
“ಶರಣಾರ್ಥಿಯೆಂಬ ಶ್ರವವ ಕಲಿತಡೆ ಆಳುತನಕೆ ದೆಸೆಯಪ್ಪ ನೋಡ” ಎಂದಿರುವರು. ದೇವರಿಗೆ ಮಾತ್ರ ಶರಣಾಗುವುದಲ್ಲ ದೇವರ ಸ್ವರೂಪಿಗಳಾದ ಶರಣರು ಒಬ್ಬರನ್ನೊಬ್ಬರು ಕಂಡಾಗ ಗೌರವ ಪ್ರೇಮದಿಂದ ಶರಣು ಶರಣಾರ್ಥಿ ಪದಗಳನ್ನು ಬಳಸಿದ್ದಾರೆ.
ಶಿವ ಶಿವ ಎನ್ನುತ್ತಾ ಹರ ಹರ ಎನ್ನುತ್ತಾ
ಶಿವನ್ಹಂತ ಬಸವಗ ನೆನೆಯುತ್ತ ಸತಿಪತಿ
ತೆಗೆದಾರ ಚರ್ಮ ತೊಡೆಯದು
ಬಾಳೆಯ ಹಣ್ಣಿನಾ ಸಿಪ್ಪೆಯು ತೆಗೆದ್ಹಾಂಗ
ಚರಮವು ಬಿಚ್ಚಿ ತೆಗೆದಾರ ಕಣ್ಣಾಗ
ಹನಿಹರ ನೀರು ಬಂದಿಲ್ಲ
ಕಣ್ಣೀರು ಹರಿದಿಲ್ಲ ಮಾರಿಯು ಕಿವಚಿಲ್ಲ
ಸಂತಸದಿಂದ ಶಿವಶಿವ ಎನ್ನುತ್ತಾ
ಶಿವರೂಪಿಗೆ ಪಾದುಕೆ ಹೊಲಿತಾರ
ಬಾಳೆಯ ಹಣ್ಣಿನ ಹಾಗೆ ಹರಹರ ಶಿವಶಿವ ಎನ್ನುತ್ತಾ ಸತಿ-ಪತಿ ತಮ್ಮ ತೊಡೆಯ ಚರ್ಮ ಬಿಚ್ಚುತ್ತಾರೆ. ಮುಖದ ಮೇಲೆ ನೋವಿಲ್ಲ, ಕಣ್ಣಿನಲ್ಲಿ ನೀರಿಲ್ಲ. ಬದಲಾಗಿ ಮನದೊಳು ಭಕ್ತಿ ತುಂಬಿದೆ, ಕಣ್ಣಿನಲ್ಲಿ ನಿಸ್ವಾರ್ಥತೆಯಿದೆ. ಅವರ ದೃಷ್ಟಿ ಮನಗಳೆರೆಡು ತಾವು ಅರ್ಪಿಸುವ ಪಾದುಕೆಗಳ ಮೇಲೆ. ತನ್ನ ಗುರುವಿನ ಕಾಲುಗಳಿವೆ ಸರಿ ಹೊಂದುವ ರೀತಿಯಲ್ಲಿ ಪಾದುಕೆಗಳನ್ನು ಹೊಲಿಯುತ್ತಾರೆ.
ನದರಾಗುವಂತ ಚಪ್ಪಲಿ ಹೊಲಿತಾರ
ಪ್ರತೋಳಿ ಎಲೆಯಾಗ ಮುಚ್ಚಿಟ್ಟು ಭಕ್ತೀಲಿ
ಮಾಮನೆ ಕಡಿಗೆ ಹೊಂಟಾರ
ಮಹಾಮನೆಯಲ್ಲಿ ಮಹಾನುಭವಿಗಳ ಸಂಗಮ. ಬಸವಣ್ಣನವರು ಅವರ ಮಧ್ಯದಲ್ಲಿದ್ದು ಅವರ ಅನುಭಾವವನ್ನು ಕೇಳುತ್ತಿರುತ್ತಾರೆ
ಮಾಮನೆ ದ್ವಾರಕ್ಕೆ ಬಂದಾರ ಸತಿಪತಿ
ಒಳಗರ ಕಾಲು ಇಡಲಿಲ್ಲ ಅಂದಾರ
ಹಿಂದಿನ ತಪ್ಪು ಆಗಬಾರದು.
ಹಿಂದೆ ತಾವು ಮಾಡಿದ್ದು ಮಹಾ ತಪ್ಪು ಎಂಬ ಭಾವನೆ ಅವರಲ್ಲಿ ಅಡಗಿದೆ. ಅವರಲ್ಲಿ ಎಂತಹ ಮುಗ್ಧತೆ ಅಡಗಿದೆ ಎಂಬುದನ್ನು ಇಲ್ಲಿ ಉಹಿಸಿಕೊಳ್ಳಬಹುದಾಗಿದೆ. ಒಳಗೆ ಅಡಿಯಿಡುತ್ತಿಲ್ಲ, ಒಬ್ಬರನ್ನೊಬ್ಬರ ಮುಖ ನೋಡುತ್ತ ಸುಮ್ಮನೆ ನಿಂತಿದ್ದಾರೆ. ಆದರೆ ಮಾತೃ ಹೃದಯಿ ಬಸವಣ್ಣನವರ ಮನಕ್ಕೆ ಇದು ಗೊತ್ತಾಯಿತು ಕೂಗಿ ಕರೆಯಿತು ಆ ಮಕ್ಕಳ ಮೇಲಿನ ಪ್ರೇಮ. ಎದ್ದು ಹೊರಗೆ ಬಂದು ನೋಡುತ್ತಾರೆ, ಹರಳಯ್ಯ ದಂಪತಿಗಳು ತಮ್ಮ ಮಗ ಶೀಲವಂತನೊಂದಿಗೆ ನಿಂತಿದ್ದಾರೆ. ಕೈಯಲ್ಲಿ ಮುಚ್ಚಿದ ವಸ್ತುವಿದೆ ಮುಂದೆ ಬಂದ ಬಸವಣ್ಣನವರು ಹರಳಯ್ಯನವರ ಕೈ ಹಿಡಿದು ಒಳಗೇಕೆ ಬರುತ್ತಿಲ್ಲ ಎಂದು ಒಳಗೆ ಕರೆದೊಯ್ಯುತ್ತಾರೆ. ಆದರೆ ದಂಪತಿಗಳು ಮೌನ ಮುರಿಯುತ್ತಿಲ್ಲ. ಒಳಗಿನ ಭೀತಿ ಇನ್ನು ಆರುತ್ತಿಲ್ಲ. ಕೊನೆಗೆ ಬಸವಣ್ಣನವರೆ “ಏನು ಕಾರಣ ಬಂದೀರಿ” ಎನ್ನುವಷ್ಟರಲ್ಲಿ
ತಂದೀವಿ ನಮ್ಮಪ್ಪ ಚಂದದ ಪಾದುಕೆ
ಅಂದದ ನಿಮ್ಮ ಶಿವಪಾದಕ್ಕೆ ಎನ್ನುತ್ತಾ
ಮುಂದಕ್ಕೆ ತಂದು ಇಟ್ಟಾರ
ಬಿಚ್ಚಿ ತಾ ನೋಡ್ಯಾರ ಪತ್ರೊಳಿ ಎಲೆ ತೆಗೆದು
ಬೆಚ್ಚಿ ತಾ ನಿಂತಾರ ಆ ಗಳಿಗೆ ಕೇಳ್ಯಾರ
ಚರ್ಮದ ಪಾದುಕೆ ಇವಲ್ಲ.
ಬಸವಣ್ಣನವರ ಶಿವಪಾದಕ್ಕೆ ಒಪ್ಪುವ ಪಾದುಕೆಗಳನ್ನು ಅವರು ಮುಂದಿಟ್ಟಾಗ ಮೇಲಿನ ಎಲೆ ತೆಗೆದು ನೋಡುತ್ತಾರೆ. ಆ ತಕ್ಷಣವೇ ಅವರಿಗೆ ಅನಿಸುವುದು ಇವು ಸಾಮಾನ್ಯ ಪಾದುಕೆಗಳಲ್ಲ. ಚರ್ಮದಿಂದ ಮಾಡಿದವುಗಳು ಅಲ್ಲ. ಎರಡು ಕೈಯೊಳಗೆ ಒಂದೊಂದು ಹಿಡಿದು ಬಸವಣ್ಣ ಮುಂದೆ ಬರುತ್ತಾರೆ. ಸತಿ-ಪತಿ ಮುಖ ನೋಡುತ್ತಾ ನಿಂತು ಬಿಡುತ್ತಾರೆ. ದಂಪತಿಗಳು ಗಾಬರಿಗೊಳ್ಳಲು ಪ್ರಾರಂಭಿಸುತ್ತಾರೆ. ಕಣ್ಣುಗಳಲ್ಲಿ ಭೀತಿಯಿದೆ. ಕೈ ನಡುಗುತ್ತಿವೆ. ಬಸವಣ್ಣ ತಲೆ ಹಾಕುತ್ತಾ ಅಂಜಿಕೆ ಬೇಡ, ಶರಣರು ಅಂಜುವುದಿಲ್ಲ, ಭಯ ಬೇಡ ಎನ್ನುತ್ತಾರೆ. ಕೇಳುತ್ತಾರೆ ಇವೇನು? ಎಂದು. ಆಗ ತಾಯಿ ಕಲ್ಯಾಣಮ್ಮ ಮುಂದೆ ಬಂದು ನಡೆದುದೆಲ್ಲವನ್ನು ಹೇಳುತ್ತಾ ಕೈ ಮುಗಿಯುತ್ತಾಳೆ. ಆಗ ಬಸವಣ್ಣನವರು ಅವೆರೆಡನ್ನು ತಲೆಮ್ಯಾಲೆ ಇಟ್ಟುಕೊಂಡು.
ಶರಣರ ದ್ಯಾಹದ ಪವಿತ್ರ ಚರ್ಮವು
ಅರತಿಲಿ ಮಾಡಿದ ಪಾದುಕೆಯು ಇವೆರಡು
ಧರೆಗಿಂತ ದೊಡ್ಡವು ಎಂದಾರ
ಧರೆಗಿಂತ ದೊಡ್ಡವು ಶರಣರ ಚಮ್ಮಾವುಗೆ
ಧರಿಸಲು ಕಾಲಿಗಿ ಬಲಬೇಕು ಕೈಯಲ್ಲಿ
ಹಿಡಿಯಲು ಬೇಕು ತಾಕತ್ತು.
ಎನ್ನುತ್ತಾರೆ. ಭಕ್ತಿಯೋಳು ಪರವಶರಾಗುತ್ತಾರೆ ಬಸವಣ್ಣನವರು. ಎಷ್ಟು ಹೊತ್ತಾದರೂ ಕಣ್ಣು ತೆರೆಯುತ್ತಿಲ್ಲ. ಸುತ್ತ ಕುಳಿತ ಶರಣರು ಸಹ ಆಶ್ಚರ್ಯದೊಂದಿಗೆ ಅದೇ ಭಕ್ತಿಯಲ್ಲಿ ತಲ್ಲೀನರಾಗಿದ್ದಾರೆ. ಎಲ್ಲರೂ ಸತಿ-ಪತಿಗಳಿಗೆ ಕೈಮುಗಿಯುವವರೇ! ಅವರು ಕೂಡಾ ಎಲ್ಲಾ ಶರಣರಿಗೆ ಕೈ ಮುಗಿಯುತ್ತಿದ್ದಾರೆ. ಆದರೆ ಅವರ ಕಣ್ಣುಗಳೆಲ್ಲ ಬಸವಣ್ಣನವರ ಮೇಲೆ. ಕಣ್ಣೇಕೆ ತೆರೆಯುತ್ತಿಲ್ಲ ಗುರು ಬಸವ ಎನ್ನುತ್ತಾರೆ. ಈ ಚಿಂತೆಯಲ್ಲಿ ಇರುವಾಗಲೇ ಬಸವಣ್ಣನವರು ಕಣ್ಣು ತೆರೆಯುತ್ತಾರೆ. ಅವರ ಕೈಯಲ್ಲಿದ್ದ ಚಮ್ಮಾವುಗಳಿಗೆಲ್ಲಾ ಶರಣರು ಕೈ ಮುಗಿಯುತ್ತಾರೆ ಬಸವಣ್ಣನವರು ಅದೇ ಎಲೆಯಲ್ಲಿ ಮುಚ್ಚಿ ಅವರ ಕೈಗೆ ಕೊಟ್ಟು ತಮ್ಮ ಮನೆಗೆ ಒಯ್ಯಲು ತಿಳಿಸುತ್ತಾರೆ. ಆದರೆ ದಂಪತಿಗಳು
ಕೈ ಮುಗಿವೆ ಬಸವಣ್ಣ ಕಾಲಾಗ ಧರಿಸಿರಿ
ಒಮ್ಮನದಿ ಮಾಡಿ ತಂದಿವಿ ಧರಿಸಿದರ
ಒಪ್ಯಾತು ನಮ್ಮ ಕಾಯಕ
ಎಂದು ಬೇಡಿಕೊಳ್ಳುತ್ತಾರೆ, ಆದರೆ ಬಸವಣ್ಣನವರು ಗಂಭೀರವಾಗಿ ನಯ-ವಿನಯದಿಂದ ಕೇಳುತ್ತಾರೆ.
ಕಾಲಾಗ ಬಲವಿಲ್ಲ ಕೈಯಾಗ ಶಕ್ತಿಇಲ್ಲ
ತಿಳಿಯದೆ ಹಾಕಿದ ಮನುಜರು ಜಗದಾಗ
ಉಳಿಯಲ್ಲ ನೋಡು ಎಂದರ್ಥ
ಎಂದು ಹೇಳಿ ವಾಪಸ್ಸು ಮಾಡುತ್ತಾರೆ. ಸತಿ-ಪತಿ ಬಸವಣ್ಣನವರಿಗೆ ಶರಣು ಶರಣಾರ್ಥಿ ಎಂದು ನಮನ ಸಲ್ಲಿಸುತ್ತಾ ತಿರುಗಿ ತಿರುಗಿ ನೋಡುತ್ತ ಮುಂದೆ ಹೋಗುತ್ತಿರುತ್ತಾರೆ.
ಅದೇ ರಸ್ತೆಯೊಳಗೆ ಬರುತ್ತಿದ್ದಾರೆ ಮಂತ್ರಿ ಮಧುವರಸ. ಈ ಶರಣರ ನಡೆಯು ಆತನಿಗೆ ಸಂಶಯವನ್ನಂಟು ಮಾಡುತ್ತದೆ. ಅವರ ಮುಂದೆ ಬಂದು ಅಹಂವಿಕೆಯಿಂದ ಕೀಳಾಗಿ ವರ್ತಿಸುತ್ತಾ
ದುಸ್ಮನಾ ಮಧುವಯ್ಯ ದುರ್ಬುದ್ಧಿ ತರ‍್ಯಾನ
ಹಮ್ಮಿಂದ ಹರಳಗ ಕೇಳ್ಯಾನ ಯಾಕ್ಹಿಂಗ
ಸುಮ್ಮಾಗ ನಡೆದಿದೆ ಮುಂದಕ್ಕೆ
“ಶರಣು ಶರಣಾರ್ಥಿ ಮಧುವರಸರೆ” ಎನ್ನುತ್ತಾರೆ. ಗುರು ಬಸವ ಗುರು ಬಸವ ನಾಮ ಜಪಿಸುತ್ತಾ ಮುಂದಕ್ಕೆ ನಡೆಯುತ್ತಾರೆ. ಬಸವನ ನಾಮ ನುಂಗಲಾರದ ತುತ್ತಾಯಿತು ಆ ನರ ಮಾನವನಿಗೆ.
ಗುರುಬಸವ ನಾಮವು ಕಿವಿಗರಬೀಳುತ್ತಲ್ಲಿ
ನರರೂಪಿ ಮಧುವಯ್ಯ ಕೆಂಡಾದ ಮುಂದ ಹೋಗಿ
ಕರಹಿಡಿದು ಶರಣ ಹರಳೆಂದು
ಹರಳಯ್ಯ ಶರಣರ ಕೈಹಿಡಿದು ನಿಲ್ಲಿಸಿದ ಅವರ ಕೈಯಲ್ಲಿದ್ದ ಪಾದುಕೆಗಳು ಆತನ ಕಣ್ಣಿಗೆ ಬೀಳುವವು. ಅರಸರು ಮಂತ್ರಿಗಳು ಧರಿಸಬೇಕಾದಂತಹ ಈ ಚಮ್ಮಾವುಗಳು ಈತನ ಕೈಯಲ್ಲಿ ಎಲ್ಲಿಂದಾದರೂ ಕದ್ದು ತರುತ್ತಿದ್ದಾರೆನು? ಅದಕ್ಕೆ ಹೀಗೆ ಹಿಂದೆ-ಮುಂದೆ ನೋಡುತ್ತಾ ಹೊರಟಿದ್ದಾರೆ. ಹಿಡಿದು ಕೊಡಬೇಕು ಈತ ಕಳ್ಳನೆಂದು. ಬರಲಿ ಇವನ ಗುರು ಬಸವಣ್ಣ ಎಂದು ವಧುವಯ್ಯನ ಕಳ್ಳ ಬುದ್ದಿ ಒಳಗೊಳಗೆ ನಗಲು ಪ್ರಾರಂಭಿಸಿತು.
ಹರಳನ ಕರದಾನ ಚಮ್ಮಾವುಗೆ ನೋಡ್ಯಾನ
ಅರಸನು ಮಂತ್ರಿ ಚಮ್ಮಾವುಗೆ ಸತಿಪತಿ
ಇಬ್ಬರು ಕದ್ದು ತಂದಾರ
ಹಿಡಿಬೇಕು ಇವನಿಗೆ ಅರಸಗ ಕೊಡಬೇಕು
ಬಡಿಬೇಕು ನೆಲಕ್ಕೆ ಹಾಕುತ್ತಾ ಎನ್ನುತ್ತಾ
ಬಡ ಬಡ ಬಂದ ಮುಂದಕ್ಕೆ
ಹರಳನ ಕೈಯಾನ ಪತ್ರೋಳಿ ಹರದಾರ
ಕೆಟ್ಟ ಕೈಯಿಂದ ತೊಗೊಂಡಾನ ಆ ಗಳಿಗಿ
ಧರಿಸ್ಯಾನ ಪಾದುಕೆ ಕಾಲೊಳಗೆ
ದಂಪತಿಗಳು ಆ ಘಳಿಗೆ ಚಂಚಲಿತರಾದರೂ ತಕ್ಷಣ ಎಚ್ಚೆತ್ತುಗೊಂಡು
ನಿಲ್ಲಯ್ಯ ಮಧುವಯ್ಯ ಗುಲ್ಯಾಕ ಮಾಡುತ್ತಿ
ಮುಟ್ಯಾಕ ಮಡುಚಟು ಮಾಡುತಿ ಚಮ್ಮಾವುಗೆ
ಗುರುಬಸವನ ಶಿರದ ಮ್ಯಾಲಿನವು
ಗುರು ಬಸವನ ಪಾದಕ್ಕೆ ಒಪ್ಯಾವು ಈ ಜೋಡು
ಭವಿ ನೀನು ಅವಕ ಮುಟ್ಟಬೇಡ ಮಧುವಯ್ಯ
ಅರಿವಿಲ್ಲ ನಿನಗ ಇದರದು
ಎನ್ನುತ್ತಾರೆ. ಭವಿಯಾಗಿರುವ ನಿನ್ನ ಕೈಗಳು ಇದಕ್ಕೆ ತಾಗುವಂತಿಲ್ಲ ಎಂದು ಎಚ್ಚರಿಸಿದ್ದರೂ ಕೇಳದೆ ಮಧುವಯ್ಯ ಇನ್ನೂ ಹಠಮಾರಿಯಾದ. ಅವರ ಮಾತುಗಳ ಕಡೆಗೆ ಲಕ್ಷವಿಲ್ಲ. ಕೈಯೊಳಗೆ ಹಿಡಿದುದನ್ನು ಕಾಲೋಳಗೆ ಮೆಟ್ಟಿಯೇ ಬಿಟ್ಟ. ನೆಲಕ್ಕೆ ಬಿದ್ದು ಕಾಲುಗಳನ್ನು ತಿಕ್ಕತೊಡಗಿದ. ತಕ್ಷಣವೆ ಆ ಚಮ್ಮಾವುಗೆಗಳನ್ನು ಸತಿ-ಪತಿ ಎತ್ತಿಕೊಂಡರು. ಓಡಿ ಹೋಗಲಿಲ್ಲ. ಅಲ್ಲಿಯೇ ನಿಂತೂ ಆತನನ್ನು ಎತ್ತಿಕೊಂಡು ಆತನ ಮನೆಗೆ ತಂದು ಮಲಗಿಸಿ ನಮಸ್ಕರಿಸಿ ಮನೆಕಡೆ ಹೊರಟರು. ಮನದಲ್ಲಿ ಆತನ ಚೀತ್ಕಾರ ನೋವುಗಳ ಚಿಂತೆ. ಪರಶಿವ ಆತನನ್ನು ಕಾಪಾಡಪ್ಪ ಎನ್ನುತ್ತಾ ಮನೆಗೆ ಬರುತ್ತಾರೆ. ಒಂದು ಮಣಿಹಾಕಿ ಅದರ ಮೇಲೆ ಪಾದುಕೆಗಳನ್ನಿಟ್ಟು ನಮಸ್ಕಾರ ಸಲ್ಲಿಸಿ ತಮ್ಮ ಕಾಯಕದಲ್ಲಿ ಮಗ್ನರಾದರು.
ಈ ಕಡೆ ಮಧುವಯ್ಯನ ಸ್ಥಿತಿ ತುಂಬ ಚಿಂತಾಜನಕವಾಯಿತು ಮೈಯೆಲ್ಲ ಉರಿಯೇ ಉರಿ. ಹಕ್ಕಿಯ ಹಾಗೆ ಬಾಯಿ ಬಿಡುತ್ತಿದ್ದಾನೆ. ಎಂತೆಂತಹ ಮದ್ದು ನೀಡಿದ್ದರೂ ಅವನಿಗೆ ಗುಣವಾಗುತ್ತಿಲ್ಲ. ದು:ಖಿಸಿ ಅಳುತ್ತಿದ್ದಾನೆ. ಸಮೀಪದಲ್ಲಿ ನಿಂತ ಮಗಳು ಲಾವಣ್ಯ ಕೂಡಾ ಅಷ್ಟೆ ದು:ಖ ಪಡುತ್ತಿದ್ದಾಳೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಆಕೆಗೆ
ಮಧುವಯ್ಯನ ದು:ಖವು ಮುಗಿಲರ ಮುಟ್ಯಾದ
ಹಕ್ಕಿಪಕ್ಕಿ ಹಾಂಗ ಬಾಯಿಬಿಟ್ಟಾನ ನೋಡಿದ
ಮಗಳ ಎದೆಯು ಝಲ್ಲೆಂತು.
ದು:ಖಿಸಿ ಅಳುವಂತ ಮಗಳಿಗಿ ನೋಡುತ್ತಾ
ದು;ಖದಿ ಕರೆದು ಆಳ್ಮಗಳು ಕರೆದು ತಾ
ಹೇಳ್ತಾಳ ಬಿಡಿಸಿ ಅವಳಿಗೆ
ಶರಣರೆಂದರ ಸಾಮಾನ್ಯರಲ್ಲ. ಅಂತಹ ಹರಳಯ್ಯ ಶರಣರನ್ನು ಅವಮಾನ ಮಾಡಿ ಗುರು ಬಸವರಿಗಾಗಿ ಮಾಡಿದ ಪಾದುಕೆಗಳನ್ನು ಪಾಪಿ ಕಾಲುಗಳಿಂದ ಮೆಟ್ಟಿ ದುರಹಂಕಾರ ಮೆರೆದಿದ್ದಾರೆ. ಈಗ ಇದಕ್ಕೆ ಶರಣರ ಹಾದಿಯೇ ಪರಿಹಾರ. ಆ ಹಾದಿ ನೀನು ಹಿಡಿಯವ್ವಾ ಎಂಬ ಅಳು ಮಗಳ ಮಾತು ಮಗಳು ಲಾವಣ್ಯವತಿಗೆ ಸರಿ ಎನಿಸುತ್ತವೆ. ಹೇಗೆ ಮಾಡಬೇಕು ಎಂಬ ವಿಚಾರದಲ್ಲಿದಾಗ ಆಕೆ ಲಾವಣ್ಯಳನ್ನು ಕರೆದುಕೊಂಡು ಹರಳಯ್ಯನವರ ಗುಡಿಸಲಿಗೆ ಕರೆದುಕೊಂಡು ಬರುತ್ತಾಳೆ.
ಇಬ್ಬರೂ ತಾ ಹೋಗಿ ನಿಂತಾರ ಮನಿಮುಂದ
ಒಬ್ಬರ ಮುಖ ಇನ್ನೊಬ್ಬರು ನೋಡುತ್ತಾ
ಗಾಬರಿ ಆಗ್ಯಾರ ಒಳಗ್ಹೋಗಲು
ಹೊರಗರ ಬಂದಾಳ ಕಲ್ಯಾಣಮ್ಮ ಆಗರ
ಯಾರದರ ಎಂದು ನೋಡುತ್ತಾ ಅನುತ್ತಾಳ
ಶರಣರು ಹಾರ ಇಬ್ಬರೂ
ಶರಣೆರು ಇಬ್ಬರೂ ಬಂದಾರ ನಮ್ಮನಿಗೆ
ಕರದಾಳ ಬಾಗಿ ಅವರಿಗೆ ಅಂದಾಳ
ಪರಸಾದ ಪಡೆದು ಹೋಗಿರಿ
ಆ ನಿರ್ಮಲ ಮನಸ್ಸಿಗೆ ಎರಡೇ ಗೊತ್ತು. ಒಂದು ಕಾಯಕ ಇನ್ನೊಂದು ದಾಸೋಹ. ಕಲ್ಯಾಣಕ್ಕೆ ಬಂದ ಶರಣಿಯರಾಗಿರಬಹುದು ಎಂದು ಭಾವಿಸಿ ಅವರಿರ್ವರಿಗೆ ಒಳಗೆ ಬರಲು ವಿನಂತಿಸಿಕೊಳ್ಳುತ್ತಾಳೆ. ಆ ತಾಯಿಯ ಮಾತಿಗೆ ತಾಯಿ ಇಲ್ಲದ ತಬ್ಬಲಿ ಲಾವಣ್ಯ ಅವಳಲ್ಲಿ ತಾಯಿಯನ್ನು ಕಾಣುತ್ತಾಳೆ, ಮರೆಯುತ್ತಾಳೆ ತಾನು ಏಕೆ ಬಂದಿದ್ದೆನೆಂಬುದು. ಆ ತಾಯಿಯ ಕಾಲಿಗೆ ನಮಸ್ಕರಿಸುತ್ತಾಳೆ.
ತಾಯಿಯು ಇಲ್ಲದ ತಬ್ಬಲಿ ಆ ಮಗಳು
ತಾಯಿಯ ರೂಪ ಕಂಡಾಳ ಅವರಿಗೆ
ಭಕ್ತಿಲಿ ಹಾಕಿ ಸಾಷ್ಠಾಂಗ
ಎತ್ತಿ ತಾ ಹಿಡದಾಳ ಮಗಳಾ ಲಾವಣ್ಯಗ
ನೆತ್ತಿಯ ಮ್ಯಾಲ ಕೈಯಿಟ್ಟು ಕೇಳ್ಯಾರ
ಮತ್ಯಾಕ ನೀರು ಕಣ್ಣಾಗ
ಅಳುವ ಲಾವಣ್ಯಳಿಗೆ ಸಾಂತ್ವನದ ಮಾತುಗಳನ್ನು ಆಡುತ್ತಿರುವಾಗಲೇ ಅಳುಮಗಳು ಮುಂದ ಬಂದು ಕಲ್ಯಾಣಮ್ಮ ತಾಯಿಗೆ ಶರಣಾರ್ಥಿ ಸಲ್ಲಿಸುತ್ತಾ ಲಾವಣ್ಯಳ ಪರಿಚಯ ಮಾಡುತ್ತಾ ಅಲ್ಲಿಗೆ ಬಂದು ವಿಷಯವು ಹೇಳುತ್ತಾಳೆ. ಅವಳ ಮಾತು ಕೇಳಿದ ಕಲ್ಯಾಣಮ್ಮನವರಿಗೆ ಮತ್ತೊಂದು ಆಶ್ಚರ್ಯ. ಇಬ್ಬರನ್ನು ಕರೆದು ಒಳಗೆ ಕೂಡಿಸಿ ಪತಿ ಹರಳಯ್ಯನವರನ್ನು ಕರೆದು ಅವರ ಬಗ್ಗೆ ಹೇಳಿ ಬಂದ ವಿಷಯ ತಿಳಿಸುತ್ತಾರೆ. ಆಗ ಹರಳಯ್ಯನವರು ಕೈ ಜೋಡಿಸಿ ಅಲ್ಲಿ ಇಟ್ಟ ಪಾದುಕೆಗಳತ್ತ ಕೈ ತೋರಿಸಿ ನಡೆದುದೆಲ್ಲವನ್ನು ಆ ಮಗಳಿಗೆ ತಿಳಿಸುತ್ತಾರೆ. ತಕ್ಷಣವೇ ಎದ್ದ ಲಾವಣ್ಯ ಅದಕ್ಕೆ ಸಾಷ್ಠಾಂಗ ಹಾಕುತ್ತಾಳೆ, ಕೈ ಜೋಡಿಸುತ್ತಾಳೆ. ತಂದೆಯ ತಪ್ಪು ಒಪ್ಪಿಕೊಂಡು ಕ್ಷಮಿಸಲು ಕೇಳಿಕೊಳ್ಳತ್ತಾಳೆ. ದುಃಖಿಸಿ ಅಳುತ್ತಾಳೆ. ಹರಳಯ್ಯನವರಿಗೂ ಆ ನೋವು ಅತೀ ಕಸಿವಿಸಿಯನ್ನುಂಟು ಮಾಡುತ್ತದೆ.
ಅಳಬೇಡಾ ನೀಮಗಳೆ ಅಳಬೇಡ ತಂಗೆಮ್ಮ
ಕಳವಳ ಯಾಕ ಮನದಾಗ ನನ್ನವ್ವ
ಕಳೆಯುಳ್ಳ ಬಸವಗ ನೀನೆನಿಯೆ
ಬಸವಾ ಬಸವಾ ಎನ್ನುತ್ತಾ ಲಾವಣ್ಣ
ಮಹಾಮನೆ ಕಡೆಗೆ ಮುಖಮಾಡಿ ಬೇಡ್ಯಾಳ
ಅಪ್ಪಗ ಉಳಿಸು ನೀತಂದಿ
ತನ್ನಪ್ಪನಿಗೆ ಉಳಿಸು ನೀ ತಂದೆ ಬಸವಾ ಎನ್ನುತ್ತಾ ಪರವಶಳಾಗುತ್ತಾಳೆ. ಹರಳಯ್ಯನವರು ತಮ್ಮ ಕಾಯಕದ ಜಾಗಕ್ಕೆ ಅವಳನ್ನು ಕರೆಹೊಯ್ದು ಮಂಥಣಿಯಲ್ಲಿ ತುಂಬಿದ್ದ ನೀರನ್ನು ಮಣ್ಣಿನ ಮಡಿಕೆಯಲ್ಲಿ ತುಂಬಿ ಶರಣ ಮಧುವರಸರ ಮೈಮೇಲೆ ಹಾಕಲು ತಿಳಿಸುತ್ತಾರೆ. ತಕ್ಷಣವೇ ಲಾವಣ್ಯ
ತುಂಬಿದ ಗಡಿಗಿಗಿ ಇಂಬಿಲಿ ನಮಿಸ್ಯಾಳ
ನಂಬಿ ತಾ ನಮಿಸುತ್ತಾ ಗಂಭೀರಳಾಗಿ ನಡದಾಳ
ತಂದೆಯ ಕೈ ಹಿಡಿದು ನಡದಾಳ
“ನಂಬಿ ಕರೆದಡೆ ಓ ಎಂಬೆನೆ ಶಿವನು” ಎಂಬ ಬಸವಣ್ಣನವರ ನುಡಿಯು ಆ ಮಗಳ ಕಿವಿ ಮೇಲೆ ಇದ್ದಿರುವದರಿಂದಲೇ ಈಕೆ ನಂಬಿಕೆಯುಟ್ಟು ಆ ಗಡಿಗೆಯನ್ನು ಎತ್ತಿಕೊಂಡು ಮನೆಗೆ ಬರುತ್ತಾಳೆ. ತಂದೆಯನ್ನು ಎತ್ತಿಕೊಂಡು ಬಚ್ಚಲಕ್ಕೆ ಒಯ್ಯುವದಿಲ್ಲ ಎನ್ನುತ್ತಾರೆ ಜನಪದರು. ಶರಣರ ಕಾಯಕದ ನೀರು ನೀರಲ್ಲ ಅದು ಪವಿತ್ರವಾದದು. ಎಂದು ಭಾವಿಸಿ ನಡುಮನೆಯಲ್ಲಿ ತಂದೆಯನ್ನು ಕೂಡಿಸಿ ಮೈಗೆ ಮೊದಲು ಆ ನೀರು ಒರೆಸುತ್ತಾಳೆ.
ಮಗಳು ಹೇಗೆ ಒರೆಸುತ್ತಾ ನಡೆದಳೋ ಹಾಗೆ ಉರಿ ಕಡಿಮೆಯಾಗುತ್ತಾ ನಡೆಯಿತು. ಆ ಮೇಲೆ ಯಾವ ಪಾದಗಳಿಂದ ಮೆಟ್ಟಿದ್ದನೋ ಆ ಪಾದಕ್ಕೆ ಆ ನೀರು ಹಚ್ಚುವದಿಲ್ಲ. ಆದರೂ ಆ ಪಾದದ ಉರಿ ಕಡಿಮೆಯಾಗುತ್ತದೆ. ಮಧುವಯ್ಯಗೆ ಮೊದಲಿನ ಕಳೆ ಬರುತ್ತದೆ.
ಬಚ್ಚಲಕ ಒಯ್ಯದಿಲ್ಲ ತಂದೀಗಿ ಆಗರ
ಸ್ವಚ್ಚ ನಡು ಮನಿಗಿ ತಂದಾಳ ಎನ್ನುತ್ತಾಳ
ಶರಣರ ಮನೆ ನೀರು ನೀರಲ್ಲ
ಶರಣರ ಮನೆನೀರು ನೀರಲ್ಲ ಎನ್ನುತ್ತಾ
ಗುರು ಹರಸಿ ಕೊಟ್ಟ ತೀರ್ಥದು ಎನ್ನುತ್ತಾ
ಒರಸ್ಯಾಳ ಮೈಗರ ಆ ನೀರು
ತಂದೆಯ ಮಖದ ಮೊದಲಿನ ಕಳೆ ಕಂಡು ಹಿಗ್ಗಿದ ಲಾವಣ್ಯ ಆ ಮಣ್ಣಿನ ಗಡಿಗೆ ಸಮೇತ ಅದನ್ನು ಒಯ್ದು ತಮ್ಮ ಮನೆಯ ದೇವರ ಕೋಣೆಯಲ್ಲಿಟ್ಟಳು. ಪೂಜೆ ಮಾಡಿದಳು. ಅದು ಆಕೆಯ ಮನೆಯ ದೇವರಾಯಿತು.
ಗಡಗಿಯು ಒಯ್ದಾಳ ಹಿರಮನ್ಯಾಗ ಇಟ್ಟಾಳ
ಗಡಿಗಿಯು ಅಲ್ಲ ಮನೆದೇವರು ಲಾವಣ್ಯ
ಓಡುತ್ತಾ ಬಂದು ಅನತಾಳ
ಓಡುತ್ತಾ ಬಂದಾಳ ತಂದಿಯ ಕೈಹಿಡಿದು
ಹಿಡದಾಳ ಹಾದಿ ಹರಳಯ್ಯನ ಮನೆಗರ
ನಡೆದಾನ ಸುಮ್ಮನ ಮಧುವಯ್ಯ
ಸತಿ-ಪತಿ ಇಬ್ಬರೂ ತಮ್ಮ ಕಾಯಕದೊಳು ಒಂದಾಗಿರುತ್ತಾರೆ. ತಂದೆಯ ಕೈ ಹಿಡಿದು ತಂದು ಆ ಅವರ ಎದುರು ನಿಲ್ಲಿಸುತ್ತಾಳಲ್ಲದೆ ಅವರಿಗೂ ಆ ಮಂಥಣಿಗೂ ನಮಸ್ಕರಿಸಲು ತಿಳಿಸುತ್ತಾಳೆ. ಆಗ ಮಧುವಯ್ಯ
ಮಗಳಾ ಮುಖ ಒಮ್ಮ ಹರಳಯ್ಯನ ಮುಖ ಒಮ್ಮ
ನೋಡುತಾ ನಿಂತ ಮಧುವಯ್ಯ ಅವನಿಗೆ
ತಿಳಿಲಿಲ್ಲ ಮಗಳ ರೀತಿಯು
ತಂದೆಯ ಮನದ ಇಂಗಿತವನ್ನು ಆ ತಕ್ಷಣ ಅರಿತು ಬಿಚ್ಚಿ ಬಿಚ್ಚಿ ಹೇಳುತ್ತಾಳೆ ನಡೆದಂತ ವಿಷಯವನ್ನು. ಆಕೆಯ ಮಾತು ಮುಗಿಯುವಷ್ಟರಲ್ಲಿಯೇ ಹರಳಯ್ಯನವರ ಪಾದಕ್ಕೆ ಎರಗುತ್ತಾನೆ ಮಧುವಯ್ಯ, ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನಲ್ಲದೆ ಶರಣ ಧರ್ಮವನ್ನು ಸ್ವೀಕರಿಸಿ ಹರಳಯ್ಯನವರ ಮಗ ಶೀಲವಂತನಿಗೆ ತನ್ನ ಮಗಳಾದ ಲಾವಣ್ಯವತಿಗೆ ಕೊಟ್ಟು ಮದುವೆ ಮಾಡಿ ಬೀಗರು ಆಗುತ್ತಾರೆನ್ನುತ್ತಾರೆ.
ಹರಳಯ್ಯನ ಮಗನಿಗೆ ಮುದ್ದಿನ ಮಗಳ ಕೊಟ್ಟು
ಧಾರಿಯು ಎರೆದು ಬೀಗರಾಗಿ ಮಧುವಯ್ಯ
ಶರಣರ ಧರ್ಮ ತಾ ಹಿಡಿದು
ಶರಣರ ಧರ್ಮವು ತಾ ಹಿಡಿದು ಮುಂದಿನ ಜೀವನವೆಲ್ಲ ಅದರ ತತ್ವಕ್ಕಾಗಿ ಮೀಸಲಿಟ್ಟರು ಶರಣ ಮಧುವರಸರು.
ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್ ನಂ. 94821 47084
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in