ಜೇಡರ ದಾಸಿಮಯ್ಯ ಶರಣರ ವಚನ ನಿರ್ವಚನ | ಶ್ರೀಮತಿ. ವಿಜಯಲಕ್ಷ್ಮಿ ಎಂ. ಪಾಟೀಲ, ಕಲಬುರಗಿ.

ವಚನ:
ತಾಯ ಗರ್ಭದ ಶಿಶು ತಾಯ ಕುರುಹನರಿಯದು.
ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು.
ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು.
ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ!
ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-282/ವಚನ ಸಂಖ್ಯೆ-801)

ಆದ್ಯ ವಚನಕಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಚನಕಾರರು ಜೇಡರ ದಾಸಿಮಯ್ಯ ಶರಣರು. ಬಸವಣ್ಣನವರ ಹಿರಿಯ ಸಮಕಾಲೀನರಾದ ಈ ಶರಣರು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರು (ಬಿ) ಗ್ರಾಮದಲ್ಲಿ ಜನಿಸಿದವರು. ತಂದೆ ಕಾಮಯ್ಯ ಹಾಗೂ ತಾಯಿ ಶಂಕರಿ ಮತ್ತು ಮಡದಿ ವಚನಕಾರ್ತಿ ಶರಣೆ ದುಗ್ಗಳೆ. ಕುಲ ಕಾಯಕ ನೇಕಾರಿಕೆಯೇ ಈ ಶರಣರ ಕಾಯಕವಾಗಿತ್ತು. ರಾಮನಾಥ ಎನ್ನುವ ಅಂಕಿತನಾಮದಲ್ಲಿ ಇವರ 176 ವಚನಗಳು ಲಭ್ಯವಾಗಿವೆ. ಬಸವ ಕಲ್ಯಾಣದಲ್ಲಿ ಇವರ ಹೆಸರಿನ ಎರಡು ಮಠಗಳನ್ನು ಕಾಣಬಹುದಾಗಿದೆ.

ನಿರ್ವಚನ:
ವಚನ ನೋಡಲು ಚಿಕ್ಕದಾಗಿದ್ದರೂ ಎಚ್ಚರಿಕೆಯ ಸಂದೇಶ ನೀಡುವಂತಹದೇ ಆಗಿದೆ. ದೇವರು ಮಾನವರಿಂದ ದೂರಿಲ್ಲ, ಬಹಳ ಸಮೀಪದಲ್ಲಿಯೆ ಇದ್ದರೂ ಅರಿಯದಷ್ಟು ಮೌಢ್ಯತೆ ಆತನೊಳು ತುಂಬಿದೆ ಎನ್ನುವದನ್ನು ತಾಯಿ ಮತ್ತು ಶಿಶುವಿನ ಉದಾಹರಣೆಯ ಮೂಲಕ ನೀಡಿರುವದು ತುಂಬ ಮಹತ್ವಪೂರ್ಣ ಆಗಿದೆಯೆಂಬುದು ಗಮನಿಸುವಂತಹದೆ ಆಗಿದೆ.

ತಾಯಿಯ ಗರ್ಭದಲ್ಲಿ ಶಿಶು ಒಂಭತ್ತು ತಿಂಗಳಿದ್ದರೂ ಆ ಶಿಶುವಿಗೆ ತಾಯಿಯ ಕುರುಹು ಗೊತ್ತಿಲ್ಲ, ತನ್ನ ಶಿಶುವನ್ನು ಗರ್ಭದಲ್ಲಿ ಹೊತ್ತುಕೊಂಡು ತಿರುಗಿದರೂ ತಾಯಿ ತನ್ನ ಶಿಶುವು ಹೆಣ್ಣೋ ಗಂಡೋ ಎಂಬುವುದರ ಜೊತೆಗೆ ಅದರ ರೂಪ, ಎತ್ತರ, ಬಿತ್ತರಗಳೇನು ಅರಿಯಳು. ಆದರೆ ಆ ಮಗುವಿನ ಮೇಲೆ ಆಕೆಗೆ ಅದೆಂತಹ ಪ್ರೀತಿ, ಪ್ರೇಮ, ತನ್ನ ಪ್ರಾಣವನ್ನೆ ಇಟ್ಟುಕೊಂಡು ಕುಳಿತಿರುವಳು. ಹಾಗೆ ದೇವರ ಮೇಲೆ ಭಕ್ತಿಯಿದೆ, ಗೌರವವಿದೆ, ಭಯವಿದೆ, ಆದರೆ ಭಕ್ತನಿಗೆ ಮಾಯಾ ಮೋಹಗಳು ಸುತ್ತಿಕೊಂಡಿವೆ.

ಆದರೆ ಸಾಧಕ ಯಾವುದೇ ರೀತಿಯ ಮಾಯೆಗಾಗಲಿ, ಮೋಹಕ್ಕಾಗಲಿ ಒಳಗಾಗಬಾರದು. ಒಂದು ವೇಳೆ ಒಳಗಾಗಿದ್ದರೆ, ಅದರಿಂದ ಮುಕ್ತನಾಗಬೇಕು. ಹಾಗಿದ್ದಾಗ ಮಾತ್ರ ದೇವರ ಒಲುಮೆ ಪಡೆಯಲು ಸಾಧ್ಯವಾಗುತ್ತದೆ. ಕೇವಲ ತೋರಿಕೆಗಾಗಿ ಡಾಂಭಿಕತನದಿಂದ ಅರ್ಥಹೀನವಾದ ಭಕ್ತಿ ಮತ್ತು ಪೂಜೆ ಮಾಡುವುದರಿಂದ ಏನೇನು ಸಾಧ್ಯವಿಲ್ಲ ಎನ್ನುತ್ತಾರೆ.

ಈ ವಚನವು ಮನುಷ್ಯನ ಅಜ್ಞಾನದ ನಿಲುವನ್ನು ವಿವರಿಸುತ್ತದೆ. ಭೌತಿಕ ಮೋಹದಿಂದ ಮುಕ್ತರಾಗಿ ಆತ್ಮ ಸಾಕ್ಷಾತ್ಕಾರದ ಮೂಲಕ ದೇವರನ್ನು ಅರಿಯುವ ಪ್ರಯತ್ನ ಮಾಡಬೇಕು. ಭಕ್ತಿಯ ಭದ್ರ ತಳಹದಿಯ ಮೇಲೆ ಶ್ರದ್ಧೆ ನಿಷ್ಠೆಯಿಂದ ನಮ್ಮ ಅರಿವಿನ ಕುರುಹು ಆದ ಇಷ್ಟಲಿಂಗವನ್ನು ನಿರಂತರವಾಗಿ ಅರಿಷಡ್‌ವರ್ಗಗಳಿಂದ ಮುಕ್ತರಾಗಿ ಪೂಜಿಸಿದ್ದೇ ಆದರೆ ಮನುಷ್ಯನು ಮಹಾಂತನಾಗುತ್ತಾನೆ. ನರನು ಹರನಾಗುತ್ತಾನೆ. ಮಾನವನು ತನಗೆ ಸುತ್ತಿಕೊಂಡ ಮಲತ್ರಯಗಳಿಂದ ಬಿಡುಗಡೆ ಹೊಂದಬೇಕಾದರೆ ಇಷ್ಟಲಿಂಗ ಪೂಜೆ ನಿರಂತರವಾಗಬೇಕು. ಆ ಶಿವಯೋಗ ಸಾಧನೆಯಿಂದ ಸಮ ಚಿತ್ತತೆ ಹೊಂದಬಹುದು ಆಗ ನಮ್ಮ ಮನ ಬುದ್ಧಿ ಏಕಾಗ್ರತೆ ಆಗ ನಮ್ಮ ಮನ ಬುದ್ಧಿ ಚಿತ್ತದಲ್ಲಿ ಏಕಾಗ್ರತೆ ಸಾಧಿಸಬಹುದು. ಏಕೆಂದರೆ ಪರಮಾತ್ಮನನ್ನು ಕಾಣುವದಕ್ಕೆ ಇವು  ಮೆಟ್ಟಿಲುಗಳಾಗಿವೆ. ಅಂತರಂಗ ಬಹಿರಂಗ ಶುದ್ಧವಾದಾಗ ಮಾತ್ರ ಆತನ ಒಲುಮೆ ಪಡೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಕೇವಲ ಪೂಜೆಯಲ್ಲಿ ಮಾತ್ರವಲ್ಲ ಮಾಡುವ ಕಾಯಕದೊಳಗೆ, ನೀಡುವ ದಾಸೋಹದೊಳಗೆ, ಮಾನವ ಆಶೆ ಆಮಿಷಗಳೊಳಗೆ ಸಿಲುಕಿಕೊಂಡಿದ್ದಾನೆ. ಎಲ್ಲವೂ ನನಗೆ ಇರಲೆಂಬ ಹಪಹಪಿ ಜೀವನ ನಡೆಸುವವನಾಗಿರುವದರಿಂದ ಆ ಪರಾತ್ಪರ ವಸ್ತು ಕಾಣಲು ಸಾಧ್ಯವಿಲ್ಲ. ಆ ಉದ್ದೇಶವು ಇಲ್ಲದೆ ಕೇವಲ ಲೌಕಿಕ ಆಶೆ ಆಮಿಷಗಳಿಂದ ಯಾರದೋ ತಂದು ಯಾರಿಗೋ ಪೂಜಿಸುವ ಈತನ ಭಕ್ತಿ ಅದು ಅರ್ಥವಿಲ್ಲದ್ದು ನ್ನುತ್ತಾರೆ ದಾಸಿಮಯ್ಯ ಶರಣರು. ಆದರಿಂದ ಪೂಜೆಯಾಗಲಿ, ಕಾಯಕ ದಾಸೋಹಗಳೆ ಆಗಲಿ ನನಗಾಗಿ ಅಲ್ಲ, ನಿನಗಾಗಿ ಎಂಬ ವಿಶಾಲ ಭಾವನೆಯಿಂದ ಮಾಡಬೇಕು.

ಶ್ರೀಮತಿ. ವಿಜಯಲಕ್ಷ್ಮಿ ಎಂ. ಪಾಟೀಲ,
ಶರಣ ತತ್ವ ಚಿಂತಕರು,
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್‌ ಸಂ. 90609 00191.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply