vanchana samputa), M M Kalaburgi, Kannada University, Hampi.
  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply