
ದೈವದೊಡನೆ ಸಂಸ್ಕೃತ ಭಾಷೆಯಲ್ಲೇ ಸಂವಾದ ಸಾಧ್ಯ ಎನ್ನುವ ಕಾಲ ಘಟ್ಟದಲ್ಲಿ ದೈವದೊಡನೆ ಕನ್ನಡ ಭಾಷೆಯ ಮೂಲಕವೂ ಸಂವಾದ ಮಾಡಬಹುದು, ಅವನೊಂದಿಗೆ ಜನಸಾಮಾನ್ಯರ ಮಾತಿನಲ್ಲೇ ಸಂಭಾಷಣೆ ಮಾಡಬಹುದು ಎಂದು ಜಗತ್ತಿಗೆ ತೋರಿಸಿದವರು 12 ನೇ ಶತಮಾನದ ಶರಣರು. ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯು ಮಾನವರನ್ನು ವರ್ಗ ವರ್ಗವಾಗಿ ಹಂಚಿತ್ತು. ಕೆಲವರು ಶುದ್ಧ, ಕೆಲವರು ಅಶುದ್ಧ ಎಂದು ಹೇಳಿದ್ದ ವ್ಯವಸ್ಥೆಗೆ ಶರಣರು ಧಿಕ್ಕಾರ ಹೇಳಿದರು. ಸಾಮಾಜಿಕ ಮೌಲ್ಯಗಳನ್ನೇ ಧಾರ್ಮಿಕ ಮೌಲ್ಯಗಳನ್ನಾಗಿ ರೂಪಾಂತರಿಸಿ ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು, ಅಂದರೆ ಇಹಲೋಕದಲ್ಲಿ ನೀತಿಯುತವಾಗಿ, ದಯೆಯಿಂದ, ಕಾಯಕದಿಂದ, ಬಾಳಿ ಬದುಕಿದರೆ ಸ್ವರ್ಗ ಸ್ಥಿತಿ ಇಲ್ಲಿಯೇ ದೊರೆಯುತ್ತದೆ ಎಂದು ಹೇಳಿದರು. 12 ನೇ ಶತಮಾನಕ್ಕೆ ಮೊದಲು “ಬಲಿ ಧರ್ಮಸ್ಯ ಮೂಲಂ” ಎಂಬ ಮಾತು ಇತ್ತು. ಆದರೆ ಇದಕ್ಕೆ ವಿರುದ್ಧವಾಗಿ “ದಯವಿಲ್ಲದ ಧರ್ಮವದಾವುದಯ್ಯ ದಯವೇ ಧರ್ಮದ ಮೂಲವಯ್ಯ” ಎಂಬ ವಚನದ ಮೂಲಕ ಶರಣರು ಧರ್ಮದ ಹೃದಯವೇ ದಯೆ ಎಂಬ ಸತ್ಯವನ್ನ ಲೋಕಕ್ಕೆ ಸಾರಿದರು. ಪ್ರಾಯಶ: ಪ್ರಪಂಚದ ಬೇರಾವ ಧರ್ಮದ ಬೇರಾವ ಭಾಷೆಯಲ್ಲಿಯೂ ಧರ್ಮದ ಸಾರವನ್ನು ಇಷ್ಟು ಸರಳವಾಗಿ, ಸ್ಪಷ್ಟವಾಗಿ ಮತ್ತು ಪ್ರಭಾವಶಾಲಿಯಾಗಿ ಅರ್ಥೈಸಿರುವ ನಿದರ್ಶನಗಳು ವಿರಳ. ಅಷ್ಟು ಸರಳವಾಗಿ ಶರಣರು ಧರ್ಮವನ್ನು ವ್ಯಾಖ್ಯಾನಿಸಿದ್ದಾರೆ. ಶರಣರ ವಚನಗಳು ದೈನಂದಿನ ಬದುಕಿನ ನುಡಿಮುತ್ತುಗಳಾಗಿದ್ದವು. ಶರಣ ಆದಯ್ಯನವರ ವಚನದಲ್ಲಿ ಇದನ್ನು ಗಮನಿಸಬಹುದು.
ಹಿಂದಣ ಕಥೆಯ ಮುಂದೆ ಪೇಳುವ ಕಾವ್ಯವಲ್ಲ
ಮುಂದಣ ಕಥೆಯನಿಂದು ಹೇಳುವ ನಾಟಕವಲ್ಲ
ಬಂದ ಶಬ್ದವ ಸಂದಿಲ್ಲದುಸುರುವೆನೆಂಬ ಅಭ್ಯಾಸಿಯಲ್ಲ
ಛಂದ ವಿಚ್ಛಂದಿಯೆಂಬ ಸಂದೇಹಿಯಲ್ಲ
ಸೌರಾಷ್ಟ್ರ ಸೋಮೇಶ್ವರ
ನಿಮ್ಮ ಶರಣರ ಸ್ವಯಾನುಭಾವದ ಪರಿ ಬೇರೆ
ಎಂಬ ವಚನದಲ್ಲಿ ನಾನು ಹೇಳುವುದು ಹಳೆಯ ಕಥೆಯನ್ನು ಹೊಸದಾಗಿ ಹೇಳುವ ಕಾವ್ಯವಲ್ಲ. ಅಂದರೆ ಪುರಾಣ, ಇತಿಹಾಸ ಮತ್ತು ಕಾವ್ಯಗಳ ಪುನರಾವರ್ತನೆಯಲ್ಲ. ನಾನು ಹೇಳುವುದು ನಾಳೆಯ ಕಥೆ ಅಥವಾ ಭವಿಷ್ಯದ ನಾಟಕವೂ ಅಲ್ಲ. ಅಂದರೆ ಕಲ್ಪನೆಯ ಕಾವ್ಯ ಅಥವಾ ರಂಗ ಪ್ರಯೋಗವು ಅಲ್ಲ. ಬಾಯಿಪಾಠ ಅಥವಾ ಕಂಠಪಾಠ ಮಾಡಿಕೊಂಡು ತಮ್ಮ ಗುರುವಿಗೆ ಒಪ್ಪಿಸುವ ಪಾತ್ರದ ಮಾತೂ ಅಲ್ಲ. ಹಾಗೆಯೇ ಇದು ಕ್ರಮಬದ್ಧವಾಗಿದೆಯೋ ಅಥವಾ ಕ್ರಮಬದ್ಧವಾಗಿಲ್ಲವೋ ಎಂದು ಹೇಳುವ ವಿಮರ್ಶಕನ ಮಾತು ಅಲ್ಲ. ಹಾಗಾದರೆ ಶರಣರ ವಚನಗಳು ಏನು? ಎನ್ನುವ ಪ್ರಶ್ನೆಗೆ ಈ ವಚನದಲ್ಲಿಯೇ ಉತ್ತರವಿದೆ. ವಚನಗಳು ಕಾವ್ಯವಲ್ಲ, ನಾಟಕವಲ್ಲ, ಛಂದಸ್ಸೂ ಅಲ್ಲ, ಅದು ಶರಣರ ನಿಜವಾದ ಅನುಭವದಿಂದ ಬಂದ ಪರಮಸತ್ಯ.
ಭಾರತದ ಜ್ಞಾನ ಪರಂಪರೆಯು ಕೇವಲ ವಾಚಕವಲ್ಲ, ಅದು ಪ್ರಕೃತಿಯ ವಸ್ತುಗಳಲ್ಲಿ ಅಚ್ಚಳಿಯದಂತೆ ಬರೆದ ಇತಿಹಾಸವಾಗಿದೆ. ಶರಣರು ತಮ್ಮ ಅನುಭವಗಳನ್ನು ವಚನಗಳೆಂಬ ಮಾತಿನ ಮೂಲಕ ಲೋಕಕ್ಕೆ ನೀಡಿದರು. ಆದರೆ ಆ ಮಾತುಗಳ ಶಾಶ್ವತತೆಯನ್ನು ತಾಡೋಲೆಗಳು ನೀಡಿದವು. ಅವು ಭಕ್ತಿ ಕಾಯಕ ಮತ್ತು ಸತ್ಯದ ತ್ರಿಕೂಟವನ್ನು ಶಾಶ್ವತವಾಗಿ ವಸ್ತುರೂಪಗೊಳಿಸಿದವು.
ಭಾರತದ ಸಂಸ್ಕೃತಿಯು ಮರ, ಮಣ್ಣು ಮತ್ತು ಮನಸ್ಸಿನಿಂದ ಹುಟ್ಟಿದೆ. ಅಲ್ಲಿ ಪ್ರತಿಯೊಂದು ವಸ್ತುವೂ ಒಂದು ಗ್ರಂಥ, ಒಂದು ಅನುಭವ. ಎಲೆಗಳು ಕಾಗದಗಳಾಗಿದ್ದವು, ಕಲ್ಲುಗಳು ಶಾಸನಗಳಾಗಿದ್ದವು, ಮನುಷ್ಯನು ಪಠ್ಯವಾಗಿದ್ದನು. ಅಂತಹ ಪರಂಪರೆಯು ವಚನ ಸಾಹಿತ್ಯದ ಕಾಲದಲ್ಲಿ ತನ್ನ ಉನ್ನತಿಯನ್ನು ಕಂಡಿತು. ಶರಣರು ಮಾತಿನಲ್ಲೇ ಪರಮಾತ್ಮನನ್ನು ಅನುಭವಿಸಿದರು. ಆದರೆ ಆ ಮಾತುಗಳು ಕಾಲದ ಮಣ್ಣು ತಿನ್ನದಂತೆ ಉಳಿಸಿದ ಸಾಧನವೇ ತಾಡೋಲೆಗಳು.
ಕಾಗದದ ಬಳಕೆ ಭಾರತಕ್ಕೆ ಇಸ್ಲಾಂ ಹಾಗೂ ಪರ್ಶಿಯನ್ ಪ್ರಭಾವದ ನಂತರ ಹೆಚ್ಚು ಪರಿಚಯವಾಯಿತು. ಅದಕ್ಕೂ ಮೊದಲು ಉತ್ತರ ಭಾರತದಲ್ಲಿ ಹಿಮಾಲಯ ಭಾಗದಲ್ಲಿ ದೊರೆಯುತ್ತಿದ್ದ ಭೂರ್ಜಪತ್ರಗಳನ್ನು ಹಾಗೂ ದಕ್ಷಿಣ ಭಾರತದ ಸಸ್ಯ ಸಂಪತ್ತಿನಲ್ಲಿ ದೊರೆಯುವ ತಾಳೆಮರಗಳ ಎಲೆಗಳನ್ನು ಕತ್ತರಿಸಿ ಸಂಸ್ಕರಿಸಿ ಲಿಖಿತ ಗ್ರಂಥಗಳ ರೂಪದಲ್ಲಿ ಬಳಸುವುದು ರೂಢಿಯಲ್ಲಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಡೋಲೆಗಳು ವಿದ್ಯಾಪೀಠ, ಮಠ ಮತ್ತು ದೇವಸ್ಥಾನಗಳಲ್ಲಿನ ಪವಿತ್ರ ಗ್ರಂಥಾಲಯಗಳ ಪ್ರಮುಖ ಸಂಗ್ರಹವಾಗಿದ್ದವು. ಈ ಮಾಧ್ಯಮದ ಮೂಲಕವೇ ವಚನಗಳು, ಶಾಸ್ತ್ರಗಳು, ಪುರಾಣಗಳು ಮತ್ತು ತತ್ವಶಾಸ್ತ್ರಗಳ ಹಸ್ತಪ್ರತಿಗಳು ನಿರಂತರವಾಗಿ ಸಂರಕ್ಷಿಸಲ್ಪಟ್ಟವು.
ತಾಡೋಲೆ ಎಂಬ ಪದದಲ್ಲಿ ಎರಡು ಅಂಶಗಳಿವೆ. ತಾಳೆ ಎಂದರೆ ತಾಳೆಮರ, ಓಲೆ ಎಂದರೆ ಅದರ ಎಲೆ ಅಥವಾ ಬರಹದ ಹಾಳೆ. ಇದು ಕೇವಲ ಪ್ರಕೃತಿಯ ಉತ್ಪನ್ನವಲ್ಲ ಬದಲಾಗಿ ಅದು ಭಕ್ತಿಯು ತಾಳ್ಮೆಯ ರೂಪ ತಾಳಿದ ಕ್ಷಣ. ಶರಣರು ತಮ್ಮ ವಚನಗಳು ಕಾಲದೊಂದಿಗೆ ಕಳೆದು ಹೋಗಬಾರದು ಎಂದು ಬಯಸಿದರು. ಶರಣರು ಮಾತುಗಳನ್ನು ದೇವರ ವಾಸಸ್ಥಾನ ಆದರೆ ಬರಹಗಳು ದೇವರ ಶಾಶ್ವತ ಸ್ವರೂಪ ಎಂದು ನಂಬಿದ್ದರು. ಹೀಗಾಗಿ ತಾಡೋಲೆಗಳು ಭಕ್ತಿಯು ಕೈಹಿಡಿದ ಕಾಯಕವಾಗಿ ಬೆಳೆಯಿತು.
12 ನೇ ಶತಮಾನದ ಬಸವಾದಿ ಶಿವಶರಣರು ಅನುಭವ ಮಂಟಪದ ಚರ್ಚೆಯಲ್ಲಿ ಚರ್ಚಿತವಾಗಿ ಅಂತಿಮ ರೂಪ ಪಡೆದ ವಚನಗಳನ್ನು ಅಕ್ಷರ ಜ್ಞಾನವಿದ್ದ ಶರಣರು ಸ್ವತ: ತಮ್ಮ ಹೃದಯದ ನಾದವನ್ನು, ಆತ್ಮ ಸಾಕ್ಷಾತ್ಕಾರದ ಅನುಭವವನ್ನು ಬರೆಯುತ್ತಿದ್ದರು. ತಮ್ಮ ಶಕ್ತಿಯಿಂದಲೇ ವಚನಗಳನ್ನು ತಾಡೋಲೆಗಳಲ್ಲಿ ಸೃಷ್ಟಿಸುತ್ತಿದ್ದರು. ಶರಣರು ತಮ್ಮ ಹೃದಯದ ನಾದವನ್ನು, ಉತ್ಸಾಹವನ್ನು, ಭಕ್ತಿಯ ತೀವ್ರತೆಯನ್ನು ಶಾಂತರಸರ ಮುಂದೆ ಶ್ರವಣವಾಗಿ ಹಂಚುತ್ತಿದ್ದರು. ವಚನ ಭಂಡಾರಿ ಶಾಂತರಸ ಮತ್ತು ಅವರ ತಂಡದ ಓಲೆಯ ರಾಮಯ್ಯ, ನಿಜಲಿಂಗ ಚಿಕ್ಕಯ್ಯ, ಇತ್ಯಾದಿ ಸದಸ್ಯರುಗಳು ಶಿವಾನುಭವಿಗಳ ಶ್ರವಣವನ್ನು ತಾಳ್ಮೆಯಿಂದ ಕೇಳುತ್ತಿದ್ದರು. ಶ್ರದ್ಧೆಯಿಂದ ಗಮನಿಸುತ್ತಿದ್ದರು. ನಂತರ ಆ ನಾದವನ್ನು ತಾಡೋಲೆಗಳಲ್ಲಿ ಅಮೃತಮಯ ವಚನ ರೂಪದಲ್ಲಿ ಬರೆಯುತ್ತಿದ್ದರು.
ತಾಡೋಲೆಗಳಲ್ಲಿ ವಚನಗಳು ಬರೆಯಲ್ಪಟ್ಟವು ಎನ್ನುವುದು ನಿಜಕ್ಕೂ ಇತಿಹಾಸಾತ್ಮಕ ಹಾಗೂ ಸಂಸ್ಕೃತಿ ಪರ ಅಂಶಗಳಿಂದ ತುಂಬಿರುವ ವಿಷಯ. ತಾಡೋಲೆ ಅಥವಾ ತಾಳೆ ಓಲೆ ಎಂಬ ಪದದ ಅರ್ಥ ತಾಳೆ ಮರದ ಎಲೆ ಮತ್ತು ಅದರಿಂದ ಮಾಡಿದ ಬರಹದ ಹಾಳೆಯನ್ನು ಓಲೆ ಎನ್ನುತ್ತಾರೆ. ಇದನ್ನು ಸಂಸ್ಕೃತದಲ್ಲಿ ತಾಲಪತ್ರ ಎಂದು, ಕನ್ನಡದಲ್ಲಿ ತಾಳೆಓಲೆ ಎಂದು ಇಂಗ್ಲೀಷ್ನಲ್ಲಿ Palm Leaf Manuscript ಎಂದು ಕರೆಯುತ್ತಾರೆ.
ತಾಡೋಲೆ ತಯಾರಿಕೆ ಒಂದು ಕಾಯಕ ಯಜ್ಞ. ಬಲಿತ ತಾಳೆ ಮರದಿಂದ ಆಯ್ದ ಎಲೆಗಳನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಬೇಯಿಸಿ, ನೆರಳಿನಲ್ಲಿ ಒಣಗಿಸುತ್ತಿದ್ದರು. ಒಣಗಿದ ಎಲೆಗಳು ಮೃದುವಾಗಲು ಎಣ್ಣೆ ಹಚ್ಚಿ ದಿನಗಟ್ಟಲೆ ಕಲ್ಲಿನಡಿ ಒತ್ತೆ ಇಡುತ್ತಿದ್ದರು. ಹಾಗಾಗಿ ಅವುಗಳು ಸಮವಾಗುತ್ತಿದ್ದವು. ನಂತರ ನಾರು ಮಿಶ್ರಿತ ಎಣ್ಣೆ ಅಥವಾ ಎಳ್ಳೆಣ್ಣೆ ಹಚ್ಚಿ ಮೃದುವಾಗಿಸುತ್ತಿದ್ದರು. ಬಳಿಕ ತಾಮ್ರದ ಸೂಜಿಯಿಂದ ಅಕ್ಷರಗಳನ್ನು ಕೆತ್ತುತ್ತಿದ್ದರು. ಅದು ಕೇವಲ ಬರವಣಿಗೆಯಾಗಿರಲಿಲ್ಲ ಬದಲಾಗಿ ಪ್ರತಿ ಅಕ್ಷರವೂ ಪ್ರಾರ್ಥನೆಯಂತಿತ್ತು. ಅವರ ಮನಸ್ಸು ಕೇವಲ ಲೇಖನಿಯಾಗಿರಲಿಲ್ಲ, ಅದು ಧ್ಯಾನದ ಪೀಠವಾಗಿತ್ತು. ನಂತರ ಕರಿದ ಬೂದಿ ಮತ್ತು ಎಣ್ಣೆಯ ಮಿಶ್ರಣವನ್ನು ಹಚ್ಚಿ ಅಕ್ಷರಗಳು ಕಂಗೊಳಿಸುವಂತೆ ಮಾಡುತ್ತಿದ್ದರು. ಅವುಗಳ ಮಧ್ಯದಲ್ಲಿ ರಂದ್ರ ಮಾಡಿ ನಾರಿನ ದಾರದಿಂದ ನೂರಾರು ಓಲೆಗಳನ್ನು ಜೋಡಿಸಿ ಪುಸ್ತಕ ರೂಪ ಮಾಡುತ್ತಿದ್ದರು. ಪ್ರತಿಯೊಂದು ತಾಡೋಲೆ ಇಪ್ಪತ್ತರಿಂದ ಇಪ್ಪತ್ತೈದು ಸೆಂಟಿ ಮೀಟರಗಳಷ್ಟು ಉದ್ದ, ನಾಲ್ಕರಿಂದ ಐದು ಸೆಂಟಿಮೀಟರ್ ಅಗಲವನ್ನು ಹೊಂದಿದ್ದರೂ ಅಲ್ಲಿ ತುಂಬಿದ ಜ್ಞಾನಸಾಗರ ಅಸೀಮವಾಗಿತ್ತು.
ತಾಡೋಲೆಗಳಲ್ಲಿ ಕೆತ್ತಿದ ವಚನಗಳು ಮಾತಿನ ಅಕ್ಷರದಲ್ಲೂ ಜೀವವಿಟ್ಟವು. ಅಲ್ಲಮಪ್ರಭುದೇವರು ತಮ್ಮ ಒಂದು ವಚನದಲ್ಲಿ:
ಮಾತಿನ ಬಣ್ಣದ ಪರಿಯಲ್ಲ ನೋಡಾ
ಹೊಗಳಿ ಕಂಡವರೆಲ್ಲರು ಮೂರ್ತಿಗೊಳಗಾದರು.
ವೇದಶಾಸ್ತ್ರ ಮಾರ್ಗವೆಲ್ಲವೂ ಹೊಗಳಿ ಕಾಣವೆಂಬುದ,
ಗುಹೇಶ್ವರ ಸಾಕ್ಷಿಯಾಗಿ ಮೂರು ಲೋಕ ಬಲ್ಲುದು
ಕಾಣಾ ಸಿದ್ದರಾಮಯ್ಯಾ.
ಎನ್ನುವ ವಚನದಲ್ಲಿ ಶಿವಯೋಗಿ ಸಿದ್ದರಾಮೇಶ್ವರರನ್ನು ಕುರಿತು ಹೇಳುತ್ತಾರೆ ಮಾತಿನ ಸೌಂದರ್ಯ ಶಬ್ದಗಳ ಅಲಂಕಾರ ಭಾಷೆಯ ಮೋಜು ಇವು ನಿಜವಾದ ಭಕ್ತಿಯ ಮಾರ್ಗವಲ್ಲ. ನಿಜವಾದ ಭಕ್ತಿ ಮಾತಿನಲ್ಲಿರದೆ ಮನದೊಳಗಿನ ಅನುಭವದಲ್ಲಿದೆ. ಅಂದರೆ ದೇವರ ವಿಷಯದಲ್ಲಿ ಸುಂದರವಾಗಿ ಮಾತನಾಡುವುದರಿಂದ ದೇವರನ್ನು ಕಾಣಲು ಸಾಧ್ಯವಿಲ್ಲ. ಅದರ ಬದಲು ಅಂತರಂಗದ ಅನುಭವದಿಂದಲೇ ಕಾಣಬೇಕು. ಬಾಯಲ್ಲಿ ಹೊಗಳಿ ಕೊಂಡಾಡಿ ದೇವರಿಗೆ ಭಕ್ತಿ ತೋರಿಸಿದವರು ಆತನನ್ನು ಕೇವಲ ಕಲ್ಲು, ಲಿಂಗ ಮತ್ತು ಮೂರ್ತಿಗಳ ರೂಪದಲ್ಲಿ ಬಾಹ್ಯವಾಗಿ ಕಂಡರು. ಅಂತಹವರು ದೇವರನ್ನು ಆತ್ಮದೊಳಗೆ ಕಾಣಲಿಲ್ಲ. ಹೀಗಾಗಿ ಅಲ್ಲಮ ಪ್ರಭುಗಳು ಹೇಳುವ ಅರ್ಥ, ಮಾತಿನ ಹೊಗಳಿಕೆಯಿಂದ ಬಂದ ಭಕ್ತಿ ಹೊರಗಿನ ದೇವರಲ್ಲಿಯೇ ನಿಂತು ಬಿಡುತ್ತದೆ. ಆದರೆ ಒಳಗಿನ ದೇವರನ್ನು ಹುಡುಕಲು ಮನದ ನಿಶ್ಚಲತೆ ಬೇಕು. ವೇದಗಳು ಮತ್ತು ಶಾಸ್ತ್ರಗಳೆಲ್ಲವೂ ದೇವರ ಮಹಿಮೆ, ಅವನ ರೂಪ ಅವನ ಗುಣಗಳ ಬಗ್ಗೆ ಹೊಗಳಿಕೆಯನ್ನು ಮಾತ್ರ ಹೇಳುತ್ತವೆ. ಅವು ದೇವರ ನಿಜ ಸ್ವರೂಪವನ್ನು ತೋರಿಸುವುದಿಲ್ಲ. ಗುಹೇಶ್ವರ ಸಾಕ್ಷಿಯಾಗಿ ಮೂರು ಲೋಕ ಅಂದರೆ ಇಲ್ಲಿ ಅಲ್ಲಮರು ಹೇಳಿರುವುದು ಭೌತಿಕ ಸ್ಥಳಗಳಲ್ಲ ಅವರು ಅದನ್ನ ಮಾನವರ ಒಳಗಿನ ಮೂರು ಸ್ಥಿತಿಗಳ ರೂಪಕ ಎಂದು ನೋಡುತ್ತಾರೆ. ಅಂದರೆ ನನ್ನ ಒಳಗಿನ ದೇವರ ಅನುಭವವು ದೇಹ, ಮನಸ್ಸು ಮತ್ತು ಆತ್ಮ ಎಂಬ ಎಲ್ಲಾ ಮಟ್ಟಗಳಿಗೂ ಸಾಕ್ಷಿ. ಈ ಸತ್ಯವನ್ನು ನೋಡಲು ಮಾತು ಬೇಡ, ಪುಸ್ತಕ ಬೇಡ, ನಿನ್ನ ಹೃದಯದೊಳಗೆ ತಿರುಗು ಅಲ್ಲಿ ದೇವರನ್ನು ಕಾಣುವೆ ಎನ್ನುತ್ತಾರೆ. ಹಾಗಾಗಿ ಈ ವಚನದ ತಾತ್ಪರ್ಯವೇ ತಾಡೋಲೆಯ ತಾತ್ಪರ್ಯವನ್ನು ಸಾರುತ್ತದೆ. ಮಾತು ಬಣ್ಣವಾಗುತ್ತದೆ, ಬಣ್ಣ ಅಕ್ಷರವಾಗುತ್ತದೆ, ಅಕ್ಷರ ಶಾಶ್ವತವಾಗುತ್ತದೆ.
ತಾಡೋಲೆಗಳು ವಚನಗಳ ಜೀವವಾಹಕ ಶರೀರಗಳಾಗಿದ್ದವು. ಅವು ಬಸವಣ್ಣನವರ ಕಾಯಕದ ದೃಷ್ಟಿಗೆ ಸಾಕ್ಷಿಯಾಗಿದ್ದವು. ಕಾಯಕವೇ ಕೈಲಾಸ ಎಂಬ ವಾಕ್ಯ ಕೇವಲ ತತ್ವವಲ್ಲ. ಅದು ಈ ತಾಡೋಲೆಗಳ ತಯಾರಿಕೆಯ ಪ್ರತಿಬಿಂಬ. ತಾಡೋಲೆಗಳು ಕೇವಲ ಗ್ರಂಥಗಳಲ್ಲ ಅವು ಆ ಕಾಲದ ಪವಿತ್ರ ಸಂಗ್ರಹಣಾ ಪೆಟ್ಟಿಗೆಯಾಗಿದ್ದವು. ಅಲ್ಲಿ ಕೇವಲ ಶಬ್ದಗಳಿರಲಿಲ್ಲ, ಬದಲಾಗಿ ಶರಣರ ನಿಟ್ಟುಸಿರುಗಳು ಅವರ ಭಕ್ತಿ ಮತ್ತು ಕಾಯಕದ ಶ್ರದ್ದೆ ಸೇರಿದ್ದವು. ಪ್ರತಿಯೊಂದು ಓಲೆಯ ಮೇಲೂ ಪ್ರಾರ್ಥನೆಯ ಮಸಿ ಇತ್ತು. ಪ್ರೀತಿಯ ಉಸಿರಿತ್ತು. ಅವುಗಳನ್ನು ಸ್ಪರ್ಶಿಸಿದರೆ ಅದು ಕೇವಲ ಪುರಾತನ ವಸ್ತುವಿನ ಸ್ಪರ್ಶವಲ್ಲ ಬದಲಾಗಿ ಅದು ಶರಣರ ಮನಸ್ಸಿನ ಉಷ್ಣತೆಯ ಸ್ಪರ್ಶ. ಭಕ್ತಿಯು ಮಾತಿನಲ್ಲಿ ಹುಟ್ಟಿದರೆ ಅದು ವಚನ. ಭಕ್ತಿಯು ಕೈಯಲ್ಲಿ ಮುಟ್ಟಿದರೆ ಅದು ತಾಡೋಲೆ.
ತಾಡೋಲೆಗಳು ನಮ್ಮ ಸಂಸ್ಕೃತಿಯ ನಿಶಬ್ದ ಕಾವ್ಯ. ಅವು ಕಾಲದ ಮಳೆ, ಗಾಳಿ, ದೂಳು ಎಲ್ಲವನ್ನೂ ಎದುರಿಸಿ ಶರಣರ ನುಡಿಯನ್ನು ಉಳಿಸಿವೆ. ಅಲ್ಲಿ ಕಾಲ ಬತ್ತಿದರೂ ಕಾಯಕ ಜೀವಂತವಾಗಿದೆ. ತಾಡೋಲೆಯನ್ನ ನೋಡಿದಾಗ ಅವು ಕೇವಲ ಹಳೆಯ ಗ್ರಂಥಗಳಲ್ಲ. ಬದಲಾಗಿ ಅವು ಮಾತು ಮೌನವಾದರೂ ತತ್ವ ಜೀವಂತ ಎಂಬ ಸತ್ಯದ ಜೀವಂತ ಸಾಕ್ಷಿ. ವಚನಗಳ ವಾಚ ಪರಂಪರೆಯ ಹಿಂದೆ ತಾಡೋಲೆಗಳು ನಿಂತಿವೆ. ಅಲ್ಲಿ ಅಕ್ಷರದ ಮೌನದಲ್ಲಿ ನುಡಿಯ ಶಾಶ್ವತತೆ ಇದೆ. ಅಕ್ಷರವೆಂಬ ತಾಡೋಲೆ ಶರಣರ ಉಸಿರಿನ ಕಣ್ಮಣಿಯಾಗಿತ್ತು. ಅವರ ಮಾತು ಕಾಲದ ಮೇಲೆ ಬರೆಯಲ್ಪಟ್ಟ ಪ್ರಾರ್ಥನೆಯಾಗಿತ್ತು ಎಂದು ಹೇಳಬಹುದು.
ಡಾ. ಜಿ ವಿ ಮಂಜುನಾಥ,
ಇತಿಹಾಸ ಉಪನ್ಯಾಸಕರು,
ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜು,
ಹೊಳಲ್ಕೆರೆ – 577 526,
ಚಿತ್ರದುರ್ಗ ಜಿಲ್ಲೆ.
ಮೋಬೈಲ್ ಸಂ. 99457 27746.
ಇ-ಮೇಲ್ ವಿಳಾಸ: drmanjunathagv@gmail.com
ಸಹಾಯಕ ಗ್ರಂಥಗಳು:
- ಡಾ. ಎಂ. ಆರ್. ಸಾಕರೆ – History and Philosophy of Lingayat Religion, ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಣಾ ಕೇಂದ್ರ, ಧಾರವಾಡ.
- ಶರಣೆ ಡಾ. ಹನುಮಾಕ್ಷಿ ಗೋಗಿ – Basava Tiluvalike and Research Centre Proceedings, 2025.
- ಡಾ. ಎಸ್. ಶೆಟ್ಟಾರ್ – Writing Traditions of South India, ಮನೋಹರ ಪಬ್ಲಿಕೇಶನ್ಸ್, 2019.
- ಶೆಲ್ಡನ್ ಪೊಲ್ಲಾಕ್ – Forms of Knowledge in Early Modern Asia, Duke University Press, 2011.
- ಕಲಬುರ್ಗಿ ವಿಶ್ವವಿದ್ಯಾಲಯ – Palm Leaf Manuscripts Archives, 2023.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()




Total views : 55985