
ಜನ್ಮ ಜನ್ಮಕ್ಕೆ ಹೋಗಲೀಯದೆ,
`ಸೋ[s]ಹಂ ಎಂದೆನಿಸದೆ `ದಾಸೋ[s]ಹಂ ಎಂದೆನಿಸಯ್ಯಾ.
ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ, ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-233/ವಚನ ಸಂಖ್ಯೆ-834)
ಮೊದಲಿಗೆ ದಾಸೋಹದ ಪರಿಕಲ್ಪನೆಯನ್ನು 12 ನೇಯ ಶತಮಾನದಲ್ಲಿ ಶ್ರೀ ಜಗಜ್ಯೋತಿ, ಮಹಾ ಮಾನವತಾವಾದಿ, ಅಪ್ಪ ಬಸವಣ್ಣನವರು ನಮ್ಮ ಲಿಂಗಾಯತ ಧರ್ಮದ ಮೂಲ ತತ್ವ ಸಿದ್ಧಾಂತಗಳೊಂದಾಗಿ ಈ ದಾಸೋಹ ತತ್ವವನ್ನು ಮೊಟ್ಟ ಮೊದಲಿಗೆ ಈ ಜಗತ್ತಿಗೆಲ್ಲ ಪರಿಚಯಿಸಿದರು. ದಾಸೋಹವು ಸಮಾಜದಲ್ಲಿ ಸಮಾನತೆಯನ್ನು ತರಲು ಶರಣರು ಕೈಕೊಂಡ ಕ್ರಾಂತಿಕಾರಕ ಅಸ್ತ್ರ.
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ.
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-60/ವಚನ ಸಂಖ್ಯೆ-223)
“ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ’’ ಸತ್ಯ ಶುದ್ಧ ಕಾಯಕದಿಂದ ಗಳಿಸಿದ ಹಣ ಸತ್ಪಾತ್ರಕ್ಕೆ ಬಳಕೆಯಾಗಬೇಕು. ಅದು ಉಳ್ಳವರಿಗಿಂತ ಇಲ್ಲದವರಿಗೆ ದೊರೆಯಬೇಕು. ದಾಸೋಹ ತತ್ವವನ್ನು ನೋಡುವಾಗ ಕಾಯಕ ತತ್ವದ ಕಡೆಗೂ ಗಮನ ಹರಿಸುವುದು ಅಷ್ಟೇ ಪ್ರಮುಖವಾಗಿದೆ. ಶರಣ ಸಮಾಜದಲ್ಲಿ ಎಲ್ಲರೂ ಕಾಯಕ ಮಾಡಲೇಬೇಕಿತ್ತು. ಅಲ್ಲಿ ಸೋಮಾರಿತನಕ್ಕೆ ಎಡೆಯಿರಲಿಲ್ಲ. ಭಿಕ್ಷಾವೃತ್ತಿಗೆ ಅವಕಾಶವಿಲ್ಲ. ಸತ್ಯ ಶುದ್ಧ ಕಾಯಕದಿಂದಲೇ ದಾಸೋಹಕ್ಕೆ ದಾರಿ ಎಂಬುದನ್ನು ಕಾಯಕ ಜೀವಿಗಳಾದ ಎಲ್ಲ ಬಸವಾದಿ ಶರಣರು ಅರಿತಿದ್ದರು. ಕಾಯಕ ತತ್ವಕ್ಕೆ ಹೊಂದಿಕೊಂಡಂತಹ ಒಂದು ಅದ್ಭುತ ತತ್ವವೇ ದಾಸೋಹ ತತ್ವ.ಸಮಾಜದಲ್ಲಿ ಸಂಪತ್ತು ಒಬ್ಬರ ಬಳಿಯೇ ಕ್ರೋಢೀಕರಣವಾಗಬಾರದೆಂದು ಕಾಯಕದಿಂದ ಬಂದ ಆದಾಯದಲ್ಲಿ ಸಮಾಜಕ್ಕೂ ಒಂದು ಪಾಲು ಎಂದು ದಾನಕ್ಕಿಂತಲೂ ದಾಸೋಹ ಮೇಲು ಎನ್ನುವ ನೈಜತೆಯನ್ನು ಈ ಜಗಕೆಲ್ಲ ಸಾರಿದರು.
ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳಿದಂತೆ. ಒಂದಕ್ಕೊಂದು ಪೂರಕವಾಗಿವೆ. ದಾಸೋಹವೆಂಬುದು ನಿರಂತರ ಸತ್ಯ. ಇಲ್ಲಿ ಕೇವಲ ಕೊಡುವುದು ಮತ್ತು ಪಡೆಯುವುದು ಮುಖ್ಯವಾಗುವುದಿಲ್ಲ. ತಿಳಿಯುವುದು ಮತ್ತು ಹೊಳೆಯುವುದು ಮುಖ್ಯವಾಗುತ್ತದೆ. ದಾನದಲ್ಲಿ ತ್ಯಾಗ ಭಾವನೆ ಇದ್ದರೆ, ದಾಸೋಹದಲ್ಲಿ ಸಮರ್ಪಣೆಯ ಸಂತೃಪ್ತಿಯ ಶ್ರೇಷ್ಠ ಭಾವನೆ ಇದೆ. ದಾಸೋಹದಲ್ಲಿ ಹಲವಾರು ವಿಧದ ದಾಸೋಹಗಳಿವೆ ಎಂದು ಬಸವಾದಿ ಎಲ್ಲ ಶರಣರು ತಮ್ಮ ವಚನಗಳ ಮೂಲಕ ಮನಮುಟ್ಟುವಂತೆ ಸಾರಿ ಸಾರಿ ಹೇಳಿದ್ದಾರೆ, ಅದಕ್ಕೆ ಸಾಕ್ಷಿ ಅಪ್ಪ ಬಸವಣ್ಣನವರ ಈ ಒಂದು ವಚನ ನಿರೂಪಣೆ ಮಾಡುತ್ತದೆ.
ಭಕ್ತನಾಯಿತ್ತೆ ಭಕ್ತಿದಾಸೋಹ,
ಯುಕ್ತನಾಯಿತ್ತೆ ಯುಕ್ತಿದಾಸೋಹ,
ಐಕ್ಯನಾಯಿತ್ತೆ ಮಮಕಾರ ದಾಸೋಹ,
ಸರ್ವದಲೆ ದಾಸೋಹವೇ ಬೇಕು,
ಈ ದಾಸೋಹದ ಅನುವ ಕೂಡಲಸಂಗಯ್ಯ ತಾನೇ ಬಲ್ಲ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-936)
ತ್ರಿವಿಧ ದಾಸೋಹವು ಹೆಸರೇ ಸೂಚಿಸುವಂತೆ ತ್ರಿವಿಧ ಎಂದರೆ ತನು, ಮನ, ಧನ ಎನ್ನುವ ಮೂರು ತೆರನಾದ ದಾಸೋಹಗಳಿವೆ. ಇದು ಭಕ್ತವರ್ಗದವರಿಗೆ ತಮ್ಮ ಭಕ್ತಿಗನುಸಾರ ಆತ್ಮೋದ್ಧಾರ ಹಾಗೂ ಸಮಾಜೋದ್ಧಾರಕ್ಕಾಗಿ ತನು, ಮನ, ಧನವನ್ನು ಕ್ರಮವಾಗಿ ಗುರು, ಲಿಂಗ, ಜಂಗಮ ಸಾಕ್ಷಿಯಾಗಿ ಸಮಾಜದಲ್ಲಿ ಸರಿಯಾಗಿ ಹಂಚಿಕೆ ಮಾಡುವಿಕೆ. ಗುರು, ಲಿಂಗ, ಜಂಗಮ ಇವು ವ್ಯಕ್ತಿಗಳಲ್ಲ ತತ್ವಗಳು ಎಂಬುದನ್ನು ಶರಣರು ತಮ್ಮ ವಚನಗಳಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಈ ತತ್ವಗಳನ್ನು ಯಾರು ಆಚರಣೆಗೆ ತಂದು ಅನುಷ್ಠಾನಗೊಳಿಸುತ್ತಾರೋ ಸಮಾಜ ಅಂಥವರನ್ನು ತತ್ವಗಳ ಹೆಸರಿನಿಂದಲೇ ಗುರುತಿಸಲು ಆರಂಭಿಸುತ್ತದೆ. ತ್ರಿವಿಧ ದಾಸೋಹದ ಕುರಿತಂತೆ ಬಸವಣ್ಣನವರು ಹಾಗೂ ಶರಣ ಉರಿಲಿಂಗಪೆದ್ದಿಗಳ ವಚನಗಳು ದೃಷ್ಟಿ ಬೀರುತ್ತವೆ.
ಅಯ್ಯಾ, ನಿಮ್ಮ ಶರಣರ ದಾಸೋಹಕ್ಕೆ
ತನುಮನಧನವಲಸದಂತೆ ಮಾಡಯ್ಯಾ,
ತನು ದಾಸೋಹಕ್ಕೆ ಉಬ್ಬುವಂತೆ ಮಾಡಯ್ಯಾ,
ಮನ ದಾಸೋಹಕ್ಕೆ ಲೀಯವಹಂತೆ ಮಾಡು,
ಧನ ದಾಸೋಹಕ್ಕೆ ಸವೆದು ನಿಮ್ಮ ಶರಣರ ಪ್ರಸಾದದಲ್ಲಿ,
ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ,
ಪರಿಣಾಮಿಸುವಂತೆ ಮಾಡು
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-120/ವಚನ ಸಂಖ್ಯೆ-459)
ತನು ತನ್ನದಾದಡೆ, ದಾಸೋಹಕ್ಕೆ ಕೊರತೆಯಿಲ್ಲ,
ದಾಸೋಹ ಸಂಪೂರ್ಣ, ದಾಸೋಹವೇ ಮುಕ್ತಿ.
ಮನ ತನ್ನದಾದಡೆ, ಜ್ಞಾನಕ್ಕೆ ಕೊರತೆಯಿಲ್ಲ,
ಜ್ಞಾನ ಸಂಪೂರ್ಣ, ಆ ಜ್ಞಾನವೇ ಮುಕ್ತಿ.
ಧನ ತನ್ನದಾದಡೆ, ಭಕ್ತಿಗೆ ಕೊರತೆಯಿಲ್ಲ.
ಭಕ್ತಿ ಸಂಪೂರ್ಣ, ಭಕ್ತಿಯಲ್ಲಿ ಮುಕ್ತಿ.
ತನುಮನಧನವೊಂದಾಗಿ ತನ್ನದಾದಡೆ
ಗುರುಲಿಂಗಜಂಗಮವೊಂದೆಯಾಗಿ ತಾನಿಪ್ಪನು
ಬೇರೆ ಮುಕ್ತಿ ಎಂತಪ್ಪುದಯ್ಯಾ?
ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರಾ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-561/ವಚನ ಸಂಖ್ಯೆ-1393)
ಶರಣರು ಈ ದಾಸೋಹ ತತ್ವದ ಮೂಲಕ ಬದುಕಿನ ಗೂಡಾರ್ಥವನ್ನು ಬಿಚ್ಚಿಟ್ಟಿದ್ಧಾರೆ. ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವನ್ನು ಸಮರ್ಪಿಸುವುದೆಂದರೆ ಇಲ್ಲಿ ಅನೇಕ ಅರ್ಥಗಳಿವೆ. ಅರಿವೇ ಗುರುವಾಗುವುದು, ಆಚಾರವೇ ಲಿಂಗವಾಗುವುದು, ಅನುಭಾವವೇ ಜಂಗಮವಾಗುವುದು ನಿಜವಾದ ತ್ರಿವಿಧ ದಾಸೋಹವಾಗುತ್ತದೆ.
ಜಗದ ಸಕಲ ಜೀವಾತ್ಮರಿಗೂ ನಿತ್ಯ ದೈನಂದಿನ ಜೀವನಕ್ಕೆ ಅನ್ನ ಅರಿವು ಆಸರೆ ತ್ರಿವಿಧವು ಅವಶ್ಯಕ ಎಂಬುದನ್ನರಿತ ಬಸವಾದಿ ಶರಣರೆಲ್ಲರೂ ಅನುಭವ ಮಂಟಪದ ಮೂಲಕ ಈ ತ್ರಿವಿಧ ದಾಸೋಹವು ಒಂದೆಡೆಗೆ ನೆಲೆ ನಿಲ್ಲುವಂತೆ ನೋಡಿಕೊಂಡರು. ಕಲ್ಯಾಣದಲ್ಲಿ ನಿತ್ಯ 1,96,000 ಶರಣರಿಗೆಲ್ಲ ನಿತ್ಯ ನಿರಂತರ ಅನ್ನ ದಾಸೋಹ ನಡೆಯುತ್ತಿತ್ತು. ಈ ಅನ್ನ ದಾಸೋಹದ ಸುದ್ದಿ ಕಲ್ಯಾಣದ ಸುತ್ತಮುತ್ತ ಪಸರಿಸಿತು. ಶರಣರು ನಡೆಸುತ್ತಿದ್ದ ಅನ್ನ ದಾಸೋಹದಿಂದ ಅನೇಕ ಅಸಹಾಯಕರು, ಅಂಗವಿಕಲರು ಸ್ವಾಭಿಮಾನದಿಂದ ಬದುಕುವಂತಾಯಿತು. ಅನ್ನ ದಾಸೋಹದಿಂದ ಸಹಪಂಕ್ತಿ, ಸಹಭೋಜನ ಪ್ರಾರಂಭವಾಗಿ ಎಲ್ಲರೂ ಒಂದೇ ಕಡೆ ಸರಿ ಸಮಾನವಾಗಿ ಕುಳಿತು ಪ್ರಸಾದ ಸೇವಿಸುವಂತಾಯಿತು. ಇದು ಬಸವಣ್ಣನವರ ಪಾರದರ್ಶಕತೆಗೆ ಹಿಡಿದ ಕನ್ನಡಿಯಾಗಿದೆ.
ಅನುಭವ ಮಂಟಪದ ಮೂಲಕ ಜ್ಞಾನ ದಾಸೋಹದಿಂದ ಅಜ್ಞಾನ ಅಂಧಕಾರದಲ್ಲಿದ್ದ ಸಮಾಜವನ್ನು ಜ್ಞಾನವೆಂಬ ಪರಂಜ್ಯೋತಿಯ ಕಡೆಗೆ ಕರೆದೊಯ್ದರು ತಮಗಾದ ಅನುಭವಗಳನ್ನು ವಚನಗಳ ರೂಪದಲ್ಲಿ ರಚಿಸಿ ಆಚರಣೆಗೆ ತಂದರು. ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುಗಳ ಅಧ್ಯಕ್ಷತೆಯಲ್ಲಿ ನಿತ್ಯ ಅನುಭಾವ ಗೋಷ್ಠಿ, ಪರಸ್ಪರ ಚಿಂತನ-ಮಂಥನ, ವಚನ ವಿಶ್ಲೇಷಣೆ ಎಲ್ಲ ಶರಣರು ತಮ್ಮದೇ ಆದ ಅನುಭವವನ್ನು ವ್ಯಕ್ತಪಡಿಸುತ್ತಿದ್ದರು. ಇಲ್ಲಿ ಸ್ತ್ರೀ-ಪುರುಷ, ಮೇಲು-ಕೀಳು ಎಂಬ ಎಲ್ಲಾ ರೀತಿಯ ವರ್ಣ, ವರ್ಗ ಬೇದಗಳನ್ನ ಮರೆತು ಎಲ್ಲರೂ ಶರಣ ತತ್ವದ ಅಡಿಯಲ್ಲಿ ಒಂದಾಗಿ ನಿತ್ಯ ನಿರಂತರ ಜ್ಞಾನ ದಾಸೋಹ ಸಾಗಿ ಬರುತ್ತಿತ್ತು. ಸಂಸ್ಕೃತವು ದೇವ ಭಾಷೆಯಾಗಿದ್ದ ಕಾಲದಲ್ಲಿ ಶರಣರೆಲ್ಲರೂ ಕನ್ನಡದಲ್ಲಿಯೇ ವಚನಗಳನ್ನು ರಚಿಸಿರುವುದು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿರಲು ಕಾರಣ.
ಕಾಶ್ಮೀರದಿಂದ ಬಂದ ರಾಜರಾದ ಮೋಳಿಗೆ ಮಾರಯ್ಯನವರು ಕನ್ನಡವನ್ನು ಕಲಿತು ಕನ್ನಡದಲ್ಲಿಯೇ ವಚನಗಳನ್ನು ರಚಿಸಿರುವುದು ಇವರ 800 ಕ್ಕೂ ಅಧಿಕ ವಚನಗಳು ಇಂದಿಗೂ ಸಹ ಲಭ್ಯವಾಗಿವೆ. ಅಪಘಾನಿಸ್ತಾನದಿಂದ ಬಂದಂತಹ ಶರಣರಾದ ಮರುಳ ಶಂಕರದೇವರು ಸಹಿತ ಕನ್ನಡವನ್ನು ಕಲಿತು ಕನ್ನಡದಲ್ಲಿಯೇ ವಚನಗಳನ್ನು ರಚಿಸಿದರು. ಇವರ 30 ಕ್ಕೂ ಅಧಿಕ ವಚನಗಳು ಲಭ್ಯ ಇವೆ,ಅಪ್ಪ ಬಸವಣ್ಣನವರ ಜ್ಞಾನ ದಾಸೋಹದ ಪರಿಕಲ್ಪನೆಗೆ ಹಿಡಿದ ಕೈಗನ್ನಡಿಯಾಗಿವೆ.
ಬಸವಣ್ಣನವರ ಈ ತತ್ವ ಸಿದ್ಧಾಂತಗಳಿಗೆ ಆಕರ್ಷಿತರಾಗಿ ಕಲ್ಯಾಣದತ್ತ ಬಂದಿದ್ದ ಅನೇಕ ಭಾಗಗಳಿಂದ ಬಂದಂತಹ ಶರಣರೆಲ್ಲರಿಗೂ ಕಲ್ಯಾಣದಲ್ಲಿ ನೆಲೆ ನಿಲ್ಲುವುದಕ್ಕೆ ಆಸರೆ (ಮನೆ) ಮಾಡಿಕೊಟ್ಟಿದ್ದರು ಎನ್ನುವುದಕ್ಕೆ ಇಂದಿಗೂ ಸಾಕ್ಷಿಯಾಗಿ ಕಲ್ಯಾಣದಲ್ಲಿ ಬಂದವರ ಓಣಿ ಎನ್ನುವ ಸ್ಥಳವಿದೆ. ಈ ರೀತಿಯಾಗಿ ಬಸವಣ್ಣನವರು 12 ನೇ ಶತಮಾನದಲ್ಲಿಯೇ ಹಾಕಿ ಕೊಟ್ಟಂತಹ ದಾಸೋಹ ಪರಿಕಲ್ಪನೆಯನ್ನು ಪ್ರಸ್ತುತ ಇಂದಿನ ದಿನಮಾನಗಳಲ್ಲಿಯೂ ಸಹ ಸಾಕಷ್ಟು ಮಠಗಳು, ಸಂಘ, ಸಂಸ್ಥೆಗಳು ದಾಸೋಹ ತತ್ವದಡಿಯಲ್ಲಿ ಯಥಾವತ್ತಾಗಿ ಮುನ್ನಡಿಸಿಕೊಂಡು ಬಂದಿರುವುದು ಅತ್ಯಂತ ಶ್ಲಾಘನೀಯ ವಿಷಯವಾಗಿದೆ.
ಹೀಗೆ ತ್ರಿವಿಧ ದಾಸೋಹಕ್ಕೆ ಹೆಸರಾದ ನಮ್ಮ ನಾಡಿನ ಕೆಲವು ಮಠಗಳು
ಶ್ರೀ ಸಿದ್ದಗಂಗಾ ಮಠ, ತುಮಕೂರು.
ಶ್ರೀ ತೋಂಟದಾರ್ಯ ವಿರಕ್ತಮಠ, ಗದಗ.
ಶ್ರೀ ನಾಗನೂರು ರುದ್ರಾಕ್ಷಿಮಠ, ಬೆಳಗಾವಿ.
ಶ್ರೀ ಹಿರೇಮಠ ಭಾಲ್ಕಿ, ಬೀದರ.
ಶ್ರೀ. ಆನಂದ ಯಲ್ಲಪ್ಪ ಕೊಂಡಗುರಿ,
ಪ್ರಧಾನ ಕಾರ್ಯದರ್ಶಿ,
ಜಾಗತಿಕ ಲಿಂಗಾಯತ ಮಹಾಸಭಾ,
ತಾಲೂಕ ಘಟಕ-ಹಿರೇಬಾಗೇವಾಡಿ,
ಬೆಳಗಾವಿ ಜಿಲ್ಲೆ.
ಮೋಬೈಲ್ ಸಂ. 88618 72272
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51417